Home Blog Page 3454

ಆತಂಕ ಮೂಡಿಸುತ್ತಿದೆ ಇಸ್ರೇಲ್, ಪ್ಯಾಲಿಸ್ತೈನ್ ಸಂಘರ್ಷ

ವಿಜಯಸಾಕ್ಷಿ ಸುದ್ದಿ, ಇಸ್ರೇಲ್

ಇಸ್ರೇಲ್ ಹಾಗೂ ಪ್ಯಾಲಿಸ್ತೈನ್ ನಡುವಿನ ಭಿನ್ನಾಭಿಪ್ರಾಯ ಭೀಕರ ಸ್ವರೂಪ ಪಡೆದಿದೆ.
ಎರಡೂ ರಾಷ್ಟ್ರಗಳು ಸದ್ಯ ಪರಸ್ಪರರ ಮೇಲೆ ರಾಕೆಟ್ ದಾಳಿ ನಡೆಸುತ್ತಿವೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 32 ಜನ ಪ್ಯಾಲಿಸ್ತೈನ್ ನಾಗರಿಕರು ಸಾವನ್ನಪ್ಪಿದ್ದಾರೆ.

ಅಲ್ಲದೇ, ಈ ಘಟನೆಯಲ್ಲಿ 220 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದೆ. ಗಾಜಾ ಬಳಿಯ ಬೀರ್‌ ಶೆಬಾದ ಬಳಿ ಭಾರೀ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಅಶ್ಕೆಲಾನ್, ಮೋದಿನ್ ಮತ್ತು ಟೆಲ್ ಅವೀವ್‌ ನಲ್ಲಿಯೂ ರಾಕೆಟ್ ದಾಳಿ ನಡೆದಿದೆ.

ಕೇಂದ್ರದ ತಾರತಮ್ಯ; ಮಾಜಿ ಸಿ ಎಮ್ ಎಚ್ಡಿಕೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡಿಗರೇನು ತಬ್ಬಲಿಗಳಾ? ಕನ್ನಡಿಗರು ಏನು ಅನ್ಯಾಯ ಮಾಡಿದ್ದಾರೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 120 ಮೆಟ್ರಿಕ್ ಟನ್ ನಷ್ಟು ಕಳಹಿಸುತ್ತಿದೆ. ಆದರೆ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅಥವಾ ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಎಂದು ಗುಡುಗಿದ್ದಾರೆ.

ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆ ಹೊರುವರೇ? ಎಂದು ಪ್ರಶ್ನಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪ; ತಂದೆಯ ಸಾವಿಗೆ ಪ್ರತೀಕಾರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಲ್ಲಿಯ ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮಕ್ಕಳು ಐಸಿಯು ವಾರ್ಡ್‌ ನಲ್ಲಿದ್ದ ಸುಮಾರು ರೂ. 4 ಲಕ್ಷ ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಿವೃತ್ತರಾಗಿದ್ದ 61 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳವಾರ ರೈಲ್ವೆ ಆಸ್ಪತ್ರೆಯ ಐಸಿಯು ವಾರ್ಡ್‌ ಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಂದೆಯ ಸಾವಿನ ನೋವು ಜೀರ್ಣಿಸಿಕೊಳ್ಳಲಾಗದ ಅವರ ಪುತ್ರಿಯರು ಮತ್ತು ಕುಟುಂಬಸ್ಥರು ಐಸಿಯು ವಾರ್ಡ್ ಗೆ ನುಗ್ಗಿ ಆಕ್ಸಿಜನ್ ಯಂತ್ರ ಧ್ವಂಸ ಮಾಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ದು, ತಂದೆ ಸಾವಿನ ವಿಚಾರವಾಗಿ ಹೆಣ್ಣು ಮಕ್ಕಳಿಬ್ಬರೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಜಗಳ ಮಾಡಿದ್ದರು ಎಂದು ತಿಳಿದು ಬಂದಿದೆ.

ಮೂಗಿನ ಮೂಲಕ ಆಮ್ಲಜನಕ ಸರಬರಾಜು ಮಾಡುವ ಹೈ ಫ್ಲೋ ಆಕ್ಸಿಜನ್ ಉಪಕರಣವನ್ನು ಧ್ವಂಸ ಮಾಡಿದ್ದಾರೆ. ಇದರ ಬೆಲೆ ಸುಮಾರು ರೂ. 4 ಲಕ್ಷ ಎಂದು ಹೇಳಲಾಗಿದೆ.

ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲಿನ್ ಚಿಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಚಾಮರಾಜನಗರ ಆಸ್ಪತ್ರೆಯಲ್ಲಿ ಮೇ 2 ರಂದು 24 ರೋಗಿಗಳ ಸಾವಿಗೀಡಾಗಿರುವುದಕ್ಕೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.

ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವಿಗೀಡಾಗಿದ್ದರೂ, ಅಲ್ಲಿಯ ವೈದ್ಯರು ಮಾತ್ರ ಕೇವಲ ಮೂವರು ಸೋಂಕಿತರು ಮಾತ್ರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಇದೀಗ ಸಮಿತಿಯು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, ಚಾಮರಾಜನಗರದ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರ ನಿರ್ಲಕ್ಷ್ಯದಿಂದ ಆಕ್ಸಿಜನ್ ಕೊರತೆಯುಂಟಾಗಿ 24 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದೆ. ಇನ್ನೂ ಮೈಸೂರು ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಅವರ ಮೇಲೂ ಆರೋಪಗಳು ಕೇಳಿಬಂದಿದ್ದರೂ ಕ್ಲೀನ್ ಚಿಟ್ ನೀಡಲಾಗಿದೆ.

24 ಜನರ ಕೊಲೆಗೆ ಕಾರಣವಾದ ಸರ್ಕಾರ – ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದಲ್ಲಿ ಸಾವನ್ನಪ್ಪಿರುವ 24 ಜನರ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಾಮಾರಿಯಿಂದಾಗಿ ಕಂಗಾಲಾಗಿದ್ದಾರೆ. ಸದ್ಯದ ಈ ಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ.ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಜನರ ಕೊಲೆಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಸಾವಿನ ಹೊಣೆ ಯಾರು ಹೊತ್ತಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ವಿಷಯವಾಗಿ ಮಿಸ್ ಗೈಡ್ ಮಾಡುವ ಕಾರ್ಯ ಮಾಡುತ್ತಿದೆ. 24 ಜನ ಸತ್ತಿದ್ದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ನ್ಯಾಯಮೂರ್ತಿಗಳೇ ಗರಂ ಆಗಿದ್ದಾರೆ.

ಜನ ಬೀದಿಗೆ ಬಂದಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಪ್ರತಿ ಬಡ ಕುಟುಂಬಕ್ಕೆ ರೂ. 10 ಸಾವಿರ ಆರ್ಥಿಕ ನೆರವು ಘೋಷಿಸಬೇಕು. ಬ್ಯಾಂಕ್ ಗಳ ಸಭೆ ಕರೆಯಬೇಕು. ಇಎಂಐ ಹಾಗೂ ಬಡ್ಡಿ ವಿಚಾರದಲ್ಲಿ ಬ್ಯಾಂಕ್ ಗಳ ಜೊತೆ ಮಾತನಾಡಿ, ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಸಿಕೆ ಅಭಾವ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೋವಿಡ್ ಲಸಿಕೆಯ ಅಭಾವದಿಂದ ಜನರು ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಲಸಿಕೆ ಪೂರೈಸಲಾಗದ ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ. ‘ನಿಮ್ಮಿಂದ ವ್ಯಾಕ್ಸಿನ್ ನೀಡಲು ಸಾಧ್ಯವೇ ಇಲ್ಲ ಎಂದಾದರೆ ಹೇಳಿ ನಾವು ಸರ್ಕಾರದಿಂದ ವ್ಯಾಕ್ಸಿನ್ ಒದಗಿಸಲಾಗದು’ ಎಂದೇ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದೆ.

ಲಸಿಕೆ ಪಡೆದರೆ ಕೊರೊನಾದಿಂದ ಪ್ರಾಣ ಉಳಿಸಿಕೊಳ್ಳಬಹುದು ಇದೀಗ ಸಾಕಷ್ಟು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಳಿದವರ ಜೀವರಕ್ಷಿಸಲಾದರೂ ಸರ್ಕಾರ ಲಸಿಕೆ ನೀಡಬೇಕಿದೆ. ಕರ್ನಾಟಕದ ಜನಸಂಖ್ಯೆ 6 ಕೋಟಿಗೂ ಅಧಿಕವಾಗಿದ್ದು, ಈವರೆಗೆ ಒಂದೇಒಂದು ಪರ್ಸ್ಂಟ್ ನಷ್ಟು ಜನರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ ವೆಂದರೆ ಇದೆಂತಹ ವ್ಯಾಕ್ಸಿನ್ ಅಭಿಯಾನ, ಇದೆಂತಹ ಲಸಿಕಾ ಉತ್ಸವ ಎಂದು ಕ್ಲಾಸ್ ತಗೆದುಕೊಂಡಿದೆ.

ಮೊದಲ ಡೋಸ್ ಲಸಿಕೆ ಪಡೆಯುವವರ ಕಥೆ ಬಿಡಿ, ಎರಡನೇ ಡೋಸ್ ಲಸಿಕೆ ಪಡೆಯವವರಿಗೂ ಲಸಿಕೆ ಸಿಗುತ್ತಿಲ್ಲವೆಂದರೆ ಹೇಗೆ..? 2 ನೇ ಡೋಸ್ ಪಡೆಯುವುದು ಅವರ ಹಕ್ಕಲ್ಲವೇ? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದ್ದು, ಈ ಗ್ಯಾಪ್ ನ್ನು ನೀವು ಹೇಗೆ ಸರಿಪಡಿಸುತ್ತೀರಿ? ಇದೇ ರೀತಿ ಮುಂದುವರೆದರೆ, ಎರಡೇ ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತೆ ಆದೇಶ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರಗಳ ಕಾಲಾವಕಾಶವಿದೆ. ವ್ಯಾಕ್ಸಿನ್ ನೀಡುವುದು ವಿಳಂಬವಾದರೂ 1ನೇ ಡೋಸ್ ವ್ಯರ್ಥವಾಗಲ್ಲ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ ಉತ್ತರ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ ಮುಂದುವರೆದ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಸದ್ಯದ ಲಾಕ್ ಡೌನ್ ನ್ನು ಜೂ. 1ರ ವರೆಗೆ ವಿಸ್ತರಿಸಿದೆ.
ಮಹಾರಾಷ್ಟ್ರಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ನೆಗೆಟಿವ್ ಆರ್ ಟಿ-ಪಿಸಿಆರ್ ವರದಿ ತೋರಿಸಬೇಕು. ಈ ಹಿಂದೆ ಕೊರೊನಾ ಪ್ರಕರಣ ಹೆಚ್ಚಾಗಿರುವ ರಾಜ್ಯಗಳಿಂದ ಬರುವವರಿಗೆ ಮಾತ್ರ ಇದು ಕಡ್ಡಾಯವಾಗಿತ್ತು. ಆದರೆ ಇನ್ನು ಮುಂದೆ ದೇಶದ ಯಾವುದೇ ಭಾಗಗಳಿಂದ ಮಹಾರಾಷ್ಟ್ರ ಪ್ರವೇಶಿಸುವವರು ಕಡ್ಡಾಯವಾಗಿ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಒಯ್ಯಬೇಕು.

ಲಾಕ್ ಡೌನ್ ನಿರ್ಬಂಧ ನಿಯಮ ಜೂ. 1ರ ಬೆಳಿಗ್ಗೆ 7 ಗಂಟೆಯವರಿಗೆ ಅನ್ವಯವಾಗಲಿದೆ. ಅಲ್ಲಿನ ಹೊಸ ನಿಯಮದಲ್ಲಿ ಹಾಲು ಸಂಗ್ರಹ, ಸಾಗಾಟ ಮತ್ತು ಸಂಸ್ಕರಣೆಗೆ ಸಡಿಲವಿರುತ್ತದೆ. ಆದರೆ, ಇದರ ಚಿಲ್ಲರೆ ಮಾರಾಟಕ್ಕೆ ಸಮಯ ನಿಗದಿಯಿರುತ್ತದೆ.

ವಿಷ ಸೇವಿಸಿ ಯುವತಿ ಸಾವು: ಶವ ಸುಟ್ಟುಹಾಕಿ ಪ್ರಕರಣ ಮುಚ್ಚಿ ಹಾಕಲೆತ್ನಿಸಿದ 7 ಜನರ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ತಮ್ಮ ಮಗಳು ವಿಷಸೇವಿಸಿ ಮೃತಪಟ್ಟ ವಿಚಾರವನ್ನು ಬಹಿರಂಗಪಡಿಸದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಶವವನ್ನು ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ೭ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಗ್ರಾಮದ ಪೂಜಾ (೧೮) ಮೇ ೧೦ರಂದು ರಾತ್ರಿ ೧೦.೩೦ ಗಂಟೆಗೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದದ್ದಳು. ಆಕೆಯನ್ನು ತಂದೆ ಸುರೇಶ್, ಚಿಕ್ಕಪ್ಪರಾದ ಅಂಜಿನಪ್ಪ, ನಾಗರಾಜ, ಸಂಬಂಧಿಗಳಾದ ಭೀಮಪ್ಪ, ಹನುಮಂತ, ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾಳೆ.

ಅನಂತರ ಆರೋಪಿತರು ಈ ವಿಷಯವನ್ನು ರಾತ್ರಿ ೧೧.೩೦ ಗಂಟೆ ಸಮಯದಲ್ಲಿ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಪೂಜಾಳ ಮೃತ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ತಿಳಿಸದೆ, ತಮ್ಮ ಗ್ರಾಮದ ಕರೆಯ ಸಮೀಪ ಸ್ಮಶಾನದ ಬಳಿ ಸುಟ್ಟು ಹಾಕಿದ್ದಾರೆ. ಈ ಮಾಹಿತಿ ಆಧರಿಸಿ ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸೊನ್ನದ ರಾಜೇಂದ್ರ ಅವರು ದೂರು ಸಲ್ಲಿಸಿದ್ದಾರೆ. ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಹಲುವಾಗಲು ಸಬ್ ಇನ್‌ಸ್ಪೆಕ್ಟರ್ ಎಚ್.ಎಸ್.ಪ್ರಶಾಂತ ಅವರು ತನಿಖೆ ಕೈಗೊಂಡಿದ್ದಾರೆ.

ಸಾವಿನ ಹಿಂದೆ ಪ್ರೇಮಕಥೆ?

ಮೃತ ಯುವತಿ ಮತ್ತು ಅನ್ಯ ಕೋಮಿನ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಮದುವೆಯಾಗಲು ಮನೆಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ಇವರು ತಂಗಿದ್ದ ಸ್ಥಳವನ್ನು ಹುಡುಗಿಯ ಪಾಲಕರು ಪತ್ತೆ ಹಚ್ಚಿದ್ದಾರೆ. ಆಗ ಹುಡುಗ ಪ್ರಾಣ ಭಯದಿಂದ ತಲೆಮರೆಸಿಕೊಂಡಿದ್ದ. ಹುಡುಗಿಯ ಪಾಲಕರು, ಸಂಬಂಧಿಕರು ಆಕೆಯನ್ನು ಸ್ವ-ಗ್ರಾಮಕ್ಕೆ ಕರೆತಂದು ಬಲವಂತವಾಗಿ ವಿಷ ಉಣಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಗ್ರಾಮದಲ್ಲಿ ಹರಡಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬುಧವಾರವೂ ಸೋಂಕಿನ ಆರ್ಭಟ; 458 ಜನರಿಗೆ ಸೋಂಕು; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ನಿನ್ನೆ ಮತ್ತು ಇವತ್ತು ನಾಲ್ಕು ನೂರರ ಗಡಿ ದಾಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮೇ 12 ಬುಧವಾರ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 458 ಜನರಿಗೆ ಸೋಂಕು ತಗುಲಿದೆ. ನಾಲ್ವರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಇಂದು 458 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 15986 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -221, ಮುಂಡರಗಿ-71, ನರಗುಂದ-19, ರೋಣ-89, ಶಿರಹಟ್ಟಿ-44, ಹೊರಜಿಲ್ಲೆಯ-10 ಸೇರಿದಂತೆ 458 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಅಂತೆ ನಾಲ್ವರು ಮೃತಪಟ್ಟಿದ್ದಾರೆ.

ಮೃತ ನಾಲ್ವರು ಬೆಟಗೇರಿ ಭಾಗದ ನಿವಾಸಿಗಳು ಅನ್ನೋದು ಗಾಬರಿ ತರಿಸಿದೆ.

ಬೆಟಗೇರಿ ಭಾಗದ ನಿವಾಸಿ 69 ವರ್ಷ ವಯಸ್ಸಿನ ಮಹಿಳೆ, ಮೇ 06 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿಯ ನಿವಾಸಿ 60 ವರ್ಷದ ಮಹಿಳೆ ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿಯ 67 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿ ಭಾಗದ 75 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಮೇ 09 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
167 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 280 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13986 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1910 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 169 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹರ್ತಿ ಬಳಿ ಭೀಕರ ಅಪಘಾತ; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನೊಬ್ಬ ಗಾಯಗೊಂಡಿದ್ದು ಜಿಮ್ಸ್ ಗೆ ದಾಖಲಾಗಿದ್ದಾರೆ.

ಗದಗ ತಾಲೂಕಿನ ಹರ್ತಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಅರ್ಧ ಮರದಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ಮರದಡಿಯಲ್ಲಿಯೇ ಸಿಲುಕಿಕೊಂಡಿದ್ದಾನೆ. ಕಾರಲ್ಲಿದ್ದವರು ಹೊಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ನೆರದವರ ಕಣ್ಣಲ್ಲಿ ನೀರು ತರಿಸಿದೆ. ಕಾರಿನ ಕೆಲ ಪಾರ್ಟ್ಸ್ ತುಂಡು ತುಂಡಾಗಿ ಬಿದ್ದಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಗದಗ ತಾಲೂಕಿನ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುವಾಗ ಈ ದುರ್ಘಟನೆ ನೆಡದಿದೆ.

ಗಾಯಗೊಂಡ ಶಂಕ್ರಪ್ಪ ಎನ್ನುವಾತ ಗ್ರಾಮಸ್ಥರಿಗೆ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ವೀ ಅಂತ ಮಾಹಿತಿ ನೀಡಿದ್ದಾನೆ.

ಮೃತರು ನವಲಗುಂದ ತಾಲೂಕಿನ ಆರಟ್ಟಿ ಗ್ರಾಮಸ್ಥರು ಎನ್ನಲಾಗಿದೆ. ವೀರೇಶ(26), ಶೇಖಪ್ಪ(45), ಬಾಪೂಗೌಡ (25),ಸಾವಿತ್ರಿ(50) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದವರು.

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.

error: Content is protected !!