Home Blog Page 3376

ನಗರಸಭೆ ಚುನಾವಣೆ; ಕಚೇರಿ‌ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ವೇಳೆ ನಗರಸಭೆ ಕಚೇರಿ ಎದುರು ಹೈಡ್ರಾಮಾ ನಡೆಯಿತು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ‌ಸ್ಥಾನಗಳ ಚುನಾವಣೆ ಆರಂಭಕ್ಕೂ‌ ಮುನ್ನ ನಗರಸಭೆಯ ಕಚೇರಿ ಮುಂದೆ ಜಮಾಯಿಸಿದ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರು‌ ಪ್ರಧಾನಿ‌ ಮೋದಿ ಹಾಗೂ ಸಚಿವ ಸಿ.ಸಿ.ಪಾಟೀಲ್ ಪರ ಜಯಘೋಷಗಳನ್ನು ಕೂಗಿದರೆ, ಕೈ ಕಾರ್ಯಕರ್ತರು ಶಾಸಕ ಎಚ್.ಕೆ.ಪಾಟೀಲ್ ಪರ ಘೋಷಣೆ ಕೂಗಿದರು. ಈ ವೇಳೆ ಮೊದಲು ಅವರನ್ನು‌ ಕಳುಹಿಸಿ ಆ ಮೇಲೆ ನಾವು ಹೋಗುತ್ತೇವೆ ಅಂತಾ ಉಭಯ ಪಕ್ಷಗಳ ಕಾರ್ಯಕರ್ತರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಹೀಗಾಗಿ ಎರಡೂ ಪಕ್ಷದ‌ ಕಾರ್ಯಕರ್ತರನ್ನು ನಿಯಂತ್ರಿಸಲು ‌ಪೊಲೀಸರು ಹರಸಾಹಸಪಟ್ಟರು.

https://youtu.be/dBXCqyo58IM

ನಗರಸಭೆ ಅಧಿಕಾರ ಹಿಡಿಯಲಿಕ್ಕೆ ಕಾಂಗ್ರೆಸ್ ಕುತಂತ್ರದ ರಾಜಕಾರಣ, ಹುಚ್ಚು ಪ್ರದರ್ಶನ; ಅನಿಲ್ ಕಿಡಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡುತ್ತಿದೆ. ಇದಕ್ಕಾಗಿ ಅವಳಿ ನಗರದಲ್ಲಿ ಊಹಾಪೋಹಗಳನ್ನು ಹಬ್ಬಿಸುತ್ತಿದ್ದು, ತಾವೇ ಗೆಲ್ಲುತ್ತೇವೆಂಬ ಗುಲ್ಲು ಹಬ್ಬಿಸಿ ಹುಚ್ಚುತನ ಪ್ರದರ್ಶಿಸುತ್ತಿದ್ದಾರೆ‌ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.

ಸೋಮವಾರ ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯ ಕೊನೆಯ ಘಟ್ಟದಲ್ಲಿದ್ದೇವೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ದಾಸರ, ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಬಾಕಳೆ ಅವರು ನಾಮಪತ್ರ ಸಲ್ಲಿಸಿದ್ದು, ಜಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಕಾಂಗ್ರೆಸ್ ದುರಾಡಳಿತ ದೂರವಿಡಲು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ನಗರಸಬೆಯಲ್ಲಿ ಬಿಜೆಪಿ 18+1 ಸೇರಿ 19 ಮತ್ತು ಕಾಂಗ್ರೆಸ್ 17+1 ಸೇರಿ 18 ಸಂಖ್ಯಾಬಲ ಹೊಂದಿವೆ. ಬಿಜೆಪಿಗೆ ಬಹುಮತವಿದ್ದರೂ ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಅವರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಅರ್ಜಿ ಹಾಕಿಸಿರುವುದು ಶಾಸಕ ಎಚ್.ಕೆ.ಪಾಟೀಲರಿಗೆ ಶೋಭೆ ತರುವುದಿಲ್ಲ ಎಂದರು.

ಗದುಗಿನ ಗಲ್ಲಿ, ವಾರ್ಡ್ ಬಗ್ಗೆ ಗೊತ್ತಿಲ್ಲದವರನ್ನೂ ಕರೆ ತರಲು ಯತ್ನಿಸಿರುವ ಕಾಂಗ್ರೆಸ್ಸಿಗರು ಮುಂದೆ ಅನುಭವಿಸುತ್ತಾರೆ. ಅಧಿಕಾರ ಹಿಡಿಯುವ ಸಲುವಾಗಿ ನಮ್ಮ‌ ಪಕ್ಷದ ಸದಸ್ಯರ ಮೇಲೆ‌ ಸಾಕಷ್ಟು ಒತ್ತಡ ತಂದಿದ್ದಾರೆ. ಸಾಲದು ಅಂತಾ ನಮ್ಮ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಭ್ರಷ್ಟಾಚಾರ ಮುಖವಾಡ ಕಳಚದಂತೆ ನೋಡಿಕೊಳ್ಳಲು ಇಂತಹ ಕೃತ್ಯಕ್ಕೆ ‌ಇಳಿದಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಹರಿಹಾಯ್ದರು.

ಕಾಂಗ್ರೆಸ್ ನವರು ಯಾವಾಗಲೂ ನೇರ ರಾಜಕಾರಣ‌ ಮಾಡಿಲ್ಲ. ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ನಾಲ್ಕು ಮತ‌ ಪಡೆಯಲು ಯತ್ನಿಸಿರುವವರು ಕಳೆದ ಎಂಎಲ್ಎ ಚುನಾವಣೆಯಲ್ಲೂ ಇದೇ ರೀತಿಯ ತಂತ್ರಗಾರಿಕೆ ಮಾಡಿದ್ದರು‌. ಇದಕ್ಕಾಗಿ ಕಾಂಗ್ರೆಸ್ನಲ್ಲಿ ದೊಡ್ಡ ತಂಡವೇ ಇದೆ. ಆದರೆ, ಹಿಂದೆ ನಡೆದ ಹಾಗೆ ಕಾಂಗ್ರೆಸ್ ನವರ ಆಟ ಈಗ ನಡೆಯುವುದಿಲ್ಲ. ನಮ್ಮ ನಾಯಕರನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್ ನವರಿಗಿಲ್ಲ. ಅಲ್ಲದೇ, ಸಲೀಂ ಅಹ್ಮದ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದು, ಯಾರು ಎಂಬುವುದು ಜನರಿಗೆ ಗೊತ್ತಿದೆ‌ ಎಂದು ಅನಿಲ್ ಮೆಣಸಿನಕಾಯಿ ಕುಟಿಕಿದರು.

ಸುದ್ದಿಗೋಷ್ಠಿಯಲ್ಲಿ ಸಂಗಮೇಶ ದುಂದೂರ, ಕಾಂತಿಲಾಲ್ ಬನ್ಸಾಲಿ, ಎಂ.ಎಂ.ಹಿರೇಮಠ, ಸಿದ್ದು ಪಲ್ಲೇದ ಉಪಸ್ಥಿತರಿದ್ದರು.

ನಗರಸಭೆ ಚುನಾವಣೆ; ಅಧಿಕಾರಿಗಳ ವರ್ತನೆಗೆ ಎಚ್ಕೆ ಪಾಟೀಲ ಅಸಮಾಧಾನ

ಪರಿಷತ್ತು, ರಾಜ್ಯಸಭಾ ಸದಸ್ಯರ ಹೆಸರು ಸೇರ್ಪಡೆ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ:

ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು, ಓರ್ವ ರಾಜ್ಯಸಭಾ ಸದಸ್ಯರು, ಗದಗ ಮತದಾರರಾಗಲು‌ ಒಲವು ತೋರಿಸಿದ್ದರು. ಆದರೆ, ಅಧಿಕಾರಿಗಳು ಕಾನೂನು ಬಾಹಿರವಾಗಿ ವರ್ತಿಸಿ ಕಾಂಗ್ರೆಸ್‌ಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಡಾ.ಎಚ್.ಕೆ.ಪಾಟೀಲ್ ಹೇಳಿದರು.

ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ‌ಮಾಧ್ಯಮ‌ ಪ್ರತಿನಿಧಿಗಳ ಜೊತೆ ಮಾತನಾಡಿ, ಪಕ್ಷದ ಕೆಲವರ ಅರ್ಜಿ ಅಲ್ಲಗಳೆಯಲು ಅಧಿಕಾರಿಗಳಿಗೆ ಯಾವುದೇ ವೈಯಕ್ತಿಕ ಕಾರಣವಿಲ್ಲ. ಆದರೆ, ಸರ್ಕಾರದ ಒತ್ತಡವೇ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ನಾಲ್ವರು ಸದಸ್ಯರ ಹೆಸರು ಮತದಾರರ ಪಟ್ಟಿಗೆ ಸೇರಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಾನೂನಾತ್ಮಕ ಅರ್ಹತೆ ಇದ್ದರೂ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ.

ಹೊರಗಿನವರನ್ನು ಕರೆತಂದು ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಬಿಜೆಪಿಯ ಪರಿಪಾಟ. ಈ ಹಿಂದೆ ಗುಲ್ಬರ್ಗ, ಬೆಂಗಳೂರು, ದಾವಣಗೆರೆಯಲ್ಲಿ ಹೀಗೆ ಮಾಡಿದ್ದು ಯಾರು?. ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅವರನ್ನು ಹುಬ್ಬಳ್ಳಿಯಲ್ಲಿ ಯಾಕೆ ಮತದಾರರನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಪರಿಪಾಟವನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.

ಗದಗ-ಬೆಟಗೇರಿ‌ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದಿದ್ದು, ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪಕ್ಷೇತರ ಸದಸ್ಯರು ಪಕ್ಷ ಸೇರ್ಪಡೆಗೊಂಡಿದ್ದಾರೆ. ನಾನು ಸೇರಿದಂತೆ 18 ಸಂಖ್ಯಾಬಲ ಹೊಂದಿದ್ದೇವೆ. ಬಿಜೆಪಿ ಓರ್ವ ಸಂಸದ, 18 ಸದಸ್ಯರನ್ನೊಳಗೊಂಡಂತೆ 19 ಸಂಖ್ಯಾಬಲ ಹೊಂದಿದೆ. ಹೀಗಾಗಿ ಇವತ್ತು ನಡೆಯುತ್ತಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

ನಗರಸಭೆ ಚುನಾವಣೆ; ಅಧ್ಯಕ್ಷ-ಉಪಾದ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ:

ತೀವ್ರ ಕುತೂಹಲ ಕೆರಳಿಸಿರುವ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಎರಡೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ ಆಗಿವೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಿರೀಕ್ಷೆಯಂತೆ ಉಷಾ ಮಹೇಶ್ ದಾಸರ್ ಹಾಗೂ ತೀವ್ರ ಪೈಪೋಟಿ, ಮಾತಿನ ಚಕಮಕಿಗೆ ಕಾರಣವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಸುನಂದಾ ಪ್ರಕಾಶ ಬಾಕಳೆ ಅವರ ಹೆಸರು ಅಂತಿಮವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಅದರಂತೆ, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಖಾಡ ಸಜ್ಜಾಗಿದೆ.

ಅಂತಿಮವಾಗಿ ಇಂದು ಮಧ್ಯಾಹ್ಮ 2 ಗಂಟೆಗೆ ಅಧ್ಯಕ್ಷ-ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಕೊನೆಘಳಿಗೆಯಲ್ಲಿ ಯಾವುದೇ ಜಾದು ನಡೆಯದಿದ್ದರೆ ನಗರಸಭೆ ಚುಕ್ಕಾಣಿ ಬಿಜೆಪಿ ಪಾಲಾಗಲಿದೆ.

ಇಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಮೂರು ವರ್ಷಗಳಿಂದ ಗದಗ-ಬೆಟಗೇರಿ ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದೇ ಅವಳಿ ನಗರದ ಅಭಿವೃದ್ಧಿ ಕುಂಠಿತವಾಗಿತ್ತು. ಇದೀಗ ಜನಪ್ರತಿನಿಧಿಗಳೂ ಆಯ್ಕೆಯಾಗಿ ಒಂದು ತಿಂಗಳ ಬಳಿಕ ನಗರಸಭೆ ಸಿಂಹಾಸ‌ನಕ್ಕಾಗಿ ಅಧ್ಯಕ್ಷ-ಉಪಾಧ್ಯಕ್ಷರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ.

ಗದಗ-ಬೆಟಗೇರಿ ಅವಳಿ‌ ನಗರದ ಜನರ ಕುತೂಹಲ ಕೆರಳಿಸಿರುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ.

ನಗರಸಭೆ ಕಾರ್ಯಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಲು ಇಚ್ಛಿಸುವವರು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯೊಳಗಾಗಿ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಅಭ್ಯರ್ಥಿಗಳು ಅಥವಾ ಸೂಚಕರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು.

ಇಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಚುನಾವಣಾ ಸಭೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯಲಿದೆ. ಬಳಿಕ ನಾಮಪತ್ರ ಹಿಂಪಡೆಯುವ ತಿಳುವಳಿಕೆ ಪತ್ರವನ್ನು ಅಭ್ಯರ್ಥಿಗಳು ಅಥವಾ ಅವರಿಂದ ಅಧಿಕಾರ ಹೊಂದಿದ ಸೂಚಕರು ಲಿಖಿತ ರೂಪದಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಸಭೆಯಲ್ಲಿ ಮತದಾನದ ಅಗತ್ಯವಿದ್ದಲ್ಲಿ ಹಾಜರಿದ್ದ ಸದಸ್ಯರು ಸಭೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಬಹುದು. ನಿಯಮ 4ರ ಪ್ರಕಾರ ಒಬ್ಬ ಸದಸ್ಯ ಓರ್ವ ಅಭ್ಯರ್ಥಿಯನ್ನು ಮಾತ್ರ ಸೂಚಿಸಬೇಕು. ಇನ್ನು ಸಭೆ ನಡೆಯುವ 15 ನಿಮಿಷ ಮುಂಚಿತವಾಗಿಯೇ ಸದಸ್ಯರು ಸಭೆಗೆ ಹಾಜರಾಗಬೇಕು ಎಂದು ಗದಗ-ಬೆಟಗೇರಿ‌ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದ್ದಾರೆ.

ನಗರಸಭೆಯಲ್ಲಿ ಬಿಜೆಪಿ ಓರ್ವ ಸಂಸದರನ್ನೊಳಗೊಂಡಂತೆ 19 ಸಂಖ್ಯಾಬಲ ಹೊಂದಿದೆ. ಅದರಂತೆ ಕಳೆದ ಬಾರಿ ನಗರಸಭೆ ಪಟ್ಟಕ್ಕೇರಿದ್ದ ಕಾಂಗ್ರೆಸ್ ಇಬ್ಬರು ಸ್ವತಂತ್ರ ಸದಸ್ಯರ ಬೆಂಬಲ ಹಾಗೂ ಓರ್ವ ಶಾಸಕರನ್ನೊಳಗೊಂಡಂತೆ 18 ಸಂಖ್ಯಾಬಲ ಹೊಂದಿದೆ. ಹೀಗಾಗಿ ನಗರಸಭೆ ಗದ್ದುಗೆಗಾಗಿ ಕಾಂಗ್ರೆಸ್ ಹಾಗೂ ಕಮಲ ಮಧ್ಯೆ ಜಿದ್ದಾಜಿದ್ದಿ‌ ನಡೆದಿದೆ. ಬಿಜೆಪಿಗೆ ಬಹುಮತವಿದ್ದರೂ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡಲೊಪ್ಪದ‌ ಕೈ ನಾಯಕರು ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಇದಕ್ಕಾಗಿ ಹಲವು ರೀತಿಯ ‌ಕಸರತ್ತು‌ ನಡೆಸಿದ್ದಾರೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿ ಮಾರ್ಪಟ್ಟಿದೆ. ಸುಲಭವಾಗಿ ಸಿಕ್ಕ ಅಧಿಕಾರ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಭೀತಿ ಎದುರಾಗಿದ್ದು, ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಪ್ರವಾಸ ಕೂಡ ಹಮ್ಮಿಕೊಂಡಿತ್ತು. ಆದರೆ, ಇಂದು ನಡೆಯುವ ಚುನಾವಣೆಯಲ್ಲಿ ಏನಾಗುತ್ತೋ ಎಂಬುವುದನ್ನು ಕಾದು ನೋಡಬೇಕಿದೆ.

ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ; ಅಶೋಕ ಮಂದಾಲಿ ವ್ಯಂಗ್ಯ

ದಾವಣಗೆರೆಯಲ್ಲಿ ಬೆಂಗಳೂರಿನ 7ಜನ ಬಿಜೆಪಿ ಎಂಎಲ್‌ಸಿಗಳ ಹೆಸರು ಸೇರಿಸಿದ್ಯಾರು? ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಬಿಜೆಪಿ ಅನುಸರಿಸಿದ ವಾಮಮಾರ್ಗ ಗದಗ ಜಿಲ್ಲೆಯ ಬಿಜೆಪಿಗರಿಗೆ ಕಾಣುತ್ತಿಲ್ಲವೇ?: ಮಂದಾಲಿ ಪ್ರಶ್ನೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪಕ್ಕೂ ಮುನ್ನ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗರು ಹಿಡಿದಿದ್ದು ಯಾವ ಮಾರ್ಗ ಎಂಬುದನ್ನು ಹೇಳಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ವಾಮಮಾರ್ಗ ಹೇಳಿಕೆಯ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಾವಣಗೆರೆ ಮಹಾನಗರ ಪಾಲಿಕೆಗೆ ಕಾಂಗ್ರೆಸ್ 22 ಜನ, ಬಿಜೆಪಿಯವರು 17 ಜನ ಆಯ್ಕೆಯಾಗಿದ್ದರು. ಇವರೊಂದಿಗೆ ಐವರು ಪಕ್ಷೇತರರು, ಓರ್ವ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದರು. ಓರ್ವ ಪಕ್ಷೇತರ, ಸ್ಥಳೀಯ ಶಾಸಕ, ವಿಪ ಸದಸ್ಯರು ಸೇರಿ ಕಾಂಗ್ರೆಸ್ 23 ಸಂಖ್ಯಾಬಲದೊಂದಿಗೆ ಅಧಿಕಾರ ಹಿಡಿಯಬೇಕಿತ್ತು.
ಆದರೆ, ಬಿಜೆಪಿಯವರು ಬೆಂಗಳೂರಿನಿಂದ ರವಿಕುಮಾರ, ತೇಜಸ್ವಿನಿಗೌಡ, ಲೇಹರಸಿಂಗ್, ನಂಜುಂಡಿ, ಚಿದಾನಂದಗೌಡ, ರಾಣೆಬೆನ್ನೂರಿನ ಆರ್.ಶಂಕರ್ ಸೇರಿ ಏಳು ಜನರನ್ನು ದಾವಣಗೆರೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ವಾಮಮಾರ್ಗದಿಂದ ಅಧಿಕಾರ ಪಡೆದುಕೊಂಡಿದ್ದಾರೆ.

ಗದಗನ ಬಿಜೆಪಿ ಮುಖಂಡರ ಹೇಳಿಕೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ವಾರ್ಡ್ ನಂ.28, 24 ಮತ್ತು 5ರಲ್ಲಿ ಬಿಜೆಪಿಗರು ಗೆದ್ದಿದ್ದು, ಅನ್ಯಾಯ ಮಾರ್ಗದಿಂದಲೇ ಅಲ್ಲವೇ?. 28ನೇ ವಾರ್ಡಿನಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಅನಿಲ್ ಅಬ್ಬಿಗೇರಿ ಈವರೆಗೆ ಲಿಂಗಾಯತ ಎಂದು ಬಿಂಬಿಸಿಕೊಂಡು ಬಂದಿದ್ದರು. ಆದರೆ, ನಗರಸಭೆ ಚುನಾವಣೆ ಹೊತ್ತಲ್ಲಿ ಗಾಣಿಗ ಎಂದು ಸರ್ಟಿಫಿಕೇಟ್ ಪಡೆದಿದ್ದಾರೆ. ಅಭ್ಯರ್ಥಿಯ ಎಲ್‌ಸಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ಅವರು ಗದಗನ ನಿವಾಸಿಯಾಗಿದ್ದುಕೊಂಡರೂ ಗದಗನ ಸಮಾಜದ ಸದಸ್ಯತ್ವ ಪಡೆಯದೇ ಹುಬ್ಬಳ್ಳಿ ಸಂಘದಿಂದ ಗಾಣಿಗ ಜಾತಿಯ ಸದಸ್ಯತ್ವ ಮುಂದಿಟ್ಟುಕೊಂಡು, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಾಮ ಮಾರ್ಗ ಬಿಜೆಪಿಯವರಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರ ಸಹಾಯ ಪಡೆದು ಅನಿಲ್ ಅಬ್ಬಿಗೇರಿ ಗದಗನ ಬದಲಾಗಿ ಹುಬ್ಬಳ್ಳಿ ಸಂಘದಿಂದ ಸದಸ್ಯತ್ಯ ಪಡೆದಿದ್ದು ಏಕೆ? ಇದು ವಾಮಮಾರ್ಗ ಅಲ್ಲವೇ?. ಇನ್ನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆಯುವಾಗ ತಂದೆ-ತಾಯಿ ಪ್ರಮಾಣ ಪತ್ರದಲ್ಲಿನ ಜಾತಿ ಪರಿಗಣಿಸುತ್ತಾರೆ ಹೊರತು ತಂದೆಗೆ ಮಕ್ಕಳ ಸರ್ಟಿಫಿಕೇಟ್‌ನಲ್ಲಿನ ಜಾತಿಯನ್ನಲ್ಲ. ಇದು ಯಾವ ಮಾರ್ಗ ಎಂಬುದನ್ನು ಬಿಜೆಪಿಯವರೇ ಹೇಳಲಿ ಎಂದು ಕಿಡಿಕಾರಿದ್ದಾರೆ.

ಓರ್ವ ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ನ ಮೂವರು ಸದಸ್ಯರನ್ನು ಗದಗನಲ್ಲಿ ಹೆಸರು ಸೇರ್ಪಡೆಗೆ ನೀಡಿರುವ ಅರ್ಜಿ ಬಗ್ಗೆ ಪ್ರಶ್ನಿಸುವ ಬಿಜೆಪಿಗರು, ಅಧಿಕಾರಿಗಳ ಮೇಲೆ ಒತ್ತಡ ತಂದು ಸೇರ್ಪಡೆ ಮಾಡದಂತೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಸೇರ್ಪಡೆಗೊಂಡ ಬೆಂಗಳೂರಿನ ಏಳು ಜನ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ದಾವಣಗೆರೆಯಲ್ಲಿ ಮತದಾರರಾಗಿದ್ದರ ಬಗ್ಗೆ ಮಾತನಾಡಲಿ. ಅದು ಬಿಟ್ಟು ಬಾವಿಯಲ್ಲಿನ ಕಪ್ಪೆಯಂತೆ ಹೇಳಿಕೆ ನೀಡಬಾರದು ಎಂದು ಹರಿಹಾಯ್ದಿದ್ದಾರೆ.

ನಗರಸಭೆಯಲ್ಲಿ 18 ಸ್ಥಾನ ಗೆದ್ದಿದ್ದೇವೆ ಎನ್ನುವವರು ಅವಳಿ ನಗರದಲ್ಲಿ ಕಾಂಗ್ರೆಸ್‌ಗೆ ಬಂದ ಮತಗಳೆಷ್ಟು, ಬಿಜೆಪಿಗೆಷ್ಟು ಬಂದಿವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಗದಗ-ಬೆಟಗೇರಿಯ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ 34,972 ಮತ, ಬಿಜೆಪಿಗೆ 34,311 ಮತ ಬಂದಿವೆ. ಇಲ್ಲೂ ಕಾಂಗ್ರೆಸ್ ಮುನ್ನಡೆ ಇದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿ ತೆಕ್ಕೆಗೆ?; ಆಡಿಯೋ, ವಿಡಿಯೋ ಕಾಲ್’ನಲ್ಲಿ ಸಂಪರ್ಕ!

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ‌ ನಗರದಲ್ಲಿ ರಾಜಕೀಯ ಮೇಲಾಟಗಳು‌‌ ನಡೆಯುತ್ತಲಿವೆ. ಆಡಳಿತ‌ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷಗಳು ಈಗಿರುವ ಸದಸ್ಯರ ಸಂಖ್ಯಾಬಲ‌ ಹೆಚ್ಚಿಸಿಕೊಳ್ಳಲು ಡೇ‌ ಒನ್ ನಿಂದ ಪ್ರಯತ್ನಿಸುತ್ತಿವೆ.

ಈ ಮಧ್ಯೆ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೂ ಮುಂದಾಗಿತ್ತು‌ ಎಂಬ ಮಾತುಗಳು ಕೇಳಿ‌ ಬಂದಿತ್ತು. ಅದರ ಭಾಗವಾಗಿ ಕಾಂಗ್ರೆಸ್ ನಾಯಕರು ಮೂವರು ಬಿಜೆಪಿ ಸದಸ್ಯರ ಮನವೊಲಿಸಲು ಶತಪ್ರಯತ್ನಪಟ್ಟಿದ್ದರು. ಆದರೆ, ಅದು ಫಲದಾಯಕವಾಗಿಲ್ಲ‌ ಎನ್ನಲಾಗುತ್ತಿದೆ.

ಅದರಂತೆ, ಇದೀಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೂ ಸೇಫರ್ ಸೈಡ್ ಆಗಿ ಕಾಂಗ್ರೆಸ್ ನ ಇಬ್ಬರು ಸದಸ್ಯರಿಗೆ ಗಾಳ ಹಾಕಿದೆ. ಕಾಂಗ್ರೆಸ್ನ ಓರ್ವ ಹೊಸ ಸದಸ್ಯ ಹಾಗೂ ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಓರ್ವ ಪಕ್ಷೇತರ ಸದಸ್ಯರ ಜೊತೆ ಬಿಜೆಪಿಯ ಕೆಲ ನಾಯಕರು ನಿಕಟ‌ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಸದಸ್ಯರ ಮನವೊಲಿಸಲು ಬಿಜೆಪಿಯ ನಾಯಕರು ಆಡಿಯೋ, ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದು, ನಗರಸಭೆ ಗದ್ದುಗೆ ಹಿಡಿಯಲು ಬಿಜೆಪಿ ಕಾಂಗ್ರೆಸ್ ನಡುವೆ ಒಂದೇ ಒಂದು ಸಂಖ್ಯೆಯ ಕೊರತೆ ಇರುವುದರಿಂದ ನಾಳೆ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಏನಾಗುತ್ತದೆಯೋ ಎಂಬ ಕುತೂಹಲ ಹೆಚ್ಚಿಸಿದೆ.

ಗದ್ದುಗೆ ಏರಲು ಅಡ್ಡದಾರಿ; ಕಾಂಗ್ರೆಸ್‌ಗೆ ಬಿಜೆಪಿ ಗುದ್ದು

  • ಅಧಿಕಾರ ಹಿಡಿಯುವುದಕ್ಕಾಗಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆಗೆ ಯತ್ನ
  • ಚುನಾವಣೆ ವೇಳೆ ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ? ನಗರದಲ್ಲಿ ವೃತ್ತಗಳೆಷ್ಟಿವೆ? ಎಂಬಿತ್ಯಾದಿ ಪ್ರಶ್ನೆಗಳ ಪೋಸ್ಟರ್‌ಗಳು ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ:

ಸೋಮವಾರ ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಗೆದ್ದು, ಗದುಗಿನ ಗದ್ದುಗೆ ಏರಲು ಸನ್ನದ್ಧಗೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧ ಗದಗ-ಬೆಟಗೇರಿ ಅವಳಿ ನಗರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಹಾಗೂ ರಾಜ್ಯಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಅವರು ತಮ್ಮ ಹೆಸರನ್ನು ಗದಗ ವಿಧಾನಸಭಾ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವುದಕ್ಕೆ ಅವಳಿ ನಗರದ ಜನತೆ ಕೈ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ.

ಅದರಲ್ಲೂ, ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ನ ಮೂವರು ಮೇಲ್ಮನೆ ಸದಸ್ಯರ ವಿರುದ್ಧ ನಗರದ ಜನರು, ಅದರಲ್ಲೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅವು ಹೀಗಿವೆ..

ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ?:
‘ಮಾನ್ಯ ಮೋಹನ್‌ಕುಮಾರ ಕೊಂಡಜ್ಜಿಯವರೇ, ನಗರಸಭೆಯ ಚುನಾವಣೆಯ ಸಂದರ್ಭದಲ್ಲಿ ಎಲ್ಲಿದ್ರಿ? ತಾವು ತಮ್ಮ ಅಭ್ಯರ್ಥಿಗಳ ಪರ ಪ್ರಚಾರವನ್ನೇ ಮಾಡಲಿಲ್ಲ. ಈಗ ತಾವು 6 ತಿಂಗಳಿಂದ ಗದಗ ನಗರದಲ್ಲಿ ವಾಸವಿದ್ದ ದಾಖಲೆಯನ್ನು ನೀಡುತ್ತೀರಾ? ಅಷ್ಟಕ್ಕೂ ನಗರದ ಅಭಿವೃದ್ಧಿಗೆ ತಾವು ಎಷ್ಟು ಅನುದಾನ ನೀಡಿದ್ದೀರಾ..? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಷ್ಟು ಸರ್ಕಲ್ ಇವೆ?:
‘ಮಾನ್ಯ ಹನುಮಂತಯ್ಯನವರೇ ತಾವು ಗದಗ ನಗರದಲ್ಲಿ ವಾಸವಿದ್ದು 6 ತಿಂಗಳಾಗಿದೆ ಅಂತ ದಾಖಲೆ ನೀಡಿದ್ದೀರಿ? ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದು, ಆ ಕ್ಷೇತ್ರದಿಂದ ಆಯ್ಕೆಯಾಗಿ ಬುದ್ಧಿಜೀವಿ ಎಂದು ಬಿರುದು ಪಡೆದ ತಾವು ಈ ಹನುಮಂತನಿಗೆ (ಶಾಸಕ ಎಚ್.ಕೆ. ಪಾಟೀಲ್) ಬಾಗಿದ್ದು ಸರಿಯೇ..? ಜೊತೆಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಷ್ಟು ಸರ್ಕಲ್‌ಗಳಿವೆ ಅಂತ ತಮಗೆ ಗೊತ್ತೆ? ಹಾಗೆ ತಮ್ಮ ಅನುದಾನವನ್ನು ಎಷ್ಟು ನೀಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಪೋಸ್ಟರ್‌ಗಳು ವೈರಲ್:
ಅದರಂತೆ, ಪ್ರಕಾಶ್ ರಾಥೋಡಅವರನ್ನೂ ಜನತೆ ಪ್ರಶ್ನಿಸುತ್ತಿದ್ದಾರೆ, ‘ನೀವು ಗದಗನಲ್ಲಿ ಮತ್ತೊಂದು ಮನೆ ಮಾಡಿದ್ದೀರಾ? ಅವಳಿ ನಗರದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಪೋಸ್ಟರ್‌ಗಳು ವಾಟ್ಸಾಪ್, ಫೇಸ್‌ಬುಕ್, ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೈ ನಾಯಕರಿಗೆ ಮುಜುಗರವನ್ನುಂಟು ಮಾಡಿವೆ.

ಇನ್ನು ಗದಗ-ಬೆಟಗೇರಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ನಾಯಕರು ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ. ಸಂಖ್ಯಾಬಲದಲ್ಲಿ ಸ್ವಲ್ಪವಷ್ಟೇ ಅಂತರವಿರುವ ಕಾರಣ, ಸೋಮವಾರದ ಚುನಾವಣೆಯಲ್ಲಿ ಯಾವ ತಂತ್ರದ ಮೂಲಕ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವುದು ಕಷ್ಟ. ಕಾಂಗ್ರೆಸ್, ಬಿಜೆಪಿ ಮಧ್ಯೆ ಅಧಿಕಾರಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದು ಸೋಮವಾರ ಮಧ್ಯಾಹ್ನದ ವೇಳೆಗೆ ಗೊತ್ತಾಗುವುದು.

ಅಕ್ಕಿ ಮೂಟೆ ಹೊತ್ತ ಗವಿಶ್ರೀ!

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಗವಿಶ್ರೀಗಳು ಮಾತ್ರ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ಜೊತೆ ಸಾಮಾನ್ಯ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ. ಯಾವುದೇ‌ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು. ಕಸ ಹೊಡೆಯುವುದು, ಲಟ್ಟಣಿಗೆಯಲ್ಲಿ ಚಪಾತಿ ಲಟ್ಟಿಸುವುದನ್ನು, ತೆಪ್ಪ ನಡೆಸುವುದನ್ನು ಈಗಾಗಲೇ ಕಂಡಿದ್ದೇವೆ.

ಈಗ ಜಾತ್ರೆಯ ನಿಮಿತ್ತ ಶ್ರೀಮಠದ ಅನ್ನದಾಸೋಹಕ್ಕೆ‌ ಭಕ್ತರು ನೀಡಿದ ಅಕ್ಕಿ‌ಮೂಟೆಗಳನ್ನು ಹೊತ್ತು ಭಕ್ತರ ಸೇವೆ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅನ್ನದಾಸೋಹಕ್ಕಾಗಿ ವಾಹನದಲ್ಲಿ ಬಂದ ಅಕ್ಕಿ ಮೂಟೆಗಳನ್ನು ಇಳಿಸಿಕೊಂಡು ಕೂಲಿ ಕೆಲಸಗಾರರಂತೆ ಹೊತ್ತು ಒಂದೆಡೆ ಸಾಗಿಸುವ ಮೂಲಕ ಇತರರಿಗೆ ಶ್ರೀಗಳು ಪ್ರೇರಣೆಯಾಗಿದ್ದಾರೆ.

ಬೈಕ್’ಗೆ ಕಾರು ಡಿಕ್ಕಿ; ಗುತ್ತಿಗೆದಾರ ಸೇರಿ ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಗುತ್ತಿಗೆದಾರನೊಬ್ಬ ಸ್ಥಳದಲ್ಲೇ ಮೃತಪಟ್ಟು, ಗಂಭೀರವಾಗಿ ಗಾಯಗೊಂಡಿದ್ದ ಜೆಸಿಬಿ ಆಪರೇಟರ್ ಆಸ್ಪತ್ರೆಯಲ್ಲಿ ಮೃತಪಟ್ಟ ಗದಗ ತಾಲ್ಲೂಕಿನ ಹರ್ಲಾಪುರ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಗದಗ ತಾಲ್ಲೂಕಿನ ಶ್ಯಾಗೋಟಿ ಗ್ರಾಮದ ಗುತ್ತಿಗೆದಾರ ಯಲ್ಲಪ್ಪಗೌಡ ಬಸನಗೌಡ ವೆಂಕನಗೌಡ (50) ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಜೆಸಿಬಿ ಆಪರೇಟರ್ ಲೋಕೇಶ್ ಗುಡಿಗೇರಿ (35) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.