Home Blog Page 34

RCB Champions: ನಾನು ನಾಯಕನಾಗಿ ಕಪ್ ಎತ್ತುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ: ರಜತ್ ಪಾಟಿದಾರ್

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 155 ರನ್‌ಗಳಿಗೆ ಸೀಮಿತವಾಯಿತು. ಸ್ಪರ್ಧಾತ್ಮಕವಲ್ಲದ ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 18 ಓವರ್‌ಗಳಲ್ಲೇ ಐದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್, ಅಹಮದಾಬಾದ್ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅನುಕೂಲಕರ ಎಂಬುದು ನಮಗೆ ಗೊತ್ತಿತ್ತು. ಅದಕ್ಕಾಗಿ ಟಾಸ್ ಗೆದ್ದ ತಕ್ಷಣ ಬೌಲಿಂಗ್ ಆಯ್ಕೆ ಮಾಡಿಕೊಂಡೆವು. ಎದುರಾಳಿ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಆರಂಭದಲ್ಲೇ ಔಟ್ ಮಾಡುವ ತಂತ್ರ ರೂಪಿಸಿದ್ದೆವು. ನಮ್ಮ ಬೌಲರ್‌ಗಳು ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದರು ಎಂದು ಹೇಳಿದರು.

ತಂಡದ ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಫೈನಲ್ ಪಂದ್ಯ ಮಾತ್ರವಲ್ಲ, ಇಡೀ ಟೂರ್ನಿಯಲ್ಲೂ ನಮ್ಮ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭುವನೇಶ್ವರ್ ಕುಮಾರ್, ರಾಸಿಖ್ ಸಲಾಂ, ಜೋಶ್ ಹೇಝಲ್‌ವುಡ್, ಸುಯಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಸೇರಿದಂತೆ ಎಲ್ಲರೂ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಂಪಿಯನ್ ನಾಯಕನಾಗಿ ಟ್ರೋಫಿ ಎತ್ತಿಹಿಡಿದ ಕ್ಷಣದ ಬಗ್ಗೆ ಮಾತನಾಡಿದ ಪಾಟಿದಾರ್, “ನಾನು ಆರ್‌ಸಿಬಿ ನಾಯಕನಾಗುತ್ತೇನೆ, ನಾಯಕನಾಗಿ ಟ್ರೋಫಿ ಗೆಲ್ಲುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಇದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ. ಇದಕ್ಕೆಲ್ಲ ನಾನು ಕೃತಜ್ಞನಾಗಿದ್ದೇನೆ” ಎಂದು ಭಾವುಕರಾದರು.

ಇದೇ ವೇಳೆ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರ ಪಾತ್ರವನ್ನು ಕೊಂಡಾಡಿದ ಪಾಟಿದಾರ್, ವಿರಾಟ್ ಭಾಯ್ ಯಾವಾಗಲೂ ತಂಡದ ಆಟಗಾರ. ಹೊಸ ಆಟಗಾರರು ಅಥವಾ ಯುವ ಕ್ರಿಕೆಟಿಗರು ತಂಡಕ್ಕೆ ಬಂದಾಗ ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಖುದ್ದಾಗಿ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತಾರೆ. ತಂಡದ ಒಳಗಿನ ವಾತಾವರಣ ಉತ್ತಮವಾಗಿರಲು ಅವರ ಕೊಡುಗೆ ಅಪಾರ ಎಂದರು.

ಕಳೆದ ಆವೃತ್ತಿಯ ಫೈನಲ್ ಮತ್ತು ಈ ಬಾರಿಯ ಫೈನಲ್ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, “2025ರ ಫೈನಲ್‌ನಲ್ಲಿ ಮೊದಲ ಟ್ರೋಫಿ ಗೆಲ್ಲಬೇಕೆಂಬ ಒತ್ತಡ ನಮ್ಮ ಮೇಲೆ ಇತ್ತು. ಆದರೆ ಈ ಬಾರಿ ತಂಡದ ಫಾರ್ಮ್, ಆಟಗಾರರ ಪ್ರದರ್ಶನ ಮತ್ತು ಪರಸ್ಪರ ನಂಬಿಕೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹೀಗಾಗಿ ಯಾವುದೇ ಒತ್ತಡವಿಲ್ಲದೆ ಫೈನಲ್ ಆಡಲು ಸಾಧ್ಯವಾಯಿತು” ಎಂದು ಹೇಳಿದರು.

ಒಂದಲ್ಲ, ಎರಡಲ್ಲ… ಕಪ್ ಮೇಲೆ ಕಪ್ ಗೆದ್ದ RCBಗೆ ಸಿಕ್ಕ ಪ್ರೈಸ್ ಮನಿ ಎಷ್ಟು ಗೊತ್ತಾ..?

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ, ಟ್ರೋಫಿಯ ಜೊತೆಗೆ 20 ಕೋಟಿ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಐಪಿಎಲ್ ಆರಂಭಿಕ ಆವೃತ್ತಿಯಾದ 2008ರಲ್ಲಿ ಚಾಂಪಿಯನ್ ತಂಡಕ್ಕೆ 4.8 ಕೋಟಿ ರೂಪಾಯಿ ಬಹುಮಾನ ನೀಡಲಾಗಿತ್ತು. ಇದೀಗ ಅದು 20 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಟೂರ್ನಿಯ ವಾಣಿಜ್ಯ ಮೌಲ್ಯ ಹಾಗೂ ಜನಪ್ರಿಯತೆ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಫೈನಲ್‌ನಲ್ಲಿ ಸೋತ ಗುಜರಾತ್ ಟೈಟಾನ್ಸ್ ತಂಡ ರನ್ನರ್-ಅಪ್ ಆಗಿ 12.5 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ಇನ್ನು ಕ್ವಾಲಿಫೈಯರ್-2ರಲ್ಲಿ ಸೋತ ರಾಜಸ್ಥಾನ್ ರಾಯಲ್ಸ್ 7 ಕೋಟಿ ರೂಪಾಯಿ ಹಾಗೂ ಎಲಿಮಿನೇಟರ್‌ನಲ್ಲಿ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್ 6.5 ಕೋಟಿ ರೂಪಾಯಿ ಬಹುಮಾನ ಪಡೆದಿವೆ.

ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮಿಂಚಿದ್ದು, ಆರೆಂಜ್ ಕ್ಯಾಪ್, ಎಂವಿಪಿ, ಸೂಪರ್ ಸ್ಟ್ರೈಕರ್, ಎಮರ್ಜಿಂಗ್ ಪ್ಲೇಯರ್ ಹಾಗೂ ಸೂಪರ್ ಸಿಕ್ಸರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್‌ನ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ಗೆದ್ದರೆ, ಸಾಯಿ ಸುದರ್ಶನ್ ಫ್ಯಾಂಟಸಿ ಕಿಂಗ್ ಹಾಗೂ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ 2026 ಪ್ರಶಸ್ತಿ ವಿಜೇತರ ಪಟ್ಟಿ:

• ಚಾಂಪಿಯನ್ಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹20 ಕೋಟಿ
• ರನ್ನರ್-ಅಪ್ – ಗುಜರಾತ್ ಟೈಟಾನ್ಸ್: ₹12.5 ಕೋಟಿ
• ಕ್ವಾಲಿಫೈಯರ್-2 (ಸೋತ ತಂಡ) – ರಾಜಸ್ಥಾನ್ ರಾಯಲ್ಸ್: ₹7 ಕೋಟಿ
• ಎಲಿಮಿನೇಟರ್ (ಸೋತ ತಂಡ) – ಸನ್‌ರೈಸರ್ಸ್ ಹೈದರಾಬಾದ್: ₹6.5 ಕೋಟಿ

ವೈಯಕ್ತಿಕ ಪ್ರಶಸ್ತಿಗಳು:

• ಆರೆಂಜ್ ಕ್ಯಾಪ್ – ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್): ₹10 ಲಕ್ಷ
• ಪರ್ಪಲ್ ಕ್ಯಾಪ್ – ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್): ₹10 ಲಕ್ಷ
• ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ (ಎಂವಿಪಿ) – ವೈಭವ್ ಸೂರ್ಯವಂಶಿ: ₹15 ಲಕ್ಷ
• ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ – ವೈಭವ್ ಸೂರ್ಯವಂಶಿ: ಟಾಟಾ ಸಿಯೆರಾ
• ಅತಿ ಹೆಚ್ಚು ಡಾಟ್ ಬಾಲ್‌ಗಳು – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್): ₹10 ಲಕ್ಷ
• ಎಮರ್ಜಿಂಗ್ ಪ್ಲೇಯರ್ – ವೈಭವ್ ಸೂರ್ಯವಂಶಿ: ₹10 ಲಕ್ಷ
• ಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್): ₹10 ಲಕ್ಷ
• ಸೂಪರ್ ಸಿಕ್ಸರ್ ಪ್ರಶಸ್ತಿ – ವೈಭವ್ ಸೂರ್ಯವಂಶಿ: ₹10 ಲಕ್ಷ
• ಅತಿ ಹೆಚ್ಚು ಬೌಂಡರಿ – ಸಾಯಿ ಸುದರ್ಶನ್: ₹10 ಲಕ್ಷ
• ಕ್ಯಾಚ್ ಆಫ್ ದಿ ಸೀಸನ್ – ಮನೀಶ್ ಪಾಂಡೆ (ಕೋಲ್ಕತ್ತಾ ನೈಟ್ ರೈಡರ್ಸ್): ₹10 ಲಕ್ಷ
• ಫೇರ್‌ಪ್ಲೇ ಪ್ರಶಸ್ತಿ – ಪಂಜಾಬ್ ಕಿಂಗ್ಸ್: ₹10 ಲಕ್ಷ
• ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ – ಸಿಎಬಿ (ಕೋಲ್ಕತ್ತಾ): ₹50 ಲಕ್ಷ
• ಪಿಚ್ ಮತ್ತು ಗ್ರೌಂಡ್ (4 ಅಥವಾ ಕಡಿಮೆ ಪಂದ್ಯಗಳು) – ಎಚ್‌ಪಿಸಿಎ: ₹25 ಲಕ್ಷ
• ಫೈನಲ್ ಪಂದ್ಯಶ್ರೇಷ್ಠ – ವಿರಾಟ್ ಕೊಹ್ಲಿ (ಆರ್‌ಸಿಬಿ): ₹5 ಲಕ್ಷ

ಒಟ್ಟಾರೆ, ಐಪಿಎಲ್ 2026 ಆವೃತ್ತಿ ರೋಚಕ ಪಂದ್ಯಗಳು, ಯುವ ಪ್ರತಿಭೆಗಳ ಅದ್ಭುತ ಪ್ರದರ್ಶನ ಮತ್ತು ಆರ್‌ಸಿಬಿಯ ಐತಿಹಾಸಿಕ ಸಾಧನೆಯ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಒಂದೆಡೆ ನಿಷೇಧದ ಸಂಕಷ್ಟ… ಮತ್ತೊಂದೆಡೆ ಕೋಟ್ಯಂತರ ಬಿಸಿನೆಸ್! ರಣ್ವೀರ್ ಸಿಂಗ್‌ನ ಅಸಲಿ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ?

ಬಾಲಿವುಡ್‌ನಲ್ಲಿ ನಿಷೇಧದ ವಿವಾದ ಎದುರಿಸುತ್ತಿರುವ ರಣ್ವೀರ್ ಸಿಂಗ್, ಮತ್ತೊಂದೆಡೆ ಬಹುಕೋಟಿ ಉದ್ಯಮಗಳ ಮೂಲಕ ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಸವಾಲುಗಳಿದ್ದರೂ, ಬಿಸಿನೆಸ್ ಕ್ಷೇತ್ರದಲ್ಲಿ ರಣ್ವೀರ್ ವೇಗವಾಗಿ ಬೆಳೆಯುತ್ತಿರುವುದು ವಿಶೇಷ.

‘ಡಾನ್ 3’ ಚಿತ್ರದ ಒಪ್ಪಂದ ವಿವಾದದ ಹಿನ್ನೆಲೆ ಬಾಲಿವುಡ್ ನೌಕರರ ಒಕ್ಕೂಟ ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಘೋಷಿಸಿದ್ದು, ಪ್ರಕರಣ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿವಾದದ ನಡುವೆಯೇ ರಣ್ವೀರ್ ಅವರ ಉದ್ಯಮಿಕ ಯಶಸ್ಸು ಗಮನ ಸೆಳೆಯುತ್ತಿದೆ.

‘ಬೋಲ್ಡ್ ಕೇರ್’ ಮತ್ತು ‘ಸೂಪರ್ ಯೂ’ ಬ್ರ್ಯಾಂಡ್‌ಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಈಗಾಗಲೇ ಬಲಿಷ್ಠ ಸ್ಥಾನ ನಿರ್ಮಿಸಿಕೊಂಡಿರುವ ಅವರು, ಕಳೆದ ವರ್ಷ ‘ರಂಗೀಲಾ’ ಹೆಸರಿನ ವೋಡ್ಕಾ ಬ್ರ್ಯಾಂಡ್ ಆರಂಭಿಸಿ ಮದ್ಯ ಉದ್ಯಮಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಎಬಿಡಿ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಆರಂಭವಾದ ಈ ಬ್ರ್ಯಾಂಡ್ ಇದೀಗ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಭ್ಯವಿದೆ.

ಇದೇ ವೇಳೆ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳ ಯಶಸ್ಸು ರಣ್ವೀರ್‌ರನ್ನು ಮತ್ತೆ ಬೇಡಿಕೆಯ ನಟರನ್ನಾಗಿ ಮಾಡಿದೆ. ಪ್ರಸ್ತುತ ಅವರ ಕೈಯಲ್ಲಿ ಅಧಿಕೃತವಾಗಿ ಯಾವುದೇ ಸಿನಿಮಾ ಇಲ್ಲದಿದ್ದರೂ, ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಬಿಗ್ ಪ್ರಾಜೆಕ್ಟ್‌ನಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಜೋರಾಗಿದೆ.

ಸಿನಿಮಾ ವಿವಾದ, ನಿಷೇಧದ ಚರ್ಚೆ ಮತ್ತು ಹೊಸ ಉದ್ಯಮಗಳ ವಿಸ್ತರಣೆ—ಈ ಮೂರು ಕಾರಣಗಳಿಂದ ರಣ್ವೀರ್ ಸಿಂಗ್ ಸದ್ಯ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

300 ಕೋಟಿ ಗೆಲುವಿನ ಹಿಂದೆ ಇದ್ದವರಿಗೆ ಕೋಟಿ ಮೌಲ್ಯದ ಉಡುಗೊರೆ! ಸೂರ್ಯ ಮಾಡಿದ ಕೆಲಸ ನೋಡಿ ಸಿನಿರಂಗವೇ ಶಾಕ್

ಬಾಕ್ಸ್ ಆಫೀಸ್‌ನಲ್ಲಿ ‘ಕರುಪ್ಪು’ ಸಿನಿಮಾ ಸೃಷ್ಟಿಸಿರುವ ದಾಖಲೆಗಳ ನಡುವೆಯೇ ನಟ ಸೂರ್ಯ ಅವರ ಮತ್ತೊಂದು ನಡೆ ಈಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ ಚಿತ್ರದ ಯಶಸ್ಸಿಗೆ ಕಾರಣರಾದ ಇಬ್ಬರು ಪ್ರಮುಖ ತಂತ್ರಜ್ಞರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸೂರ್ಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಹಿನ್ನಡೆ ಅನುಭವಿಸಿದ್ದ ಸೂರ್ಯಗೆ ‘ಕರುಪ್ಪು’ ಸಿನಿಮಾ ಮಹತ್ವದ ತಿರುವು ನೀಡಿದೆ. ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಚಿತ್ರ, ಮೂರನೇ ವಾರದಲ್ಲೇ 300 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದೆ.

ಈ ಯಶಸ್ಸಿನ ಬೆನ್ನಲ್ಲೇ ಚಿತ್ರದ ಛಾಯಾಗ್ರಾಹಕ ಜಿ.ಕೆ. ವಿಷ್ಣು ಅವರಿಗೆ ‘ಮಹೀಂದ್ರಾ BE6 ಬ್ಯಾಟ್‌ಮ್ಯಾನ್ ಎಡಿಷನ್’ ಕಾರು ಹಾಗೂ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರಿಗೆ ಮತ್ತೊಂದು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.

ಚಿತ್ರದ ಯಶಸ್ಸಿನ ಬಳಿಕ ಮಾತನಾಡಿದ್ದ ಸೂರ್ಯ, ಎಡಿಟರ್ ಕಲೈವಾನನ್, ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್, ಛಾಯಾಗ್ರಾಹಕ ಜಿ.ಕೆ. ವಿಷ್ಣು ಸೇರಿದಂತೆ ಇಡೀ ತಾಂತ್ರಿಕ ತಂಡದ ಶ್ರಮವೇ ಚಿತ್ರದ ಗೆಲುವಿನ ಮೂಲ ಕಾರಣ ಎಂದು ಹೇಳಿದ್ದರು. ಈಗ ಮಾತಿನಲ್ಲಷ್ಟೇ ಅಲ್ಲ, ಉಡುಗೊರೆಯ ಮೂಲಕವೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಕರುಪ್ಪು’ ಚಿತ್ರವನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಿದ್ದು, ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿನ ಸೂರ್ಯ ಅವರ ‘ಕರುಪ್ಪುಸಾಮಿ’ ಪಾತ್ರ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.

‘ನಮ್ಮ ಸಿನಿಮಾವನ್ನೇ ಹತ್ತಿಕ್ಕಿದರು!’ ವಿಘ್ನೇಶ್ ಶಿವನ್ ಕಣ್ಣೀರಿನ ಆರೋಪಕ್ಕೆ ನೆಟ್ಟಿಗರ ತಿರುಗೇಟು

‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದ ಸೋಲಿನ ಬಗ್ಗೆ ನಿರ್ದೇಶಕ ವಿಘ್ನೇಶ್ ಶಿವನ್ ಮಾಡಿರುವ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಲು ನೆಗೆಟಿವ್ ವಿಮರ್ಶೆಗಳು ಮತ್ತು ಸಂಘಟಿತ ಆನ್‌ಲೈನ್ ಪ್ರಚಾರವೇ ಕಾರಣ ಎಂದು ಅವರು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಕೇವಲ 66 ಕೋಟಿ ರೂ. ಗಳಿಕೆ ಮಾಡಿ ದೊಡ್ಡ ಆರ್ಥಿಕ ಹೊಡೆತ ಅನುಭವಿಸಿತ್ತು. ಆದರೆ ಒಟಿಟಿಯಲ್ಲಿ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿರುವ ವಿಘ್ನೇಶ್, “ಚಿತ್ರರಂಗದೊಳಗಿನಿಂದಲೇ ಬೆಂಬಲ ಸಿಗದಿದ್ದರೆ ಸಾರ್ವಜನಿಕ ಅಭಿಪ್ರಾಯವೂ ಬದಲಾಗುತ್ತದೆ. ಅದು ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.

“ಮೊದಲ ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಆದರೆ ನಂತರ ದಿಢೀರ್ ನೆಗೆಟಿವ್ ಟ್ರೆಂಡ್ ಹುಟ್ಟುಹಾಕಲಾಯಿತು. ಆ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ವಿಘ್ನೇಶ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. “ಜನರು ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಸಿನಿಮಾ ಇಷ್ಟವಾಗದಿದ್ದರೆ ಅಭಿಪ್ರಾಯ ಹೇಳುವ ಹಕ್ಕು ಅವರಿಗಿದೆ” ಎಂದು ಅನೇಕರು ಪ್ರತಿಕ್ರಿಯಿಸಿದ್ದು, ಚಿತ್ರದ ಸೋಲಿಗೆ ವಿಮರ್ಶಕರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಕ್ ಟು ಬ್ಯಾಕ್ ಚಾಂಪಿಯನ್ RCB: ಮುಂದಿನ IPLನಲ್ಲಿ ಹೋಂ ಗ್ರೌಂಡ್ ಯಾವುದು?

ಬೆಂಗಳೂರು: ಐಪಿಎಲ್‌ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದೆ.

ಆದರೆ ಈ ಸಂಭ್ರಮದ ನಡುವೆಯೇ ಮುಂದಿನ ಐಪಿಎಲ್‌ ಋತುವಿನಲ್ಲಿ ತಂಡದ ತವರು ಮೈದಾನ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

52 ವರ್ಷಗಳ ಇತಿಹಾಸ ಹೊಂದಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಆಧುನೀಕರಣಗೊಳಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಂದಾಗಿದ್ದು, ಸದ್ಯದ 35 ಸಾವಿರ ಆಸನಗಳ ಸಾಮರ್ಥ್ಯವನ್ನು 55 ಸಾವಿರಕ್ಕೆ ಹೆಚ್ಚಿಸುವ ಯೋಜನೆ ರೂಪಿಸಿದೆ. ಇದಕ್ಕಾಗಿ ಹಳೆಯ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಪುನರ್‌ನಿರ್ಮಿಸುವ ಅಗತ್ಯವಿದ್ದು, ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಬೇರೆ ಕ್ರೀಡಾಂಗಣದಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ. ರಾಯ್ಪುರ ಸೇರಿದಂತೆ ಕೆಲವು ನಗರಗಳ ಕ್ರೀಡಾಂಗಣಗಳನ್ನು ಪರ್ಯಾಯ ತವರು ಮೈದಾನವಾಗಿ ಪರಿಗಣಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಈಗಾಗಲೇ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕೆಲವು ಪಂದ್ಯಗಳಿಗೆ ರಾಯ್ಪುರವನ್ನು ತಾತ್ಕಾಲಿಕ ತವರು ಮೈದಾನವಾಗಿ ಬಳಸಲಾಗಿತ್ತು. ಹೀಗಾಗಿ ಮುಂದಿನ ಸೀಸನ್‌ನಲ್ಲೂ ರಾಯ್ಪುರವೇ ಆರ್‌ಸಿಬಿಯ ತಾತ್ಕಾಲಿಕ ಹೋಂ ಗ್ರೌಂಡ್ ಆಗುವ ಸಾಧ್ಯತೆಗಳಿವೆ.

ಸತತ ಎರಡು ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿ, ಮುಂದಿನ ಸೀಸನ್‌ನಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದು, ತವರು ಮೈದಾನದ ಬದಲಾವಣೆ ತಂಡದ ಪ್ರದರ್ಶನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಆಟಗಾರರ ಬಸ್‌ನಲ್ಲಿ ಬೆಂಕಿ: ಫೈನಲ್ ಸೋಲಿನ ಬೆನ್ನಲ್ಲೇ ಗುಜರಾತ್ ಟೈಟಾನ್ಸ್‌ಗೆ ಮತ್ತೊಂದು ಶಾಕ್!

ಅಹಮದಾಬಾದ್‌: ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ ತಂಡ ಮತ್ತೊಂದು ಆತಂಕಕಾರಿ ಘಟನೆಯಿಂದ ಪಾರಾಗಿದೆ.

ಪಂದ್ಯ ಮುಗಿದ ಬಳಿಕ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆಟಗಾರರು ಸುಮಾರು ಒಂದು ಗಂಟೆ ಕಾಲ ಬಸ್‌ನಲ್ಲೇ ಸಿಲುಕಿಕೊಂಡಿದ್ದರು.

ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ, ಆಟಗಾರರನ್ನು ಸುರಕ್ಷಿತವಾಗಿ ಮತ್ತೊಂದು ಬಸ್‌ಗೆ ಸ್ಥಳಾಂತರಿಸಿದರು. ಅದೃಷ್ಟವಶಾತ್ ಯಾವುದೇ ಆಟಗಾರರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆ ಐಪಿಎಲ್‌ ಫೈನಲ್‌ನಲ್ಲಿ ಸೋಲಿನ ಆಘಾತದಿಂದ ಹೊರಬರದಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ. ಪ್ಲೇಆಫ್ ಹಂತದಿಂದಲೇ ನಿರಂತರ ಪ್ರಯಾಣ, ಬಿಗಿಯಾದ ವೇಳಾಪಟ್ಟಿ ಹಾಗೂ ಪ್ರತಿಕೂಲ ಹವಾಮಾನದಿಂದ ತಂಡ ಸಾಕಷ್ಟು ಒತ್ತಡ ಅನುಭವಿಸಿತ್ತು ಎನ್ನಲಾಗಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 155 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ 18 ಓವರ್‌ಗಳಲ್ಲೇ 161 ರನ್‌ ಕಲೆಹಾಕಿ ಸತತ ಎರಡನೇ ಬಾರಿಗೆ ಐಪಿಎಲ್‌ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬೈಕ್-ಸ್ಕೂಟರ್ ನಡುವೆ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು!

ಬೆಂಗಳೂರು:- ಬೈಕ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರದ ಲಕ್ಷ್ಮಿಪುರದ ಬಳಿ ಜರುಗಿದೆ.

ಮನೋಜ್ (22) ಮೃತ ಯುವಕ. ಸ್ಕೂಟರ್ ನಲ್ಲಿ ಮನೋಜ್ ಹಾಗೂ ಆತನ ಸ್ನೇಹಿತ ತೆರಳುತ್ತಿದ್ದರು. ಆಗ ಬೈಕ್ ಗೆ ಸ್ಕೂಟರ್ ಡಿಕ್ಕಿಯಾಗಿದೆ. ನೆನ್ನೆ ರಾತ್ರಿ ಸುಮಾರು 11:30 ಕ್ಕೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸಧ್ಯ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಾಣಾವರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಜನತೆಗೆ ಮತ್ತೊಂದು ಶಾಕ್: ವಾಣಿಜ್ಯ LPG ಸಿಲಿಂಡರ್ ದರ ಮತ್ತೆ ಏರಿಕೆ!

ನವದೆಹಲಿ/ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಆಘಾತ ನೀಡಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ನವದೆಹಲಿ ನಗರದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವು 42 ರೂಪಾಯಿ ಹೆಚ್ಚಳವಾಗಿ ಪ್ರತಿ ಸಿಲಿಂಡರ್‌ ಬೆಲೆ 3,113.5 ರೂಪಾಯಿಗೆ ತಲುಪಿದೆ. ಇದೇ ವೇಳೆ ಬೆಂಗಳೂರಿನಲ್ಲಿ 46 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‌ ದರ 3,198 ರೂಪಾಯಿಗೆ ಏರಿಕೆಯಾಗಿದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದು ಕಳೆದ ಮೇ 1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 2ನೇ ಬಾರಿಗೆ ಮಾಡಿದ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೇ 1 ರಂದು ಏಕಾಏಕಿ ಪ್ರತಿ ವಾಣಿಜ್ಯ ಸಿಲಿಂಡರ್‌ ಮೇಲಿನ ಬೆಲೆಯನ್ನು 993 ರೂ.ಗಳಷ್ಟು ಹೆಚ್ಚಳ ಮಾಡಿತ್ತು. ಆದಾಗ್ಯೂ ತೈಲ ಕಂಪನಿಗಳು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರಿಂದ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

 

ಕರ್ನಾಟಕದ ವಾಯು ಗುಣಮಟ್ಟ ವರದಿ: ಇಳಿಕೆಯಾಯ್ತು ಮಾಲಿನ್ಯ, ಬೆಂಗಳೂರು ಮಂದಿಗೆ ಗುಡ್ ನ್ಯೂಸ್!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಪ್ರೀ-ಮಾನ್ಸೂನ್ ಮಳೆ ಹಾಗೂ ಮುಂಗಾರು ಮಾರುತಗಳ ಪರಿಣಾಮದಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಉತ್ತಮ ಹಾಗೂ ಸಮಾಧಾನಕರ ಮಟ್ಟದಲ್ಲಿದೆ ಎಂದು ವರದಿ ತಿಳಿಸಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಧೂಳಿನ ಕಣಗಳು ಗಣನೀಯವಾಗಿ ಇಳಿಕೆಯಾಗಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 45 ರಿಂದ 65ರ ನಡುವೆ ದಾಖಲಾಗಿದೆ. ಇದು ಆರೋಗ್ಯಕರ ವಾತಾವರಣವನ್ನು ಸೂಚಿಸುತ್ತದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ವಾಹನ ದಟ್ಟಣೆಯ ಕಾರಣದಿಂದ AQI ಸ್ವಲ್ಪ ಹೆಚ್ಚಾಗಿ 60–70ರ ನಡುವೆ ದಾಖಲಾಗಿದ್ದು, ಜಯನಗರ ಮತ್ತು ಮಲ್ಲೇಶ್ವರಂ ಪ್ರದೇಶಗಳಲ್ಲಿ ಹಸಿರು ವಲಯ ಹೆಚ್ಚಿರುವ ಕಾರಣ AQI 35–45ರಷ್ಟಿದೆ. ಹೂಡಿ ಮತ್ತು ವೈಟ್‌ಫೀಲ್ಡ್ ಪ್ರದೇಶಗಳಲ್ಲಿ AQI 50–62ರ ನಡುವೆ ದಾಖಲಾಗಿದೆ.

ರಾಜ್ಯದ ಇತರೆ ನಗರಗಳಲ್ಲಿಯೂ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ಮೈಸೂರು ನಗರದಲ್ಲಿ 30–40, ಮಂಗಳೂರು 35–45, ಹುಬ್ಬಳ್ಳಿ-ಧಾರವಾಡ 50–60 ಹಾಗೂ ಕಲಬುರಗಿಯಲ್ಲಿ 65–75ರಷ್ಟು AQI ದಾಖಲಾಗಿದೆ.

ಸಾಮಾನ್ಯವಾಗಿ 0–50 AQI ಅನ್ನು ‘ಅತ್ಯಂತ ಉತ್ತಮ’ ಹಾಗೂ 51–100 ಅನ್ನು ‘ಸಮಾಧಾನಕರ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ವಾಯು ಮಾಲಿನ್ಯದಿಂದ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ ಎಂದು ವರದಿ ತಿಳಿಸಿದೆ.

error: Content is protected !!