Home Blog Page 34

ಇಲಕಲ್ಲ ಡೀಪೋಗೆ ಹೆಮ್ಮೆ: ಕುಮಾರಸ್ವಾಮಿ ವಿರಕ್ತಮಠರಿಗೆ ಸರ್ವೋತ್ತಮ ಪ್ರಶಂಸನಾ ಗೌರವ

ಇಲಕಲ್ಲ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಇಲಕಲ್ಲ ಡೀಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಲೆಕ್ಕಿಗ ಶ್ರೀ ಕುಮಾರಸ್ವಾಮಿ ವಿರಕ್ತಮಠ ಅವರು 2025–26ನೇ ಸಾಲಿನ ಸರ್ವೋತ್ತಮ ಪ್ರಶಂಸನಾ ಗೌರವಕ್ಕೆ ಭಾಜನರಾಗಿದ್ದಾರೆ.2025ನೇ ಸಾಲಿನಲ್ಲಿ ಗರಿಷ್ಠ ಹಾಜರಾತಿ ಹಾಗೂ ಯಾವುದೇ ಅಪರಾಧ ದಾಖಲೆಗಳಿಲ್ಲದೇ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಬಾಗಲಕೋಟೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.ಜನವರಿ 26ರಂದು ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಐದು ಸಿಬ್ಬಂದಿಗಳ ಪೈಕಿ ಕುಮಾರಸ್ವಾಮಿ ವಿರಕ್ತಮಠ ಕೂಡ ಸೇರಿದ್ದಾರೆ.ಈ ಸಾಧನೆಗೆ ಇಲಕಲ್ಲ ಡೀಪೋದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದು, ಇದು ಡೀಪೋಗೆ ಸಂದ ಗೌರವ ಎಂದು ಶ್ಲಾಘಿಸಿದ್ದಾರೆ.

ಥರ್ಮಲ್ ಡ್ರೋನ್‌ ಕೈಗೂ ಸಿಗದ ಚಿರತೆ: ಅರಣ್ಯ ಇಲಾಖೆಗೆ ದೊಡ್ಡ ಸವಾಲು- ಕಾರ್ಯ ಪಡೆ ಎಂಟ್ರಿ

0

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ಕಳೆದೊಂದು ತಿಂಗಳಿಂದ ಸಂಚರಿಸುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಫಲಿತಾಂಶ ನೀಡಿಲ್ಲ. ಕಳೆದ ಭಾನುವಾರ ಸಂಜೆ ಆರಂಭಗೊಂಡು ಸೋಮವಾರ ಬೆಳಗಿನ ಜಾವದವರೆಗೆ ನಡೆದ ತೀವ್ರ ಕಾರ್ಯಾಚರಣೆಯ ವೇಳೆ ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಒಂದು ಬಾರಿ ಚಿರತೆ ಕಾಣಿಸಿಕೊಂಡರೂ, ನಂತರ ಅದು ಮತ್ತೆ ಮರೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 17ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡ ಬಳಿಕ ಈ ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸೆರೆಗೆ ಮೂರು ಕಡೆಗಳಲ್ಲಿ ಬೋನ್ ಅಳವಡಿಸಲಾಗಿದ್ದು, 11 ಟ್ರ್ಯಾಪ್ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಆದರೂ ಚಿರತೆ ಸೆರೆಗೆ ಸಿಕ್ಕಿಲ್ಲ ಎಂಬುದು ಅರಣ್ಯ ಇಲಾಖೆಗೆ ಸವಾಲಾಗಿದೆ.

ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಥರ್ಮಲ್ ಡ್ರೋನ್ ಕ್ಯಾಮರಾಗಳು ಹಾಗೂ ತಜ್ಞರ ತಂಡವನ್ನು ಕರೆಸಲಾಗಿದೆ. ಮೈಸೂರಿನಿಂದ ಚಿರತೆ ಸೆರೆ ಹಿಡಿಯುವ ವಿಶೇಷ ಕಾರ್ಯಪಡೆ, ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಅರವಳಿಕೆ ತಜ್ಞರು ಹಾಗೂ ಧಾರವಾಡ ಪಶು ವೈದ್ಯಕೀಯ ಇಲಾಖೆಯ ತಜ್ಞರು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ವಿಮಾನ ನಿಲ್ದಾಣದ ಸುತ್ತಮುತ್ತ ಸುಮಾರು 150 ಎಕರೆಗೂ ಅಧಿಕ ಪ್ರದೇಶವು ಪೊದೆ, ಮರಗಳಿಂದ ಆವೃತವಾಗಿದ್ದು, ನವಿಲು, ಮುಳ್ಳುಹಂದಿ, ಮೊಲಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಚಿರತೆಗೆ ಆಹಾರ ಸುಲಭವಾಗಿ ಲಭ್ಯವಾಗುತ್ತಿದೆ. ಈ ಕಾರಣದಿಂದ ಚಿರತೆ ಇದೇ ಪ್ರದೇಶದಲ್ಲೇ ಬೀಡುಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಭಾನುವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ವನ್ಯಜೀವಿ ಭೀತಿ ಹೆಚ್ಚಳ: ಚಿರತೆ ದಾಳಿಯಲ್ಲಿ 30 ವರ್ಷದ ಯುವಕ ಮೃತ

0

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಚಿರತೆ ಉಪಟಳ ಮತ್ತೊಮ್ಮೆ ಆತಂಕ ಮೂಡಿಸಿದೆ. ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ.

ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಮೃತ ಪಾದಯಾತ್ರಿಕ. ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಿಶ್ರಾಂತಿ ಪಡೆದ ತಂಡ, ಬುಧವಾರ ಬೆಳಗ್ಗೆ ಮುಂದಿನ ಹಂತದ ಯಾತ್ರೆ ಆರಂಭಿಸಿತ್ತು.

ಈ ವೇಳೆ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಾ ಮಾರ್ಗದಲ್ಲಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಪ್ರವೀಣ್ ಅವರನ್ನು ಅರಣ್ಯದೊಳಗೆ ಎಳೆದೊಯ್ದಿದೆ. ಜೊತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿ ಚಿರತೆಯನ್ನು ಓಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಳಿಕ ಯುವಕನ ಶವವನ್ನು ಪತ್ತೆ ಹಚ್ಚಲಾಗಿದೆ.

ಈ ಘಟನೆಯು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಚಿರತೆ ದೃಶ್ಯಗಳಿಗೆ ಮತ್ತಷ್ಟು ಗಂಭೀರತೆ ತಂದಿದೆ. ಈ ಹಿಂದೆ ಸಹ ಚೆನ್ನಮಲ್ಲಿಪುರದಲ್ಲಿ ಚಿರತೆ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅರಣ್ಯ ಪ್ರದೇಶಗಳ ಸುತ್ತಮುತ್ತ ಚಿರತೆ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಪಾದಯಾತ್ರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

27 ವರ್ಷ, 3 ಮಿಷನ್, ಬಾಹ್ಯಾಕಾಶದಲ್ಲಿ 608 ದಿನ ವಾಸ್ತವ್ಯ: ನಾಸಾಗೆ ಅಧಿಕೃತ ವಿದಾಯ ಹೇಳಿದ ಸುನೀತಾ ವಿಲಿಯಮ್ಸ್‌

0

ವಾಷಿಂಗ್ಟನ್: ನಾಸಾದ ಅನುಭವಿ ಗಗನಯಾತ್ರಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸುನೀತಾ ವಿಲಿಯಮ್ಸ್ ಅವರು ಅಧಿಕೃತವಾಗಿ ನಿವೃತ್ತಿಯಾಗುತ್ತಿರುವುದನ್ನು ನಾಸಾ ಮಂಗಳವಾರ ಘೋಷಿಸಿದೆ. ಅವರ ನಿವೃತ್ತಿ ಡಿಸೆಂಬರ್ 27, 2025ರಿಂದ ಜಾರಿಗೆ ಬರಲಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

1998ರಲ್ಲಿ ನಾಸಾದ ಗಗನಯಾತ್ರಿಯಾಗಿ ಆಯ್ಕೆಯಾದ ಸುನೀತಾ ವಿಲಿಯಮ್ಸ್, ಮೂರು ಬಾಹ್ಯಾಕಾಶ ಮಿಷನ್‌ಗಳಲ್ಲಿ ಭಾಗವಹಿಸಿ ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದು ನಾಸಾ ಗಗನಯಾತ್ರಿಗಳ ಪೈಕಿ ಎರಡನೇ ಅತಿ ಹೆಚ್ಚು ಅವಧಿ ಎಂದು ನಾಸಾ ಮಾಹಿತಿ ನೀಡಿದೆ. ಒಂಬತ್ತು ಬಾಹ್ಯಾಕಾಶ ನಡಿಗೆಗಳ ಮೂಲಕ ಅವರು ಒಟ್ಟು 62 ಗಂಟೆ 6 ನಿಮಿಷಗಳನ್ನು ಬಾಹ್ಯಾಕಾಶ ಹೊರಭಾಗದಲ್ಲಿ ಕಳೆದಿದ್ದಾರೆ.

2024ರ ಜೂನ್‌ನಲ್ಲಿ ಆರಂಭವಾದ ಅವರ ಮೂರನೇ ಮಿಷನ್, ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ನಡೆದ ಕ್ರೂ ಫ್ಲೈಟ್ ಟೆಸ್ಟ್ ಆಗಿತ್ತು. ಈ ಮಿಷನ್ ಕೇವಲ 10 ದಿನಗಳಿಗಷ್ಟೇ ಯೋಜನೆಯಾಗಿದ್ದರೂ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಸುಮಾರು ಒಂಬತ್ತು ತಿಂಗಳುಗಳಿಗೂ ಹೆಚ್ಚು ಕಾಲ ಮುಂದುವರಿಯಿತು. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 2025ರಲ್ಲಿ ಭೂಮಿಗೆ ಮರಳಿದರು.

ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, “ಸುನೀತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಅನ್ವೇಷಣೆಯ ಪ್ರಮುಖ ಮುಖ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿ ತೋರಿಸುತ್ತವೆ” ಎಂದು ಹೇಳಿದ್ದಾರೆ.

ಭಾರತೀಯ ಮೂಲದ ತಂದೆ ದೀಪಕ್ ಪಾಂಡ್ಯ ಮತ್ತು ಸ್ಲೊವೇನಿಯನ್ ಮೂಲದ ತಾಯಿ ಬೋನಿ ಪಾಂಡ್ಯ ಅವರ ಪುತ್ರಿಯಾಗಿರುವ ಸುನೀತಾ, ಭಾರತ–ಅಮೆರಿಕಾ ವೈಜ್ಞಾನಿಕ ಸಹಕಾರದ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.
“ಬಾಹ್ಯಾಕಾಶ ನನ್ನ ನೆಚ್ಚಿನ ಸ್ಥಳ. ಮೂರು ಬಾರಿ ಅಲ್ಲಿ ಸೇವೆ ಸಲ್ಲಿಸುವ ಅವಕಾಶ ನನ್ನ ಜೀವನದ ಅತ್ಯಂತ ದೊಡ್ಡ ಗೌರವ” ಎಂದು ನಿವೃತ್ತಿಯ ಸಂದರ್ಭ ಸುನೀತಾ ಹೇಳಿದ್ದಾರೆ.

ಶಿವಮೊಗ್ಗ ಡಬಲ್ ಮರ್ಡರ್ ಪ್ರಕರಣ ಭೇದ: ತಮ್ಮನ ಮಗನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ವೃದ್ಧ ದಂಪತಿ ಸಾವಿನ ಪ್ರಕರಣ ಇದೀಗ ಭೀಕರ ಸತ್ಯವನ್ನು ಬಹಿರಂಗಪಡಿಸಿದೆ. ಮನೆಯಲ್ಲಿಯೇ ಮೃತಪಟ್ಟಿದ್ದ ಚಂದ್ರಪ್ಪ (80) ಮತ್ತು ಜಯಮ್ಮ (75) ಅವರನ್ನು ಕೊಲೆ ಮಾಡಿರುವುದು ಸಂಬಂಧಿಕ ಹಾಗೂ ವೈದ್ಯ ಡಾ. ಮಲ್ಲೇಶ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ತಮ್ಮ ದೊಡ್ಡಪ್ಪ–ದೊಡ್ಡಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ, ಸಾಲದ ಒತ್ತಡದಿಂದ ಹಣಕ್ಕಾಗಿ ಬೇಡಿಕೆ ಇಟ್ಟು, ನಿರಾಕರಣೆ ಎದುರಾದಾಗ ಪಕ್ಕಾ ಯೋಜನೆಯೊಂದಿಗೆ ಕೊಲೆ ಎಸಗಿದ್ದಾನೆ. ಚಿಕಿತ್ಸೆ ನೆಪದಲ್ಲಿ ಇಬ್ಬರಿಗೂ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಎಸ್‌ಪಿ ನಿಖಿಲ್ ಪ್ರಕಾರ, ಆರೋಪಿ ಇಬ್ಬರಿಗೂ ಹೈ ಡೋಸ್ ಔಷಧ ನೀಡಿ ಯಾವುದೇ ಗಾಯದ ಗುರುತು ಬಾರದಂತೆ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿ, ಸುಮಾರು 80 ಗ್ರಾಂ ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಪ್ರಕರಣ ದರೋಡೆ ಕೊಲೆ ಎಂದು ಶಂಕಿಸಲಾಗಿತ್ತು. ಮಕ್ಕಳು ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ಭೇಟಿ ನೀಡಿದಾಗ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಮತ್ತು ಹಾಲ್‌ನಲ್ಲಿ ಜಯಮ್ಮ ಶವ ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ನಿಜವಾದ ಆರೋಪಿ ಮನೆಯೊಳಗೇ ಇದ್ದ ಸಂಬಂಧಿಕ ವೈದ್ಯನೇ ಎಂಬುದು ಬಯಲಾಗಿದೆ.

ಈ ಘಟನೆ, ನಂಬಿಕೆಯ ಸಂಬಂಧವೇ ಹೇಗೆ ಭೀಕರ ಅಪರಾಧಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಭಯಾನಕ ಉದಾಹರಣೆಯಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಬರ್ಬರ ಹತ್ಯೆ: ಲಾಡ್ಜ್ ಹಿಂಭಾಗದಲ್ಲಿ ಯುವಕನನ್ನು ಕೊಚ್ಚಿ ಕೊಲೆ

0

ಕಲಬುರಗಿ: ನಗರ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ನಗರದ ಲಾಡ್ಜ್ ಒಂದರ ಹಿಂಭಾಗದ ಪಾಳುಬಿದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮೃತ ಯುವಕನನ್ನು ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ (21) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನ ದಳದಿಂದಲೂ ತನಿಖೆ ಮುಂದುವರಿದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈ ಹಿನ್ನೆಲೆ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಮಗನ ಸಾವಿನ ಸುದ್ದಿ ಕೇಳಿ ಮೆಹಬೂಬ್‌ನ ತಂದೆ ಭಾವೋದ್ರಿಕ್ತರಾಗಿದ್ದು,
“ಅವನು ಮನೆಗೆ ಬರ್ತಿರಲಿಲ್ಲ. ಯಾವಾಗಲೂ ಹೊರಗಡೆಯೇ ಇರುತ್ತಿದ್ದ. ಈಗ ಮಗನನ್ನೇ ಕಳೆದುಕೊಂಡೆ” ಎಂದು ಕಣ್ಣೀರಿಟ್ಟಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ಮೂಲಕ ಹುಡುಕಾಟ ತೀವ್ರಗೊಳಿಸಲಾಗಿದೆ.

ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, ಆತನ ಮೇಲೆ 16 ಕೇಸ್‌ ಇದೆ: ಎಸ್‌ಪಿ ಕುಶಾಲ್ ಚೌಕ್ಸಿ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತರಿಗೆ ಅಸಭ್ಯವಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗ ಒಂದು ವಾರ ಕಳೆದರೂ ಬಂಧನವಾಗದಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದ ದಿನದಿಂದಲೇ ರಾಜೀವ್ ಗೌಡ ಭೂಗತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.

“ರಾಜೀವ್ ಗೌಡ ಬೆನ್ನಿಗೆ ಪ್ರಭಾವಿ ನಾಯಕರು ನಿಂತಿದ್ದಾರೆ” ಎಂದು ಬಿಜೆಪಿ–ಜೆಡಿಎಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪ್ರಕರಣವು ಕೇವಲ ಕ್ರಿಮಿನಲ್ ವಿಚಾರವಾಗಿರದೆ, ರಾಜಕೀಯ ರಕ್ಷಣೆ ಆರೋಪಕ್ಕೆ ತಿರುಗಿದೆ.

ಸರ್ಕಾರಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದಂತಹ ಗಂಭೀರ ಪ್ರಕರಣದಲ್ಲಿ, ದಿನಗಳಾದರೂ ಬಂಧನವಾಗದಿರುವುದು ಜನಸಾಮಾನ್ಯರಲ್ಲಿ ‘ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ’ ಎಂಬ ಭಾವನೆಗೆ ಕಾರಣವಾಗಿದೆ.

ರಾಜೀವ್ ಗೌಡ ಎಫ್‌ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ, ಬಂಧನಕ್ಕೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್, “ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿರುವುದೂ ಮಹತ್ವ ಪಡೆದಿದೆ.

ಇನ್ನೊಂದೆಡೆ, ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ, ರಾಜೀವ್ ಗೌಡ ವಿರುದ್ಧ 16ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಸ್ಪಷ್ಟಪಡಿಸಿದ್ದು, ಅವರನ್ನು ‘ನಟೋರಿಯಸ್ ಕ್ರಿಮಿನಲ್’ ಎಂದು ವಿವರಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ವಿಶೇಷ ತಂಡಗಳ ಮೂಲಕ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ದಾಳಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: ಜಮೀರ್ ಆಪ್ತನ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ

0

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ವಿರುದ್ಧ ನಡೆದ ಲೋಕಾಯುಕ್ತ ದಾಳಿ ಭಾರೀ ಸಂಚಲನ ಮೂಡಿಸಿದೆ. ದಾಳಿಯಲ್ಲಿ ಒಟ್ಟು 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿರುವುದು ಇದೀಗ ಅಧಿಕೃತವಾಗಿ ಬಹಿರಂಗವಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, ದಾಳಿಯಲ್ಲಿ 4 ಮನೆಗಳು, 37 ಎಕರೆ ವ್ಯವಸಾಯ ಭೂಮಿ ದಾಖಲೆಗಳು (ಸುಮಾರು 8 ಕೋಟಿ ರೂ. ಮೌಲ್ಯ), 2.99 ಕೋಟಿ ರೂ. ಚಿನ್ನಾಭರಣ, ಐಷಾರಾಮಿ ಕಾರುಗಳು, 66,500 ರೂ. ನಗದು, 1 ಕೋಟಿ 29 ಸಾವಿರ ರೂ. ಬ್ಯಾಂಕ್ ಠೇವಣಿ ಪತ್ತೆಯಾಗಿವೆ.

ಡಿಸೆಂಬರ್ 12ರಂದು ಸರ್ಫರಾಜ್ ಖಾನ್‌ಗೆ ಸಂಬಂಧಿಸಿದಂತೆ ಒಟ್ಟು 13 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.

ಇದಕ್ಕೂ ಮುನ್ನ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪಗಳು ಕೇಳಿಬಂದಿದ್ದು, ಸರ್ಫರಾಜ್ ಖಾನ್ ವಿರುದ್ಧದ ಸಂಶಯವನ್ನು ಮತ್ತಷ್ಟು ಗಟ್ಟಿಮಾಡಿದೆ.

ಪ್ರಯಾಗ್‌ರಾಜ್‌ನಲ್ಲಿ ಆತಂಕದ ಕ್ಷಣ: ವಾಯುಪಡೆಯ ತರಬೇತಿ ವಿಮಾನ ಪತನ

0

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ಇಂದು ಮಧ್ಯಾಹ್ನ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನವರಿ 21ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಸಂಭವಿಸಿದ ಈ ಘಟನೆ, ಸಂಗಮದ ಸಮೀಪದ ಪ್ರದೇಶದಲ್ಲಿ ನಡೆದಿದೆ.

ಸಂಗಮದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಮೈಕ್ರೋಲೈಟ್ ತರಬೇತಿ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಅಪಘಾತದ ತಕ್ಷಣವೇ ರಕ್ಷಣಾ ಪಡೆಗಳು ಕಾರ್ಯಾಚರಣೆಗೆ ಧಾವಿಸಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಪೈಲಟ್‌ಗಳಿಗೆ ಸಣ್ಣಮಟ್ಟದ ಗಾಯಗಳಾಗಿದ್ದರೂ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ಕಾರಣ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

‘200 ಡಾಲರ್ ಹೂಡಿಕೆ ಮಾಡಿ, 10 ಪಟ್ಟು ಲಾಭ’ ವಿಡಿಯೋ ಫೇಕ್: ಸಾರ್ವಜನಿಕರಿಗೆ ಸುಧಾ ಮೂರ್ತಿ ತೀವ್ರ ಎಚ್ಚರಿಕೆ

0

ಡೀಪ್‌ಫೇಕ್ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ವಂಚನೆಗೆ ದಾರಿ ಮಾಡಿಕೊಟ್ಟಿದೆ. “ಇಷ್ಟು ಹಣ ಹೂಡಿಕೆ ಮಾಡಿ, ಅಷ್ಟೇ ಲಾಭ ಗಳಿಸಿ” ಎಂಬ ಆಕರ್ಷಕ ಮಾತುಗಳೊಂದಿಗೆ ಹರಿದಾಡುತ್ತಿರುವ ಅನೇಕ ಸೆಲೆಬ್ರಿಟಿ ವಿಡಿಯೋಗಳು ನಿಜವಲ್ಲ — ಅವು ಡೀಪ್‌ಫೇಕ್ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳಾಗಿವೆ.

ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಳಸಿಕೊಂಡು ನಕಲಿ ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಈ ವಂಚನೆ ವಿರುದ್ಧ ಧ್ವನಿ ಎತ್ತಿದ್ದಾರೆ. “200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಲಾಭ ಪಡೆಯಬಹುದು” ಎಂದು ತಾನು ಹೇಳುತ್ತಿರುವಂತೆ ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

“ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿ ಹಣಕಾಸು ಹೂಡಿಕೆಗಳ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಸಂಪೂರ್ಣವಾಗಿ ನಕಲಿ. ಇವು ನನ್ನ ಅರಿವಿಲ್ಲದೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ. ಇಂತಹ ವಂಚನೆಗಳಿಂದ ಕೆಲವರು ಹಣ ಕಳೆದುಕೊಂಡಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.

“ನಾನು ಎಂದಿಗೂ ಹೂಡಿಕೆ, ಹಣಕಾಸು ಲಾಭಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ವಿಚಾರಗಳು ಕೆಲಸ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಂಸ್ಕೃತಿಯ ಸುತ್ತ ಮಾತ್ರ ಇರುತ್ತವೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇಂತಹ ವಿಡಿಯೋಗಳನ್ನು ನಂಬಿ ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಯೋಜನೆ ಕಂಡುಬಂದರೆ ಬ್ಯಾಂಕ್ ಅಥವಾ ಅಧಿಕೃತ ಮೂಲಗಳಿಂದ ಪರಿಶೀಲಿಸಿ. ಅನುಮಾನಾಸ್ಪದ ವಿಷಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಡೀಪ್‌ಫೇಕ್ ವಂಚನೆ ವಿರುದ್ಧ ಜಾಗೃತಿಯೇ ಅತ್ಯಂತ ದೊಡ್ಡ ರಕ್ಷಣೆ ಎಂಬ ಸಂದೇಶವನ್ನು ಸುಧಾ ಮೂರ್ತಿ ಸ್ಪಷ್ಟವಾಗಿ ನೀಡಿದ್ದಾರೆ.

error: Content is protected !!