Home Blog Page 3324

ಕೆಎಸ್‌ಆರ್‌ಟಿಸಿ ಡಿಪೋದ `ಮಹಾ’ ಯಡವಟ್ಟು!

0
  • ಮಹಾರಾಷ್ಟ್ರದ ಲಾಂಛನ, ಘೋಷಣೆಯಿರುವ ಟಿಕೆಟ್ ವಿತರಣೆಗೆ ಕನ್ನಡ ಸಂಘಟನೆಗಳ ಆಕ್ರೋಶ/ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ಇಲ್ಲಿ ಕನ್ನಡದ ಹೊರತಾಗಿ ಬೇರಾವ ಭಾಷೆಯೂ ಆಡಳಿತ ಭಾಷೆಯಾಗಬಾರದು. ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ, ಕನ್ನಡದ ಹೊಳಪು ಕಡಿಮೆಯಾಗುತ್ತಿದೆ ಎಂದು ಒಂದೆಡೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇತ್ತೀಚೆಗಷ್ಟೇ ನ್ಯಾಯಾಲಯ ಕೂಡ ಕನ್ನಡ ಭಾಷೆಯ ಪರವಾಗಿ ಮಹತ್ವದ ತೀರ್ಪು ನೀಡಿದ್ದು ಕನ್ನಡಾಭಿಮಾನಿಗಳ ಮೊಗದಲ್ಲಿ ನಗುವರಳಿಸಿತ್ತು.

ಈ ನಡುವೆಯೇ, ಕರ್ನಾಟಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ `ಮಹಾ’ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಕನ್ನಡಪರ ಹೋರಾಟಗಾರರ, ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಛನ, ಘೋಷಣೆಗಳು ಕಂಡು ಬಂದಿರುವುದು ಕನ್ನಡಪರ ಸಂಘಟನೆಗಳ ಕೋಪಕ್ಕೆ ಗ್ರಾಸವಾಗಿ, ಪ್ರತಿಭಟನೆಯವರೆಗೂ ತಲುಪಿರುವ ಘಟನೆ ಬುಧವಾರ ಗದಗನಲ್ಲಿ ನಡೆದಿದೆ.

ನಾಡಹಬ್ಬದ ಸಮಯದಲ್ಲಿಯೇ ಸಾರಿಗೆ ಸಂಸ್ಥೆಯ ಯಡವಟ್ಟಿನಿಂದ ಸರ್ಕಾರ ಮತ್ತೊಂದು ಗೊಂದಲಕ್ಕೆ ಗುರಿಯಾಗಿದೆ.

ಗದಗದಿಂದ ಗ್ರಾಮೀಣ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ನಲ್ಲಿ ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್ ವಿತರಣೆಯಾಗಿದ್ದು, `ಮಹಾರಾಷ್ಟ್ರ ನ್ ಪರಿವಾರನ್, ಜೈ ಮಹಾರಾಷ್ಟ’ ಘೋಷಣೆಗಳೂ ಮುದ್ರಿತವಾಗಿದ್ದವು. ಗದಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಾರಾಷ್ಟ್ರ ಪರವಾದ ಘೋಷಣೆಗಳಿರುವ ಟಿಕೆಟ್ ಹಂಚಿಕೆಯಾಗುತ್ತಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ನಾಡದ್ರೋಹಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಕನ್ನಡ ಭಾಷೆಗೆ ದ್ರೋಹವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸಮಜಾಯಿಷಿ ನಿಡಿದ ಕೆಎಸ್‌ಆರ್‌ಟಿಸಿ ಡಿಸಿ ಜಿ. ಶೇನಯ್ಯಾ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಟಿಕೆಟ್ ಮುದ್ರಿಸುವ ರೋಲ್‌ಗಳು ವಿಶಾಖಪಟ್ಟಣದಿಂದ ಸರಬರಾಜಾಗುತ್ತವೆ.

ಈ ಸಂದರ್ಭದಲ್ಲಿ ರೋಲ್ ವಿತರಿಸುವವರು ಪ್ರಮಾದವೆಸಗಿದ್ದು, ಮಹಾರಾಷ್ಟ್ರಕ್ಕೆ ಸರಬರಾಜಾಗಬೇಕಿದ್ದ ಮಹಾರಾಷ್ಟ್ರ ಲಾಂಛನವಿರುವ ಒಂದು ಬಾಕ್ಸ್ ಮಾತ್ರ ಗದಗಕ್ಕೆ ವಿತರಣೆಯಾಗಿತ್ತು.
ಗದಗ ಡಿಪೋದಲ್ಲಿ ಕ್ಲರ್ಕ್ ಗಳು ಸರಿಯಾಗಿ ಪರಿಶೀಲಿಸಿ ರೋಲ್‌ಗಳನ್ನು ಕೊಡಬೇಕಿತ್ತು. ಆದರೆ, ಅವರು ಈಬಗ್ಗೆ ಪರಾಮರ್ಶಿಸದೇ ಹಾಗೆಯೇ ಕಂಡಕ್ಟರ್‌ಗಳಿಗೆ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಟಿಕೆಟ್ ರೋಲ್‌ಗಳನ್ನು ಸರಬರಾಜು ಮಾಡಿದ ವ್ಯಕ್ತಿ, ಕ್ಲರ್ಕ್ ಗಳು ಹಾಗೂ ಕಂಡಕ್ಟರ್‌ಗಳೂ ತಪ್ಪು ಮಾಡಿದ್ದಾರೆ.

ಒಂದು ಬಾಕ್ಸ್ ನಲ್ಲಿ ೨೦೦ ರೋಲ್‌ಗಳು ಬಂದಿರುತ್ತವೆ. ಅವುಗಳಲ್ಲಿ ೭೦ ರೋಲ್‌ಗಳನ್ನು ಕಂಡಕ್ಟರ್‌ಗಳಿಗೆ ನೀಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕಂಡಕ್ಟರ್ ಕಡೆಯಿಂದ ಟಿಕೆಟ್ ರೋಲ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ತಪ್ಪು ಮಾಡಿದ ಕ್ಲರ್ಕ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಘಟನೆ ಗದಗದಲ್ಲಿ ನಡೆದಿದೆ. ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಮುದ್ರಣವಾಗಿರುವ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು, ನಿರ್ವಾಹಕರು ಕಣ್ಮುಚ್ಚಿಕೊಂಡೇ ಟಿಕೆಟ್ ನೀಡಿದರಾ? ಕನ್ನಡಿಗರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಟಿಕೆಟ್ ರೋಲ್‌ಗಳು ಗದಗ ತಲುಪಿದವಾ? ಯಾವ ಕಾರಣಕ್ಕಾಗಿ ಇಲ್ಲಿಗೆ ತಲುಪಿ ವಿತರಣೆಯಾದವು? ಟಿಕೆಟ್ ರೋಲ್ ಖರೀದಿ ಮಾಡಲು ಸರ್ಕಾರ, ಸಾರಿಗೆ ಸಂಸ್ಥೆಯ ಬಳಿ ಹಣವಿಲ್ಲವೆಂದರೆ ಹೇಳಿ. ಕನ್ನಡಿಗರು ವಿಶಾಲ ಹೃದಯದವರಿದ್ದೇವೆ. ನಾವೇ ವಂತಿಗೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತೇವೆ. ಆ ಹಣದಲ್ಲಿಯೇ `ಜೈ ಕರ್ನಾಟಕ’ ಎಂದು ಮುದ್ರಿಸಿರುವ ಟಿಕೆಟ್ ಹಂಚಿ. ಮುಖ್ಯಮಂತ್ರಿಗಳು, ಸಾರಿಗೆ ಸಚಿವರೆಲ್ಲ ಎಲ್ಲಿದ್ದೀರಿ? ತಕ್ಷಣ ಇಂಥ ಅಪರಾಧವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ. ಇಲ್ಲವಾದರೆ ರಾಜೀನಾಮೆ ನೀಡಿ ಹೊರಬನ್ನಿ

ಚಂದ್ರಕಾಂತ ಚವ್ಹಾಣ. ಜಯ ಕರ್ನಾಟಕ ಸಂಘಟನೆ ಮುಖಂಡ

ಇವತ್ತು ನಾಡಹಬ್ಬ ದಸರಾ. ಈ ಸಂದರ್ಭದಲ್ಲಿ ಗದಗ ಸಾರಿಗೆ ಡಿಪೋದಿಂದ ಸಂಚರಿಸುವ ಬಸ್‌ಗಳಲ್ಲಿ `ಜೈ ಮಹಾರಾಷ್ಟ್ರ ಎಂಬ ಘೋಷಣೆ, ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್‌ಗಳನ್ನು ನೀಡಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಈ ಘಟನೆಯನ್ನು ಎಲ್ಲ ಕನ್ನಡಪರ ಸಂಘಟನೆಗಳು ಖಂಡಿಸುತ್ತವೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಈ ಕನ್ನಡ ದ್ರೋಹವನ್ನು ಗಮನಿಸಿ ಅಂಥಹ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ನಾಳೆ ಬೆಳಿಗ್ಗೆಯೊಳಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಸ್ ನಿಲ್ದಾಣದದ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕನ್ನಡಕ್ಕಾಗಿ ನಾವು ಕನ್ನಡಿಗರು, ಸಂಘಟನೆಗಳು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ.

ಭಾಷಾಸಾಬ್ ಮಲ್ಲಸಮುದ್ರ. ಕನ್ನಡಪರ ಸಂಘಟನೆ ಮುಖಂಡ

ಮಹಿಳೆಯ ಭೀಕರ ಕೊಲೆ ಪ್ರಕರಣ; ನಾಲ್ವರು ಹಂತಕರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಸೋಮವಾರ ಹಾಡುಹಗಲೇ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆಗೈದ ಪ್ರಕರಣವನ್ನು ಶಹರ ಪೊಲೀಸರು ಭೇದಿಸಿದ್ದಾರೆ.

ನಿನ್ನೆ ಸಂಜೆ ಇಬ್ಬರನ್ನು ವಶಕ್ಕೆ ಪಡೆದಿದ್ದ ಶಹರ ಪೊಲೀಸರು, ತೀವ್ರ ವಿಚಾರಣೆ ನಡೆಸಿ ಮತ್ತೀಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ ಹಾಡುಹಗಲೇ ಮಹಿಳೆಯ ಭೀಕರ ಕೊಲೆ; ಚಾಕುವಿನಿಂದ ಇರಿದು ಹತ್ಯೆ, ಇಬ್ಬರು ಬಂಧನ?

ಚೇತನ್ ತಂದೆ ಪರಶುರಾಮ ಹುಳಕಣ್ಣವರ್, ರೋಹನ್ ಕುಮಾರ ತಂದೆ ಯಲ್ಲನಗೌಡ ಲಿಗಾಡಿ, ಕುಮಾರ್ ತಂದೆ ಯಲ್ಲಪ್ಪ ಮಾರನಬಸರಿ ಹಾಗೂ ಶ್ರೀನಿವಾಸ್ ತುಳಚಪ್ಪ ಸಿಂಧೆ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂದಿತರಿಂದ ಎರಡು ಚಾಕು, ಬೈಕ್ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಬಂಧಿತರೆಲ್ಲರೂ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿಗಳು. ಬಂಧಿತ ಆರೋಪಿ ಚೇತನ್ ಎಂಬಾತನ ಸಹೋದರ, ಆಟೋ ಚಾಲಕ ರಮೇಶ್ ಎಂಬಾತನನ್ನು 2020ರ ಡಿಸೆಂಬರ್ ತಿಂಗಳಲ್ಲಿ ವಾಸೀಂ ಬೇಪಾರಿ ಹಾಗೂ ಶೋಭಾ ಅಲಿಯಾಸ್ ಮೀನಾಜ್ ಬೇಪಾರಿ ಸೇರಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.

ಸಹೋದರ ರಮೇಶ್ ನ ಕೊಲೆಗೆ ದ್ವೇಷ ಸಾಧಿಸುತ್ತಿದ್ದ ಚೇತನ್, ರೋಹನ್ ಕುಮಾರ್, ಕುಮಾರ್ ಮಾರನಬಸರಿ ಹಾಗೂ ಶ್ರೀನಿವಾಸ ಸಿಂಧೆ ಸೇರಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ವಿಡಿಯೋ ವೈರಲ್

ಹೊಸ ಬಸ್ ನಿಲ್ದಾಣದ ಕಡೆ ಆಟೋದಲ್ಲಿ ಹೊರಟಿದ್ದ ಶೋಭಾ ಅಲಿಯಾಸ್ ಮೀನಾಜ್, ಬೇಕರಿಯಲ್ಲಿ ತಿಂಡಿ- ತಿನಿಸು ತರಲು ಆಟೋ ಇಳಿಯುತ್ತಿದ್ದಂತೆಯೇ ಅಟ್ಯಾಕ್
ಮಾಡಿದ ಹಂತಕರು, ಮುಖಕ್ಕೆ ಕೆಂಪು ಟವಲ್ ಹಾಕಿ ಹಲ್ಲೆ ಮಾಡಿ ಕಳಗೆ ಕೆಡವಿದ್ದಾರೆ.
ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಬೈಕ್ ನಿಂದ ಚಾಕು ತಂದು ಕೊಡವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ, ಮೊಬೈಲ್ ನಲ್ಲಿ ಸೆರೆಯಾಗಿದ್ದು, ಆ ವಿಡಿಯೋಗಳು ಈಗ ವೈರಲ್ ಆಗಿವೆ.

ಸುವರ್ಣ ಕಂಬಿಯವರಿಗೆ ಡಾಕ್ಟರೇಟ್

0

ವಿಜಯಸಾಕ್ಷಿ ಸುದ್ದಿ, ಗದಗ


ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯವು ಸುವರ್ಣ ಕಂಬಿ ಅವರು ಸಲ್ಲಿಸಿದ್ದ ‘ಕವರೇಜ್ ಆಫ್ ದಲಿತ್ ಇಶ್ಯೂಸ್ ಇನ್ ಕನ್ನಡ ಆಂಡ್ ಇಂಗ್ಲೀಷ್ ನ್ಯೂಸ್ ಪೇಪರ್ಸ್’ ಕುರಿತಾದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

ಗದಗ ಜಿಲ್ಲೆಯ ಹುಲಕೋಟಿ ನಿವಾಸಿಯಾಗಿರುವ ಸುವರ್ಣ ಕಂಬಿಯವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಓಂಕಾರಗೌಡ ಕಾಕಡೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಡಾಕ್ಟರೇಟ್ ಪದವಿ ಪಡೆದಿರುವ ಸುವರ್ಣ ಕಂಬಿಯವರನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಪ್ರೊ. ಬಿ.ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್.ಕೆ. ಅಭಿನಂದಿಸಿದ್ದಾರೆ.

ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್

ವಿಜಯಸಾಕ್ಷಿ ಸುದ್ದಿ, ಗದಗ/ಶಿರಹಟ್ಟಿ

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ‘ಸ್ವಚ್ಛ ಭಾರತ ಮಿಷನ್’ ಯೋಜನೆಯ ೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅ. ೨ರ ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು ಸ್ವಚ್ಛ ಭಾರತ್ ದಿವಸ್ ಕಾರ್ಯಕ್ರಮವು ಘನತೆವೆತ್ತ ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ೨ ಪ್ರಶಸ್ತಿಗಳನ್ನು ಪಡೆಯುವುದರ ಮೂಲಕ ರಾಜ್ಯದ ಘನತೆ ಹೆಚ್ಚಿಸಿದ್ದಾರೆ. ಸುಜಲಾಂ ೨.೦ ಹಾಗೂ ಸ್ವಚ್ಛ ಸರ್ವೇಕ್ಷಣೆ ಯೋಜನೆಯಡಿ ಸಮರ್ಪಕ ಕಾರ್ಯನಿರ್ವಹಣೆಗಾಗಿ ರಾಷ್ಟ್ರಮಟ್ಟದಲ್ಲಿ ಈ ಪ್ರಶಸ್ತಿ ಲಭಿಸಿದ್ದು, ತನ್ಮೂಲಕ ರಾಜ್ಯವು ಪ್ರಥಮ ಸ್ಥಾನ ಪಡೆದಿಕೊಂಡಿದೆ. ಇನ್ನು ಪ್ಲಾಸ್ಟಿಕ್ ಮುಕ್ತ, ಸಾಲಿಡ್ ವಾಟರ್ ಮ್ಯಾನೇಜ್ಮೆಂಟ್ ಹಾಗೂ ಗ್ರೇ ವಾಟರ್ ಮ್ಯಾನೇಜ್ಮೆಂಟ್‌ನಲ್ಲಿಯೂ ಉತ್ತಮ ಕಾರ್ಯನಿರ್ವಹಣೆಗೆ ಪ್ರತ್ಯೇಕ ಪ್ರಶಸ್ತಿ ಲಭಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ, ದ್ರವತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ಬಳಕೆ, ಸುಜಲಾಂ ೨.೦ ಅಡಿಯಲ್ಲಿ ಇಂಗುಗುಂಡಿಗಳ ನಮೂದು ಮುಂತಾದ ಚಟುವಟಿಕೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಪರಿಗಣಿಸಿ ನವದೆಹಲಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್‌ರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ರಿಗೆ ಪ್ರಶಸ್ತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರರು ಇದ್ದರು. ಪ್ರಶಸ್ತಿಗೆ ಭಾಜನರಾದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಗದಗ ಜಿಲ್ಲೆಯ ಎಲ್ಲ ಅಧಿಕಾರಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಥಮ ಸ್ಥಾನ ತಂದುಕೊಡುವಲ್ಲಿ ಜಿಲ್ಲಾಧಿಕಾರಿ ಪ್ರಮುಖ ಪಾತ್ರ

ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ಘನತೆವೆತ್ತ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಸುಜಲಾಂ ೨.೦ ಹಾಗೂ ಸ್ವಚ್ಛ ಸರ್ವೇಕ್ಷಣಾ ಸಮರ್ಪಕ ನಿರ್ವಹಣೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಡುವಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಮುಖ ಪಾತ್ರ ವಹಿಸಿ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಇದರೊಂದಿಗೆ ಗದಗ ಜಿಲ್ಲೆಯ ಕೀರ್ತಿಯನ್ನೂ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿಯೂ ಉತ್ತಮ ಆಡಳಿತ ಸಿಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.

ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಚಾಕುವಿನಿಂದ ಇರಿದು ಹತ್ಯೆ, ಇಬ್ಬರು ಬಂಧನ?

ವಿಜಯಸಾಕ್ಷಿ ಸುದ್ದಿ, ಗದಗ

ಮಟ ಮಟ ಮಧ್ಯಾಹ್ನ ಬೇಕರಿಗೆ ತಿನಿಸು ಖರೀದಿಸಲು ಬಂದಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಗದಗನ ಮುಳಗುಂದನಾಕಾದ ಬಳಿಯ ಬೇಕರಿಯೊಂದರ ಮುಂದೆ ಈ ಘಟನೆ ಜರುಗಿದ್ದು,

ಸಿಂಗಟರಾಯನಕೇರಿ ತಾಂಡಾದ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಕೊಲೆಗೀಡಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರು ಚಾಕುವಿನಿಂದ ಕತ್ತು ಸೀಳುವಂತೆ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಸುದ್ದಿ ತಿಳಿದು ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ, ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಜಿ. ಟಿ ಜಕ್ಕಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಲೆಯ ಸುದ್ದಿ ತಿಳಿದು ಸಾರ್ವಜನಿಕರು ಶವ ನೋಡಲು ಮುಗಿಬಿದ್ದಿದ್ದರು.

ಹಳೆಯ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದ್ದು, 2020ರ ಡಿಸೆಂಬರ್ ತಿಂಗಳಲ್ಲಿ ಆಟೋ ಚಾಲಕ ರಮೇಶ್ ಎಂಬಾತನ ಕೊಲೆ ಆಗಿತ್ತು. ಆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆ ಆರೋಪಿ ಆಗಿದ್ದಳು ಎಂದು ಅವರು ತಿಳಿಸಿದ್ದಾರೆ.

ಇಬ್ಬರೂ ವ್ಯಕ್ತಿಗಳು ಈ ಕೊಲೆ ಮಾಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿರಂತರ ಮಳೆ ಹಿನ್ನೆಲೆ; ಮನೆಗೋಡೆ ಕುಸಿದು ಮಗು ಸಮೇತ ದಂಪತಿ ಸಾವು

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಪರಿಣಾಮವಾಗಿ ಮಗು ಸಮೇತ ದಂಪತಿ ಮೃತಪಟ್ಟ ದುರ್ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.

ಪರಮೇಶ್ (43), ಜಯಮ್ಮ(38) ಐದು ವರ್ಷದ ಮಗು ಭರತ್ ಮೃತಪಟ್ಟ ದುರ್ಧೈವಿಗಳು ಎಂದು ಹೇಳಲಾಗಿದೆ.

ಎಂದಿನಂತೆ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಗೋಡೆ ಕುಸಿದಿದೆ. ದಂಪತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮಗು ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನಿಗಿದೆ.

ಮೃತರ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದ್ದು, ಸುದ್ದಿ ತಿಳಿದ ಮಾನ್ವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಕ್ತದಾನ ಮಾಡಿ ಜೀವ ಉಳಿಸಿ; ಮುತ್ತು ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಆರೊಗ್ಯವಂತ ನಾಗರಿಕರು ರಕ್ತದಾನ ಮಾಡುವದರಿಂದ ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡು ಆಪತ್ತಿನಲ್ಲಿರುವ ವ್ಯಕ್ತಿಗಳ ಜೀವ ಉಳಿಸಲಿಕ್ಕೆ ಅನಕೂಲವಾಗಲಿದೆ ಎಂದು ಚಿಕ್ಕನರಗುಂದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಭಿಪ್ರಾಯಪಟ್ಟರು.

ಅವರು ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಸ್ಪತ್ರೆ ಗದಗ, ಜಿಲ್ಲಾ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಆರ್ ಸಿ ಕೊರವನವರ ಮಾತನಾಡಿ, ರಕ್ತದಾನ ಮಾಡಿದ ನಂತರ ಅದನ್ನು ವಿಂಗಡಿಸಿ ಅವಶ್ಯಕತೆ ಇರುವ ರೋಗಿಗಳಿಗೆ ನೀಡಲಾಗುವದು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವದಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿ, ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಚಿಕ್ಕನರಗುಂದ ಹಾಗೂ ಬೆನಕನಕೊಪ್ಪ ಗ್ರಾಮದ 41ಜನ ಯುವಕರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಆಸ್ಪತ್ರೆಯ ಸಿಬ್ಬಂದಿಗಳಾದ ರವಿ, ಬೆತಾಪಲ್ಲಿ, ಶರಾವತಿ, ಸತ್ಯಮ್ಮನವರ, ರೇಶ್ಮಾ, ಪೂಜಾ, ನೇತ್ರಾವತಿ, ಲಕ್ಷ್ಮಿ, ಬಸಮ್ಮ, ಆಶಾ ಕಾರ್ಯಕರ್ತೆಯರು, ರಕ್ತ ನಿಧಿ ಸಿಬ್ಬಂದಿ, ಚಿಕ್ಕನರಗುಂದ, ಬೆನಕನಕೊಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ವಂದನಾರ್ಪಣೆಗೈದರು.

ವಿಶ್ವಕ್ಕೆ ಶಾಂತಿ ಮಂತ್ರ ಪಟಿಸಿದ ಗಾಂಧೀಜಿ; ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆಯ ಸಮಾರಂಭವನ್ನು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುತ್ತು ರಾಯರಡ್ಡಿ, ರಾಷ್ಟಪಿತ ಮಹಾತ್ಮ ಗಾಂಧಿ ಅವರು ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದ ಮೂಲಕ ಹೋರಾಡಿ ವಿಶ್ವಕ್ಕೆ ಶಾಂತಿ ಮಂತ್ರ ಹೇಳಿಕೊಟ್ಟವರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮ ಗಾಂಧಿಯವರು ಪ್ರಮುಖ ಪಾತ್ರ ವಹಿಸಿದ್ದರು.

ಗಾಂಧಿಯವರ ಜನ್ಮದಿನವಾದ ಇಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸೋಣ ಎಂದರು.

ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಆವರಣ ಹಾಗೂ ವಿಶೇಷಚೇತನರ ಉದ್ಯಾನವನ ಮತ್ತು ಗ್ರಾಮದ ಬೀದಿಗಳಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕು. ಶೈನಾಜ್ ಮುಜಾವರ್, ಕಾರ್ಯದರ್ಶಿ ಕೆಂಚಪ್ಪ ಮಾದರ‌ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋದ ಪ್ರಕರಣ; ಇಬ್ಬರ ಮೃತದೇಹ ಪತ್ತೆ

ವಿಜಯಸಾಕ್ಷಿ ಸುದ್ದಿ, ಯಲಬುರ್ಗಾ

ಯಲಬುರ್ಗಾ ತಾಲೂಕಿನ ಸಂಕನೂರು ಹಳ್ಳದಲ್ಲಿ ಶನಿವಾರ ರಾತ್ರಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಭುವನೇಶ್ವರಿ ಹಾಗೂ ಗಿರಿಜಾ ಎಂಬುವವರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ನಿನ್ನೆ ರಾತ್ರಿಯಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ. ಬೆಳಗಿನ ಜಾವದಿಂದ ಮಳೆ ಬಿಡುವು ಕೊಟ್ಟಿದ್ದು, ಹಳ್ಳದ ನೀರಿನ ಹರಿವು ಕ್ಷೀಣಿಸುತ್ತಿದೆ.

ನಿನ್ನೆ ರಾತ್ರಿ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಕೊಂಡು ಹೋಗಿದ್ದರು. ಗಿರಿಜಾ, ಪವಿತ್ರಾ, ವೀಣಾ ಎಂಬುವವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಮಹಿಳೆಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಭಾರಿ ಮಳೆ ಹಿನ್ನೆಲೆ; ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಯಲಬುರ್ಗಾ

ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಕೊಂಡು ಹೋದ ದುರ್ಘಟನೆ ಶನಿವಾರ ರಾತ್ರಿ ಜರುಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದವರನ್ನು ಸಂಕನೂರು ಗ್ರಾಮದ ಗಿರಿಜಾ (30), ಭುವನೇಶ್ವರಿ (33) ರೇಖಾ (43) ವೀಣಾ (22) ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಹಿಳೆಯರು ಗ್ರಾಮದ ಸಮೀಪ ಇರುವ ಸೀಡ್ಸ್ ಕಂಪನಿಯಲ್ಲಿ ಹತ್ತಿ ಬೀಜ ಆಯಲು ಹೋಗಿ ಮನೆಗೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸೀಡ್ಸ್ ಕಂಪನಿಗೆ ನಿತ್ಯವೂ ಹತ್ತಾರು ಜನರು ಕೆಲಸಕ್ಕೆ ತೆರಳುತ್ತಾರೆ. ಎಂದಿನಂತೆ ಇವರೂ ತೆರಳಿದ್ದಾರೆ. ಆದರೆ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಗ್ರಾಮದ ಸಂಕನೂರು ಹಳ್ಳ ಭರ್ತಿಯಾಗಿ ಹರಿದಿದೆ.

ಈ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಮಹಿಳೆಯರು ನೀರಿಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಣೆ‌ ಮಾಡಲು ಮತ್ತೆ ಇಬ್ಬರು ಹಳ್ಳದಲ್ಲಿ ಇಳಿದಿದ್ದಾರೆ. ಅವರೂ ಸಹ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.

ಒಂದು ಗಂಟೆ ಕಾಲ ಗಿರಿಜಾ ಹಾಗೂ ಭುವನೇಶ್ವರಿ ಎನ್ನುವ ಇಬ್ಬರು ಮಹಿಳೆಯರು ಹಳ್ಳದ ಮಧ್ಯೆ ಗಿಡದ ಟೊಂಗೆ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಲು ಹಗ್ಗ, ಏಣಿ ಸೇರಿದಂತೆ ಇತರೆ ಪ್ರಯತ್ನ ಮಾಡಿದ್ದಾರೆ. ಆದರೆ ನೀರಿ‌ನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಿಡದ ಟೊಂಗೆ ಹಿಡಿದು ನಿಂತಿದ್ದ ಅವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಯಲಬುರ್ಗಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.