Home Blog Page 3331

ಉಗ್ರಪ್ಪ, ಸಲೀಂ ದಾಖಲೆ ನೀಡಿದರೆ ತನಿಖೆ

  • ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ನಾನು ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಎರಡು ತಿಂಗಳಾಗಿದೆ. ಅವರು ಮಾತನಾಡಿರುವುದು ಸತ್ಯ ಇರಬಹುದು. ನಾನು ಕೋಟೆಗೋಡೆ ಹೊರಗಡೆ ಇದ್ದೆ, ಇದೀಗ ಒಳಗೆ ಬಂದಿದ್ದೇನೆ. ಹೀಗಾಗಿ ಇದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಸಲಿಂ ಹಾಗೂ ಉಗ್ರಪ್ಪನವರ ಮಾತುಕತೆ ವಿಚಾರವಾಗಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು,‌ ಉಗ್ರಪ್ಪ ಹಾಗೂ ಸಲೀಂ ಅವರು ಈ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡಿಸಲಾಗುವುದು. ಅವಶ್ಯಕತೆ ಬಿದ್ದಾಗ ಸೊಮೊಟೋ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದರು.

ಜಾತ್ರೆಯಲ್ಲಿ ನೂಕುನುಗ್ಗಲು; 60 ಜನರಿಗೆ ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಮಾಳಾ ಮಲ್ಲೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಕ್ತರಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ 60 ಭಕ್ತರು ಗಂಭೀರ ಗಾಯಗೊಂಡ ಘಟನೆ ರಾಯಚೂರು ಗಡಿಭಾಗದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಹೋಬಳಿಯ ದೇವರಗಟ್ಲು ಗ್ರಾಮದಲ್ಲಿ ನಡೆದಿದೆ.

ಅಹೋರಾತ್ರಿ ನಡೆಯುವ ಈ ಜಾತ್ರೆ ವೇಳೆ ದೊಣ್ಣೆಯಿಂದ ಭಕ್ತರು ಪರಸ್ಪರ ಹೊಡೆದಾಡುವುದು ಸಂಪ್ರದಾಯ. ಈ ವೇಳೆ ತ್ರಿಶೂಲದ ಹೊಡೆತಕ್ಕೆ ನೆಲಕ್ಕೆ ಬಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಇದರಿಂದ ಭಕ್ತರ ಮಧ್ಯೆ ನೂಕು‌ ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆದೋನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ನಾಲ್ಕು ವರ್ಷದ ಮಗುವಿನ ತಲೆಯ ಮೇಲೆ ಕಾರು ಚಲಾಯಿಸಿದ ಸರ್ಕಾರಿ ಆಸ್ಪತ್ರೆ ಚಾಲಕ

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ಕಾರು ಹರಿದು ನಾಲ್ಕು ವರ್ಷದ ಮಗು ಮೃತಪಟ್ಟಿದ್ದು, ಗರ್ಭಿಣಿ ತಾಯಿ ಗಂಭೀರ ಗಾಯಗೊಂಡ ಘಟನೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದೆ.

ಹರಪನಹಳ್ಳಿ ತಾಲೂಕಿನ ಪಟ್ಟಣಕುಂಚೂರು ಗ್ರಾಮದ ಹನುಮಂತ (4) ಮೃತ ಮಗು. ಗರ್ಭಿಣಿ ರೂಪ (26) ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸರಕಾರಿ ಆಸ್ಪತ್ರೆಯ ನೌಕರ ರವಿ ಎಂಬಾತನ ಅಜಾಗರೂಕತೆಯ ಕಾರು ಚಾಲನೆ ದುರ್ಘಟನೆಗೆ ಕಾರಣವಾಗಿದೆ.

ಘಟನೆ ವಿವರ

ಕುಂಚೂರು ಗ್ರಾಮದ ಕೋಟೆಪ್ಪ ಮತ್ತು ಮಂಜಮ್ಮ ದಂಪತಿಗೆ ಎರಡು ಮಕ್ಕಳಿದ್ದು, ಅನಾರೋಗ್ಯದ ಕಾರಣ 4 ದಿನದ ಹಿಂದೆ 8 ತಿಂಗಳ ಗರ್ಭಿಣಿಯಾಗಿರುವ ರೂಪಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ತಿಂಡಿ ತಿನ್ನಲು ರೂಪ, ತನ್ನಿಬ್ಬರು ಮಕ್ಕಳೊಂದಿಗೆ ಹೊರಗಿರುವ ಕ್ಯಾಂಟೀನ್‌ಗೆ ಬಂದಿದ್ದು, ಮಗುವಿನೊಂದಿಗೆ ಸರ್ಕಾರಿ ಆಸ್ಪತ್ರೆಯ ಆವರಣದ ಸಿಸಿ ರಸ್ತೆ ಬದಿಗೆ ನಿಂತಿದ್ದಾಗ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರ ಅಜಾಗರೂಕತೆಯಿಂದ ಕಾರು ಚಲಾಯಿಸಿ ಮಗುವಿಗೆ ತಲೆಯ ಮೇಲೆ ಹರಿಸಿದ್ದಲ್ಲದೆ, ಜೊತೆಗಿದ್ದ ತಾಯಿ ರೂಪ ಗಂಭೀರ ಗಾಯಗೊಂಡಿದ್ದಾರೆ.

ಆರೋಪಿ ಸರ್ಕಾರಿ ಆಸ್ಪತ್ರೆಯ ಡಿ-ಗ್ರೂಪ್ ನೌಕರ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ಕೋಟೆಪ್ಪ ಹರಪನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ; ತಹಸೀಲ್ದಾರ ಕಚೇರಿಯಲ್ಲೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಸಹೋದರರು

ವಿಜಯಸಾಕ್ಷಿ ಸುದ್ದಿ, ಗದಗ

ಒಡಹುಟ್ಟಿದ ತಮ್ಮನಿಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದಕ್ಕೆ ಸಿಟ್ಟಾದ ಅಣ್ಣನ ಹೆಂಡತಿ, ತನ್ನ ಇಬ್ಬರು ಸಹೋದರರ ಮೂಲಕ ಮೈದುನನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನರಗುಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.

ಜಮೀನು ಬಿಟ್ಟುಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಗೆ ತಹಸೀಲ್ದಾರ್ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದಳು. ಮಂಗಳವಾರ ಪ್ರಕರಣದ ವಿಚಾರಣೆಗೆ ಬಂದಿದ್ದ ಮೈದುನನ ಮೇಲೆ ಅತ್ತಿಗೆ ಸಹೋದರರಿಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ‌ ಹಾಕಿದ್ದಾರೆ.

ಘಟನೆ ವಿವರ

ನರಗುಂದ ತಾಲೂಕಿನ ರಡ್ಡೇರನಾಗನೂರು‌ ಗ್ರಾಮದ ಯಲ್ಲಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ಎಂಬುವವರು ತಮ್ಮನಾದ ಗದಿಗೆಪ್ಪ ಹನಮಪ್ಪ ಬೀರಗೌಡ್ರಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದರು.

ಅದರೆ ಯಲ್ಲಪ್ಪ ಬೀರಗೌಡ್ರ ಅವರ ಪತ್ನಿಯು ಮೂರು ಎಕರೆ ಜಮೀನು ಬಿಟ್ಟುಕೊಟ್ಟಿದ್ದಕ್ಕೆ ಸಿಟ್ಟಾಗಿದ್ದರು. ಅದಕ್ಕಾಗಿ ತಹಸೀಲ್ದಾರ ಕಚೇರಿಯಲ್ಲಿ ತಕರಾರು ಅರ್ಜಿ ಕೊಟ್ಟಿದ್ದರು. ಇದರ ವಿಚಾರಣೆ ಮಂಗಳವಾರ ನರಗುಂದ ತಹಸೀಲ್ದಾರ ಕಚೇರಿಯಲ್ಲಿ ಇತ್ತು.

ಗದಿಗೆಪ್ಪ ಹನಮಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ವಿಚಾರಣೆಗೆ ಆಗಮಿಸಿದ್ದ ವೇಳೆ ಅತ್ತಿಗೆಯ ಸಹೋದರರಾದ ಬೈರನಹಟ್ಟಿ ಗ್ರಾಮದ ನಾಗಪ್ಪ ಶಿವಪ್ಪ ಬೆನ್ನೂರು, ಭರಮಪ್ಪ ಶಿವಪ್ಪ ಬೆನ್ನೂರು ಎಂಬುವವರು ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದರೂ ಬಿಡದ ಬೆನ್ನೂರು ಸಹೋದರರು, ಕೊರಳ ಪಟ್ಟಿ ಹಿಡಿದು ಕಚೇರಿಯ ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರಪ್ಪನಿಗೆ ಹುಟ್ಟಿದ್ರೆ ಸೀಡಿ ಬಿಡುಗಡೆ ಮಾಡಲಿ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಅವರಪ್ಪನಿಗೆ ಹುಟ್ಟಿದ್ರೆ ಸೀಡಿ ಬಿಡುಗಡೆ ಮಾಡಲಿ. ಏನೇ ಮಾಡಿದರೂ ಯತ್ನಾಳ್ ನ ಕುಗ್ಗಿಸಲು ಸಾಧ್ಯವಿಲ್ಲ. ನನ್ನ ಬಾಯಿ ಬಂದ್ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

‌ಅಶ್ಲೀಲ ಸೀಡಿ ಬಿಡುಗಡೆ ಊಹಾಪೋಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಜನ ಪರವಾಗಿ ಹೋರಾಟ ಮಾಡುವವನು. ಯಾವ ಭಯವೂ ಇಲ್ಲ.‌ ನೀರಾವರಿ ಇಲಾಖೆಯಲ್ಲಿ ನಡೆದ ಕೋಟ್ಯಾಂತರ ಅವ್ಯವಹಾರ, 12 ಪರ್ಸೆಂಟ್ ವಿಷಯ ಹೇಳಿದ್ದೇ ನಾನು. ಅದನ್ನೇ ಈಗ ಇನಕಂ ಟ್ಯಾಕ್ಸ್ ನವರು ಒಪ್ಪಿಕೊಂಡಿದ್ದಾರೆ.

ಇಂತಹ ಭ್ರಷ್ಟಾಚಾರಗಳನ್ನು ಹೊರ ತೆಗೆದಿದ್ದಕ್ಕೆ ಭಯಪಟ್ಟು ಕೃತಕ ಸೀಡಿ ತಯಾರಿಸಿದ್ದಾರೆ. ಈ ಪಿತೂರಿಯಲ್ಲಿ ನಮ್ಮ‌ ಪಕ್ಷದವರು ಸೇರಿದಂತೆ ಸರ್ವ ಪಕ್ಷದವರು ಇದ್ದಾರೆ. ಇದಕೆಲ್ಲ ನಾನು ಹೆದರಲ್ಲ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಟಿಪ್ಪರಗೆ ವಿದ್ಯುತ್ ಸ್ಪರ್ಶ; ಚಾಲಕ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಟಿಪ್ಪರ ಮೂಲಕ ವೇಸ್ಟೇಜ್ ಕಟಿಂಗ್ ಡಾಂಬರನ್ನು ಅನಲೋಡ ಮಾಡುವಾಗ ವಿದ್ಯುತ್ ಸ್ಪರ್ಶವಾಗಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹಳೆ ರಸ್ತೆಯ ಡಾಂಬರನ್ನು ಕಿತ್ತು ಟಿಪ್ಪರ ಮೂಲಕ ಮಲಪ್ರಭಾ ನದಿಗೆ ಹೋಗುವ ಹಳೆ ಸೇತುವೆಯ ಬಳಿ ಅನಲೋಡ ಮಾಡುವಾಗ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ಟಿಪ್ಪರಗೆ ಸ್ಪರ್ಶವಾಗಿದ್ದು, ಚಾಲಕ ಮೋತಿಲಾಲ್ ನಾಮದೇವ ಲಮಾಣಿ (22) ಎಂಬಾತ ಮೃತಪಟ್ಟಿದ್ದಾನೆ.

ರಾಜದೀಪ ಕಂಪನಿಯು ಯಾವುದೇ ಮುನ್ನೆಚ್ಚರಿಕೆ ತಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜದೀಪ ಕಂಪನಿಯ ಸೂಪರ್ ವೈಸರ್ ಮೇಲೆ ಪ್ರಕರಣ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇಸ್ಪೀಟು ಜೂಜಾಟ; 13 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಜನರ ತಂಡದ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ‌ ಗ್ರಾಮದ ಜೋಕುಮಾರ ಕೆರೆ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ವೆಂಕಟೇಶ ಹಾಲಪ್ಪ ಮಾಯಕೊಂಡ, ಫಕ್ಕೀರೇಶ್ ರಾಮಪ್ಪ ಸಾಲಿ, ಆಂಜನೇಯ ರಾಮಪ್ಪ ನೆನಗನಹಳ್ಳಿ, ಸಿದ್ದಪ್ಪ ಬಸಪ್ಪ ಕುರಿ, ಹಜರತ್ ಅಲಿ ಮುನಾಫ್ ಕರಕಿ, ವಿಜಯಕುಮಾರ್ ಬಸವಣ್ಣೆಪ್ಪ ಕಡೆಮನಿ, ಕರಿಯಪ್ಪ ನೀಲಪ್ಪ ಮುದಿಯಮ್ಮನವರ್, ಫಕ್ಕೀರೇಶ್ ನಿಂಗಪ್ಪ ಕಂಬಳಿ, ಮಲ್ಲಪ್ಪ ನಿಂಗಪ್ಪ ಜಟ್ಟೆಣ್ಣವರ, ಮಂಜುನಾಥ್ ತಿರಕಪ್ಪ ಪಟ್ಟೇದ, ಬಾಳಪ್ಪ ಸುರೇಶಪ್ಪ ಕಟ್ಟಿಮನಿ, ಹನಮಂತಪ್ಪ ಗೋವಿಂದಪ್ಪ ಹಂಗನಕಟ್ಟಿ, ಜಗದೀಶ್ ಬಸವಣ್ಣೆಪ್ಪ ಕಡೇಮನಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 2230 ರೂ,ಗಳನ್ನು ಜಪ್ತಿ ಮಾಡಲಾಗಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ಯಾಮವ್ವ ದೇಗುಲದ ಗೋಪುರಕ್ಕೆ ಸಿಡಿಲು!
ಮೆಡ್ಲೇರಿ ಬೀರಪ್ಪ ದೇವರ ಪವಾಡ: ಮಳೆಯಲ್ಲೂ ಉರಿಯಿತು ಪ್ರಸಾದದ ಒಲೆ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಹಾವೇರಿಯಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಗುತ್ತಲ ಸಮೀಪದ ನೆಗಳೂರು ಗ್ರಾಮದಲ್ಲಿ ತಡರಾತ್ರಿ ಸಿಡಿಲು ಬಡಿದು ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದ ಗೋಪುರ ಭಗ್ನಗೊಂಡಿದೆ. ಇದರಿಂದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೆಡ್ಲೇರಿ ಬೀರಪ್ಪ ದೇವರ ಪವಾಡ

ಧೋ… ಎಂದು ಸುರಿಯುತ್ತಿರುವ ಮಳೆಯಲ್ಲೂ ಕಟ್ಟಿಗೆಯ ಒಲೆ ಹೊತ್ತಿ ಉರಿಯುದನ್ನು ಕಂಡು ಜನರು ಮೂಕವಿಸ್ಮಿತರಾದರು. ಮೆಡ್ಲೇರಿ ಬೀರಪ್ಪ ದೇವರ ಪವಾಡ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಮೆಡ್ಲೇರಿಯಲ್ಲೂ ಧಾರಾಕಾರ ಮಳೆಯಾಗಿದೆ. ಆದರೆ, ಬೀರಪ್ಪ ದೇವರಿಗೆ ಪ್ರಸಾದ ಮಾಡಲು ದೇವಸ್ಥಾನದ ಮುಂದೆ ಹಚ್ಚಿದ ಸೌದೆ ಒಲೆ ಮಳೆಯ ನಡುವೆಯೂ ಹಾಗೆಯೇ ಉರಿಯುತ್ತಿತ್ತು. ಹೀಗಾಗಿ, ಇದೊಂದು ಪವಾಡವೆಂದು ಭಕ್ತರು ನಂಬಿದ್ದಾರೆ.

ಬಿಎಸ್‌ವೈ ಭೇಟಿ ಮಾಡಿದ್ದು ಸಾಬೀತಾದರೆ ರಾಜಕೀಯ ಸನ್ಯಾಸ: ಸಿದ್ದು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಯಡಿಯೂರಪ್ಪರನ್ನು ಅವರ ಹುಟ್ಟುಹಬ್ಬದ ವೇಳೆ ಭೇಟಿ ಮಾಡಿದ್ದೆ. ನಂತರ ಭೇಟಿ ಮಾಡಿಯೇ ಇಲ್ಲ. ಭೇಟಿ ಮಾಡಿದ್ದು ಪ್ರೂವ್ ಮಾಡಿದ್ರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ಸಿಎಂ ಭೇಟಿ ಮಾಡಿಲ್ಲ. ಸಭೆ, ಸದನದಲ್ಲಿ ಭೇಟಿ ಬಿಟ್ಟರೆ ವೈಯಕ್ತಿಕವಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿಯೇ ಇಲ್ಲ.

ನಾನು ತಾಲೂಕು ಬೋರ್ಡ್ ಮೆಂಬರ್ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಸಹ ಅಧಿಕಾರದಲ್ಲಿದ್ದ ವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ಧಾಂತ. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲ ಅದು ಏನು ?
ಆಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ
ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತಗೋಲಿಕ್ಕೆ ಹೋಗಿದ್ರಾ ಅಂತವರಿಂದ ಪಾಠ ಕಲಿಯಬೇಕಾಗಿ ಬಂದಿರೋದು ನಮ್ಮ ದುಃಸ್ಥಿತಿ ಎಂದರು.

ಪ್ರಧಾನಿ ಬಿಜೆಪಿಯವರು, ಯಡಿಯೂರಪ್ಪ ಸಹ ಬಿಜೆಪಿಯಲ್ಲಿದ್ದಾರೆ. ನನ್ನ ಮಾತು ಕೇಳಿ ಐಟಿ ರೇಡ್ ಮಾಡ್ತಾರಾ ಎಂದು ಪ್ರಶ್ನಿಸಿದರು.

ಬೈಕ್ ಗೆ ಕ್ಯಾಂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ತುಮಕೂರು

ಟಿವಿಎಸ್ ಬೈಕ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮುಂದೆ ಹೊರಟಿದ್ದ ಬೈಕ್ ಗೆ ಹಿಂದಿನಿಂದ ಕ್ಯಾಂಟರ್ ಗುದ್ದಿದಾಗ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಸವಾರ ಪುಟಿದು ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾನೆ.

ಡಿವೈಡರ್ ಗೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಲೀಕ್ ಆಗಿ ಬೈಕ್ ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ತುಮಕೂರು ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!