Home Blog Page 3325

ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಚಾಕುವಿನಿಂದ ಇರಿದು ಹತ್ಯೆ, ಇಬ್ಬರು ಬಂಧನ?

ವಿಜಯಸಾಕ್ಷಿ ಸುದ್ದಿ, ಗದಗ

ಮಟ ಮಟ ಮಧ್ಯಾಹ್ನ ಬೇಕರಿಗೆ ತಿನಿಸು ಖರೀದಿಸಲು ಬಂದಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಗದಗನ ಮುಳಗುಂದನಾಕಾದ ಬಳಿಯ ಬೇಕರಿಯೊಂದರ ಮುಂದೆ ಈ ಘಟನೆ ಜರುಗಿದ್ದು,

ಸಿಂಗಟರಾಯನಕೇರಿ ತಾಂಡಾದ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಕೊಲೆಗೀಡಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರು ಚಾಕುವಿನಿಂದ ಕತ್ತು ಸೀಳುವಂತೆ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಸುದ್ದಿ ತಿಳಿದು ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ, ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಜಿ. ಟಿ ಜಕ್ಕಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಲೆಯ ಸುದ್ದಿ ತಿಳಿದು ಸಾರ್ವಜನಿಕರು ಶವ ನೋಡಲು ಮುಗಿಬಿದ್ದಿದ್ದರು.

ಹಳೆಯ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದ್ದು, 2020ರ ಡಿಸೆಂಬರ್ ತಿಂಗಳಲ್ಲಿ ಆಟೋ ಚಾಲಕ ರಮೇಶ್ ಎಂಬಾತನ ಕೊಲೆ ಆಗಿತ್ತು. ಆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆ ಆರೋಪಿ ಆಗಿದ್ದಳು ಎಂದು ಅವರು ತಿಳಿಸಿದ್ದಾರೆ.

ಇಬ್ಬರೂ ವ್ಯಕ್ತಿಗಳು ಈ ಕೊಲೆ ಮಾಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿರಂತರ ಮಳೆ ಹಿನ್ನೆಲೆ; ಮನೆಗೋಡೆ ಕುಸಿದು ಮಗು ಸಮೇತ ದಂಪತಿ ಸಾವು

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಪರಿಣಾಮವಾಗಿ ಮಗು ಸಮೇತ ದಂಪತಿ ಮೃತಪಟ್ಟ ದುರ್ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.

ಪರಮೇಶ್ (43), ಜಯಮ್ಮ(38) ಐದು ವರ್ಷದ ಮಗು ಭರತ್ ಮೃತಪಟ್ಟ ದುರ್ಧೈವಿಗಳು ಎಂದು ಹೇಳಲಾಗಿದೆ.

ಎಂದಿನಂತೆ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಗೋಡೆ ಕುಸಿದಿದೆ. ದಂಪತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮಗು ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನಿಗಿದೆ.

ಮೃತರ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದ್ದು, ಸುದ್ದಿ ತಿಳಿದ ಮಾನ್ವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಕ್ತದಾನ ಮಾಡಿ ಜೀವ ಉಳಿಸಿ; ಮುತ್ತು ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಆರೊಗ್ಯವಂತ ನಾಗರಿಕರು ರಕ್ತದಾನ ಮಾಡುವದರಿಂದ ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡು ಆಪತ್ತಿನಲ್ಲಿರುವ ವ್ಯಕ್ತಿಗಳ ಜೀವ ಉಳಿಸಲಿಕ್ಕೆ ಅನಕೂಲವಾಗಲಿದೆ ಎಂದು ಚಿಕ್ಕನರಗುಂದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಭಿಪ್ರಾಯಪಟ್ಟರು.

ಅವರು ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಸ್ಪತ್ರೆ ಗದಗ, ಜಿಲ್ಲಾ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಆರ್ ಸಿ ಕೊರವನವರ ಮಾತನಾಡಿ, ರಕ್ತದಾನ ಮಾಡಿದ ನಂತರ ಅದನ್ನು ವಿಂಗಡಿಸಿ ಅವಶ್ಯಕತೆ ಇರುವ ರೋಗಿಗಳಿಗೆ ನೀಡಲಾಗುವದು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವದಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿ, ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಚಿಕ್ಕನರಗುಂದ ಹಾಗೂ ಬೆನಕನಕೊಪ್ಪ ಗ್ರಾಮದ 41ಜನ ಯುವಕರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಆಸ್ಪತ್ರೆಯ ಸಿಬ್ಬಂದಿಗಳಾದ ರವಿ, ಬೆತಾಪಲ್ಲಿ, ಶರಾವತಿ, ಸತ್ಯಮ್ಮನವರ, ರೇಶ್ಮಾ, ಪೂಜಾ, ನೇತ್ರಾವತಿ, ಲಕ್ಷ್ಮಿ, ಬಸಮ್ಮ, ಆಶಾ ಕಾರ್ಯಕರ್ತೆಯರು, ರಕ್ತ ನಿಧಿ ಸಿಬ್ಬಂದಿ, ಚಿಕ್ಕನರಗುಂದ, ಬೆನಕನಕೊಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ವಂದನಾರ್ಪಣೆಗೈದರು.

ವಿಶ್ವಕ್ಕೆ ಶಾಂತಿ ಮಂತ್ರ ಪಟಿಸಿದ ಗಾಂಧೀಜಿ; ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆಯ ಸಮಾರಂಭವನ್ನು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುತ್ತು ರಾಯರಡ್ಡಿ, ರಾಷ್ಟಪಿತ ಮಹಾತ್ಮ ಗಾಂಧಿ ಅವರು ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದ ಮೂಲಕ ಹೋರಾಡಿ ವಿಶ್ವಕ್ಕೆ ಶಾಂತಿ ಮಂತ್ರ ಹೇಳಿಕೊಟ್ಟವರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮ ಗಾಂಧಿಯವರು ಪ್ರಮುಖ ಪಾತ್ರ ವಹಿಸಿದ್ದರು.

ಗಾಂಧಿಯವರ ಜನ್ಮದಿನವಾದ ಇಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸೋಣ ಎಂದರು.

ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಆವರಣ ಹಾಗೂ ವಿಶೇಷಚೇತನರ ಉದ್ಯಾನವನ ಮತ್ತು ಗ್ರಾಮದ ಬೀದಿಗಳಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕು. ಶೈನಾಜ್ ಮುಜಾವರ್, ಕಾರ್ಯದರ್ಶಿ ಕೆಂಚಪ್ಪ ಮಾದರ‌ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋದ ಪ್ರಕರಣ; ಇಬ್ಬರ ಮೃತದೇಹ ಪತ್ತೆ

ವಿಜಯಸಾಕ್ಷಿ ಸುದ್ದಿ, ಯಲಬುರ್ಗಾ

ಯಲಬುರ್ಗಾ ತಾಲೂಕಿನ ಸಂಕನೂರು ಹಳ್ಳದಲ್ಲಿ ಶನಿವಾರ ರಾತ್ರಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಭುವನೇಶ್ವರಿ ಹಾಗೂ ಗಿರಿಜಾ ಎಂಬುವವರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ನಿನ್ನೆ ರಾತ್ರಿಯಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ. ಬೆಳಗಿನ ಜಾವದಿಂದ ಮಳೆ ಬಿಡುವು ಕೊಟ್ಟಿದ್ದು, ಹಳ್ಳದ ನೀರಿನ ಹರಿವು ಕ್ಷೀಣಿಸುತ್ತಿದೆ.

ನಿನ್ನೆ ರಾತ್ರಿ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಕೊಂಡು ಹೋಗಿದ್ದರು. ಗಿರಿಜಾ, ಪವಿತ್ರಾ, ವೀಣಾ ಎಂಬುವವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಮಹಿಳೆಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಭಾರಿ ಮಳೆ ಹಿನ್ನೆಲೆ; ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಯಲಬುರ್ಗಾ

ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಕೊಂಡು ಹೋದ ದುರ್ಘಟನೆ ಶನಿವಾರ ರಾತ್ರಿ ಜರುಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದವರನ್ನು ಸಂಕನೂರು ಗ್ರಾಮದ ಗಿರಿಜಾ (30), ಭುವನೇಶ್ವರಿ (33) ರೇಖಾ (43) ವೀಣಾ (22) ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಹಿಳೆಯರು ಗ್ರಾಮದ ಸಮೀಪ ಇರುವ ಸೀಡ್ಸ್ ಕಂಪನಿಯಲ್ಲಿ ಹತ್ತಿ ಬೀಜ ಆಯಲು ಹೋಗಿ ಮನೆಗೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸೀಡ್ಸ್ ಕಂಪನಿಗೆ ನಿತ್ಯವೂ ಹತ್ತಾರು ಜನರು ಕೆಲಸಕ್ಕೆ ತೆರಳುತ್ತಾರೆ. ಎಂದಿನಂತೆ ಇವರೂ ತೆರಳಿದ್ದಾರೆ. ಆದರೆ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಗ್ರಾಮದ ಸಂಕನೂರು ಹಳ್ಳ ಭರ್ತಿಯಾಗಿ ಹರಿದಿದೆ.

ಈ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಮಹಿಳೆಯರು ನೀರಿಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಣೆ‌ ಮಾಡಲು ಮತ್ತೆ ಇಬ್ಬರು ಹಳ್ಳದಲ್ಲಿ ಇಳಿದಿದ್ದಾರೆ. ಅವರೂ ಸಹ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.

ಒಂದು ಗಂಟೆ ಕಾಲ ಗಿರಿಜಾ ಹಾಗೂ ಭುವನೇಶ್ವರಿ ಎನ್ನುವ ಇಬ್ಬರು ಮಹಿಳೆಯರು ಹಳ್ಳದ ಮಧ್ಯೆ ಗಿಡದ ಟೊಂಗೆ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಲು ಹಗ್ಗ, ಏಣಿ ಸೇರಿದಂತೆ ಇತರೆ ಪ್ರಯತ್ನ ಮಾಡಿದ್ದಾರೆ. ಆದರೆ ನೀರಿ‌ನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಿಡದ ಟೊಂಗೆ ಹಿಡಿದು ನಿಂತಿದ್ದ ಅವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಯಲಬುರ್ಗಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಭಾರಿ ಮಳೆ; ಸಿಡಿಲು ಬಡಿದು ಗೋಪುರಕ್ಕೆ ಧಕ್ಕೆ, ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ವಾಹನ ಸವಾರರ ದುಸ್ಸಾಹಸ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಶುಕ್ರವಾರ ತಾಲೂಕಿನಲ್ಲಿ ಗುಡುಗಿನ ಅಬ್ಬರದ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ತಾಲೂಕಿನ ಶಿಗ್ಲಿ ಗ್ರಾಮದ ಬನಶಂಕರಿ ದೇವಿಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ದೇವಸ್ಥಾನದಲ್ಲಿ ನಿಂತಿದ್ದ ಹತ್ತಾರು ಜನರಿಗೆ ಯಾವುದೇ ತೊಂದರೆ ಆಗಿಲ್ಲ.

ಎಂಟು ತಿಂಗಳ ಹಿಂದಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ದೇವಸ್ಥಾನ ಲೋಕಾರ್ಪಣೆಗೊಂಡಿತ್ತು. ನವರಾತ್ರಿಯ ಸಂದರ್ಭದಲ್ಲಿ ಗೋಪುರಕ್ಕೆ ಬಡಿದ ಸಿಡಿಲು, ತಾಯಿ ಬನಶಂಕರಿ ಭಕ್ತರ ಜೀವ ಕಾಪಾಡಿ ತನ್ನ ಗೋಪುರಕ್ಕೆ ಧಕ್ಕೆ ಮಾಡಿಕೊಂಡಿದ್ದಾಳೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಭಾರಿ ಮಳೆಯಿಂದಾಗಿ ದೊಡ್ಡೂರು ಗ್ರಾಮದ ಬಳಿ ಇರುವ ಹಳ್ಳ ತುಂಬಿ ಹರಿಯುತ್ತದೆ. ಇದರಲ್ಲಿ ಕೆಲ ವಾಹನ ಸವಾರರು ಪ್ರಾಣದ ಹಂಗು ಲೆಕ್ಕಸದೇ ಅದರಲ್ಲಿ ವಾಹನ ಚಲಾಯಿಸುವ ಮೂಲಕ ದುಸ್ಸಾಹಸ ಮೆರೆದರು.

ಶಿರಹಟ್ಟಿಯಲ್ಲಿ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಸ್ವಲ್ಪ ದಿನಗಳ ಕಾಲ ಬಿಡುವು ನೀಡಿದ್ದ ಮಳೆಯು ಇದ್ದಕ್ಕಿದ್ದಂತೆ ಸುರಿದ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ತೋಯಿಸಿಕೊಂಡು ಮನೆ ಸೇರಬೇಕಾಯಿತು.

ತಾಲೂಕಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಆಗಮಿಸಿದ್ದ ಬಹುತೇಕ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.

ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಜಿಲ್ಲಾಡಳಿತಕ್ಕೆ ಎಚ್.ಕೆ. ಪಾಟೀಲ ಪತ್ರ

ವಿಜಯಸಾಕ್ಷಿ ಸುದ್ದಿ, ಗದಗ


ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ವಿಪರೀತ ಹದಗೆಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚಾರ ತ್ರಾಸದಾಯಕವಾಗುತ್ತಿದೆ. ಶೀಘ್ರವಾಗಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಎಂದು ಗದಗ ಮತಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲರು ಕೋರಿದ್ದಾರೆ.

ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಶಾಸಕರು, ಹದಗೆಟ್ಟಿರುವ ರಸ್ತೆಗಳಿಂದಾಗಿ ಸಾರ್ವಜನಿಕರು ಎಲ್ಲಿ, ಯಾವ ರೀತಿಯಲ್ಲಿ ಅಪಘಾತಗಳಾಗುತ್ತವೆಯೋ ಎಂಬ ಭಯದಿಂದಲೇ ರಸ್ತೆಗಿಳಿಯುವಂತಾಗಿದೆ. ಕೆಲವೆಡೆ ಸಂಚಾರವೇ ದುಸ್ತರವಾಗಿದೆ.

ಯುದ್ಧೋಪಾದಿಯಲ್ಲಿ ಅವಳಿ ನಗರದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಿಗಳಿಗೆ, ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪತ್ರಮುಖೇನ ವಿನಂತಿಸಿದ್ದಾರೆ.

ಹಸುಗಳ ಮೇಲೆ ಚಿರತೆ ದಾಳಿ?; ಎರಡು ಹಸುಗಳ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹಲವು ದಿನಗಳ ಹಿಂದೆ ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ಜನರು ಮತ್ತೆ ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ತೋಟದ ಮನೆಗೆ ನುಗ್ಗಿ ಎರಡು ಹಸುಗಳನ್ನು ಬಲಿ ಪಡೆದಿದೆ ಎಂದು ರೈತ ಶರಣಪ್ಪ ಪಾಟೀಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾತ್ರಿ ಹೊತ್ತಿನಲ್ಲಿ ತೋಟದ ಮನೆಗೆ ನುಗ್ಗಿರುವ ಚಿರತೆ ಹೊರಗೆಳೆದು ತಂದು ತಿಂದು ಹಾಕಿದೆ ಎಂದು ರೈತ ಶರಣಪ್ಪ ಹೇಳಿದ್ದಾರೆ.

ಚಿರತೆ ನೋಡಿದ ಜನರು ಕೂಗಾಡಿದ್ದರಿಂದ ಚಿರತೆ ಓಡಿ ಹೋಗಿದೆ ಎಂದಿರುವ ರೈತರು, ರಾತ್ರಿ ಹೊತ್ತು ವಿದ್ಯುತ್ ಇರದೇ ಇರುವುದರಿಂದ ಇಂತಹ ಅವಘಡ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.