Home Blog Page 3337

ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ರಾಜೀನಾಮೆಗೂ ಸಿದ್ಧ; ಉಮೇಶ ಕತ್ತಿ

ಸಿದ್ದರಾಮಯ್ಯ ಸುಳ್ಳು ಹೇಳಿಕೆ ಕೊಡುವದನ್ನು ನಿಲ್ಲಿಸಲಿ

ವಿಜಯಸಾಕ್ಷಿ ಸುದ್ದಿ, ಗದಗ

ಕೆಂಪಯ್ಯ ಯಾರೆಂಬುದು ಗೊತ್ತಿಲ್ಲ. ಕಾಂಟ್ರಾಕ್ಟರ್ ಅಸೋಸಿಯೇಷನ್‌ ಅಧ್ಯಕ್ಷ ಅಂತ ಹೇಳ್ತಾರೆ. ಹೀಗೆ ಅದೆಷ್ಟೋ ಅಸೋಸಿಯೇಷನ್ಗಳನ್ನು ಹುಟ್ಟುಹಾಕಿಕೊಂಡು ತಾನೇ ಅಧ್ಯಕ್ಷ ಎಂದು ಓಡಾಡುವರಿದ್ದಾರೆ. ಅಂಥವರಲ್ಲೊಬ್ಬ ಈ ಕೆಂಪಯ್ಯ. ಸಿದ್ಧರಾಮಯ್ಯ ಇವರನ್ನು ಕರೆಸಿಕೊಂಡು ಭೇಟಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. 40 ಪರ್ಸೆಟೇಜ್ ಭ್ರಷ್ಟಾಚಾರ ನಡೆದಿದೆಯೆಂಬ ಆರೋಪವನ್ನು ಮಾಡುತ್ತಿದ್ದಾರೆ. ರಾಜ್ಯದ ಜನ ಈ ಭ್ರಷ್ಟಾಚಾರವನ್ನು ಅರ್ಥಮಾಡಿಕೊಂಡರೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಗಳನ್ನು ಎಲ್ಲೂ ಅಡ್ಡಾಡಲು ಬಿಡುತ್ತಿರಲಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಉಮೇಶ ಕತ್ತಿ, ಸುಳ್ಳು ಹೇಳಿಕೆ ಕೊಡುವದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು. ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಇತಿಮಿತಿಯಲ್ಲಿ ಸರ್ಕಾರ ಎಲ್ಲಿ ಎಡವುತ್ತಿದೆ, ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಚರ್ಚೆಸೋಣ. ಅದರ ಹೊರತಾಗಿ 40/50 ಪರ್ಸೆಂಟ್ ಎಂದು ಹೇಳಿಕೆ ನೀಡುವದು ಸರಿಯಲ್ಲ. ಇಂಥ ವಿರೋಧ ಪಕ್ಷದ ನಾಯಕರನ್ನು ರಾಜ್ಯ ಎಂದೂ ಪಡೆದಿಲ್ಲ.

ಸಿದ್ಧರಾಮಯ್ಯ ಇಂಥಹ ಹೇಳಿಕೆ ನೀಡುವದನ್ನು ಕೈಬಿಡಬೇಕು. ಈಗ ಲೋಕಾಯುಕ್ತ ರಚನೆಯಾಗಿದೆ. ಸಿಬಿಐ, ಇ.ಡಿ ತನಿಖಾ ಸಂಸ್ಥೆಗಳಿವೆ. ಇನ್ನೂ ಎಲ್ಲಿಯಾದರೂ ಕೆಂಪಯ್ಯ ಅಥವಾ ಸಿದ್ಧರಾಮಯ್ಯ ಯಾರು ಬೇಕಾದರೂ ದೂರು ಕೊಡಲಿ. ಅದರ ಹೊರತಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ಕೆಲಸ ಕೈಬಿಡಿ ಎಂದು ಉಮೇಶ ಕತ್ತಿ ಒತ್ತಾಯಿಸಿದರು.

ಎಲ್ಲರ ಸರ್ಕಾರ್ ದಲ್ಲೂ ಭ್ರಷ್ಟಾಚಾರಗಳಿವೆ. ಎಲ್ಲವೂ ನಿಜವೇ. ಕುಮಾರಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡುವದಿದ್ದರೂ ಮೊದಲು ದೂರು ಕೊಡಿ. ಮಂತ್ರಿಗಳ ಮೇಲೆ, ನನ್ನ ಮೇಲೇ ಬೇಕಿದ್ದರೂ ದೂರು ಕೊಡಲಿ. ತನಿಖೆಯಾಗಲಿ. ತನಿಖೆಯೇ ನಡೆಯದೆ ಬರಿಯ ಆರೋಪಗಳನ್ನಷ್ಟೇ ಮಾಡುತ್ತಿದ್ದರೆ, ಶಿಕ್ಷೆಯಾಗುತ್ತದೆಯಾ ಎಂದು ಪ್ರಶ್ನಿಸಿದ ಅವರು, ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಿದ್ದರೆ ನಾವೆಲ್ಲಿ ಹೋಗುವದು? ಎಂದರು.

ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹವಾದರೆ ನಾನು ಸಹಿಸುವದಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವದಿಲ್ಲ. ಅದಕ್ಕಾಗಿ ರಾಜೀನಾಮೆಗೂ ಸಿದ್ಧ. ಇದರ ಮುಂದೆ ನಾನೇನೂ ಮಾಡುವಹಾಗಿಲ್ಲ ಎಂದ ಅವರು, ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು. ಯಾವಾಗ ಅಭಿವೃದ್ಧಿ ನಿಲ್ಲುತ್ತದೆಯೋ, ಆಗ ಹೋರಾಟ ಇದ್ದೇ ಇರುತ್ತದೆ. ಅಭಿವೃದ್ಧಿ ನಡೆಯುತ್ತಿದ್ದರೆ ತೊಂದರೆಯಿಲ್ಲ.

ನಾನು ಕರ್ನಾಟಕದ ರಾಜಕಾರಣಿ. ಒಂಭತ್ತು ಬಾರಿ ಎಂಎಲ್ಎ ಆಗಿದ್ದೇನೆ. ಎಂಟು ಬಾರಿ ವಿವಿಧ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದೇನೆ. ಹಾಗಿದ್ದಾಗ ನಮ್ಮವರೇ ಸಿ.ಎಂ ಇದ್ದಾಗ ಮುಖ್ಯಮಂತ್ರಿ ಖುರ್ಚಿಗೆ ಆಸೆ ಪಡುವದಿಲ್ಲ. ಜೀವನದಲ್ಲಿ ಅಂಥ ಅವಕಾಶ ಅದಾಗಿಯೇ ಬಂದರೆ ನನ್ನ ನಸೀಬು ಎಂದುಕೊಳ್ಳುತ್ತೇನೆಯೇ ಹೊರತು ನಾನಾಗಿಯೇ ಬೆನ್ನು ಹತ್ತಿ ಹೋಗುವದಿಲ್ಲ ಎಂದರು.

ಉತ್ತರ ಕರ್ನಾಟಕ ಮುಖ್ಯಮಂತ್ರಿ ನಾನಾಗುವದಿಲ್ಲ. ಅಖಂಡ ಕರ್ನಾಟಕ ಸಿ.ಎಂ ಆಗುವ ಯೋಗ್ಯತೆ ನನಗಿದೆ. ಆದರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು. ಮುಖ್ಯ ನಸೀಬು ಬೇಕ್ರೀ. ನೀವು ಹೇಳಿದಿರೆಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟರೆ ನೋಡೋಣ. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ. ನೋಡೋಣ ಬಿಡಿ ಎಂದು ಚಟಾಕಿ ಹಾರಿಸಿದರು.

ಪೊಲೀಸರ ಬೈಕೂ ಬಿಡದ ಚಾಲಾಕಿ ಕಳ್ಳ? ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನದ ದೃಶ್ಯ!

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಕಾಂಪೌಂಡ್ ಒಳಗೇ ನಿಮ್ಮ ಬೈಕ್ ನಿಲ್ಲಿಸುತ್ತೀರಾದರೂ ರಾತ್ರಿಯ ಸಮಯದಲ್ಲಿ ಹ್ಯಾಂಡಲ್ ಬಾರ್ ಲಾಕ್ ಮಾಡದೆಯೇ ನಿಲ್ಲಿಸುತ್ತಿದ್ದೀರಾ? ಅದರಲ್ಲೇನಿದೆ, ನಮ್ಮದೇ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸುವಾಗಲೂ ಲಾಕ್ ಮಾಡಬೇಕಾ ಎನ್ನಬೇಡಿ. ಮಾಡಲೇಬೇಕು! ಇಲ್ಲದಿದ್ದರೆ, ಬೆಳಗಾಗುವದರೊಳಗೆ ನಿಮ್ಮ ಬೈಕ್ ಚೋರಿಯಾಗಬಹುದು.

ಇಂಥಹದ್ದೊಂದು ಘಟನೆ ಮಂಗಳವಾರ ಬೆಳಗಿನ ಜಾವ ಹೀಗೆ ನಿಲ್ಲಿಸಿಟ್ಟ ಬೈಕ್ ವೊಂದನ್ನು ಕಳ್ಳನೊಬ್ಬ ಕದ್ದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ ರಕ್ತದ ಮಡುವಿನಲ್ಲಿ ಆರ್ ಟಿ ಓ ಏಜೆಂಟನ ಶವ ಪತ್ತೆ

ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಮನೆಯೊಂದರಲ್ಲಿ ಈ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹ್ಯಾಂಡಲ್ ಬಾರ್ ಲಾಕ್ ಮಾಡದ ಬೈಕ್ಗಳನ್ನೇ ಟಾರ್ಗೆಟ್ ಮಾಡಿರುವ ಚಾಲಾಕಿ ಕಳ್ಳ, ಬೆಳಗಿನ ಜಾವ 2.27 ಸಮಯಕ್ಕೆ ಕಾಂಪೌಂಡ್ ಒಳಗೆ ಪ್ರವೇಶಿಸಿ, ಹ್ಯಾಂಡಲ್ ಲಾಕ್ ಮಾಡದೇ ಇರುವ ಬೈಕ್ ಪರಿಶೀಲಿಸಿದ್ದು, 2.40ರೊಳಗಾಗಿ ಬೈಕ್ ನ್ನು ಆಚೆ ತೆಗೆದು ಕಳ್ಳತನ ಮಾಡಿ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಬೈಕ್ ಪೊಲೀಸರೊಬ್ಬರಿಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ಅಕ್ಕಪಕ್ಕದಲ್ಲೇ ಪೊಲೀಸ್ ಇಲಾಖೆಯ ಸಿಬ್ಬಂದಿ/ಅಧಿಕಾರಿಗಳ ಮನೆಯೂ ಇದೆಯೆಂದು ತಿಳಿದುಬಂದಿದೆ. ಆದರೂ ಚಾಲಾಕಿ ಕಳ್ಳ ಇಂಥದೊಂದು ಪ್ರದೇಶದಲ್ಲಿ ತನ್ನ ಕೈಚಳಕ ತೋರಿ ಇಷ್ಟು ಕಡಿಮೆ ಸಮಯದಲ್ಲಿ ಬೈಕ್ ಕದ್ದೊಯ್ದದ್ದು ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನುಮುಂದೆ ರಾತ್ರಿಯ ಸಮಯದಲ್ಲಿ ಮನೆಯೆದುರಾಗಲಿ, ಕಾಂಪೌಂಡ್ ಒಳಗೇ ಆಗಲಿ, ಬೈಕ್ ನಿಲ್ಲಿಸುವಾಗ ಮರೆಯದೇ ಹ್ಯಾಂಡಲ್ ಲಾಕ್ ಮಾಡಿರುವ ಬಗ್ಗೆ ಪರಿಶೀಲಿಸಿಕೊಳ್ಳುವದು ಅನಿವಾರ್ಯವೂ ಆಗಿದೆ.

ಭೀಕರ ಅಪಘಾತ; ಮಗು ಸೇರಿ ಒಂಬತ್ತು ಜನ ಸಾವು, ಹಲವರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ತುಮಕೂರು

ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದು ವರ್ಷದ ಮಗು ಸೇರಿ 9 ಜನ ಮೃತಪಟ್ಟು, 11ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ದುರ್ಘಟನೆ ಜರುಗಿದೆ.

ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬಾಲೇನಹಳ್ಳಿ ಗೇಟ್ ಬಳಿ ಗುರುವಾರ ನಸುಕಿನಲ್ಲಿ ಈ ಅವಘಡ ಸಂಭವಿಸಿದೆ.

ರಾಯಚೂರು ಜಿಲ್ಲೆಯ ಮಾನ್ವಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ರೂಸರ್ ಹಾಗೂ ಬೆಂಗಳೂರು ಕಡೆಯಿಂದ ತೆರಳುತ್ತಿದ್ದ ಲಾರಿ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.

ಮೃತರನ್ನು ಕ್ರೂಸರ್ ಚಾಲಕ ಸಿರವಾರ ತಾಲೂಕಿನ ವಡವಟ್ಟಿ ಗ್ರಾಮದ ಕೃಷ್ಣಪ್ಪ, ನೀಲಮ್ಮ, ಹಾಗೂ ಸುಜಾತ, ಮೂರು ವರ್ಷದ ಮಗು ವಿನೋದ, ಲಕ್ಷ್ಮೀ, ಬಸಮ್ಮ ಎಂದು ಗುರುತಿಸಲಾಗಿದೆ. ಉಳಿದವರು ಹೆಸರು ಇನ್ನೂ ಪತ್ತೆಯಾಗಿಲ್ಲ.

ಲಾರಿ ಡಿಕ್ಕಿ ಹೊಡೆದ ರಬಸಕ್ಕೆ ಕ್ರೂಸರ್ ಪಲ್ಟಿಯಾಗಿದೆ ಎನ್ನಲಾಗಿದೆ. ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಮಗು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಕಳ್ಳಂಬೆಳ್ಳ ಮತ್ತು ಶಿರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

ರಕ್ತದ ಮಡುವಿನಲ್ಲಿ ಆರ್ ಟಿ ಓ ಏಜೆಂಟನ ಶವ ಪತ್ತೆ

ವಿಜಯಸಾಕ್ಷಿ ಸುದ್ದಿ, ಗದಗ

ಆರ್ ಟಿ ಓ ಏಜೆಂಟ್ ನೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಜರುಗಿದೆ.

ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು-ಪೇಠಾಲೂರು ಮಧ್ಯೆ ಈ ಕೃತ್ಯ ಬೆಳಕಿಗೆ ಬಂದಿದೆ.

ಗದಗನ ಗಂಗಿಮಡಿ ಆಶ್ರಯ ಕಾಲೋನಿಯ ಮಾರುತಿ ರಾಮಣ್ಣ ಅಂಕಲಗಿ (36) ಎಂಬಾತನೇ ರಕ್ತದ ಮಡುವಿನಲ್ಲಿ ಶವವಾಗಿ ದೊರತಿರುವುದು ತಿಳಿದು ಬಂದಿದೆ.

ಮಾರುತಿ ಆರ್ ಟಿ ಓ ಕಛೇರಿಯಲ್ಲಿ ಏಜೆಂಟ್ ನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮೃತನ ಬಲಹಣಿಯ ಮೇಲೆ ತೀವ್ರ ಸ್ವರೂಪದ ಗಾಯವಾಗಿದ್ದು, ತಲೆಯ ಹಿಂಭಾಗದಲ್ಲಿ ಕೂಡ ಗಾಯವಾಗಿ ತೀವ್ರ ರಕ್ತಸ್ರಾವ ಆಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಪ್ರಕರಣ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುರಿಗಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಕುರಿಗಾಹಿಗಳು

0

ಕುರಿ ಕಳ್ಳತನ ತಡೆಗಟ್ಟಲು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮುಕ್ತಿಮಂದಿರದ ಹತ್ತಿರ ಕುರಿ ಕದಿಯಲು ಬಂದ ಇಬ್ಬರನ್ನು ಕುರಿಗಾಹಿಗಳು ಚಾಣಾಕ್ಷತನದಿಂದ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.

ಘಟನೆ ವಿವರ

ಮುಕ್ತಿಮಂದಿರ ಹತ್ತಿರದ ಅಡವಿಯಲ್ಲಿ ಮೇಯುತ್ತಿದ್ದ ಕುರಿಗಳನ್ನು ಕದಿಯಲು ೨ ಬೈಕ್‌ನಲ್ಲಿ ಬಂದ ನಾಲ್ವರು ಒಂದು ಕುರಿಯನ್ನು ಕೈಕಾಲು, ಬಾಯಿ ಕಟ್ಟಿ ಕೆಡವಿದ್ದಾರೆ. ಇನ್ನೊಂದು ಕುರಿಯನ್ನು ಇದೇ ರೀತಿ ಮಾಡಲು ಯತ್ನಿಸುತ್ತಿದ್ದ ವೇಳೆ ಕುರಿಗಾಹಿ ಹುಡುಗ ಇದನ್ನು ಗಮನಿಸಿ ತನ್ನ ತಂದೆಗೆ ಹೇಳಿದ್ದಾನೆ. ಕೂಡಲೇ ಕಾರ್ಯಪ್ರವೃತ್ತನಾದ ಕುರಿಗಾಹಿ ಯಲ್ಲಪ್ಪ ಕಲ್ಲೂರ ತನಗೊಬ್ಬನಿಗೆ ಅವರನ್ನು ಹಿಡಿಯುವುದು ಕಷ್ಟ ಎಂದು ತಿಳಿದು ತಮ್ಮ ಆಪ್ತರಿಗೆ ಫೋನ್ ಮಾಡಿದ್ದಾನೆ. ಸ್ಥಳಕ್ಕೆ ಮುರ‍್ನಾಲ್ಕು ಜನ ಬರುತ್ತಿದ್ದಂತೆಯೇ ಗಮನಿಸಿದ ಬೈಕ್ ಸವಾರರು ಪರಾರಿಯಾಗಲು ಯತ್ನಿಸಿ ಅದರಲ್ಲಿ ಒಂದು ಬೈಕ್‌ನಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಇಬ್ಬರು ಬೈಕ್ ಮತ್ತು ಕುರಿ ಸಮೇತ ಸಿಕ್ಕಿಬಿದ್ದಿದ್ದಾರೆ.

ಕುರಿ ಕದಿಯಲು ಬೋಲೆರೂ ಗೂಡ್ಸ್ ವಾಹನವೂ ಬಂದಿತ್ತೆಂದು ಮತ್ತು ಎರಡು ದಿನಗಳ ಹಿಂದಷ್ಟೇ ಎರಡು ಕುರಿಗಳು ಕಳ್ಳತನವಾಗಿವೆ ಎಂದು ಕುರಿಗಾಹಿಗಳಾದ ಯಲ್ಲಪ್ಪ ಕಲ್ಲೂರ, ರಮೇಶ ಕೋಳಿವಾಡ ಮತ್ತಿತರರು ಆರೋಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈ ಇಬ್ಬರೂ ಅಣ್ಣಿಗೇರಿ ಸಮೀಪದ ಮಜ್ಜಿಗುಡ್ಡ ಗ್ರಾಮದವರೆಂದು ಗೊತ್ತಾಗಿದೆ ಎಂದು ಪೊಲೀಸರಿಂದ ತಿಳಿದುಬಂದಿದೆ.

ಹನಮಂತಪ್ಪ ಯಲ್ಲಪ್ಪ ಮಾದರ ಮತ್ತು ವಸಂತ ಯಲ್ಲಪ್ಪ ಮಾದರ ಸಹೋದರರಾಗಿದ್ದಾರೆ. ಇವರ ಜತೆಗೆ ಬಂದಿದ್ದವರು ಯಾರ‍್ಯಾರೆಂಬುದು ತನಿಖೆಯಿಂದ ಹೊರಬರಬೇಕಿದೆ.

ಲಕ್ಷ್ಮೇಶ್ವರ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುರಿಗಳ ಕಳ್ಳತನ ಆಗುತ್ತಿದ್ದು, ಕುರಿಗಾಹಿಗಳು ಭೀತಿಗೊಂಡಿದ್ದಾರೆ ಮತ್ತು ಕಳ್ಳತನದಿಂದ ಸಾಕಷ್ಟು ಬಾರಿ ಹಾನಿ ಅನುಭವಿಸುತ್ತಿದ್ದಾರೆ. ವಶಕ್ಕೆ ಪಡೆದ ಕಳ್ಳರಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಪ್ರ.ಕಾರ್ಯದರ್ಶಿ ನೀಲಪ್ಪ ಪಡಗೇರಿ, ಗ್ರಾಪಂ ಸದಸ್ಯ ಅಣ್ಣಪ್ಪ ರಾಮಗೇರಿ ಮತ್ತಿತತರು ಆಗ್ರಹಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಕುರಿ ಕದ್ದ ಕಳ್ಳರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಪಿಎಸ್‌ಐ ಪ್ರಕಾಶ ಡಿ ತಿಳಿಸಿದ್ದಾರೆ.

ಹಗಲು ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಸುತ್ತಾಟ; ರಾತ್ರಿ ದರೋಡೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಲಬುರ್ಗಿಯಲ್ಲಿ ಪೊಲೀಸರು ಖತರ್ನಾಕ್ ದರೋಡೆಕೋರರ ತಂಡವೊಂದರ ಹೆಡೆಮುರಿ ಕಟ್ಟಿದ್ದಾರೆ. ಮಂಗಳವಾರ ರಾತ್ರಿ ಭರ್ಜರಿ ಆಪರೇಶನ್ ಮೂಲಕ ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಅವರ ಪತ್ತೆಗೆ ತಂಡ ರಚಿಸಲಾಗಿದೆ.

ನಡೆದಿದ್ದೇನು?

ಮಂಗಳವಾರ ರಾತ್ರಿಯ ವೇಳೆ ಕಲಬುರ್ಗಿಯ ಬಿದ್ದಾಪೂರ ಕಾಲೋನಿಯ ಜನರೆಲ್ಲರೂ ಸವಿನಿದ್ರೆಯಲ್ಲಿದ್ದಾಗ ಆ ಪ್ರದೇಶದಲ್ಲಿಯೇ ಇದ್ದಕ್ಕಿದ್ದಂತೆ ಗುಂಡಿನ ಶಬ್ಧ ಕೇಳಿಬಂದಿತು. ನಾಲ್ವರು ದರೋಡೆಕೋರರ ತಂಡವೊಂದು ಅದೇ ಕಾಲೋನಿಯ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡುತ್ತಿತ್ತು. ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಈ ತಂಡದ ಇಬ್ಬರು ದರೋಡೆಕೋರರನ್ನು ಹಿಡಿದರು. ಆದರೆ, ಈ ವೇಳೆ ಪೊಲೀಸ್ ಪೇದೆ ಶಿವಶರಣ ಎಂಬುವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತ್ಮರಕ್ಷಣೆಗಾಗಿ ಅಶೋಕನಗರದ ಸರ್ಕಲ್ ಇನ್ಸ್‌ಪೆಕ್ಟರ್ ಪಂಡಿತ ಸಗರ್ ತಮ್ಮ ರಿವಾಲ್ವರ್ನಿಂದ ದರೋಡೆಕೋರರ ಮೇಲೆ ಫೈರಿಂಗ್ ಮಾಡಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ್ ತಾಲೂಕಿನ ಝಳಕೋಳದ ಲಾವ ಮತ್ತು ದೇವಿದಾಸ ಎಂಬಿಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು ತಾಗಿದೆ. ಗಾಯಗೊಂಡ ಇವರಿಬ್ಬರನ್ನೂ ಬಂಧಿಸಿ ಚಿಕಿತ್ಸೆಗಾಗಿ ಕಲಬುರ್ಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಕಲಬುರ್ಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುಖ್ಯಾತ ಗ್ಯಾಂಗ್ ಸದಸ್ಯರು ಹಲವು ದಿನಗಳಿಂದ ಹಗಲಿನ ಸಮಯದಲ್ಲಿ ದೇವರ ಪ್ರತಿಮೆಯನ್ನು ಹೊತ್ತು ಗಲ್ಲಿ ಗಲ್ಲಿ ಸುತ್ತುತ್ತಿದ್ದರು. ರಾತ್ರಿಯ ಹೊತ್ತಿನಲ್ಲಿ ಅದೇ ಪ್ರದೇಶಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸ್ ಹಾಯ್ದು ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಸಾವು; ಬಸ್ ಪಲ್ಟಿ, ಹದಿನೈದು ಜನರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಟ್ರ್ಯಾಕರ್ ಓವರ್ ಟೇಕ್ ಮಾಡಿ ಎದುರಿಗೆ ಬಂದ ಬೈಕ್ ಗೆ ಸಾರಿಗೆ ಸಂಸ್ಥೆಯ ಬಸ್ ಹಾಯ್ದು ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಸವಾರ ಬಚಾವ್ ಆದ ಘಟನೆ ಹೊಂಬಳ ರಸ್ತೆಯಲ್ಲಿ ಜರುಗಿದೆ.

ಗದಗ ಸಮೀಪದ ಹೊಂಬಳ ರಸ್ತೆಯ ಪಶು ವಿಶ್ವವಿದ್ಯಾಲಯದ ಹತ್ತಿರ ಈ ಘಟನೆ ನಡೆದಿದ್ದು, ಅಪಘಾತ ತಪ್ಪಿಸಲು ಹೋದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ಸುಮಾರು 15 ಜನರಿಗೆ ಗಾಯವಾಗಿದೆ ಎನ್ನಲಾಗಿದೆ.

ಗದಗದಿಂದ ನರಗುಂದ ಕಡೆ ಹೊರಟಿದ್ದ‌ ಸಾರಿಗೆ ಸಂಸ್ಥೆಯ ಬಸ್, ಹೊಂಬಳ ಕಡೆಯಿಂದ ಗದಗನತ್ತ ಬರುತ್ತಿದ್ದ ಟ್ರ್ಯಾಕರ್ ಓವರ್ ಟೇಕ್ ಮಾಡಿ ಬೈಕ್ ಸವಾರ ಬಂದಾಗ ಬಸ್ ಚಾಲಕ ಅಪಘಾತ ತಪ್ಪಿಸಲು ಹೋಗಿದ್ದಾನೆ. ಆದರೂ ಹಿಂದಿನ ಗಾಲಿ ಹಾಯ್ದು ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೃತನನ್ನು ಲಿಂಗದಾಳ ಗ್ರಾಮದ ಹನಮಂತಪ್ಪ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಯಾವುದೇ ಆ್ಯಂಬುಲೆನ್ಸ್ ಬರಲಿಲ್ಲ ಎಂದು ಗಾಯಗೊಂಡವರು ಆರೋಪಿಸಿದರು. ಸಾರ್ವಜನಿಕರ ಸಹಾಯದಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿದು ಬಂದಿದೆ.

ಕರ್ತವ್ಯನಿರತ ಎಎಸ್ಐ ಮಳಿಮಠ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಾತ್ರಾ ಮಹೋತ್ಸವದ ಕರ್ತವ್ಯಕ್ಕೆ ತೆರಳಿದ್ದ ಎಎಸ್ಐವೊಬ್ಬರ ಮೃತಪಟ್ಟ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜರುಗಿದೆ.

ಶ್ರಾವಣ ಮಾಸದ ಕಡೆ ಸೋಮವಾರ ಐತಿಹಾಸಿಕ ಹಾಲಗೊಂಡ ಬಸವೇಶ್ವರ ಜಾತ್ರಾಮಹೋತ್ಸವ ಇತ್ತು. ಅದರ ಅಂಗವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಯೊಂದು ಬಂದೋಬಸ್ತ್ ಗೆ ತೆರಳಿತ್ತು. ಆ ತುಕಡಿಯ ಎಎಸ್ಐ ಬಸವರಾಜ್ ಮಳಿಮಠ (48) ಅವರು ಮಂಗಳವಾರ ಸಂಜೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗನ ಮಡಿಲಲ್ಲಿ ನಾಯಿಮರಿ; ಇದೆಂಥಾ ಮೂಕಪ್ರೀತಿ?

ವಿಜಯಸಾಕ್ಷಿ ಸುದ್ದಿ, ಗದಗ

ಬಾಂಧವ್ಯ, ಪ್ರೀತಿ-ಮಮಕಾರಗಳ ಬಂಧ ಕೇವಲ ಮನುಷ್ಯ ಜಾತಿಗಷ್ಟೇ ಸೀಮಿತವಲ್ಲ. ನಮಗಿಂತ ಹೆಚ್ಚಾಗಿ ಇತರ ಮೂಕಪ್ರಾಣಿಗಳು ಇಂಥ ಭಾವನೆಗಳನ್ನು ಹೊಂದಿವೆ. ಕೆಲವೊಮ್ಮೆ ಈ ಮೂಕಪ್ರಾಣಿಗಳು ತೋರುವ ಇಂಥ ಸಂಬಂಧಗಳ ಬೆಸುಗೆ ಅಚ್ಚರಿಯನ್ನೂ ಮೂಡಿಸುತ್ತದೆ. ಹಸುವೊಂದು ಪುಟ್ಟ ನಾಯಿಮರಿಗೆ ಹಾಲೂಣಿಸುತ್ತದೆ. ನಾಯಿಯೊಂದು ಬೆಕ್ಕಿನ ಮರಿಯನ್ನು ತನ್ನದೇ ಕರುಳ ಬಳ್ಳಿಯೆಂಬಂತೆ ಎದೆಗವಚಿ ನಡೆಯುತ್ತದೆ. ಇದೀಗ ಹೇಳಹೊರಟಿರುವ ಈ ವಿದ್ಯಮಾನವೂ ಅದೇ ವಿಧದ್ದೆನ್ನಬಹುದು.

ಮೂರ್ನಾಲ್ಕು ದಿನಗಳಿಂದ ಮಂಗವೊಂದು ಅದಿನ್ನೂ ಕಣ್ಣೇ ತೆರೆದಿರದ ಪುಟ್ಟ ನಾಯಿ ಮರಿಯೊಂದನ್ನು ತನ್ನದೇ ಸಂತಾನವೇನೋ ಎಂಬಂತೆ ಹೊತ್ತು ಓಡಾಡುತ್ತಿದೆ.

ವಿವೇಕಾನಂದ ನಗರದ ನಾಲ್ಕನೇ ಕ್ರಾಸ್ ನ ಸುತ್ತಮುತ್ತ ಹೀಗೆ ನಾಯಿಮರಿಯನ್ನು ಹೊತ್ತು ಓಡಾಡುತ್ತಿರುವ ಮಂಗ ಏನೇ ಪ್ರಯತ್ನಪಟ್ಟರೂ ಮರಿಯನ್ನು ಬಿಡಲು ತಯಾರಿಲ್ಲ. ಸುತ್ತಲಿನ ಹಲವರು ವಿಷಯವೇನೆಂದೇ ಅರ್ಥವಾಗದೆ, ಮಂಗ ಆ ಪುಟ್ಟ ನಾಯಿಗೇನಾದರೂ ತೊಂದರೆ ಮಾಡೀತು ಎಂಬ ಕಳಕಳಿಯಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ತೆಂಗಿನ ಕಾಯಿ ಚೂರು, ಬಾಳೆಹಣ್ಣು ಕೊಟ್ಟಾದರೂ ಆ ನಾಯಿಮರಿಯನ್ನು ಬಿಡಿಸೋಣವೆಂದುಕೊಂಡರೆ, ಮಂಗ ಇನ್ನೂ ಚಾಲಾಕಿ. ಮರಿಯನ್ನು ಮಡಿಲಲ್ಲೋ, ಕಾಲ ಕೆಳಗೆ ಅದುಮಿಟ್ಟುಕೊಂಡೇ ನೀಡಿದ ಹಣ್ಣಿಗೆ ಕೈಚಾಚಿ ಪಡೆಯುತ್ತಿದೆಯೇ ಹೊರತೂ ನಾಯಿಮರಿಯನ್ನು ಬಿಡಲೊಪ್ಪದು.

ಈ ಪ್ರದೇಶದಲ್ಲಿ ಮನೆಗಳು ಒತ್ತೊತ್ತಾಗಿರುವಲ್ಲಿ ಟೆರೇಸ್ ನಿಂದ ಟೆರೇಸಿಗೆ ದಾಟುತ್ತ ಮೂರ್ನಾಲ್ಕು ದಿನಗಳಿಂದ ಇದೇ ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ನಾಯಿಮರಿ ಹಸಿವೆಯಿಂದಲೋ, ತಾಯಿ ಮಡಿಲಿಂದ ತಪ್ಪಿಸಿಕೊಂಡಿದ್ದಕ್ಕೋ ದಿನವಿಡೀ ಕಿರುಚುತ್ತಲೇ ಇದೆ. ಯಾರೂ ಬೆದರಿಸಿ, ಹೊಡೆಯುವ ಪ್ರಯತ್ನವನ್ನು ಮಾಡಹೊರಟಿಲ್ಲ. ಮಂಗವೂ ಆ ನಾಯಿಮರಿಗೆ ಯಾವುದೇ ತೊಂದರೆ ಮಾಡಿದ ಹಾಗಿಲ್ಲ. ಮಹಡಿಯ ಮೇಲೆ ಧಾನ್ಯ ಅಥವಾ ಬೇರೆ ಆಹಾರ ಪದಾರ್ಥಗಳನ್ನು ಒಣಗಿಸಿದ್ದರೆ, ತಿಂದು ಹೋಗುತ್ತದೆ. ಮಲಗುವಾಗಲೂ ಪಕ್ಕದಲ್ಲೇ ಮಲಗಿಸಿಕೊಳ್ಳುತ್ತದೆ. ಮತ್ತೆ ಬೇರೆಡೆ ಹೋಗುವಾಗಲೂ ಬಾಯಲ್ಲಿ ಕಚ್ಚಿಕೊಂಡೇ ಅಡ್ಡಾಡುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಈ ಕೆಂಪುಮೂತಿಯ ಕೋತಿಯ ಭಾವನೆ, ಈಗಿನ್ನೂ ಕಣ್ಣೂ ತೆರೆಯದ ಪುಟ್ಟ ನಾಯಿಮರಿಯ ಗೋಳು ಕಂಡವರು ಮರುಗುವಂತಿದೆ. ಈ ಪ್ರಾಣಿಯದು ಇದೆಂಥಾ ಮೂಕ ಪ್ರೀತಿ ಎಂದುಕೊಳ್ಳುವಂತಿದೆ.

ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್; ವಿಜಯೇಂದ್ರ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಯಾರು ಏನು ಬೇಕಾದರೂ ತಿನ್ನಬಹುದು. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಭಂಡತನವನ್ನು ಯಾರೂ ಒಪ್ಪುವದಿಲ್ಲ. ಈ ರಾಜ್ಯದಲ್ಲಿ ಸಂಸ್ಕೃತಿ-ಪರಂಪರೆಗಳಿವೆ. ಧಾರ್ಮಿಕ ಶ್ರದ್ಧೆಯಿದೆ. ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನರಿದ್ದಾರೆ. ರಾಜಕಾರಣಿಗಳ ಹೇಳಿಕೆಯಿಂದ ಇತರರಿಗೆ ಘಾಸಿಯಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದರು.

ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿ ಇರುವವರು ಬಹಿರಂಗವಾಗಿ ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ.
ರಾಜಕಾರಣಿಗಳು ದೇವಸ್ಥಾನಕ್ಕೂ ಹೋಗುತ್ತಾರೆ. ಮಠಮಾನ್ಯಗಳಿಗೂ ತೆರಳುತ್ತಾರೆ. ಆದರೆ, ಅಲ್ಲಿ ಹೋದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯ.

ಅಧಿಕಾರಕ್ಕೆ ಬಂದೇಬಿಟ್ಟೆವು ಎನ್ನುವ ಮಟ್ಟದ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಇವೆಲ್ಲವನ್ನೂ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ವೀರಶೈವ ಲಿಂಗಾಯತ ಧರ್ಮವನ್ನು ಒಡೆದಿಲ್ಲ ಎಂದು ತಪ್ಪೊಪ್ಪಿಕೊಂಡರೂ, ಪಶ್ಚಾತಾಪ ಪಡದೇ ಈಗ ಯುಟರ್ನ್ ತಿರುಗಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನೇಕ ಅಗ್ರಗಣ್ಯ ನಾಯಕರಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಲ್ಲ ಜಾತಿ-ವರ್ಗದ ಜನರೂ ಒಪ್ಪಿಕೊಂಡು ಮೆಚ್ಚಿರುವ ಧೀಮಂತ ನಾಯಕರು. ಅವರಿಗೆ ಇಂದು ಅಧಿಕಾರವಿಲ್ಲದಿದ್ದರೂ ಕೂಡ ಅಪಾರ ಬೆಂಬಲವಿದೆ. ಜನಮನ್ನಣೆಯೂ ಇದೆ. ಜನ ಎಲ್ಲೇ ಹೋದರೂ ಪ್ರೀತಿಯಿಂದಲೇ ಆದರಿಸುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ಎಲ್ಲ ಸಮಾಜ-ವರ್ಗಕ್ಕೂ ತಾರತಮ್ಯವಿಲ್ಲದೇ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಆದರೆ ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿಗಳೆನಿಸಿಕೊಂಡವರು, ಹಿರಿಯ ನಾಯಕರುಗಳು ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಾರದಿರುವಂಥ ವಾತಾವರಣ ಸೃಷ್ಟಿಯಾದಾಗ ಹಿಂದೆಯೂ ಜಾತಿ-ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುವ ಕೆಲಸ ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಈಗ ವೀರ ಸಾವರ್ಕರ್ ರಂತಹ ಹೋರಾಟಗಾರರನ್ನು, ಧೀಮಂತ ಕ್ರಾಂತಿಕಾರಿಗಳನ್ನು ರಸ್ತೆಗೆ ತಂದು ಅವರಿಗೆ ಅವಮಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ಕೆಲಸವಲ್ಲ.

ನಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಉದ್ದೇಶಕ್ಕೆ ಇಂಥ ಅವಹೇಳನಕಾರಿ ಹೇಳಿಕೆ ನೀಡಿ, ನಡೆದುಕೊಳ್ಳುವದು ಯಾರಿಗೂ ಒಳ್ಳೆಯದಲ್ಲ ಎಂದರು.ಬಿಎಸ್ವೈಗೆ ಉನ್ನತ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ, ಅವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಯಡಿಯೂರಪ್ಪನವರು ಯಾವುದೇ ಉನ್ನತ ಸ್ಥಾನ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿರಲಿಲ್ಲ. ಇದನ್ನು ಉನ್ನತ ಸ್ಥಾನ ಎನ್ನುವದಕ್ಕಿಂತ, ದೊಡ್ಡ ಜವಾಬ್ದಾರಿಯನ್ನು ಪಕ್ಷ ಅವರ ಹೆಗಲಿಗೇರಿಸಿದೆ. ಹಿಂದೆಯೂ ಇಂಥ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದೆಯೂ ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಾರೆ.

ಇನ್ನು, ಅವರ ಮೂಲಕ ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿರುವ ಕುರಿತು ಚರ್ಚೆ ನಡೆಯುತ್ತಿರುವ ಬಗ್ಗೆ ನೀವೇ ಮೊದಲ ಬಾರಿ ಹೇಳಿದ್ದು ಎಂದು ಚಟಾಕಿ ಹಾರಿಸಿ, ನಾನು ಸಂತೋಷದಿಂದಲೇ ಉಪಾಧ್ಯಕ್ಷ ಸ್ಥಾನ ನಿರ್ವಹಿಸುತ್ತಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಸಿದ್ಧರಾಮಯ್ಯರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ, ಸಂಪತ್ ಕುಮಾರರನ್ನು ಬಿಜೆಪಿಯವರು ಹಣದ ಆಮಿಷವೊಡ್ಡಿ ಖರೀದಿಸಿದ್ದಾರೆ, ತಾನು ಕಾಂಗ್ರೆಸ್ ಕಾರ್ಯಕರ್ತನೆಂದು ಹೇಳಿಕೆ ನೀಡುವಂತೆ ಬಿಜೆಪಿಯವರೇ ಪಿತೂರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಯಾರು ಏನೇ ಹೇಳಿದರೂ ಕೂಡ ಯಾವುದೇ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಲ್ಲಿ ನಾವಿರಬೇಕು. ಸಿದ್ಧರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಗೌರವಾನ್ವಿತ ವ್ಯಕ್ತಿ. ನಮ್ಮ ಪ್ರತಿಭಟನೆ ಎಂದಿಗೂ ಎಲ್ಲೆ ಮೀರಿ ಹೋಗಬಾರದು. ರಾಜ್ಯದಲ್ಲಿ ಹಿಂದೆಂದೂ ಇಂಥ ಘಟನೆ ನಡೆದಿಲ್ಲ ಎಂದರು.