Home Blog Page 3314

ಡಂಬಳದ ಪುರಾತನ ದೇವಾಲಯದ ಸೊಬಗು; ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರ ದಂಡು

0

ವಿಜಯಸಾಕ್ಷಿ ಸುದ್ದಿ, ಡಂಬಳ:

ವರ್ಷದ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳುಗಳು ಪ್ರವಾಸಕ್ಕೆ ಪ್ರಶಕ್ತವಾಗಿದ್ದು, ಈ ತಿಂಗಳುಗಳಲ್ಲಿ ಅಧಿಕ ಜನರು ಪ್ರವಾಸ ಕೈಗೊಳ್ಳುತ್ತಾರೆ. ಅದರಂತೆ, ಗದಗ ಜಿಲ್ಲೆಯ ಪ್ರಾಚೀನ ಕಾಲದ ಐತಿಹಾಸಿಕ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗುಮಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ತುಸು ಚೇತರಿಕೆ ಕಾಣಿಸುತ್ತಿದೆ.

ಮುಂಡರಗಿ ತಾಲೂಕಿನ ಡಂಬಳ(ಧರ್ಮಪುರ) ಗ್ರಾಮದ ಐತಿಹಾಸಿಕ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕುಟಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಗ್ರಾಮಕ್ಕೆ ಬರುತ್ತಿರುವ ಪ್ರವಾಸಿಗರು ಗ್ರಾಮದಲ್ಲಿರುವ ದೊಡ್ಡ ಬಸವೇಶ್ವರ ದೇವಾಲಯ, ಜಪದ ಬಾವಿ, ಸಿದ್ಧೇಶ್ವರ ದೇವಾಲಯ, ತೋಂಟದಾರ್ಯ ಮಠ, ಜಮಾಲ ಶಾವಲಿ ದರ್ಗಾ, ಬೀಗರ ಬಾವಿ, ಸೋಮನಾಥ ದೇವಾಲಯ, ವಿಕ್ಟೋರಿಯಾ ಮಹಾರಾಣಿಯ ಕೆರೆ, ಕೋಟೆ, ಗಣಪತಿ ದೇವಾಲಯ ಸೇರಿದಂತೆ ಗ್ರಾಮದಲ್ಲಿರುವ ಇನ್ನಿತರ ಪುರಾತನ ಕಾಲದ ಐತಿಹಾಸಿಕ ಸ್ಥಳಗಳ ಸೊಬಗನ್ನು ಸವಿಯುತ್ತಿದ್ದಾರೆ.

ಡಂಬಳವು ಐತಿಹಾಸಿಕ ಗ್ರಾಮವಾಗಿದ್ದು, ಇಲ್ಲಿರುವ ಹಲವು ಪುರಾತನ ದೇವಾಲಯಗಳು, ಇಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಪ್ರವಾಸಿಗರಾದ ಶ್ರೀನಿವಾಸ ಕಟ್ಟಿಮನಿ, ಮಂಜುನಾಥ ಮುಧೋಳ ಹೇಳಿದರು.

ಬೇವಿನಮರದಲ್ಲಿ‌ ಸುರಿಯುತ್ತಿರುವ ಬಿಳಿ ದ್ರವ; ದೈವ ಕೃಪೆ ಎಂದು ಟೆಂಟ್ ಹಾಕಿದ ಜನ!!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಾಮಾನ್ಯವಾಗಿ ಚಳಿಗಾಲದಲ್ಲಿ ಬೇವಿನಮರದಲ್ಲಿ ಬಿಳಿ ರೂಪದ ದ್ರವ ಸುರಿಯುತ್ತದೆ. ಇದು ಇಂದು-ನಿನ್ನೆಯದಲ್ಲ, ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಸ್ಥರಿಗೆ ಇದೊಂದು ಪವಾಡದಂತೆ ಭಾಸವಾಗಿದೆ.

ಬಿಜಕಲ್‌ನ ಗೋಪಾಲರಾವ್ ಎಂಬುವವರ ಹೊಲದಲ್ಲಿ ಬೇವಿನಮರದಿಂದ ಬಿಳಿ ದ್ರವ ಸ್ರವಿಸುತ್ತಿದೆ. ಇದನ್ನು ಕಂಡವರು, ಬೇವಿನಮರದ ಬುಡದಲ್ಲಿ ಗದ್ದೆಮ್ಮ ದೇವಿ ಮೂರ್ತಿ ಇದೆ. ಮರದಿಂದ ಬಿಳಿ ದ್ರವ ಸ್ರವಿಸುತ್ತಿರುವುದು ದೇವಿಯ ಪವಾಡ ಎಂದು ಹೇಳುತ್ತಿದ್ದಂತೆ, ಜನಸಾಗರ ಸೇರಿದೆ. ಕೊನೆಗೆ ಮರದ ಬಳಿ ಟೆಂಟ್ ಹಾಕಿ ಪೂಜೆ-ಪುನಸ್ಕಾರ ಪ್ರಕ್ರಿಯೆಗಳು ಭರ್ಜರಿಯಾಗಿ ನಡೆಯುತ್ತಿವೆ. ಇದನ್ನ ಕಣ್ತುಂಬಿಕೊಳ್ಳಲು ಜನ ಟಂಟಂ, ಆಟೋ, ಟ್ರ್ಕಾಕ್ಟರ್ ಸಮೇತ ತಂಡೋಪತಂಡವಾಗಿ ಆಗಮಿಸಿ, ಧನ್ಯತಾ ಭಾವ ಪ್ರದರ್ಶಿಸುತ್ತಿದ್ದಾರೆ.

ವಾಸ್ತವವಾಗಿ ಚಳಿಗಾಲದಲ್ಲಿ ಬೇವಿನ ಮರದಿಂದ ಬಿಳಿದ್ರವ ಸುರಿಯುವುದಕ್ಕೆ ವೈಜ್ಞಾನಿಕ ಕಾರಣಗಳಿವೆಯೇ ಹೊರತು ದೈವದ ಕಾರಣಗಳಲ್ಲ ಎಂದು ತಜ್ಞರು ಹೇಳುತ್ತಾರೆ.

ಕಾಂಗ್ರೆಸ್‌’ನಲ್ಲಿ ಬುಗಿಲೆದ್ದ ಅಸಮಾಧಾನ; ಟಿಕೆಟ್ ಕೈ ತಪ್ಪಿದ್ದಕ್ಕೆ ರಾತ್ರೋರಾತ್ರಿ ಧರಣಿ, ಕಣ್ಣೀರು ಹಾಕಿದ ಕಾರ್ಯಕರ್ತ!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಅಷ್ಟೇ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್’ಗಾಗಿ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಬಿಜೆಪಿ 35 ವಾರ್ಡ್ ಗಳ ಪೈಕಿ 30 ವಾರ್ಡ್ ಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್ ಇನ್ನೂವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಬೆನ್ನಲ್ಲೇ ಪತ್ನಿಯರಿಗೆ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ರಾತ್ರೋರಾತ್ರಿ ಧರಣಿ ನಡೆಸಿದರೇ, ಮತ್ತೊಬ್ಬ ಕಾರ್ಯಕರ್ತ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬೆಟಗೇರಿಯ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲು ಇದ್ದ 5ನೇವಾರ್ಡ್‌’ನ ಕಾಂಗ್ರೆಸ್ ಟಿಕೆಟ್ ಪಡೆಯಲು ತನ್ನ ಪತ್ನಿಗಾಗಿ ಪ್ರಯತ್ನ ನಡೆಸಿದ್ದ ವಿಷ್ಣು ಬಗಾಡೆ ಟಿಕೆಟ್ ಕೈ ತಪ್ಪಿದ ಪರಿಣಾಮ ತನ್ನ ಆಪ್ತರೆದರು ಕಣ್ಣೀರು ಹಾಕಿದ್ದು, ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದು ಪ್ರಕರಣದಲ್ಲಿ
20ನೇ ವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪತ್ನಿಗೆ ನೀಡುವಂತೆ ಚಾಂದ್ ಕೊಟ್ಟೂರ ಕಳೆದ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಟಿಕೆಟ್ ಕೊಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಕೆ.ಎಚ್.ಪಾಟೀಲ್ ಅವರ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಚಾಂದ್ ಕೊಟ್ಟೂರ ಅವರು ಧರಣಿ‌ ನಡೆಸುತ್ತಿರುವುದ‌ನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಅಬ್ಬಿಗೇರಿ, ಶಹಬಾಜ್ ಮುಲ್ಲಾ ಮನವೊಲಿಸಿ‌ ಮನೆಗೆ ಕಳುಹಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಏಕಾಂಗಿಯಾಗಿ ಪ್ರತಿಭಟನೆ‌ ನಡೆಸಿದ್ದಾರೆ.

ಕಾಂಗ್ರೆಸ್ ನಲ್ಲಿ 35 ವಾರ್ಡ್ಗಳಲ್ಲಿ 100ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾದಂತಿದೆ. ಇದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೈ ನಾಯಕರಿಗೆ ಟಿಕೆಟ್ ಹಂಚಿಕೆ ಮುನ್ನವೇ ಅಸಮಾಧಾನದ ಬಿಸಿ ತಟ್ಟುತ್ತಿದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದರೆ, ಅಸಮಾಧಾನ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿದ್ದು, ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ಕಂಟಕವಾಗಿ ಪರಿಣಮಿಸಬಾರದೆಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದ್ದು, ಟಿಕೆಟ್ ಹಂಚಿಕೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಾಟಾಚಾರದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದ ಗದಗ ಡಿಡಿಪಿಯು; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ!

*ಉಪನ್ಯಾಸಕರ ಮೊಬೈಲ್ ನಲ್ಲಿ ಹರಿದಾಡಿದ ಇತಿಹಾಸ ನಕ್ಷೆ*
• ತಪ್ಪು ಗಂಭೀರವೋ? ಸಾಮಾನ್ಯವೋ? ಎಂದ ಡಿಡಿಪಿಯು

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಗದಗ:

ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹುದೊಡ್ಡ ಹೊಡೆತ ಕೊಟ್ಟಿದೆ.

ಮತ್ತೊಂದೆಡೆ, ಡೆಲ್ಟಾ ಹಾಗೂ ಒಮಿಕ್ರಾನ್ ಭೀತಿ ಕಾಡುತ್ತಿರುವುದರಿಂದ ಸದ್ಯ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳೇ ವಾರ್ಷಿಕ ಪರೀಕ್ಷೆಯಾಗುವ ಸಾಧ್ಯತೆಗಳು ಇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳೇ ತಿಳಿಸುತ್ತಿವೆ. ಆದರೆ, ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ರಾಜ್ಯಾದ್ಯಂತ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳನ್ನು ನಡೆಸುತ್ತಿದೆ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಕೆಮಿಸ್ಟ್ರಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ವಿಷಯಗಳ ಪರೀಕ್ಷೆಗಳು ನಡೆಯಬೇಕಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಸ್ತುಬದ್ಧ ಪರೀಕ್ಷೆಗಳನ್ನು ನಡೆಸದೆ ಕಾಟಾಚಾರಕ್ಕೆ ಎಂಬಂತೆ ಪ್ರಶ್ನೆ ಪತ್ರಿಕೆಗಳನ್ನು ತೆಗೆದು ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸುತ್ತಿರುವುದು ವಿಪರ್ಯಾಸ.

ಡಿ.9ರಿಂದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದು, ಡಿ.23ರಂದು ಕೊನೆಗೊಳ್ಳಲಿವೆ. ಗದಗ ಜಿಲ್ಲೆಯಲ್ಲಿ ಒಟ್ಟು 9,957 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಡಿ.10ರಂದು ನಡೆದ ಪ್ರಥಮ ವಿಷಯ ಕನ್ನಡ ಭಾಷಾ ಪತ್ರಿಕೆಯ 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ ರೋಮನ್ ಸಂಖ್ಯೆ ಮೂರನೇ ಪ್ರಶ್ನೆಯ ಯಾವುದಾದರೂ ಒಂದಕ್ಕೆ ಸಂದರ್ಭ ಸೂಚಿಸಿ ಸ್ವಾರಸ್ಯ ಬರೆಯರಿ ಎಂಬ ಮೂರು ಅಂಕದ `ಆ’ ವಿಭಾಗದ ಎರಡು ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಿಂದ ನಾಪತ್ತೆಯಾಗಿದ್ದವು. ಇದು ಶಿಕ್ಷಕರನ್ನೊಳಗೊಂಡಂತೆ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು.

ಡಿ.11ರಂದು ನಡೆದ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಯ ಪ್ರಶ್ನೆ ಸಂಖ್ಯೆ 30 ನಾಪತ್ತೆಯಾಗಿತ್ತು. ವಿದ್ಯಾರ್ಥಿಗಳು ಪ್ರಶ್ನೆಗಳಿಗಾಗಿ ದುರ್ಬಿನ್ ಹಾಕಿಕೊಂಡು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೋಮನ್ ಸಂಖ್ಯೆ ನಾಲ್ಕನೇ ಪ್ರಶ್ನೆಯ ಇ’ ವಿಭಾಗದ ನಾಲ್ಕು ಅಂಕದ ಪ್ರಶ್ನೆಯಲ್ಲಿ ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ ಎಂಬುದರ ಬದಲಿಗೆ 'ಪ್ರಬಂಧ’ ಬರೆಯರಿ ಎಂದು ನಮೂದಾಗಿತ್ತು. ಇದರಿಂದ ವಿದ್ಯಾರ್ಥಿಗಳು ತಬ್ಬಿಬ್ಬುಗೊಂಡಿದ್ದರು. ಬಳಿಕ ಸ್ವತಃ ಶಿಕ್ಷಕರೇ ಪ್ರಶ್ನೆ ಪತ್ರಿಕೆಯಲ್ಲಿ ಪ್ರಬಂಧ’ ಇದ್ದಲ್ಲಿಪತ್ರ’ ಎಂದು ಬರೆದು ಸುಸ್ತಾದ ಪ್ರಸಂಗವೂ ನಡೆಯಿತು.

ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿದ ಇತಿಹಾಸದ ನಕ್ಷೆ!:

ಯಾವುದೇ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧ. ಕೊಠಡಿ ಮೇಲ್ವಿಚಾರಕರು ಸಹಿತ ಮೊಬೈಲ್ ತರುವಂತಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ ಡಿ.9 ಗುರುವಾರ ನಡೆದ ಇತಿಹಾಸ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನಕ್ಷೆಯೇ ಇರಲಿಲ್ಲ. ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಗಮನಿಸಿದ ಬಳಿಕ ಎಚ್ಚೆತ್ತುಕೊಂಡ ಡಿಡಿಪಿಯು ಎಚ್.ಎಸ್. ರಾಜೂರು ಅವರು ಪಿಯು ಬೋರ್ಡ್ ಕಚೇರಿಗೆ ಕರೆ ಮಾಡಿ ನಕ್ಷೆಯನ್ನು ವಾಟ್ಸ್ಆ್ಯಪ್‌ಗೆ ಹಾಕಿಸಿಕೊಂಡು, ಜಿಲ್ಲೆಯ ಎಲ್ಲ ಕಾಲೇಜುಗಳ ಕೆಲವು ಉಪನ್ಯಾಸಕರಿಗೆ ಕಳುಹಿಸಿದ್ದಾರೆ. ಪರೀಕ್ಷೆ ನಡೆದ ಕೆಲಹೊತ್ತಿನ ಬಳಿಕ ಮ್ಯಾಪ್ ಝರಾಕ್ಸ್ ಮಾಡಿಸಿ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಹಂಚಿದ್ದಾರೆ. ಈ ಮೂಲಕ ಪರೀಕ್ಷಾ ಪಾವಿತ್ರ್ಯಕ್ಕೆ ಸ್ವತಃ ಅಧಿಕಾರಿಗಳೇ ಧಕ್ಕೆಯನ್ನುಂಟು ಮಾಡಿರುವುದು ಶೋಚನೀಯ.

ಕಾಗುಣಿತವೇ ತಪ್ಪು!:

ಡಿ.10ರಂದು ಜರುಗಿದ ಕನ್ನಡ ಪ್ರಶ್ನೆಪತ್ರಿಕೆಯ ಕೆಲವು ಕಡೆಗಳಲ್ಲಿ ಕಾಗುಣಿತಗಳು ತಪ್ಪಾಗಿ ಮುದ್ರಿತವಾಗಿದ್ದವು. ಇದರಿಂದ ವಿದ್ಯಾರ್ಥಿಗಳು ಪ್ರಶ್ನೆ ಅರ್ಥೈಸಿಕೊಳ್ಳಲು ಹೆಣಗಾಡಬೇಕಾಯಿತು. ಪ್ರ.12ರಲ್ಲಿ ಷಡ್ರಸಾನ್ನವನಿಕ್ಕಿ’ ಎಂಬುವ ಬದಲುಷಡ್ರಾಸನ್ನವನಿಕ್ಕಿ’ ಎಂದಾಗಿತ್ತು. ಪ್ರ.20ರಲ್ಲಿ ನಿರೂಪಕರು’ ಎಂಬಲ್ಲಿನಿರೂಒಕರು’ ಎಂದಾಗಿತ್ತು. ಅದರಂತೆ, ರೋಮನ್ ಸಂಖ್ಯೆ ನಾಲ್ಕರ ಆ’ ವಿಭಾಗದಲ್ಲಿಪ್ರಬಂಧವನ್ನು’ ಎಂಬಲ್ಲಿ `ಪ್ರಬಂಧಗಳನ್ನು’ ಎಂದು ನಮೂದಾಗಿತ್ತು.

ಡಿಡಿಪಿಯು ಬಾಲಿಶ ಹೇಳಿಕೆ

ದ್ವಿತೀಯ ಪಿಯುಸಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಮೂರು ಅಂಕಗಳ ಎರಡು ಪ್ರಶ್ನೆಗಳು ಮೈನಸ್ ಆಗಿ ಕೇವಲ 97 ಅಂಕಗಳ ಪ್ರಶ್ನೆ ಪತ್ರಿಕೆ ಮಾತ್ರವೇ ಇತ್ತು. ಗ್ರೇಸ್‌ಮಾರ್ಕ್ಸ್ ಕೊಡುವಂತೆ ಪಿಯು ಬೋರ್ಡ್‌ ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲಾಗುವುದು. ಅವರು ಏನು ಹೇಳುತ್ತಾರೋ ನೋಡೋಣ.
ಮಧ್ಯಂತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ವೇಳೆ ವಿದ್ಯಾರ್ಥಿಗಳಿಗೆ ಎರಡು ಗ್ರೇಸ್‌ಮಾರ್ಕ್ಸ್ ಕೊಡೋಣ ಅಂತ ಹೇಳಿದ್ದು, ಎಲ್ಲರೂ ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪು ಗಂಭೀರವೋ ಸಾಮಾನ್ಯವೋ ಎಂಬುದನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು. ಕನ್ನಡ ವಿಷಯದ ಪರೀಕ್ಷೆ ಡಿ.10ರಂದು ಮುಗಿದಿದೆ. ಮೌಲ್ಯಮಾಪನಕ್ಕೆ ಇನ್ನೂ 15 ದಿನ ಸಮಯವಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಗ್ರೆಸ್‌ಮಾರ್ಕ್ಸ್ ಕೊಡುವುದು, ಇಲ್ಲದಿದ್ದರೆ ಇಲ್ಲ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಬಾಲಿಶವಾಗಿ ಪ್ರತಿಕ್ರಿಯಿಸಿದರು.

ನನಗೆ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ನಾನು ಮಾಹಿತಿ ತರಿಸಿಕೊಂಡು ಮಾತನಾಡುತ್ತೇನೆ. ವಿದ್ಯಾರ್ಥಿಗಳಿಗೆ ಗ್ರೇಸ್‌ಮಾರ್ಕ್ಸ್ ಕೊಡುವ ಬಗ್ಗೆ ಪರೀಕ್ಷಾಂಗದ ನಿರ್ದೇಶಕರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಸ್ನೇಹಲತಾ, ನಿರ್ದೇಶಕರು. ಪಿಯು ಬೋರ್ಡ್, ಬೆಂಗಳೂರು

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳು ಮೈನಸ್ ಆಗಿರುವುದು ಪಿಯು ಬೋರ್ಡ್ನಿಂದಲ್ಲ, ನಮ್ಮಿಂದ ತಪ್ಪಾಗಿದೆ. ಪಿಯು ಬೋರ್ಡ್ನವರು ಉತ್ತರ ಪತ್ರಿಕೆಯಲ್ಲಿ ಮ್ಯಾಪ್ ಇಡಬೇಕಿತ್ತು. ಆದರೆ, ಅವರು ಇಟ್ಟಿರಲಿಲ್ಲ. ಪಿಯು ಬೋರ್ಡ್ನವರು ಡಿಟಿಪಿ ಮಾಡಿ ಕಳುಹಿಸಿದ್ದು ಸರಿಯಾಗಿಯೇ ಇತ್ತಾದರೂ, ಮುದ್ರಣ ಮಾಡುವಾಗ ಪ್ರಶ್ನೆಗಳು ತಪ್ಪಿ ಹೋಗಿದೆ. ಇನ್ನು ಪ್ರಶ್ನೆಪತ್ರಿಕೆಯಲ್ಲಿ ಒಮ್ಮೊಮ್ಮೆ ಕಾಗುಣಿತ ತಪ್ಪಾಗಿರುತ್ತವೆ.

ಎಚ. ಎಸ್ . ರಾಜೂರು, ಗದಗ ಡಿಡಿಪಿಯು (ಪ್ರಭಾರ)

ಪ್ರಶ್ನೆಪತ್ರಿಕೆಗಳು ಮುದ್ರಣಗೊಳ್ಳುವುದಕ್ಕಿಂತ ಮುನ್ನ ಪ್ರೂಫ್ ರೀಡ್ ಮಾಡುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆದ್ಯ ಕರ್ತವ್ಯ. ಆದರೆ, ಅವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ಅವಘಡ ಸಂಭವಿಸಿದಾಗ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು.

ಹೆಸರು ಹೇಳಲಿಚ್ಚಿಸದ ಉಪನ್ಯಾಸಕರು

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಇಬ್ಬರು ಮುಸ್ಲಿಂ ಅಭ್ಯರ್ಥಿ ಸೇರಿ 30 ವಾರ್ಡ್ ಗೆ ಅಭ್ಯರ್ಥಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ನಗರದ 35 ವಾರ್ಡ್ಗಳಲ್ಲಿ 30 ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಸಂಜೆ ತನ್ನ ಕೋರ್ ಕಮೀಟಿ ಸಭೆಯಲ್ಲಿ ಘೋಷಿಸಿದೆ.

ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಮುಖಂಡ ಅನಿಲ್ ಮೆನಸಿನಕಾಯಿ, ಶ್ರೀಪತಿ ಉಡುಪಿ, ಶ್ರೀಕಾಂತ್ ಖಟವಣೆ, ಎಂ.ಎಸ್.ಕರಿಗೌಡ್ರ, ಕಾಂತಿಲಾಲ್ ಬನ್ಸಾಲಿ, ಸಂಗಮೇಶ್ ದುಂದೂರ ಸೇರಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಬಾರಿ ವಿಶೇಷವೇನೆಂದರೆ ಘೋಷಿಸಿದ ಮೂವತ್ತು ಅಭ್ಯರ್ಥಿಗಳಲ್ಲಿ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿರುವುದು ಗಮನಾರ್ಹ.

ಘೋಷಿಸಿದ ವಾರ್ಡ್ಗಳ ಪೈಕಿ 03, 22, 28, 32 ಹಾಗೂ 33ನೇ ವಾರ್ಡ್ಗಳಿಗೆ ಇನ್ನು ಅಭ್ಯರ್ಥಿಗಳ ಘೋಷಿಸಿಲ್ಲ. ಘೋಷಿಸಿದ ಅಭ್ಯರ್ಥಿಗಳಲ್ಲಿ ಕೊನೆಘಳಿಗೆಯಲ್ಲಿ ಬದಲಾವಣೆಯಾದರೂ ಅಚ್ಚರಿ ಪಡುವಂತಿಲ್ಲ. ಇನ್ನು ತೀವ್ರ ಪೈಪೋಟಿ ಇರುವ ಐದು ವಾರ್ಡ್ ಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ ಎನ್ನಲಾಗಿದೆ.

ವಾರ್ಡ್ ಸಮೇತ ವಿವರ

ವಾರ್ಡ್ ನಂ. 1)ಸೈನಾಜ್ ಶಾಮೀದಸಾಬ್ ನರಗುಂದ, ವಾರ್ಡ್ ನಂ.2-ರಾಜೇಶ್ ಮುತಗಾರ, ವಾರ್ಡ್ ನಂ.4)ಗ್ರೇಶಿಯಾ (ದೀಪಾ) ಮಂಜುನಾಥ್ ಪೂಜಾರ, ವಾರ್ಡ್ ನಂ. 5)ಶಶಿಕಲಾ ಶ್ಯಾವಿ, ವಾರ್ಡ್ ನಂ. 6) ರೇಖಾ ಹನಮಂತಪ್ಪ ಅಳವಂಡಿ, ವಾರ್ಡ್ ನಂ.7)ರಾಘವೇಂದ್ರ ಯಳವತ್ತಿ,

ವಾರ್ಡ್ ನಂ. 8)ನಿರ್ಮಲ ದಶರತ್ ಕೊಳ್ಳಿ, ವಾರ್ಡ್ ನಂ. 9) ಶಿವು ಹಿರೇಮನಿಪಾಟೀಲ, ವಾರ್ಡ್ ನಂ.10 ಮಾದವ ಗಣಾಚಾರಿ,

ವಾರ್ಡ್ ನಂ. 11) ಶ್ವೇತಾ ಬೆನಕನವಾರಿ, ವಾರ್ಡ್ ನಂ.12)ವಿಜಯಲಕ್ಷ್ಮಿ ಶಶಿಧರ ದಿಂಡೂರ,

ವಾರ್ಡ್ ನಂ. 13)ಮುತ್ತು (ಗೂಳಪ್ಪ) ಮುಶಿಗೇರಿ, ವಾರ್ಡ್ ನಂ. 14) ಪ್ರಕಾಶ್ ಅಂಗಡಿ, ವಾರ್ಡ್ ನಂ. 15) ಚಂದ್ರು ತಡಸದ, ವಾರ್ಡ್ ನಂ. 16) ಲಕ್ಷ್ಮಣ ದೊಡ್ಡಮನಿ, ವಾರ್ಡ್ ನಂ. 17) ಕೌಸರ್ ನಿಶಾರ್ ನಮಾಜಿ, ವಾರ್ಡ್ ನಂ. 18) ಕಿಶನ್ ಮೆಹರವಾಡೆ,

ವಾರ್ಡ್ ನಂ. 19)ಮಹಾಂತೇಶ್ ನಲವಡಿ, ವಾರ್ಡ್ ನಂ. 20) ಕಮಲಾಕ್ಷಿ ಗೊಂದಿ, ವಾರ್ಡ್ ನಂ. 21) ಶಂಕರ್ ಕರಿಬಿಷ್ಠಿ,

ವಾರ್ಡ್ ನಂ. 23)ಚನ್ನಪ್ಪ ದ್ಯಾಂಪೂರ, ವಾರ್ಡ್ ನಂ. 24) ನಾಗರಾಜ್ ಹುಲಗಪ್ಪ ತಳವಾರ, ವಾರ್ಡ್ ನಂ. 25) ಬಾಬಣ್ಣ ಮಾನ್ವಿ, ವಾರ್ಡ್ ನಂ. 26) ಹುಲಿಗೆಮ್ಮ ಜಿ ಹಬೀಬ, ವಾರ್ಡ್ ನಂ.  27) ಶಾರದಾ ಹೀರೆಮಠ,

ವಾರ್ಡ್ ನಂ. 29) ರಾಜೇಶ್ ಕಟ್ಟಿಮನಿ, ವಾರ್ಡ್ ನಂ. 30) ರೇಖಾ ಅಮರನಾಥ ಬೆಟಗೇರಿ, ವಾರ್ಡ್ ನಂ.31) ಶೈಲಾ ಬಾಕಳೆ, ವಾರ್ಡ್ ನಂ. 34) ವಿದ್ಯಾವತಿ ಗಡಗಿ, ಹಾಗೂ ವಾರ್ಡ್ ನಂ 35)ಉಷಾ ಮಹೇಶ್ ದಾಸರ್

ಗದಗ-ಬೆಟಗೇರಿ ನಗರಸಭೆ ಚುನಾವಣೆ; ‘ಆಯಾ ರಾಮ್ ಗಯಾ ರಾಮ್’ ಸಂಸ್ಕೃತಿ ಆರಂಭ!

ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ
ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ತೀವ್ರ ಪೈಪೋಟಿ

ವಿಜಯಸಾಕ್ಷಿ ವಿಶೇಷ, ಗದಗ

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಡಿ. 8ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ. ಎಂಟು ವರ್ಷಗಳ ಬಳಿಕ ಅವಳಿ ನಗರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಜರಗುತ್ತಿರುವುದರಿಂದ ಕದನ ಕುತೂಹಲ ಕೆರಳಿಸಿದೆ.

ಟಿಕೆಟ್‌ಗಾಗಿ ಹೆಸರು ನೋಂದಾಯಿಸಿರುವ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಭಾವಿ ರಾಜಕೀಯ ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಪಕ್ಷಗಳಲ್ಲಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಬಂಡಾಯ ಅಭ್ಯರ್ಥಿಗಳಾಗಿಯಾದರೂ ಚುನಾವಣೆ ಕಣಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದಾರೆ. ಇದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಧಾನ ಪರಿಷತ್ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಅವಳಿ ನಗರದ 35 ವಾರ್ಡ್‌ಗಳಲ್ಲೂ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಮಾರುದ್ಧವಿದೆ. ಉಭಯ ಪಕ್ಷಗಳಲ್ಲೂ ಆಕಾಂಕ್ಷಿಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲಿದ್ದು, ಅಳಿದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವಲ್ಲಿ ಮಗ್ನರಾಗಿದ್ದಾರೆ.


ಬಿಜೆಪಿ ಟಿಕೆಟ್‌ಗಾಗಿ 210 ಜನರು ಅರ್ಜಿ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ 110 ಜನರು ಟಿಕೆಟ್ ನೀಡುವಂತೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಅರ್ಜಿ ಸಲ್ಲಿಸಿರುವರಲ್ಲಿ ಯುವ ಜನತೆಯೇ ಹೆಚ್ಚಿದ್ದಾರೆ ಎನ್ನಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಸುಮ್ಮನೆ ಕುಳಿತುಕೊಳ್ಳದೆ ಟಿಕೆಟ್‌ಗಾಗಿ ನಾಯಕರ ಮನೆಗೆ ಅಲೆದಾಡುತ್ತಿದ್ದಾರೆ. ಪಕ್ಷದಲ್ಲಿ ಪ್ರಭಾವಿ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅವಳಿ ನಗರದ 22ನೇ ವಾರ್ಡ್ ಗಂಗಿಮಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ 11 ಜನರು ಪೈಪೋಟಿ ನಡೆಸುತ್ತಿರುವುದು ವಿಶೇಷ.

ಅನಿಲ್ ಪ್ರಭಾವದ ನಿರೀಕ್ಷೆ

ಗದಗ ಮತಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಬಹುತೇಕ ಗದಗ-ಬೆಟಗೇರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಬಂದಿದೆ. 2007ರಲ್ಲಿ ಮಾತ್ರ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಅವಳಿ ನಗರದಲ್ಲಿ ಕಾಂಗ್ರೆಸ್ ಸಂಪೂರ್ಣ ಹಿಡಿತ ಸಾಧಿಸಿದ್ದರೂ ಗದಗ ಮತಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರು ಅವಳಿ ನಗರದ 28 ವಾರ್ಡ್‌ಗಳಲ್ಲಿ ಪಡೆದಿರುವ ಮತಗಳು ಬಿಜೆಪಿ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ. ಬಿಜೆಪಿ ನಾಯಕರೂ ಇದೇ ಲೆಕ್ಕಾಚಾರಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟು ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಉಭಯ ಪಕ್ಷಗಳಿಗೆ ಪೈಪೋಟಿ ನೀಡಲು ಜೆಡಿಎಸ್ ಹವಣಿಸುತ್ತಿದೆ.

ಯಾರಿಗೆ ಅದೃಷ್ಟ?

ಈ ಬಾರಿ ನಗರಸಭೆಯ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ಹಪಾಹಪಿಸುತ್ತಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಆಪರೇಷನ್ ಕಮಲ ಸಂಸ್ಕೃತಿ ಹುಟ್ಟು ಹಾಕಿರುವ ಬಿಜೆಪಿಯ ಕೆಲವು ಪ್ರಭಾವಿ ಆಕಾಂಕ್ಷಿಗಳಿಗೆ ಕಾಂಗ್ರೆಸ್ಸಿಗರು ಆಸೆ, ಆಮಿಷಗಳನ್ನೊಡ್ಡಿ ಹೈಜಾಕ್ ಮಾಡುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಗದಗ-ಬೆಟಗೇರಿ ನಗರಸಭೆಯ ಚುನಾವಣೆಗೂ ಮುನ್ನವೇ ‘ಆಯಾ ರಾಮ್ ಗಯಾ ರಾಮ್’ ಸಂಸ್ಕೃತಿ ಶುರುವಾಗಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಚುನಾವಣೆಯ ವೇಳೆ ಯಾವುದೇ ಮುಖಂಡರು ಪಕ್ಷಾಂತರ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದುತ್ವ ಪ್ರತಿಪಾದಕ ಶ್ರೀರಾಮಸೇನೆ ಬೆಂಬಲಿತ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇದರಿಂದಲೂ ಕೆಲವು ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಬಹುದು.

ಗದಗ-ಬೆಟಗೇರಿ ಚುನಾವಣೆ ಟಿಕೆಟ್ ನೀಡುವಂತೆ 200ಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಕನಿಷ್ಠ ಐವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಡುಗಡೆಗೊಳಿಸಲಾಗುವುದು. ಆಕಾಂಕ್ಷಿಗಳ ಸಂಘಟನಾ ಶಕ್ತಿ, ಗೆಲ್ಲಬಹುದಾದ ಸಾಮರ್ಥ್ಯ ಹೀಗೆ ಇನ್ನಿತರ ಹಲವು ಮಾನದಂಡಗಳನ್ನು ಇಟ್ಟುಕೊಂಡು ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು.

ಮೋಹನ್ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ

ಟಿಕೆಟ್‌ಗಾಗಿ 110 ಜನರು ಹೆಸರು ನೋಂದಾಯಿಸಿದ್ದು, ಡಿ.11ರಂದು ಆಯ್ಕೆ ಸಮಿತಿಯ ಸಭೆ ನಡೆಸಿ ಪ್ರತಿ ವಾರ್ಡ್‌ಗಳ ಮುಖಂಡರೊಂದಿಗೆ ಚರ್ಚಿಸಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಾಮಾಜಿಕ ನ್ಯಾಯದ ಆಧಾರದಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲಿನ ಪ್ರತಿ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುವುದು.

ಗುರುಣ್ಣ ಬಳಗಾನೂರ, ಕಾಂಗ್ರೆಸ್ ಶಹರ‌ ಘಟಕದ ಅಧ್ಯಕ್ಷ

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ ಜೆಡಿಎಸ್ ಟಿಕೆಟ್‌ಗಾಗಿ 60ಕ್ಕೂ ಜನರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕೆಲ ಹಿರಿಯರು, ಕಾರ್ಯಕರ್ತರು ಸ್ಪರ್ಧಿಸಲು ಉತ್ಸಾಹ ತೋರಿದ್ದು, ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು.

ಅಂದಾನಯ್ಯ ಕುರ್ತಕೋಟಿಮಠ, ಜೆಡಿಎಸ್ ಜಿಲ್ಲಾಧ್ಯಕ್ಷ

ಬೆಟಗೇರಿಯ ಕೆಲ ಬಿಜೆಪಿಯ ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೈಜಾಕ್ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಬಿಜೆಪಿಯ ಮಾಜಿ ಸದಸ್ಯರ ಮನೆಗೆ ಹೋಗಿ ಪಕ್ಷಕ್ಕೆ ಕರೆ ತರಲು ಹರಸಾಹಸ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದ ಕೆಲ ಪ್ರಭಾವಿ ಮುಖಂಡರು ಕಾಂಗ್ರೆಸ್ ಪಕ್ಷ ಬಿಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ರೆ ಮುಸ್ಲಿಂ ಮುಖಂಡರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತದೆ. ಒಟ್ನಲ್ಲಿ ಆಯಾ ರಾಮ್, ಗಯಾ ರಾಮ್ ಆರಂಭವಾಗಿದ್ದುಂತೂ ಸತ್ಯ.

//ಸಿನಿಮಾ ವಿಮರ್ಶೆ// ಅಂತ್ಯವಿರದ ದೃಶ್ಯ ಮತ್ತೇ ಪುನರಾರಂಭ…

-ಬಸವರಾಜ ಕರುಗಲ್.
ಇನ್ನೇನು ಹೀರೋ ಮಾಡಿದ ತಪ್ಪು ಸಾಬೀತಾಯಿತು ಎನ್ನುವಷ್ಟರಲ್ಲಿ ನಿರೀಕ್ಷಿಸದ ಟ್ವಿಸ್ಟ್… ಚೇರ್‌ನ ತುದಿಯಲ್ಲಿ ಪ್ರೇಕ್ಷಕ…

ಇದೇ ಲಾಜಿಕ್ ದೃಶ್ಯ-1ರಲ್ಲಿ ವರ್ಕ್ ಆಗಿತ್ತು. ಈಗ ಅದೇ ಸಿಕ್ವೇಲ್ ಮುಂದುವರಿದಿದೆ‌ ಅದಕ್ಕೆ ದೃಶ್ಯ-2 ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ The resumption (ಪುನಾರಂಭ) ಅಂತ ಸಬ್ ಟೈಟಲ್ ಸಹ ಇದೆ.

ಮೊದಲ ದೃಶ್ಯದಲ್ಲಿ ಪೊಲೀಸ್ ಕ್ರೌರ್ಯ ಹೇಗಿರುತ್ತೆ ಅನ್ನೋದಕ್ಕೆ ಸ್ಯಾಂಪಲ್ ಆಗಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ದೃಶ್ಯ ಮನುಷ್ಯನಿಗೆ ಬುದ್ಧಿವಂತಿಕೆ ಹೇಗಿರುತ್ತೆ ಅನ್ನೋದಕ್ಕೆ ಕನ್ನಡಿಯಾಗಿದೆ. ಮುಂದೆ ಮೂರನೇ ದೃಶ್ಯದಲ್ಲಿ…? ಉತ್ತರ ಗೊತ್ತಿಲ್ಲ. ಆದರೆ ಮೂರನೇ ದೃಶ್ಯ ಬರಬಹುದು ಎಂಬ ಸುಳಿವು ಸಿಕ್ಕಿರೋದು ಮಾತ್ರ ಎರಡನೇ ದೃಶ್ಯದ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತೆ.

ದೃಶ್ಯ-2 ಸಿನಿಮಾ ನಿಂತಿರೋದೇ ಕ್ಲೈಮ್ಯಾಕ್ಸ್ ಅನ್ನೋ ಪಿಲ್ಲರ್ ಮೇಲೆ. ದೃಶ್ಯ-1 ಬಿಡುಗಡೆಯಾದ 7 ವರ್ಷಗಳ ನಂತರ ದೃಶ್ಯ-2 ಬಿಡುಗಡೆಯಾಗಿದೆ. ಸಿನಿಮಾ ಹಾಗೂ ಸಿನಿಮಾದ ಪಾತ್ರಗಳು ಅಪ್‌ಡೇಟ್ ಆಗಿವೆ. ಆದರೆ ಸಂಬಂಧ ಎನ್ನುವುದು ಮಾತ್ರ ಸದಾ ಹಸಿರು.. ಹಿಂದೆ, ಇಂದು ಮತ್ತು ಮುಂದೆಯೂ ಸಹ..

once again ಇದು ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಿನಿಮಾ ಆಗಿ ಮುಂದುವರಿದಿದೆ. ಹಾಗಾಗಿ ಇಡೀ ಫ್ಯಾಮಿಲಿ ಸಮೇತ ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದು.. ಯಾಕೆಂದರೆ ಇದು ಡಾ.ರವಿಚಂದ್ರ.ವಿ ನಟಿಸಿರೊ, ಪಿ.ವಾಸು ನಿರ್ದೇಶಿಸಿರೋ ಸಿನಿಮಾ. ರವಿಚಂದ್ರನ್ ಸಿನಿಮಾ ಅಂದ್ರೆ ಫ್ಯಾಮಿಲಿ ಆಡಿಯನ್ಸ್ ಕಮ್ಮಿ ಅನ್ನೋ ಕಾರಣವೇನೊ ಎಂಬಂತೆ
ಸಿನಿಮಾಗೆ ಯು/ಎ ಪ್ರಮಾಣಪತ್ರ ಲಭಿಸಿದೆ.
ದೃಶ್ಯ-2 ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ವಿ.ರವಿಚಂದ್ರನ್, ಡಾ.ರವಿಚಂದ್ರ.ವಿ‌ ಆಗಿ ಬದಲಾಗಿದ್ದಾರೆ. ಲೆಕ್ಕ ಹಾಗೂ ಚಿತ್ರದ ಚೊಕ್ಕತೆಯ ವಿಷಯಕ್ಕೆ ಸಂಬಂಧಿಸಿದಂತೆ ದೃಶ್ಯ-2ಗೆ ಯು ಸರ್ಟಿಫಿಕೆಟ್ ಸಿಗಬೇಕಿತ್ತು.

unsolved cases will continue.. ಎನ್ನುವ ಅಕ್ಷರಗಳ ಮೂಲಕ ಮುಕ್ತಾಯಗೊಳ್ಳುವ ದೃಶ್ಯ-2 ಮತ್ತೇ ಮುಂದುವರಿಯುವ ಮುನ್ಸೂಚನೆ ನೀಡಿದೆ.

ದೃಶ್ಯ-1ರ ಮುಂದುವರಿದ ಭಾಗ ಇದಾದ್ದರಿಂದ ಅಲ್ಲಿದ್ದ ಪಾತ್ರಗಳೇ ಇಲ್ಲೂ ಅದೇ ಪಾತ್ರದಲ್ಲಿ ಮುಂದುವರಿದಿವೆ, except ಸೂರ್ಯಪ್ರಕಾಶ್. ದೃಶ್ಯ-1ರಲ್ಲಿ ಪೊಲೀಸ್ ಕ್ರೌರ್ಯ ಮೆರೆದಿದ್ದ ಸೂರ್ಯಪ್ರಕಾಶ್ ಪಾತ್ರಧಾರಿ ಅಚ್ಯುತ್ ಇಲ್ಲಿಲ್ಲ. ಆದರೆ ಸೂರ್ಯಪ್ರಕಾಶ್ ಹೆಸರು ದೃಶ್ಯ-2ರಲ್ಲಿ ಆಗಾಗ ಕೇಳುತ್ತದೆ.

ಟೈಮ್, ವರ್ಷ ಕಳೆದಂತೆಲ್ಲ ಜನ ಹಿಂದಿನದ್ದನ್ನ ಮರೆತು ಹೋಗ್ತಾರೆ ಅನ್ನೋದು ಸಹಜ. ಆದರೆ ಪೊಲೀಸ್ ಇಲಾಖೆ ಹಾಗಲ್ಲ. ಜನರ ಈ‌ ಮರೆಗುಳಿತನವೇ ಪೊಲೀಸ್ ಡಿಪಾರ್ಟ್‌ಮೆಂಟ್‌ಗೆ ಪ್ಲಸ್ ಪಾಯಿಂಟ್. ಇನ್ವೆಸ್ಟಿಗೇಷನ್ ಎಂಬುದು ರಿ-ಇನ್ವೆಸ್ಟಿಗೇಷನ್ ಆಗಿ ಸ್ಥಿತ್ಯಂತರ ಆಗೋದೇ ಆಗ. ಆವಾಗ ತಪ್ಪಿತಸ್ಥ ತಮಗರಿವಿಲ್ಲದಂತೆ ಪೊಲೀಸ್ ಜಾಲಕ್ಕೆ ಬೀಳ್ತಾನೆ ಅನ್ನೋದು ಪೊಲೀಸ್ ಟೆಕ್ನಿಕ್. ಹಾಗಾಗಿ ಪೊಲೀಸರು ಆರೋಪಿಗೆ ಗೊತ್ತಿಲ್ಲದೇ ನಿಗಾ ಇಟ್ಟಿ‌ರ್ತಾರೆ. ಇಲ್ಲೂ ಹಾಗೇನೇ. ಟ್ವಿಸ್ಟ್ ಏನಂದ್ರೆ ಚಿತ್ರದ ನಾಯಕ ಸಹ ಪೊಲೀಸರ ಮೇಲೆ ನಿಗಾ ಇಟ್ಟದ್ದು, ಅದೃಷ್ಟವನ್ನ ನಂಬಿ ರಿಸ್ಕ್ ತೆಗೆದುಕೊಳ್ಳುವ ಕುತೂಹಲಕರ ಸಂಗತಿ..

ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಮಗನನ್ನ ಕೊಂದ ರಾಜೇಂದ್ರ ಪೊನ್ನಪ್ಪನ ಕುಟುಂಬ ಏಳು ವರ್ಷಗಳಿಂದ ಆತಂಕದಲ್ಲೇ ಕಾಲ ಕಳೆಯುತ್ತಾ, ಒಂದರ್ಥದಲ್ಲಿ ತಮ್ಮಷ್ಟಕ್ಕೆ ತಾವೇ ಶಿಕ್ಷೆ ಅನುಭವಿಸುತ್ತಾ ಜೀವನದ ಹೆಜ್ಜೆ ಸವೆಸುತ್ತಿದ್ದಾಗ ಸತತ ಏಳು ವರ್ಷಗಳಿಂದ ಪೊಲೀಸರು ಬೆನ್ನು ಬಿದ್ದಿದ್ದ ಡೆಡ್‌ಬಾಡಿಯ ಅಸ್ಥಿಪಂಜರ ಪೊಲೀಸ್ ಕಟ್ಟಡದ ಕೆಳಗೆ ಇದೆ ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ. ಇಲ್ಲಿಂದ ಮತ್ತೇ ಪೊಲೀಸ್ ಆ್ಯಕ್ಷನ್ ಶುರು.. ಈ ಸಲ ಕೋರ್ಟ್ ಕನೆಕ್ಷನ್ ಜಾಸ್ತಿ ಇದೆ, ಮತ್ತು ಸಮಯೋಚಿತವಾಗಿದೆ.

ವಿರಾಮದ ಬಳಿಕ ಸಿನಿಮಾ ರೋಚಕತೆಯ ಘಟ್ಟ ತಲುಪುತ್ತದೆ. ಕ್ಲೈಮ್ಯಾಕ್ಸ್ ರೋಚಕತೆಯ ತುತ್ತತುದಿ ತಲುಪುತ್ತದೆ ಎಂದರೂ ತಪ್ಪಿಲ್ಲ. ಪ್ರಕರಣ ಪತ್ತೆ ಹಚ್ಚುವ ಪೊಲೀಸರು ರಾಜೇಂದ್ರ ಪೊನ್ನಪ್ಪನನ್ನ ಹೀಡಿತಾರಾ? ಆತನ ಕುಟುಂಬಕ್ಕೆ ಶಿಕ್ಷೆಯಾಗುತ್ತಾ? ಪೊಲೀಸ್ ಅಧಿಕಾರಿಣಿಯ ರಿವೇಂಜ್ ಹೇಗಿರುತ್ತೆ? ಇವೆಲ್ಲ ಗೊತ್ತಾಗಬೇಕಂದ್ರೆ ದೃಶ್ಯ-2 ಸಿನಿಮಾ ನೋಡಲೇಬೇಕು.

ಸಿನಿಮಾ ಚನ್ನಾಗಿದೆ ಅಂದ ಮಾತ್ರಕ್ಕೆ ಮೈನಸ್ ಪಾಯಿಂಟ್‌ಗಳೇ ಇಲ್ಲ ಅಂತೇನಿಲ್ಲ. ಜಿವಿಎಸ್ ಸೀತಾರಾಂ ಕ್ಯಾಮೆರಾ ವರ್ಕ್ ರಿಚ್ ಅನಿಸದಿರುವುದನ್ನ, ಹಾಡುಗಳ ಕೊರತೆಯನ್ನು ಚಿತ್ರದ ಕಥೆ ನೀಗಿಸುತ್ತದೆ.

ಡಾ.ರವಿಚಂದ್ರ. ವಿ. ಮತ್ತೊಮ್ಮೆ ಫ್ಯಾಮಿಲಿ ಮ್ಯಾನ್ ಆಗಿ ಇಷ್ಟವಾಗುತ್ತಾರೆ. ಅನಂತ್‌ನಾಗ್ ಅವರದ್ದು ಸಣ್ಣ ಪಾತ್ರವಾದರೂ ಮಹತ್ವದ, ತಣ್ಣನೆಯ ಪಾತ್ರ. ಕಿರಿಕ್ ಪಾರ್ಟಿ ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿದ್ದು ಅಷ್ಟಾಗಿ ಸೂಟ್ ಆಗಿಲ್ಲ. ಶಿವಾಜಿ ಪ್ರಭು, ಆಶಾ ಶರತ್ ಹಿಂದಿನ ದೃಶ್ಯದಂತೆ ಇಲ್ಲೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶಿವರಾಂ ಹೊಟೇಲ್ ಮಾಲೀಕನಾಗಿ, ಸಾಧು ಕೋಕಿಲ ಭಿಕ್ಷುಕನಾಗಿ ಕಾಣಿಸಿಕೊಂಡು ಅಲ್ಲಲ್ಲಿ‌ ಕಚಗುಳಿ ಇಡುತ್ತಾರೆ. ನವ್ಯಾ ನಾಯರ್, ಸ್ವರೂಪಿಣಿ, ಸೋನು ಗೌಡ, ಹೆಬ್ಬಾಳ ಕೃಷ್ಣ, ನೀತು ರೈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ದೇಶಕ ಪಿ.ವಾಸು ಒಂದೇ ಒಂದು ದೃಶ್ಯ ವೇಸ್ಟ್ ಆಗದಂತೆ ಪ್ರತಿ ದೃಶ್ಯಕ್ಕೂ ಸಕಾರಣ ನೀಡಿದ್ದಾರೆ. ಅವೆಲ್ಲ ರಿವೀಲ್ ಆಗೋದೇ ಕ್ಲೈಮ್ಯಾಕ್ಸ್‌ನಲ್ಲಿ.. ವಾಸು ಮತ್ತೊಮ್ಮೆ ಗೆದ್ದಿದ್ದಾರೆ ಎಂದು ಹೇಳಬಹುದು. ಚಿತ್ರವನ್ನು ನಿರ್ಮಿಸಿರೊ e4 ಎಂಟರ್ಟೈನ್ಮೆಂಟ್ ಬ್ಯಾನರ್ ನಿಧಾನವಾಗಿ ಬಂಡವಾಳ ವಾಪಾಸ್ ಪಡೆಯಬಹುದು.

ಸಿನಿಮಾ ಆರಂಭದ 48 ನಿಮಿಷಗಳ ಕಾಲ ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ ಅನ್ಸುತ್ತೆ. ಆನಂತರ ದೃಶ್ಯ-2 ಫ್ಯಾಮಿಲಿ ಕಮ್ ಥ್ರಿಲ್ಲರ್ ಕತೆಯಾಗಿ ಮಾರ್ಪಾಡಾಗುತ್ತೆ. ಹ್ಯಾಪಿಯಾಗಿ ಸಂಡೇ ಕಳೆಯಲು ಯೋಜಿಸಿ, ಯೋಚಿಸಿ ಮಾಡಿದ ಸಿನಿಮಾ.

ರೇಟಿಂಗ್: ****


ರೇಟಿಂಗ್

  • * – ಚನ್ನಾಗಿಲ್ಲ.
    ** – ಸುಮಾರಾಗಿದೆ
    *** – ಚನ್ನಾಗಿದೆ
    **** – ತುಂಬಾ ಚನ್ನಾಗಿದೆ
    ***** – ಮಿಸ್ ಮಾಡ್ದೇ ನೋಡಿ

ದೇಶ ಸೇವಕರನ್ನು ಬಿಜೆಪಿ ಸರ್ಕಾರ ಲಘುವಾಗಿ ಪರಿಗಣಿಸುತ್ತಿದೆ: ಶಾಸಕ ಎಚ್.ಕೆ.ಪಾಟೀಲ್ ಗಂಭೀರ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ:

ಭಾರತೀಯ ಭದ್ರತಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಧರ್ಮಪತ್ನಿ ಹಾಗೂ ಸೇನಾಧಿಕಾರಿಗಳು ಅಸುನಿಗಿದ್ದು ನೋವನ್ನುಂಟು ಮಾಡಿದ್ದು, ದೇಶದಲ್ಲೊಂದು ದುರ್ದೈವದ ಸಂಗತಿ ನಡೆಯಿತು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಳಗುಂದ ಪಟ್ಟಣ‌ ಪಂಚಾಯತಿಯಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ತಮಿಳುನಾಡಿನ ಕೂನೂರಿನಲ್ಲಿ ಡಿ.೮ರಂದು ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಈ ಆಕ್ಸಿಡೆಂಟ್ ಯಾಕೆ ಆಯಿತು? ಹೇಗೆ ಆಯಿತು? ಎಂಬ ಬಗ್ಗೆ ತನಿಖೆಯಾಗಬೇಕು. ದೇಶದಲ್ಲಿ ಸೆಕ್ಯುರಿಟಿ ಮೇಜರ್ಸ್ ಎಷ್ಟು ಕನಿಷ್ಠ ಇವೆ. ಯಾವ ರೀತಿ ಲ್ಯಾಪ್ಸಸ್ ನಡೆದಿವೆ ಎಂಬುವುದಕ್ಕೆ ಈ ಘಟನೆ ಕನ್ನಡಿ ಇದ್ದಂತೆ. ಹೀಗಾಗಿ ಬಿಜೆಪಿ ಸರ್ಕಾರ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಅಲ್ಲದೇ, ಪ್ರಕರಣದ ಕುರಿತು ತೀವ್ರ ಹಾಗೂ ಗಂಭೀರವಾದ ತನಿಖೆ, ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಶಂಕಿಸಿ ಹೇಳುವುದು ಕಠಿಣವಾಗಿದೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು. ತಕ್ಷಣ ಸೆಕ್ಯುರಿಟಿ ಲ್ಯಾಪ್ಸಸ್ ಆಗಬಹುದು. ಅವುಗಳು ಆಗದಂತೆ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಮಹತ್ವದ ವ್ಯಕ್ತಿಗಳಿಗೆ ಹೇಗೆ ರಕ್ಷಣೆ ನೀಡಬೇಕೆಂದು ವಿಚಾರ ಮಾಡಬೇಕು. ಆದರೆ, ಬಿಜೆಪಿ ಸರ್ಕಾರ ದೇಶ ಸೇವೆಯಲ್ಲಿರುವವರನ್ನು ಲಘುವಾಗಿ ಪರಿಗಣಿಸುತ್ತಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಚುನಾವಣೆ ದಾಹ ಇಂಗಿಸುತ್ತಿರುವ 24/7 ಯೋಜನೆ; ಹಳ್ಳ ಹಿಡಿದ ಕುಡಿಯುವ ನೀರಿನ ಕಾಮಗಾರಿ, ಅವಳಿ ನಗರದ ಜನರಿಗೆ ತಪ್ಪದ ಸಂಕಷ್ಟ

0

*ನೀರು ಪೂರೈಕೆಯಲ್ಲ, ಕಾಮಗಾರಿಯೇ ನಿರಂತರ! *ಗದಗ-ಬೆಟಗೇರಿ ಅವಳಿ ನಗರದ ನೀರಿನ ಸಮಸ್ಯೆ ಈಗ ಚುನಾವಣಾ ವಿಷಯ
*ಬಿಜೆಪಿ-ಕಾಂಗ್ರೆಸ್ ಕೆಸರೆರಚಾಟ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದ ಜನರ ನೀರಿನ ಬವಣೆ ನೀಗಿಸಲು ಶಾಶ್ವತ ಕುಡಿಯುವ ನೀರು ಪೂರೈಸುವ ಶಾಸಕ ಎಚ್.ಕೆ. ಪಾಟೀಲರ ಕನಸಿನ 24×7 ಕುಡಿಯುವ ನೀರು ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಳ್ಳ ಹಿಡಿದಿದೆ. 2017ರಲ್ಲಿ ಪೂರ್ಣಗೊಂಡಿದ್ದ ಯೋಜನೆಯ ಎರಡು ಪ್ಯಾಕೇಜ್‌ಗೆ ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ, ಇಂದಿಗೂ ನಗರದ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಇಲಾಖೆ (ಕೆಯುಐಡಿಎಫ್‌ಸಿ) ಅಧಿಕಾರಿಗಳು ವಿಫಲವಾಗಿದ್ದಾರೆ.

ಅವಳಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ನಗರಸಭೆಯಲ್ಲಿ ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ನಗರದ ಕೆಲವು ಬಡಾವಣೆಗಳಿಗೆ 2-3 ದಿನಗಳಿಗೊಮ್ಮೆ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿದೆ. ಆದರೆ, ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಸ್ಲಂ, ಹಿಂದುಳಿದ ಪ್ರದೇಶಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಕಾಮಗಾರಿ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷಗಳ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಮೂರು ಕಡೆ ಸೋರಿಕೆ

ವಿಧಾನಸಭೆ, ಲೋಕಸಭೆ ಹಾಗೂ ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್, ಗದಗ-ಬೆಟಗೇರಿ ನಗರಸಭೆ ಚುನಾವಣೆ ಸೇರಿ ಹಲವು ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿವೆ. ಅದೀಗ ಚುನಾವಣೆ ವಿಷಯವಾಗಿ ಮಾರ್ಪಟ್ಟಿದೆ.

24×7 ಕುಡಿಯುವ ನೀರು ಯೋಜನೆಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್, ಬಿಜೆಪಿ ನಾಯಕರು ತುದಿಗಾಗಲಲ್ಲಿ ನಿಂತಿರುವ ಹೊತ್ತಲ್ಲೇ ಅವಳಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಯೋಜನೆಯ ಎರಡನೇ ಹಂತದ ಕಾಮಗಾರಿಯ ಅಡವಿಸೋಮಾಪುರ ಸಮೀಪದ ಚಿಕ್ಕಟ್ಟಿ ಶಾಲೆಯ ಬಳಿ ಸೇರಿ ಮೂರು ಕಡೆಗಳಲ್ಲಿ ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್ ಸೋರಿಕೆಯಾಗುತ್ತಿದೆ. ಇದರಿಂದ ಅವಳಿ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಗದಗ-ಬೆಟಗೇರಿಯಿಂದ 70 ಕಿ.ಮೀ. ದೂರದ ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಅವಳಿ ನಗರಕ್ಕೆ ನೀರು ಸರಬರಾಜು ಆಗುತ್ತಿದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗುತ್ತಿರುವುದರಿಂದ ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

ವರ್ಷಪೂರ್ತಿ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಒಂದು ಮತ್ತು ಎರಡನೇ ಪ್ಯಾಕೇಜ್‌ನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಪ್ಯಾಕೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಮುಖ್ಯ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ.

ಮೂರು ಪ್ಯಾಕೇಜ್ ಕಾಮಗಾರಿಗೆ 211 ಕೋಟಿ ರೂ. ವೆಚ್ಚ

ಗದಗ-ಬೆಟಗೇರಿ ಕುಡಿಯುವ ನೀರು ಯೋಜನೆಯ ಮೂರು ಪ್ಯಾಕೇಜ್‌ಗಳಲ್ಲಿ ಮೊದಲ ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ ಒಟ್ಟು 126 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ 2017 ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ. ಇವೆರಡೂ ಪ್ಯಾಕೇಜ್‌ನಲ್ಲಿ ಹಮ್ಮಿಗಿ ಡ್ಯಾಂನಿಂದ ಪಾಪನಾಶಿ ಗ್ರಾಮದ ಹತ್ತಿರ ನಿರ್ಮಿಸಿರುವ ಡಬ್ಲ್ಯೂಟಿಪಿಯಿಂದ ತೋಂಟದಾರ್ಯ ಕಾಲೇಜ್‌ವರೆಗೆ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸಿ, ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಒಟ್ಟು 85 ಕೋಟಿ ರೂ. ವೆಚ್ಚದ ಮೂರನೇ ಪ್ಯಾಕೇಜ್ ಕಾಮಗಾರಿ 2014ರಲ್ಲಿಯೇ ಆರಂಭಗೊಂಡಿದೆ. ಈ ಮೊದಲು 300 ಕಿ.ಮೀ. ಅಷ್ಟೇ ಮನೆಗಳಿಗೆ ಪೈಪ್‌ಲೈನ್ ಅಳವಡಿಸಬೇಕಿತ್ತು. ಆದರೆ, ಹೆಚ್ಚುವರಿಯಾಗಿ 168 ಕಿ.ಮೀ. ಸೇರಿದ್ದರಿಂದಾಗಿ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ಶೇ.12ರಷ್ಟು ಕೆಲಸ ಬಾಕಿ ಉಳಿದಿದೆ. ಅವಳಿ ನಗರದ 40,578 ಮನೆಗಳ ಪೈಕಿ ಈವರೆಗೆ 36,646 ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಇನ್ನೂ 844 ವಾಲ್ವ್ಗಳನ್ನು ಅಳವಡಿಸಬೇಕಿದೆ. ಸುಮಾರು 17 ಕಿ.ಮೀ.ನಷ್ಟು ಪೈಪ್‌ಲೈನ್ ಹಾಕಬೇಕಿದೆ. ಸಂಜಯ್ ನಗರದ ಟ್ಯಾಂಕ್ ಕೆಲಸ ಇನ್ನೂ ಬಾಕಿ ಇದೆ ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್ ಸುಭಾಷ್ ಬಾಜಣ್ಣವರ `ವಿಜಯಸಾಕ್ಷಿ’ಗೆ ತಿಳಿಸಿದರು.

ಗದಗ-ಬೆಟಗೇರಿ ಅವಳಿ ನಗರಕ್ಕೆ ಡಿ.೫ರಂದು ಕೆಯುಐಡಿಎಫ್‌ಸಿ ಎಂಡಿ ಎಂ.ಟಿ.ರೇಜು ಹಾಗೂ ಸೂಪರಿಟೆಂಡೆಂಟ್ ಎಂಜಿನಿಯರ್ ಭೇಟಿ ನೀಡಿ ಕುಡಿಯುವ ನೀರು ಯೋಜನೆಯ ಮೂರನೇ ಪ್ಯಾಕೇಜ್ ಕಾಮಗಾರಿ ಪರಿಶೀಲಿಸಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಯನ್ನು 2022 ಜನವರಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ.

ಸುಭಾಷ್ ಬಾಜಣ್ಣವರ, ಕೆಯುಐಡಿಎಫ್ಸಿ, ಎಇಇ

ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಗದಗ-ಬೆಟಗೇರಿಗೆ ನೀರು ಪೂರೈಸುತ್ತಿರುವ ಮುಖ್ಯ ಪೈಪ್‌ಲೈನ್ ಅಡವಿಸೋಮಾಪುರದ ಹತ್ತಿರ ಮೂರು ಕಡೆಗಳಲ್ಲಿ ಒಡೆದು ನೀರು ಪೋಲಾಗುತ್ತಿತ್ತು. ನೀರು ವಿನಾಕಾರಣ ಪೋಲಾಗದಂತೆ ತಡೆಯಲು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅವಳಿ ನಗರದ ಜನರು ಸಹಕರಿಸಬೇಕು.

ಗುರುಪ್ರಸಾದ್, ಪ್ರಭಾರಿ ಪೌರಾಯುಕ್ತರು

ಖಾಕಿಪಡೆ ಇರುವ ಗ್ರುಪ್ ನಲ್ಲೇ ರಾಸಲೀಲೆಯ ಅಶ್ಲೀಲ ವಿಡಿಯೋ ಹರಿಬಿಟ್ಟ ರಾಜಕೀಯ ನಾಯಕ; ಪೊಲೀಸರೆ ಶೇಮ್ ಶೇಮ್!

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಕೆಲ ರಾಜಕೀಯ ನಾಯಕರು, ಜಿಲ್ಲಾ ಪೊಲೀಸರಿರುವ ವಾಟ್ಸ್ ಆ್ಯಪ್ ಗ್ರುಪ್ ವೊಂದರಲ್ಲಿ ರಾಜಕೀಯ ನಾಯಕನೊಬ್ಬ ಹರಿಬಿಟ್ಟ ತನ್ನದೇ ರಾಸಲೀಲೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಇಡೀ ದೇಶಕ್ಕೆ ರಾಜಕೀಯ ಮೌಲ್ಯಗಳನ್ನು ಸಾರಿದ ರಾಜ್ಯದಲ್ಲಿ ಈಚೆಗೆ ರಾಜಕೀಯ ನಾಯಕರ ರಾಸಲೀಲೆಯ ಅಶ್ಲೀಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಒಂದು ವಿಡಿಯೋ ಜಿಲ್ಲೆಯಲ್ಲಿಯೂ ಸಂಚಲನ ಮೂಡಿಸಿದೆ.

ಗದಗ-ಬೆಟಗೇರಿ ನಗರದ ಜಿಲ್ಲಾ ಕೈಮಗ್ಗ ನೇಕಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಜೇರಬಂಡಿ ಎನ್ನಲಾಗುತ್ತಿರುವ ರಾಜಕೀಯ ನೇತಾರ, ಪರಿಚಿತ ಮಹಿಳೆಯೊಂದಿಗೆ ನಡೆಸಿದ ತನ್ನದೇ ರಾಸಲೀಲೆಯ ವಿಡಿಯೊವೊಂದನ್ನು ಹರಿಬಿಟ್ಟಿದ್ದಾನೆ.

ಸೋಮವಾರ (ಡಿ.6) ರಂದು ಮಧ್ಯಾಹ್ನ 2 ಗಂಟೆಗೆ ರಮೇಶ ಜೇರಬಂಡಿ ಎಂಬಾತನ ವಾಟ್ಸ್ ಅಪ್ ನಂಬರ್ ನಿಂದ ರಾಸಲೀಲೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ನಂಬರ್ ನಿಂದ ವಿಡಿಯೋ ಶೇರ್ ಮಾಡಿದ 20 ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೇ ಅದನ್ನು ಗ್ರುಪ್ಪಿನ ಇತರ ಸದಸ್ಯರು ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ವಿಡಿಯೊ ಅವಳಿ ನಗರದಲ್ಲಿ ಸಾಕಷ್ಟು ವೈರಲ್ ಸಹ ಆಗಿದೆ.

ಜಿಲ್ಲೆಯ ಹಾಲಿ ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಗದಗ ಹಾಗೂ ನರಗುಂದ ಡಿವೈಎಸ್‌ಪಿ, ಜಿಲ್ಲೆಯ ಬೇರೆ ಬೇರೆ ಠಾಣೆಯ ಕೆಲ ಇನ್ಸ್‌ಪೆಕ್ಟರ್‌ಗಳು, ಬೇರೆ ಜಿಲ್ಲೆಯ ಇನ್ಸ್‌ಪೆಕ್ಟರ್‌ಗಳು ಹಾಗೂ ಗಣ್ಯಾತಿ ಗಣ್ಯರಿರುವ ವಾಟ್ಸಾಪ್ ಗ್ರುಪ್‌ವೊಂದರಲ್ಲಿ ಈ ಅಶ್ಲೀಲ ವಿಡಿಯೋ ಶೇರ್ ಆಗಿದೆ. ಆದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಜನ ಶೇಮ್ ಶೇಮ್ ಎನ್ನುವಂತಾಗಿದೆ.

ಗದಗ-ಬೆಟಗೇರಿಯ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡ ಎಂದು ಮೂಲಗಳು ಹೇಳುವ ಹಾಗೆ ರಮೇಶ ಜೇರಬಂಡಿ, ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕೆಲ ವರ್ಷಗಳ ಬಳಿಕ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದನಂತೆ. ಬಿಜೆಪಿಯಲ್ಲಿ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅಲ್ಲಿ ಸೂಕ್ತ ಸ್ಥಾನಮಾನ ಸಿಗದಿದ್ದಾಗ ಪುನಃ ಮಾತೃಪಕ್ಷ ಕಾಂಗ್ರೆಸ್‌ಗೆ ಬರಲು ಉತ್ಸಾಹ ತೋರಿದ್ದನಾದರೂ, ಸದ್ಯ ತಟಸ್ಥನಾಗಿ ಉಳಿದಿದ್ದಾನೆ ಎನ್ನಲಾಗುತ್ತಿದೆ.

ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಾಮುಕನಿಗೆ ಬಿಸಿ ಮುಟ್ಟಿಸಬೇಕಾದಿದ್ದು ಪೊಲೀಸರ ಕರ್ತವ್ಯ ಅಲ್ವೇ? ಹಾಗಾಂತ ಗದಗ-ಬೆಟಗೇರಿ ಅವಳಿ ನಗರದ ಜನರ ಮಾತಾಗಿದೆ.

error: Content is protected !!