ಇಲ್ಲಿಗೆ ಸಮೀಪದ ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಜನರನ್ನು ಭಯಭೀತರನ್ನಾಗಿ ಮಾಡಿದ್ದು, ನಿರಂತರ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಇದರಿಂದ ಗ್ರಾಮಸ್ಥರು ಭಯದಲ್ಲಿ ದಿನಗಳನ್ನು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆರೋಪಿಸಿದ್ದಾರೆ.
ನಾಗೇಂದ್ರಗಡ ಗುಡ್ಡವು ಹಲವಾರು ವಿಶಿಷ್ಟತೆಗಳಿಂದ ಕೂಡಿದ್ದು, ವಿಶಾಲವಾದ ನೀರಿನ ಕೆರೆಯನ್ನು ಹೊಂದಿದೆ. ವರ್ಷದ ಸುಮಾರು ೬-೮ ತಿಂಗಳು ಹಚ್ಚ ಹಸಿರಿನಿಂದ ಕೂಡಿಕೊಂಡಿರುವ ಗ್ರಾಮವಾಗಿದ್ದು, ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಅಲ್ಲದೆ ಗ್ರಾಮ ಸಂಪರ್ಕಿಸುವ ಮೊದಲು ಘಾಟ್‌ನಲ್ಲಿ ಸಾಗುವ ಅನುಭವ ಕೂಡ ಆಗುತ್ತದೆ. ಅನೇಕ ಕಡೆಗಳಲ್ಲಿ ಜಲಪಾತದಂತೆ ಬೆಟ್ಟದ ಮೇಲಿಂದ ಬೀಳುವ ನೀರು ಹಸಿರಿನಿಂದ ಕೂಡಿದ ದಟ್ಟ ಅರಣ್ಯ ಇದು ನಾಗೇಂದ್ರಗಡ ಗುಡ್ಡದ ವಿಶೇಷತೆಯಾದರೂ ಸಹ ಇಲ್ಲಿ ನಾಗರಿಕ ಸಮುದಾಯಕ್ಕೆ ಕಂಟಕ ತರುವ ವನ್ಯ ಜೀವಿಗಳಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಇದೇ ಮೊದಲಲ್ಲ
ನಾಗೇಂದ್ರಗಡ ಗುಡ್ಡದಲ್ಲಿ ಚಿರತೆ ಸದ್ದು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಹಲವಾರು ಬಾರಿ ಇಂಥ ಘಟನೆಗಳು ನಡೆದಿವೆ. ಚಿರತೆ ಅಲ್ಲದೆ ಕರಡಿ, ಜಿಂಕೆ, ಕಾಡು ಬೆಕ್ಕು, ಮುಳ್ಳ್ಳು ಹಂದಿ, ಕಾಳಿಂಗ ಸರ್ಪ, ಸೀಳುನಾಯಿ, ತೋಳ, ನರಿಗಳ ಜೊತೆಗೆ ವಿವಿಧ ರೀತಿಯ ಪ್ರಾಣಿಗಳು ಈ ಬೆಟ್ಟದಲ್ಲಿವೆ ಎಂದು ಜನರು ಹೇಳುತ್ತಾರೆ.
ಚಿರತೆ ಹೊರತು ಪಡಿಸಿ ಇಲ್ಲಿಯವರೆಗೆ ಯಾವ ಪ್ರಾಣಿಗಳು ಸುತ್ತ ಮುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದ್ದಿಲ್ಲ. ಚಿರತೆ ಮಾತ್ರ ಆಗಾಗ ಕಾಣಿಸಿಕೊಂಡು ಕರು ಹಾಗೂ ಹಸುಗಳು ಜೀವ ತೆಗೆಯುತ್ತಿದೆ ಎಂದು ಜನರು ಹೇಳುತ್ತಾರೆ.
ನಿರಂತರ ಕಾರ್ಯಚರಣೆ
ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದ್ದರೂ ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ. ಅರಣ್ಯದಲ್ಲಿ ಸಿಸಿ ಕೆಮರಾ ಅಳವಡಿಸಿ ಮತ್ತೊಂದು ಬೋನನ್ನು ಇಡಲಾಗಿದೆ. ಒಟ್ಟಿನಲ್ಲಿ ಚಿರತೆ ಬೋನಿಗೆ ಬಿದ್ದು ಗ್ರಾಮಸ್ಥರ ಆತಂಕ ದೂರವಾಗಲಿ ಎಂಬುದು ಅರಣ್ಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.
ಚಿರತೆ ಬೋನಿನ ಸಮೀಪ ಬಂದು ಹೋಗಿದೆ. ಹೀಗಾಗಿ ಅರಣ್ಯದಲ್ಲಿ ಮತ್ತೊಂದು ಬೋನನ್ನು ಇಡಲಾಗಿದೆ. ಒಂದು ಶಿಫ್ಟ್ ಗೆ 13 ಜನ ಸಿಬ್ಬಂದಿಗಳಂತೆ ದಿನದ 24 ಗಂಟೆ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ದಾಳಿಗೆ ಆಕಳುಗಳು ಜೀವ ತೆತ್ತಿದ್ದು ಪರಿಶೀಲನೆ ನಡೆಸಲಾಗುತ್ತಿದೆ.
ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಕುಂಭದ್ರೋಣ ಮಳೆಗೆ ಗ್ರಾಮಸ್ಥರು ತೊಂದರೆ ಅನುಭವಿಸಿದರು. ಹಲವಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೊಳಗಾದರು. ೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಪ್ರಸಿದ್ಧ ದಿಂಗಾಲೇಶ್ವರ ಮಠದ ಆವರಣ ಹಾಗೂ ಮಠದ ಹತ್ತಿರ ಇರುವ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಹೊಂಡವಾಗಿ ಮಾರ್ಪಟ್ಟಿದೆ.
ಗ್ರಾಮದ ಶೇಖಪ್ಪ ಕಡೆಮನಿ, ಮಹೇಶ ಗುಡಗೇರಿ, ಬಸವಣ್ಣೆಪ್ಪ ಗುಡಗೇರಿ, ಅಣ್ಣಪ್ಪ ಗುಡಗೇರಿ, ರಾಮಪ್ಪ ಗುಡಗೇರಿ, ಅರವಿಂದ ಕಡೆಮನಿ, ಶೇಖಪ್ಪ ನಿಟ್ಟೂರ, ಬಸಪ್ಪ ಕಡೆಮನಿ, ಎಲ್ಲವ್ವ ಕಡೆಮನಿ, ಸುಮಾ ಪಟ್ಟೇದ, ಮುದುಕಪ್ಪ ಪಟ್ಟೇದ, ಶ್ಯಾಮಣ್ಣ ಕಡೆಮನಿ, ಚಿತ್ತಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯ, ಬಟ್ಟೆ ಬರೆ ಹಾಗೂ ಪಾತ್ರೆಗಳು ತೇಲಿ ಹೋಗಿವೆ.
ಗ್ರಾಪಂ ಸದಸ್ಯ ಶ್ಯಾಮಪ್ಪ ಕಡೆಮನಿ ಅವರ ದನದ ಕೊಟ್ಟಿಗೆಗೆ ನೀರು ನುಗ್ಗಿ ಎತ್ತುಗಳ ಮೊಣಕಾಲಿನವರೆಗೆ ನೀರು ನಿಂತು ತೊಂದರೆ ಅನುಭವಿಸಿದವು.
ತೇಲಿ ಹೋದ ಕುರಿಗಳು
ಮಳೆಯ ರಭಸಕ್ಕೆ ರಸ್ತೆ, ಚರಂಡಿ ಮೇಲೆ ನೀರು ಹರಿದು ಕುರಿಗಾಹಿಗಳು ತಮ್ಮ ಕುರಿಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಹಾಂತೇಶ ಈರಗಾರ ಎನ್ನುವವರ ಸುಮಾರು ಕೆಲವು ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎನ್ನಲಾಗಿದೆ.
ಗ್ರಾಮದ ಚರಂಡಿಗಳು ಕಿರಿದಾಗಿರುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಊರೆಲ್ಲ ಹರಿದು ತೊಂದರೆಯಾಗುತ್ತಿದೆ. ಚರಂಡಿಗಳನ್ನು ಎತ್ತರಿಸಿ ಅಗಲೀಕರಿಸುವ ಅಗತ್ಯವಿದೆ. ಮಳೆಯಿಂದ ಸಾವಿರಾರು ಎಕರೆ ಪ್ರದೇಶ ಭೂಮಿ ಜವಳು ಬಿದ್ದಿದ್ದು ರೈತರು ಬೀದಿಗೆ ಬರುವಂತಾಗಿದೆ. ಆದ್ದರಿಂದ ನಷ್ಟ ಅನುಭವಿಸಿದವರಿಗೆ ಶೀಘ್ರ ಪರಿಹಾರ ಘೋಷಿಸಿ ಅನೂಕೂಲ ಮಾಡಿಕೊಡಬೇಕು.
ಅಪ್ರಾಪ್ತೆಯೊಬ್ಬಳಿಗೆ 20 ರೂ. ಆಮಿಷ ತೋರಿಸಿ, ಪಾಳು ಕಟ್ಟಡಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟೂ ೮ ಲಕ್ಷ ರೂ.ಗಳ ದಂಡ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ವಿಶೇಷ ಸರಕಾರಿ ಅಭಿಯೋಜಕ ಅಮರೇಶ್ ಉಮಾಪತಿ ಹಿರೇಮಠ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ಪ್ರಕರಣದ ವಿವರ
ಆರೋಪಿ ಬೆಟಗೇರಿಯ ಹೊಸಪೇಟ ಚಕ್ ಓಣಿಯ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬ ವ್ಯಕ್ತಿಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೆಳತಿಯರೊಂದಿಗೆ ಗಣೇಶ ಮೂರ್ತಿಗಳನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ 12 ವರ್ಷದ ನೊಂದ ಬಾಲಕಿಗೆ 20 ರೂಪಾಯಿ ನೀಡುವದಾಗಿ ಆಮಿಷ ತೋರಿಸಿ, ಪಾಳು ಬಿದ್ದಿದ್ದ ಕಟ್ಟಡವೊಂದದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ.
ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕಲಂ 371(1), 376(ಎ)(ಬಿ) ಐಪಿಸಿ ಕಲಂ 6 ಪೋಕ್ಸೋ ಕಾಯ್ದೆ-2012ರಡಿಯಲ್ಲಿ ಅಪರಾಧವೆಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಪ್ರಕರಣದಲ್ಲಿ ಸಿಪಿಐ ವೆಂಕಟೇಶ ಯಡಹಳ್ಳಿ ಪ್ರಕರಣ ದಾಖಲಿಸಿಕೊಂಡು, 25-10-2019ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥನಿಗೆ 25 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 7 ಲಕ್ಷ ರೂ.ಗಳನ್ನು National Legal Services Authority (NALSA) ನೀಡುವಂತೆ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿಯವರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
ಮಹಾರಾಷ್ಟ್ರದ ಲಾಂಛನ, ಘೋಷಣೆಯಿರುವ ಟಿಕೆಟ್ ವಿತರಣೆಗೆ ಕನ್ನಡ ಸಂಘಟನೆಗಳ ಆಕ್ರೋಶ/ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ಗದಗ
ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ಇಲ್ಲಿ ಕನ್ನಡದ ಹೊರತಾಗಿ ಬೇರಾವ ಭಾಷೆಯೂ ಆಡಳಿತ ಭಾಷೆಯಾಗಬಾರದು. ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ, ಕನ್ನಡದ ಹೊಳಪು ಕಡಿಮೆಯಾಗುತ್ತಿದೆ ಎಂದು ಒಂದೆಡೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇತ್ತೀಚೆಗಷ್ಟೇ ನ್ಯಾಯಾಲಯ ಕೂಡ ಕನ್ನಡ ಭಾಷೆಯ ಪರವಾಗಿ ಮಹತ್ವದ ತೀರ್ಪು ನೀಡಿದ್ದು ಕನ್ನಡಾಭಿಮಾನಿಗಳ ಮೊಗದಲ್ಲಿ ನಗುವರಳಿಸಿತ್ತು.
ಈ ನಡುವೆಯೇ, ಕರ್ನಾಟಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ `ಮಹಾ’ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಕನ್ನಡಪರ ಹೋರಾಟಗಾರರ, ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಛನ, ಘೋಷಣೆಗಳು ಕಂಡು ಬಂದಿರುವುದು ಕನ್ನಡಪರ ಸಂಘಟನೆಗಳ ಕೋಪಕ್ಕೆ ಗ್ರಾಸವಾಗಿ, ಪ್ರತಿಭಟನೆಯವರೆಗೂ ತಲುಪಿರುವ ಘಟನೆ ಬುಧವಾರ ಗದಗನಲ್ಲಿ ನಡೆದಿದೆ.
ನಾಡಹಬ್ಬದ ಸಮಯದಲ್ಲಿಯೇ ಸಾರಿಗೆ ಸಂಸ್ಥೆಯ ಯಡವಟ್ಟಿನಿಂದ ಸರ್ಕಾರ ಮತ್ತೊಂದು ಗೊಂದಲಕ್ಕೆ ಗುರಿಯಾಗಿದೆ.
ಗದಗದಿಂದ ಗ್ರಾಮೀಣ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ನಲ್ಲಿ ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್ ವಿತರಣೆಯಾಗಿದ್ದು, `ಮಹಾರಾಷ್ಟ್ರ ನ್ ಪರಿವಾರನ್, ಜೈ ಮಹಾರಾಷ್ಟ’ ಘೋಷಣೆಗಳೂ ಮುದ್ರಿತವಾಗಿದ್ದವು. ಗದಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಾರಾಷ್ಟ್ರ ಪರವಾದ ಘೋಷಣೆಗಳಿರುವ ಟಿಕೆಟ್ ಹಂಚಿಕೆಯಾಗುತ್ತಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ನಾಡದ್ರೋಹಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಕನ್ನಡ ಭಾಷೆಗೆ ದ್ರೋಹವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಮಜಾಯಿಷಿ ನಿಡಿದ ಕೆಎಸ್‌ಆರ್‌ಟಿಸಿ ಡಿಸಿ ಜಿ. ಶೇನಯ್ಯಾ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಟಿಕೆಟ್ ಮುದ್ರಿಸುವ ರೋಲ್‌ಗಳು ವಿಶಾಖಪಟ್ಟಣದಿಂದ ಸರಬರಾಜಾಗುತ್ತವೆ.
ಈ ಸಂದರ್ಭದಲ್ಲಿ ರೋಲ್ ವಿತರಿಸುವವರು ಪ್ರಮಾದವೆಸಗಿದ್ದು, ಮಹಾರಾಷ್ಟ್ರಕ್ಕೆ ಸರಬರಾಜಾಗಬೇಕಿದ್ದ ಮಹಾರಾಷ್ಟ್ರ ಲಾಂಛನವಿರುವ ಒಂದು ಬಾಕ್ಸ್ ಮಾತ್ರ ಗದಗಕ್ಕೆ ವಿತರಣೆಯಾಗಿತ್ತು. ಗದಗ ಡಿಪೋದಲ್ಲಿ ಕ್ಲರ್ಕ್ ಗಳು ಸರಿಯಾಗಿ ಪರಿಶೀಲಿಸಿ ರೋಲ್‌ಗಳನ್ನು ಕೊಡಬೇಕಿತ್ತು. ಆದರೆ, ಅವರು ಈಬಗ್ಗೆ ಪರಾಮರ್ಶಿಸದೇ ಹಾಗೆಯೇ ಕಂಡಕ್ಟರ್‌ಗಳಿಗೆ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಟಿಕೆಟ್ ರೋಲ್‌ಗಳನ್ನು ಸರಬರಾಜು ಮಾಡಿದ ವ್ಯಕ್ತಿ, ಕ್ಲರ್ಕ್ ಗಳು ಹಾಗೂ ಕಂಡಕ್ಟರ್‌ಗಳೂ ತಪ್ಪು ಮಾಡಿದ್ದಾರೆ.
ಒಂದು ಬಾಕ್ಸ್ ನಲ್ಲಿ ೨೦೦ ರೋಲ್‌ಗಳು ಬಂದಿರುತ್ತವೆ. ಅವುಗಳಲ್ಲಿ ೭೦ ರೋಲ್‌ಗಳನ್ನು ಕಂಡಕ್ಟರ್‌ಗಳಿಗೆ ನೀಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕಂಡಕ್ಟರ್ ಕಡೆಯಿಂದ ಟಿಕೆಟ್ ರೋಲ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ತಪ್ಪು ಮಾಡಿದ ಕ್ಲರ್ಕ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಘಟನೆ ಗದಗದಲ್ಲಿ ನಡೆದಿದೆ. ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಮುದ್ರಣವಾಗಿರುವ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು, ನಿರ್ವಾಹಕರು ಕಣ್ಮುಚ್ಚಿಕೊಂಡೇ ಟಿಕೆಟ್ ನೀಡಿದರಾ? ಕನ್ನಡಿಗರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಟಿಕೆಟ್ ರೋಲ್‌ಗಳು ಗದಗ ತಲುಪಿದವಾ? ಯಾವ ಕಾರಣಕ್ಕಾಗಿ ಇಲ್ಲಿಗೆ ತಲುಪಿ ವಿತರಣೆಯಾದವು? ಟಿಕೆಟ್ ರೋಲ್ ಖರೀದಿ ಮಾಡಲು ಸರ್ಕಾರ, ಸಾರಿಗೆ ಸಂಸ್ಥೆಯ ಬಳಿ ಹಣವಿಲ್ಲವೆಂದರೆ ಹೇಳಿ. ಕನ್ನಡಿಗರು ವಿಶಾಲ ಹೃದಯದವರಿದ್ದೇವೆ. ನಾವೇ ವಂತಿಗೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತೇವೆ. ಆ ಹಣದಲ್ಲಿಯೇ `ಜೈ ಕರ್ನಾಟಕ’ ಎಂದು ಮುದ್ರಿಸಿರುವ ಟಿಕೆಟ್ ಹಂಚಿ. ಮುಖ್ಯಮಂತ್ರಿಗಳು, ಸಾರಿಗೆ ಸಚಿವರೆಲ್ಲ ಎಲ್ಲಿದ್ದೀರಿ? ತಕ್ಷಣ ಇಂಥ ಅಪರಾಧವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ. ಇಲ್ಲವಾದರೆ ರಾಜೀನಾಮೆ ನೀಡಿ ಹೊರಬನ್ನಿ
ಚಂದ್ರಕಾಂತ ಚವ್ಹಾಣ. ಜಯ ಕರ್ನಾಟಕ ಸಂಘಟನೆ ಮುಖಂಡ
ಇವತ್ತು ನಾಡಹಬ್ಬ ದಸರಾ. ಈ ಸಂದರ್ಭದಲ್ಲಿ ಗದಗ ಸಾರಿಗೆ ಡಿಪೋದಿಂದ ಸಂಚರಿಸುವ ಬಸ್‌ಗಳಲ್ಲಿ `ಜೈ ಮಹಾರಾಷ್ಟ್ರ ಎಂಬ ಘೋಷಣೆ, ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್‌ಗಳನ್ನು ನೀಡಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಈ ಘಟನೆಯನ್ನು ಎಲ್ಲ ಕನ್ನಡಪರ ಸಂಘಟನೆಗಳು ಖಂಡಿಸುತ್ತವೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಈ ಕನ್ನಡ ದ್ರೋಹವನ್ನು ಗಮನಿಸಿ ಅಂಥಹ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ನಾಳೆ ಬೆಳಿಗ್ಗೆಯೊಳಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಸ್ ನಿಲ್ದಾಣದದ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕನ್ನಡಕ್ಕಾಗಿ ನಾವು ಕನ್ನಡಿಗರು, ಸಂಘಟನೆಗಳು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ.
ಚೇತನ್ ತಂದೆ ಪರಶುರಾಮ ಹುಳಕಣ್ಣವರ್, ರೋಹನ್ ಕುಮಾರ ತಂದೆ ಯಲ್ಲನಗೌಡ ಲಿಗಾಡಿ, ಕುಮಾರ್ ತಂದೆ ಯಲ್ಲಪ್ಪ ಮಾರನಬಸರಿ ಹಾಗೂ ಶ್ರೀನಿವಾಸ್ ತುಳಚಪ್ಪ ಸಿಂಧೆ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂದಿತರಿಂದ ಎರಡು ಚಾಕು, ಬೈಕ್ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಬಂಧಿತರೆಲ್ಲರೂ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿಗಳು. ಬಂಧಿತ ಆರೋಪಿ ಚೇತನ್ ಎಂಬಾತನ ಸಹೋದರ, ಆಟೋ ಚಾಲಕ ರಮೇಶ್ ಎಂಬಾತನನ್ನು 2020ರ ಡಿಸೆಂಬರ್ ತಿಂಗಳಲ್ಲಿ ವಾಸೀಂ ಬೇಪಾರಿ ಹಾಗೂ ಶೋಭಾ ಅಲಿಯಾಸ್ ಮೀನಾಜ್ ಬೇಪಾರಿ ಸೇರಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.
ಸಹೋದರ ರಮೇಶ್ ನ ಕೊಲೆಗೆ ದ್ವೇಷ ಸಾಧಿಸುತ್ತಿದ್ದ ಚೇತನ್, ರೋಹನ್ ಕುಮಾರ್, ಕುಮಾರ್ ಮಾರನಬಸರಿ ಹಾಗೂ ಶ್ರೀನಿವಾಸ ಸಿಂಧೆ ಸೇರಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ವಿಡಿಯೋ ವೈರಲ್
ಹೊಸ ಬಸ್ ನಿಲ್ದಾಣದ ಕಡೆ ಆಟೋದಲ್ಲಿ ಹೊರಟಿದ್ದ ಶೋಭಾ ಅಲಿಯಾಸ್ ಮೀನಾಜ್, ಬೇಕರಿಯಲ್ಲಿ ತಿಂಡಿ- ತಿನಿಸು ತರಲು ಆಟೋ ಇಳಿಯುತ್ತಿದ್ದಂತೆಯೇ ಅಟ್ಯಾಕ್ ಮಾಡಿದ ಹಂತಕರು, ಮುಖಕ್ಕೆ ಕೆಂಪು ಟವಲ್ ಹಾಕಿ ಹಲ್ಲೆ ಮಾಡಿ ಕಳಗೆ ಕೆಡವಿದ್ದಾರೆ. ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಬೈಕ್ ನಿಂದ ಚಾಕು ತಂದು ಕೊಡವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ, ಮೊಬೈಲ್ ನಲ್ಲಿ ಸೆರೆಯಾಗಿದ್ದು, ಆ ವಿಡಿಯೋಗಳು ಈಗ ವೈರಲ್ ಆಗಿವೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯವು ಸುವರ್ಣ ಕಂಬಿ ಅವರು ಸಲ್ಲಿಸಿದ್ದ ‘ಕವರೇಜ್ ಆಫ್ ದಲಿತ್ ಇಶ್ಯೂಸ್ ಇನ್ ಕನ್ನಡ ಆಂಡ್ ಇಂಗ್ಲೀಷ್ ನ್ಯೂಸ್ ಪೇಪರ್ಸ್’ ಕುರಿತಾದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಗದಗ ಜಿಲ್ಲೆಯ ಹುಲಕೋಟಿ ನಿವಾಸಿಯಾಗಿರುವ ಸುವರ್ಣ ಕಂಬಿಯವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಓಂಕಾರಗೌಡ ಕಾಕಡೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.
ಡಾಕ್ಟರೇಟ್ ಪದವಿ ಪಡೆದಿರುವ ಸುವರ್ಣ ಕಂಬಿಯವರನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಪ್ರೊ. ಬಿ.ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್.ಕೆ. ಅಭಿನಂದಿಸಿದ್ದಾರೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ‘ಸ್ವಚ್ಛ ಭಾರತ ಮಿಷನ್’ ಯೋಜನೆಯ ೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅ. ೨ರ ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು ಸ್ವಚ್ಛ ಭಾರತ್ ದಿವಸ್ ಕಾರ್ಯಕ್ರಮವು ಘನತೆವೆತ್ತ ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ೨ ಪ್ರಶಸ್ತಿಗಳನ್ನು ಪಡೆಯುವುದರ ಮೂಲಕ ರಾಜ್ಯದ ಘನತೆ ಹೆಚ್ಚಿಸಿದ್ದಾರೆ. ಸುಜಲಾಂ ೨.೦ ಹಾಗೂ ಸ್ವಚ್ಛ ಸರ್ವೇಕ್ಷಣೆ ಯೋಜನೆಯಡಿ ಸಮರ್ಪಕ ಕಾರ್ಯನಿರ್ವಹಣೆಗಾಗಿ ರಾಷ್ಟ್ರಮಟ್ಟದಲ್ಲಿ ಈ ಪ್ರಶಸ್ತಿ ಲಭಿಸಿದ್ದು, ತನ್ಮೂಲಕ ರಾಜ್ಯವು ಪ್ರಥಮ ಸ್ಥಾನ ಪಡೆದಿಕೊಂಡಿದೆ. ಇನ್ನು ಪ್ಲಾಸ್ಟಿಕ್ ಮುಕ್ತ, ಸಾಲಿಡ್ ವಾಟರ್ ಮ್ಯಾನೇಜ್ಮೆಂಟ್ ಹಾಗೂ ಗ್ರೇ ವಾಟರ್ ಮ್ಯಾನೇಜ್ಮೆಂಟ್‌ನಲ್ಲಿಯೂ ಉತ್ತಮ ಕಾರ್ಯನಿರ್ವಹಣೆಗೆ ಪ್ರತ್ಯೇಕ ಪ್ರಶಸ್ತಿ ಲಭಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ, ದ್ರವತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ಬಳಕೆ, ಸುಜಲಾಂ ೨.೦ ಅಡಿಯಲ್ಲಿ ಇಂಗುಗುಂಡಿಗಳ ನಮೂದು ಮುಂತಾದ ಚಟುವಟಿಕೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಪರಿಗಣಿಸಿ ನವದೆಹಲಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್‌ರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ರಿಗೆ ಪ್ರಶಸ್ತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರರು ಇದ್ದರು. ಪ್ರಶಸ್ತಿಗೆ ಭಾಜನರಾದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಗದಗ ಜಿಲ್ಲೆಯ ಎಲ್ಲ ಅಧಿಕಾರಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಥಮ ಸ್ಥಾನ ತಂದುಕೊಡುವಲ್ಲಿ ಜಿಲ್ಲಾಧಿಕಾರಿ ಪ್ರಮುಖ ಪಾತ್ರ
ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ಘನತೆವೆತ್ತ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಸುಜಲಾಂ ೨.೦ ಹಾಗೂ ಸ್ವಚ್ಛ ಸರ್ವೇಕ್ಷಣಾ ಸಮರ್ಪಕ ನಿರ್ವಹಣೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಡುವಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಮುಖ ಪಾತ್ರ ವಹಿಸಿ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಇದರೊಂದಿಗೆ ಗದಗ ಜಿಲ್ಲೆಯ ಕೀರ್ತಿಯನ್ನೂ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿಯೂ ಉತ್ತಮ ಆಡಳಿತ ಸಿಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.
ಮಟ ಮಟ ಮಧ್ಯಾಹ್ನ ಬೇಕರಿಗೆ ತಿನಿಸು ಖರೀದಿಸಲು ಬಂದಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಗದಗನ ಮುಳಗುಂದನಾಕಾದ ಬಳಿಯ ಬೇಕರಿಯೊಂದರ ಮುಂದೆ ಈ ಘಟನೆ ಜರುಗಿದ್ದು,
ಸಿಂಗಟರಾಯನಕೇರಿ ತಾಂಡಾದ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಕೊಲೆಗೀಡಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕರು ಚಾಕುವಿನಿಂದ ಕತ್ತು ಸೀಳುವಂತೆ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಸುದ್ದಿ ತಿಳಿದು ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ, ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಜಿ. ಟಿ ಜಕ್ಕಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಯ ಸುದ್ದಿ ತಿಳಿದು ಸಾರ್ವಜನಿಕರು ಶವ ನೋಡಲು ಮುಗಿಬಿದ್ದಿದ್ದರು.
ಹಳೆಯ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದ್ದು, 2020ರ ಡಿಸೆಂಬರ್ ತಿಂಗಳಲ್ಲಿ ಆಟೋ ಚಾಲಕ ರಮೇಶ್ ಎಂಬಾತನ ಕೊಲೆ ಆಗಿತ್ತು. ಆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆ ಆರೋಪಿ ಆಗಿದ್ದಳು ಎಂದು ಅವರು ತಿಳಿಸಿದ್ದಾರೆ.
ಇಬ್ಬರೂ ವ್ಯಕ್ತಿಗಳು ಈ ಕೊಲೆ ಮಾಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಪರಿಣಾಮವಾಗಿ ಮಗು ಸಮೇತ ದಂಪತಿ ಮೃತಪಟ್ಟ ದುರ್ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.
ಪರಮೇಶ್ (43), ಜಯಮ್ಮ(38) ಐದು ವರ್ಷದ ಮಗು ಭರತ್ ಮೃತಪಟ್ಟ ದುರ್ಧೈವಿಗಳು ಎಂದು ಹೇಳಲಾಗಿದೆ.
ಎಂದಿನಂತೆ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಗೋಡೆ ಕುಸಿದಿದೆ. ದಂಪತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮಗು ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನಿಗಿದೆ.
ಮೃತರ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದ್ದು, ಸುದ್ದಿ ತಿಳಿದ ಮಾನ್ವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರೊಗ್ಯವಂತ ನಾಗರಿಕರು ರಕ್ತದಾನ ಮಾಡುವದರಿಂದ ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡು ಆಪತ್ತಿನಲ್ಲಿರುವ ವ್ಯಕ್ತಿಗಳ ಜೀವ ಉಳಿಸಲಿಕ್ಕೆ ಅನಕೂಲವಾಗಲಿದೆ ಎಂದು ಚಿಕ್ಕನರಗುಂದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಭಿಪ್ರಾಯಪಟ್ಟರು.
ಅವರು ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಸ್ಪತ್ರೆ ಗದಗ, ಜಿಲ್ಲಾ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಆರ್ ಸಿ ಕೊರವನವರ ಮಾತನಾಡಿ, ರಕ್ತದಾನ ಮಾಡಿದ ನಂತರ ಅದನ್ನು ವಿಂಗಡಿಸಿ ಅವಶ್ಯಕತೆ ಇರುವ ರೋಗಿಗಳಿಗೆ ನೀಡಲಾಗುವದು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವದಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿ, ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚಿಕ್ಕನರಗುಂದ ಹಾಗೂ ಬೆನಕನಕೊಪ್ಪ ಗ್ರಾಮದ 41ಜನ ಯುವಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಆಸ್ಪತ್ರೆಯ ಸಿಬ್ಬಂದಿಗಳಾದ ರವಿ, ಬೆತಾಪಲ್ಲಿ, ಶರಾವತಿ, ಸತ್ಯಮ್ಮನವರ, ರೇಶ್ಮಾ, ಪೂಜಾ, ನೇತ್ರಾವತಿ, ಲಕ್ಷ್ಮಿ, ಬಸಮ್ಮ, ಆಶಾ ಕಾರ್ಯಕರ್ತೆಯರು, ರಕ್ತ ನಿಧಿ ಸಿಬ್ಬಂದಿ, ಚಿಕ್ಕನರಗುಂದ, ಬೆನಕನಕೊಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ವಂದನಾರ್ಪಣೆಗೈದರು.