Home Blog Page 3336

ಭಾರೀ ಮಳೆ ಹಿನ್ನೆಲೆ; ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ವೃದ್ಧೆ ರಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು. ಬುಧವಾರ ಸಂಜೆ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಜಮೀನಿಗೆ ಹೋಗಿ ಮನೆಗೆ ವಾಪಾಸು ಬರುವಾಗ ನೀರಿನಲ್ಲಿ ಸಿಲುಕಿದ್ದ ವೃದ್ಧೆಯನ್ನು ಗ್ರಾಮದ ಯಂಕಪ್ಪ ಹಾಗೂ ಶರಣಪ್ಪ ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ್ದಾರೆ.

ಮುಂಜಾನೆಯಿಂದಲೂ ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಹಾಗೂ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತದೆ. ಕುರ್ಲಗೇರಿ ಹಾಗೂ ಯಾವಗಲ್ ಗ್ರಾಮದ ಬಳಿ ಇರುವ ಸೇತುವೆಗಳು ಜಲಾವೃತವಾಗಿದ್ದು, ನರಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ‌ಕಡಿತವಾಗಿದೆ.

ಪ್ರವಾಹದಿಂದ ರೈತರು ಬೆಳೆದ ಬೆಳೆಗಳು ನೀರುಪಾಲಾಗಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಿ, ಈರುಳ್ಳಿ ಹಾಗೂ ಗೋವಿನಜೋಳ ಬೆಳೆಗಳಲ್ಲಿ ನೀರು ನಿಂತು ಹಾನಿಯಾಗಿದೆ.

ಸಿನಿಮೀಯ ಸ್ಟೈಲ್ ನಲ್ಲಿ ಪೊಲೀಸರ ಕಾರ್ಯಾಚರಣೆ; ಅಕ್ರಮ ಹಣ ಜಪ್ತಿ, ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಹಾವೇರಿ

ದಾಖಲೆ ಇಲ್ಲದೆ ಅಕ್ರಮವಾಗಿ‌ ಹಣ ಸಾಗಾಣಿಕೆ ಮಾಡ್ತಿದ್ದ ನಾಲ್ವರನ್ನು ಹಾನಗಲ್ ಪೊಲೀಸರು ‌ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಎಂಬತ್ತೈದು ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದೆ.

ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ಮಾಡಲಾಗುತ್ತದೆ ಎಂಬ ಖಚಿತವಾಗಿ ಬಂದ ಮಾಹಿತಿ ಆಧರಿಸಿ ಹಾನಗಲ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಜೀವದ ಹಂಗು ಲೆಕ್ಕಿಸದೆ ಚಲಿಸುತ್ತಿದ್ದ ಕಾರ ತಡೆಯಲು ಪೊಲೀಸರು ಮುಂದಾದಾಗ ಆರೋಪಿಗಳು, ಕಾರ ಸ್ಪೀಡ್ ಮಾಡಿದ್ದಾರೆ, ಆಗ ಕಾರ ಹಿಡಿಯಲು ಪ್ರಯತ್ನ ಮಾಡುತ್ತಿದ್ದ ಓರ್ವ ಪೊಲೀಸ್ ಕೆಳಕ್ಕೆ ಬಿದ್ದ ಘಟನೆಯು ನಡೆದಿದೆ. ಇದರಿಂದ ಎದೆಗುಂದದ ಪೊಲೀಸರು, ಕಾರ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರಿಂದ ಬ್ಯಾಗಿನಲ್ಲಿ ತುಂಬಿಟ್ಟಿದ್ದ ಐನೂರು, ಇನ್ನೂರು, ನೂರು ಮತ್ತು ಐವತ್ತು ರೂಪಾಯಿಗಳ ಮುಖ ಬೆಲೆಯ ಎಂಬತ್ತೈದು ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.

ನೀಲಿ ಬಣ್ಣದ ಗ್ಲಾಂಜಾ‌‌ ಕಾರಿನಲ್ಲಿ ಈ ಅಕ್ರಮ ಹಣ ಆರೋಪಿಗಳು ಸಾಗಿಸುತ್ತಿದ್ದರು ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್ (31) ಇಮ್ರಾನ್ ಖಾನ್ (27) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23) ಮತ್ತು ಸಯ್ಯದ ಅಮೀನ್ (29) ಬಂಧಿತ ಆರೋಪಿಗಳು.

ಎಸ್ಪಿ ಹನುಮಂತರಾಯ ಅವರು ನೀಡಿದ ಮಾಹಿತಿ ಮೇರೆಗೆ ಹಾನಗಲ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಈ ಕಾ ಕಾರ್ಯಾಚರಣೆಯಲ್ಲಿ ಇದ್ದರು.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

‘ನಗರದ ಅಭಿವೃದ್ಧಿಯೇ ನನ್ನ ಕನಸು’; ನಗರಸಭೆ ಅಧ್ಯಕ್ಷೆ ಉಷಾ ದಾಸರ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ ನಗರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಕನಸು, ಗುರಿಯಾಗಿದೆ. ವಿರೋಧ ಪಕ್ಷದವರ ಅನಗತ್ಯ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಸಿಕೊಳ್ಳದೇ, ಅವಳಿ ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದ್ದಾರೆ.

ಅವರು ಮಂಗಳವಾರ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಕಾಂಗ್ರೆಸ್‌ನ ಜನವಿರೋಧಿ, ದಬ್ಬಾಳಿಕೆ, ದುರಾಡಳಿತದಿಂದ ಬೇಸತ್ತಿದ್ದ ಅವಳಿ ನಗರದ ಜನರು ಕಳೆದ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಜನರ ನಿರೀಕ್ಷೆಯಂತೆ ಅವಳಿ ನಗರದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುತ್ತಿದ್ದೇವೆ. ನಾನು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸಿಬ್ಬಂದಿಗಳ ಕೊರತೆಯ ಬಗ್ಗೆ ಪೌರಾಡಳಿತ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನಗರಸಭೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಈ ಹಿಂದಿದ್ದ ಮುಖಂಡರೆಲ್ಲ ಏನೆಲ್ಲಾ ಮಾಡಿದ್ದಾರೆ ಎಂಬುವುದು ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ ನಗರಸಭೆ ಅಧ್ಯಕ್ಷರು ಸರಿಯಿಲ್ಲದ್ದರಿಂದ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಿಡಿತ ಇಲ್ಲದಂತಾಗಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪ ಅಸಂಬದ್ಧವಾಗಿದೆ. ಮನೆಯ ಯಜಮಾನನೆಂದರೆ ಮನೆಯ ಇತರ ಕುಟುಂಬ ಸದಸ್ಯರೊಂದಿಗೆ( ಅಧಿಕಾರಿ, ಸಿಬ್ಬಂದಿಗಳು) ಗೌರವಯುತವಾಗಿ ವರ್ತಿಸಬೇಕು, ನಡೆದುಕೊಳ್ಳಬೇಕು. ಪ್ರತಿಯೊಬ್ಬರೊಂದಿಗೂ ಸಮನ್ವಯ ಸಾಧಿಸಿ ಮನೆಯ ಪರಿಸರ(ಆಡಳಿತ ವ್ಯವಸ್ಥೆ) ಹಾಳಾಗದಂತೆ ನಿಗಾವಹಿಸಿ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಮನೆಯ ಯಜಮಾನನ ಜವಾಬ್ದಾರಿಯಾಗಿದ್ದು, ಆಡಳಿತ ಪಕ್ಷ ಈ ನೀತಿಯನ್ನು ಅಚ್ಚುಕಟ್ಟಾಗಿ ಅನುಸರಿಸುತ್ತಿದೆ.

ಅಧಿಕಾರಿ, ಸಿಬ್ಬಂದಿಗಳನ್ನು ಹೆದರಿಸಿ, ಬೆದರಿಸಿ ಹಿಡಿತದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದು ನಮ್ಮ ಸಂಸ್ಕೃತಿ ಅಲ್ಲ. ಅದೇನಿದ್ದರೂ ಕಾಂಗ್ರೆಸ್ಸಿಗರ ಸಂಸ್ಕೃತಿ ಎಂದು ಕಿಡಿ ಕಾರಿದ್ದಾರೆ.

ಸುಮಾರು ೧೪೯ ವರ್ಷಗಳ ಇತಿಹಾಸ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ, ಚರಂಡಿ ಹೀಗೆ ಅನೇಕ ವರ್ಷಗಳಿಂದ ಸಾಕಷ್ಟು ಜಟಿಲ ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ-೪ನೇ ಹಂತದಲ್ಲಿ ಪ್ರತಿ ವಾರ್ಡಿಗೂ ೫೦ ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದೇವೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ತ್ವರಿತವಾಗಿ ಸಿದ್ಧಪಡಿಸುತ್ತಿದ್ದಾರೆ.

ಎಸ್ಎಫ್ ಸಿ, ೧೫ನೇ ಹಣಕಾಸು ಯೋಜನೆಯಡಿ ಪ್ರತಿ ವಾರ್ಡಿಗೂ ೧೦ ರಿಂದ ೧೫ ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದೇವೆ. ಅದರಂತೆ, ನಗರಸಭೆ ಅನುದಾನ(ಜನರಲ್ ಫಂಡ್)ದಲ್ಲಿ ಪ್ರತಿ ವಾರ್ಡಿಗೂ ೧೫ ಲಕ್ಷ ರೂ. ಹಂಚಿಕೆ ಮಾಡಿರುವುದನ್ನು ಕಾಂಗ್ರೆಸ್ ಸದಸ್ಯರು ಮರೆತಂತಿದೆ. ಅಲ್ಲದೇ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದಕ್ಕಿಂತ ಮೊದಲು ಅದರದ್ದೇ ಆದ ಟೆಂಡರ್ ಪ್ರಕ್ರಿಯೆಗಳಿದ್ದು, ಅವುಗಳನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಹೀಗೆ ಆಧಾರ ರಹಿತವಾಗಿ ಆರೋಪಿಸುವುದಕ್ಕಿಂತ ಮೊದಲು ವಿರೋಧ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.

ದಲಿತ ಮಹಿಳೆಯೊಬ್ಬಳು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಅಚ್ಚುಕಟ್ಟಾದ ಆಡಳಿತ ನೀಡುತ್ತಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲವೆಂಬ ಕುಂಟು ನೆಪದೊಂದಿಗೆ ಕಾಂಗ್ರೆಸ್ ದಲಿತ, ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಅಧಿಕಾರದ ದಾಹದಿಂದಾಗಿ ಪದೇ ಪದೇ ಈ ರೀತಿಯಾಗಿ ತಳ ಬುಡವಿಲ್ಲದ ಸುಳ್ಳು ಆರೋಪಗಳನ್ನು ಆಡಳಿತ ಪಕ್ಷದ ಮೇಲೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ಆರೋಪಕ್ಕೆ ಅವಳಿ ನಗರದ ಪ್ರಜ್ಞಾವಂತ ಜನರು ಮನ್ನಣೆ ನೀಡುವುದಿಲ್ಲವೆಂಬ ವಿಶ್ವಾಸ ನನಗಿದೆ. ಏಕೆಂದರೆ, ನಿಮ್ಮ ಬೂಟಾಟಿಕೆಯನ್ನು ಸಾಕಷ್ಟು ವರ್ಷಗಳಿಂದ ಕಣ್ಣಾರೆ ಕಂಡಿದ್ದಾರೆ.

-ಉಷಾ ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ

ಬೆಲೆ ಏರಿಕೆ ಮಧ್ಯ ವಿಜೃಂಭಣೆಯ ಗಣೇಶೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಏನೆಲ್ಲ ಸಂಕಷ್ಟಗಳಿದ್ದರೂ ವಿಘ್ನನಾಶಕ ತನ್ನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿಸಿಕೊಳ್ಳುತ್ತಾನೆ ಎಂಬ ಸಾರ್ವತ್ರಿಕ ಮಾತಿನಂತೆ ಈ ವರ್ಷ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದರೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದಾರೆ.

ಹಬ್ಬದ ಮುನ್ನಾದಿನ ಮಂಗಳವಾರ ಜನತೆ ಪಟ್ಟಣದ ಮಾರ್ಕೆಟ್‌ನಲ್ಲಿ ಹೂವು, ಹಣ್ಣು, ತಳಿರು-ತೋರಣ, ದಿನಸಿ, ಅಲಂಕಾರಿಕ ಮತ್ತು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು.

ಮಂಗಳವಾರ ಬೆಳ್ಳಂಬೆಳಿಗ್ಗೆಯೇ ೩ ಗಂಟೆಗಳ ಕಾಲ ಕುಂಭದ್ರೋಣ ಮಳೆ ಸುರಿದು ಹಬ್ಬದ ವಾತಾವರಣಕ್ಕೆ ಮಂಕು ಕವಿದಂತಾಗಿತ್ತು. ಮದ್ಯಾಹ್ನದ ವೇಳೆಗೆ ಬಿಸಿಲು ಬಿದ್ದಿದ್ದರಿಂದ ವ್ಯಾಪಾರ-ವಹಿವಾಟು ಚೆನ್ನಾಗಿ ನಡೆದವು. ಪರಿಸರಸ್ನೇಹಿ ಗಣೇಶ ಮೂರ್ತಿ, ಹೂವು, ಹಣ್ಣು, ತಳಿರು ತೋರಣ, ಅಲಂಕಾರಿಕ ವಸ್ತುಗಳು, ಪಟಾಕಿ ವ್ಯಾಪಾರ ಕೊಂಚ ಜೋರಾಗಿಯೇ ಕಂಡು ಬರುತ್ತಿದೆ.

ಹಣ್ಣುಗಳ ವ್ಯಾಪಾರಸ್ಥರು ಡಜನ್ ಬಾಳೆ, ೨ ಸೇಬು, ಕಿತ್ತಳೆ, ಚಿಕ್ಕೂ, ಮೋಸಂಬಿ ಸೇರಿ ಒಟ್ಟು ೫ ತರಹದ ಹಣ್ಣುಗಳ ಸೆಟ್‌ಗೆ ೧೫೦-೨೦೦ ರೂ.ವರೆಗೆ ಮಾರಾಟ ಮಾಡಿದರು. ದಿನಸಿ, ಅಲಂಕಾರಿಕ ವಸ್ತುಗಳು, ಹೂವು, ಬಾಳೆ, ಕಬ್ಬುಗಳ ಬೆಲೆ ಹೆಚ್ಚಳವಾಗಿದ್ದರೂ ಜನರು ಖರೀದಿಸುತ್ತಿರುವುದು ಕಂಡುಬಂತು.

ಗದಗ ಜಿಲ್ಲಾದ್ಯಂತ ಭಾರಿ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ‌ ಆದೇಶ

0

ವಿಜಯಸಾಕ್ಷಿ ಸುದ್ದಿ, ಗದಗ

ಮಂಗಳವಾರ ನಸುಕಿನಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಮಳೆಯ ಹಿನ್ನೆಲೆಯಲ್ಲಿ ಇಂದು ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ವಿಜಯಸಾಕ್ಷಿಗೆ ತಿಳಿಸಿದರು.

ಹವಾಮಾನ ಇಲಾಖೆಯ ವರದಿ ಪ್ರಕಾರ ಇನ್ನೂ ಎರಡು ಮೂರು ದಿನಗಳ ಕಾಲ ಮಳೆಯಾಗುವ ಸೂಚನೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕೋರಿದೆ.

ಗನ್ ಮೂಲಕ ಅರಿವಳಿಕೆ ಚುಚ್ಚುಮದ್ದು; “ಆಪರೇಷನ್ ಮಂಕಿ” ಸಕ್ಸಸ್

-ಕಣ್ಮುಚ್ಚಿದ ನಾಯಿಮರಿ; ಕಂಡಕಂಡವರ ಮೇಲೆ ಎರಗಲು ಮುಂದಾಗುತ್ತಿದ್ದ ಮಂಗ!

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಸುಮಾರು ಹತ್ತು ದಿನಗಳಿಂದ ನಾಯಿಮರಿ ಹೊತ್ತು ಥೇಟ್ ತನ್ನ ಸಂತಾನವೆಂಬಂತೆ ಸಾಕುತ್ತಿದ್ದ ಮಂಗಣ್ಣ ಈಗ ದುಃಖದ ಜೊತೆಗೆ ಆಕ್ರೋಶಗೊಂಡ ಕಂಡಕಂಡವರ ಮೇಲೆ ಎರಗಲು ಮುಂದಾಗಿತ್ತು. ಮಂಗಣ್ಣನ ಈ ಸ್ಥಿತಿಗೆ ಕಾರಣ, ನಾಯಿಮರಿಯ ಮರಣ!

ಇದನ್ನೂ ಓದಿ ಕಣ್ಮುಚ್ಚಿದ ನಾಯಿಮರಿ; ದುಃಖದ ಜೊತೆ ಆಕ್ರೋಶಗೊಂಡ ಮಂಗಣ್ಣ!

ಹೌದು.. ಆಗಷ್ಟೇ ಜನಿಸಿ, ಇನ್ನೂ ಕಣ್ಣು ಬಿಡದ ಪುಟ್ಟ ನಾಯಿಮರಿಯನ್ನು ಮಂಗಣ್ಣ ತನ್ನ ಕಂಕುಳಲ್ಲಿ ಇಟ್ಟುಕೊಂಡು ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ರಸ್ತೆಯ ಬಡಾವಣೆಗಳಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ವಿಜಯಸಾಕ್ಷಿ ವರದಿ ಮಾಡಿತ್ತು.

ಇದು ಮಂಗಣ್ಣನ ಮಮಕಾರವೋ? ನಾಯಿಮರಿಯ ಸಂಕಟವೋ? ಎಂಬ ದ್ವಂದ್ವ ಜನರಲ್ಲಿತ್ತು. ಮಂಗಣ್ಣ ಆ ನಾಯಿಮರಿಯನ್ನು ಹೀಗೇ ಹೊತ್ತು ತಿರುಗಿದರೆ ತೊಂದರೆ ಉದ್ಭವಿಸುವ ಆತಂಕವೂ ಜನರದ್ದಾಗಿತ್ತು. ಹಾಗಾಗಿ ಜನ ನಾಯಿಮರಿಯನ್ನು ಮಂಗಣ್ಣನಿಂದ ಬಿಡಿಸಲು ಶತಾಯಗತಾಯ ಪ್ರಯತ್ನ ಮಾಡಿದರೂ ಮಂಗಣ್ಣ ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ.

ಕೊನೆಗೂ ಜನರ ಆತಂಕ ನಿಜವಾಗಿದೆ. ನಾಯಿಮರಿ ಅಸುನೀಗಿದೆ. ಇದರಿಂದ ದುಃಖದ ಜೊತೆಗೆ ಮತ್ತಷ್ಟೂ ಆಕ್ರೋಶಗೊಂಡಿರುವ ಮಂಗಣ್ಣ ಹತ್ತಿರ ಬಂದವರ ಮೇಲೆ ಎರಗಿ ಕ್ರೋಧ ವ್ಯಕ್ತಪಡಿಸುತ್ತಿತ್ತು ಎನ್ನಲಾಗಿದೆ.

ನಾಯಿಮರಿಯ ಜೀವ ಹೋದರೂ ಜೊತೆಯಲ್ಲೇ ಕರೆದೊಯ್ಯುತ್ತಿರುವ ಮಂಗಣ್ಣನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯಾಧಿಕಾರಿಗಳ ತಂಡ “ಆಪರೇಷನ್ ಮಂಕಿ” ಕಾರ್ಯಾಚರಣೆ ನಡೆಸಿ ಈಗ ಕಪ್ಪತಗುಡ್ಡಕ್ಕೆ ಬಿಟ್ಟು ಬಂದಿದ್ದಾರೆ.

ಅರವಳಿಕೆ ಚುಚ್ಚುಮದ್ದು ನೀಡಿದಾಗ ಬಲೆಗೆ ಬಿತ್ತು‌ ಮಂಗ!:

ಸತ್ತ‌ ನಾಯಿಮರಿಯನ್ನೇ ಹೊತ್ತು ತಿರುಗುತ್ತಿದ್ದ ಮಂಗಣ್ಣನ ಸ್ವಭಾವ ಸಂಪೂರ್ಣ ಬದಲಾಗಿತ್ತು. ಯಾರಾದರೂ ಹತ್ತಿರಕ್ಕೆ ಹೋದರೆ ದಾಳಿ ಮಾಡಲು ಮುಂದಾಗುತ್ತಿತ್ತು. ಹಾಗಾಗಿ ಸೋಮವಾರ ಮಧ್ಯಾಹ್ನದಿಂದ‌ ಮಂಗನನ್ನು ಬಲೆಗೆ‌ ಬೀಳಿಸುವ ಕೆಲಸ ಸುಲಭದ್ದಾಗಿರಲಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶು ವೈದ್ಯಕೀಯ ಸಿಬ್ಬಂದಿ ಸೇರಿ ಚರ್ಚಿಸಿ ಮಂಗನ ಪ್ರಾಣಕ್ಕೆ ಅಪಾಯ ಒದಗದಂತೆ ಅರವಳಿಕೆ ಚುಚ್ಚುಮದ್ದು ನೀಡಲು‌ ನಿರ್ಧರಿಸಿದರು. ಗನ್ ಮೂಲಕ ದೂರದಿಂದ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಮಂಗಣ್ಣ ಅರೆಪ್ರಜ್ಞಾವಸ್ಥೆಗೆ ಜಾರಿದ ಆನಂತರ ಬಲೆಯಲ್ಲಿ ಹಾಕಿ ಕಪ್ಪತ್ತಗುಡ್ಡ ವನದಲ್ಲಿ ಬಿಟ್ಟು ಬರಲಾಯಿತು.

ಆಪರೇಷನ್ ಮಂಕಿ ಸಕ್ಸಸ್

ಆಪರೇಷನ್ ಮಂಕಿ ಕಾರ್ಯಾಚರಣೆ ಯಶಸ್ವಿಯಾಗಲು ಗದಗ ಪಾಲಿಕ್ಲಿನಿಕ್‌ನ ಪಶುವೈದ್ಯಾಧಿಕಾರಿ ಡಾ.ಜಟ್ಟೆನ್ನವರ್, ಗದಗ ಮೃಗಾಲಯದ ಪಶು ವೈದ್ಯಕೀಯ ಸಹಾಯಕ ನಿಖಿಲ್ ಕುಲಕರ್ಣಿ, ಉಪವಲಯ ಅರಣ್ಯಾಧಿಕಾರಿ ಎಂ.ಎಸ್. ನಾಗಮ್ಮನವರ್, ಅರಣ್ಯ ರಕ್ಷಕರು ಶರಣಪ್ಪ ನೀರಲಗಿ, ಅರಣ್ಯ ಸಿಬ್ಬಂದಿ ಹನುಮಂತಗೌಡ ಪಾಟೀಲ ಶ್ರಮಿಸಿದರು.

“ಕೆಲವೊಮ್ಮೆ ಕೆಲವೊಂದು ಪ್ರಾಣಿಗಳಲ್ಲಿ ವಿಚಿತ್ರ ವರ್ತನೆ ಕಾಣುತ್ತದೆ. ಕೆಲ ಮಂಗಗಳು ಕೇವಲ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡುತ್ತವೆ. ಅದಕ್ಕೆ ಪ್ರಾಣಿಗಳ ಬದುಕಿನಲ್ಲಿ ಏನೋ ಘಟನೆ ನಡೆದಿರುತ್ತದೆ. ಆಗ ಈ ರೀತಿಯ ವರ್ತನೆಗಳು ಕಾಣಿಸುತ್ತವೆ. ಸೆರೆ ಹಿಡಿದ‌ ಮಂಗನಿಗೆ ಹುಚ್ಚು ಹಿಡಿದಿರಿಲಿಲ್ಲ. ನಾಯಿಮರಿ ಹೊತ್ತು ತಿರುಗುತ್ತಿದ್ದ ಬಗ್ಗೆ‌ ನಿಖರವಾಗಿ ಹೇಳಲಾಗದು.”
-ನಿಖಿಲ್ ಕುಲಕರ್ಣಿ, ಪಶು ವೈದ್ಯಕೀಯ ಸಹಾಯಕ, ಗದಗ ಮೃಗಾಲಯ.

ಕಣ್ಮುಚ್ಚಿದ ನಾಯಿಮರಿ; ದುಃಖದ ಜೊತೆ ಆಕ್ರೋಶಗೊಂಡ ಮಂಗಣ್ಣ!

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಸುಮಾರು ಹತ್ತು ದಿನಗಳಿಂದ ನಾಯಿಮರಿ ಹೊತ್ತು ಥೇಟ್ ತನ್ನ ಸಂತಾನವೆಂಬಂತೆ ಸಾಕುತ್ತಿದ್ದ ಮಂಗಣ್ಣ ಈಗ ದುಃಖದ ಜೊತೆಗೆ ಆಕ್ರೋಶಗೊಂಡು ಕಂಡಕಂಡವರ ಮೇಲೆ ಎರಗಲು ಮುಂದಾಗಿದೆ. ಮಂಗಣ್ಣನ ಈ ಸ್ಥಿತಿಗೆ ಕಾರಣ, ನಾಯಿಮರಿಯ ಮರಣ!

ಇದನ್ನೂ ಓದಿ ಮಂಗನ ಮಡಿಲಲ್ಲಿ ನಾಯಿಮರಿ; ಇದೆಂಥಾ ಮೂಕಪ್ರೀತಿ?

ಹೌದು.. ಆಗಷ್ಟೇ ಜನಿಸಿ, ಇನ್ನೂ ಕಣ್ಣು ಬಿಡದ ಪುಟ್ಟ ನಾಯಿಮರಿಯನ್ನು ಮಂಗಣ್ಣ ತನ್ನ ಕಂಕುಳಲ್ಲಿ ಇಟ್ಟುಕೊಂಡು ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ರಸ್ತೆಯ ಬಡಾವಣೆಗಳಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ವಿಜಯಸಾಕ್ಷಿ ವರದಿ ಮಾಡಿತ್ತು.

ಇದು ಮಂಗಣ್ಣನ ಮಮಕಾರವೋ? ನಾಯಿಮರಿಯ ಸಂಕಟವೋ? ಎಂಬ ದ್ವಂದ್ವ ಜನರಲ್ಲಿತ್ತು. ಮಂಗಣ್ಣ ಆ ನಾಯಿಮರಿಯನ್ನು ಹೀಗೇ ಹೊತ್ತು ತಿರುಗಿದರೆ ತೊಂದರೆ ಉದ್ಭವಿಸುವ ಆತಂಕವೂ ಜನರದ್ದಾಗಿತ್ತು. ಹಾಗಾಗಿ ಜನ ನಾಯಿಮರಿಯನ್ನು ಮಂಗಣ್ಣನಿಂದ ಬಿಡಿಸಲು ಶತಾಯಗತಾಯ ಪ್ರಯತ್ನ ಮಾಡಿದರೂ ಮಂಗಣ್ಣ ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ.

ಕೊನೆಗೂ ಜನರ ಆತಂಕ ನಿಜವಾಗಿದೆ. ನಾಯಿಮರಿ ಅಸುನೀಗಿದೆ. ಇದರಿಂದ ದುಃಖದ ಜೊತೆಗೆ ಮತ್ತಷ್ಟೂ ಆಕ್ರೋಶಗೊಂಡಿರುವ ಮಂಗಣ್ಣ ಹತ್ತಿರ ಬಂದವರ ಮೇಲೆ ಎರಗಿ ಕ್ರೋಧ ವ್ಯಕ್ತಪಡಿಸುತ್ತಿದೆ ಎನ್ನಲಾಗಿದೆ.

ನಾಯಿಮರಿಯ ಜೀವ ಹೋದರೂ ಜೊತೆಯಲ್ಲೇ ಕರೆದೊಯ್ಯುತ್ತಿರುವ ಮಂಗಣ್ಣನನ್ನು ಹಿಡಿಯಲು ಅರಣ್ಯ ಇಲಾಖೆ “ಆಪರೇಷನ್ ಮಂಕಿ” ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಭೀಕರ ರಸ್ತೆ ಅಪಘಾತ; ರೈತ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೋಟಾರು ಸೈಕಲ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಸಮೀಪದ ಹೊಂಬಳ ರಸ್ತೆಯಲ್ಲಿ ಜರುಗಿದೆ.

ಪಶು ವಿಶ್ವವಿದ್ಯಾಲಯದ ಸಮೀಪ ನಡೆದ ಈ ದುರಂತದಲ್ಲಿ ಜಮೀನಿಗೆ ಬುತ್ತಿ ಕೊಡಲು ಟಿವಿಎಸ್ ಎಕ್ಸಲ್ ಮೋಟಾರು ಸೈಕಲ್‌ ಮೇಲೆ ಹೊರಟಿದ್ದ ಗದಗನ ಹಾಳದಿಬ್ಬ ನಿವಾಸಿ ಮಂಜುನಾಥ್ ಕಲಬಂಡಿ (27) ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು.

ಗದಗ ನಗರದಿಂದ ಹೊಂಬಳ ಕಡೆಗೆ ಹೊರಟಿದ್ದ ಕಾರು, ಮೋಟಾರು ಸೈಕಲ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸುಮಾರು 100ಮೀಟರ್ ನಷ್ಟು ದೂರಕ್ಕೆ ತಳ್ಳಿಕೊಂಡು ಹೋಗಿದೆ ಎನ್ನಲಾಗಿದೆ.

ಕಾರು- ಲಾರಿ ನಡುವೆ ಅಪಘಾತ; ಸ್ಥಳದಲ್ಲೇ ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಕಾರು ಮತ್ತು ಲಾರಿ ಮಧ್ಯ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ  ನಗರದ ಹೊರವಲಯದ ಸೀಬಾರದ ಹತ್ತಿರ ಗುರುವಾರ ರಾತ್ರಿ ಜರುಗಿದೆ.

ಮೃತರನ್ನು ಬೆಂಗಳೂರು ಮೂಲದ ಭೂಮಿಕ, ಸಿಂಚನ ಹಾಗೂ ಮನೀಶ್ ಎಂದು ಗುರುತಿಸಲಾಗಿದೆ. ಗಿರಿಧರ್, ಆಶಾ ಹಾಗೂ  ಲಾರಿ ಚಾಲಕನಿಗೆ ಗಂಭೀರ ಗಾಯಗೊಂಡಿದ್ದಾರೆ.

ಸ್ನೇಹಿತರೆಲ್ಲಾ  ಬೆಂಗಳೂರಿಂದ ಶಿರಡಿ ಸಾಯಿಬಾಬ ದರ್ಶನಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.

ಗಾಯಗೊಂಡ ಮೂವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗವೇ ಭೀಕರ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ರಾಜೀನಾಮೆಗೂ ಸಿದ್ಧ; ಉಮೇಶ ಕತ್ತಿ

ಸಿದ್ದರಾಮಯ್ಯ ಸುಳ್ಳು ಹೇಳಿಕೆ ಕೊಡುವದನ್ನು ನಿಲ್ಲಿಸಲಿ

ವಿಜಯಸಾಕ್ಷಿ ಸುದ್ದಿ, ಗದಗ

ಕೆಂಪಯ್ಯ ಯಾರೆಂಬುದು ಗೊತ್ತಿಲ್ಲ. ಕಾಂಟ್ರಾಕ್ಟರ್ ಅಸೋಸಿಯೇಷನ್‌ ಅಧ್ಯಕ್ಷ ಅಂತ ಹೇಳ್ತಾರೆ. ಹೀಗೆ ಅದೆಷ್ಟೋ ಅಸೋಸಿಯೇಷನ್ಗಳನ್ನು ಹುಟ್ಟುಹಾಕಿಕೊಂಡು ತಾನೇ ಅಧ್ಯಕ್ಷ ಎಂದು ಓಡಾಡುವರಿದ್ದಾರೆ. ಅಂಥವರಲ್ಲೊಬ್ಬ ಈ ಕೆಂಪಯ್ಯ. ಸಿದ್ಧರಾಮಯ್ಯ ಇವರನ್ನು ಕರೆಸಿಕೊಂಡು ಭೇಟಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. 40 ಪರ್ಸೆಟೇಜ್ ಭ್ರಷ್ಟಾಚಾರ ನಡೆದಿದೆಯೆಂಬ ಆರೋಪವನ್ನು ಮಾಡುತ್ತಿದ್ದಾರೆ. ರಾಜ್ಯದ ಜನ ಈ ಭ್ರಷ್ಟಾಚಾರವನ್ನು ಅರ್ಥಮಾಡಿಕೊಂಡರೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಗಳನ್ನು ಎಲ್ಲೂ ಅಡ್ಡಾಡಲು ಬಿಡುತ್ತಿರಲಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಉಮೇಶ ಕತ್ತಿ, ಸುಳ್ಳು ಹೇಳಿಕೆ ಕೊಡುವದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು. ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಇತಿಮಿತಿಯಲ್ಲಿ ಸರ್ಕಾರ ಎಲ್ಲಿ ಎಡವುತ್ತಿದೆ, ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಚರ್ಚೆಸೋಣ. ಅದರ ಹೊರತಾಗಿ 40/50 ಪರ್ಸೆಂಟ್ ಎಂದು ಹೇಳಿಕೆ ನೀಡುವದು ಸರಿಯಲ್ಲ. ಇಂಥ ವಿರೋಧ ಪಕ್ಷದ ನಾಯಕರನ್ನು ರಾಜ್ಯ ಎಂದೂ ಪಡೆದಿಲ್ಲ.

ಸಿದ್ಧರಾಮಯ್ಯ ಇಂಥಹ ಹೇಳಿಕೆ ನೀಡುವದನ್ನು ಕೈಬಿಡಬೇಕು. ಈಗ ಲೋಕಾಯುಕ್ತ ರಚನೆಯಾಗಿದೆ. ಸಿಬಿಐ, ಇ.ಡಿ ತನಿಖಾ ಸಂಸ್ಥೆಗಳಿವೆ. ಇನ್ನೂ ಎಲ್ಲಿಯಾದರೂ ಕೆಂಪಯ್ಯ ಅಥವಾ ಸಿದ್ಧರಾಮಯ್ಯ ಯಾರು ಬೇಕಾದರೂ ದೂರು ಕೊಡಲಿ. ಅದರ ಹೊರತಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ಕೆಲಸ ಕೈಬಿಡಿ ಎಂದು ಉಮೇಶ ಕತ್ತಿ ಒತ್ತಾಯಿಸಿದರು.

ಎಲ್ಲರ ಸರ್ಕಾರ್ ದಲ್ಲೂ ಭ್ರಷ್ಟಾಚಾರಗಳಿವೆ. ಎಲ್ಲವೂ ನಿಜವೇ. ಕುಮಾರಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡುವದಿದ್ದರೂ ಮೊದಲು ದೂರು ಕೊಡಿ. ಮಂತ್ರಿಗಳ ಮೇಲೆ, ನನ್ನ ಮೇಲೇ ಬೇಕಿದ್ದರೂ ದೂರು ಕೊಡಲಿ. ತನಿಖೆಯಾಗಲಿ. ತನಿಖೆಯೇ ನಡೆಯದೆ ಬರಿಯ ಆರೋಪಗಳನ್ನಷ್ಟೇ ಮಾಡುತ್ತಿದ್ದರೆ, ಶಿಕ್ಷೆಯಾಗುತ್ತದೆಯಾ ಎಂದು ಪ್ರಶ್ನಿಸಿದ ಅವರು, ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಿದ್ದರೆ ನಾವೆಲ್ಲಿ ಹೋಗುವದು? ಎಂದರು.

ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹವಾದರೆ ನಾನು ಸಹಿಸುವದಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವದಿಲ್ಲ. ಅದಕ್ಕಾಗಿ ರಾಜೀನಾಮೆಗೂ ಸಿದ್ಧ. ಇದರ ಮುಂದೆ ನಾನೇನೂ ಮಾಡುವಹಾಗಿಲ್ಲ ಎಂದ ಅವರು, ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು. ಯಾವಾಗ ಅಭಿವೃದ್ಧಿ ನಿಲ್ಲುತ್ತದೆಯೋ, ಆಗ ಹೋರಾಟ ಇದ್ದೇ ಇರುತ್ತದೆ. ಅಭಿವೃದ್ಧಿ ನಡೆಯುತ್ತಿದ್ದರೆ ತೊಂದರೆಯಿಲ್ಲ.

ನಾನು ಕರ್ನಾಟಕದ ರಾಜಕಾರಣಿ. ಒಂಭತ್ತು ಬಾರಿ ಎಂಎಲ್ಎ ಆಗಿದ್ದೇನೆ. ಎಂಟು ಬಾರಿ ವಿವಿಧ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದೇನೆ. ಹಾಗಿದ್ದಾಗ ನಮ್ಮವರೇ ಸಿ.ಎಂ ಇದ್ದಾಗ ಮುಖ್ಯಮಂತ್ರಿ ಖುರ್ಚಿಗೆ ಆಸೆ ಪಡುವದಿಲ್ಲ. ಜೀವನದಲ್ಲಿ ಅಂಥ ಅವಕಾಶ ಅದಾಗಿಯೇ ಬಂದರೆ ನನ್ನ ನಸೀಬು ಎಂದುಕೊಳ್ಳುತ್ತೇನೆಯೇ ಹೊರತು ನಾನಾಗಿಯೇ ಬೆನ್ನು ಹತ್ತಿ ಹೋಗುವದಿಲ್ಲ ಎಂದರು.

ಉತ್ತರ ಕರ್ನಾಟಕ ಮುಖ್ಯಮಂತ್ರಿ ನಾನಾಗುವದಿಲ್ಲ. ಅಖಂಡ ಕರ್ನಾಟಕ ಸಿ.ಎಂ ಆಗುವ ಯೋಗ್ಯತೆ ನನಗಿದೆ. ಆದರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು. ಮುಖ್ಯ ನಸೀಬು ಬೇಕ್ರೀ. ನೀವು ಹೇಳಿದಿರೆಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟರೆ ನೋಡೋಣ. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ. ನೋಡೋಣ ಬಿಡಿ ಎಂದು ಚಟಾಕಿ ಹಾರಿಸಿದರು.