Home Blog Page 3441

ಮೇಕೆದಾಟು; ಶೀಘ್ರವೇ ದೆಹಲಿಗೆ ತೆರಳಿ ಮನವರಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ತಮಿಳುನಾಡಿನಲ್ಲಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತದೆ. ನೀರಿನ ರಾಜಕೀಯ ಮಾಡಿಯೇ ಹಲವರು ಅಧಿಕಾರಕ್ಕೆ ಬಂದಿದ್ದಾರೆ. ನದಿಯ ನೀರು ರೈತರಿಗೆ, ಜನರಿಗೆ ಅನುಕೂಲ ಆಗಬೇಕು. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕೆಲವು ಪ್ರಕ್ರಿಯೆ ಮುಗಿಯಬೇಕಿದೆ. ಡಿಪಿಆರ್ ಸಿದ್ಧಗೊಂಡಿದೆ. ಶೀಘ್ರದಲ್ಲೇ ವಕೀಲರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತೇನೆ. ಮೇಕೆದಾಟು ಯೋಜನೆ ಜಾರಿಮಾಡುವುದು ಶತಸಿದ್ಧ ಎಂದರು.

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫೂ ಬಗ್ಗೆ ಮಾಹಿತಿ ಪಡೆಯುತ್ತೇನೆ. ನಾನೇ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸುವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ವಿಶೇಷ ಸಂದರ್ಭದಲ್ಲಿ ಸಂಪುಟ ರಚನೆಯಾಗಿದೆ. ಸಂಪುಟ ರಚನೆ ಆಗಿದೆ. ಈ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ರಾಮದಾಸ್ ನನ್ನ ಸ್ನೇಹಿತ ಕರೆದು ಮಾತನಾಡುತ್ತೇನೆ ಎಂದರು.

ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ ಬೊಮ್ಮಾಯಿ

  • ಮುಖ್ಯಮಂತ್ರಿಯಾದ ಬಳಿಕ ಮೈಸೂರಿಗೆ ಮೊದಲ ಭೇಟಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೆ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದರು. ಬೆಳಿಗ್ಗೆ ಮೈಸೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ‌ ಪಡೆದರು. ಚಾಮುಂಡಿ ಬೆಟ್ಟದಲ್ಲಿ ಸಿಎಂಗೆ ಪೂರ್ಣಕುಂಭ ಸ್ವಾಗತ ದೊರೆಯಿತು. ನಾಡದೇವತೆಗೆ ಪೂಜೆ ಸಲ್ಲಿಸಿದರು.

ಸಿಎಂಗೆ ಮೈಸೂರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್, ಸಚಿವರಾದ ಭೈರತಿ ಬಸವರಾಜ್, ವಿ.ಸೋಮಣ್ಣ, ಮುರುಗೇಶ ನಿರಾಣಿ, ಡಾ.ಸುಧಾಕರ, ನಾರಾಯಣಗೌಡ, ಮುನಿರತ್ನ, ಗೋಪಾಲಗೌಡ ಸೇರಿ ಹಲವರು ಸಾಥ್ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಕುರಿತ ಮುಂಜಾಗ್ರತಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜೀನಾಮೆಗೆ ಮುಂದಾದ್ರಾ ಆನಂದಸಿಂಗ್ ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೇಡಿಕೆ ಕುರಿತು ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನನ್ನ ತೀರ್ಮಾನ ನಿಂತಿದೆ. ಆದರೆ ನಾನು ಹೆಚ್ಚು ದಿನ ಕಾಯಲ್ಲ, ಕುಟುಂಬದವರ ಜೊತೆ ಹಾಗೂ ಆಪ್ತರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಸಿಎಂ ಭೇಟಿಯ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಯಡಿಯೂರಪ್ಪ ಸಿಎಂ ಆಗಿದ್ದರೆ ಏನೂ ಕೇಳುತ್ತಿರಲಿಲ್ಲ. ಆದರೆ ಈಗ ನಾಯಕತ್ವ ಬದಲಾಗಿದೆ. ಹಾಗಾಗಿ ನಾವೂ ಬದಲಾವಣೆ ಬಯಸುತ್ತಿದ್ದೇವೆ. ನನ್ನ ಬೇಡಿಕೆ, ಮುಂದಿನ ನಡೆಯ ಬಗ್ಗೆ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ. ಬೇಡಿಕೆ ಏನೆಂದು ಬಹಿರಂಗ ಪಡಿಸಲಾಗದು ಎಂದು ಹೇಳಿದರು.

ಸಿಎಂ ಹುದ್ದೆ ಸುಲಭದ ಮಾತಲ್ಲ. ಮುಳ್ಳಿನ ಹಾಸಿಗೆ ಇದ್ದಂತೆ ಎಂಬುದು ನಂಗೂ ಗೊತ್ತು ಎಂದಿದ್ದಾರೆ. ಕೇಳಿದ ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಮುಂದುವರೆಯುವುದಾಗಿ ಆನಂದ್ ಸಿಂಗ್ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಯಡಿಯೂರಪ್ಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತಮಗೆ ನೀಡಿರುವ ಸಂಪುಟ ದರ್ಜೆಯ ಸ್ಥಾನಮಾನ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ನಿಕಟ ಪೂರ್ವ ಮುಖ್ಯಮಂತ್ರಿಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಮಾತ್ರ ನೀಡಬೇಕು ಹಾಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ವೈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರೈತರ ಮಕ್ಕಳಿಗೆ ಶಿಷ್ಯವೇತನ; ಸರ್ಕಾರದಿಂದ ಅಧಿಕೃತ ಆದೇಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ಯೋಜನೆಗೆ ಸರ್ಕಾರ ನಿನ್ನೆ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ಯೋಜನೆಯಂತೆ ಪಿಯುಸಿ, ಐಟಿಐ, ಡಿಪ್ಲೊಮಾ ಕಲಿಯುತ್ತಿರುವ ವಿದ್ಯಾರ್ಥಿ 2500, ವಿದ್ಯಾರ್ಥಿನಿಯರಿಗೆ 3000, ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡು ಪ್ರತಿ ವಿದ್ಯಾರ್ಥಿಗೆ 5000, ವಿದ್ಯಾರ್ಥಿನಿಗೆ 5500,
ಎಲ್ ಎಲ್ ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವವರಿಗೆ ಕ್ರಮವಾಗಿ 7500 ಹಾಗೂ 8000.

ಎಂಬಿಬಿಎಸ್, ಬಿಇ, ಬಿಟೆಕ್ ಹಾಗೂ ಸ್ನಾಕೋತ್ತರ ಕೋರ್ಸಗಳಿಗೆ 10000 ಹಾಗೂ 11000 ರೂ. ಶಿಷ್ಯವೇತನವನ್ನು ಸರ್ಕಾರ ಪಾವತಿಸಲಿದೆ.
ಈ ಶಿಷ್ಯ ವೇತನ ಪಡೆಯುವ ರೈತ ರಾಜ್ಯದ ಯಾವುದೇ ಮೂಲೆಯಲ್ಲಿ ಕೃಷಿ ಮಾಡುವ ಜಮೀನು ಹೊಂದಿರಬೇಕು. ದತ್ತು ಪುತ್ರರಿಗೂ ಅವಕಾಶ ಇದೆ. ಮಕ್ಕಳಿಗೆ ಪೋಷಕರಿಲ್ಲದಿದ್ದಲ್ಲಿ ಮಕ್ಕಳ ಹೆಸರಲ್ಲಿ ಜಮೀನು ಇದ್ದರೂ ಅರ್ಹರಾಗುತ್ತಾರೆ.

ರೈತ ಮಕ್ಕಳು‌ ರಾಜ್ಯ ಸರ್ಕಾರದ ಪಾವತಿಸುವ ಯಾವುದೆ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಆದರೆ, ರ‌್ಯಾಂಕ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‌್ಯಾಂಕ್ ಗಳಿಗೆ ಶಿಷ್ಯ ವೇತನ, ಪ್ರೋತ್ಸಾಹ ಧನ ಪಡೆದಿದ್ದರೂ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ‌.

ಶಿಷ್ಯವೇತನ ಯಾವುದೇ ಕೋರ್ಸಿನ ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷಕ್ಕೆ ಮಿತಿಯಾಗಿರುತ್ತದೆ‌. ಅನುತ್ತೀರ್ಣ ಹೊಂದಿ ಪುನಃ ತೆಗೆದುಕೊಂಡರೆ ಅರ್ಹತೆ ಇಲ್ಲ. ಯಾವುದಾದರೂ ಒಂದು ಕೋರ್ಸಗೆ ಮಾತ್ರ ಮಕ್ಕಳು ಶಿಷ್ಯವೇತನ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಸಚಿವ ಆನಂದ ಸಿಂಗ್ ಭಾವನೆ ಗೌರವಿಸುತ್ತೇನೆ: ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಆನಂದ್ ಸಿಂಗ್ ಭಾವನೆ ಹೇಳಿಕೊಂಡಿದ್ದಾರೆ. ಅದನ್ನು ಗೌರಿವಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಖಾತೆ ಹಂಚಿಕೆಗೆ ಆನಂದ್ ಸಿಂಗ್ ಅಸಮಾಧಾನ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಸಚಿವ ಆನಂದ್ ಸಿಂಗ್ ತಮ್ಮ ಭಾವನೆ ಹೇಳಿಕೊಂಡಿದ್ದಾರೆ. ಅವರ ಭಾವನೆ, ಮನವಿಯನ್ನು ಗೌರವಿಸುವುದಾಗಿ, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದೇನೆ ಎಂದು ಹೇಳಿದರು.

ಇಂದು ಸಂಜೆ ಎಂಟಿಬಿ ನಾಗರಾಜ್ ಕೂಡ ಭೇಟಿಯಾಗಲಿದ್ದಾರೆ. ಅವರೊಂದಿಗೂ ಮಾತುಕತೆ ನಡೆಸಿ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದರು.

ಸಚಿವ ಪ್ರಭು ಚವ್ಹಾಣ, ಶಾಸಕರ ಮಧ್ಯೆ ಮಾತಿನ ಫೈಟ್

  • ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಹಗ್ಗಜಗ್ಗಾಟ

ವಿಜಯಸಾಕ್ಷಿ ಸುದ್ದಿ, ಬೀದರ್

ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರ ಮಧ್ಯೆ ವಾಗ್ವಾದ‌ ನಡೆದ ಘಟನೆ ಬೀದರ್ ನಲ್ಲಿ ಜರುಗಿದೆ.
ನಗರದ ಹೊರವಲಯದ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಆದರೆ, ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂ ಖಾನ್, ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ವಿರೋಧ ವ್ಯಕ್ತಪಡಿಸಿದರು.

ವಿಷಯಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಜಾಣ ಹಾಗೂ ಶಾಸಕರ ಮಧ್ಯೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ‌ ನಡೆಯಿತು. ಸಚಿವ ಪ್ರಭು ಚೌವಾಣ ಮತ್ತು ಈಶ್ವರ ಖಂಡ್ರೆ ಮಧ್ಯೆ ವಾಗ್ವಾದ ಜೋರಾಗಿತ್ತು.

ಮಧ್ಯೆ ಪ್ರವೇಶ ಮಾಡಿದ ಶಾಸಕ ರಹಿಮ್ ಖಾನ್ ಜಿಲ್ಲಾ ಸಂಕೀರ್ಣ ಇಲ್ಲಿಯೇ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಬೀದರ್ ಬಂದ್ ಗೆ ಕರೆ ಕೊಡುತ್ತೇನೆ ಎಂದು ಸಚಿವರಿಗೆ ಧಮಕಿ ಹಾಕಿದ್ದರು. ಸಚಿವರು ಮಾತ್ರ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಮಾಡಲಾಗುವುದು ಎಂದು ಹೇಳಿದ್ದರಿಂದ ಸಭೆಯಲ್ಲಿ ಮತ್ತಷ್ಟು ವಾಗ್ವಾದ ಸೃಷ್ಟಿಯಾಯಿತು.

ನಾನು ಅತೃಪ್ತನಲ್ಲ, ತೃಪ್ತ ಶಾಸಕ: ರಾಜೂಗೌಡ ಯೂಟರ್ನ್

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಸಚಿವ ಸ್ಥಾನ ಸಿಗದಿದ್ದಕ್ಕೆ ನಿನ್ನೆಯಷ್ಟೇ ಪಕ್ಷದ ವಿರುದ್ದ ಸಿಡಿದೆದ್ದಿದ್ದ ಶಾಸಕ ರಾಜೂಗೌಡ ಇಂದು ಯೂ ಟರ್ನ್ ಹೊಡೆದಿದ್ದು, ನಾನು ತೃಪ್ತ ಶಾಸಕ, ಅತೃಪ್ತ ಶಾಸಕನಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ ಎಂದು ಹೇಳಿದ್ದಾರೆ.

ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಮಯ ರಾಜಭವನಕ್ಕೆ ಹೋಗುವತನಕ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ, ಒಳಗಡೆ ಇರುವುದಿಲ್ಲ. ಸ್ವಲ್ಪ‌ ಅದೃಷ್ಟದ ಕೊರತೆಯಿದೆ. ಒಳ್ಳೆಯ ರೀತಿಯಿಂದ ಪಕ್ಷದಲ್ಲಿ ಕೆಲಸ ಮಾಡೋಣ. ಮಾಡಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದರು.

ಯಾವುದೆ ಕಾಂಟ್ರವರ್ಸಿ, ಕಳಂಕ ಇಲ್ಲದ‌ ಕಾರಣ ನನಗೂ ಸಚಿವ ಸ್ಥಾನ ಕೊಡುತ್ತಾರೆಂಬ ನಂಬಿಕೆ, ಆಶೆಯಿತ್ತು. ಸಚಿವ ಸ್ಥಾನ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಹಾಕಿದ್ದೆ. ಮಾಡದಿದ್ದಾಗ ಪಕ್ಷದ ವಿರುದ್ಧ ಮಾತನಾಡುವ ಸ್ವಭಾವ ನನ್ನದಲ್ಲ. ಪಕ್ಷಕ್ಕೆ ಬ್ಲಾಕ್ ಮೇಲೆ ಮಾಡುವಂತೆ ನನ್ನ ತಾಯಿ ಕಲಿಸಿಕೊಟ್ಟಿಲ್ಲ. ಒಳ್ಳೆಯತನದಿಂದ ಹೋಗು ಎಂದು ಕಲಿಸಿದ್ದಾರೆ. ಬಸವಣ್ಣ ಹಾಗೂ ತಾಯಿಯ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದು ರಾಜೂಗೌಡ ಹೇಳಿದ್ದಾರೆ

2-3 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟ; ಖಾತೆ ಹಂಚಿಕೆಗೆ ಎಂಟಿಬಿ ನಾಗರಾಜ್ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ನೂತನ ಪೌರಾಡಳಿತ ಖಾತೆ ಸಚಿವ ಎಂಟಿಬಿ‌ ನಾಗರಾಜ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಎಂಟಿಬಿ, ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ದೂರಿದ್ದಾರೆ.

ಕಾರು ಪಲ್ಟಿ; ಪಿಡಬ್ಲುಡಿ ಎಇಇ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಕಾರವಾರ

ಅಂಕೋಲಾದಲ್ಲಿ ಕಾರು ಪಲ್ಟಿಯಾಗಿ ಪಿಡಬ್ಲುಡಿ ಎಇಇ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ. ಸಿದ್ದಾಪುರದ ಲೋಕೊಪಯೋಗಿ ಇಲಾಖೆ ಎಇಇ ಮುದುಕಣ್ಣವರ್ ( 58 ) ಮೃತರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಕೋವಿಡ್ ಹಾಗೂ ನೆರೆಗೆ ಸಂಬಂಧಿಸಿದ ಸಭೆ ಆಯೋಜಿಸಲಾಗಿತ್ತು. ಸಭೆಗೆ ಶಿರಸಿ ಸಿದ್ದಾಪುರ ಮತ್ತು ಮುಂಡಗೋಡದ ಪಿಡಬ್ಲುಡಿ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಬರುತ್ತಿದ್ದರು.

ಈ ವೇಳೆ ಅಂಕೋಲಾ ಸಮೀಪದ ಬಾಳೆಗುಳಿ ಕ್ರಾಸ್ ನಲ್ಲಿ ಕಾರು ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇತರ ಅಧಿಕಾರಿಗಳು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರಕ್ಕೆ ಸಭೆಗೆ ತೆರಳುತ್ತಿದ್ದ ಸಚಿವರು ಈ ಘಟನೆ ಬಗ್ಗೆ ಮಾಹಿತಿ ಪಡೆದು ತಕ್ಷಣ ಅಂಕೋಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಗಳನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುವುದಕ್ಕೆ ಖುದ್ದು ತಾವೇ ಮುಂದೆ ನಿಂತು ವ್ಯವಸ್ಥೆ ಮಾಡಿದರು.

ಅಪಘಾತದಲ್ಲಿ ಮೃತರಾದ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಎ.ಇ.ಇ ಮುದುಕಣ್ಣನವರ ಅವರ ಪಾರ್ಥಿವ ಶರೀರಕ್ಕೆ ಸಚಿವರು ಅಂತಿಮ ನಮನ ಸಲ್ಲಿಸಿದರು.