ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳದಲ್ಲಿ 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ (MHPS) ಶಾಲೆಯ ಕಟ್ಟಡ ಉಳಿಸುವಂತೆ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಶಾಲಾ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು ಹೈದ್ರಾಬಾದ್ ನಿಜಾಮ್ ಆಳ್ವಿಕೆಯ ಕಾಲದಲ್ಲಿ ಉಪವಿಭಾಗಿಧಿಕಾರಿಗಳ ಬಂಗಲೆಯಾಗಿತ್ತು. ಈ ಕಟ್ಟಡ ನೆಲಸಮಗೊಳಿಸಿ ಅಲ್ಲಿ ಗುರುಭವನ ಕಟ್ಟಲು ಉದ್ದೇಶಿಸಿರುವ ನಿರ್ಧಾರ ಕೂಡಲೇ ಕೈ ಬಿಡಬೇಕು. ಕಟ್ಟಡವನ್ನು ಸಂರಕ್ಷಿಸಿ ಶೈಕ್ಷಣಿಕ ಚಟುವಟಿಕೆಗೆ ಕಟ್ಟಡ ಬಳಕೆಯಾಗಲಿ ಎಂದು ಆಗ್ರಹಿಸಿದರು.
100 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಟ್ಟಡ ಉಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೈ.ಕ.ವಿಮೋಚನೆಗೆ ಮೊದಲ ಹೆಜ್ಜೆಯಾಗಿ ಅಂದಿನ ಭಾರತ ಸರಕಾರ ಇದೇ ಬಂಗಲೆಯನ್ನು ವಶಪಡಿಸಿಕೊಂಡಿತ್ತು. ಹಳೆಯ ಕಟ್ಟಡಗಳನ್ನು ಐತಿಹಾಸಿಕ ಕಮಾನುಗಳನ್ನು ಉಳಿಸಿಕೊಳ್ಳಬೇಕು. ಈ ಕಟ್ಟಲು ಉದ್ದೇಶಿಸಿರುವ ಗುರುಭವನ ಬೇರೆ ಕಡೆ ನಿರ್ಮಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದರು.
ಕಟ್ಟಡವನ್ನು ನೆಲಸಮಗೊಳಿಸುವ ಬದಲು, ಅದನ್ನು ಸಂರಕ್ಷಿಸಿ ಅಲ್ಲಿ ಹೈದ್ರಾಬಾದ್ ವಿಮೋಚನೆಯ ಹೋರಾಟದ ಮ್ಯೂಸಿಯಂ, ಗ್ರಂಥಾಲಯ, ಆವರಣದಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಅಮರೇಶ ಮುರಳಿ, ಬಸವರಾಜ ಕರುಗಲ್, ಡಿ.ಗುರುರಾಜ, ನಾಗರಾಜ ನಾಯಕ ಡೊಳ್ಳಿನ್, ಗಿರೀಶ್ ಪಾನಘಂಟಿ, ಮುನೀರ್ ಸಿದ್ದಕಿ, ರಫೀಕ್, ಮಂಜುನಾಥ ಸೊಂಡಲಿ, ಕಾಶೀನಾಥ ಹಂಚಿನಾಳ, ಸಚ್ಚಿದಾನಂದ, ಶ್ರೀಕಾಂತ್ ಭದ್ರಾಪುರ, ಹುಸೇನ್ ಪಾಷಾ, ಜಯರಾಮರಡ್ಡಿ ತೋಟದ ಮತ್ತಿತರರು ಇದ್ದರು.
ತಮ್ಮೋಳಗಿನ ಭಯ ಒತ್ತಡಗಳನ್ನು ಬದಿಗಿಟ್ಟು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದರು.
ಸೋಮವಾರ ಕ್ಷೇತ್ರದ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಶುಭ ಹಾರೈಸಿದರು.
ನವಲಗುಂದ ಬಾಲಕ ಬಾಲಕಿಯರ ಮಾಡೆಲ್ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಎಸ್.ಮಾಯಾಚಾರಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದ ಮೂಲಕ ಸ್ವಾಗತಿಸಿಕೊಂಡರು.
ಪರೀಕ್ಷಾ ಅವಧಿ ಮುಗಿದ ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ, ಕೊವಿಡ್ ಮಾರ್ಗಸೂಚಿಯಂತೆಯೇ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಹಾಜರಾಗಲು ಒಟ್ಟು 2588 ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದರು ಇದರಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ 24 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ. ಬಹು ಚರ್ಚಿತ ಹಿಜಾಬ್ ಧರಿಸುವ ವಿಚಾರವಾಗಿ ಯಾವೊಬ್ಬ ಮುಸ್ಲಿಂ ವಿದ್ಯಾರ್ಥಿನಿಯು ಗೈರಾಗದೇ ಸಾಮರಸ್ಯ ಮೆರೆದಿದ್ದು ಈ ಕ್ಷೇತ್ರದ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಪೂರ್ವದಲ್ಲಿಯೇ ಮೇಲಾಧಿಕಾರಿಗಳು ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿದ ಪರಿಣಾಮವೇ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು ಹೆಮ್ಮೆ ಎನಿಸುತ್ತದೆ ಎಂದು ಬಿ.ಎಸ್.ಮಾಯಾಚಾರಿ ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು.
ತಾಲೂಕಿನ ಚಿಕ್ಕನರಗುಂದ ಗ್ರಾಮದ ಕೆಪಿಎಸ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ ನೀಡಿ, ಪ್ರೌಢಶಾಲೆ ವತಿಯಿಂದ ನೀಡಿದ ಪೆನ್, ಮಾಸ್ಕ್‌ಗಳನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.
ನರಗುಂದ ಪೊಲೀಸ್ ಠಾಣೆಯ ಸಿಪಿಐ ಜಯಂತ್ ಗೌಳಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ರವಿವಾರವೇ ಗ್ರಾಮ ಪಂಚಾಯತಿ ವತಿಯಿಂದ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಗ್ರಾಪಂ ಪಿಡಿಒ ಶೈನಾಜ್ ಮುಜಾವರ ಅವರು ಸಿಬ್ಬಂದಿಗಳಿಂದ ಸ್ಯಾನಿಟೈಸ್ ಮಾಡಿಸಿ, ಸ್ವಚ್ಚಗೊಳಿಸಿದ್ದರು.
ಇನ್ನು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಮಲ್ಲಾಪೂರ ಅವರು ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಅದರಂತೆ, ಸೋಮವಾರ ನಡೆದ ಪರೀಕ್ಷೆ ಶಾಂತಿ ಹಾಗೂ ನಿರ್ಭೀತಿಯಿಂದ ನಡೆಯಲು ಸಹಕರಿಸಿದ ಪರೀಕ್ಷಾ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುತ್ತು ರಾಯರಡ್ಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಐ.ಎಂ.ಹುರಕಡ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಹಳೇಮನಿ ಸೇರಿದಂತೆ ಅನೇಕರು ಇದ್ದರು.
ತೀವ್ರ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಷಯದಲ್ಲಿ ಕೊನೆಗೂ ಅಧ್ಯಕ್ಷ ಮಂಜು ಜಾಧವ್ ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ಸೋಮವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಪ್ರಕರಣ ಸುಖಾಂತ್ಯ ಕಂಡಂತಾಗಿದೆ.
ಈ ಹಿಂದೆ ಯಾರಿಗೂ ಬಹುಮತ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು 30 ತಿಂಗಳ ಅಧಿಕಾರವಧಿಯಲ್ಲಿ ಮೊದಲು 15 ತಿಂಗಳು ಕಾಂಗ್ರೆಸ್ ಹಾಗೂ ಉಳಿದ 15 ತಿಂಗಳು ಬಿಜೆಪಿಯವರು ಆಡಳಿತ ಮಾಡುವುದಾಗಿ ಹಿರಿಯರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡಿದ್ದರು.
ಆ ಒಪ್ಪಂದದಂತೆ ಈಗ ಅಧ್ಯಕ್ಷ ಮಂಜು ಜಾಧವ್ ಅವರ ಅಧಿಕಾರದ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಆದರೆ ಇದಕ್ಕೆ ಒಪ್ಪದ ಮಂಜು ಜಾಧವ್ ಪಕ್ಷದ ಹಿರಿಯರು ಒಳ ಒಪ್ಪಂದ ಏನು ಮಾಡಿಕೊಂಡಿದ್ದಾರೆಂಬುದು ನನಗೆ ಗೊತ್ತಿಲ್ಲ, ಈಗ ನಮ್ಮ ಪಕ್ಷಕ್ಕೆ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿರುವ ಕಾರಣ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಹಿರಿಯರು ರಾಜೀನಾಮೆ ಕೊಡುವಂತೆ ಸೂಚನೆ ನೀಡಿದರೆ ಮಾತ್ರ ಕೊಡುವುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷದವರು ಸಮಯ ಕಳೆಯುತ್ತಿದ್ದಾರೆ ಹೊರತು ರಾಜೀನಾಮೆ ಕೊಡುತ್ತಿಲ್ಲವಾದ ಕಾರಣ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ರಾಜೀ ಸಂಧಾನದ ಸಂದರ್ಭದಲ್ಲಿ ಮುತುವರ್ಜಿ ವಹಿಸಿದ್ದ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನು ಒತ್ತಾಯಿಸಿದ್ದರು.
ಹೊಸದಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿರಬಹುದು. ಆದರೆ ವಚನಭ್ರಷ್ಟರು ಎನಿಸಿಕೊಳ್ಳುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದರಿಂದ ಮಂಜು ಜಾಧವ್ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಈ ಮೊದಲು ಜೆ.ಡಿ.ಎಸ್ 9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾರಣ ಅವರ ಜೊತೆಗಿದ್ದ ಪುರಸಭೆ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು ಈಗ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿದೆ. ಬಿಜೆಪಿ ಬಳಿ ಕೇವಲ 6 ಸದಸ್ಯರಿದ್ದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸಂಜೆ ಸುರಿದ ಭಾರಿ ಮಳೆ ಸಹಿತ ಬಿರುಗಾಳಿಗೆ ಪಟ್ಟಣದ ಜನನಿಬೀಡ ಪ್ರದೇಶದಲ್ಲಿ ಹೆಚ್ಚು ಮರಗಳು ನೆಲಕ್ಕುರುಳಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಸಂಜೆ ಬೀಸಿದ ಬಿರುಗಾಳಿಗೆ ಪಟ್ಟಣದ ಮಿನಿ ವಿಧಾನಸೌದ, ಮಾಡೆಲ್ ಹೈಸ್ಕೂಲ್ ಆವರಣ ಹಾಗೂ ಲಿಂಗರಾಜ ವೃತ್ತದ ಬಳಿಯ ರೈತ ಭವನದ ಮುಂದೆ ಗಿಡಗಳು ನೆಲಕ್ಕುರಳಿದ್ದು ಕಂಡುಬಂತು.
ಇದರಿಂದಾಗಿ ಘಟನಾ ಸ್ಥಳಗಳಿಗೆ ಆಗಮಿಸಿದ್ದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದ ಮರಗಳನ್ನು ತ್ವರಿತವಾಗಿ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಕಂಡುಬಂತು.
ಆದರೂ 4 ಗಂಟೆಗೂ ಹೆಚ್ಚುಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಕಂಡುಬಂತು.
ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮೊಸಳೆ ಕಚ್ಚಿ ಮೃಗಾಲಯದ ಪ್ರಾಣಿಪಾಲಕ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಗದಗ ತಾಲೂಕಿನ ಬಿಂಕದಕಟ್ಟಿ ಮೂಲದ ಮೃತ್ಯುಂಜಯ ಬಸಯ್ಯ ಹಿರೇಮಠ ಎಂಬ ಪ್ರಾಣಿಪಾಲಕ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದಿನಂತೆ ಶನಿವಾರ ಮೊಸಳೆ ಮನೆ ಸ್ವಚ್ಚಗೊಳಿಸಲು ಹೋದಾಗ ದೊಡ್ಡ ಮೊಸಳೆ ಪ್ರಾಣಿಪಾಲಕ ಮೃತ್ಯುಂಜಯ ಅವರ ಮೇಲೆ ದಾಳಿ ನಡೆಸಿ ತಲೆಗೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಅಲ್ಲಿಯೇ ಇದ್ದ ಇನ್ನಿತರ ಸಿಬ್ಬಂದಿಗಳು ಕಟ್ಟಿಗೆಯಿಂದ ಮೊಸಳೆಗೆ ಹೊಡೆದು ಬಿಡಿಸಿದ್ದಾರೆ. ಬಡ ಕುಟುಂಬದ ಮೃತ್ಯುಂಜಯ ಅವರು ಬಿಂಕದಕಟ್ಟಿ ಮೃಗಾಯಲದಲ್ಲಿ ಕಳೆದ 20 ವರ್ಷಗಳಿಂದ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಎಫ್ ಒ ಚೈತ್ರಾ ಮೆಣಸಿನಕಾಯಿ, ‘ಗದಗ ಮೃಗಾಲಯದಲ್ಲಿ ಪ್ರಾಣಿ ಪಾಲಕ ಮೃತ್ಯುಂಜಯ ಅವರು ಮೊಸಳೆ ಮನೆ ಸ್ವಚ್ಛಗೊಳಿಸಲು ಹೋದಾಗ ಮೊಸಳೆ ದಾಳಿ ಮಾಡಿದ್ದು, ತಕ್ಷಣ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 20 ವರ್ಷದಿಂದ ಮೃತ್ಯುಂಜಯ ಅವರೇ ಮೊಸಳೆ ಮನೆ ಸ್ವಚ್ಚಗೊಳಿಸುವುದು, ಮೊಸಳೆಗೆ ಆಹಾರ ನೀಡುವುದನ್ನು ಮಾಡುತ್ತಿದ್ದರು. ಯಾವತ್ತೂ ಹೀಗೆ ಆಗಿರಲಿಲ್ಲ. ಆದರೆ, ದುರದೃಷ್ಟವಶಾತ್ ಶನಿವಾರ ಈ ಘಟನೆ ನಡೆದಿದೆ’ ಎಂದರು.
‘ಮೃಗಾಲಯದಲ್ಲಿರುವ ಮೊಸಳೆ ಮನೆಯಲ್ಲಿ ಎರಡು ಭಾಗ ಮಾಡಲಾಗಿದೆ. ಒಂದು ಭಾಗಕ್ಕೆ ಮೊಸಳೆಯನ್ನು ಸ್ಥಳಾಂತರಿಸಿದ ಮೇಲೆಯೇ ಆ ಮನೆಯನ್ನು ಸ್ಪಚ್ಚಗೊಳಿಸಲಾಗುತ್ತದೆ. ಆದರೆ, ಮೃಗಾಲಯದಲ್ಲಿ ಇವತ್ತು ಬಹಳ ಗದ್ದಲ ಇದ್ದಿದ್ದರಿಂದ ಅವರೊಬ್ಬರೆ ಸ್ವಚ್ಛಗೊಳಿಸಲು ಹೋಗಿದ್ದರು. ಈ ವೇಳೆ ದೊಡ್ಡ ಮೊಸಳೆ ದಾಳಿ ಮಾಡಿದೆ. ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವುದರಿಂದ ಜಾಗೃತಿ ವಹಿಸದೆ ನಿಷ್ಕಾಳಜಿ ತೋರಿರಬಹುದು. ಆದರೆ, ಈ ಘಟನೆ ಹೇಗಾಯಿತು ಎಂಬುವುದರ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಕಳೆದ ಇಪ್ಪತ್ತು ವರ್ಷಗಳಿಂದ ಮೃತ್ಯುಂಜಯ ಅವರೇ ಮೊಸಳೆ ಮನೆ ಸ್ವಚ್ಚಗೊಳಿಸುತ್ತಾ ಬಂದಿದ್ದಾರೆ. ಶನಿವಾರ ಸ್ವಚ್ಛಗೊಳಿಸಲು ಹೋದಾಗ ಮನೆಯಲ್ಲಿದ್ದ ಹುಲ್ಲಿನ ಮೇಲಿದ್ದ ಮೊಸಳೆ ದಾಳಿ ನಡೆಸಿ ಗಾಯಗೊಳಿಸಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯ ಆರೋಗ್ಯವಾಗಿದ್ದಾರೆ’ ಎಸಿಎಫ್ ಪರಿಮಳ ತಿಳಿಸಿದರು.
ಮರಳು ಸಾಗಿಸಲು ಅಧಿಕೃತ ದಾಖಲೆಗಳನ್ನು ಹೊಂದಿರುವ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸುವುದು, ಪರವಾನಿಗೆ ಇಲ್ಲದೇ ಮರಳು ಸಾಗಿಸುವ ಲಾರಿಗಳನ್ನು ಹಿಡಿದು ತಮಗಿಷ್ಟ ಬಂದಂತೆ ಪೊಲೀಸ್ ಇಲಾಖೆಯವರು ಬಿಟ್ಟು ಕಳಿಸುವುದನ್ನು ಖಂಡಿಸಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಶನಿವಾರ ಪ್ರತಿಭಟನೆ ಮಾಡಿದರು.
ಮರಳು ಸಾಗಿಸಲು ಪರವಾನಿಗೆ ಹೊಂದಿರದ ಹಾಗೂ ಹೇವಿ ಲೋಡ್ ಹಾಕಿಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು (ಕೆಎ26 ಎ 5742) ಪೊಲೀಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ಹಿಡಿದು ಯಾವುದೇ ಪ್ರಕರಣವನ್ನು ದಾಖಲಿಸದೇ ಮೌಖಿಕವಾಗಿ ಮಾತುಕತೆ ನಡೆಸಿ ಬಿಟ್ಟು ಕಳುಹಿಸುತ್ತಿದ ಸಂದರ್ಭದಲ್ಲಿ ಸ್ಥಳೀಯ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಲಾರಿ ತಡೆದು ಪ್ರತಿಭಟನೆ ನಡೆಸಿದರು.
ಪೊಲೀಸ್ ಅಧಿಕಾರಿಗಳು ತಮಗಿಷ್ಟ ಬಂದಂತೆ ಮರಳು ಸಾಗಿಸುವ ಲಾರಿಗಳನ್ನು ಹಿಡಿಯುತ್ತಾರೆ, ಮಾತುಕತೆ ಸಫಲವಾದರೆ ಬಿಟ್ಟು ಕಳಿಸುತ್ತಾರೆ, ಮಾತುಕತೆ ಸಫಲವಾಗದಿದ್ದರೆ ಪ್ರಕರಣ ದಾಖಲಿಸುತ್ತಿದ್ದು, ಇದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅಧಿಕೃತ ಪರವಾನಿಗೆ ಹೊಂದಿರುವ ಪ್ರಾಮಾಣಿಕ ಟಿಪ್ಪರ್ ಮಾಲಿಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ದ ಹರಿಹಾಯ್ದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ನ್ಯಾಯ ಒದಗಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‍ನ ದಾಖಲೆಗಳನ್ನು ಪರಿಶೀಲಿಸಿದಾಗ ಮರಳು ಸಾಗಿಸುವ ಯಾವುದೇ ಪರವಾನಿಗೆ ಹೊಂದಿರದ ಕಾರಣ ಗಣಿ ಮತ್ತು ಭೂವಿಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಹೇಳಿ ಟಿಪ್ಪರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದ ಗೌರವಾಧ್ಯಕ್ಷ ರಾಜೇಸಾಬ ಹಂಚಿನಾಳ, ಅಧ್ಯಕ್ಷ ಖಾಜೆಸಾಬ ಹಂಚಿನಾಳ, ಉಪಾಧ್ಯಕ್ಷ ಸಿದ್ದಪ್ಪ ಹಿರಶೆಡ್ಡಿ, ಕಾರ್ಯದರ್ಶಿ ಆನಂದ ಕುಮ್ಮಿ, ಬಸವರಾಜ ಕರಮಳ್ಳಿ, ಲಿಯಾಕಲ್ ಕಾಸ್ತರ, ಹೈದರಲಿ ಜಮಖಾನ, ಸಿದ್ದಪ್ಪ ಮೇಲಿನಮನಿ ಪಾಲ್ಗೊಂಡಿದ್ದರು.
ಸಿನಿಮಾ: RRR ಪಾತ್ರವರ್ಗ: ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ನಿರ್ದೇಶನ: ಎಸ್.ಎಸ್. ರಾಜಮೌಳಿ ಛಾಯಾಗ್ರಹಣ: ಕೆ.ಕೆ.ಸೆಂಥಿಲ್‌ಕುಮಾರ್ ಸಂಗೀತ: ಎಂ.ಎಂ.ಕೀರವಾಣಿ ನಿರ್ಮಾಣ: ಡಿವಿವಿ ದಾನಯ್ಯ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ ರೇಟಿಂಗ್: 3.5/5
-ಬಸವರಾಜ ಕರುಗಲ್. ರಾಜಮೌಳಿ ನಿರ್ದೇಶನದ ಸಿನಿಮಾ ಅಂದ್ರೆ ನಿರೀಕ್ಷೆಯ ರೇಂಜೇ ಬೇರೆ. ಅದರಲ್ಲೂ ಅವರ ನಿರ್ದೇಶನದ ಮಲ್ಟಿ ಸ್ಟಾರ್ ಸಿನಿಮಾ ಅಂದ್ರೆ ಕೇಳ್ತಿರಾ? ಇಂಥ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಥೇಟರ್‌ಗೆ ಹೋದರೆ ಕೊಂಚ ನಿರಾಸೆಯಾಗೊದಂತು ಖಚಿತ.
ಅವರ ಹಿಂದಿನ ಸಿನಿಮಾಗಳು, ಮೇಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರೋದೇ. ಆರ್‌ಆರ್‌ಆರ್ ಬಗ್ಗೆ ಸಹ ಅಂಥದ್ದೇ ಕಲ್ಪನೆ ಮೂಡೋದು ಸಹಜ. ರಾಜಮೌಳಿ ಬೋರ್ ಆಗದಂತೆ ಕಥೆ ಹೆಣೆದಿದ್ದಾರೆ. ದೃಶ್ಯ ವೈಭವ, ಮೇಕಿಂಗ್ ನ ಸೆಳೆಯೋದು ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ.
ಇದೊಂದು ಸ್ವಾತಂತ್ರ್ಯಪೂರ್ವ ಹಿನ್ನೆಲೆಯ ಗೆಳೆತನ ಮತ್ತು ಹಗೆತನದ ಕಥೆ. ನೀರು, ಬೆಂಕಿ ಮತ್ತು ರೌದ್ರದ ಸಾಮ್ಯತೆಯನ್ನು ಸೂಕ್ಷ್ಮವಾಗಿ ತೆರೆದುಕೊಳ್ಳುತ್ತಲೇ ಕಥೆ ಶುರುವಾಗುತ್ತದೆ.
ಕಾಡಿನ ಎಳೆಯ ಹಾಡಿನ ಹಕ್ಕಿಯನ್ನು ಬ್ರಿಟಿಷರು ಎಳೆದೊಯ್ಯುವ ಮೂಲಕ ಲಾಲಾಲಜಪತ್ ರಾಯ್ ಉಲ್ಲೇಖದ ಮುಖಾಂತರ ಇದೊಂದು ಸ್ವಾತಂತ್ರ್ಯ ಸಂಗ್ರಾಮ ಸಮಯದ ಕಥೆ ಎಂದು ಸುಳಿವು ಸಿಗುತ್ತದೆ. ಬ್ರಿಟಿಷರಲ್ಲಿ ಬಂಧಿಯಾದ ಚಿಕ್ಕ ಹುಡುಗಿಯನ್ನು ಬಿಡಿಸಿಕೊಂಡು ಬರಲು ಕಾಡಿನಲ್ಲೇ ಬೆಳೆದ ಕೊಮರಮ್ ಭೀಮ್ (ಜ್ಯೂ. ಎನ್ಟಿಆರ್) ದೆಹಲಿ ಕಡೆಗೆ ಮುಸ್ಲಿಂ ವೇಷದಲ್ಲಿ ಪಯಣ ಬೆಳೆಸುತ್ತಾನೆ. ಈತನನ್ನೇ ಹಿಡಿಯಲು ಮಾರುವೇಷದಲ್ಲಿ ಬಂದ ಬ್ರಿಡಿಷ್ ಅಧಿಕಾರಿ ಅಲ್ಲುರಿ ಸೀತಾರಾಮ್ (ರಾಮಚರಣ್) ಆತನೊಂದಿಗೇನೇ ಗಾಢವಾದ ಗೆಳೆತನ. ಇಂಟರ್‌ವೆಲ್ ವೇಳೆಗೆ ಇಬ್ಬರ ಅಸಲಿ ವೇಷ ತೆರೆದುಕೊಳ್ಳುತ್ತಲೇ ದುಷ್ಮನ್. ಕ್ಲೈಮ್ಯಾಕ್ಸ್‌ನಲ್ಲಿ ಮತ್ತೇ ದೋಸ್ತಿಯಾಗಿ ಜಂಟೀ ಕಾರ್ಯಾಚರಣೆ ಮೂಲಕ ಬ್ರಿಟಿಷರ ಪಡೆಯನ್ನು ಉಡೀಸ್ ಮಾಡಿ ಸಂಪೂರತಣ ಧ್ವಂಸಗೊಳಿಸುತ್ತಾರೆ.
ಈ ಮಧ್ಯೆ ಬ್ರಿಟಿಷ್ ಅಧಿಕಾರಿಯಾಗಿದ್ದವ ಏಕೆ ಅವರ ವಿರುದ್ದ ತಿರುಗಿ ಬಿದ್ದ, ಇಂಗ್ಲಿಷರ ವಶದಲ್ಲಿ ಕಾಡಿನ ಹಾಡು ಹಕ್ಕಿ (ಚಿಕ್ಕ ಹುಡುಗಿ) ಏನಾದಳು ಎಂಬುದನ್ನ ತೆರೆಯ ಮೇಲೆ ನೋಡೀನೇ ತಿಳಿದುಕೊಳ್ಳಬೇಕು.
ಹಲವು ದೃಶ್ಯಗಳನ್ನು ಸಾಂಕೇತಿಕವಾಗಿ, ಸಾಮ್ಯತಾನುಸಾರ ಮಾಡಿದ್ದಾರೆ ರಾಜಮೌಳಿ. ಅವರ ಬುದ್ಧಿವಂತಿಕೆಗೆ ಭೇಷ್ ಎನ್ನಲೇಬೇಕು. ಸಿನಿಮಾದ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆ ಹೊಂದಿದ್ದರೂ ಗೆಖೆತನ, ಹಗೆತನದ ಸರಳವಾದ ಕಥೆ. ಇಂಥ ಅನೇಕ ಸಿನಿಮಾಗಳು ಎಲ್ಲ ಭಾಷೆಯಲ್ಲೂ ಬಂದಿವೆ. ಗೆದ್ದದ್ದು ವಿರಳ. ಸ್ವಾತಂತ್ರ್ಯದ ಕಥೆ ಎಂದಾಕ್ಷಣ ಕೆಲವರಿಗೆ ಡಾಕ್ಯುಮೆಂಟರಿ ಎನ್ನುವ ಭಯ. ಆದರೆ ಇದು ಕಾಲ್ಪನಿಕ ಕಥೆ. ಸಿಂಪಲ್ ಕಥೆಯಾದರೂ, ಅದ್ದೂರಿ ದೃಶ್ಯವೈಭವ, ಎಲ್ಲರನ್ನೂ ಮೆಚ್ವಿಸುವ ಗ್ರಾಫಿಕ್ಸ್‌ಗಳ ಸಡಗರ.
ಸಿನಿಮಾ ಮೂರು ಗಂಟೆ ಇರುವುದರಿಂದ ಸಿನಿಮಾ ಪ್ರೇಕ್ಷಕನಿಂದ ಕೊಂಚ ತಾಳ್ಮೆ ಕೇಳಬಹುದು. ಕೆಲವೊಮ್ಮೆ ಸ್ಕ್ರಿಪ್ಟ್ ಮೀರಿ ಮೇಕಿಂಗ್ ಹೈಲೈಟ್ ಆಗಿ ಬಿಡುತ್ತದೆ. ಇಡೀ ಚಿತ್ರದಲ್ಲಿ ಹೈಲೈಟ್ ಅಂದ್ರೆ ರಾಮ್‌ಚರಣ್, ಜ್ಯೂ.ಎನ್ಟಿಆರ್.
ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ನಟನೆ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಅಲ್ಲುರಿ ಸೀತಾರಾಮ್ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಮಾತಲ್ಲಿ ಹೇಳೋದಾದರೆ ಬೆಂಕಿಯಂತೆ ಪ್ರಜ್ವಲಿಸಿದ್ದಾರೆ. ಜ್ಯೂ.ಎನ್ಟಿಆರ್ ಭೀಮ್ ಆಗಿ ಗಮನ ಸೆಳೆದಿದ್ದಾರೆ. ಕುಟುಂಬದ ವಿಚಾರಕ್ಕೆ ಬಂದರೆ ಎಲ್ಲವನ್ನೂ ನುಂಗಿ ಹಾಕುವ ಸುನಾಮಿಯಾಗಿ ಜ್ಯೂ.ಎನ್ಟಿಆರ್ ಗಮನ ಸೆಳೆಯುತ್ತಾರೆ. ರಾಮ್ ಚರಣ್ ಪಾತ್ರಕ್ಕೆ ಹೆಚ್ಚು ಆದ್ಯತೆ ಇದೆ.
ಆರಂಭದಲ್ಲಿ ಬರುವ ದೃಶ್ಯದಲ್ಲಿ ರಾಮ್ ಚರಣ್-ಜ್ಯೂ.ಎನ್ಟಿಆರ್ ಕಣ್ಣಿನಲ್ಲೇ ಮಾತನಾಡಿಕೊಳ್ಳುವುದು, ಹುಲಿಯನ್ನು ಎದುರು ಹಾಕಿಕೊಳ್ಳುವುದು ಸೇರಿ ಹಲವು ದೃಶ್ಯಗಳು ಗಮನ ಸೆಳೆಯುತ್ತದೆ. ಇಬ್ಬರೂ ಜತೆಯಾಗಿ ಸ್ಟೆಪ್ ಹಾಕಿರೋ ‘ಹಳ್ಳಿ ನಾಟು..’ ಸಾಂಗ್ ಸಿನಿಮಾದ ಎನರ್ಜಿ ಹೆಚ್ಚಿಸಿದೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಆದಾಗ್ಯೂ, ಎರಡೂ ಪಾತ್ರಗಳು ಕಥೆಗೆ ದೊಡ್ಡ ತಿರುವು ನೀಡುತ್ತವೆ. ಬ್ರಿಟಿಷರಾಗಿ ಕಾಣಿಸಿಕೊಂಡ ವಿದೇಶಿ ಕಲಾವಿದರು ಗಮನ ಸೆಳೆಯುತ್ತಾರೆ.
ಕೆ.ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಇಂಟರ್ವಲ್ಗೂ ಮೊದಲು ಬರುವ ಫೈಟ್ ಸೇರಿ ಬಹುತೇಕ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಾಂಗ್ ವಿಚಾರದಲ್ಲಿ ಕೀರವಾಣಿ ಡಲ್ಲು. ಸಿನಿಮಾ ಅದ್ದೂರಿಯಾಗಿ ಮೂಡಿಬರೋಕೆ ನಿರ್ಮಾಪಕ ದಾನಯ್ಯ ರಾಜಮೌಳಿ ಮೇಲೆ ಭರವಸೆ ಇಟ್ಟು ಆರ್‌ಆರ್‌ಆರ್‌ಗೆ ಹಣ ಸುರಿದಿದ್ದಾರೆ. ಬಂಡವಾಳಕ್ಕಂತು ಮೋಸ ಇಲ್ಲ ಎನ್ನಬಹುದು.
ಒಟ್ಟಾರೆಯಾಗಿ ಬಾಹುಬಲಿ ಹ್ಯಾಂಗೋವರ್ ಬಿಟ್ಟು ಥೇಟರ್‌ಗೆ ಹೋಗುವುದಾದರೆ ಎಲ್ಲ ವರ್ಗದ ಜನರು ಆರ್‌ಆರ್‌ಆರ್ ಸಿನಿಮಾ ಎಂಜಾಯ್ ಮಾಡಬಹುದು.
ಪಟ್ಟಣದ ಹೊರವಲಯದಲ್ಲಿರುವ ಪ್ಯಾಟಿಗೌಡ್ರ ಕಣದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಚಿತ್ರನಟ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ.
ರಟ್ಟೀಹಳ್ಳಿ, ಹಿರೇಕೆರೂರ ತಾಲ್ಲೂಕಿನ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು, ರೈತರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ್ ( ಜೆ. ಕೆ ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನ ಕಾಂಗ್ರೆಸ್ ಸ್ವಾಗತಿಸುತ್ತದೆ. ಭಗವದ್ಗೀತೆ ನಮ್ಮ ದೇಶದ ಅಸ್ಮೀತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿಕೊಟ್ಟಿದ್ದೇ ಕಾಂಗ್ರೆಸ್. ದೂರದರ್ಶನದ ಮೂಲಕ ಭಗವದ್ಗೀತೆಯನ್ನ ಪ್ರಚಾರ ಮಾಡಿದ್ದು ನಮ್ಮ ಪಕ್ಷ. ಇದರ ಜೊತೆಗೆ ದೇಶದ ಎಲ್ಲಾ ಧರ್ಮವನ್ನ ಕಾಂಗ್ರೆಸ್ ಗೌರವಿಸಿತ್ತದೆ ಎಂದು ಡಿಕೆಶಿ ಹೇಳಿದರು.
ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ. ಇನ್ನೂ 7 ದಿನ ಸಮಯ ಇದೆ. ನಾವು ನಿರೀಕ್ಷೆ ರೀಚ್ ಮಾಡುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.