Home Blog Page 3415

ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ 22 ವರ್ಷ ಜೈಲು ಶಿಕ್ಷೆ!!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣ-1: ಗಂಗಾವತಿ ತಾಲ್ಲೂಕಿನ ತೊಂಡಿಹಾಳ ಗ್ರಾಮದ ಚಂದ್ರಶೇಖರ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯು ಹೋಟೆಲ್‌ನಲ್ಲಿ ಒಬ್ಬಳೇ ಇದ್ದಾಗ ಅವಳಿಗೆ ಹೊರಗಿನಿಂದ ತಿಂಡಿ-ತಿನಿಸು ಮತ್ತು ಐಸ್‌ಕ್ರೀಂ ಕೊಟ್ಟು ಅವಳೊಂದಿಗೆ ಸಲುಗೆಯಿಂದ ಮಾತನಾಡುತ್ತಾ, ಮದುವೆಯಾಗುವುದಾಗಿ ನಂಬಿಸಿ, ಅವಳು ಶಾಲೆಗೆ ಹೋಗುತ್ತಿದ್ದಾಗ ಗ್ರಾಮದ ಯಮನಪ್ಪ ಮೂಲಿಮನಿ ಎಂಬಾತನ ಪ್ರಚೋದನೆಯಿಂದ ಮೋಟರ್ ಸೈಕಲ್ ಮೇಲೆ ಫಿರ್ಯಾದಿದಾರಳನ್ನು ಹಿಂಬಾಲಿಸಿ ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮೋಟರ್ ಸೈಕಲ್ ಹತ್ತಲು ಒತ್ತಾಯ ಮಾಡಿದ್ದು, ಹತ್ತದಿದ್ದಲ್ಲಿ ಎಣ್ಣೆ ಕುಡಿದು ಸಾಯುವುದಾಗಿ ಹೆದರಿಸಿ ನಂತರ 2016ರ ಮಾರ್ಚ್ 28 ಅವಳ ಇಚ್ಛೆಗೆ ವಿರುದ್ಧವಾಗಿ ಬಲತ್ಕಾರದಿಂದ ಅತ್ಯಾಚಾರ ಮಾಡಿರುವ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಗಂಗಾವತಿ ಗ್ರಾಮೀಣ ವೃತ್ತ ಸಿಪಿಐ ಪ್ರಭಾಕರ್ ಎಸ್.ಧರ್ಮಟ್ಟಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.50 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 40 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ಮತ್ತು ಬಾಧಿತ ಬಾಲಕಿಗೆ ಅತ್ಯಾಚಾರ ನಡೆಸಲು ಚಂದ್ರಶೇಖರನಿಗೆ ಪ್ರಚೋದನೆ ನೀಡಿದ ಯಮನಪ್ಪ ಮೂಲಿಮನಿ ಈತನ ಮೇಲಿನ ಆಪಾದನೆ ಸಾಬೀತಾಗಿಲ್ಲವೆಂದು ಬಿಡುಗಡೆ ಮಾಡಿ ನ್ಯಾಯಾಧೀಶರು ತೀರ್ಪು ಹೊರಡಿಸಿದ್ದಾರೆ.

ಪ್ರಕರಣ-2: ಕುಷ್ಟಗಿ ತಾಲ್ಲೂಕಿನ ಬಳೂಟಗಿ ಗ್ರಾಮದ ರಾಜಾ ಅಲಿಯಾಸ್ ರಾಜಾಸಾಬ್ ನದಾಫ್ ಎಂಬ ಆರೋಪಿತನು 2016ರ ಡಿಸೆಂಬರ್ 14 ರಂದು ಸಂಜೆ 05 ಗಂಟೆ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಗ್ರಾಮದ ಹೊರವಲಯದಲ್ಲಿ ಕರೆದುಕೊಂಡು ಬಂದು ಆಕೆಗೆ ಅತ್ಯಾಚಾರವೆಸಗಿ ನಂತರ ಬೆಂಗಳೂರಿನ ಕೋಣನಕುಂಟೆ ಏರಿಯಾದ ಒಂದು ಶೆಡ್ಡಿನಲ್ಲಿಟ್ಟು ಅವಳನ್ನು ಅತ್ಯಾಚಾರ ಮಾಡಿದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಕುಷ್ಟಗಿ ವೃತ್ತ ಸಿಪಿಐ ಗಿರೀಶ್ ಪಿ.ರೋಡಕರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.35 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ.

ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಸ್ವಾರಿ ಸಾ.ರಾ. ಮಹೇಶ್! ಸಾ.ರಾ.ಮಹೇಶ್‌ಗೆ ತಲೆಬಾಗಿದ ರೋಹಿಣಿ ಸಿಂಧೂರಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಾ.ರಾ. ಮಹೇಶ್ ವರ್ಸಸ್ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು, ಸಾ.ರಾ. ಮಂಡಿಸಿದ್ದ ಹಕ್ಕುಚ್ಯುತಿಗೆ ಸಮಿತಿ ಎದುರು ರೋಹಿಣಿ ಸಿಂಧೂರಿ ಕ್ಷಮಾಪಣೆ ಕೇಳಿದ್ದಾರೆ ಎನ್ನಲಾಗಿದೆ.

ಜನವರಿ 12ರಂದು ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಸಮಿತಿ ನಡೆಸಿದ್ದ ಮುಡಾ ಸಭೆ, ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೆ ಗೈರಾಗಿ ರೋಹಿಣಿ ಸಿಂಧೂರಿ ಉದ್ಧಟತನ ಪ್ರದರ್ಶಿಸಿದ್ದರು.

ರೋಹಿಣಿ ವರ್ತನೆಗೆ ಸಿಡಿಮಿಡಿಗೊಂಡಿದ್ದ ಸಾ.ರಾ.ಮಹೇಶ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದರು. ಅಷ್ಟರಲ್ಲೇ ಹಕ್ಕುಭಾದ್ಯತೆಗಳ ಸಮಿತಿ ಸಭೆಗೆ ಹಾಜರಾದ ಸಿಂಧೂರಿ ಕ್ಷಮಾಪಣೆ ಕೇಳಿದ್ದು, ಇನ್ನು ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರ ಪರಿಪಾಲನೆ ಮಾಡುತ್ತೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಿಣಿ ಸಿಂಧೂರಿ ಸ್ವಾರಿ ಕೇಳಿದ ಸಮಿತಿಯ ವರದಿ ಬಹಿರಂಗವಾಗಿದೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರಿ ಜಾಗೆ ಅಕ್ರಮ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಅವರು ತೆಗೆದುಕೊಂಡ ಕೆಲ ಕ್ರಮಗಳು ಸಾ.ರಾ. ಮಹೇಶರನ್ನು ಕೆರಳಿಸಿದ್ದವು.

ಈ ವಿಚಾರವಾಗಿ ಶಾಸಕರು ಜಿಲ್ಲಾಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿಸಿ ರೋಹಿಣಿ ಸಿಂಧೂರಿ ಸಾ.ರಾ. ಅವರಿಗೆ ಸೇರಿದ ಚೌಟ್ರಿ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು.

ಇದರಿಂದ ತೀವ್ರ ಕೆಂಡಾಮಂಡಲವಾಗಿದ್ದ ಸಾ.ರಾ.ಮಹೇಶ್, ಇಲಾಖೆಗೆ ಬ್ಯಾಗ್ ವಿತರಣೆಯಲ್ಲಿ ಜಿಲ್ಲಾಧಿಕಾರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬಹಿರಂಗ ಆರೋಪ ಮಾಡಿ ಸದನದಲ್ಲೂ ವಿಷಯ ಪ್ರಸ್ತಾಪಿಸಿದ್ದರು.

ಐಪಿಎಲ್ ಬೆಟ್ಟಿಂಗ್ ದಂಧೆ; ಬೆಟಗೇರಿಯ ಬಟ್ಟೆ ವ್ಯಾಪಾರಿ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಬೆಟಗೇರಿಯ ರಾಮಮಂದಿರ ಬಳಿ ರಸ್ತೆ ಮೇಲೆ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬಟ್ಟೆ ವ್ಯಾಪಾರಿಯನ್ನು ಗದಗ ಸೈಬರ್ ಕ್ರೈಮ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ‌.

ಬೆಟಗೇರಿಯ ಬಟ್ಟೆ ವ್ಯಾಪಾರಿಯಾದ ಮಾಧು ತುಳಸಿನಾಥ ಮೆಹರವಾಡೆ ಬಂಧಿತ ಆರೋಪಿ.

ಆರ್ ಸಿಬಿ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆದಿದ್ದ ಐಪಿಎಲ್ ಪಂದ್ಯಕ್ಕೆ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಪ್ರಮುಖ ಆರೋಪಿ, ಬುಕ್ಕಿ ಗಜೇಂದ್ರಗಡದ ಅರ್ಜುನ ಎಂಬಾತನ ಸೂಚನೆ ಮೇರೆಗೆ ಮಾಧು ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 24 ಸಾವಿರದ 500 ನೂರು ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.

ಚಿಕ್ಕಪ್ಪನ ಪುತ್ರನಿಂದಲೇ ಯುವತಿ ಮೇಲೆ ಅತ್ಯಾಚಾರ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಚಿಕ್ಕಪ್ಪನ ಪುತ್ರನೇ ಯುವತಿ ಮೇಲೆ ಅತ್ಯಾಚಾರ ಎಸಗಿ ಜೀವಬೆದರಿಕೆ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ದ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್ 4ರಂದು ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ‌ನಿವಾಸಿಯಾದ ಸಂತ್ರಸ್ತೆಯನ್ನು ಚಿಕ್ಕಪ್ಪನ ಪುತ್ರ ಸೀತಾಫಲ ಹಣ್ಣು ತರಲು ಹೋಗೋಣ ಎಂದು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬುಧವಾರ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಸೆಕ್ಷನ್ 376 ಮತ್ತು 506ರಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿದ್ದಾರೆ.

ಬಿಎಸ್ ವೈ ಆಪ್ತನಿಗೆ ಐಟಿ ಶಾಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ಬಿಎಸ್ ವೈ ಆಪ್ತನ ಮನೆ ಸೇರಿ ನಾಲ್ಕು ಕಡೆ ಸ್ಥಳಗಳ ಮೇಲೆ ರೇಡ್ ನಡೆಸುವ ಮೂಲಕ ಮಾಜಿ ಸಿಎಂ ಬಿಎಸ್ ವೈಗೆ ಶಾಕ್ ನೀಡಿದ್ದಾರೆ.

ಬಿಎಸ್ ವೈ ಆಪ್ತ ಸೇರಿದಂತೆ ಬೆಂಗಳೂರಿನ ಆಪ್ತರು, ಉದ್ಯಮಿಗಳು ಸೇರಿ 50 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕರ್ನಾಟಕ, ಗೋವಾ ವಿಭಾಗದ 300 ಐಟಿ ಅಧಿಕಾರಿಗಳು ಬೆಂಗಳೂರಿನ 50 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಉಮೇಶ್ ಅವರ ಅವರ ಭಾಷ್ಯಂ ಸರ್ಕಲ್ ನಲ್ಲಿರುವ ಮನೆ, ಕಚೇರಿ ಸೇರಿ ಅವರಿಗೆ ಸೇರಿದ್ದ 4 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಕಲಿ ಹೇರ್ ಕಲರ್ ಮಾರಾಟ; ಬ್ಯೂಟಿ ಪಾರ್ಲರ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಸ್ಟ್ರೀಕ್ಸ್ ಕಂಪನಿಯ ಹೇರ್ ಕಲರ್ ನಕಲು ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಕುರಿತು ಗದಗನ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗದಗ ನಗರದ ಬ್ಯಾಂಕ್‌ ರಸ್ತೆಯ ವರ್ಧಮಾನ್ ಮಾರ್ಕೆಟ್ ದಲ್ಲಿರುವ ಮಹಾಲಕ್ಷ್ಮಿ ಬ್ಯೂಟಿ ಸೆಂಟರ್ ಮಾಲೀಕ ನಗರದ ಶಹಾಪುರ ಪೇಟೆಯ ಭರತಕುಮಾರ ಕರ್ನಾಜಿ ಲೋಹಾರ ವಿರುದ್ಧ ಹೈಜೆನಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್ ದೂರು ದಾಖಲಿಸಿದೆ.

ನಗರ ಠಾಣೆಯ ಪೊಲೀಸರು, ಬ್ಯೂಟಿ ಪಾರ್ಲರ್ ನಲ್ಲಿ ಇದ್ದ 250 ಎಂಎಲ್ ನ 2 ಸ್ಟ್ರೀಕ್ಸ್ ಪ್ರೊಫೆಷನಲ್ ಹೇರ್ ಕಲರ್ ಪಡೆದು ಪರಿಶೀಲಿಸಿದ್ದು, ಹೈಜೆನಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ತಯಾರಿಸುವ ಸ್ಟ್ರೀಕ್ಸ್ ಕಂಪನಿಯ ಲೋಗೋ ಬಳಸಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಖಚಿತಪಟ್ಟಿದೆ.

ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಭಾರೀ ಮಳೆ; ಒಂದೇ ಕುಟುಂಬದ ಏಳು ಜನರ ಸಾವು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಕುಸಿದು ಐದು ವರ್ಷದ ಬಾಲಕ ಸೇರಿ ಏಳು ಜನ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಇಂದು ಸಂಜೆ ಜರುಗಿದೆ.

ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಎರಡು ದಿನಗಳಿಂದ ಆಗಾಗ ಸುರಿಯುತ್ತಿರುವ ಭಾರಿ ಮಳೆಗೆ ಮಣ್ಣಿನ ಗೋಡೆ ನೆನದು ಏಕಾಏಕಿ ಮನೆ ನೆಲಸಮಗೊಂಡಿದೆ. ಮನೆಯಲ್ಲಿದ್ದ ಎಂಟು ಜನ ಕುಟುಂಬ ಸದಸ್ಯರ ಪೈಕಿ ಅವಶೇಷಗಳಡಿ ಸಿಲುಕಿ ಐದು ವರ್ಷದ ಮಗು ಸೇರಿ ಐವರು ಜೀವಂತ ಸಮಾಧಿಯಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅದರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಂಬುಲೆನ್ಸ್ ಜೊತೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ

ವೈದ್ಯನಿಗೆ ಕಪಾಳಮೋಕ್ಷ ..? ಕ್ರಿಕೆಟ್ ಆಟದ ವೇಳೆ ಕೈ ಕೈ ಮಿಲಾಯಿಸಿದ ಇಲಾಖೆ ಸಿಬ್ಬಂದಿ!

ವಿಜಯಸಾಕ್ಷಿ ಸುದ್ದಿ, ಗದಗ


ಪಿಟ್ ಇಂಡಿಯಾ ಅಭಿಯಾನದಡಿ ನಡೆದ ಕ್ರಿಕೆಟ್ ಪಂದ್ಯಾವಳಿ ವೇಳೆ ಸಿಕ್ಸರ್ ವಿಷಯಕ್ಕೆ ಪಂಚಾಯತ್ ರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿದ ಘಟನೆ ರೋಣ ಪಟ್ಟಣದಲ್ಲಿ ನಡೆದಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪಿಟ್ ಇಂಡಿಯಾ ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ಸ್ವೀಪ್ ವತಿಯಿಂದ ಕ್ರೀಡಾಕೂಟ ನಡೆಯುತ್ತಿದೆ.

ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಆರೋಗ್ಯ ಇಲಾಖೆ ತಂಡದ ಆಟಗಾರ ಸಿಕ್ಸ್ ಹೊಡೆದಾಗ, ತಾಲೂಕು ಪಂಚಾಯತಿ ತಂಡದ ಆಟಗಾರ ಕ್ಯಾಚ್ ಹಿಡಿದರು. ಆದರೆ, ಬ್ಯಾಟಿಂಗ್ ಮಾಡುವ ತಂಡದ ಆಟಗಾರರು ಬೌಂಡರಿ ಗೇರೆ ಟಚ್ ಮಾಡಿ ಕ್ಯಾಚ್ ಹಿಡಿದಿದೆ ಎಂದು ವಾದಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಈ ವೇಳೆ ಮಧ್ಯೆ ಪ್ರವೇಶಿಸಿದ ತಾಪಂ ಇಒ ಸಂತೋಷ ಪಾಟೀಲ ಪಂದ್ಯಾವಳಿ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಎರಡೂ ತಂಡದ ಆಟಗಾರರು ವಾಗ್ವಾದ ನಿಲ್ಲಿಸಿ ವಾಪಸ್ ತೆರಳಿ ಆಟ ಪ್ರಾರಂಭಿಸಿದರು.

ವೈದ್ಯನಿಗೆ ಕಪಾಳಮೋಕ್ಷ

ತಾಲೂಕು ಪಂಚಾಯತಿ ಸಿಬ್ಬಂದಿಯೊಬ್ಬರು ಆರೋಗ್ಯ ಇಲಾಖೆಯ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆಕ್ರೋಶಗೊಂಡರು. ಇದೇ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ಸಿಬ್ಬಂದಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಪರಸ್ಪರರು ಮತ್ತೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದೀಗ ಈ ಪ್ರಕರಣ ಜಿಲ್ಲೆಯ ನೌಕರರಲ್ಲಿ ಚರ್ಚೆಯ ವಿಷಯವಾಗಿದ್ದು, ಮುಂದೆ ಏನಾಗುತ್ತೋ ಎಂಬುದೀಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿ ವರ್ಗ, ಕೈ ಕೈ‌ ಮಿಲಾಯಿಸುವು ಹಂತಕ್ಕೆ ಹೋಗಿದ್ದು ವಿಪರ್ಯಾಸ.

ತಾಯಿ, ಮಗನ ಜೀವಕ್ಕೆ ಕುತ್ತು ತಂದ ಭಜಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಉತ್ತರ ಕರ್ನಾಟಕದ ಭಜಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಾಮಾನ್ಯ. ಆದರೆ, ಈ ಭಜಿಯೇ ತಾಯಿ ಮತ್ತು ಮಗನ ಜೀವಕ್ಕೆ ಕುತ್ತು ತಂದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ (28) ಮೃತ ದುರ್ದೈವಿಗಳು.

ಏನಾಯಿತು: ಹೊಲಕ್ಕೆ ಹೋಗಿದ್ದ ತಾಯಿ ಮತ್ತು ಮಗ ಕೆಲಸ ಮುಗಿಸಿ ಸಂಜೆ ಮನೆಗೆ ಮರಳಿ ಭಜಿ ಮಾಡಿ ಇಬ್ಬರೂ ಸೇರಿ ತಿಂದಿದ್ದಾರೆ. ಕೆಲ ಸಮಯದ ನಂತರ ಇಬ್ಬರಿಗೂ ವಾಂತಿ ಭೇದಿ ಶುರುವಾಗಿದೆ.

ಸ್ಥಳೀಯ ವೈದ್ಯರ ಬಳಿಗೆ ತೋರಿಸಿದ್ದು, ವೈದ್ಯರು ಫುಡ್ ಫಾಯಿಸನ್ ಔಷಧಿ ಕೊಟ್ಟಿದ್ದಾರೆ. ಔಷಧಿ ತೆಗೆದುಕೊಂಡರೂ ವಾಂತಿ ಭೇದಿ ಕಡಿಮೆಯಾಗದೇ ತೀವ್ರ ಅಸ್ವಸ್ಥಗೊಂಡಿದ್ದರಿಂದ ಇಬ್ಬರನ್ನೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ದಾರಿ ಮಧ್ಯದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ಫುಡ್ ಫಾಯಿಸನ್ ನಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಮೃಗ ಬೇಟೆ; ಸೆಟ್ಲಮೆಂಟ್ ನ ಇಬ್ಬರು ಸೇರಿ ಮೂವರು ಬೇಟೆಗಾರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೃಷ್ಣಮೃಗ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು
ಅರಣ್ಯ ಇಲಾಖೆ ಹಾಗೂ ಗ್ರಾಮೀಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಎಸ್ ಎಮ್ ಕೃಷ್ಣ ನಗರದ ಬಳಿ‌ ಇರುವ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದಲ್ಲೇ ಕೃಷ್ಣಮೃಗದ ಮಾಂಸ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಗದಗನ ಅರಣ್ಯ ಇಲಾಖೆಯ ಅಧಿಕಾರಿ ರಾಜು ಗೋಂದಕರ್ ಹಾಗೂ ಸಿಬ್ಬಂದಿ, ಗ್ರಾಮೀಣ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿದ್ದರು.

ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಅರ್ಜುನ ಗಿರಿಯಪ್ಪ ಹರಣಶಿಕಾರಿ, ಬೆಟಗೇರಿಯ ಸೆಟ್ಲಮೆಂಟ್ ನಿವಾಸಿಗಳಾದ ರಮೇಶ್ ಮಾನಪ್ಪ ಚವ್ಹಾಣ ಹಾಗೂ ಸುರೇಶ ಚಂದ್ರು ದೊಡ್ಡಮನಿ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 15 ಕೆಜಿ ಕೃಷ್ಣಮೃಗ ಮಾಂಸ, ಎರಡು ಫೋನ್ ಮತ್ತು ಬೈಕ್ ವಶ ಪಡಿಸಿಕೊಳ್ಳಲಾಗಿದೆ.

ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.