Home Blog Page 3314

ವಾಟ್ಸಪ್‌ನಲ್ಲಿ ಅಶ್ಲೀಲ ಪೋಸ್ಟ್‌ ಆರೋಪ; ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಪ್ರಕರಣ, ಕಾರ್ಯಕರ್ತರ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನರೇಗಲ್/ರೋಣ

ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಉದ್ದೇಶದಿಂದ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಅಶ್ಲೀಲ ಫೋಟೋ ಹಾಕಿ ವಿಕೃತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ನ.13ರಂದು ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿಯ ದರ್ಶನ್ ಡುಮ್ಮನವರ್ ಎಂಬ ಆರೋಪಿತ ನ.11ರಂದು ಬೆಳಿಗ್ಗೆ 8.53ಕ್ಕೆ ತನ್ನ ಮೊಬೈಲಿನ ವಾಟ್ಸಪ್ ಸ್ಟೇಟಸ್‌ನಲ್ಲಿ `ಹಳೇ ನೆನಪು-ನಮ್ಮ ಕ್ಷೇತ್ರದ ಬಿಜೆಪಿ ಶಾಸಕನ ಫೋಟೋ’ ಎಂಬ ಅಡಿಬರಹ ಬರೆದು, ಅಶ್ಲೀಲ ಫೋಟೋವನ್ನು ಅಪ್ಲೋಡ್ ಮಾಡಿದ್ದ.

ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವ ಉದ್ದೇಶದಿಂದ ಹೀಗೆ ಅಶ್ಲೀಲ ಚಿತ್ರವನ್ನು ಪ್ರಸಾರ ಮಾಡಿದ್ದಾರೆ ಎಂದು ಹಿರೇಬಝಾರದ ಅಶೋಕ್ ಹನಮಂತಪ್ಪ ವನ್ನಾಲ್ ಎಂಬುವವರು ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐ.ಟಿ ಕಾಯ್ದೆ-2008ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನರೇಗಲ್ ಪೊಲೀಸರು ದರ್ಶನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ರೋಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಮಿಥುನ್‌ ಪಾಟೀಲ್ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಗಜೇಂದ್ರಗಡದ ಬಿಜೆಪಿ ಕಾರ್ಯಕರ್ತನೊಬ್ಬ ಮಾಜಿ ಶಾಸಕ ಜಿ ಎಸ್ ಪಾಟೀಲರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನು ಇದೇ ಸಂದರ್ಭದಲ್ಲಿ ಖಂಡಿಸಿದರು. ರೋಣ ತಾಲೂಕಿನಲ್ಲಿ ಬಿಜೆಪಿಗೊಂದು ಕಾಂಗ್ರೆಸ್ ಪಕ್ಷಕ್ಕೆ ಒಂದು ನ್ಯಾಯ ಎಂದು ಆರೋಪಿಸಿದರು.

ಪೊಲೀಸರ ಕಾರ್ಯಾಚರಣೆ; ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವಾಗ ಸ್ವಂತ ಲಾಭಕ್ಕಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನ.೧೩ರಂದು ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ಮಧ್ಯೆ ಟಿ-೨೦ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ನಡೆಯುತ್ತಿರುವಾಗ ಮದ್ಯಾಹ್ನ ೩.೪೫ರ ಹೊತ್ತಿಗೆ ಶಹರದ ಎಸ್.ಎಂ.ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಬಳಿ ಆರೋಪಿತರಾದ ಕುಷ್ಠಗಿ ಚಾಳದ ಈರಪ್ಪ ಬೂದಪ್ಪ ಹನಮನಹಳ್ಳಿ ಹಾಗೂ ರವಿ ಯಮನಪ್ಪ ವಡ್ಡರಕಲ್ಲ ಎಂಬಿಬ್ಬರು ಪಂದ್ಯಾವಳಿಯ ಮೇಲೆ ಬೆಟ್ಟಿಂಗ್ ನಡೆಸಿ, ಒಂದಕ್ಕೆ ಮೂರು ಪಟ್ಟು ಹಣ ಕೊಡುವದಾಗಿ ಹೇಳಿ ಹಣ ಕಟ್ಟಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿತರಿಂದ ನಗದು ಹಣ 3500 ರೂ, ಜೂಜಾಟಕ್ಕೆ ಬಳಸಿದ್ದ ತಂಡದ ಹೆಸರು ಬರೆದಿದ್ದ ಚೀಟಿ, ಪೆನ್, ೫ ಸಾವಿರ ರೂ. ಬೆಲೆಬಾಳುವ ಒಟ್ಟೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗದಗ ಗ್ರಾಮೀಣ ಠಾಣೆಯ ಪಿಐ ಚಂದ್ರಶೇಖರ ಹರಿಹರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚಿಕ್ಕನರಗುಂದ ಗ್ರಾ. ಪಂ. ಅಧ್ಯಕ್ಷರಾಗಿ ಲಕ್ಷ್ಮಣ ಕಂಬಳಿ ಅವಿರೋಧ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ 3 ನೇ ವಾರ್ಡಿನ ಲಕ್ಷ್ಮಣ ಮಲ್ಲಪ್ಪ ಕಂಬಳಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಬಾಪು ಹಿರೇಗೌಡ್ರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಲಕ್ಷ್ಮಣ ಕಂಬಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಚುಣಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಲಕ್ಷ್ಮಣ ಕಂಬಳಿಗೆ ಅಧಿಕಾರ ವಹಿಸಿಕೊಟ್ಟರು.

ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಸೇರಿದಂತೆ 9 ಮಂದಿ ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಲಕ್ಷ್ಮಣ ಕಂಬಳಿ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಮಾಜಿ ಅಧ್ಯಕ್ಷ, ಸಹೋದರ ಮುತ್ತು ರಾಯರಡ್ಡಿ ಹಾಗೂ ಎಲ್ಲ ಸದಸ್ಯರಿಗೂ ಅಭಿನಂದನೆ ‌ಸಲ್ಲಿಸಿದರು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.

ಚುನಾವಣಾಧಿಕಾರಿ ಮಂಜುಳಾ ಹಕಾರಿ ಮಾತನಾಡಿ, ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಚಿಕ್ಕನರಗುಂದ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಬಹುದು. ಅಭಿವೃದ್ಧಿ ವಿಚಾರಗಳಿಗೆ ರಾಜಕಾರಣ ಬೆರೆಸಬಾರದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಮುತ್ತು ರಾಯರಡ್ಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕು.ಶೈನಾಜ್ ಮುಜಾವರ್, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶರಣಬಸಪ್ಪ ಹಳೇಮನಿ, ಸದಸ್ಯರಾದ ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಶಂಕ್ರಮ್ಮ ಚಲವಾದಿ, ಹಿರಿಯರಾದ ಪಡಿಯಪ್ಪ ಮರಿಯಣ್ಣವರ, ಶ್ರೀನಿವಾಸ ರಾಯರಡ್ಡಿ, ಹನಮಂತ ಚವಡಿ, ಮಲ್ಲಿಕಾರ್ಜುನ ಸಾತಣ್ಣವರ, ಮಲ್ಲನಗೌಡ ಸರ್ವಮಾನೇದ, ಬಸವರಾಜ ಹೊಂಗಲ್, ಶಂಕರಗೌಡ ಚನ್ನಪ್ಪಗೌಡ್ರ, ಶಿವರಡ್ಡಿ ತಿಮ್ಮರಡ್ಡಿ, ಬಸನಗೌಡ ಮುದಿಗೌಡ್ರ, ಅಡಿವೆಪ್ಪ ಮರಿಯಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಾರ್ಟ್ ಸರ್ಕ್ಯೂಟ್; ಗ್ಯಾರೇಜ್ ನಲ್ಲಿದ್ದ ಹಲವು ಬೈಕ್ ಗಳು ಬೆಂಕಿಗಾಹುತಿ, ಲಕ್ಷಾಂತರ ರೂ. ನಷ್ಟ

ವಿಜಯಸಾಕ್ಷಿ ಸುದ್ದಿ, ರೋಣ

ಗ್ಯಾರೇಜ್ ವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಮೂವತ್ತಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾದ ಘಟನೆ ಜರುಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ.

ತಾಲೂಕಿನ ಹೊಳೆಆಲೂರು ಗ್ರಾಮದ ಮೌಲಾಸಾಬ ಎಂಬುವವರ ಗ್ಯಾರೇಜ್ ನಲ್ಲಿ ಈ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಪುರಸಭೆಯಲ್ಲಿ ನಡೆದ ಹೈಡ್ರಾಮಾ; ತೆರೆಮರೆಯಲ್ಲಿ ನಡೆಯಿತಾ ಕುದುರೆ ವ್ಯಾಪಾರ?! ಅವಿಶ್ವಾಸಕ್ಕೆ ಸೋಲು, ಕವಿತಾ ಅಧ್ಯಕ್ಷೆಯಾಗಿ ಮುಂದುವರಿಕೆ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ರಾಜಕೀಯದಾಟವೆಂದರೇ ಹಾಗೇನೋ! ಎಲ್ಲಿ, ಯಾವ ಪಕ್ಷದಲ್ಲಿ ಸೂಕ್ತ ಪುರಸ್ಕಾರ ಸಿಗುತ್ತದೆಯೋ ಆ ಪಕ್ಷಕ್ಕೆ ನೆಗೆಯುವುದು, ಒಳ ಒಪ್ಪಂದಗಳನ್ನು ಮಾಡಿಕೊಂಡು ಒಬ್ಬರಿಗೊಬ್ಬರು ಕೆಸರೆರಚಿಕೊಳ್ಳುವುದು, ಹಿಂದಿನಿಂದ ಮಸಲತ್ತು ನಡೆಸಿ ಮಕಾಡೆ ಮಲಗಿಸುವುದು ಇವೆಲ್ಲವೂ ಸರ್ವೇಸಾಮಾನ್ಯ. ಅದನ್ನೇ ಅಲ್ಲವೇ, ರಾಜಕೀಯವೆನ್ನುವುದು?!

ಮುಂಡರಗಿಯಲ್ಲಿ ನಡೆದಿದ್ದೂ ಇಂಥದೇ ಒಂದು ಹೈಡ್ರಾಮಾ. ಇಲ್ಲಿನ ಪುರಸಭೆ ಅಧ್ಯಕ್ಷೆಯ ವಿರುದ್ಧ ಮೊದಲಿನಿಂದಲೂ ಹತ್ತಾರು ಆರೋಪಗಳು ಕೇಳಿಬರುತ್ತಿದ್ದವು. ಹೀಗಾಗಿ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸಬೇಕೆಂದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಯೋಜನೆ ರೂಪಿಸಿದ್ದರು.

ಎಲ್ಲರೂ ಸೇರಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರು. ಮುಂದೇನಾಗುವುದೋ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅವಿಶ್ವಾಸ ಸಭೆಯೂ ನಡೆಯಿತು. ಆದರೆ, ಕೊನೆಯ ಕ್ಷಣದಲ್ಲಿ ಇಬ್ಬರು ಸದಸ್ಯರು ಕುರುಡು ಕಾಂಚಾಣಕ್ಕೆ ಮಾರಲ್ಪಟ್ಟು ಮೋಸವೆಸಗಿದರು ಎಂಬ ಆರೋಪಗಳು ಕೇಳಿಬಂದವು. ಅವಿಶ್ವಾಸಕ್ಕೆ ಸೋಲಾಗಿದ್ದು, ಹಣಕ್ಕಾಗಿ ಮಾರಾಟವಾದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯೆ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಲಾ ಐದು ಲಕ್ಷ ರೂ.ಗಳಿಗೆ ಇಬ್ಬರು ಸದಸ್ಯರು ಮಾರಾಟವಾಗಿರುವ ಆರೋಪಗಳು ಕೇಳಿಬಂದಿದ್ದು, ಮುಂಡರಗಿ ಪುರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಹಣದಲ್ಲಿಯೇ ಸದಸ್ಯರ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ತನ್ಮೂಲಕ ಸ್ವಪಕ್ಷದ ಆಡಳಿತದ ವಿರುದ್ಧ ಸಿಡಿದೆದ್ದೆ ಬಿಜೆಪಿ ಸದಸ್ಯರಿಗೆ ಮತ್ತೆ ಸೋಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಂದಾಗಿ ಬಿಜೆಪಿ ಪಕ್ಷದ ಪುರಸಭೆ ಅಧ್ಯಕ್ಷೆ ವಿರುದ್ಧವೇ ಸಮರ ಸಾರಿದ್ದರು.

ಸ್ವಪಕ್ಷದ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ದವೇ ಬಿಜೆಪಿಯವರು ತೊಡೆತಟ್ಟಿ ನಿಂತು, ಅವಿಶ್ವಾಸ ಮಂಡನೆಗೆ ನಿರ್ಧರಿಸಿದ್ದರು. ಬಿಜೆಪಿಯ ೧೦ ಸದಸ್ಯರು, ಕಾಂಗ್ರೆಸ್‌ನ ೬ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಆದರೆ, ಸೋಮವಾರ ಪುರಸಭೆಯಲ್ಲಿ ಅವಿಶ್ವಾಸ ಮಂಡನೆ ಮಾಡುವಾಗ ದೊಡ್ಡ ನಾಟಕವೇ ನಡೆಯಿತು.

ಕಾಂಗ್ರೆಸ್‌ನ ಇಬ್ಬರು ಸದಸ್ಯರು ರಾತ್ರೋರಾತ್ರಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪರವಾಗಿ ನಿಂತುಬಿಟ್ಟರು. ಸಭೆಯಲ್ಲಿ ಬಿಜೆಪಿ ಪರವಾದ ಅಭ್ಯರ್ಥಿ ಹಾಗೂ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪರವಾಗಿ ಬ್ಯಾಟ್ ಮಾಡಿದ್ರು. ತನ್ಮೂಲಕ ಅವಿಶ್ವಾಸ ಮಂಡನೆ ಮಾಡಿದ್ದ ಸದಸ್ಯರು ತೀವ್ರ ಮುಖಭಂಗ ಅನುಭವಿಸುವಂತಾಯಿತು.

ಕಾಂಗ್ರೆಸ್‌ನ ಇಬ್ಬರು ಸದಸ್ಯರು ತಲಾ ಐದು ಲಕ್ಷ ರೂ. ಹಣ ಪಡೆದು, ನಮಗೆ ಮೋಸ ಮಾಡಿದ್ದಾರೆ. ಮೊನ್ನೆಯಷ್ಟೇ ನಮ್ಮ ಮನೆಗೆ ಬಂದು, ಕೈ-ಕಾಲು ಮುಗಿದು, ಅವಿಶ್ವಾಸ ಮಂಡನೆ ಮಾಡೋಣ ಅಂದವರು ಇಂದು ಅಧ್ಯಕ್ಷರ ಪರವಾಗಿಯೇ ನಿಂತು ನಮಗೆ ದೊಡ್ಡ ಮೋಸ ಮಾಡಿದ್ದಾರೆ.

-ಜ್ಯೋತಿ ಹಾನಗಲ್, ಬಿಜೆಪಿ ಸದಸ್ಯೆ

ಮುಂಡರಗಿ ಪರಸಭೆ ೨೩ ಸದಸ್ಯರನ್ನು ಹೊಂದಿದ್ದು, ೧೭ ಬಿಜೆಪಿ ಸದಸ್ಯರು, ೬ ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಬಿಜೆಪಿ ಸದಸ್ಯೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕವಿತಾ ಅವರ ಪತಿಯ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಸೇರಿಕೊಂಡು ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಧರಿಸಿದ್ದರು. ಆದರೆ, ಸಭೆಯ ಸಂದರ್ಭದಲ್ಲಿ ಲೆಕ್ಕಾಚಾರಗಳು ಬುಡಮೇಲಾಗಿ, ಸಾಮಾನ್ಯ ಸಭೆಯಲ್ಲಿ ಕೈ ಎತ್ತುವ ಮೂಲಕ ಅಧ್ಯಕ್ಷೆ ಪರವಾಗಿಯೇ ವಿಶ್ವಾಸ ಮಂಡನೆಯಾಯಿತು. ಮತ್ತೊಮ್ಮೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿ ಮುಂದುವರೆದರು.

ಗೋಶಾಲೆಯಲ್ಲಿ ನಾಗರಹಾವು: ಸ್ನೇಕ್ ಬುಡ್ಡಾರಿಂದ ರಕ್ಷಣೆ

0

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಗುಡ್ಡದ ಹಿರೇಮಠದ ಬಳಿಯಿರುವ ಗೋಶಾಲೆಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ನಾಗರ ಹಾವೊಂದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬರಲಾಗಿದೆ.

ಗೋಶಾಲೆಯಲ್ಲಿರುವ ಸಿಬ್ಬಂದಿ ಹಸುಗಳಿಗೆ ಮೇವು ಹಾಕಲೆಂದು ಕಟ್ಟಡದೊಳಗೆ ತೆರಳಿ ಮೇವಿಗೆ ಕೈಯಿಡುತ್ತಿದ್ದಂತೆಯೇ ಈಳಗಿಯ ಬಳಿಯಲ್ಲೇ ಕುಳಿತಿದ್ದ ನಾಗರಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಅಲ್ಲೆಲ್ಲ ಹರಡಿಕೊಂಡಿದ್ದ ಸಿಮೆಂಟ್ ಚೀಲ ಇತ್ಯಾದಿ ಸಾಮಗ್ರಿಗಳ ಸಂದಿಗೊಂದಿಗಳಲ್ಲಿ ಸೇರಿಕೊಂಡು ಕಣ್ತಪ್ಪಿಸಿಕೊಳ್ಳುತ್ತಿದ್ದಾಗ ಕೆಲಸಗಾರರು ಏನು ಮಾಡಬೇಕೆಂದು ದಿಕ್ಕು ತೋಚದೇ ಪ್ರವಾಸದಲ್ಲಿದ್ದ ಗುಡ್ಡದ ಹಿರೇಮಠದ ಅಜ್ಜಯ್ಯನವರಿಗೆ ವಿಷಯ ತಿಳಿಸಿದ್ದರು. ತಕ್ಷಣ ಉರಗ ತಜ್ಞ ಸ್ನೇಕ್ ಬುಡ್ಡಾರನ್ನು ಫೋನಿನ ಮೂಲಕ ಸಂಪರ್ಕಿಸಿದ ಅಜ್ಜಯ್ಯನವರು ಹಾವಿಗೆ ಅಪಾಯವಾಗದಂತೆ ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟು ಬರುವಂತೆ ಸೂಚಿಸಿದ್ದರು.

ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ, ಅವಿತು ಕುಳಿತಿದ್ದ ನಾಗರಹಾವನ್ನು ಹುಡುಕಿ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ.

15 ದಿನಗಳಲ್ಲಿ ಅರ್ಹ ರೈತರಿಗೆ ಪರಿಹಾರ ನೀಡಲು ತಹಸೀಲ್ದಾರಗೆ ಶಾಸಕ ಲಮಾಣಿ ಸೂಚನೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ತಾಲೂಕಿನಲ್ಲಿ ಪರಿಹಾರದ ನಿರೀಕ್ಷೆಯಲ್ಲಿರುವ ಎಲ್ಲ ಅರ್ಹ ಫಲಾನುಭವಿಗಳಿಗೆ ಸರಕಾರದಿಂದ ಬೆಳೆ ಪರಿಹಾರವನ್ನು ೧೫ದಿನಗಳಲ್ಲಿ ತಲುಪಿಸಬೇಕೆಂದು ಶಾಸಕ ರಾಮಣ್ಣ ಲಮಾಣಿ ತಹಸೀಲ್ದಾರ ಕೆ.ಆರ್.ಪಾಟೀಲ ಅವರಿಗೆ ಸೂಚಿಸಿದರು.

ಅವರು ಸೋಮವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳ ವಾರಸುದಾರರಿಗೆ ಹಾಗೂ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕ ಕುಟುಂಬಗಳ ವಾರಸುದಾರರಿಗೆ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು.

ಶಿರಹಟ್ಟಿ ತಾಲೂಕಿನಲ್ಲಿಯ ಆರು ರೈತ ಮೃತ ಕುಟುಂಬಗಳ ವಾರಸುದಾರರಿಗೆ ತಲಾ ೫ಲಕ್ಷ ಪರಿಹಾರ ಹಾಗೂ ಮರಣ ಹೊಂದಿದ ನಾಲ್ಕು ರೈತರ ಹಾಗೂ ಕೃಷಿ ಕಾರ್ಮಿಕ ಕುಟುಂಬಗಳಿಗೆ ತಲಾ ೨ಲಕ್ಷ ರೂ. ಗಳ ಪರಿಹಾರ ಧನದ ಚೆಕ್ ವಿತರಿಸಲಾಗಿದ್ದು, ಆದ್ದರಿಂದ ರೈತರು ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಾಗಲಿ ಅಥವಾ ಬೆಳೆನಷ್ಟದ ಸಂದರ್ಭದಲ್ಲಿ ಯಾವುದೇ ಹಂತದಲ್ಲೂ ಆತಂಕ ಪಡುವ ಅವಶ್ಯಕತೆ ಇಲ್ಲ. ಸರಕಾರ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಇತ್ತೀಚೆಗೆ ಶಿರಹಟ್ಟಿ ಪಟ್ಟಣದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವರುಗಳಿಗೆ ವಿನಂತಿಸಿಕೊಂಡಿದ್ದು, ಇವರೆಲ್ಲರೂ ಭರವಸೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಕ್ಷೇತ್ರದಲ್ಲಿ ನಡೆಯಲಿವೆ ಎಂದರು.

ತಹಸೀಲ್ದಾರ ಕೆ.ಆರ್.ಪಾಟೀಲ, ಸಂದೀಪ ಕಪ್ಪತ್ತನವರ, ಯಲ್ಲಪ್ಪ ಇಂಗಳಗಿ, ರಾಮಣ್ಣ ಕಂಬಳಿ, ಶ್ರೀನಿವಾಸ ಬಾರಬಾರ, ಜಗದೀಶ ತೇಲಿ ಹಾಗೂ ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್, ಲಕ್ಷ್ಮಣ ಲಮಾಣಿ ಉಪಸ್ಥಿತರಿದ್ದರು.

ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಸುಜಾತ ದೊಡ್ಡಮನಿ ಅರ್ಜಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಬೆಂಗಳೂರು

ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕ್ಷೇತ್ರದ ಹಲವು ಮುಖಂಡರ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಿ. ಎಲ್. ನಾಡಗೌಡ್ರು, ಎಸ್. ಡಿ ಮಕಾಂದಾರ, ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷರಾದ ನೀಲಮ್ಮ ಬೋಳನವರ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಎಮ್.ಯು. ಮಕಾಂದಾರ, ಮುಂಡರಗಿ ಪುರಸಭೆಯ ಮಾಜಿ ಸದಸ್ಯರಾದ ದಾನೇಶ್ವರಿ ಭಜಂತ್ರಿ, ಭುವನೇಶ್ವರಿ, ಮಹಾದೇವಕ್ಕ ಹಳ್ಳಿ, ಬಸಮ್ಮ ಕಾಮಣ್ಣವರ್, ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷರಾದ ರುದ್ರಮ್ಮ ಕೆರಕಲಮಟ್ಟಿ, ರಾಜಣ್ಣ ದಾವಣಗೆರೆ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಎಸ್. ಪಾಟೀಲ ಆಯ್ಕೆ

ನ. 14 ರಂದು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ರೋಣ

ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಆಯ್ಕೆಗೊಂಡಿದ್ದು ನ. ೧೪ ರಂದು ಕೆಪಿಸಿಸಿ ಕಚೇರಿಯಲ್ಲಿ ಉಮೇದುವಾರಿಕೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ ಹೇಳಿದರು.

ಅವರು ಶನಿವಾರ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿ.ಎಸ್.ಪಾಟೀಲರು ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕ್ಷೇತ್ರದಲ್ಲಿರುವ ಸರ್ವ ಜನಾಂಗದವರನ್ನು ತಮ್ಮ ಕುಟುಂಬದ ಸದಸ್ಯರಂತೆ ಇಂದಿಗೂ ಕಾಣುತ್ತಾ ಬಂದಿದ್ದಾರೆ. ಇಂಥಹ ನಾಯಕರನ್ನು ನಾವು ಪಡೆದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ೨೦೨೩ಕ್ಕೆ ನಡೆಯುವ ವಿಧಾನ ಸಭೆಯ ಚುನಾವಣೆಗೆ ರೋಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಜಿ.ಎಸ್.ಪಾಟೀಲ ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಎಚ್.ಎಸ್.ಸೋಂಪುರ ಮಾತನಾಡಿ, ಜಿ. ಎಸ್. ಪಾಟೀಲರು ಮಾತೃ ಹೃದಯ ಹೊಂದಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಮಾತೃ ಹೃದಯಿ ಪಾಟೀಲರನ್ನು ಅಭೂತ ಪೂರ್ವವಾಗಿ ಗೆಲ್ಲಿಸಬೇಕು. ರೋಣದಲ್ಲಿ ಜರುಗಿದ ಪೂರ್ವಭಾವಿ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಯಕರ್ತರನ್ನು ಕಂಡರೆ ಸಾಕು ಜಿ.ಎಸ್.ಪಾಟೀಲರ ತಾಯಿ ಹೃದಯ ಇರುವುದನ್ನು ಸಾಕ್ಷೀಕರಿಸುತ್ತದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದರು.

ಮಾಜಿ ಶಾಸಕ ಜಿ.ಎಸ್.ಪಾಟೀಲ, ವಿ. ಆರ್. ಗುಡಿಸಾಗರ, ವಿ. ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಆನಂದ ಚಂಗಳಿ, ಇಸ್ಮಾಯಿಲ್ ಹೊರಪೇಟಿ, ಅಂದಪ್ಪ ಬಿಚ್ಚೂರ, ಪರಶುರಾಮ ಅಳಗವಾಡಿ, ಪ್ರಭು ಮೇಟಿ, ಬಸವರಾಜ ನವಲಗುಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ನಕಲಿ ಚಿನ್ನಾಭರಣ ಒತ್ತೆಯಿಟ್ಟು ಸಾಲ ಪಡೆದು ಮೋಸ; ದತ್ತು ಬಾಕಳೆ ಅಲಿಯಾಸ್ ಯಶ್ ಬಾಕಳೆ ಸೇರಿ ನಾಲ್ವರ ಮೇಲೆ ಚೀಟಿಂಗ್ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ನಕಲಿ ಚಿನ್ನಾಭರಣವನ್ನು ಅಡವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿರುವ ಎರಡು ಪ್ರಕರಣಗಳು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಅಂಥದೇ ಇನ್ನೊಂದು ವಂಚನೆಯ ಪ್ರಕರಣ ಬೆಳಕಿಗೆ ಬಂದಿದ್ದು, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿ.6.5.2022ರ ಮುಂಜಾನೆ 11 ಗಂಟೆಯಿಂದ 9.6.2022ರ ಸಂಜೆ 4 ಗಂಟೆಯ ನಡುವಿನ ಅವಧಿಯಲ್ಲಿ ಈ ವಂಚನೆ ನಡೆದಿದೆಯೆಂದು ಗದಗ ಶಹರದ ಹಳೆಯ ಡಿ.ಸಿ. ಕಛೇರಿಯ ಬಳಿಯಿರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರಾದ ಸಿದ್ದರಾಮೇಶ್ವರ ನಗರದ ಪ್ರವೀಣ ಗಣೇಶ ನಿಡಗುಂದಿ(24), ಉಸಗಿನಕಟ್ಟಿ ಓಣಿಯ ರವಿ ಹತ್ತರಕಲ್(21), ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್ ಬಾಕಳೆ ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ.

ಈ ಮೂರು ಜನ ಸ್ವಲ್ಪವೇ ಬಂಗಾರದ ಲೇಪನವಿರುವ ಆಭರಣಗಳನ್ನು ತೋರಿಸಿ ಸಂಪೂರ್ಣ ಬಂಗಾರದ್ದೆಂದು ಸುಳ್ಳು ಹೇಳಿ ಅಡವಿಟ್ಟು 46,34,969 ರೂ.ಗಳ ಸಾಲ ಪಡೆದು ಬ್ಯಾಂಕಿಗೆ ಮೋಸವೆಸಗಿದ್ದಾರೆ.

ಆರೋಪಿಗಳು ಈ ಆಭರಣಗಳನ್ನು ಅಡವಿಡುವ ಸಮಯದಲ್ಲಿ ಬ್ಯಾಂಕಿನ ಆಭರಣ ಪರೀಕ್ಷಕ ಗದಗ ನಗರದ ಕಾಳಮ್ಮ ದೇವಸ್ಥಾನ ಬಳಿಯ ಮೋಹನ ಎಸ್.ಪ್ಯಾಟಿ ಕೂಡ ಆರೋಪಿತರೊಂದಿಗೆ ಶಾಮೀಲಾಗಿದ್ದು, ಆರೋಪಿಗಳು ಅಡವಿಟ್ಟ ಆಭರಣಗಳು 22 ಕ್ಯಾರೆಟ್ ಬಂಗಾರದ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾರದಿಂದೀಚೆಗೆ ವರದಿಯಾಗುತ್ತಿರುವ ಮೂರನೇ ಪ್ರಕರಣ ಇದಾಗಿದ್ದು, ಕೆಲ ಆರೋಪಿಗಳು ಈ ಮೂರೂ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದನ್ನು ಗಮನಿಸಿದರೆ, ಇನ್ನೂ ಹಲವು ಬ್ಯಾಂಕ್‌ಗಳಲ್ಲಿಯೂ ಇಂಥದೇ ವಂಚನೆ ನಡೆಸಿ ಸಾಲ ಪಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸ್ ತನಿಖೆಯಿಂದ ವಿವರಗಳು ತಿಳಿದುಬರಬೇಕಿದೆ.