ವಿಜಯಸಾಕ್ಷಿ ಸುದ್ದಿ, ಕಾರಟಗಿ: ಸಾಮಾಜಿಕವಾಗಿ ರಾಜ್ಯದಲ್ಲಿ ದೊಡ್ಡ ಸಮುದಾಯವನ್ನೇ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪಂಚಮಸಾಲಿ ಸಮುದಾಯದವರನ್ನು 2A ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ. ತಕ್ಷಣವೇ ಪಂಚಮಸಾಲಿ ಸಮಾಜವನ್ನು ಸರಕಾರ 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಬುಧವಾರ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಸುಂಕದ್ ಮಾಜಿ ಸಿಎಂ ಬಿಎಸ್ವೈ ಮಾತು ಕೊಟ್ಟು ತಪ್ಪಿದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಮಾತು ತಪ್ಪಿದರೆ ಮುಂದಿನ ದಿನಮಾನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.
ಮುಖಂಡ ಪರಮೇಶಗೌಡ ಕೊಂತನೂರ್ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಗಳ ಮತಗಳನ್ನು ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಮಾತು ಕೊಟ್ಟಿತ್ತು. ಆದರೆ ಇದೀಗ ಮಾತು ಉಳಿಸಿಕೊಳ್ಳುತ್ತಿಲ್ಲ. ಇದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡ ಕೊತ್ವಾಲ್ ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.
ಕೋವಿಡ್ ದಿನಗಳು ಬಂದು ಹಲವರ ಬದುಕು, ಉದ್ಯೋಗವನ್ನೇ ಕಸಿದಿವೆ. ಕೋವಿಡ್‌ನಿಂದಾಗಿ ಅಲ್ಲದೇ ನಂತರದ ದಿನಗಳಲ್ಲಿ ದುಡಿಮೆ ಇಲ್ಲದೇ ಜೀವನ ಹೇಗೆ ಎಂದು ಆತಂಕಕ್ಕೊಳಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಇಂಥ ಆತಂಕದ ಮಡುವಿನಲ್ಲೇ ಇನ್ನೂ ಉಸಿರು ಬಿಗಿ ಹಿಡಿದಿರುವ ಸ್ಥಿತಿ ಚಿತ್ರರಂಗದ್ದು.
ಸರಿ ಸುಮಾರು 19 ತಿಂಗಳಿನಿಂದ ಭಾರತದ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. 2021ರ ಜನೇವರಿಯಲ್ಲಿ ಪುನಾರಂಭಗೊಂಡಿದ್ದ ಚಿತ್ರರಂಗ ಇನ್ನೇನು ಚೇತರಿಕೆ ಕಾಣಬೇಕೆನ್ನುವಷ್ಟರಲ್ಲಿ ಮತ್ತೇ ಸ್ಥಗಿತವಾಯಿತು. ಅದು ಅನಿವಾರ್ಯವೂ ಆಗಿತ್ತು.
ಆದರೆ ಈಗ ಕೋವಿಡ್ ಚಿತ್ರಣ ಬದಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದರಿಂದ ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಕಾರ್ಯಾರಂಭ ಮಾಡಿವೆ.
ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಅಂಗಡಿ-ಮುಂಗಟ್ಟುಗಳು, ಬಾರ್-ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ. ಬಸ್ ಸಂಚಾರ ಮತ್ತೇ ಎಂದಿನ ಲಯಕ್ಕೆ ಮರಳಿದೆ. ಗಣೇಶೋತ್ಸವವೂ ಕೋವಿಡ್‌ಗೂ ಹಿಂದಿನ ವರ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ನಡೆಯುತ್ತಿದೆ. ಆದರೆ ಚಿತ್ರೋದ್ಯಮ ಮಾತ್ರ ಕಸುವು ಕಳೆದುಕೊಂಡಂತಾಗಿದೆ.
ಬಸ್‌ನಲ್ಲಿ ಆಸನ ಭರ್ತಿಗೆ ಅವಕಾಶ ಇದೆ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಜನರಿಂದ ಭರ್ತಿಯಾಗಿ ಭರ್ಜರಿ ವ್ಯಾಪಾರ ಮಾಡುತ್ತಿವೆ. ಸಿನಿಮಾ ಥೇಟರ್ ವಿಷಯಕ್ಕೆ ಬಂದರೆ ಮಾತ್ರ ಸರಕಾರ ಕೋವಿಡ್ ಕಾರಣವನ್ನು ಮುಂದೊಡ್ಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚಿತ್ರರಂಗಗ ನಾನಾ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ.
ಸರಕಾರದ ಈ ತಾರತಮ್ಯ ನೀತಿಯಿಂದ ಬರೀ ಸಿನಿಮಾ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿಲ್ಲ. ಚಿತ್ರಮಂದಿರಗಳ ಮಾಲಕರು, ಪ್ರದರ್ಶಕರು, ವಿತರಕರು, ನಿರ್ಮಾಪಕರು.. ಹೀಗೆ ಚಿತ್ರರಂಗದ ಎಲ್ಲ ವಿಭಾಗದವರಿಗೂ ಹೊಡೆತ ಬಿದ್ದಿದೆ.
ಪರಿಹಾರ ಪಡೆಯಲು ನಿಯಮಗಳದ್ದೇ ಸವಾಲು!
ಸರಕಾರ ಎಲ್ಲ ಕಾರ್ಮಿಕರಿಗೂ ಕೋವಿಡ್ ಪರಿಹಾರ ಒದಗಿಸಲು ಮುಂದಾಗಿದ್ದು ಶ್ಲಾಘನೀಯವೇ. ಇದರಲ್ಲಿ ಚಿತ್ರರಂಗದ ಕಾರ್ಮಿಕರನ್ನು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಸಂಗತಿ. ಆದರೆ ಪರಿಹಾರ ಪಡೆಯಲು ಸರಕಾರ ವಿಧಿಸಿರುವ ನಿಯಮಗಳನ್ನು ಗಮನಿಸಿದರೆ ನೂರು ಜನರಲ್ಲಿ ಐದಾರು ಜನ ಮಾತ್ರ ಈ ಪರಿಹಾರದ ಫಲ ಪಡೆಯುತ್ತಾರೆ. ಇನ್ನುಳಿದವರು ಸರಕಾರ ಕೊಡುವ ಪರಿಹಾರ ಧನದ ಅರ್ಧಭಾಗವನ್ನು ನಿಯಮಗಳ ಪಾಲನೆಗೆ ಸುರಿಯಬೇಕಾಗುತ್ತದೆ ಎಂದು ಚಿತ್ರಮಂದಿರದ ದ್ವಾರಪಾಲಕ ವಿಜಯಸಾಕ್ಷಿ ಎದುರು ಅಳಲು ತೋಡಿಕೊಂಡರು.
“ರಾಜ್ಯದಲ್ಲಿ ಬಸ್, ಟೆಂಪೋ, ಟ್ರಕ್ ಭರ್ತಿಯಾಗಿ ಓಡಾಡುತ್ತಿವೆ. ಅಲ್ಲಿ ಉಲ್ಲಂಘನೆಯಾಗದ ಕೋವಿಡ್ ನಿಯಮ ಚಿತ್ರಮಂದಿರಗಳ ಆಸನ ಭರ್ತಿಗೆ ಅವಕಾಶ ಕೊಟ್ಟರೆ ಆಗುತ್ತಾ? ಎಲ್ಲರಿಗೂ ಅವಕಾಶ ಕೊಟ್ಟಿರುವಂತೆ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡಿ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಚಿತ್ರೋದ್ಯಮದ ಚಟುವಟಿಕೆ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ತುದಿಗಾಲಲ್ಲಿವೆ. ಸರಕಾರದ ವಿರುದ್ಧ ಹೋಗಬಾರದು ಎನ್ನುವ ಕಾರಣಕ್ಕೆ ಬಿಗ್ ಸಿನಿಮಾಗಳು ತೆರೆಗೆ ಬಂದಿಲ್ಲ. ಸರಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಲಿ. ಒಂದೊಮ್ಮೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದರೆ ಎಲ್ಲವನ್ನು ಬಂದ್ ಮಾಡುವಂತೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಸೂಚಿಸಲಿ. ಯಾರು ಬೇಡ ಅಂತಾರೆ?”
ಆರ್ ಆರ್ ಓದುಗೌಡರ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ
“ಸರಕಾರದ ಈ ತಾರತಮ್ಯ ನೀತಿಯಿಂದ ಚಿತ್ರಮಂದಿರಗಳ ಮಾಲಕರು ಚಿಂತಾಕ್ರಾಂತರಾಗಿದ್ದಾರೆ. ಸರಕಾರ ಕೆಲವು ತೆರಿಗೆ ಶುಲ್ಕ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ವಿನಾಯಿತಿಗಳನ್ನು ಕೊಟ್ಟದ್ದು ನಿಜ. ಆದರೆ ಈಗಲೂ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡದಿದ್ದರೆ ಥೇಟರ್ ನಡೆಸೋದಾದರೂ ಹೇಗೆ?”
ವಿಶ್ವನಾಥ್ ಮಹಾಂತಯ್ಯನಮಠ, ಮಾಲಕರು, ಶ್ರೀ ಲಕ್ಷ್ಮೀ ಹಾಗೂ ಶಿವ ಚಿತ್ರಮಂದಿರ, ಕೊಪ್ಪಳ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ, ವಿರೂಪಾಪುರ ತಾಂಡಾ ಸುತ್ತ ಮುತ್ತ ಮಂಗಳವಾರ ರಾತ್ರಿ ಲಘು ಭೂಕಂಪ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8-24ರ ಸುಮಾರಿಗೆ 2-3 ಸೆಕೆಂಡ್‌ಗಳಷ್ಟು ಕಾಲ ಭೂಮಿ ಕಂಪಿಸಿದ ಅನುಭವ ತಾಂಡಾ ಹಾಗೂ ಕಲಕೇರಿ ಗ್ರಾಮದ ಜನರಿಗೆ ಉಂಟಾಗಿದ್ದು, ಮನೆಯ ಗೃಹಪಯೋಗಿ ವಸ್ತುಗಳು ಅಲುಗಾಡಿವೆ. ಘಟನೆಯಿಂದ ಗಾಬರಿಗೊಂಡ ಜನ ಮನೆಯಿಂದ ಹೊರ ಓಡಿ ಬಂದು ಗುಂಪು ಸೇರಿ ಚರ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ ಅವರು, ಕಂಪನದ ಅನುಭವ ಬಿಚ್ಚಿಟ್ಟರು.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜೂಜಾಟ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಎರಡು ಗ್ರಾಮಗಳಲ್ಲಿ ನಡೆದ ಪೊಲೀಸರ ದಾಳಿ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗುತ್ತಿಗೆದಾರ, ಚಾಲಕ ಸೇರಿದಂತೆ ಆರು ಜನರನ್ನು ಬಂಧಿಸಿದರೆ, ಪುಟಗಾಂವ ಬಡ್ನಿ ಗ್ರಾಮದಲ್ಲಿ ಬರೋಬ್ಬರಿ 20 ಜನ ಘಟಾನುಘಟಿಗಳನ್ನು ಬಂಧಿಸಲಾಗಿದೆ.
ಸೂರಣಗಿ ಗ್ರಾಮದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುತ್ತಿಗೆದಾರ, ಇಬ್ಬರು ಚಾಲಕರು ಸೇರಿದಂತೆ ಆರು ಜನರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಸೂರಣಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಜೂಜಾಟದಲ್ಲಿ ತೊಡಗಿದ್ದ ರಫೀಕ್ ಮಾಬುಸಾಬ್ ಕೊಲಕಾರ್, ಬಸವರಾಜ್ ರಾಮಣ್ಣ ಸಂಕ್ಲಿಪುರ, ಅಂದಪ್ಪ ಬಸಪ್ಪ ರೆಡ್ಡಿ, ಮಾರುತಿ ಪಕ್ಕೀರಪ್ಪ ಬಾರ್ಕಿ, ಬಸವರಾಜ್ ಈರಪ್ಪ ಶಿಗ್ಲಿ, ಜಗದೀಶಪ್ಪ ಬಸಪ್ಪ ಶೀರನಹಳ್ಳಿ ಎಂಬುವವರನ್ನು ಬಂಧಿಸಿ ಅವರಿಂದ 4700 ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪುಟಗಾಂವ ಬಡ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 20 ಜನರ ತಂಡದ ಮೇಲೆ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಲಕ್ಷ್ಮೇಶ್ವರ ಠಾಣೆಯ ಪಿಎಸ್ಐ ಡಿ ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಘಟಾನುಘಟಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ.
ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದು ಕಳ್ಳತನಕ್ಕಿಳಿದಿದ್ದ ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ದ ಮುಕಂದವಾಡ ಏರಿಯಾ ನಿವಾಸಿಗಳಾದ ಸಂಗೀತಾ ಸುರೇಶ್ ಹಾಗೂ ಶ್ರುತಿ ಅಲಿಯಾಸ್ ಆರತಿ ರಾಮು ಎಂಬವರು ಗದಗನ ಕಳಸಾಪೂರ ರಿಂಗ್ ರೋಡ್ ಬಳಿ ಜೋಪಡಿ ಹಾಕಿಕೊಂಡು ವಾಸವಾಗಿದ್ದವರೇ ಬಂಧಿತ ಕಳ್ಳಿಯರು.
ಕಳೆದ ಆಗಸ್ಟ್ 11 ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಕುಮಟಾದ ಸೌಮ್ಯ ಸತೀಶ್ ಎನ್ನುವ ಮಹಿಳೆಯೊಬ್ಬರ ವೆನಿಟಿ ಬ್ಯಾಗ್ ಕಳ್ಳತನವಾಗಿತ್ತು. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಮಂಗಳಸೂತ್ರ ಸೇರಿದಂತೆ ಚಿನ್ನಾಭರಣಗಳಿದ್ದವು.
ಕಳ್ಳತನವಾದ ಕುರಿತು ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖಾ ತಂಡ ರಚಿಸಲಾಗಿತ್ತು.
ಮೊನ್ನೆ ಭಾನುವಾರ ಹೊಸ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣೆಯ ಸಿಪಿಐ ಬಿ ಜಿ ಸುಬ್ಬಾಪೂರಮಠ ನೇತೃತ್ವದಲ್ಲಿ ಬಡಾವಣೆ ಠಾಣೆಯ ಪಿಎಸ್ಐ ಆರ್ ಆರ್ ಮುಂಡೆವಾಡಗಿ, ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ, ಆರ್ ಐ ಗುಂಜಳ, ಎಸ್ ಸಿ ಕೊರಡೂರ, ಚಂದ್ರು ದೊಡ್ಡಮನಿ, ಎಸ್ ಎಚ್ ಕಮತರ, ಬಿ ಎಫ್ ಯರಗುಪ್ಪಿ, ಅಶೋಕ ಗದಗ, ಆರ್ ಎಲ್ ಗೋಗೇರಿ, ಜೆ ಆರ್ ಕಮತದ, ಎಲ್ ಎಸ್ ಹೊಸಮನಿ ಈ ಕಾರ್ಯಾಚರಣೆ ನಡೆಸಿ ಇಬ್ಬರ ಕಳ್ಳಿಯರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ (34), ಶೈಲಮ್ಮ (29) ಆತ್ಮಹತ್ಯೆಗೆ ಶರಣಾದ ದಂಪತಿ.
ನಿನ್ನೆ ಸಂಜೆ ಪತ್ನಿ ಶೈಲಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿನ ಬಳಿಕ ಮನನೊಂದು ಪತಿಯೂ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪಿಎಸ್ ಐ ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂತಾಮಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸ್ಥಳದಲ್ಲೇ ಸಾವಿಗೀಡಾಗಿ, ಹಲವರು ಗಾಯಗೊಂಡ ಘಟನೆ ಸಂಭವಿಸಿದೆ.
ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಬಳಿ ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಮಾನವೀಯತೆ ಮೆರೆದ ಶಾಸಕರು
ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ್, ಮಾಲೂರ್ ಶಾಸಕ ಕೆ.ವೈ. ನಂಜೇಗೌಡ ಗಾಯಾಳುಗಳನ್ನು ಸಾಗಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.
ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ರಸ್ತೆ ಬದಿಯ ಗೂಟದ ಕಲ್ಲಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ್ದರಿಂದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ವಿನಾಯಕ ಚಿದಾನಂದ ಕಾವೇರಿ (22) ಮುತ್ತು ಮಾಳಿ (22) ಮೃತ ಯುವಕರು. ಈರಯ್ಯ ಹಿರೇಮಠ (22) ಸ್ಥಿತಿ ಗಂಭೀರವಾಗಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಥಣಿ ಪಟ್ಟಣದ ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ರಾಯಬಾಗ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮುಂದಿನ ಸೀಟಿನಲ್ಲಿ ಕುಳಿತ ಚಾಲಕ ಹಾಗೂ ಮತ್ತೋರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಹಿಂದೆ ಕುಳಿತ ಇಬ್ಬರು ಸಣ್ಣಪುಟ್ಟ ಗಾಯಗಳಾಗಿವೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಾದ್ಯಂತ 90ಕ್ಕೂ ಹೆಚ್ಚು ದೇವಾಲಯ ನೆಲಸಮಗೊಳಿಸಲು ಜಿಲ್ಲಾಡಳಿತ ಮುಂದಾಗಿರುವುದು ಸರಿಯಲ್ಲ. ಇದರಿಂದ ಹಿಂದು ಜನರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಮೈಸೂರು ಸಂಸದ ಪ್ರತಾಪಸಿಂಹ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆಡಿಪಿ ಸಭೆಯಲ್ಲಿ ಇದನ್ನೇ ಚರ್ಚೆ ಮಾಡಿದ್ದೇನೆ. ನ್ಯಾಯಾಲಯ ತೀರ್ಪು ನೆಪ ಮಾಡಿ ಮಧ್ಯರಾತ್ರಿ ಕಳ್ಳರ ರೀತಿ ಬಂದು ಹಿಂದು ದೇವಾಲಯ ಕೆಡವುತ್ತಿದ್ದಾರೆ. ಕಳ್ಳರು ದರೋಡೆಕೋರರು ಜನರಿಲ್ಲದ ವೇಳೆ ಮಾಡುವ ಹಾಗೆ ದೇವಸ್ಥಾನಗಳನ್ನು ಕೆಡವಲಾಗುತ್ತಿದೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ರಸ್ತೆ ಮಧ್ಯೆ, ಅಕ್ರಮವಾಗಿ ನಿರ್ಮಿಸಿರುವ ಯಾವುದೇ ಕಟ್ಟಡ ಕೆಡವಲಿ. ಕೇವಲ ಹಿಂದು ದೇವಸ್ಥಾನ ಮಾತ್ರ ಟಾರ್ಗೆಟ್ ಮಾಡುತ್ತಿರುವುದೇಕೆ. ಚರ್ಚ್ ಮತ್ತು ಮಸೀದಿ ಇಲ್ಲವೆ ? ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತೆತ್ತಿದ್ದರೆ ಸುಪ್ರೀಂ ಕೋರ್ಟ್ ಆರ್ಡರ್ ನೆಪ ಹೇಳುತ್ತಿದ್ದಾರೆ. ನಮ್ಮ ಹತ್ತಿರವೂ ಸುಪ್ರೀಂಕೋರ್ಟ್ ಆರ್ಡರ್ ಇದೆ. 2009ರಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಟಿರಿ. ಈ ಕಾರಣಕ್ಕಾಗಿಯೇ ರಾಜು ಮರ್ಡರ್ ಆಯಿತು ಎಂದು ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ದೇವರಾಜ ಅರಸ್ ರಸ್ತೆಯ ದರ್ಗಾ ತೆರವುಗೊಳಸಿದರೆ ಬಳೆ ತೊಟ್ಟು ಕೂರುವುದಿಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಅದೇಶ ಪರಾಮರ್ಶೆ ಮಾಡಿ ಮತ್ತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಬೇಕು. ನಮ್ಮ ಮನವಿಗೆ ಸ್ಪಂದಿಸಿದೆ ದೇವಸ್ಥಾನ ತೆರವು ಮಾಡಿದರೆ ರಾಜ್ಯಾದ್ಯಂತ ಜನಾಂದೋಲ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.