Home Blog Page 3340

ಅಪ್ರಾಪ್ತೆಯ ಅತ್ಯಾಚಾರಿ ವಿಜಯ ಹಿರೇಮಠಗೆ 28 ವರ್ಷ ಶಿಕ್ಷೆ, 1.45 ಲಕ್ಷ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಯುವತಿಯನ್ನು ಬಲಾತ್ಕಾರ ಮಾಡಿ, ನಂತರ ಮದುವೆಯಾಗುವದಾಗಿ ನಂಬಿಸಿ, ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇರಿಸಿದ ಆರೋಪದ ಮೇಲೆ ಬಂಧಿತ ಅಪರಾಧಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಈ ಕುರಿತು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದರು.

ಘಟನೆಯ ವಿವರ

ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠ ದಿ. 17-5-2016ರಂದು ಮದ್ಯಾಹ್ನ 12ರ ಸಮಯಕ್ಕೆ ಗದಗದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಅನಾಥಾಶ್ರಮ ಕಟ್ಟಡದಲ್ಲಿ ದೂರುದಾರರ ಅಪ್ರಾಪ್ತಳ ಪುತ್ರಿಯ ಮೇಲೆ ಬಲಾತ್ಕಾರ ನಡೆಸಿದ್ದ. ನಂತರ 13-09-2017ರಂದು ಸಂಜೆ 5 ಗಂಟೆಯ ಸಮಯಕ್ಕೆ ಅವಳನ್ನು ಮದುವೆಯಾಗುವದಾಗಿ ನಂಬಿಸಿ ಗದಗ ಹುಡ್ಕೋ ಕಾಲನಿಯಲ್ಲಿರುವ ನಿಸರ್ಗ ಕಿರಾಣಿ ಅಂಗಡಿಯ ಬಳಿಯಿಂದ ಅಪಹರಿಸಿ ತನ್ನ ಟಂಟಂ ರಿಕ್ಷಾದಲ್ಲಿ ಅಪಹರಿಸಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ರೈಲ್ವೇ ಹಾಗೂ ಬಸ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ತುಮಕೂರಿನ ಕ್ಯಾತಸಂದ್ರದಲ್ಲಿ ರಘು ಜುಮ್ಮಣ್ಣವರ ಎಂಬುವರ ವಾಸದ ಮನೆಯಲ್ಲಿ ಇರಿಸಿ ಅವಳು ಎಲ್ಲಿಯೂ ಹೋಗದಂತೆ ಗೃಹ ಬಂಧನದಲ್ಲಿರಿಸಿದ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತನ ವಿರುದ್ಧ ಗದಗ ಉಪವಿಭಾಗದ ಪೊಲೀಸ್ ಅಧಿಕ್ಷಕ ವಿಜಯಕುಮಾರ್ ತಳವಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ.ಎಸ್. ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾದ ಕಾರಣ, ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠನಿಗೆ ಆಗಸ್ಟ್ 8ರಂದು ಭಾ.ದಂ.ಸಂ ಕಲಂ: 365ರ ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ,10 ಸಾವಿರ ರೂ. ದಂಡ, ಕಲಂ: 366ರ ಅನ್ವಯ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಕಲಂ:376(2)(ಐ)(ಎನ್) ಮತ್ತು ಕಲಂ:5(1) ರೇ:ವಿ 6 ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಶಿಕ್ಷೆ, 1 ಲಕ್ಷ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯ ಅನ್ವಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯಂತೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಕೋಟಿ ವಂಚನೆಯ ವೀರ ವಿಜಯ್ ಶಿಂಧೆ ಪ್ರಕರಣ ಸಿಐಡಿಗೆ; ಎಸ್ಪಿ ಶಿವಪ್ರಕಾಶ್ ದೇವರಾಜು

ಶಿಂಧೆಯಿಂದ ಎಷ್ಟೇ ಹಣ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ದೊಡ್ಡ ದೊಡ್ಡ ಕುಳಗಳಿಂದ ಹಿಡಿದು ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಪಾಯಿ ವ್ಯಕ್ತಿಗಳನ್ನೂ ಒಳಗೊಂಡು ಕೋಟ್ಯಂತರ ರೂಪಾಯಿಗಳ ವಂಚನೆ ಆರೋಪ ಹೊತ್ತು ಜೈಲು ಸೇರಿದ್ದ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಮಾಲೀಕ, ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ರಾಘವೇಂದ್ರ ಶಿಂಧೆಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

ಈ ಕುರಿತು ಬುಧವಾರ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ಪ್ರಸ್ತುತ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಮನವಿಯನ್ನು ಕಳಿಸಿದ್ದೆವು. ಅದರಂತೆ ಆಗಸ್ಟ್ 10ರಂದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಮಾನ್ಯ ಡಿಐಜಿಯವರು ತಿಳಿಸಿದ್ದಾರೆ.

ಆರೋಪಿ ಶಿಂಧೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸುಮಾರು 36 ಹೂಡಿಕೆದಾರರಿಂದ 10 ಕೋಟಿ.ರೂ.ಗಳಿಗೂ ಮೀರಿ ಮೋಸ ನಡೆಸಿರುವ ವಿಚಾರ ತಿಳಿದುಬಂದಿತ್ತು. ಬಡ್ಸ್ ಕಾಯ್ದೆಯ ಪ್ರಕಾರ ತನಿಖೆ ನಡೆಸಿ, ಮೋಸ ಮಾಡಿ ಸಂಗ್ರಹಿಸಿದ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ವಿವರವನ್ನು ಸಲ್ಲಿಸಲಾಗಿತ್ತು.

ಈ ತನಿಖೆಯಲ್ಲಿ ಸುಮಾರು 4 ಕೋಟಿ.ರೂ ಸರ್ಕಾರಿ ಮೌಲ್ಯವಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಈವರೆಗಿನ ತನಿಖೆಯ ವಿವರಗಳನ್ನೂ ಸಿಐಡಿಗೆ ಒದಗಿಸಿದ್ದೇವೆ ಎಂದರು.

ಹತ್ತು ಕೋಟಿ.ರೂ ಮೇಲ್ಪಟ್ಟ ಈ ವಿಧದ ಮೋಸದ ಪ್ರಕರಣಗಳನ್ನು ಸಿಐಡಿಗೆ ವಹಿಸಬೇಕೆಂಬ ಕಾನೂನಿದೆ. ಶಿಂಧೆ ಪ್ರಕರಣದಲ್ಲಿ ತನಿಖೆ ನಡೆಸಿದಷ್ಟೂ ಮೋಸದ ವ್ಯವಹಾರಗಳು ಹೊರಬರುತ್ತಿದ್ದು, ಮೋಸವಾದ ಹಣದ ಮೊತ್ತ ಇನ್ನೂ ಹೆಚ್ಚಾಗುತ್ತಲೇ ಇದೆ. ಸ್ಪಷ್ಟ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ. 2-3 ಲಕ್ಷದಂತೆ ಬಹಳಷ್ಟು ಜನ ಈತನಲ್ಲಿ ಹಣ ಹೂಡಿದವರಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಹಲವಾರು ಜನ ಹಣ ಕಳೆದುಕೊಂಡು ಮೋಸ ಹೋಗಿದ್ದು ಗೊತ್ತಾಗಿದೆ. ಆದರೆ ಅವರು ಯಾರೂ ಮುಂದೆ ಬಂದು ದೂರು ಕೊಡುತ್ತಿಲ್ಲ. ಮೋಸ ಹೋದವರು ಸಾಕ್ಷಿ ಸಮೇತ ದೂರು ನೀಡಬೇಕು. ಅವರಲ್ಲಿ ಸೂಕ್ತ ಸಾಕ್ಷಾಧಾರಗಳಿದ್ದರೆ, ದಾಖಲೆಗಳಿದ್ದರೆ ಧೈರ್ಯದಿಂದ ಮುಂದೆ ಬಂದು ದೂರು ಸಲ್ಲಿಸಬಹುದು. ಯಾವ ಕಾರಣಕ್ಕಾಗಿ ಹಣ ಕೊಟ್ಟಿದ್ದಾರೆ ಎಂಬುದಕ್ಕೆ ಅಗ್ರಿಮೆಂಟ್ ಏನಾದರೂ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೋಸ ಆಗಿದ್ದು ನಿಜವೇ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಸಿಐಡಿ ತನಿಖೆಯಲ್ಲಿ ಗಮನಕ್ಕೆ ತರಲಾಗುವುದು. ಒಟ್ಟಾರೆ ಎಲ್ಲದಕ್ಕೂ ಸಾಕ್ಷಿಗಳು ಮುಖ್ಯ.

ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

ಈತನಿಂದ ಎಷ್ಟೇ ಹಣ, ಬಂಗಾರ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ. ನಗದು ವ್ಯವಹಾರವಷ್ಟೇ ಅಲ್ಲದೆ ಬ್ಯಾಂಕ್, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆಗಳಾಗಿದ್ದರೂ, ಬೇರೆ ಯಾರಾದರೂ ವ್ಯಕ್ತಿಗಳ ಸಮ್ಮುಖದಲ್ಲಿ ಈತನಿಗೆ ಹೂಡಿಕೆಯ ಹಣ ನೀಡಿದ್ದರೂ ನಮ್ಮ ಗಮನಕ್ಕೆ ತನ್ನಿ. ದೂರುದಾರರಿಂದ ಸಂಪೂರ್ಣ ವಿವರ, ದಾಖಲೆಗಳು ಇನ್ನೂ ಬರಬೇಕಿದೆ ಎಂದು ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.

ವಿಚಾರಣೆ ನಡೆಸಿದಾಗ ಇನ್ನೂ ಬಹಳಷ್ಟು ಜನರಿಗೆ ನಿವೇಶನ, ಮನೆ ಕೊಡಿಸುತ್ತೇನೆ, ಅದು ಬೇಡವಾದರೆ ಅಧಿಕ ಬಡ್ಡಿಯೊಂದಿಗೆ ನಿಮ್ಮ ಹಣವನ್ನು ಮರಳಿಸುತ್ತೇನೆ ಎಂದು ಮೋಸ ಮಾಡಿರುವ ಬಗ್ಗೆ ತಿಳಿದುಬಂದಿತ್ತು. ಶಿಂಧೆಯ ವಿರುದ್ಧ ನ್ಯಾಯಾಲಯದ ಪರವಾನಗಿಯೊಂದಿಗೆ 21 ಬಡ್ಸ್ ಕಲಂನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಕಾನೂನಿನಂತೆ ಸದರಿ ಪ್ರಕರಣದಲ್ಲಿ ಮೋಸವಾದ ಹಣ, ಆಸ್ತಿ-ಪಾಸ್ತಿಯ ಮೌಲ್ಯ 10 ಕೋಟಿ.ರೂ ಮೀರಿರುವದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

ನಗರದ ಸ್ಟೇಷನ್ ರಸ್ತೆಯ ನಗರಸಭೆ ಎದುರು ಕಚೇರಿ ತೆರದು ಫೈನಾನ್ಸ್ ದಂಧೆ ನಡೆಸುತ್ತಿದ್ದ ವಿಜಯ ಶಿಂಧೆ, ಅವಳಿ ನಗರದ ದೋ ನಂಬರ್ ದಂಧೆಕೋರರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಬಡ್ಡಿಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. 2020ರ ಅಕ್ಟೋಬರ್‌ನಿಂದ 2022ರ ಏಪ್ರಿಲ್ 23ರವರೆಗೆ ಈತ ಭಾರೀ ವಂಚನೆ ನಡೆಸಿದ್ದ. ಕಳಸಾಪೂರ ರಸ್ತೆಯ ಸಂತೋಷ ಪ್ರಭಾಕರ್ ಮುತಗಾರ ಎಂಬುವವರು ಸೈಬರ್ ಠಾಣೆಗೆ ವಂಚನೆಯ ದೂರು ದಾಖಲಿಸಿದಾಗ, ಜುಲೈ 17ರಂದು ಶಿಂಧೆಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದರು.

ಹುಲಕೋಟಿಯಲ್ಲಿ ಮಗನಿಂದಲೇ ತಂದೆ ಹತ್ಯೆ; ಕೊಡಲಿಯಿಂದ ಕೊಚ್ಚಿ ಪೊಲೀಸರಿಗೆ ಶರಣಾದ ಪಾಪಿ ಮಗ!

ವಿಜಯಸಾಕ್ಷಿ ಸುದ್ದಿ, ಗದಗ

ಕುಟುಂಬ ಕಲಹದಿಂದ ಮಗನೇ ಹೆತ್ತ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.

58 ವರ್ಷದ ಗಣೇಶ್ ಚಿಕ್ಕನಟ್ಟಿ ಮೃತ ತಂದೆ. ಮಗ ವಿಜಯ ಎಂಬಾತ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಹುಲಕೋಟಿ ಗ್ರಾಮದ ಗಣೇಶ್ ನಗರದಲ್ಲಿ ಮಲಗಿದ್ದ ತಂದೆ ಗಣೇಶ್ ಚಿಕ್ಕನಟ್ಟಿ ಎಂಬುವರನ್ನು ಮಗ ವಿಜಯ ಕೊಡಲಿಯಿಂದ ಕತ್ತುಗೆಗೆ ಬಲವಾಗಿ ಕೊಚ್ಚಿದ ಪರಿಣಾಮ ಸ್ಥಳದಲ್ಲಿಯೇ ತಂದೆ‌ ಮೃತಪಟ್ಟಿದ್ದಾನೆ.

ಕೊಲೆಗೈದು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿ ತಿಳಿದ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಳ್ಳತನಕ್ಕೆ ಹೊಂಚುಹಾಕಿದ್ದ ಯುವಕರನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ವಿಜಯಸಾಕ್ಷಿ ಸುದ್ದಿ, ನರಗುಂದ

ರಾತ್ರಿ ಸಮಯದಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನರಗುಂದದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಜಿಲ್ಲೆಯ ನರಗುಂದ ಪಟ್ಟಣದ ಮೆಣಸಿನಕಾಯಿಯವರ ಓಣಿಯಲ್ಲಿ ಯುವಕರಿಬ್ಬರು ಅತ್ತಿಂದಿತ್ತ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದರು. ಈ ಅಪರಿಚಿತ ಯುವಕರ ಚಲನವಲನಗಳನ್ನು ಗಮನಿಸಿದ ಸ್ಥಳೀಯರು, ಅಲ್ಲಿಯೇ ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ.

ಒಂದಕ್ಕೂ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಇನ್ನಷ್ಟು ಅನುಮಾನಗೊಂಡ ಸಾರ್ವಜನಿಕರು ಅವರು ಓಡಾಡುತ್ತಿದ್ದ ಸ್ಥಳದ ಮನೆಗಳನ್ನು ಪರಿಶೀಲಿಸಿದಾಗ ಯಾವುದೋ ಕಬ್ಬಿಣದ ವಸ್ತುವಿನಿಂದ ಮನೆಯೊಂದರ ಬಾಗಿಲಿನ ಬೀಗದ ತಟ್ಟೆಯನ್ನು ಒಡೆಯಲು ಪ್ರಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಹಿಡಿದು ಥಳಸಿ ನರಗುಂದ ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.

ಯುವಕರಲ್ಲಿ ಒಬ್ಬ ಬಾಗಲಕೋಟೆ ಮೂಲದ ಕಿರಣ್ ಎಂದು ಪತ್ತೆಯಾಗಿದ್ದು, ಈತನೊಂದಿಗಿದ್ದ ಇನ್ನೊಬ್ಬ ಅಪ್ರಾಪ್ತ ವಯೋಮಾನದ ಹುಡುಗನೆಂದು ತಿಳಿದುಬಂದಿದೆ. ಇವರು ಎಲ್ಲಿಯವರು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಣವೇನೆಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಪೊಲೀಸರ ಕಿರುಕುಳ ಆರೋಪ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ವಿಜಯಸಾಕ್ಷಿ ಸುದ್ದಿ, ಗದಗ

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮೌಖಿಕವಾಗಿ ಬಂದ ದೂರಿನ ಕಾರಣವಿಟ್ಟುಕೊಂಡು ಯುವಕನೊಬ್ಬನಿಗೆ ಪೊಲೀಸರು ಪದೇ ಪದೇ ಕರೆ ಮಾಡಿದ್ದರಿಂದ ಹೆದರಿದ ಆತ, ಗದಗನ ಎಪಿಎಮ್ ಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ ಎನ್ನಲಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಮುಗಳಿ‌ ಗ್ರಾಮದ ಟಿಪ್ಪುಸುಲ್ತಾನ್ ಹೊಸೂರು ಎಂಬಾತನೇ ವಿಷ ಸೇವಿಸಿ ಜಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯ ನರಳಾಡುತ್ತಿರುವ ಯುವಕ.

ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡ ಟಿಪ್ಪುಸುಲ್ತಾನ್, ತಾಯಿ ಆರೈಕೆಯಲ್ಲಿ ಬೆಳೆದಾತ. ತಂದೆಗೆ ಬರಬೇಕಾದ ಆಸ್ತಿ ಇನ್ನೂ ಇವರಿಗೆ ಬಂದಿಲ್ಲ. ದೊಡ್ಡಪ್ಪ ಆಸ್ತಿ ಕೊಡದೇ ಸತಾಯಿಸುತ್ತಿದ್ದಾನೆ ಎಂಬುದು ಟಿಪ್ಪುಸುಲ್ತಾನ ಹಾಗೂ ತಾಯಿಯ ದೂರು. ಕಳೆದ ಹಲವು ದಿನಗಳಿಂದ ಆಸ್ತಿ ಕೇಳಿದರೂ ಯಾವ ಆಸ್ತಿಯೂ ನಿಮಗೆ ಬರಬೇಕಿಲ್ಲ ಅಂತ ಟಿಪ್ಪುಸುಲ್ತಾನನ ದೊಡ್ಡಪ್ಪ ವಾದ ಮಾಡುತ್ತಿದ್ದಾನೆ ಎನ್ನಲಾಗಿದೆ.

ಸಾಲ-ಸೋಲ ಮಾಡಿ ಹೊಟ್ಟೆಪಾಡಿಗೆ ಗೂಡ್ಸ್ ವಾಹನ ಖರೀದಿ ಮಾಡಿರುವ ಟಿಪ್ಪುಸುಲ್ತಾನ್, ಅದರ ದುಡಿಮೆಯಿಂದಲೇ ತನ್ನ ತಾಯಿ, ಪತ್ನಿ ಹಾಗೂ ಎರಡು ಮಕ್ಕಳ ಸಂಸಾರ ಸಾಗಿಸುತ್ತಿದ್ದಾನೆ. ಆದರೆ ಸರಿಯಾದ ದುಡಿಮೆ ಇಲ್ಲದೆ, ಗೂಡ್ಸ್ ವಾಹನದ ಕಂತು ತುಂಬಲಾರದೇ ಒದ್ದಾಡುತ್ತಿದ್ದಾನೆ. ತಂದೆ ಆಸ್ತಿ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತೆ ಅನ್ನೋದು ಟಿಪ್ಪುಸುಲ್ತಾನನ ವಿಚಾರ.

ಮೊನ್ನೆ ಮೊಹರಂ ಹಬ್ಬದಲ್ಲಿ ಟಿಪ್ಪುಸುಲ್ತಾನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಮೌಖಿಕವಾಗಿ ಅವರ ದೊಡ್ಡಪ್ಪ ಸಿಕಂದರ್ ಸಾಬ್ ರೋಣ ಪೊಲೀಸರಿಗೆ ಹೇಳಿದ್ದಾನೆ. ಆಗ ರೋಣ ಪೊಲೀಸರು, ಟಿಪ್ಪುಸುಲ್ತಾನನಿಗೆ ಫೋನ್ ಮಾಡಿ ಸ್ಟೇಶನ್ ಗೆ ಬಂದು ಭೇಟಿ ಆಗಿ ಹೋಗು ಎಂದಿದ್ದಾರೆ. ನಿಮ್ಮ ದೊಡ್ಡಪ್ಪ ದೂರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದರಿಂದ ಹೆದರಿದ ಟಿಪ್ಪುಸುಲ್ತಾನ್, ಠಾಣೆಯತ್ತ ಸುಳಿದಿಲ್ಲ. ಮತ್ತೆ ಮತ್ತೆ ಫೋನ್ ಮಾಡಿದ ರೋಣ ಪೊಲೀಸರು, ನೀ ಬರದೇ ಹೋದರೆ ಬೇರೆ ಆಗುತ್ತ ನೋಡ ಅಂತ ಹೇಳಿದ್ದಾರೆ. ಆಗ ಟಿಪ್ಪುಸುಲ್ತಾನ್ ಬೆದರಿದ್ದಾನೆ. ಮಂಗಳವಾರ ಹೆಸರು ಮಾರಾಟ ಮಾಡಲು ಟ್ರ್ಯಾಕ್ಟರ ತಂದಿದ್ದ ಟಿಪ್ಪುಸುಲ್ತಾನ್, ಬೆಳೆಗೆ ಸಿಂಪಡಣೆ ಮಾಡುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ಒದ್ದಾಡುತ್ತಿದ್ದಾಗ ನೋಡಿದ ಜನ ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸದ್ಯ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಟಿಪ್ಪುಸುಲ್ತಾನ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಟಿಪ್ಪುಸುಲ್ತಾನನ ಸ್ಥಿತಿ ನೋಡಿ ತಾಯಿ, ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ಇದುವರೆಗೂ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ದೊರೆತಿಲ್ಲ.

ಸಾಮರಸ್ಯದಿಂದ ಬಾಳಬೇಕು, ಇಲ್ಲದಿದ್ದರೆ ನಿಮ್ಮ ಅಭಿವೃದ್ಧಿಗೆ ಮಾರಕವಾದೀತು; ಕೇಂದ್ರ ಸಚಿವ ನಾರಾಯಣಸ್ವಾಮಿ ಎಚ್ಚರಿಕೆ

ವಿರೋಧ ಪಕ್ಷಗಳು ಒಂದು ಸಮುದಾಯದೊಂದಿಗೆ ನಿತ್ಯ ಬೆಂಕಿ ಹಚ್ಚುವ ಕೆಲಸ ಬಿಡಬೇಕು: ಎ. ನಾರಾಯಣ ಸ್ವಾಮಿ ಕಟುನುಡಿ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಶಿವಮೊಗ್ಗದಲ್ಲಿ ಸೋಮವಾರ ಪ್ರೇಮ್ ಸಿಂಗ್ ಮೇಲಿನ ಹಲ್ಲೆಯು ದುರದೃಷ್ಟಕರ ಸಂಗತಿ. ಆತ ಶಿವಮೊಗ್ಗ ಜಿಲ್ಲೆಯವನಲ್ಲ. ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಶಿವಮೊಗ್ಗಕ್ಕೆ ಬಂದಿರುವ ಹುಡುಗ. ಕೇವಲ ಹಣೆಗೆ ಕುಂಕುಮ ಇಟ್ಟಿದ್ದಾನೆ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದಿರುವ ಕಿಡಿಗೇಡಿಗಳ ಕೃತ್ಯ ಸಹಿಸುವಂಥದ್ದಲ್ಲ. ಈ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಘಟನೆಯನ್ನು ಖಂಡಿಸಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಒಂದು ಕೋಮಿನವರಿಂದ ಪದೇ ಪದೇ ಇಂಥ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಹಿಂದೂಗಳ ಮೇಲೆ ಈ ರೀತಿ ಚಾಕು ಇರಿತ, ಹಲ್ಲೆ, ಕೊಲೆ ಪ್ರಯತ್ನಗಳು ನಡೆಯುತ್ತಿರುವದು ಅಭಿವೃದ್ಧಿಗೆ ಮಾರಕವಾಗಿದೆ.

ರಾಜ್ಯದಲ್ಲಿ ಹಿಂದೂ ಮತ್ತು ಅಲ್ಪಸಂಖ್ಯಾತರ ನಡುವೆ ಸಾಮರಸ್ಯ ಇಲ್ಲವೆಂಬುದನ್ನು ಇಂಥ ಘಟನೆಗಳು ಪದೇ ಪದೇ ಬಿಂಬಿಸಹೊರಟಿದ್ದೀರಿ. ನೀವು ವಾಸಿಸುತ್ತಿರುವುದು ಭಾರತ ದೇಶದಲ್ಲಿ. ಇಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳದಿದ್ದರೆ, ನಿಮ್ಮ ಅಭಿವೃದ್ಧಿಗೇ ಇದು ಮಾರಕವಾಗುತ್ತದೆ ಎಂದು ಎ. ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಶಿವಮೊಗ್ಗ ಜಿಲ್ಲಾದ್ಯಂತ ವಾಸಿಸುತ್ತಿರುವ ಅಲ್ಪಸಂಖ್ಯಾತರ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಯಾವ ಊರಿನಿಂದ ಬಂದಿರುವವರು, ಇವರ ವ್ಯವಹಾರ-ಕೆಲಸಗಳೇನು ಎಂಬುದರ ಕುರಿತು ಪ್ರತಿಯೊಬ್ಬರ ಸ್ಪಷ್ಟ, ಸಂಪೂರ್ಣ ಮಾಹಿತಿಯನ್ನು ಪಡೆದು ಎಲ್ಲರಿಗೂ ಎಚ್ಚರಿಕೆ ನೀಡುವಂತೆ ಚರ್ಚೆಸಿದ್ದೇನೆ. ಇಂತಹವರ ವಿರುದ್ಧ ಕೇವಲ 107 ಕೇಸು ದಾಖಲಿಸುವುದು ಪರಿಹಾರವಲ್ಲ. 144 ಸೆಕ್ಷನ್ ಜಾರಿಯಿದ್ದಾಗ 107 ಕೇಸ್ ಹಾಕುವುದು ಸರಿ. ಆದರೆ, ಇಂಥವರನ್ನು ಗಡಿಪಾರು ಮಾಡಬೇಕಿದೆ.

ಇಂಥ ಪ್ರಕರಣಗಳಲ್ಲಿ ಹಿಂದೂ, ಅಲ್ಪಸಂಖ್ಯಾತ ಅಥವಾ ಇನ್ನಾರೇ ಆಗಿರಲಿ, ಸಮಾಜದ ಶಾಂತಿ ಕದಡುವ ಚಿಂತನೆಯಿರುವ ಯಾವ ವ್ಯಕ್ತಿಯನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಇಟ್ಟುಕೊಳ್ಳಬೇಡಿ. ತಕ್ಷಣವೇ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಬಿಸಾಕಿ ಎಂದು ಆದೇಶಿಸಿರುವದಾಗಿ ಸಚಿವ ನಾರಾಯಣಸ್ವಾಮಿ ಹೇಳಿದರು.

ಪ್ರೇಮ್ ಸಿಂಗ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದೆ. ಚಾಕು ಇರಿತದಿಂದ ದೊಡ್ಡಕರುಳಿಗೆ ಹೆಚ್ಚಿನ ಗಾಯವಾಗಿದೆ. ಇಲ್ಲಿ ಬಂದು ನೋಡಿದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇಗ ಗುಣಮುಖರಾಗುತ್ತಾರೆ, ಹೆದರುವುದು ಬೇಡ ಎಂದು ಕುಟುಂಬದವರಿಗೆ ಧೈರ್ಯ ತುಂಬಿ ಬಂದಿದ್ದೇನೆ.

ಮದರಸಾಗಳಲ್ಲಿ ಸಂಸ್ಕಾರ ಕಲಿಸುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ಇಂತಹ ಘಟನೆಗಳನ್ನು ಮುಖಂಡರು, ಮೌಲ್ವಿಗಳು, ಹಿರಿಯರು ಗಮನಿಸಿ ಬುದ್ಧಿ ಹೇಳುವ ಕೆಲಸ ಮಾಡಬೇಕಿದೆ. ಶಾಂತಿ ಕದಡುವ ಕೆಲಸಗಳಿಗೆ ಮುಂದಾದಾಗ ನಾವು ಶಾಂತಿ-ಸೌಹಾರ್ದತೆಯಿಂದ ಬದುಕುವುದು ಕಷ್ಟವಾಗುತ್ತದೆ ಎಂದು ತಿಳಿಹೇಳಬೇಕು. ಎಲ್ಲವೂ ಕೂಡ ಸಂವಿಧಾನದ ಮೇಲೆಯೇ ನಡೆಯುತ್ತದೆ. ಹೊರತಾಗಿ ಯಾವುದೇ ಒಂದು ಜಾತಿ-ಸಮುದಾಯಕ್ಕಾಗಿ ಸರ್ಕಾರ ಇರುವುದಿಲ್ಲ. ಎಲ್ಲಾ ಸರ್ಕಾರವೂ ಕೂಡ ಸಂವಿಧಾನಿಕವಾಗಿ ನಡೆಯುತ್ತದೆ.

ಎಲ್ಲರಿಗೂ ಸಂವಿಧಾನದ ಹಕ್ಕನ್ನು ಕೊಟ್ಟು ಸರ್ಕಾರ ಆಡಳಿತ ನಡೆಸುತ್ತಿದೆ. ಎಸ್ಡಿಪಿಐ, ಪಿಎಫ್ಐ ನಿಷೇಧದ ಬಗ್ಗೆ ಚರ್ಚೆಸುತ್ತಿದ್ದೇವೆ. ಪುನಃ ಯಾವುದೇ ಕಾರಣಕ್ಕೂ ಈ ಸಂಘಟನೆಗಳು ಮರುನಿರ್ಮಾಣವಾಗದಂತಹ ಕಾನೂನುಗಳೇನಾದರೂ ಇದೆಯೇ ಎಂದು ಪರಿಶೀಲಿಸಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಥಹ ಸಂಘಟನೆಗಳನ್ನು ನಿಷೇಧಿಸಿಯೇ ಸಿದ್ಧ ಎಂದು ಪ್ರತಿಕ್ರಿಯಿಸಿದರು.

ವಿರೋಧ ಪಕ್ಷಗಳು ಒಂದು ಸಮುದಾಯದೊಂದಿಗೆ ನಿತ್ಯ ಬೆಂಕಿ ಹಚ್ಚುವ ಕೆಲಸ ಬಿಡಬೇಕು. ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಶಾಂತಿ ಕದಡುವ ಕೆಲಸವನ್ನು ಮಾಡಬಾರದು. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳುತ್ತಿರುವವರು ಯಾರು? ಕಾಂಗ್ರೆಸ್ ಪಕ್ಷದವರು. ಇಂತಹ ಕೆಲಸಗಳ ಹಿಂದೆ ಕಾಂಗ್ರೆಸ್ನವರು ಇಲ್ಲ ಎಂದು ಹೇಳುವಂತಿಲ್ಲ. ಬುದ್ಧಿ ಹೇಳುವುದನ್ನು ಬಿಟ್ಟು, ಸಾವರ್ಕರರನ್ನು ವಿರೋಧಿಸುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಇನ್ಯಾರೂ ಅಲ್ಲ.

ಇಂದು ಹಳ್ಳಿಯಿಂದ ದಿಲ್ಲಿಯವರೆಗೂ, ದೇಶದ ತುದಿಯ ಜಮ್ಮು-ಕಾಶ್ಮೀರದಲ್ಲೂ ತ್ರಿವರ್ಣಧ್ವಜ ಹಾರಾಡುತ್ತಿದೆ. ಇವರ ಕಾಲದಲ್ಲಿ ಎಂದಾದರೂ ಹಾರಿತ್ತಾ? ಇದು ಮೋದಿಜೀ ಮಾಡಿದ ಕೆಲಸ. ಆರ್ಟಿಕಲ್ 370 ರದ್ದು ಮಾಡಿರುವುದು ದೇಶದ ಜನತೆಗೆ ಒಳ್ಳೆಯದಾಗಿದೆ ಎಂಬಂಶ ಅರ್ಥ ಆಗುವವರಿಗೆ ಆಗಿದೆ ಎಂದು ಹೇಳಿದರು.

ಮರ್ಡರ್ ಕೇಸ್ ವಾಪಾಸು ತಕ್ಕೋ, ಇಲ್ಲ ಅಂದ್ರ ನಿಮ್ಮನ್ನ ಜೀವ ಸಹಿತ ಬಿಡಂಗಿಲ್ಲ; ಹಾಡಹಗಲೇ ಭಜರಂಗದಳ ಕಾರ್ಯಕರ್ತನ ಬೆದರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಹೆತ್ತ ಮಗನನ್ನು ಕಳೆದುಕೊಂಡ ಆ ಕುಟುಂಬ ಸಂಕಷ್ಟ, ಆ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಮತ್ತೇ ಈಗ ಆ ಕುಟುಂಬಕ್ಕೆ ಜೀವ ಭಯ ಎದುರಾಗಿದೆ.

ಹೌದು ನಿನ್ನೆ ಸ್ವಾತಂತ್ರ್ಯೋತ್ಸವ ದಿನವೇ ಹಾಡುಹಗಲೇ ಭಜರಂಗದಳದ ಕಾರ್ಯಕರ್ತ ಎನ್ನಲಾಗುತ್ತಿರುವ ಯುವಕನೊಬ್ಬ, ಮನೆಗೆ ಹೊರಟಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಮರ್ಡರ್ ಕೇಸ್ ವಾಪಾಸು ತಕ್ಕೋ…ಇಲ್ಲ ಅಂದ್ರ ನಿನ್ನ ಮತ್ತು ನಿನ್ನ ಇಬ್ಬರು ಮಕ್ಕಳನ್ನು ಜೀವ ಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಸುಭಾನಸಾಬ್ ಅಬ್ದುಲ್ ಸಾಬ್ ಶಾಪೂರ ಎಂಬುವವರ ಮಗ ಸಮೀರ ಶಾಪೂರನನ್ನು ಜನವರಿ ತಿಂಗಳಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಆ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿ ಎಲ್ಲಡೆ ವೈರಲ್ ಆಗಿತ್ತು. ಕೊಲೆ ಮಾಡಿದವರು ಭಜರಂಗದಳ ಕಾರ್ಯಕರ್ತರು ಎಂದು ಸಮೀರನ ಕುಟುಂಬದವರು ಆರೋಪವಾಗಿತ್ತು. ಆ ಪ್ರಕರಣ ಇನ್ನೂ ನ್ಯಾಯಲಯದಲ್ಲಿ ಚಾಲ್ತಿಯಲ್ಲಿದೆ.

ಈಗ ಇದೇ ಪ್ರಕರಣ ವಾಪಾಸು ತಕ್ಕೋ ಅಂತ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿರೂಪಾಕ್ಷ ತಂದೆ ಚಂದ್ರಣ್ಣ ಸಂಬಾಳದ ಎಂಬಾತ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಆಗ ಸ್ಥಳದಲ್ಲಿದ್ದ ಜನರು ಬಿಡಿಸಿದ್ದಾರೆ. ಆಗ ಸುಭಾನಸಾಬ್ ತಮ್ಮ ಇನ್ಬೊಬ್ಬ ಪುತ್ರನನ್ನು ಕರೆಸಿಕೊಂಡಿದ್ದಾರೆ. ಆಗಲೂ ವಿರೂಪಾಕ್ಷ ಸುಮ್ಮನಿರದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಹಾಗೂ ನಿನ್ನ ಮಕ್ಕಳನ್ನು ಜೀವಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.

ರಾತ್ರಿಯವರೆಗೂ ಸತಾಯಿಸಿದ ಪೊಲೀಸರು.!?

ನರಗುಂದ ಪಟ್ಟಣದಲ್ಲಿ ಒಂದಿಷ್ಟು ಸೂಕ್ಷ್ಮ ವಾತಾವರಣದ ಇದೆ. ಆಗಾಗ ಒಂದಿಷ್ಟು ಜನ ಯುವಕರು ಹಲ್ಲೆ ಮಾಡೋದು ಗಲಾಟೆ ಮಾಡೋದು ಸಾಮಾನ್ಯವಾಗಿದೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ್ ವಹಿಸಿದ್ದಾರೆ. ಆದರೆ ಕೆಲ ಪೊಲೀಸರ ತಾರತಮ್ಯದಿಂದ ಕೆಲ ಪುಂಡ ಪೋಕರಿಗಳಿಗೆ ಅನುಕೂಲವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆಯ ಮಧ್ಯಾಹ್ನ ಘಟನೆ ನಡೆದರೂ ರಾತ್ರಿಯವರೆಗೂ ದೂರು ಸ್ವೀಕರಿಸದೇ ರಾಜೀ ಪಂಚಾಯತಿ ಮಾಡಿಕೊಳ್ಳಿ ಎಂಬ ಉಪದೇಶ ನೀಡಿದ್ದಾರೆ. ಕೊನೆಗೂ ಫಿರ್ಯಾದಿದಾರರ ಒತ್ತಡ ಜಾಸ್ತಿಯಾದಾಗ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಹಲ್ಲೆ, ಜೀವ ಬೆದರಿಕೆ ಹಾಕಿದ್ದು ನಾಲ್ಕು ಜನ ಯುವಕರಂತೆ, ಆದರೆ ಪೊಲೀಸರು ಮಾತ್ರ ಒಬ್ಬನ ಮೇಲೆ ಮಾತ್ರ ಕೇಸ್ ಮಾಡಿಕೊಂಡು ಇನ್ನೂ ಮೂರು ಜನರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಾಡುಹಗಲೇ ಗದಗದಲ್ಲಿ ಮನೆ ಕಳ್ಳತನ; 5 ಲಕ್ಷ ನಗದು, 25 ತೊಲೆ ಚಿನ್ನಾಭರಣ ದೋಚಿ ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಇವತ್ತು ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ. ಮನೆಯವರೆಲ್ಲ ಧ್ವಜಾರೋಹಣದ ಸಡಗರದಲ್ಲಿದ್ದಾಗ ಹಿಂಬಾಗಿಲಿನ ಚಿಲಕ ಮುರಿದು 5 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ಕಳ್ಳತನವಾದ ಘಟನೆ ಸೋಮವಾರ ನಗರದ ಹುಡ್ಕೋ ಕಾಲೋನಿಯ ಮೂರನೇ ಕ್ರಾಸ್‌ನಲ್ಲಿ ಬೆಳಿಗ್ಗೆ ನಡೆದಿದೆ.

ಕಿವಿಯೋಲೆ, ಬಳೆ ಹಾಗೂ ಮಾಂಗಲ್ಯ ಸರ ಸೇರಿದಂತೆ 250 ಗ್ರಾಮ ಚಿನ್ನಾಭರಣ ದೋಚಿದ್ದಾರೆ. ಬೆಳ್ಳಿಯ ಸಾಮಾನುಗಳನ್ನು ಮುಟ್ಟದೇ ಕೇವಲ ಬಂಗಾರ ಹಾಗೂ ನಗದು ಮಾತ್ರ ಕಳ್ಳರು ದೋಚಿದ್ದಾರೆ.

ಶಿರಹಟ್ಟಿ ತಾಲೂಕಿನ ಮಾಗಡಿ ಬಳಿಯ ಪರಸಾಪುರ ಗ್ರಾಮದ ಬಳಿ ಸ್ಟೋನ್ ಕ್ರಸರ್ ಹೊಂದಿರುವ ಬಸವರಾಜ್ ಎಸ್ ರಾಯಪುರ ಎಂಬುವವರದೇ ಮನೆ ಕಳ್ಳತನವಾಗಿದೆ.

ಖದೀಮರು ವಿಗ್ ಧರಿಸಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಕಳ್ಳರು ರಸ್ತೆಯಲ್ಲಿ ಸಂಚರಿಸುವ ಚಲನವಲನಗಳು ಅದೇ ಪ್ರದೇಶದ ಮನೆಯೊಂದರ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

ಧ್ವಜಾರೋಹಣ ಮುಗಿಸಿ ಅರ್ಧ ಗಂಟೆಯಲ್ಲಿಯೇ ಮನೆಗೆ ಮರಳಿ ನೋಡಿದಾಗ ಹಿಂದಿನ ಬಾಗಿಲ ತೆರದಿದ್ದು ನೋಡಿ ಗಾಬರಿ ಬಿದ್ದು ಬೆಡ್ ರೂಮ್, ಮಹಡಿ ಮನೆಯ ಬೆಡರೂಮನ್ ಕಪಾಟು ತೆರದಿದ್ದು ನೋಡಿ‌ ಬೆಚ್ಚಿ ಬಿದ್ದಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಸಿಪಿಐ ಸುಬ್ಬಾಪೂರಮಠ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಕೇವಲ ಅರ್ಧಗಂಟೆಯಲ್ಲಿ ನಡೆದ ಕಳ್ಳರ ಕರಾಮತ್ ಗೆ ಮನೆ ಮಾಲೀಕ ಬಸವರಾಜ್ ದಂಪತಿ ದಂಗಾಗಿದ್ದು, ಹಾಡುಹಗಲೇ ಈ ರೀತಿ ಕಳ್ಳತನ ನಡೆದರೆ ಹೇಗೆ ಎಂದು ಮಾಧ್ಯಮದವರ ಮುಂದೆ ಆತಂಕ ವ್ಯಕ್ತಪಡಿಸಿದರು.

ನವಲಗುಂದ ಸಿಪಿಐ ಡಿ.ಬಿ ಪಾಟೀಲ್ ಗೆ ರಾಷ್ಟ್ರಪತಿ ಪದಕ

0

ವಿಜಯಸಾಕ್ಷಿ ಸುದ್ದಿ, ನವಲಗುಂದ

ಪ್ರತಿ ವರ್ಷ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕೊಡಮಾಡುವ ರಾಷ್ಟ್ರಪತಿ ಪದಕ ಈ ವರ್ಷವೂ ಧಾರವಾಡ ಜಿಲ್ಲೆಯ ನವಲಗುಂದದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಬಿ ಪಾಟೀಲ್ ಸೇರಿದಂತೆ ರಾಜ್ಯದ 18 ಜನ ಪೊಲೀಸ್ ಅಧಿಕಾರಿಗಳಿಗೆ ದೊರೆತಿದೆ.

ಸದ್ಯ ನವಲಗುಂದ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಬಿ ಪಾಟೀಲ್ ಅವರು ಸುಧೀರ್ಘ ಕಾಲ‌ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ರಾಷ್ಟ್ರಪತಿ ಪದಕ ದೊರಕಿದೆ.

ಮೂಲತಃ ಬಾಗಲಕೋಟ ಜಿಲ್ಲೆಯವರಾದ ಡಿ.ಬಿ ಪಾಟೀಲ್, ಗದಗ ಜಿಲ್ಲೆಯ ಮುಂಡರಗಿ, ರೋಣ‌ ಹಾಗೂ ನರಗುಂದದಲ್ಲಿ ಸೇವೆ ಸಲ್ಲಿಸಿದ್ದಾರೆ.

ಸುಧೀರ್ಘ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿರುವ ಪಾಟೀಲರ ಸೇವೆ ಗುರುತಿಸಿ ದೇಶದ ಅತ್ಯುನ್ನತ ರಾಷ್ಟ್ರಪತಿ ಪದಕ ದೊರತಿದೆ.

ಧಾರವಾಡ ಜಿಲ್ಲೆಯ ಎಸ್ಪಿ ಜೆ ಲೋಕೇಶ್, ಡಿವೈಎಸ್ಪಿ ಎಮ್ ಎಸ್ ಸಂಕದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ್ ಅವರಿಗೆ ರಾಷ್ಟ್ರಪತಿ ಪದಕ ದೊರೆತ ಸುದ್ದಿ ತಿಳಿದ ಗದಗ ಜಿಲ್ಲೆಯ ಅವರ ಸಿಬ್ಬಂದಿ ಸಂತಸಗೊಂಡಿದ್ದು, ಸೇವೆಯನ್ನು ಶ್ಲಾಘಿಸಿದ್ದಾರೆ.

ಸಾವರ್ಕರ್ ಹೋರಾಟದ ಫಲವೇ ಡಿಕೆಶಿ ಸಾವಿರಾರು ಕೋಟಿ ಒಡೆಯರಾಗಿದ್ದು; ಸಚಿವ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಡಿಕೆಶಿ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸೇರಿದರೆ ಒಳ್ಳೆಯದು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹರಿಹಾಯ್ದಿದ್ದಾರೆ.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲಾಪಾನಿ ಶಿಕ್ಷೆ ಅಂದರೆ ಡಿಕೆಶಿಗೆ ಗೊತ್ತಿದೆಯಾ? ಟಿಪ್ಪು ಸುಲ್ತಾನನ ಕೊಡುಗೆ ಏನಿದೆ? ಟಿಪ್ಪುಸುಲ್ತಾನ್ ಭಾವಚಿತ್ರ ಹರಿದವರನ್ನು ಬಂದಿಸಬೇಕಾ? ಸಾವರ್ಕರ್ ಭಾವಚಿತ್ರ ತೆರವು ಮಾಡಿದವರನ್ನು ಮೆರವಣಿಗೆ ಮಾಡಬೇಕಾ? ತುಷ್ಟಿಕರಣಕ್ಕೆ ಇತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಪ್ರತಿಪಕ್ಷ ನಾಯಕರ ಕೈಗೆ ದೇಶ, ರಾಜ್ಯ ಸಿಕ್ಕರೆ ಏನಾಗುತ್ತದೆ.? ಕೇವಲ ಓಟ್ ಬ್ಯಾಂಕ್‍ಗಾಗಿ ಮತ್ತೊಮ್ಮೆ ಶಾಸಕರಾಗಲು ರಾಜ್ಯ, ದೇಶವನ್ನು ಅಡವಿಡುವ ಕೆಲಸ ಮಾಡಬಾರದು. ಸಾವರ್ಕರ್ ಅವರ ಹೋರಾಟದ ಪ್ರತಿಫಲವಾಗಿಯೇ ಇಂದು ಸಾವಿರಾರು ಕೋಟಿ ಒಡೆಯರಾಗಿ ಮೆರೆಯುತ್ತಿದ್ದಾರೆ ಅಂತ ಡಿಕೆಶಿ ವಿರುದ್ದ ಕಿಡಿಕಾರಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಮಾರ್ಕೆಟಿಂಗ್ ಕಮ್ಯುನಿಕೇಶನ್ ಆ್ಯಂಡ್ ಅಡ್ವರ್ಟೈಸಿಂಗ್ ನಿಗಮದ ಅಧ್ಯಕ್ಷ ಎಮ್ ಎಸ್ ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.