Home Blog Page 3365

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ; ಹಲವು ಮಕ್ಕಳು ಅಸ್ವಸ್ಥ

ವಿಜಯಸಾಕ್ಷಿ ಸುದ್ದಿ, ಗದಗ:

ಹೆಜ್ಜೇನು ಗೂಡಿಗೆ ಬೆಂಕಿಯ ಹೊಗೆ ತಾಕಿದ ಪರಿಣಾಮ ಶಾಲಾ ಮಕ್ಕಳನ್ನು ಅಟ್ಟಾಡಿಸಿಕೊಂಡು ಕಚ್ಚಿದ ಮನಕಲಕುವ ಘಟನೆ ಬೆಟಗೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಬೆಟಗೇರಿ ಲೊಯೊಲಾ ಸ್ಕೂಲ್ ನಲ್ಲಿ ಪರೀಕ್ಷೆ ಮುಗಿಸಿದ ನಂತರ ವಿದ್ಯಾರ್ಥಿಗಳು ಮನೆ ಕಡೆ ಹೊರಟಿದ್ದಾರೆ. ಆದರೆ ಕೆಲ ಮಕ್ಕಳು ಆಟೋ ಬರುವುದು ತಡವಾಗಿದ್ದರಿಂದ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಆಟ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪಾರ್ಕ್ ಬಳಿ ಇರುವ ಮನೆಯೊಂದರ ಮುಂದೆ ವೃದ್ಧರೊಬ್ಬರೊಬ್ಬರು ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಹೊಗೆ ಜೋರಾಗಿದೆ ಎನ್ನಲಾಗಿದೆ. ಇದರಿಂದಾಗಿ ವಾಟರ್ ಟ್ಯಾಂಕ್ ಮೇಲೆ ಇದ್ದ ಹೆಜ್ಜೇನು ಮಕ್ಕಳ ಮೇಲೆ ದಾಳಿ ನಡೆಸಿವೆ.

ಇದರಿಂದ ಭಯಭಿತಗೊಂಡ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೂ ಬಿಡದ ಜೇನುಹುಳಗಳು ಕಚ್ಚಿ ಗಾಯಗೊಳಿಸಿವೆ. ನೋವು, ಸಂಕಟ ತಾಳಲಾರದೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲ ಜನರ ಮೇಲೂ ಹೆಜ್ಜೇನು ದಾಳಿ ಮಾಡಿವೆ.

ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರಕ್ಕೆ ಕಾರು ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು, ಇನ್ನೊಬ್ಬ ಗಂಭೀರ

ವಿಜಯಸಾಕ್ಷಿ ಸುದ್ದಿ, ರೋಣ:

ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನರೇಗಲ್ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಘಟಕದ ಬಳಿ ಶನಿವಾರ ನಡೆದಿದೆ.

ರೋಣ ಪಟ್ಟಣದಿಂದ ಗದಗ ಕಡೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆ ಕಣ್ಣಾರೇ ಕಂಡ ಲಾರಿ ಚಾಲಕ, ಕಾರಿನಲ್ಲಿ ಸಿಲುಕಿದ್ದ ಮೃತ ಮೂವರನ್ನು ಹಾಗೂ ಓರ್ವ ಗಾಯಾಳನ್ನು ಹೊರಗೆ ತೆಗೆದಿದ್ದಾನೆ.

ಗದಗ ನಗರದ ಥೀಸ್ ಬಿಲ್ಡಿಂಗ್ ‌ನಿವಾಸಿ, ಟಾಂಗಾಕೂಟ ಬಳಿಯ ವಿಜಯ ಜನರಲ್ ಸ್ಟೋರ್ಸ್‌ ಮಾಲೀಕನ ಪುತ್ರ ದರ್ಶನ್ ರಾಜಪುರೋಹಿತ್, ತಾಜನಗರದ ಶೌಕತ್ ಅಲಿಖಾನ್, ಇನ್ನೊಬ್ಬ ಮೈಫೂಝ್ ಆಲಂ ಮೃತ ದುರ್ದೈವಿಗಳಾಗಿದ್ದು, ಮುಲ್ಲಾ ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗನಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ‘ ಉಚಿತ ವೀಕ್ಷಣೆಗೆ ಅವಕಾಶ: ಸಚಿವ ಸಿ.ಸಿ.ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ ಫೈಲ್ಸ್’ ಹಿಂದಿ ಚಲನಚಿತ್ರವನ್ನು ಗದಗನಲ್ಲಿ ಮಾ.20,21 ಮತ್ತು‌ 23ರಂದು ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ‌’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ‌ ನಡೆದ ಸಿದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದಗ-ಬೆಟಗೇರಿ ನಗರದ ಶಾಂತಿ ಚಿತ್ರಮಂದಿರಲ್ಲಿ ತೆರೆಕಂಡಿರುವ ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮಾ.20, 21 ಮತ್ತು 23ರಂದು ಗದಗ ಜನತೆ ಉಚಿತ ವೀಕ್ಷಿಸಲು ಅವಕಾಶ ನೀಡಲಾಗಿದೆ. 12 ರಿಂದ 3 ಗಂಟೆ, 3 ರಿಂದ 6 ಗಂಟೆಯವರೆಗಿನ ಎರಡು ಶೋಗಳು ಉಚಿತವಿರಲಿವೆ. ಮೂರು ದಿನದ ಆರು ಶೋಗಳಿಗೆ ಸಂದಾಯವಾಗುವ ಹಣವನ್ನು ಚಿತ್ರಮಂದಿರದ ಮಾಲೀಕರಿಗೆ ಪಾವತಿಸಲಾಗಿದೆ ಎಂದು ತಿಳಿಸಿದರು.

‘ಜಮ್ಮು ಕಾಶ್ಮೀರದಲ್ಲಿ ಅಂದು ಪಂಡಿತರ ಮೇಲಿನ ದೌರ್ಜನ್ಯ, ಮಹಿಳೆಯರನ್ನು ವಿಚಿತ್ರವಾಗಿ‌ ನಡೆಸಿಕೊಂಡ ರೀತಿಯನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆದಿಟ್ಟಿದೆ. ಸಿನಿಮಾ ವೀಕ್ಷಿಸಿವಾಗ ಗೊತ್ತಿಲ್ಲದೆ ಕಣ್ಣಂಚಲ್ಲಿ ನೀರು ತುಂಬಿ ಬರುತ್ತವೆ’ ಎಂದು ಸಿ.ಸಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ‌ ಬಾಕಳೆ, ಬಿಜೆಪಿ ಮುಖಂಡರಾದ ಅನಿಲ್ ಮೆಣಸಿನಕಾಯಿ, ಸಂಗಮೇಶ ದುಂದೂರ, ರಾಜು ಕುರುಡಗಿ, ಎಂ.ಎಸ್.ಕರೀಗೌಡ್ರ ಸೇರಿದಂತೆ ಅನೇಕರು ಇದ್ದರು.

ಪೊಲೀಸರ ನಿದ್ದೆಗೆಡಸಿದ್ದ ಕಳ್ಳರ ಬಂಧನ; ಅಪಾರ ಪ್ರಮಾಣದ ಚಿನ್ನಾಭರಣ ವಶ

ವಿಜಯಸಾಕ್ಷಿ ಸುದ್ದಿ, ಹಿರೇಕೆರೂರ:

ಕಳೆದ ಒಂದು ತಿಂಗಳಿಂದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ, ಹಿರೇಕೆರೂರ ಪೊಲೀಸರ ನಿದ್ದೆಗೆಡಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಫೀಕ್ ನಜೀರಸಾಬ್ ಕಚವಿ, ಮುಬಾರಕ್ ಖಾದರಸಾಬ್ ಇಂಗಳಗೊಂದಿ ಹಾಗೂ ಸಾಧಿಕ್ ಸೈಯದ್ ಅಹ್ಮದ್ ರಟ್ಟಿಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 185 ಗ್ರಾಂ ಚಿನ್ನ, 555ಗ್ರಾಂ ಬೆಳ್ಳಿ, 90 ಸಾವಿರ ನಗದು, ಕೃತ್ಯಗಳಿಗೆ ಬಳಿಸಿದ ಮೂರು ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಪ್ರಕರಣ ಬೇದಿಸಲು ಡಿವೈಎಸ್‌ಪಿ ಟಿ.ವಿ.ಸುರೇಶ್, ಸಿಪಿಐ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಶ್ರಮಿಸಿದ ರಟ್ಟಿಹಳ್ಳಿ ಪಿಎಸ್‌ಐ ಕೃಷ್ಣಪ್ಪ ತೋಪಿನ್, ಹಂಸಭಾವಿ ಪಿಎಸ್‌ಐ ಚಂದನ ಚಲುವಯ್ಯಾ, ಹಿರೇಕೆರೂರ ಪಿಎಸ್‌ಐ ವಸಂತ ಕುಮಾರ್, ಪ್ರೊಬೇಶನರಿ ಮಹಿಳಾ ಪಿಎಸ್‌ಐ ವೀಣಾ, ಸಿಬ್ಬಂದಿಗಳಾದ ಡಿ.ಎಸ್.ದೊಡ್ಮನಿ, ಕೇಶವ ಕೊಲಪ್ಪನವರ್, ರವಿ ಲಮಾಣಿ, ಬಸವರಾಜ್ ಸಣ್ಣಪ್ಪನವರ್, ಕೃಷ್ಣ ಕೊರವರ, ಪರಶುರಾಮ್ ಹೊಸಳ್ಳಿ, ಮನೋಹರ ಭೋಗಾವಿ, ಫಯಾಜ್ ಕುಂದೂರು, ಮಂಜುನಾಥ್ ಕಾಟೇನಳ್ಳಿ, ಚಂದ್ರಶೇಖರ ಅಂಬಿಗೇರ, ಮಹೇಶ್ ಒಡೇರಳ್ಳಿ, ಸತೀಶ್, ಮಂಜುನಾಥ ಹಂಚಿನಮನಿ, ಮಾರುತಿ ಹಾಲಭಾವಿ, ಬಸವರಾಜ್ ಡೋಣನವರ್, ರಮೇಶ್ ಬಡಿಗೇರ್, ಎನ್.ಹೆಚ್.ಡೋಲೆ ಅವರ ಕಾರ್ಯಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣ; ಇಬ್ಬರು ಪತ್ರಕರ್ತರು, ಎಎಸ್ಐ, ನಾಲ್ವರು ಪೊಲೀಸರು ಸೇರಿ 9 ಜನರ ಮೇಲೆ ಎಫ್‌ಐಆರ್

ವಿಜಯಸಾಕ್ಷಿ ಸುದ್ದಿ, ಗದಗ:

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಿ ಸಿ ಪಾಟೀಲ್ ಅಲಿಯಾಸ್ ಅಜ್ಜುಗೌಡ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್‌ಐ ಪುಟ್ಟಪ್ಪ ಕೌಜಲಗಿ ಸೇರಿದಂತೆ ಐವರು ಪೊಲೀಸರು, ಇಬ್ಬರು ಪತ್ರಕರ್ತರು ಸೇರಿದಂತೆ ಒಂಬತ್ತು ಜನರ ಮೇಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತ್ರಕರ್ತ ಗಿರೀಶ್ ಕುಲಕರ್ಣಿ, ಗುರುರಾಜ ಬಸವರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಖಾಸಗಿ ವಾಹಿನಿಯ ವರದಿಗಾರ ಭೀಮನಗೌಡ ಪಾಟೀಲ್, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೇದೆ ಸಿ.ವ್ಹಿ.ನಾಯ್ಕರ, ಟ್ರಾಫಿಕ್ ಪೊಲೀಸ್ ಠಾಣೆಯ ದಾದಾಪೀರ ಮಂಜಲಾಪೂರ, ಸಿಇಎನ್ ಪೊಲೀಸ್ ಠಾಣೆಯ ಶರಣಪ್ಪ ಅಂಗಡಿ ಹಾಗೂ ಮುಂಡರಗಿ ಠಾಣೆಯ ಅಂದಪ್ಪ ಹಣಜಿ ಸೇರಿ ಒಂಬತ್ತು ಜನರ ಮೇಲೆ ಮೃತ ಪೊಲೀಸ್ ಪೇದೆಯ ತಂದೆ ಚನ್ನವೀರಗೌಡ ಶಂಕರಗೌಡ ಪಾಟೀಲ್ ದೂರು ದೂರು‌ ನೀಡಿದ್ದಾರೆ.



ದೂರಿನಲ್ಲಿ ಏನಿದೆ?:

ಅಜ್ಜುಗೌಡ ಪಾಟೀಲ್ (ಪಿ ಸಿ ಪಾಟೀಲ್) ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ನಾಲ್ಕೈದು ತಿಂಗಳಿನಿಂದ ಆರೋಪಿತರಾದ ಗಿರೀಶ್ ಕುಲಕರ್ಣಿ ಮತ್ತು ಈತನೊಂದಿಗೆ ಗುರುರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಭೀಮನಗೌಡ ಪಾಟೀಲ ಇವರು ವಿನಾಕಾರಣ ತೊಂದರೆ ಕೊಡುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮೊಬೈಲ್‌ನಲ್ಲಿ ಮೆಸೇಜ್‌ಗಳು, ಫೋಟೋಗಳು ನಮ್ಮ ಹತ್ತಿರವಿದ್ದು ಎಸ್‌ಪಿ ಅವರಿಗೆ ತೋರಿಸುತ್ತೇವೆ ಎಂದು ಹೆದರಿಸುತ್ತಿದ್ದರು.

ಅದರಂತೆ ಇನ್ನುಳಿದ ಆರೋಪಿಗಳು ಸ್ಟೇಶನ್ ಮಾಹಿತಿ, ಸ್ಟೇಶನ್‌ನಲ್ಲಿ ದಾಖಲಾದ ಪ್ರಕರಣದಲ್ಲಿನ ವಿಷಯದ ಬಗ್ಗೆ, ವೈಯಕ್ತಿಕ ವೀಕನೆಸ್ ಬಗ್ಗೆ ಇವರಿಗೆ ತಿಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳು ಕಾಟ ಕೊಡುತ್ತಿದ್ದರು ಎನ್ನಲಾಗಿದೆ.

ಇದರಿಂದಾಗಿ ನಾಲ್ಕು ಪುಟಗಳಲ್ಲಿ ತನ್ನ ಸಾವಿನ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪವಾಡಿಗೌಡ ಅವರ ಸಾವಿಗೆ ಈ ಎಲ್ಲ ಒಂಬತ್ತು ಜನ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

//ಜೇಮ್ಸ್ ಸಿನಿಮಾ ವಿಮರ್ಶೆ//ದೇಶಪ್ರೇಮಿ‌ ಸೈನಿಕನ ಸ್ನೇಹದ ಸೇಡು

0


ರೇಟಿಂಗ್:***1/2


ತಾರಾಗಣ:
ಪುನೀತ್ ‌ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಅವಿನಾಶ್, ಪ್ರಿಯಾ ಆನಂದ್, ತಿಲಕ್, ಶೈನ್ ‌ಶೆಟ್ಟಿ, ಶ್ರೀಕಾಂತ್, ಶರತ್, ರಿಷಿ, ಸಾಧುಕೋಕಿಲ, ಚಿಕ್ಕಣ್ಣ, ನಯನಾ, ಗೋವಿಂದ್‌ರಾಜ್, ಹರ್ಷ, ಕಾವ್ಯಾಶಾಸ್ತ್ರಿ, ಅಶ್ವಿನಿ‌ಹಾಸನ್. , ನಿರ್ದೇಶನ: ಚೇತನ್ ನಿರ್ಮಾಪಕ: ಕಿಶೋರ ಪತ್ತಿಕೊಂಡ ಸಂಗೀತ: ಚರಣ್‌ರಾಜ್ ಛಾಯಾಗ್ರಹಣ: ಸ್ವಾಮಿಗೌಡ ಸಂಕಲನ: ದೀಪು ಎಸ್.ಕುಮಾರ್

ಬಸವರಾಜ ಕರುಗಲ್.
“ಇವ್ನು ರೇಸ್‌ಗೆ ಇಳಿಯಲ್ಲ, ಇಳಿದ್ರೆ ಅದು ರೇಸ್ ಅಲ್ಲ, ಒನ್ ಮ್ಯಾನ್ ಶೋ”

ಇದು ಜೇಮ್ಸ್ ಸಿನಿಮಾ ನಾಯಕನ ಇಂಟರ್‌ಡಕ್ಷನ್ ಡೈಲಾಗ್.. ಈ ಡೈಲಾಗ್ ಇಡೀ ಸಿನಿಮಾದುದ್ದಕ್ಕೂ ನಿಜ ಅನ್ಸುತ್ತೆ… ಜೇಮ್ಸ್ ಸಿನಿಮಾದಲ್ಲಿ ಮಾತಿನ ಅಬ್ಬರಕ್ಕಿಂತ ಗುಂಡಿನ ಆರ್ಭಟವೇ ಹೆಚ್ಚು. ಸಾಹಸ ದೃಶ್ಯಗಳಿಗೆ ತೂಕ ಅಪಾರ. ಕಥೆ ಒಂಚೂರು ಸಪೂರ.

ಜೇಮ್ಸ್ ಕಥೆ ಸರಳವಾಗಿದ್ದರೂ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಜಾರಿಸುವ ಉದ್ದೇಶದಿಂದಲೇ ಅಲ್ಲಲ್ಲಿ ಟ್ವಿಸ್ಟ್, ಟರ್ನ್, ಫ್ಲ್ಯಾಶ್‌ಬ್ಯಾಕ್‌ಗಳ ಮೂಲಕ ಕಥೆಯನ್ನ ಹೆಣೆಯಲಾಗಿದೆ. ದೇಶಪ್ರೇಮ‌ ಬಿಂಬಿಸುವ, ಅನಾಥನಾಗಿದ್ದರೂ ಗೆಳೆತನದ ಬಾಂಧವ್ಯ ಸಾರುವ ಜೊತೆಗೆ ಸ್ನೇಹಕ್ಕಾಗಿಯೇ ಸೇಡು ತೀರಿಸಿಕೊಳ್ಳುವ ಹೊಸತನ ಸೇರಿಸಲಾಗಿದೆ.

ಜೇಮ್ಸ್-ಇದೊಂದು ಸೆಕ್ಯುರಿಟಿ ಏಜೆನ್ಸಿಯ ಹೆಸರು. ಈ ಹೆಸರು ಇಡಲು ರೋಚಕ ಮತ್ತು‌ ಇಂಟರೆಸ್ಟಿಂಗ್ ಹಿನ್ನೆಲೆ ಇದೆ. ಅದೇನು ಅನ್ನೋದನ್ನ ಸಿನಿಮಾ ನೋಡಿ ತಿಳ್ಕೊಂಡರೇನೇ ಚೆಂದ. ಖಳನೊಬ್ಬನಿಗೆ‌ ಮೂರು ತಿಂಗಳು ಭದ್ರತೆ ನೀಡುವ ಕೆಲಸ ಒಪ್ಪಿಕೊಳ್ಳುವ ಸಂತೋಷ್‌ಕುಮಾರ್ ಜೇಮ್ಸ್ ಏಜೆನ್ಸಿಯ ರೂವಾರಿ. ಆ ಖಳನಿಗೆ ರಕ್ತಸಂಬಂಧಿಯೇ ವಿಲನ್, ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆಯ ಕಿಂಗ್‌ಪಿನ್‌ಗಳು ಇಬ್ಬರೂ ವಿಲನ್‌ಗಳು ಮಾರ್ಕೆಟ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇಬ್ಬರು ಡಾನ್‌ಗಳ ನಡುವೆ ಆಗಾಗ ಗುಂಡಿನ ಸುರಿಮಳೆ, ಲಾಂಗುಗಳ ಜಡೀಮಳೆ, ಒಮ್ಮೆ ಅಘೋರಿಗಳ ಅಟ್ಯಾಕ್, ಮತ್ತೊಮ್ಮೆ ಸೂಟು-ಬೂಟುಧಾರಿಗಳ ಕಾರ್ ಚೇಸಿಂಗ್..ಒಂಥರಾ ಹಾಲಿವುಡ್ ಮೂವ್ ರೇಂಜ್‌ಗೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ..

ಸೆಕ್ಯುರಿಟಿ ನೀಡುವ ವಿಲನ್ ತಂಗಿ ಜೊತೆಗೆ ನಾಯಕ ಸಂತೋಷ್‌ಗೆ ಲವ್ವು, ಇದಕ್ಕೆ ನಾಯಕಿಯ ಅಣ್ಣ ಡಾನ್‌ನ ಗ್ರೀನ್ ಸಿಗ್ನಲ್.. ಸಂತೋಷ್ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ ಎನ್ನುವ ಡಾನ್‌ನ ಡೈಲಾಗ್ ಇನ್ನು ಮುಗಿದಿರಲ್ಲ, ಸಂತೋಷ್ ಅಂದ್ರೆ ಭಯಾನೂ ಇರಬೇಕು ಸರ್ ಎಂದು ಹೇಳಿ ನಾಯಕನಿಂದ ವಿಲನ್ ಪಡೆ ಛಿದ್ರ ಛಿದ್ರ…ಈ ಹೊತ್ತಿಗೆ ಸಂತೋಷ್ ನಾಯಕನೋ? ಖಳನಾಯಕನೋ? ಎನ್ನುವ ಹುಳ ತಲೆಗೆ ಬೀಳುತ್ತಿದ್ದಂತೆ ವಿರಾಮ.

ಆನಂತರ ಶುರುವಾಗೋದು ಫ್ಯಾಮಿಲಿ ಡ್ರಾಮಾ, ಸಿನಿಮಾದ ಎರಡನೇ ಭಾಗದಲ್ಲಿ‌ ನಿಜವಾದ ಕಥೆ ಗರಿಗೆದರುತ್ತೆ. ವಿಲನ್‌ ಎನಿಸಿದವನು ಮತ್ತೇ ಹೀರೋ ಆಗ್ತಾನೆ. ಸಂತೋಷ್ ಮಿಲ್ಟ್ರಿಯಲ್ಲಿ‌ ಮೇಜರ್ ಆಗಿ ಭಯೋತ್ಪಾದಕರನ್ನು‌ ಮಟ್ಟ ಹಾಕುವ ಸಣ್ಣ ಎಳೆ ಇಣುಕಿ ಹೋಗುತ್ತದೆ. ಇದೇ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಬಂದು ಹೋಗುತ್ತಾರೆ. ಪುನೀತ್‌ಗೆ ಶಿವಣ್ಣ‌ ಗುರಿ ತೋರಿದರೆ, ರಾಘಣ್ಣ ಗುರುವಾಗಿ ಮುನ್ನಡೆಸುವ ಝಲಕ್ ಪ್ರೇಕ್ಷಕರನ್ನು ಪುಳಕಿತರನ್ನಾಗಿಸುತ್ತದೆ. ಆನಂತರ ಮತ್ತದೇ ಗುಂಡಿನ ಮೊರೆತ, ಸಿಡಿಮದ್ದುಗಳ ಸದ್ದು, ಅಂತಿಮವಾಗಿ ಖಳರ ಹೆಡೆಮುರಿ..

ಒಟ್ಟಾರೆ ಜೇಮ್ಸ್ ಗೆಳೆತನಕ್ಕಾಗಿ‌ ರಿವೇಂಜ್ ತೆಗೆದುಕೊಳ್ಳುವ ದೇಶಪ್ರೇಮಿ ಸೈನಿಕನ ಕಥೆ ಹೊಂದಿದ್ದು, ಅಪ್ಪು ಅಭಿಮಾನಿಗಳಿಗೆ‌ ದೊಡ್ಡ ಹಬ್ಬ. ಜೊತೆಗೆ ಪುನೀತ್‌ರ ಕೊನೆಯ ಸಿನಿಮಾ ಬೇರೆ.. ಎಲ್ಲ ವರ್ಗದ‌ ಜನರನ್ನು ಸೆಳೆಯಲು ಸರ್ಕಸ್‌ ಮಾಡಿರುವುದು‌ ಗೊತ್ತಾಗುತ್ತದೆ. ಕೆಲವು ಕಡೆ ಪುನೀತ್ ಡ್ಯೂಪ್ ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪುನೀತ್ ನಟನೆಗೆ ಶಿವಣ್ಣ ಧ್ವನಿ‌ ನೀಡಿರುವುದು ಹೇಗಿದೆ ಎಂದರೆ ಇಡೀ ಸಿನಿಮಾದುದ್ದಕ್ಕೂ ಇಬ್ಬಿಬ್ಬರು ಹೀರೋಗಳನ್ನು ನೋಡಿದಂತೆ ಭಾಸವಾಗುತ್ತೆ. ತೆರೆಯಲ್ಲಿ‌ ಪುನೀತ್ ಕಂಡರೆ ಧ್ವನಿ‌ ಕೇಳುತ್ತಿದ್ದಂತೆ ಪುನೀತ್ ಪಾತ್ರದಲ್ಲಿ ಶಿವಣ್ಣ ಸಹ ಕಲ್ಪನೆಯಲ್ಲಿ ಬರ್ತಾರೆ.

ಜೇಮ್ಸ್‌ನಲ್ಲಿ ಕಲಾವಿದರ ದೊಡ್ಡ ದಂಡೇ‌ ಇದೆ. ಎಲ್ಲ ಕಲಾವಿದರಿಗೂ ಸ್ಕ್ರೀನ್ ಸಿಕ್ಕಿದೆ. ಆದರೆ ಬಹುತೇಕ ಕಲಾವಿದರು ಹೀಗೇ ಬಂದು, ಹಾಗೇ ಹೋಗುವಷ್ಟು ಮಾತ್ರ ಸ್ಪೇಸ್ ಪಡೆದಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ ಇದ್ದರೂ ಕಾಮಿಡಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಚೇಸಿಂಗ್ ಸೀನ್‌ಗಳಲ್ಲಿ ಸ್ವಾಮಿಗೌಡ ಅವರ ಕ್ಯಾಮೆರಾ ಕಣ್ಣಿಗೆ ಒಂದು ಸಲಾಂ ಹೇಳಬಹುದು. ಸಂಗೀತ ನಿರ್ದೇಶಕ ಚರಣ್‌ರಾಜದ ಹಿನ್ನೆಲೆ ಸಂಗೀತದಲ್ಲಿ ಗೆದ್ದಿದ್ದಾರೆ, ಹಾಡುಗಳಿಗೆ ಸಂಗೀತ ನೀಡುವಲ್ಲಿ ಎಡವಿದ್ದಾರೆ.

ನಾಯಕ ಪುನೀತ್ ಅವರನ್ನ ತೆರೆಯ ಮೇಲೆ‌ ನೋಡುವುದೇ ಖುಷಿ. ಕೊನೆ ಸಿನಿಮಾ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ‌ ಕ್ರೇಜ್ ಕ್ರಿಯೆಟ್ ಮಾಡಿದ ಜೇಮ್ಸ್‌, ಜಗತ್ತಿನಾದ್ಯಂತ ಕೆಜಿಎಫ್‌ ನಂತರ ಗ್ರ್ಯಾಂಡ್ ಒಪನಿಂಗ್ ಪಡೆದ ಕನ್ನಡದ ಎರಡನೇ ಸಿನಿಮಾ. ಪುನೀತ್ ಅವರ ಅಭಿನಯದ ಬಗ್ಗೆ ಹೇಳೋದೇನಿಲ್ಲ, ಕರ್ನಾಟಕದ ಮತ್ತೊಂದು ರತ್ನ. ಈಚೆಗಷ್ಟೇ ಅವರಿಗೆ ಮೈಸೂರು ವಿವಿ ಗೌಡಾ ನೀಡಿದ್ದನ್ನ ಚಿತ್ರತಂಡ ಅಪ್ಡೇಟ್ ಮಾಡಿಕೊಂಡು ಡಾ.ಪುನೀತ್ ರಾಜ್‌ಕುಮಾರ್ ಅಂತ ಟೈಟಲ್ ಕಾರ್ಡ್‌ನಲ್ಲಿ ಸೇರಿಸಿರುವುದು ಖುಷಿಯ ಸಂಗತಿ. ಅಪ್ಪು ಎಲ್ಲ ಸಿನಿಮಾಗಳಂತೆ ಡ್ಯಾನ್ಸ್, ಫೈಟ್‌‌ನಲ್ಲಿ ಸಖತ್ ಪವರ್. ಅದರಲ್ಲೂ ಜೇಮ್ಸ್‌ನ ಫೈಟಿಂಗ್ ಸೀನ್‌ಗಳು ಹಾಲಿವುಡ್ ಮಾದರಿಯಲ್ಲಿವೆ. ನಾಯಕಿ ಪ್ರಿಯಾ ಆನಂದ್ ರಾಜಕುಮಾರ ಸಿನಿಮಾ ನಂತರ ಮತ್ತೇ ಅಪ್ಪುಗೆ‌ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ಸುಧಾರಣೆ ಕಂಡಿದೆ ಎನ್ನಬಹುದು. ಖಳರಾಗಿ ಶರತ್‌ಕುಮಾರ್, ಶ್ರೀಕಾಂತ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮತ್ತಿತರರು ಖಳರಾಗಿ ವಿಜೃಂಭಿಸಿದ್ದಾರೆ. ಇಡೀ ಸಿನಿಮಾ ತುಂಬಾ ರಿಚ್ ಆಗಿ ಮೂಡಿ ಬಂದಿದ್ದು, ಸ್ಥಳೀಯವಾಗಿ ಕೊಪ್ಪಳದ ಗಂಗಾವತಿ, ಹೊಸಪೇಟೆ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಶ್ಮೀರ ಹಾಗೂ ವಿದೇಶದ‌ ಕೆಲ ಲೋಕೇಷನ್‌‌ಗಳಲ್ಲಿ ಶೂಟಿಂಗ್ ಆಗಿದೆ. ನಿರ್ಮಾಣದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ. ನಿರ್ದೇಶಕ ಚೇತನ್‌ ಹರಿತವಾದ, ಕಚಗುಳಿ ಇಡುವ ಮಾತುಗಳನ್ನು ಬರೆಯುವಿಕೆಯಲ್ಲಿ‌ ಹಿಡಿತ ಸಾಧಿಸಿದವರು. ಆದ್ರೆ ಜೇಮ್ಸ್‌ನಲ್ಲಿ ಚೇತನ್ ಲೇಖನಿ ಯೊಕೊ ಹರಿತವಾಗಿಲ್ಲ. ಕೆಲವು ಕಡೆ ಕಣ್ಣಂಚು ಒದ್ದೆಯಾಗಿಸುವ ದೃಶ್ಯಗಳನ್ನು ಸೇರಿಸಿ ಹೆಣ್ಮಕ್ಕಳು‌ ಸಹ ಜೇಮ್ಸ್ ಕಣ್ತುಂಬಿಕೊಳ್ಳಬಹುದು ಎಂಬುದನ್ನು ಹೇಳಲು ಒದ್ದಾಡಿರುವುದು ಗೊತ್ತಾಗುತ್ತದೆ. ನಿರ್ದೇಶಕನಾಗಿ‌ ದೊಡ್ಡ ಬಜೆಟ್ ಸಿನಿಮಾ‌ ನಿರ್ದೇಶಿಸಿದ್ದು ಚೇತನ್‌ ಹೆಗ್ಗಳಿಕೆ ಎನ್ನಬಹುದು.

ಒಟ್ಟಾರೆ ಜೇಮ್ಸ್ ಸಿನಿಮಾ, ಪುನೀತ್ ಅಭಿಮಾನಿಗಳಿಗೆ ಹೋಳಿ‌ಹಬ್ಬ, ಹೆಣ್ಮಕ್ಕಳಿಗೆ ಯುಗಾದಿ, ಯುವಕರಿಗೆ ದಸರಾ, ಫ್ಯಾಮಿಲಿಗೆ ದೀಪಾವಳಿ. ಗನ್‌ಗಳ ಮೊರೆತ ಸಹಿಸುವುದಾದರೆ ಮುಜುಗರ‌ ಇಲ್ಲದೇ ಕುಟುಂಬಸಮೇತ ಜೇಮ್ಸ್‌ನನ್ನು‌ ನೋಡಿ, ಹರಸಿ, ಹಾರೈಸಿ, ಆಶಿರ್ವದೀಸಬಹುದು.

ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.

ಸ್ಟಾರ್ ರೇಟಿಂಗ್: * : ಚನ್ನಾಗಿಲ್ಲ ** : ಸುಮಾರಾಗಿದೆ *** : ಚನ್ನಾಗಿದೆ **** : ತುಂಬಾ ಚನ್ನಾಗಿದೆ ***** : ಮಿಸ್ ಮಾಡ್ದೆ ನೋಡಿ

ದುಷ್ಕರ್ಮಿಗಳಿಂದ ಬ್ಲ್ಯಾಕ್ ಮೇಲ್?; ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಪೊಲೀಸ್

ವಿಜಯಸಾಕ್ಷಿ ಸುದ್ದಿ, ಗದಗ

ಕೆಲವರ ಕಿರುಕಳಕ್ಕೆ ಬೇಸತ್ತು ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ.

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕುಂಡಿ ಗ್ರಾಮದ ಅಜ್ಜುಗೌಡ ಪಾಟೀಲ್ ಸಾವಿಗೆ ಶರಣಾಗಿದ್ದಾರೆ.

ಕಳೆದ ವರ್ಷ ಹಣ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಸಂಬಂಧಿಯೊಬ್ಬಳ ಜೊತೆ ಮೃತ ಪೇದೆ ಪ್ರೇಮಪಾಶದಲ್ಲಿ ಬಿದ್ದಿದ್ದನೆಂದು ಆರೋಪ ಕೇಳಿ ಬಂದಿತ್ತು. ಈ ವೇಳೆ ಮೊಬೈಲ ಚಾಟಿಂಗ್ ಸಂದರ್ಭದಲ್ಲಿ ಅರೆಬರೆ ದೃಶ್ಯವೊಂದರ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ. ವೈರಲ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮೃತ ಪೇದೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಷಯ ಕುಟುಂಬದವರಿಗೂ ತಿಳಿದಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಜ್ಜುಗೌಡ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಜ್ಜುಗೌಡ ತನಗೆ ಯಾರ‍್ಯಾರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆಪ್ತರೆದುರಿಗೆ ಬಾಯಿ ಬಿಟ್ಟಿದ್ದ ಎನ್ನಲಾಗಿದೆ. ಬುಧವಾರ ಕುಟುಂಬಸ್ಥರು ಊರಿಗೆ ಹೋಗಿದ್ದನ್ನೇ ಅವಕಾಶವೆಂದು ಭಾವಿಸಿಕೊಂಡ ಅಜ್ಜುಗೌಡ ಮಹಡಿ ಮನೆಯ ಬೆಡ್ ರೂಮ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ.

ಸಾವಿಗೂ ಮುನ್ನ ನಾಲ್ಕು ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಜ್ಜುಗೌಡಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರು ಯಾರು ಎಂಬುವುದು ಪೊಲೀಸರ ನಿಷ್ಪಕ್ಷಪಾತ ‌ತನಿಖೆಯಿಂದ ಹೊರಬರಬೇಕಿದೆ.

ಸುದ್ದಿ ತಿಳಿದ ತಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಮಾಹಿತಿ ಕೇಳಲು ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರವಿ ಕಪ್ಪತನವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಗದಗ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪ್ರಮಾದ; ಕಾಂಗ್ರೆಸ್‌ನ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ನ ನಗರಸಭೆ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ಸೋಮವಾರ ವಜಾಗೊಳಿಸಿ ಆದೇಶಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಅಲ್ಲದೆ, ಚುನಾವಣಾಧಿಕಾರಿಗಳು ಆಗಿದ್ದ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಕರ್ತವ್ಯಲೋಪದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಬೇಕು. ಬಳಿಕ ತೆಗೆದುಕೊಂಡ ಕ್ರಮದ ಬಗ್ಗೆ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ಸದಸ್ಯರಿಗೆ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದರೂ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ ಎನ್ನಲಾದ ಪ್ರಮಾದಗಳ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪೈಲ್ ಮಾಡಲು ಹೈಕೋರ್ಟ್ ಅವಕಾಶ ನೀಡಿದ್ದಕ್ಕೆ ತೃಪ್ತಿಪಡುವಂತಾಗಿದೆ.

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ನಗರಸಭೆ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪುರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ ಹಾಗೂ ಚಂದ್ರಶೇಖರಗೌಡ ಕರಿಸೋಮನಗೌಡರ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಜ.28ರಂದು ಹೈಕೋರ್ಟ್ ಮೊರೆ ಹೋಗಿದ್ದರು. ಅಧಿಕಾರಿಗಳು ಪಾರದರ್ಶಕ ಚುನಾವಣೆ ನಡೆಸಿಲ್ಲ. ಹೀಗಾಗಿ ಮರು ಚುನಾವಣೆ ನಡೆಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಫೆ.1ರಂದು ಎಲ್.ಡಿ.ಚಂದಾವರಿ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ಪೀಠ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿ ಫೆ.21ಕ್ಕೆ ವಿಚಾರಣೆ ಮುಂದೂಡಿತ್ತು. ಫೆ.21ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮಾರ್ಚ್ 2ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿ, ಅಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿತ್ತು. ಬಳಿಕ ಸೋಮವಾರ (ಮಾ.14)ದಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ನಗುವೇ ಜೀವನಕ್ಕೆ ಔಷಧಿ; ಬಿ ಸಿ ಹನಮಂತಗೌಡ್ರ

ವಿಜಯಸಾಕ್ಷಿ ಸುದ್ದಿ, ನರಗುಂದ:

ನಗು ಜೀವನಕ್ಕೆ ಔಷಧಿ ಇದ್ದಂತೆ. ಪ್ರತಿಯೊಬ್ಬರೂ ಜೀವನದಲ್ಲಿ ನಗು-ನಗುತ್ತಾ ಬಾಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ನಗುವಿಗೆ ಅವಕಾಶ ಕಡಿಮೆಯಾಗಿದೆ. ಈ ಒತ್ತಡದ ಬದುಕಿನಿಂದ ಹೊರಬರಲು ನಗುವೇ ದಿವ್ಯ ಔಷಧ ಎಂದು‌ ಕಸಾಪ ಅಧ್ಯಕ್ಷರಾದ ಬಿ.ಸಿ ಹನಮಂತಗೌಡ್ರ ಹೇಳಿದರು.
ಅವರು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲೇಜ್ ಪ್ರಾಚಾರ್ಯರಾದ ಪ್ರೊ. ಸಿ. ಎಸ್ ಸುಳ್ಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಜಿ ಟಿ ಗುಡಿಸಾಗರ, ಬಿ ಎಮ್ ಲೆಂಕನ್ನವರ, ಎಸ್ ಬಿ ಭಜಂತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಧೀರ ಸಜ್ಜನ, ಎಸ್ ಸಿ ಸುರಕೊಂಡ, ಸುಜಾತಾ ಮೆಳವಂಕಿ,ಲಕ್ಷ್ಮೀ ಕಲ್ಲಾಪೂರ, ಎಸ್ ಹಿರೇಮನಿ, ಚನ್ನು ನೀಲಗುಂದ, ರಮೇಶ ಐನಾಪೂರ, ಕಾಲೆಜು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗದಗ-ಬೆಟಗೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಮೇಶ್ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ತಾಯಿ ಇಲ್ಲದ ತಬ್ಬಿಲಿಯಂತಾಗಿದ್ದ ಗದಗ-ಬೆಟಗೇರಿ ನಗರಸಭೆಗೆ ನಗರಾಭಿವೃದ್ಧಿ ಇಲಾಖೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸಿ ಬುಧವಾರ ಆದೇಶಿಸಿದ್ದು, ಕಾಟಚಾರಕ್ಕೆ ವಹಿಸಿಕೊಳ್ಳುತ್ತಿದ್ದ ಪ್ರಭಾರ ಪೌರಾಯುಕ್ತರಿಗೆ ಸರ್ಕಾರ ಕೊನೆ ಹಾಡಿದೆ. ಇದರಿಂದ ಅವಳಿ ನಗರದ ಜನರಲ್ಲಿ ಮಂದಹಾಸ ಮೂಡಿದೆ.

ಸ್ಥಳ‌ ನಿರೀಕ್ಷೆಯಲ್ಲಿದ್ದ ಪೌರಸೇವ ವೃಂದದ ರಮೇಶ್ ಎಸ್.ಸುಣಗಾರ ಅವರನ್ನು ಸರ್ಕಾರ ಗದಗ-ಬೆಟಗೇರಿ ನಗರಸಭೆಯಲ್ಲಿ ಖಾಲಿ ಇರುವ ಪೌರಾಯುಕ್ತರ ಹುದ್ದೆಗೆ ನೇಮಕಗೊಳಿಸಿ ಆದೇಶಿಸಿದೆ.

ಫೆ.೧೮ರಂದು ವಿಜಯಸಾಕ್ಷಿ ಪತ್ರಿಕೆಯು ‘ನಗರಸಭೆಗಿಲ್ಲ ಖಾಯಂ ಪೌರಾಯುಕ್ತರು! ಎಂಬ ಶೀರ್ಷಿಕೆಯಡಿ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೇ ಅವಳಿ ನಗರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸಿತ್ತು. ಅಲ್ಲದೆ, ಖಾಯಂ ಪೌರಾಯುಕ್ತರನ್ನು ನಿಯೋಜಿಸುವಂತೆ ಗದಗ-ಬೆಟಗೇರಿ ಜನರ ಬೇಡಿಕೆಯೂ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಜನರ ಈ ಸಮಸ್ಯೆ ನಿವಾರಿಸಲು ಪೂರ್ಣ ಪ್ರಮಾಣದ ಪೌರಾಯುಕ್ತರನ್ನು ನಿಯೋಜಿಸಿದೆ.

ಕಳೆದ ಹಲವು ತಿಂಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ, ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಭಾರಿ ಪೌರಾಯುಕ್ತರಿದ್ದರೂ ಸಾರ್ವಜನಿಕರ ಕಡತಗಳು ಸಕಾಲಕ್ಕೆ ವಿಲೇವಾರಿಯಾಗದೇ ಬಾಕಿ ಉಳಿಯುತ್ತಿದ್ದವು. ಇದರಿಂದಾಗಿ ಅವಳಿ ನಗರದ ಜನರು ಪರಿತಪಿಸುವಂತಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಯುಕ್ತರನ್ನು ನೇಮಕಗೊಳಿಸಿದೆ.

ನಗರಸಭೆ ಪೌರಾಯುಕ್ತ ರಮೇಶ್ ಜಾಧವ್, ಎಇಇ ವರ್ಧಮಾನ್ ಹುದ್ದಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟದ ಹಣ ಬಿಡುಗಡೆಗೆ ಲಂಚ ಕೇಳಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಇದು ನಗರಸಭೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗದಗ-ಬೆಟಗೇರಿ ನಗರಸಭೆ ಆಡಳಿತಕ್ಕೆ ಕಪ್ಪುಚುಕ್ಕೆ ಅಂಟಿದ್ದು, ಇದನ್ನೆಲ್ಲಾ ಶಮನಗೊಳಿಸಲು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಪೌರಾಯುಕ್ತರು ಕಾರ್ಯೋನ್ಮುಖರಾಗಬೇಕು ಎಂಬುವುದು ಅವಳಿ ನಗರದ ಜನರ ನಿರೀಕ್ಷೆಯಾಗಿದೆ.


10 ತಿಂಗಳಲ್ಲಿ ಮೂವರು ಪೌರಾಯುಕ್ತರು

ಎಸಿಬಿ ದಾಳಿ ಬಳಿಕ ಅನಧಿಕೃತ ರಜೆ ಪಡೆದಿದ್ದ ರಮೇಶ್ ಜಾಧವ್‌ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಕಡ್ಡಾಯ ರಜೆ ನೀಡಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ವಟಗಲ್‌ಗೆ ಜುಲೈ 20ರಂದು ಪೌರಾಯುಕ್ತರ ಪ್ರಭಾರ ವಹಿಸಿದ್ದರು. ರಮೇಶ್ ವಟಗಲ್ ಬಳಿಕ ಗುರುಪ್ರಸಾದ್‌ಗೆ ಪೌರಾಯುಕ್ತರ ಪ್ರಭಾರ ವಹಿಸಲಾಗಿತ್ತು. ಅವರು ಅನಾರೋಗ್ಯ ನಿಮಿತ್ತ ರಜೆ ಹೋದ ಹಿನ್ನೆಲೆಯಲ್ಲಿ ನಗರಸಭೆಯ ಬಂಡಿ ಸಾಗಿಸಲು ಎಸ್.ಬಿ.ಮರಿಗೌಡ ಎಂಬುವವರಿಗೆ ಪ್ರಭಾರ ವಹಿಸಲಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಮೂವರು ಪೌರಾಯುಕ್ತರಾಗಿ ನೇಮಕಗೊಂಡರೂ ಸಾರ್ವಜನಿಕರ ಗೋಳು ತಪ್ಪಿರಲಿಲ್ಲ.