ಹಬ್ಬಗಳು ಇರೋದ್ರಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಮುಂದೂಡಿದ್ದಾರೆ. ಹಬ್ಬಗಳು ಮುಗಿದ ಬಳಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನವನಿಹಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಮುಂದೆ ನಿಂತು ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಆರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಪ್ರಚಾರಕ್ಕಾಗಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡಬಾರದು. ಅವರು ಸಿಎಂ ಆಗಿದ್ದವರು, ಸಾಕಷ್ಟು ಅನುಭವವಿದೆ. ಜನಪ್ರತಿನಿಧಿಗಳು ಎಲ್ಲರಿಗೂ ಆದರ್ಶವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಲು ಚಿತ್ರಮಂದಿರ ಓಪನ್ ಮಾಡಲಾಗಿದೆ. ಮಾಲೀಕರು ಕೋವಿಡ್ ನಿಯಮ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.
ಗುತ್ತಿಗೆ ಅವಧಿಯನ್ನು ಮುಂದುವರಿಸಲು ಡಿ ಗ್ರೂಪ್ ನೌಕರರ ಹೆಚ್ಚಳವಾಗಿರುವ ಗೌರವಧನವನ್ನು ಲಂಚವಾಗಿ ಪಡೆಯುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷಕನನ್ನು ಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್ಒ ಕಚೇರಿಯಲ್ಲಿ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳು, ಅಧೀಕ್ಷಕ ಶಿವಾನಂದ ಸಿಂದೋಗಿ ಎಂಬುವವರು 19 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಐದು ಜನ ಡಿ ಗ್ರೂಪ್ ನೌಕರರಿಗೆ ಈ ಹಿಂದೆ ನೀಡಿರುವ ಗೌರವಧನ ಹೆಚ್ಚಾಗಿದೆ. ಆ ಹೆಚ್ಚುವರಿ ಹಣ ಮರಳಿಸಬೇಕು ಹಾಗೂ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆ ಅವಧಿ ಮುಗಿಯಲು ಬಂದಿದ್ದು, ಅದೂ ಕೂಡ ಮುಂದುವರೆಯಬೇಕಾದರೆ ಹೆಚ್ಚಾದ ಹಣ ಕೊಡಲೇಬೇಕು ಎಂದು ಶಿವಾನಂದ ಸಿಂದೋಗಿ ಎಂಬುವವರು ಹಣ ಕೇಳಿದ್ದರು ಎನ್ನಲಾಗಿದೆ.
ಐದು ಜನರಲ್ಲಿ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕ್ರಯ್ಯ ಸಾರಂಗಮಠ ಎಂಬುವವರು ಬುಧವಾರ ಸಂಜೆ 19 ಸಾವಿರ ಹಣ ಕೊಡುವಾಗ ಈ ದಾಳಿ ನಡೆದಿದೆ.
ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ, ಡಿವೈಎಸ್ಪಿ ಎಂ ವಿ ಮಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿಗಳಾದ ನಾರಾಯಣಗೌಡ್ ತಾಯಣ್ಣವರ್, ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ, ಹಾಗೂ ಬಿಸಿನಳ್ಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಚಿಕ್ಕನರಗುಂದ ಗ್ರಾಮದ ಅಭಿವೃದ್ಧಿಗಾಗಿ 2 ಕೋಟಿ 12 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಲೋಕೋಪಯೋಗಿ ಖಾತೆ ಸಚಿವ ಸಿ ಸಿ ಪಾಟೀಲ ಇತ್ತೀಚೆಗೆ ಚಾಲನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 1 ಕೋಟಿ 82 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 20 ಲಕ್ಷ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 5 ಲಕ್ಷ ರೂ ಹಾಗೂ ಉದ್ಯೋಗ ಖಾತರಿ ಯೋಜನೆಯ 5 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರೆಡ್ಡಿ, ಸದಸ್ಯರಾದ ಶರಣಬಸಪ್ಪ ಹಳೇಮನಿ, ಬಾಪುಗೌಡ ಹಿರೇಗೌಡ್ರ, ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್,
ಹಿರಿಯರಾದ ಅಶೋಕ ಸಾಲೂಟಗಿ, ಬಸನಗೌಡ ಮುದಿಗೌಡ್ರ, ಈರಣ್ಣ ಹೊಂಗಲ್, ಸುರೇಶ್ ಸಾತಣ್ಣವರ್, ಅಡಿವೆಪ್ಪ ಮರಿಯಣ್ಣವರ, ಚನ್ನಪ್ಪ ಬ್ಯಾಳಿ, ಬಿ ಸಿ ಹನಮಂತಗೌಡ್ರ, ಬಸು ಕೊಣನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ವಾಟರ್ ಮನ್ ಒಬ್ಬನನ್ನು ಕೆಲಸದಿಂದ ತಗೆದು ಹಾಕಿದ್ದಕ್ಕೆ ಬೇಸತ್ತ ಆತ ಗ್ರಾಮ ಪಂಚಾಯತಿಯ ಅಧ್ಯಕ್ಷರ ಛೇಂಬರ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಸಮೀಪದ ಹಿರೇವಡ್ಡಟ್ಟಿ ಗ್ರಾಮದಲ್ಲಿ ವಾಟರ್ ಮನ್ ಆಗಿದ್ದ 31 ವರ್ಷದ ಮಲ್ಲಪ್ಪ ಹೊಳಗುಂದಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.
ಕಳೆದ ಹಲವು ವರ್ಷಗಳ ಕಾಲ ಗ್ರಾಮ ಪಂಚಾಯತಿಯಲ್ಲಿ ವಾಟರ್ ಮನ್ ಆಗಿದ್ದ ಮಲ್ಲಪ್ಪನನ್ನು ಅಡಳಿತ ಮಂಡಳಿ ಇತ್ತೀಚೆಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಹೊರಿಸಿ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದ ಮಲ್ಲಪ್ಪ ನಿನ್ನೆ ರಾತ್ರಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ಛೇಂಬರ್ ನಲ್ಲಿ ಇರುವ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದೆ.
ಮಲ್ಲಪ್ಪನ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಕೂಡ ಪ್ರತಿಭಟನೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.
ನೊಂದ ಕುಟುಂಬಕ್ಕೆ ನ್ಯಾಯ ಕೊಡಿ, ಗ್ರಾಮ ಪಂಚಾಯತಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನರಗುಂದ ಹಾಗೂ ಗ್ರಾಮ ಪಂಚಾಯತಿ ಚಿಕ್ಕನರಗುಂದ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುತ್ತು ರಾಯರಡ್ಡಿ, ನಮ್ಮ ಗ್ರಾಮದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಗರ್ಭಿಣಿ, ಬಾಣಂತಿಯರಿಗೆ ರಸಪ್ರಶ್ನೆ, ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆ ಹಾಗೂ ಮೊದಲ ಗರ್ಭಿಣಿಯರಿಗೆ ನಡೆದ ಸೀಮಂತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆದಿದ್ದು ಶ್ಲಾಘನೀಯ ಎಂದರು.
ಶಿಶು ಅಭಿವೃಧ್ದಿ ಅಧಿಕಾರಿ ರೂಪಾ ಗಂಧದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದು ಪ್ರಶಂಸನೀಯ ಎಂದರು.
ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಗರ್ಭಿಣಿ, ಬಾಣಂತಿಯರ ಮಕ್ಕಳ ಆರೋಗ್ಯದ ಬಗ್ಗೆ ಆಹಾರ ಪದ್ದತಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುತ್ತು ರಾಯರಡ್ಡಿ ಹೇಳಿದರು.
ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ರೂಪಾ ಗಂಧದ ಮಾತನಾಡಿ, ವಿಶೇಷವಾಗಿ ಗರ್ಭಿಣಿ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಸಲುವಾಗಿ ಇರುವ ಸರಕಾರದ ಹಲವಾರು ಯೋಜನೆಯಗಳ ಸದುಪಯೋಗ ಪಡೆದುಕೊಳ್ಳಲು ಹಾಗೂ ಪಂಚಸೂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ ಮಾತನಾಡಿ, ಮನುಷ್ಯನ ದೇಹ ಮತ್ತು ಮೆದುಳಿನ ಬೆಳವಣಿಗೆಗೆ ಜೀವಸತ್ವ, ಪೌಷ್ಠಿಕಾಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.
ಅದರಲ್ಲೂ ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ತುಂಬಾ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಕೊಬ್ಬಿನಾಂಶದ ಮಾತ್ರೆಗಳು ಮತ್ತು ವಯಸ್ಸಿಗೆ ಅನುಗುಣವಾಗಿ ಲಸಿಕೆಯನ್ನು ತೆಗೆದುಕೊಳ್ಳುವದರಿಂದ ಆರೋಗ್ಯವಂತ ಶಿಶುವನ್ನು ಪಡೆಯಬಹುದು ನೀವು ಕೂಡ ಆರೋಗ್ಯದಿಂದರಬಹುದು ಎಂದು ತಿಳಿಸಿದರು.
ಪೋಷಣ್ ಅಭಿಯಾನದ ಕಾರ್ಯಕ್ರಮ ಸಂಯೋಜಕ ಮಂಜು ಗುಗ್ರಿ, ಮೇಲ್ವಿಚಾರಕಿ ಅನ್ನಪೂರ್ಣ ಹಡಪದ, ಹಾಗೂ ಗ್ರಾ.ಪಂ ಸರ್ವಸದಸ್ಯರು ರಸಪ್ರಶ್ನೆ ಸ್ಪರ್ಧೆ ವಿಕ್ಷಣೆ ಹಾಗೂ ಅಡುಗೆ ರುಚಿ ನೋಡಿ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಘೋಷಿಸಿದರು.
ಕಾರ್ಯಕ್ರಮದಲ್ಲಿ ಶಿವಲೀಲಾ ಹಿರೇಮಠ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶಂಕ್ರಮ್ಮ ಚಲವಾದಿ, ಶಿಕ್ಷಕಿಯರಾದ ಎಸ್.ವ್ಹಿ.ಮಣ್ಣೂರ, ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ, ಬಾಗ್ಯಜ್ಯೋತಿ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಮೇಟಿ, ಭಾರತಿ ಪಾಟೀಲ್, ಸವಿತಾ ರಾಯರಡ್ಡಿ, ಗೀತಾ ಕಾಡದೇವರಮಠ, ವಿಜಯಲಕ್ಷ್ಮಿ ಹಿರೇಮಠ, ನೀಲಗಂಗಾ ಮಾದರ,
ಬೆನಕನಕೊಪ್ಪ, ಹಿರೆಕೊಪ್ಪ, ಸಂಕದಾಳ, ಸುರಕೋಡ ಗ್ರಾಮದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಹೊರವಲಯದ ಗದಗ- ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಬ್ರಿಡ್ಜ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವಕನೊಬ್ಬ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಜರುಗಿದೆ.
ಗದಗ ತಾಲೂಕಿನ ಹಾತಲಗೇರಿ ನಿವಾಸಿ ವಿಠ್ಠಲ ಹನಮಪ್ಪ ಹೂವಣ್ಣವರ (35) ಗದಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದು, ಇನ್ನೊಂದು ಕಾರಿನಲ್ಲಿದ್ದ ಚಾಲಕ ಶ್ರೀನಿವಾಸ ವೆಂಕಟೇಶ ನಾಯ್ಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವಿರುಪಾಕ್ಷಿ ಎಂಬಾತನಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ.
ಅತಿ ವೇಗವಾಗಿ ಗದಗ ಕಡೆ ಬರುತ್ತಿದ್ದ ಸ್ಕಾರ್ಪಿಯೋ ವಾಹನದ ಟಾಯರ್ ಸ್ಫೋಟಗೊಂಡಿದ್ದು, ಎದುರಿಗೆ ಬಂದ ಮತ್ತೊಂದು ಕಾರಿನ ಮೇಲೆ ಬಿದ್ದು, ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೇಂದ್ರ ಸರಕಾರದ ಕೃಷಿ ವಿರೋಧಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಗದಗ ಜಿಲ್ಲೆಯಲ್ಲಿ ವಿವಿಧ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಬೆಳಿಗ್ಗೆಯಿಂದ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಂದ್ ನ ಬಿಸಿ ಇರಲಿಲ್ಲ.
ಮುಂಜಾನೆ 11 ಗಂಟೆಯ ನಂತರ ಗದಗನ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಸೇರಿದ ನೂರಾರು ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ತೆರೆದಿದ್ದ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿಸಿದರು.
ನಂತರ ಸರ್ಕಲ್ ನಲ್ಲಿ ಅಡುಗೆ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಪೊಲೀಸರು, ಬೆಂಕಿ ಹಚ್ಚಲು ಅವಕಾಶ ನೀಡಲ್ಲ ಎಂದಾಗ ಪೊಲೀಸರು, ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ನಂತರ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮುಳಗುಂದ ನಾಕಾದಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಖಂಡಿಸಿ ಸೆಪ್ಟಂಬರ್ 27ರಂದು ಕರೆ ನೀಡಿರುವ ಭಾರತ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಪಾಪು ಧಾರೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ ಮೋರ್ಚಾದಿಂದ ನೀಡಿರುವ ಭಾರತ ಬಂದ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೈತಿಕ ಬೆಂಬಲ ಕೊಡಲಾಗುವುದು.
ಜನರು ಕೋವಿಡ್ ಸಾಂಕ್ರಾಮಿಕದ ನಂತರ ಈಗ ತಾನೆ ಸುಧಾರಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಆರ್ಥಿಕತೆ ಸಹ ಸಹಜ ಸ್ಥಿತಿಗೆ ಬರುತ್ತಿದೆ. ಮತ್ತೆ ಶಾಲಾ ಕಾಲೇಜು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರ ವ್ಯಾಪಾರ ಸುಮಾರು 2ವರ್ಷದ ನಂತರ ಪ್ರಾರಂಭವಾಗಿವೆ. ಇವುಗಳಿಗೆ ವ್ಯತಯ ಆಗಬಾರದು ಎಂಬ ಕಾರಣದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಗಿಳಿದು ಬಂದ್ ಗೆ ಬೆಂಬಲ ನೀಡದೆ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮನವಿ ನೀಡುವ ಮೂಲಕ ಬೆಂಬಲ ನೀಡುತ್ತದೆ ಎಂದು ಪಾಪು ಧಾರೆ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದರೂ ಜಾರಕಿಹೊಳಿ ಬ್ರದರ್ಸ್ ಮಾತ್ರ ಕಾಣಿಸಿಕೊಳ್ಳದೇ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಸ್ವಾಗತಕ್ಕೆ ಜಿಲ್ಲೆಯ ಹಲವು ಶಾಸಕರು ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸಂಜೆ ನಡೆದ ಹೊಸ ಬಸ್ ನಿಲ್ದಾಣ ಉದ್ಘಾಟನೆ, ಪುರಸಭೆ ನೂತನ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಾರಿಗೆ ಶ್ರೀರಾಮುಲು, ಕೃಷಿ ಸಚಿವ ಉಮೇಶ ಕತ್ತಿ, ಹಜ್ ಮತ್ತು ವಕ್ಫ್ ಸಚಿವೆ ಶಿಕಲಾ ಜೊಲ್ಲೆ ಸೇರಿದಂತೆ ಹಲವು ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.
ಆದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತ್ರ ಅತ್ತ ಸುಳಿಯದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮದ ಐತಿಹಾಸಿಕ ಬೀಗರ ಬಾವಿ (ಕಲ್ಯಾಣಿ) ಸ್ವಚ್ಛತೆ ವೇಳೆ ಋಷಿಮುನಿಗಳ ಪಾದುಕೆ ಹಾಗೂ ರುದ್ರಾಕ್ಷಿಗಳು ದೊರೆತಿವೆ.
ಧರ್ಮಪುರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆಯಿಂದ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರವಿರುವ ಐತಿಹಾಸಿಕ ಬೀಗರ ಬಾವಿ(ಕಲ್ಯಾಣಿ)ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಏಳನೆ ದಿನವಾದ ಶನಿವಾರ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾಗ ಪಾದುಕೆಗಳು ಪತ್ತೆಯಾಗಿರುವುದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ.
ಕಲ್ಯಾಣಿಗಳ ಸ್ವಚ್ಛತೆಗೆ ಆಗ್ರಹ
ಐತಿಹಾಸಿಕ ಗ್ರಾಮವಾದ ಡಂಬಳ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣಿಗಳನ್ನು, ಪುರಾತನ ದೇವಾಲಯ ಹಾಗೂ ಮಸೀದಿಗಳನ್ನು ಸ್ಥಳೀಯ ಆಡಳಿತ ಮಂಡಳಿಯವರು, ಭಾರತೀಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಸಂರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಧರ್ಮಪುರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಮುದುಕೇಶ ತಳಗೇರಿ, ರಾಘವೇಂದ್ರ ಜಂಗಳಿ, ಗೋಪಾಲ ಅಡಿವಿಬೋವಿ, ಇಬ್ರಾಹಿಂ ಹೊಸಪೇಟೆ ಆಗ್ರಹಿಸಿದ್ದಾರೆ.