Home Blog Page 3313

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಸಾಹುಕಾರ್ ವಿಧಿವಶ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ/ರೋಣ

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶರಾಗಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಈ ದುರ್ಘಟನೆ ನಡೆದಿದೆ. ಸಭೆ ಆರಂಭವಾಗುತ್ತಿದ್ದಂತೆಯೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದಾರೆ.

1994ರಲ್ಲಿ ಗದಗ ಜಿಲ್ಲೆಯ ರೋಣ ವಿಧಾನ ಸಭಾ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಸೂಡಿಯ ಮಂಡಲ ಪಂಚಾಯತಿಯಿಂದ ರಾಜಕೀಯ ಆರಂಭಿಸಿದ್ದ ಶ್ರೀಶೈಲಪ್ಪ ಬಿದರೂರು, (ಟಿಡಿಬಿ) ತಾಲೂಕು ಡೆವೆಲಪ್ಮೆಂಟ್ ಬೋರ್ಡ್ ಗೂ ಆಯ್ಕೆಯಾಗಿದ್ದರು. ಮೂಲತಃ ಜನತಾ ಪರಿವಾರದಿಂದ ಬಂದವರಾಗಿದ್ದರು. ಅವರೊಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು.

2008 ರಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇದಕ್ಕೂ ಮೊದಲು ರೋಣ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು.

2018ರ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದ ಶ್ರೀಶೈಲಪ್ಪ ಬಿದರೂರಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಮೊನ್ನೆ ಅಷ್ಟೇ ರೋಣ ಹಾಗೂ ಗದಗ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆಯಲಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದಿದ್ದರು. ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು

ಸುದ್ದಿ ತಿಳಿದ ಕಾಂಗ್ರೆಸ್ ಹಿರಿಯ ನಾಯಕರೂ ಆದ ಶಾಸಕ ಎಚ್ ಕೆ ಪಾಟೀಲ್ ಹಾಗೂ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿನ ಸಭೆ ಮೊಟಕುಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂತಾಪ; ಮಾಜಿ ಶಾಸಕ‌ ಶ್ರೀಶೈಲಪ್ಪ ಬಿದರೂರು ಅವರ ನಿಧನಕ್ಕೆ ಅನೇಕ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕ ಎಚ್ ಕೆ ಪಾಟೀಲ್,ಸಚಿವ ಸಿ ಸಿ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ ಎಸ್ ಪಾಟೀಲ್, ಬಿ ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ‌ ಸೇರಿದಂತೆ ಅನೇಕ ಧುರೀಣರು‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಮ್ಸ್ ನಲ್ಲಿ ಬಾಣಂತಿಯರಿಗೂ ಬಿಸಿನೀರಿಲ್ಲ ಸ್ವಾಮಿ!

0

ಛಳಿಯೆಂದು ಬೆಚ್ಚಗೆ ಹೊದ್ದು ಮಲಗಿದ್ದೀರಾ? ಇಲ್ಲೊಮ್ಮೆ ನೋಡಿ!

ವಿಜಯಸಾಕ್ಷಿ ಸುದ್ದಿ, ಗದಗ

ಚುಮು ಚುಮು ಛಳಿ ಎಲ್ಲರನ್ನೂ ಥರಗೆಟ್ಟಿಸುತ್ತಿದೆ. ಸೂರ್ಯ ನೆತ್ತಿಯ ಮೇಲೆ ಬಂದರೂ ಮೈಮೇಲಿರುವ ಬೆಚ್ಚನೆಯ ಸ್ವೆಟರ್, ತಲೆಗೆ ಸಿಕ್ಕಿಸಿದ ಟೋಪಿ, ಸುತ್ತಿದ ಟವೆಲ್ಲನ್ನು ತೆಗೆದಿಡಬೇಕೆನಿಸುತ್ತಿಲ್ಲ. ಆದರೆ, ಇಂಥ ಛಳಿಯಲ್ಲಿಯೂ ಬಡವರ ಪಾಲಿನ ಸಂಜೀವಿನಿಯೆಂದು ಕರೆಸಿಕೊಳ್ಳುವ ಗದುಗಿನ ಜಿಮ್ಸ್ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯ ಮುಂದುವರಿದ ಭಾಗವಾಗಿ, ಬಾಣಂತಿಯರಿಗೆ ಸ್ನಾನಕ್ಕೆ ಬಿಸಿನೀರಿನ ಕೊರತೆಯುಂಟಾಗಿದ್ದು, ಸ್ನಾನದ ಬಿಸಿ ನೀರಿಗಾಗಿ ಅವರ ಸಂಬಂಧಿಕರು ನಿತ್ಯ ನೀರಿನ ಬಕೆಟ್, ಬಾಟಲಿ ಹಿಡಿದು ಅಲ್ಲಿಲ್ಲಿ ಸುತ್ತಾಡಿ, ಕಾಡಿ-ಬೇಡಿ ಬಿಸಿನೀರು ಸಂಗ್ರಹಿಸಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡವರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆಗೆ ಬಾಣಂತಿಯರು ಅಕ್ಷರಶಃ ಕುಗ್ಗಿಹೋಗುವಂತಾಗಿದೆ. ಹೆರಿಗೆಯಾಗಿ ನವಜಾತ ಶಿಶುವಿನೊಂದಿಗೆ ಆರೈಕೆಯಲ್ಲಿರುವ ಬಾಣಂತಿಯರಿಗೆ ಬಿಸಿ ನೀರು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬಾಣಂತಿಯರ ಸಂಬಂಧಿಕರು ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು, ಬಿಸಿ ನೀರಿಗಾಗಿ ನಿತ್ಯ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ.

ಇದೆಂಥಾ ಅವ್ಯವಸ್ಥೆ ಎಂದು ಜನರು ಕಿಡಿ ಕಾರುವಂತಾಗಿದೆ. ಸರ್ಕಾರ ಬಡ ಜನರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಎಂಬ ಆಶಯದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದೆ. ಆದ್ರೆ, ಜಿಮ್ಸ್ ಆಡಳಿತ ಮಾತ್ರ ರೋಗಿಗಳಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡುತ್ತಿಲ್ಲ. ಬೆಳ್ಳಂಬೆಳ್ಳಗ್ಗೆ ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು ಬಾಣಂತಿಯರ ಸಂಬಂಧಿಕರು ಹೋಟೆಲ್‌ಗಳಿಗೆ ಅಲೆದಾಡುತ್ತ, `ಅಣ್ಣಾ, ಆಸ್ಪತ್ರೆಯಲ್ಲಿ ಬಾಣಂತಿಯಿದ್ದಾಳೆ. ತಣ್ಣೀರು ಸ್ನಾನ ಆಗವಲ್ದು. ತ್ರಾಸ ಆಕ್ಯದ. ಸ್ವಲ್ಪ ಬಿಸಿನೀರು ಕೊಡ್ರೀ ಅಣ್ಣಾ, ಹ್ಯಾಂಗೂ ಮನೀ ಮಖ ಕಾಣತೇವಿ…’ ಎಂಬರ್ಥದ ಮಾತುಗಳು ಕೇಳಿಬರುತ್ತಿವೆ.

ಒಂದು ಬಾಟಲ್ ನೀರಿಗೆ 20 ರೂ. ಹಣ ನೀಡಬೇಕು. ಒಂದು ಬಕೆಟ್‌ಗೆ 50-60 ರೂ. ಹಣ ನೀಡಬೇಕು. ಆ ಬಾಟಲ್ ಹಾಗೂ ಬಕೆಟ್ ನೀರಿನಲ್ಲಿಯೇ ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ ಮಾಡಬೇಕಾದ ಸಂಕಟ ಎದುರಾಗಿದ್ದು, ಬಡವರು ಸರ್ಕಾರಿ ಆಸ್ಪತ್ರೆ ಎಂದು ಬಂದರೆ, ಉಳಿದ ಖರ್ಚುಗಳೆಲ್ಲಾ ಇಲ್ಲಿ ನೀರಿಗಾಗಿ ಮಾಡುತ್ತಿರುವ ಖರ್ಚಿಗೇ ಸರಿಹೋಗುವಂತಿದೆ.

ಕಳೆದ ಒಂದು ತಿಂಗಳಿಂದ ಬಾಣಂತಿಯ ಸಂಬಂಧಿಕರು, ಹಣ ಕೊಟ್ಟು ನೀರು ತೆಗೆದುಕೊಂಡು ಬಂದು ಆರೈಕೆ ಮಾಡುತ್ತಿದ್ದಾರೆ. ಇಷ್ಟೊಂದು ನೀರಿನ ಸಮಸ್ಯೆಯಿದ್ದರೂ ಕೂಡ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರು ಈ ಕಡೆ ತಿರುಗೆ ನೋಡಿಲ್ಲ ಅನ್ನೂ ಆರೋಪ ಕೇಳಿ ಬಂದಿದೆ. ಕನಿಷ್ಠ ಚಳಿಗಾಲದಲ್ಲಿಯಾದರೂ ರೋಗಿಗಳಿಗೆ, ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಚಿಕಿತ್ಸೆಗಾಗಿ ಬಂದಿದ್ದ ಬಾಣಂತಿಯರ ಸಂಬಂಧಿಕರಾದ ಜನ್ನತ್ ಬೀ, ಮಾಲತೇಶ ಮುಂತಾದವರು ಒತ್ತಾಯಿಸಿದ್ದಾರೆ.

ಜಿಮ್ಸ್ ಆಸ್ಪತ್ರೆಗೆ ಗದಗ ಜಿಲ್ಲೆ ಸೇರಿದಂತೆ, ಪಕ್ಕದ ಹಾವೇರಿ, ಕೊಪ್ಪಳ, ಹಾಗೂ ಬಳ್ಳಾರಿ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಹೆರಿಗೆಗೆಂದು ಆಸ್ಪತ್ರೆ ಬರುತ್ತಾರೆ. ನುರಿತ ವೈದ್ಯರಿದ್ದರೂ ಮೂಲ ಸೌಕರ್ಯದ ಕೊರತೆ ನೀಗುತ್ತಿಲ್ಲ. ಬಿಸಿ ನೀರಿನ ಜೊತೆಗೆ ಕುಡಿಯುವ ನೀರು ಹಾಗೂ ಆಸ್ಪತ್ರೆಯಲ್ಲಿ ಬಳಕೆ ಮಾಡುವ ನೀರಿಗೂ ಸಾಕಷ್ಟು ಸಮಸ್ಯೆ ಉಂಟಾಗಿದೆ. ಅದರಲ್ಲೂ ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಬಿಸಿ ನೀರು ಬಹಳ ಅಗತ್ಯ. ಈ ಆಸ್ಪತ್ರೆಯಲ್ಲಿ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆಯಿಲ್ಲವೆಂದರೆ, ಎಂತಹ ವಿಪರ್ಯಾಸ ಅಲ್ಲವಾ?!

ಮೂರು ಬಿಸಿ ನೀರಿನ ಗೀಜರ್‌ಗಳಿದ್ದು, ಎರಡು ಕೆಟ್ಟಿವೆ, ಒಂದು ಸುಸ್ಥಿತಿಯಲ್ಲಿದೆ. ಇನ್ನು ನಾಲ್ಕೈದು ದಿನದಲ್ಲಿ ಬಿಸಿ ನೀರಿನ ಸಮಸ್ಯೆಯಾಗದೆಯಂತೆ ಕ್ರಮ ಕೈಗೊಳ್ಳಲಾಗುವುದು.

-ಡಾ. ಬಸವರಾಜ್ ಬೊಮ್ಮನಹಳ್ಳಿ, ಜಿಮ್ಸ್ ನಿರ್ದೇಶಕ

ಸರ್ಕಾರ ಆಸ್ಪತ್ರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ಒದಗಿಸುತ್ತದೆ. ಆದರೆ, ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಮೂಲ ಸೌಕರ್ಯಗಳು ಕೂಡಾ ಸಿಗುತ್ತಿಲ್ಲ. ಇಲ್ಲಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಆರೋಗ್ಯ ಸಚಿವರು ಜಿಮ್ಸ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.

ಭೀಕರ ರಸ್ತೆ ಅಪಘಾತದಲ್ಲಿ ಹೊತ್ತಿ ಉರಿದ ಬೈಕ್-ಮಹೀಂದ್ರಾ ಕಾರು; ಬೈಕ್ ಸವಾರ ಸಾವು, ಮಹಿಳೆ ಸ್ಥಿತಿ ಗಂಭೀರ

ವಿಜಯಸಾಕ್ಷಿ ಸುದ್ದಿ, ನರಗುಂದ

ಕರಾಳ ಅಮಾವಾಸ್ಯೆ ತನ್ನ ಪ್ರಭಾವ ತೋರಿಸಿದೆ. ಜಿಲ್ಲೆಯ ನರಗುಂದ ತಾಲೂಕು ವ್ಯಾಪ್ತಿಯ ಭೈರನಹಟ್ಟಿ ಗ್ರಾಮದ ಹೊರ ವಲಯದಲ್ಲಿ ಬುಧವಾರ ಕಾರ್ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಬಗ್ಗೆ ವರದಿಯಾಗಿದೆ.

ಈ ರಸ್ತೆ ಅಪಘಾತದಲ್ಲಿ ಕಾರ್ ಮತ್ತು ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೈಕ್ ಹುಬ್ಬಳ್ಳಿಯಿಂದ ಕೊಣ್ಣೂರ ಕಡೆಗೆ ಹಾಗೂ ಕಾರು ಬಾಗಲಕೋಟೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿತ್ತು ಎನ್ನಲಾಗಿದ್ದು, ಕಾರಿನಲ್ಲಿದ್ದವರು ಅಪಘಾತ ಸಂಭವಿಸುತ್ತಿದ್ದಂತೆಯೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಭಾರೀ ಗಾಯಗೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ.

ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದವರು ಹೊತ್ತಿ ಉರಿಯುತ್ತಿದ್ದ ಬೈಕ್ ಮತ್ತು ಕಾರುಗಳ ಬೆಂಕಿಯನ್ನಾರಿಸುವಲ್ಲಿ ಶ್ರಮಿಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕಲ್ಯಾಣ ಮಂಟಪದಲ್ಲಿ ನೀರುಹಾವು!

0

ವಿಜಯಸಾಕ್ಷಿ ಸುದ್ದಿ, ನರಗುಂದ

ಪಟ್ಟಣದ ಆರೂಢಜ್ಯೋತಿ ಕಲ್ಯಾಣ ಮಂಟಪದಲ್ಲಿ ನೀರು ಹಾವೊಂದು ಕಾಣಿಸಿಕೊಂಡು ಅಲ್ಲಿಯ ಕೆಲಸಕ್ಕೆಂದು ತೆರಳಿದ್ದ ಸಿದ್ದರಾಮೇಶ್ವರ ನಗರದ  ಮಹಿಳೆಯೊಬ್ಬಳಿಗೆ ಕಡಿದ ಪರಿಣಾಮ, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಮದುವೆ ಸಮಾರಂಭಗಳೆಲ್ಲ ಮುಗಿದ ಮೇಲೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾಗ, ಪಾತ್ರೆ ತೊಳೆಯುವ ಕಟ್ಟೆಯ ನಳದ ಬಳಿಯಲ್ಲಿಯೇ ಇದ್ದ ಹಾವನ್ನು ಗಮನಿಸದೇ ತುಳಿದಿದ್ದು, ಹಾವು ಮಹಿಳೆಗೆ ಕಡಿದು ಪರಾರಿಯಾಗಿತ್ತು.

ಗಾಬರಿಗೊಂಡ ಕಲ್ಯಾಣ ಮಂಟಪದಲ್ಲಿದ್ದವರು ಉರಗ ತಜ್ಞ ಸ್ನೇಕ್ ಬುಡ್ಡಾರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದರು. ಅತ್ತಿತ ಸರಿದಾಡುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದ್ದ ಹಾವನ್ನು ಹಿಡಿದು, ಗಮನಿಸಿದ ಸ್ನೇಕ್ ಬುಡ್ಡಾ, ಇದೇನೂ ವಿಷಕಾರಿ ಹಾವಲ್ಲ, ಪ್ರಾಣಾಪಾಯವೇನೂ ಇಲ್ಲ ಎಂದು ತಿಳಿಸಿದರು.

ಪ್ರಾಥಮಿಕ ಚಿಕಿತ್ಸೆಗಾಗಿ ತಾಲೂಕಾ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕರೆದೊಯ್ಯುವಂತೆ ತಿಳಿಸಿದ ಸ್ನೆಕ್ ಬುಡ್ಡಾ, ಹಾವಿನ ಜೊತೆಗೂಡಿಯೇ ತಾವೂ ಆಸ್ಪತ್ರೆಗೆ ತೆರಳಿದರು. ಹಾವನ್ನು ಗಮನಿಸಿದ ವೈದ್ಯರು, ನೀರು ಹಾವು ಕೇವಲ ನಂಜೇ ಹೊರತೂ ವಿಷಕಾರಿಯಲ್ಲವೆಂದು ತಿಳಿಸಿ, ಪ್ರಾಥಮಿಕ ಉಪಚಾರ ನೀಡಿ ಕಳುಹಿಸಿಕೊಟ್ಟಿದ್ದಾರೆ.

ಹಾವನ್ನು ಸುರಕ್ಷಿತವಾಗಿ ಹಿಡಿದ ಬುಡ್ಡೇಸಾಬ್ ನಿರ್ಜನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.

ಅಕ್ರಮ ಸಾರಾಯಿ ಮಾರಾಟ ಸಕ್ರಮಗೊಳಿಸಲು ಗ್ರಾಮಸ್ಥರ ಮನವಿ; ತಬ್ಬಿಬ್ಬಾದ ಅಧಿಕಾರಿಗಳು!

0

ಅನಧಿಕೃತ ಸಾರಾಯಿ ಮಾರಾಟವನ್ನು ಅಧಿಕೃತಗೊಳಿಸಲು ಆಗ್ರಹ * ಮೂರು ಬಾರ್‌ಗಳಿಗೆ ಮಂಜೂರಾತಿ ನೀಡಲು ಕುರಹಟ್ಟಿ ಗ್ರಾಮಸ್ಥರ ಒತ್ತಾಯ

ವಿಜಯಸಾಕ್ಷಿ ಸುದ್ದಿ, ರೋಣ

ಗ್ರಾಮದಲ್ಲಿ ಇರುವ ಸಾರಾಯಿ ಮಾರಾಟ ಕೇಂದ್ರಗಳನ್ನು ಅಧಿಕೃತಗೊಳಿಸುವ ಮೂಲಕ ಗ್ರಾಮಕ್ಕೆ ಮೂರು ಸಾರಾಯಿ ಮಾರಾಟ ಬಾರ್‌ಗಳಿಗೆ ಮಂಜೂರಾತಿ ನೀಡಬೇಕು ಹಾಗೂ ಅಕ್ರಮ ಸಾರಾಯಿ ಸೇವನೆಯಿಂದ ಐದು ಜನರು ಮೃತಪಟ್ಟಿದ್ದು ಅವರ ಪತ್ನಿಯರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳ ಮಾಶಾಸನ ನೀಡಬೇಕು ಎಂದು ತಹಸೀಲ್ದಾರ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರರವರಿಗೆ ಕುರಹಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಶನಿವಾರ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಲಾಯಿತು.

ಗ್ರಾಮಸ್ಥರ ಮನವಿ ಆಲಿಸಿ ಗಲಿಬಿಲಿಗೊಂಡ ತಹಸೀಲ್ದಾರ್ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ತಹಸೀಲ್ದಾರ್ ವಾಣಿ ಉಂಕಿ ಸಹ ಈ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಾರಾಯಿ ಮಾರಾಟಗಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ತಪ್ಪಿದಲ್ಲಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕಟ್ಟಡವಿಲ್ಲ. ಹತ್ತು ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಲು ಗ್ರಾಮದಲ್ಲಿ ಎರಡು ಎಕರೆ ಜಮೀನು ನೀಡಲಾಗಿದ್ದು, ಇಲ್ಲಿಯವರೆಗೆ ಕಟ್ಟಡ ನಿರ್ಮಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಉತ್ತರಿಸಿದ ಬಸವರಾಜ ಅಂಗಡಿ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ವಾರದಲ್ಲಿ ಚಾಲನೆ ನೀಡಲಾಗುವುದು. ಮುಖ್ಯವಾಗಿ ಸೈಕಲ್ ವಿತರಣೆ ಹಾಗೂ 9 ಮತ್ತು 10 ನೇ ತರಗತಿಗಳ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತು ಸರಕಾರ ಆದೇಶ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ರತ್ನವ್ವ ಹಕಾರಿ ಎಂಬ ಮಹಿಳೆ ಅಂಗವಿಕಲ ಪ್ರಮಾಣ ಪತ್ರ ನೀಡುವುದಾಗಿ 7 ಸಾವಿರ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ತಹಸೀಲ್ದಾರ್ ವಾಣಿ ಉಂಕಿಯವರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಗ್ರಾಮ ವಾಸ್ತವ್ಯದಲ್ಲಿ ಒಟ್ಟು 38 ಅರ್ಜಿಗಳು ಸಲ್ಲಿಕೆಯಾದವು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ವಿವಿದ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕುರಿ ನುಂಗಿದ ಬೃಹತ್ ಹೆಬ್ಬಾವು: ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದ ಅರಣ್ಯ ಸಿಬ್ಬಂದಿ

ವಿಜಯಸಾಕ್ಷಿ ಸುದ್ದಿ, ಬೀದರ್

10 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಅನಾಮತ್ತಾಗಿ ಕುರಿಯೊಂದನ್ನು ನುಂಗಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.

ಘಾಟಹಿಪ್ಪರ್ಗಾ ಗ್ರಾಮದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದ ಕುರಿಯನ್ನು ನುಂಗಿ ಜೀರ್ಣಸಿಕೊಳ್ಳಲು ಹೆಣಗಾಡುತ್ತಿತ್ತು. ಈ ದೃಶ್ಯ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಉರಗ ತಜ್ಞ ಅಶೋಕ ಶೆಟ್ಟಿಯವರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಹೆಬ್ಬಾವು ಅದೇ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಮಣಭಾರದ ಹೆಬ್ಬಾವನ್ನು ಹಿಡಿದು, ಹರಸಾಹಸದಿಂದ ಹಾವಿನ ಹೊಟ್ಟೆಯಲ್ಲಿದ್ದ ಕುರಿಯನ್ನು ಹೊರಕ್ಕೆ ತೆಗೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮುರ್ತುಜಾ ಖಾದ್ರಿ, ಸಂತೋಷ, ನಿಸಾರ ಅಹಮದ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

ಲೋಕಾಯುಕ್ತರ ದಾಳಿ; ಉತಾರ ಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಬಲೆಗೆ

ವಿಜಯಸಾಕ್ಷಿ ಸುದ್ದಿ, ಗದಗ

ಒಬ್ಬರ ಹೆಸರಿಗೆ ಜಮೀನು ನೋಂದಣಿ ಮಾಡಿ ಉತಾರ ಕೊಡಲು ಲಂಚ ಕೇಳಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜರುಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಹುಯಿಲಗೋಳ ಎಂಬುವವರೇ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದವರು.

ವಾಸನ ಗ್ರಾಮದ ಹನಮಂತರಾಯಗೌಡ ಮೂಲಿಮನಿ ಎಂಬುವರು, ತಮ್ಮ ಸಹೋದರನ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಕ ಉತಾರ ಕೊಡುವ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಹುಯಿಲಗೋಳ ಎರಡೂವರೆ ಸಾವಿರ ರೂ.ಗಳ ಲಂಚ ಕೇಳಿದ್ದ ಬಗ್ಗೆ ಲೋಕಾಯುಕ್ತರ ಕಚೇರಿಗೆ ದೂರು ನೀಡಿದ್ದರು.

ಶುಕ್ರವಾರ ಸಂಜೆ ಹನಮಂತರಾಯಗೌಡ ಮೂಲಿಮನಿ ಎಂಬುವರ ಮನೆಯ ಹತ್ತಿರ, ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಎರಡೂವರೆ ಸಾವಿರ ರೂ.ಗಳನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಕುಟುಂಬ ಕಲಹ; ಪತ್ನಿ, ಪುತ್ರನಿಗೆ ಚಾಕುವಿನಿಂದ ಇರಿದ ಪತಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಕುಟುಂಬ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆರು ವರ್ಷದ ಪುತ್ರನಿಗೆ ಚಾಕುವಿನಿಂದ ಇರಿದ ಘಟನೆ ತಾಲೂಕಿನ ಡೋಣಿ ತಾಂಡಾದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಸಕ್ಕೂಬಾಯಿ ಹಾಗೂ ಆರು ವರ್ಷದ ಪುತ್ರನಿಗೆ ಚಾಕುವಿನಿಂದ ಇರಿದಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ಮುರಳಿ ಎಂಬಾತ ಈ ಕೃತ್ಯ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಮಧ್ಯ ಆಗಾಗ ಕಲಹ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಪತ್ನಿ ಡೋಣಿ ತಾಂಡಾಕ್ಕೆ ವಾಪಾಸು ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಸಂಧಾನಕ್ಕೆ ಬಂದಾಗ ಏಕಾಏಕಿ ಕಲಹ ಉಂಟಾಗಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಅಂತರ್‌ಜಿಲ್ಲಾ ಕಳ್ಳನ ಬಂಧನ; ನೀರಿನ ಬಾಟಲಿ ಖರೀದಿಸುವ ಸೋಗಿನಲ್ಲಿ ಮಹಿಳೆಯ ಮಾಂಗಲ್ಯಸರ ಕಿತ್ತು ಪರಾರಿಯಾಗಿದ್ದ ಖದೀಮ

ವಿಜಯಸಾಕ್ಷಿ ಸುದ್ದಿ, ಗದಗ

ಕಿರಾಣಿ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸುವ ಸೋಗಿನಲ್ಲಿ ಬಂದು ಅದೇ ಅಂಗಡಿಯಲ್ಲಿ ವಸ್ತು ಖರೀದಿಸುತ್ತಿದ್ದ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗದಗ ಶಹರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.18ರಂದು ಮಧ್ಯಾಹ್ನ 3.10ರ ಸಮಯದಲ್ಲಿ ನಗರದ ಬ್ಯಾಂಕರ್ಸ್ ಕಾಲೋನಿಯ ಶೋಭಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಗಾಯತ್ರಿ ಉಡುಪಿ ಇವರ ಕಿರಾಣಿ ಅಂಗಡಿಯಲ್ಲಿ ಬಿಸ್ಕತ್ ಖರೀದಿಸುತ್ತಿರುವಾಗ ಸುಮಾರು 25-28 ವಯಸ್ಸಿನ, ತೆಳ್ಳನೆಯ ಮೈಕಟ್ಟಿನ ಇಬ್ಬರು ಆರೋಪಿಗಳು ಕಪ್ಪು ಬಣ್ಣದ ಬೈಕ್ ಮೇಲೆ ಬಂದರು.

ಹಿಂದೆ ಕುಳಿತವನು ಅಂಗಡಿ ಬಳಿಗೆ ಬಂದು ಎರಡು ಲೀ. ನೀರಿನ ಬಾಟಲಿಯನ್ನು ಕೇಳಿ, ದೂರುದಾರೆ ಬ್ಯಾಂಕರ್ಸ್ ಕಾಲೋನಿಯ ಸುಮನ ಗಂಗಾಧರ ಜಿತೂರಿ ಕೊರಳಲ್ಲಿದ್ದ ಸುಮಾರು 40 ಗ್ರಾಂ. ತೂಕದ ಬಂಗಾರದ ಪದಕವಿದ್ದ 1.2 ಲಕ್ಷ ರೂ. ಬೆಲೆಬಾಳುವ ತಾಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಘಟನೆಯ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಬೇಧಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಗದಗ ಡಿಎಸ್‌ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ ಪಿಐ ಜಯಂತ ಗೌಳಿ, ಮಹಿಳಾ ಪಿಎಸ್‌ಐ ಬಿ.ಆರ್. ಬಂಕಾಪೂರ, ಸಿಬ್ಬಂದಿಗಳಾದ ವೈ.ಬಿ. ಪಾಟೀಲ, ಎಸ್.ಎಸ್. ಮಾವಿನಕಾಯಿ, ಯು.ಎಫ್. ಸುಣಗಾರ, ಕೆ.ಡಿ. ಜಮಾದಾರ, ಪಿ.ಎಸ್. ಕಲ್ಲೂರ, ಪಿ.ಎ. ಭರಮಗೌಡ್ರ, ಅಣ್ಣಪ್ಪ ಕವಲೂರ, ಟೆಕ್ನಿಕಲ್ ವಿಭಾಗದ ಗುರುರಾಜ ಬೂದಿಹಾಳರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿ, ದಾವಣಗೆರೆಯ ಹರಿಹರ ಟಿಪ್ಪು ನಗರದ ಇರಾನಿ ಕಾಲೋನಿಯ ಗಾಜಿ ಅಬ್ಬಾಸಖಾನ್ @ಜೋಹೇರ ಅಬ್ಬಾಸಖಾನ್ ಮೋಶೀಮ್‌ಖಾನ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1.2 ಲಕ್ಷ ರೂ. ಬೆಲೆಬಾಳುವ 40 ಗ್ರಾಂ ತೂಕದ ಕಳುವಾದ ತಾಳಿಸರವನ್ನು ವಶಪಡಿಸಿಕೊಂಡಿದ್ದಾರೆ.

ತನಿಖಾ ತಂಡದ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಶ್ಲಾಘಿಸಿದ್ದಾರೆ.

ಹೈಟೆಕ್ ಕ್ರಿಕೆಟ್ ಬೆಟ್ಟಿಂಗ್ ಆರೋಪದಲ್ಲಿ 420 ಪ್ರಕರಣ ದಾಖಲು; ಕ್ಯಾಸಿನೋ ಕಿಂಗ್ ಕೆ.ಸಿ. ವೀರೇಂದ್ರ ಬಂಧನಕ್ಕೆ ಬಲೆಬೀಸಿದ ಖಾಕಿ ಪಡೆ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಚುನಾವಣೆ ಹತ್ತಿರಾಗುತ್ತಿದ್ದಂತೆಯೇ ರಾಜ್ಯದ ರಾಜಕೀಯ ಕ್ಷೇತ್ರ ಗರಿಗೆದರತೊಡಗಿದೆ. ಹಲವರು ತಮಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಗಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿದರೆ, ಟಿಕೆಟ್ ಸಿಗುವ ಬಗ್ಗೆ ಖಾತ್ರಿ ಹೊಂದಿರುವ ಉಮೇದುವಾರಿಗಳು ಗೆಲುವಿನತ್ತ ಈಗಲೇ ವಿವಿಧ ಬಾಣಗಳ ಪ್ರಯೋಗಕ್ಕೆ ರಂಗಸ್ಥಳ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಇನ್ನು, ಪದೇ ಪದೇ ಅಧಿಕಾರವರಸಿ ಪಕ್ಷಾಂತರ ಪರ್ವದಲ್ಲಿ ಸಕ್ರಿಯರಾಗಿರುವವರು ಈ ಸಮಯದಲ್ಲಿ ಯಾವ ಪಕ್ಷಕ್ಕೆ ನೆಗೆಯಲಿ ಎಂದು ಲೆಕ್ಕಾಚಾರ ಹಾಕತೊಡಗಿದ್ದಾರೆ. ಇದರ ಬೆನ್ನಲ್ಲೇ ಪ್ರಬಲ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷವನ್ನಲ್ಲ, ದೇಶವನ್ನೇ ಬಿಟ್ಟು ವಿದೇಶಕ್ಕೆ ಹಾರಿರುವ ಪ್ರಕರಣವೊಂದು ಸುದ್ದಿಯಾಗಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಕೆ.ಸಿ. ವೀರೇಂದ್ರ(ಪಪ್ಪಿ) ಸಧ್ಯ ನಾಪತ್ತೆಯಾಗಿದ್ದಾರೆ. ಇವರ ವಿರುದ್ಧ ದಾವಣಗೆರೆಯಲ್ಲಿ ೪೨೦ ಪ್ರಕರಣವೂ ದಾಖಲಾಗಿದೆ. ಸದರಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪಪ್ಪಿ ತಲೆಮರೆಸಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಕೆ.ಸಿ. ವೀರೇಂದ್ರರ ವಿರುದ್ಧ ೪೨೦ ಕೇಸ್ ದಾಖಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಜೂಟ್ ಹೇಳಿದ್ದಾರೆ.

ಅಂದ ಹಾಗೆ, ಕಳೆದ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಪ್ಪಿ, ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗಳಲ್ಲಿ ಸಕ್ರಿಯರಾಗಿದ್ದರು.

ಅ.23ರಂದು ನಡೆದಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಹೇರಳ ಹಣ ನೀಡುವದಾಗಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸಿ, ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ದಾವಣಗೆರೆಯ ವೆಂಕಟೇಶ್ ಎಂಬುವವರು ಇಲ್ಲಿನ ಕಿರಣ್, ಚೇತನ್, ಸೂರಜ್ ಕುಟ್ಟಿ ಹಾಗೂ ಚಿತ್ರದುರ್ಗದ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಿಸಿದ್ದರು.

ಕಿರಣ್, ಚೇತನ್ ಎಂಬಿಬ್ಬರನ್ನು ಬಂಧಿಸಿ, 7 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡ ಪೊಲೀಸರು ಇನ್ನಿಬ್ಬರು ಆರೋಪಿಗಳಾದ ವೀರೇಂದ್ರ ಪಪ್ಪಿ ಹಾಗೂ ಸೂರಜ್ ಕುಟ್ಟಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ವಿಷಯ ತಿಳಿಯುತ್ತಿದ್ದಂತೆಯೇ ವೀರೇಂದ್ರ ಪಪ್ಪಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಮುಂದುವರಿದ ಹಂತವಾಗಿ, ಕೆ.ಸಿ. ವೀರೇಂದ್ರ ಪಪ್ಪಿ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಚಳ್ಳಕೆರೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಖಾತೆಯೂ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ಸೀಜ್ ಮಾಡಿದ್ದಾರೆ.

ಇದೀಗ ಪಪ್ಪಿ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ಭಾರತದ ಯಾವುದೇ ಏರ್‌ಪೋರ್ಟ್ನಲ್ಲಿ ಕಾಣಿಸಿಕೊಂಡರೂ ತಕ್ಷಣ ಬಂಧಿಸುವAತೆ ನೊಟೀಸ್ ಹೊರಡಿಸಿದ್ದಾರೆ.

ಸ್ಥಳೀಯ ನ್ಯಾಯಾಲಯವು ಪಪ್ಪಿ ಪರವಾದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪಪ್ಪಿ ಪರ ವಕೀಲರು ಜಾಮೀಮಿನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲ ಸಮಯ ತಲೆಮರೆಸಿಕೊಂಡರೂ, ಶೀಘ್ರವೇ ತಲೆಮರೆಸಿಕೊಂಡಿರುವ ಪಪ್ಪಿ ಸೇರಿದಂತೆ ಇನ್ನೊಬ್ಬ ಆರೋಪಿಯನ್ನೂ ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.