Home Blog Page 3442

ಗೂಡ್ಸ್ ಲಾರಿ ಡಿಕ್ಕಿ: ನಿವೃತ್ತ ಪ್ರಾಂಶುಪಾಲರ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಕುಟುಂಬ ಸಮೇತ ಪ್ರವಾಸಕ್ಕೆ ಹೊರಟಿದ್ದ ಗದಗ ಅಕ್ಕಿ ಕುಟುಂಬದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ, ಪ್ರತಿಷ್ಠಿತ ವಿಜಯ ಕಲಾ ಮಂದಿರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಅಕ್ಕಿ (83) ಅವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಅಂಕೋಲಾ ಸಮೀಪ ನಡೆದಿದೆ.

ಅಕ್ಕಿ ಅವರು ಕುಟುಂಬ ಸಮೇತ ಕಾರವಾರ ಹಾಗೂ ದಕ್ಷಿಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ದೇವಸ್ಥಾನಗಳಿಗೆ ಭೇಟಿ ಕೊಡಲು ಹೊರಟಿದ್ದರು. ಪತ್ನಿ, ಮಕ್ಕಳು, ಮೊಮ್ಮಕ್ಕಳ ಸಹಿತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು‌. ಶುಕ್ರವಾರ ಮಧ್ಯಾಹ್ನ ಅಂಕೋಲಾದ ಬಳಿ ವಸಂತ ಅಕ್ಕಿಯವರಿದ್ದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಕಾರಿನಲ್ಲಿ ಮುಂದುಗಡೆ ಕುಳತಿದ್ದ ವಸಂತ ಅಕ್ಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪ್ರಕಾಶ ಅಕ್ಕಿ, ಅಶೋಕ್ ಅಕ್ಕಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತೇಜಸ್ ಅಕ್ಕಿ ಮತ್ತು ವಿಕಾಸ್ ಅಕ್ಕಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾರ್ಥಿವ ಶರೀರವನ್ನು ಗದಗಕ್ಕೆ ತರಲಾಗುತ್ತಿದೆ. ವಸಂತ ಅಕ್ಕಿ ಅವರು ಗದಗದ ಪಂಚಾಕ್ಷರಿ ನಗರದಲ್ಲಿ ವಾಸವಾಗಿದ್ದರು. ಇವರ ಪುತ್ರ ವಿನಯ ಅಕ್ಕಿ ನಗರದಲ್ಲಿ ಹಲವು ಜಿಮ್‌ಗಳನ್ನು ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಮತ್ತೆ ನೈಟ್, ವೀಕೆಂಡ್ ಕರ್ಫ್ಯೂ ಜಾರಿ

  • ಗಡಿಜಿಲ್ಲೆಗಳಲ್ಲಿ ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಸಂಪೂರ್ಣ ಲಾಕ್ ಡೌನ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ತಜ್ಞರ ಜೊತೆಗಿನ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೆಲವು ಅವಶ್ಯಕ ಕೆಲಸ ಹೊರತುಪಡಿಸಿ ಎಲ್ಲ ಸೇವೆಗಳು ಬಂದ್ ಆಗಲಿವೆ ಎಂದು ಹೇಳಿದರು.

ರಾಜ್ಯದ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕ್ ಎಂಡ್ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ರಾತ್ರಿ 9 ರಿಂದ ಸೋಮವಾರ ಬೆಳಗಿನ 6 ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಟಾಸ್ಕ್ ಫೋರ್ಸ ನಾಳೆ ಅಥವಾ ನಾಡಿದ್ದು ರಚನೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆ. 23ರಿಂದ 9ರಿಂದ 12ನೇ ತರಗತಿಯವರೆಗೆ ಶಾಲೆ ಆರಂಭವಾಗಲಿದೆ. ಶಾಲೆಗಳನ್ನು ಆರಂಭಿಸುವ ಕುರಿತಂತೆ ಚರ್ಚಿಸಲಾಗಿದೆ. ಆ. 23ರಿಂದ ದಿನಬಿಟ್ಟು ದಿನ ಬ್ಯಾಚ್ ಆಧಾರದ ಮೇಲೆ 9ರಿಂದ 12ನೇ ತರಗತಿಯವರೆಗಿನ ಕ್ಲಾಸ್ ನಡೆಯುತ್ತದೆ. ಪ್ರಾಥಮಿಕ ಶಾಲೆ ಆರಂಭದ ಕುರಿತು ಆಗಸ್ಟ್ ಅಂತ್ಯದ ವೇಳೆಗೆ ನಿರ್ಧರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿ ಅಂತ್ಯ

  • ಸತತ 24 ಗಂಟೆ ಪರಿಶೀಲಿಸಿದ ಅಧಿಕಾರಿಗಳ ತಂಡ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಾಸಕ ಜಮೀರ್ ಅಹ್ಮದ್ ಮನೆ ದಾಳಿ ನಡೆಸಿದ್ದ ಇಡಿ ತಂಡ ಸತತ 24 ಗಂಟೆಗಳ ಕಾಲ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳಿಗೆ ತಡಕಾಡಿ ಇಂದು ಪರಿಶೀಲನೆ ಅಂತ್ಯಗೊಳಿಸಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯ ಜಮೀರ್ ಅಹ್ಮದ್ ಮನೆಯೊಳಗಿನ ಇಂಟಿರಿಯರ್ ಡಿಸೈನ್, ವೈಭವೋಪೇತವಾದ ಅರೆಬಿಕ್ ಶೈಲಿಯ ಪೀಠೋಪಕರಣ ಕಂಡು ಇಡಿ ದಂಗಾಗಿದ್ದಾರೆ.

ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನ್ನ ಮನೆ ನಿರ್ಮಾಣದ ಬಗ್ಗೆ ಯಾರೋ ದೂರು ನೀಡಿದ್ದರು. ಈ ಕಾರಣಕ್ಕೆ ದಾಳಿ ನಡೆದಿದೆ. ಮನೆ ನಿರ್ಮಿಸಲು 7 ವರ್ಷ ಬೇಕಾಗಿದೆ. ಎಲ್ಲವೂ ವೈಟ್ ಮನಿಯಿಂದ, ಸ್ವಂತ ಸಂಪಾದನೆಯಿಂದಲೇ ನಿರ್ಮಿಸಿದ್ದೇನೆ. ಆದಾಯ ತೆರಿಗೆ ಎಲ್ಲವನ್ನೂ ಸರಿಯಾಗಿಯೇ ಪಾವತಿ ಮಾಡಿದ್ದೇನೆ. ಮನೆಯ ಮೇಲೆ ಹಲವರಿಗೆ ಕಣ್ಣಿತ್ತು. ಹಾಗಾಗಿ ಯಾರೋ ಇಡಿಗೆ ದೂರು ನೀಡಿದ್ದರು. ದಾಳಿ ನಡೆಸಿದ್ದಾರೆ ಎಂದರು.

ನಿನ್ನೆ ನಡೆದಿದ್ದ ದಾಳಿ ಇಂದು ಅಂತ್ಯವಾಗಿದೆ. ಅಧಿಕಾರಿಗಳಿಗೆ ಎಲ್ಲಾ ದಾಖಲೆ, ಮಾಹಿತಿ ನೀಡಿದ್ದೇನೆ. ಎಲ್ಲವನ್ನು ಪರಿಶೀಲನೆ ನಡೆಸಿ, ಸರಿಯಾಗಿ ಇರುವುದರಿಂದಲೆ ವಾಪಸ್ ಹೋಗಿದ್ದಾರೆ. ಅಗತ್ಯಬಿದ್ದರೆ ವಿಚಾರಣೆಗೆ ಕರೆಯುತ್ತೇವೆ ಎಂದಿದ್ದಾರೆ. ರಾಜಕೀಯದಲ್ಲಿ ವಿರೋಧಿಗಳು ಸಹಜ. ನನಗೆ ಆಗದವರು ದೂರು ನೀಡಿದ್ದಾರೆ. ಇಂದಲ್ಲ ನಾಳೆ ಇಡಿ ಅಧಿಕಾರಿಗಳಿಂದ ಮನೆ ಪರಿಶೀಲನೆ ನಡೆಯಲೇ ಬೇಕಿತ್ತು. ಈಗಲೇ ಅಧಿಕಾರಿಗಳು ಬಂದು ಪರಿಶೀಲಿಸಿದ್ದು ಒಳ್ಳೆಯದಾಯಿತು. ಇದರಿಂದ ನನಗೂ ನೆಮ್ಮದಿ. ಅಧಿಕಾರಿಗಳ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಹೇಳಿದರು.

ಇಂದು ರಾತ್ರಿ ಬೆಂಗಳೂರಿನ ರಮೇಶ ಜಾರಕಿಹೊಳಿ ನಿವಾಸದಲ್ಲಿ ಅತೃಪ್ತರ ಸಭೆ ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಅತೃಪ್ತಗೊಂಡಿರುವ ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ಇಂದು ರಾತ್ರಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಪ್ರಕರಣ ಅಂತ್ಯಗೊಳಿಸಿ ಶೀಘ್ರ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನೂ ಪ್ರಕಟಿಸಿದ್ದರು. ಆದರೆ, ಬಿಜೆಪಿಯ ಮುಖಂಡರು ಮನವೊಲಿಸಿದ್ದರಿಂದ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಪ್ರಕರಣ ಇತ್ಯರ್ಥವಾಗುವವರೆಗೆ ತಮ್ಮ ಬದಲು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಆದರೆ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಅಲ್ಲದೆ ಇವರೊಂದಿಗೆ ಬಿಜೆಪಿಗೆ ಬಂದ ಆರ್.ಶಂಕರ, ಮಹೇಶ ಕುಮಟಳ್ಳಿ ಅವರನ್ನೂ ಕೈಬಿಡಲಾಗಿದೆ. ಜತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ, ಸವದತ್ತಿ ಶಾಸಕ ಆನಂದ ಮಾಮನಿ ಸೇರಿ ಹಲವು ಸಚಿವಾಕಾಂಕ್ಷಿಗಳನ್ನು ಕಡೆಗಣಿಸಿದ್ದು, ಅವರೂ ಅಸಮಾಧಾನಗೊಂಡಿದ್ದಾರೆ.

ಅತೃಪ್ತರೆಲ್ಲ ಇಂದು ರಾತ್ರಿ ಸಭೆ ನಡೆಸಲು ಮುಂದಾಗಿದ್ದಾರೆ. ಆದರೆ ವಲಸೆ ಬಂದವರಷ್ಟೆ ಸಭೆ ನಡೆಸುತ್ತಾರೋ, ಮೂಲ ಬಿಜೆಪಿಗರೂ ಇದರಲ್ಲಿ ಭಾಗಿಯಾಗಲಿದ್ದಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಬೊಲೆರೊ-ಬೈಕ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

ವಿಜಯಸಾಕ್ಷಿ ಸುದ್ದಿ, ಗದಗ

ಬೊಲೆರೊ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಗದಗ ತಾಲೂಕಿನ ಹಾತಲಗೇರಿ ಬಳಿ ಘಟನೆ ನಡೆದಿದೆ. ಮೃತ ಬೈಕ್ ಸವಾರ ಬೆಟಗೇರಿಯ ವಾಸೀಂ ಮದರಸಾಬ ಹುಮನಾಬಾದಿ (23) ಎಂದು ಗುರ್ತಿಸಲಾಗಿದೆ. ಗಾಯಗೊಂಡ ಇನ್ನೊಬ್ಬ ಸವಾರ ಫಯೀಮ್ ಎನ್ನಲಾಗಿದೆ.

ಗಾಯಗೊಂಡ ಫಯೀಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಕ್ ಸವಾರ ಬೆಟಗೇರಿಯಿಂದ ಲಕ್ಕುಂಡಿ ಮಾರ್ಗವಾಗಿ ಡಂಬಳಕ್ಕೆ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀರ್ ಮನೆ ಮೇಲಿನ ದಾಳಿಗೆ ರಾಜು ಪೆಂಡಾರ್ ಖಂಡನೆ

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಅವರ ಮೇಲೆ ನಡೆದ ಐಡಿ ದಾಳಿಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯಲ್ಲಿ ಇರುವ ನಾಯಕರೆಲ್ಲ ಪರಿಶುದ್ಧವಾದವರಾ ? ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರನ್ನು ಹೆದರಿಸಲು ನಡೆಸಿದ ಷಡ್ಯಂತ್ರ ಇದು ಎಂದು ಗದಗ ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಂಯೋಜಕ ರಾಜು ಪೆಂಡಾರ್ ಆರೋಪಿಸಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೈವಾಡ ಇದೆ. ಕೆಲವು ದಿನಗಳ ಹಿಂದೆ ಜಮೀರ್ ಅಹ್ಮದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅವರು ಉತ್ತರ ಸಹ ನೀಡಿದ್ದರು.
ಆದರೂ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಬೇಕಂತಲೇ ಮಾಡಿಸಿದ ಐಡಿ ದಾಳಿ ಇದು ಎಂದು ಪೆಂಡಾರ್ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಕ್ಕಳ ಮಾಡಿದ ಭ್ರಷ್ಟಾಚಾರ ಕಣ್ಣಿಗೆ ಕಾಣಿಸಲಿಲ್ಲವೇ ಇವರಿಗೆ ಎಂದವರು ಪ್ರಶ್ನಿಸಿದ್ದಾರೆ.

ರೋಶನ್ ಬೇಗ್ ಪಿಎ ವಶಕ್ಕೆ ಪಡೆದ ಇಡಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೆಳಗ್ಗೆಯಿಂದ ಮಾಜಿ ಸಚಿವ ರೋಷನ್ ಬೇಗ್ ನಿವಾಸ, ಕಚೇರಿ ಹಾಗೂ ಪುತ್ರಿಯ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿ, ಕೆಲ ದಾಖಲೆಗಳೊಂದಿಗೆ ರೋಷನ್ ಬೇಗ್ ಪಿಎ ವಶಕ್ಕೆ ಪಡೆದಿದ್ದಾರೆ.

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಮಾಹಿತಿಯ ಹಿನ್ನಲೆಯಲ್ಲಿ ಮಾಜಿ ಸಚಿವ ರೋಷನ್ ಬೇಗ್ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಗುರುವಾರ ಬೆಳಿಗ್ಗೆಯಿಂದ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದೇ ವೇಳೆ ರೋಷನ್ ಬೇಗ್ ಅವರ ನಿವಾಸ, ಕಚೇರಿ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ಸಂದರ್ಭದಲ್ಲಿ ತೆರಿಗೆ ವಂಚನೆ ಸೇರಿದಂತೆ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳಿಗೆ ಲಭಿಸಿವೆ ಎಂದು ತಿಳಿದು ಬಂದಿದೆ.

ದಾಖಲೆಗಳನ್ನು ಇಡಿ ಅಧಿಕಾರಿಗಳು ಇನ್ನೋವಾ ಕಾರಿನಲ್ಲಿ ಹಾಕಿಕೊಂಡು, ರೋಷನ್ ಬೇಗ್ ಪಿಎ ಕೂಡ ವಶಕ್ಕೆ ಪಡೆದು, ತೆರಳಿದ್ದಾರೆ.

ಬೊಮ್ಮಾಯಿ ಸರ್ಕಾರ ಅಲ್ಪಾವಧಿಯದ್ದು; ಈಶ್ವರ ಖಂಡ್ರೆ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಬಸವರಾಜ ಬೊಮ್ಮಯಿ ಸರಕಾರ ಅಲ್ಪಾವಧಿಯದ್ದಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ ನುಡಿದಿದ್ದಾರೆ.

ಸುರಪೂರ ತಾಲೂಕಿನ ನೀಲಕಂಠರಾಯನ್ ಗಡ್ಡೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಬೊಮ್ಮಯಿಗೆ ಮುಕ್ತವಾಗಿ ಸರಕಾರ ನಡೆಸಲು ಬಿಜೆಪಿ ಅವಕಾಶ ಕೊಡುತ್ತದೆಯೇ ? ಎಂದು ಪ್ರಶ್ನಿಸಿದ ಅವರು, ಒಂದು ಕಡೆ ಕೇಶವ ಕೃಪಾ, ಮತ್ತೊಂದೆಡೆ ಕಾವೇರಿ, ಇನ್ನೊಂದು ಕಡೆ ಬಿಜೆಪಿ ಹೈ ಕಮಾಂಡ್, ಮತ್ತೊಂದು ಕಡೆ ಬಾಂಬೆ ಟಿಂ. ಈ ನಾಲ್ಕು ಶಕ್ತಿ ಕೆಂದ್ರಗಳು ಒಂದೊಂದು ಕಡೆ ಎಳೆದುಕೊಂಡು ಹೊದರೆ ಸಿ.ಎಂ. ಬೊಮ್ಮಯಿ ಸರಕಾರ ನಡೆಸಲು ಸಾಧ್ಯನಾ ? ಎಂದು ಪ್ರಶ್ನಿಸಿದರು.

ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ವಹಿಸಿದ ಸಿಎಂ

  • ನಾಳೆಯಿಂದಲೇ ಜಿಲ್ಲೆಗಳಿಗೆ ತೆರಳಿ ಕಾರ್ಯನಿರ್ವಹಿಸಲು ಸೂಚನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಸಂಪುಟ ರಚನೆ ಬೆನ್ನಲ್ಲೇ ಕೋವಿಡ್ ಹಾಗೂ ನೆರೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ಹೊರಿಸಿ ಆದೇಶ ಹೊರಡಿಸಿಲಾಗಿದೆ.

ಕೋವಿಡ್ 3ನೇ ಅಲೆ ತಡೆಯಲು ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವಾಗ ಸರ್ಕಾರ ಮಾತ್ರ ಸಿಎಂ ಬದಲಾವಣೆ, ಸಚಿವ ಸಂಪುಟ ರಚನೆಯಲ್ಲಿ ಮುಳುಗಿದೆ ಎಂಬ ವಿಪಕ್ಷಗಳ ಆರೋಪಿಸಿದ್ದವು.
ಹೀಗಾಗಿ ಈ ಆರೋಪ ಹೋಗಲಾಡಿಸಲು ಸಿಎಂ ನೂತನ ಸಚಿವರಿಗೆ ಜವಾಬ್ದಾರಿ ವಹಿಸಿ ನಾಳೆಯಿಂದಲೇ ಆಯಾ ಜಿಲ್ಲೆಗಳಿಗೆ ತೆರಳಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ.

ಆದರೆ ಇದು ತಾತ್ಕಾಲಿಕ ಜವಾಬ್ದಾರಿ ಉಸ್ತುವಾರಿ ಹಂಚಿಕೆಯಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ನೂತನ ಸಚಿವರಿಗೆ ಯಾವ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
 
ಗೋವಿಂದ ಕಾರಜೋಳ- ಬೆಳಗಾವಿ
ಕೆ.ಎಸ್. ಈಶ್ವರಪ್ಪ -ಶಿವಮೊಗ್ಗ
ಆರ್.ಅಶೋಕ್ – ಬೆಂಗಳೂರು ನಗರ
ಡಾ. ಅಶ್ವಥ್ ನಾರಾಯಣ – ರಾಮನಗರ
ಬಿ.ಶ್ರೀರಾಮುಲು – ಚಿತ್ರದುರ್ಗ
ವಿ. ಸೋಮಣ್ಣ – ರಾಯಚೂರು
ಜೆ. ಸಿ. ಮಾಧುಸ್ವಾಮಿ -ತುಮಕೂರು
ಸಿ.ಸಿ. ಪಾಟೀಲ್ -ಗದಗ
ಪ್ರಭು ಚವಾಣ – ಬೀದರ್
ಆನಂದ್ ಸಿಂಗ್ – ಬಳ್ಳಾರಿ, ವಿಜಯನಗರ
ಕೆ. ಗೋಪಾಲಯ್ಯ – ಹಾಸನ
ಬೈರತಿ ಬಸವರಾಜ -ದಾವಣಗೆರೆ
ಎಸ್.ಟಿ. ಸೋಮಶೇಖರ – ಮೈಸೂರು-ಚಾಮರಾಜನಗರ

ಬಿ.ಸಿ. ಪಾಟೀಲ್ -ಹಾವೇರಿ
ಕೆ.ಸುಧಾಕರ್- ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣಗೌಡ- ಮಂಡ್ಯ
ಶಿವರಾಮ ಹೆಬ್ಬಾರ್-ಉತ್ತರ ಕನ್ನಡ
ಉಮೇಶ್ ಕತ್ತಿ -ಬಾಗಲಕೋಟೆ
ಎಸ್.ಅಂಗಾರ-ದಕ್ಷಿಣ ಕನ್ನಡ
ಮುರುಗೇಶ್ ನಿರಾಣಿ- ಕಲಬುರ್ಗಿ
ಎಂಟಿಬಿ ನಾಗರಾಜ- ಬೆಂಗಳೂರು ಗ್ರಾಮಾಂತರ

ಕೋಟ ಶ್ರೀನಿವಾಸ ಪೂಜಾರಿ- ಕೊಡಗು
ಶಶಿಕಲಾ ಜೊಲ್ಲೆ-ವಿಜಯಪುರ
ವಿ.ಸುನಿಲ್ ಕುಮಾರ್-ಉಡುಪಿ
ಹಾಲಪ್ಪ ಆಚಾರ್-ಕೊಪ್ಪಳ
ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
ಬಿ.ಸಿ. ನಾಗೇಶ್ -ಯಾದಗಿರಿ
ಮುನಿರತ್ನ-ಕೋಲಾರ

29 ಸಚಿವರ ಪ್ರಮಾಣ ವಚನ

  • ಈ ಬಾರಿ ಡಿಸಿಎಂ ಹುದ್ದೆ ಇಲ್ಲ
  • ವಿಜಯೇಂದ್ರಗಿಲ್ಲ ಅವಕಾಶ, ಸುರೇಶಕುಮಾರ, ಅರವಿಂದ ಲಿಂಬಾವಳಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಕೋಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಹುನಿರೀಕ್ಷೆಯಲ್ಲಿದ್ದ ನೂತನ ಸಚಿವ ಸಂಪುಟ ಘೋಷಣೆಯಾಗಿದ್ದು, ಒಟ್ಟು 29 ಜನರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 8 ಜನ ಲಿಂಗಾಯತರು, 3 ಜನ ದಲಿತರು, 7 ಜನ ಒಬಿಸಿ, ಒಬ್ಬರು ಎಸ್ಟಿ, ಒಬ್ಬರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿದ್ದ 23 ಸಚಿವರು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಿರಿಯ ಮುಖಂಡರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸುರೇಶಕುಮಾರ್, ಅರವಿಂದ ಲಿಂಬಾವಳಿಗೆ ಕೋಕ್ ನೀಡಲಾಗಿದ್ದು,
ಹೊಸ ಮುಖಗಳಾದ ನವಲಗುಂದ ಶಾಸಕ ಶಂಕರಗೌಡ ಮುನೇನಕೊಪ್ಪ, ಎಸ್‌. ಅಂಗಾರ, ಅರಗ ಜ್ಞಾನೇಂದ್ರ, ಆಚಾರ, ಸೇರಿ ಆರು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ.

ಮೂವರು ದಲಿತ, ಒಂದು ಎಸ್ಟಿ, ಎಂಟು ಜನ ಲಿಂಗಾಯತ, ಏಳು ಓಬಿಸಿ ಒಬ್ಬರು ಮಹಿಳೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.