Home Blog Page 3322

ಭಾರಿ ಮಳೆ ಹಿನ್ನೆಲೆ; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಸತತವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ ಗದಗ ನಗರದಲ್ಲಿ ಭಾರಿ ಮನೆ ಕಳ್ಳತನ; 6.91 ಲಕ್ಷ ರೂ. ನಗದು, 9.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದ್ದು, ತಿಮ್ಮಣ್ಣ ಅಲಿಯಾಸ್ ಅಪ್ಪಣ್ಣ ತಂದೆ ಧರ್ಮಣ್ಣ ಕಳ್ಳಿಮನಿ (50) ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಸತತವಾಗಿ ಸುರಿದಿದ್ದ ಮಳೆಗೆ ಮನೆ ಗೋಡೆ ಸಂಪೂರ್ಣವಾಗಿ ನೆನದಿತ್ತು ಎನ್ನಲಾಗಿದೆ. ಹೀಗಾಗಿ ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಏಕಾಏಕಿ ಗೋಡೆ ಕುಸಿದು ಮೈಮೇಲೆ ಬಿದ್ದು ಪರಿಣಾಮ ತಿಪ್ಪಣ್ಣ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿದು ತಹಸೀಲ್ದಾರ್ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ಎಮ್ ಎ ನದಾಫ್, ಗ್ರಾಮ ಲೆಕ್ಕಾಧಿಕಾರಿ ಎಸ್. ಎಸ್. ಪಟ್ಟೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಗದಗ ನಗರದಲ್ಲಿ ಭಾರಿ ಮನೆ ಕಳ್ಳತನ; 6.91 ಲಕ್ಷ ರೂ. ನಗದು, 9.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಅಪ್‌ಸ್ಟೇರ ಹತ್ತಿ, ಬಾಗಿಲಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ಒಳಸೇರಿ, ಕಬ್ಬಿಣದ ಡ್ರಾವರನ್ನು ಮೀಟಿ ತೆಗೆದು, ಒಳಗಿದ್ದ ಲಕ್ಷಾಂತರ ರೂ. ಹಣವನ್ನು ಹಾಗೂ ಟ್ರೆಝರಿಯಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಬಂಗಾರ ಹಾಗೂ ಬೆಳ್ಳಿಯ ಆಭರಣ, ವಸ್ತುಗಳ ಕಳ್ಳತನವಾಗಿರುವುದಾಗಿ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಆದರ್ಶ ನಗರದ ದೇವರಾಜ ಹಾಸ್ಟೆಲ್ ಸಮೀಪವಿರುವ ಸಮೃದ್ಧಿ ನಿಲಯದ ನಿವಾಸಿ ಈರಪ್ಪ ಸೋಮಪ್ಪ ಪೂಜಾರ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದು, ಯಾರೋ ಕಳ್ಳರು ಅ.1ರ ಮುಂಜಾನೆ 9 ಗಂಟೆಯಿಂದ ಅ.2ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.

ಮನೆಯ ಅಪ್‌ಸ್ಟೇರನ್ನು ಹತ್ತಿ, ಡುಪ್ಲೇಕ್ಸ್ ಮನೆಯ ಸಿಲ್ವರ್ ಡೋರಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಕಟ್ಟಿಗೆಯ ಬಾಗಿಲಿನ ಒಳಚಿಲಕವನ್ನೂ ಮೀಟಿ, ಒಳಗೆ ಹೋಗಿ, ಬೆಡ್‌ರೂಮಿನ ಕಬ್ಬಿಣದ ಡ್ರಾವನ್ನು ಮೀಟಿ ಮುರಿದು, ಅದರಲ್ಲಿದ್ದ 6,91 ಲಕ್ಷ ರೂ. ನಗದನ್ನು ಕಳ್ಳತನ ಮಾಡಿದ್ದಾರೆ.

ಅಲ್ಲದೇ ಕೆಳಮನೆಯ ಬೆಡ್‌ರೂಮಿನಲ್ಲಿದ್ದ ಕಬ್ಬಿಣದ ಟ್ರೆಝರಿಯ ಬೀಗವನ್ನು ಮೀಟಿ ಮುರಿದು, ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ, ಒಳಗಿದ್ದ 1.75 ಲಕ್ಷ ರೂ. ಕಿಮ್ಮತ್ತಿನ ಒಟ್ಟೂ 67 ಗ್ರಾಂ. ತೂಕದ ಬಂಗಾರದ ಆಭರಣಗಳು, 7.50 ಲಕ್ಷ ರೂ. ಬೆಲೆಬಾಳುವ ಬೆಳ್ಳಿ ಸಾಮಾಗ್ರಿಗಳು, ಸಿಸಿಟಿವಿ ಕ್ಯಾಮೆರಾದ ೨೦ ಸಾವಿರ ರೂ. ಬೆಲೆಬಾಳುವ ಡಿವಿಆರ್ ಸಹಿತವಾಗಿ ಒಟ್ಟೂ 9.45 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನರು

0

ಅರಣ್ಯ ಇಲಾಖೆಯ ನಿರಂತರ ಕಾರ್ಯಚರಣೆ ಯಶಸ್ವಿ

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹಲವಾರು ತಿಂಗಳಿಂದ ಜನರನ್ನು, ಅದರಲ್ಲೂ ರೈತ ಸಮುದಾಯಕ್ಕೆ ಕಂಟಕವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಸೇರಿದಂತೆ ಅಕ್ಕಪಕ್ಕ ಗುಡ್ಡದಲ್ಲಿ ‌ಚಿರತೆಯ ಉಪಟಳ ಹೆಚ್ಚಾಗಿತ್ತು. ರೈತರು ತಮ್ಮ ಜಮೀನಿನಲ್ಲಿ ಜಾನುವಾರು ಬಿಡಲು ಹೆದರುತ್ತಿದ್ದರು.

ಕಳೆದ ಸೆಪ್ಟೆಂಬರ್ 30 ರಂದು ಎರಡು ಹಸುಗಳನ್ನು ಚಿರತೆ ಬಲಿ ಪಡೆದಿತ್ತು. ಇದರಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಇಲಾಖೆಯ ಇದನ್ನು ಗಂಭೀರವಾಗಿ ಪರಿಗಣಿಸಿ ಬೋನ್ ಇಟ್ಟು ನಿರಂತರವಾಗಿ ಕಾರ್ಯಚರಣೆ ನಡೆಸಿದ್ದರು.

ಸೋಮವಾರ ಬೆಳಗಿನ ಜಾವ ನಾಗೇಂದ್ರಗಡ ಪಕ್ಕದ ಮಾಲಗತ್ತಿ ಗ್ರಾಮದ ಗುಡ್ಡದಲ್ಲಿ ಬೋನ್ ನಲ್ಲಿ ಚಿರತೆ ಕಂಡು ಬಂದಿದ್ದು, ರೈತರ ಹರ್ಷಕ್ಕೆ ಪಾರವೇ ಇಲ್ಲ.

ಅರಣ್ಯ ಇಲಾಖೆಯ ವಲಯ ಅಧಿಕಾರಿ ಮಂಜುನಾಥ್ ಮೇಗಲಮನಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಇದ್ದರು.

ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಕುರಿಗಾಯಿ ಸಾವು

ಶೀಗೆ ಹುಣ್ಣಿಮೆ ಆಚರಣೆಯ ದಿನ ಅವಘಡ

ವಿಜಯಸಾಕ್ಷಿ ಸುದ್ದಿ, ನರಗುಂದ

ಕೃಷಿ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದ ಕುರಿಗಾಯಿ ಯುವಕನೊಬ್ಬ ಅದರಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನರಗುಂದ ತಾಲೂಕಿನಲ್ಲಿ ನಡೆದಿದೆ.

ನರಗುಂದ ಪಟ್ಟಣದ ಕಸಬಾ ಓಣಿಯ ಕಾಶಪ್ಪ ಅಲಿಯಾಸ್ ಕಾಶಿಲಿಂಗ (20) ಎಂಬಾತನೇ ಮೃತಪಟ್ಟ ದುರ್ಧೈವಿ.

ಹುಣ್ಣಿಮೆಯ ದಿನ ಕುರಿಗಳಿಗೆ ಪೂಜೆ ಸಲ್ಲಿಸುವ ಸಲುವಾಗಿ ಸ್ನಾನ ಮಾಡಲು ಕೃಷಿ ಹೊಂಡದಲ್ಲಿ ಇಳಿದಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಬಹು ಹೊತ್ತಿನವರೆಗೂ ಶವ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಕೃಷಿ ಹೊಂಡದಲ್ಲಿ ನೀರು ಹೆಚ್ಚು ಇರುವುದರಿಂದ ಶವ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳದ ಸಹಾಯದಿಂದ ಕೃಷಿ ಹೊಂಡದಲ್ಲಿ ಇದ್ದ ಸ್ವಲ್ಪ ಪ್ರಮಾಣದ ನೀರು ಹೊರ ಹಾಕಲಾಯಿತು. ನಂತರ ಶವ ಪತ್ತೆಯಾಯಿತು.

ಶವ ಹೊರಗಡೆ ತರುತ್ತಿದ್ದಂತೆಯೇ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿತ್ತು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಪೊಲೀಸರ ಭರ್ಜರಿ ಕಾರ್ಯಾಚರಣೆ; ನಾಲ್ವರು ದರೋಡೆಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಆರು ತಿಂಗಳ ಹಿಂದೆ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನಾಲ್ವರು ಖದೀಮರನ್ನು ಕೊನೆಗೂ ಬಂಧಿಸುವಲ್ಲಿ ನಿಪ್ಪಾಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ ಕಾಂಬಳೆ, ಅವಧೂತ ಕೋಳಿ, ಅಕ್ಷಯ ಕೊಂಡಿಗೇರಿ ಹಾಗೂ ಪಂಕಜ ಕೋಳಿ ಬಂಧಿತರು.

ಬಂಧಿತರಿಂದ 5ಲಕ್ಷ 40ಸಾವಿರ ಮೌಲ್ಯದ ಚಿನ್ನಾಭರಣ, 2.5ಕ.ಜಿ ಬೆಳ್ಳಿಯ ಆಭರಣಗಳು, ಎರಡು ಬೈಕ್ ಹಾಗೂ ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಏಪ್ರಿಲ್‌ 8 ರಂದು ಚಿನ್ನದ ವ್ಯಾಪಾರಿ ದೊಂಡಿರಾಮ್ ಎಂಬುವರನ್ನು ಈ ನಾಲ್ವರು ಖದೀಮರು ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮದಲ್ಲಿ ದರೋಡೆ ಮಾಡಿದ್ದರು.

ಡಿವೈಎಸ್ಪಿ ಬಸವರಾಜ್ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ನಾಲ್ವರು ಖದೀಮರನ್ನು ಬಂಧಿಸಲಾಗಿದೆ. ಈ ಕಾರ್ಯಕ್ಕೆ ಎಸ್ಪಿ ಸಂಜೀವ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶ್ರೀರಾಮುಲು ಮಾತು ಕೊಟ್ರೆ, ಶ್ರೀ ರಾಮ ಮಾತು ಕೊಟ್ಟಂತೆ!

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಘೋಷಣೆ ಹಿನ್ನೆಲೆ

ವಿಜಯಸಾಕ್ಷಿ ಸುದ್ದಿ, ಗದಗ

ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಎಸ್ ಟಿ ಮೋರ್ಚಾದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ ಸ್ ಯಡಿಯೂರಪ್ಪ, ಸಚಿವ ಸಿ ಸಿ ಪಾಟೀಲ್, ಬಿ ಶ್ರೀರಾಮುಲು, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ವಿ ಸಂಕನೂರ ಅವರ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಎಸ್‌ಸಿಗೆ ಶೇ.15 ರಿಂದ 17 ಹಾಗೂ ಎಸ್‌ಟಿಗೆ 3 ರಿಂದ 7 ಮೀಸಲಾತಿ ಹೆಚ್ಚಳಕ್ಕೆ ಕುರಿತಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ಅಂಗೀಕಾರಗೊಳಿಸಿದ ಕ್ರಮವನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಖುಷಿ ಪಟ್ಟರು.

ಇದೇ ವೇಳೆ ಎಸ್ಟಿ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಶಾಂತ್ ನಾಯ್ಕರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಶ್ರೀರಾಮುಲು ಅವರು ಕೊಟ್ಟ ಮಾತಿನಂತೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಅದರಲ್ಲಿ ಎಸ್ಸಿ, ಎಸ್ಟಿ ಸಮಯದಾಯಕ್ಕೆ ಸಚಿವ ಶ್ರೀರಾಮುಲು ಕೊಟ್ಟ ಮಾತಿನಂತೆ ಮೀಸಲಾತಿ ಕೊಡಿಸಿದ್ದಾರೆ. ಶ್ರೀರಾಮುಲು ಮಾತು ಕೊಟ್ರೆ ಅದು ಶ್ರೀರಾಮ ಮಾತು ಕೊಟ್ಟಂತೆ ಎಂದರು.

ಮೀಸಲಾತಿಯಿಂದ SC/ST ಸಮುದಾಯಕ್ಕೆ ಒಳ್ಳೆಯದಾಗಲಿದೆ. ಈ ಎರಡು ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಹಿಂದುಳಿದ ಸಮಾಜದವರಿಗೆ ಶೈಕ್ಷಣಿಕ, ಆರ್ಥಿಕವಾಗಿ ಅನೂಕೂಲವಾಗಲಿದೆ ಎಂದರು.

ಬಳಿಕ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಈಶಪ್ಪ ರಂಗಪ್ಪನವರ ಮಾತನಾಡಿ, ಹಲವಾರು ವರ್ಷಗಳ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಅದರಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕಳೆದ 240 ದಿನಗಳಿಂದ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸರ್ಕಾರ ಕೊನೆಗೂ ಮಣಿದು, ಸರ್ಕಾರ ಈ ಎರಡು ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ಸಂತಸಪಟ್ಟರು.

ವಿಜಯೋತ್ಸವದಲ್ಲಿ ವೆಂಕಟೇಶ ಹಬೀಬ, ಗೊಪಾಲ ಗಡ್ಡದವರ, ಸಿದ್ರಾಮೇಶ ಹಿರೇಮಠ, ಅನಿಲ ಅಬ್ಬಿಗೇರಿ, ನವೀನ ಕುರ್ತಕೋಟಿ, ವಿನಾಯಕ ಮಾನ್ವಿ, ಮಾಧುಸಾ ಮೇರವಾಡೆ, ವಿಜಯಲಕ್ಷ್ಮಿ ಮಾನ್ವಿ, ನಿರ್ಮಲಾ ಕೊಳ್ಳಿ, ಜಯಶ್ರೀ ಅಣ್ಣಿಗೇರಿ, ಕಮಲಾ ಶೆಟ್ಟರ, ಶಿವಲೀಲಾ ಉಮಚಗಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಂಗ್ರೆಸ್ ಮುಖಂಡ ಸಂಗಮೇಶ ಕೊಳ್ಳಿ ಅವರ ಕಛೇರಿ ಆವರಣದಲ್ಲಿ ಮತ್ತೆ ನಾಗರಹಾವು ಪ್ರತ್ಯಕ್ಷ

0

ಮತ್ತೆ ನಾಗರಹಾವನ್ನು ಅಟಕಾಯಿಸಿದ ಶ್ವಾನಪಡೆ!

ವಿಜಯಸಾಕ್ಷಿ ಸುದ್ದಿ, ನರಗುಂದ


ಡಾ. ಸಂಗಮೇಶ ಕೊಳ್ಳಿಯವರ ಕಾಂಗ್ರೆಸ್ ಕಛೇರಿಯ ಆವರಣದಲ್ಲಿ ಮತ್ತೊಮ್ಮೆ ಭಾರೀ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಕಾಂಪೌಂಡಿನಲ್ಲಿದ್ದ ನಾಯಿಗಳ ಗುಂಪು ನಾಗರ ಹಾವಿನ ಬೆನ್ನಟ್ಟಿತ್ತು.

ಎಷ್ಟೇ ಕೂಗಿ ಪಕ್ಕಕ್ಕೆ ಕರೆದರೂ, ಆವೇಶದಿಂದ ಹಾವಿನ ಬೆನ್ನು ಬಿದ್ದಿದ್ದವು. ಪಾಪ, ಆ ನಾಗರಹಾವಂತೂ ಕಂಗಾಲಾಗಿ, ತಪ್ಪಿಸಿಕೊಳ್ಳಲು ದಿಕ್ಕು ತೋಚದೇ, ಇಡೀ ಆವರಣವನ್ನು ಸುತ್ತುಹಾಕುತ್ತಲೇ ಇತ್ತು.

ಕೆಲಕಾಲ ಇವೆಲ್ಲ ವಿದ್ಯಮಾನವನ್ನು ಗಮನಿಸಿದ ಸ್ಥಳೀಯರು, ಹಾವಿಗೆ ನಾಯಿಗಳ ಗುಂಪಿನಿಂದ ಆಗಬಹುದಾದ ಅಪಾಯವನ್ನು ಮನಗಂಡು, ಉರಗ ತಜ್ಞ ಸ್ನೇಕ್ ಬುಡ್ಡಾರನ್ನು ಸ್ಥಳಕ್ಕೆ ಕರೆಯಿಸಿದರು.

ಸ್ನೇಕ್ ಬುಡ್ಡಾ ಹಾವನ್ನು ಸುರಕ್ಷಿತವಾಗಿ ಹಿಡಿದು, ಕಾಡಿನಲ್ಲಿ ಬಿಟ್ಟುಬಂದಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಮಧ್ಯರಾತ್ರಿಯ ಸಮಯದಲ್ಲಿ ಇದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವನ್ನು ನಾಯಿಗಳು ರೋಷದಿಂದ ಸುತ್ತುವರೆದಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು.

ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್ ನಲ್ಲಿ‌ ಬಗೆಹರಿಸುವ ಜಾಹೀರಾತು ನೋಡಿ ಹಣ ಕಳೆದುಕೊಂಡ ಮಹಿಳೆ; ವಂಚಕನ ಬಂಧನ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿದ್ದ ಜಾಹೀರಾತನ್ನು ನೋಡಿದ ಮಹಿಳೆಯೊಬ್ಬಳು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ.

ಕೌಟುಂಬಿಕ ಸಮಸ್ಯೆ ಇದ್ದಂತಹ ಮಹಿಳೆ ಜಾಹೀರಾತಿನಲ್ಲಿದ್ದ ಫೋನ್ ನಂಬರ್ ಗಳಿಗೆ ಕರೆ ಮಾಡಿ ಸಮಸ್ಯೆ ಸರಿ ಮಾಡಿಕೊಡಿ ಎಂದು ಕೇಳಿಕೊಂಡಿದ್ದಳು.

ಆಗ ವಂಚಕ ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ ರೂ. 7,000.00 ಹಣ ಖರ್ಚಾಗುತ್ತೆ ಎಂದು ಹೇಳಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಪುನಃ ಬೇರೆ ಬೇರೆ ಪೂಜೆ ಮಾಡಬೇಕು ಸಮಸ್ಯೆ ಸರಿ ಆಗುತ್ತೆ ಎಂದು ಹಂತ ಹಂತವಾಗಿ ಒಟ್ಟು ರೂ. 1,16,001.00 ಹಣ ವರ್ಗಾವಣೆ ಮಾಡಿಸಿಕೊಂಡಿದ್ದ.

ಇಷ್ಟಾದರೂ ವಂಚಕ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಹಣ ಕಳುಹಿಸಿ ಎಂದು ಹೇಳಿದಾಗ ಮಹಿಳೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಪ್ರಕರಣ ದಾಖಲು ಮಾಡಿಕೊಂಡ ಸಿಇಎನ್ ಠಾಣೆಯ ಪೊಲೀಸರು, ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದೆಂದು ನಂಬಿಸಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು, ಆತನಿಂದ ರೂ. 87,500.00 ನಗದು, ಒಂದು ಮೊಬೈಲ್ ಫೋನ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.

ಸದರಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದಲ್ಲಿ ಪಿಐ ಮುತ್ತರಾಜ್, ಪಿಎಸ್ಐ ನಾಸೀರ್ ಹುಸೇನ್ ಮತ್ತು ರಘುನಾಥ್ ಎಸ್. ವಿ., ಎಎಸ್ಐ ಎಂ. ಸಿ. ಪ್ರಕಾಶ್ ಮತ್ತು ಸಿಬ್ಬಂದಿಗಳಾದ ವಿನಾಯಕ ಹಾಗೂ ಅನ್ವರ್ ಪಾಷಾ ಇದ್ದರು.

ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೇ ಎಚ್ಚರ ವಹಿಸಲು ಪೊಲೀಸರು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ;  ಚಾಲಕ ಸೇರಿ ಮೂವರಿಗೆ ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ತಾಲೂಕಿನ ನೆಲ್ಲೂರ ಪ್ಯಾಟಿ ಗ್ರಾಮದ ಹೊರವಲಯದ  ಬಳಿ ಶನಿವಾರ ಬೆಳಗ್ಗೆ ಲಾರಿಯೊಂದು  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಚಾಲಕ ಸೇರಿ ಮೂವರು ಗಾಯಗೊಂಡ ಘಟನೆ ಜರುಗಿದೆ.

ರೋಣ ಪಟ್ಟಣದಿಂದ ನೆಲ್ಲೂರ ಪ್ಯಾಟಿ ಗ್ರಾಮಕ್ಕೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ನೆಲ್ಲೂರ್ ಪ್ಯಾಟಿ ಗ್ರಾಮದ ಸುರೇಶ್ ಎಂಬ ಬಾಲಕನಿಗೆ ತಲೆಗೆ ಹೊಡೆತ ಬಿದ್ದಿದೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಯಗೊಂಡವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಗಜೇಂದ್ರಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ; ಮಧ್ಯರಾತ್ರಿ 1ಗಂಟೆಯವರೆಗೂ ತಲಾಠಿ ಕೂಡಿ ಹಾಕಿದ ಗ್ರಾಮಸ್ಥರು

0

ವಿಜಯಸಾಕ್ಷಿ ಸುದ್ದಿ, ಗದಗ

ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತಾವಾದ ಮಧ್ಯಂತರ ಪರಿಹಾರ ನೀಡಲು ಮುಂದಾಗಿದೆ. ಆದ್ರೆ ಕೆಲವು ಸಿಬ್ಬಂದಿಗಳು ಮಾಡುವ ಎಡವಟ್ಟಿನಿಂದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ದೇವರ ವರ ಕೊಟ್ರು ಪೂಜಾರಿ ವರ ಕೊಡಲ್ಲ ಅನ್ನೋ ಗಾದೆ ಮಾತಿನಂತೆ ಇಂಥಹದ್ದೊಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೆಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನು ಕೂಡಿ ಹಾಕಿದ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.

ಸುಮಾರು ಏಳು ಗಂಟೆಗಳ ಕಾಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನ ಕೂಡಿ ಹಾಕಿದ್ದರು. ಗ್ರಾಮಲೆಕ್ಕಾಧಿಕಾರಿ ಬೇಕಾದವರಿಗೆ ಮಾತ್ರ ಪರಿಹಾರದ ಹಣ ಜಮೆ ಮಾಡಿಸಿದ್ದಾನೆಂದು ಆರೋಪಿಸಿರುವ ರೈತರು ತಲಾಟಿಯನ್ನ ತರಾಟೆಗೆ ತೆಗೆದುಕೊಂಡು ಕೂಡಿಹಾಕಿದ್ದರು.

ಲೆಕ್ಕಾಧಿಕಾರಿ ವೀರನಗೌಡ ದಾನಪ್ಪಗೌಡರ ಎಂಬ ಗ್ರಾಮ ಲೆಕ್ಕಾಧಿಕಾರಿ, ಹೊಂಬಳ ಗ್ರಾಮದಲ್ಲಿ 3180 ರೈತ ಖಾತೆಗಳಿವೆ. ಆ ಪೈಕಿ 800 ಖಾತೆಗಳಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದೆ. ಇನ್ನುಳಿದ ರೈತರಿಗೆ ಹಣ ಸಂದಾಯವಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ರೈತರು ತಲಾಟಿಯನ್ನು ಕೂಡಿಹಾಕಿದ್ದರು.

ರೈತರು ತಹಸೀಲ್ದಾರ್ ಅಥವಾ ಡಿಸಿ ಅವರು ಬರಬೇಕು ಅಂತಾ ಪಟ್ಟು ಹಿಡಿದಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ ಹರಿಹರ ಹಾಗೂ ತಹಸೀಲ್ದಾರ್ ಕಿಶನ್ ಕಲಾಲ, ಅರ್ಹ ರೈತರಿಗೆ ಪರಿಹಾರದ ಹಣ ತಲುಪಿಸುವ ಭರವಸೆ ನೀಡಿ ಗ್ರಾಮ ಲೆಕ್ಕಾಧಿಕಾರಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.