Home Blog Page 3487

ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ರೆಡ್ಡಿ ಬ್ರದರ್ಸ್!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ಯ ಜೋರಾಗಿದೆ. ಹಲವರು ಸಿಎಂ ಪರ ಮಾತನಾಡುತ್ತಿದ್ದರೆ ಇನ್ನೂ ಹಲವರು ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ.
ಸದ್ಯ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನಾಯಕತ್ವ ಬದಲಾವಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವುದು ಒಳ್ಳೆಯ ಬದಲಾವಣೆ ಅಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೇಕಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯದ ಜನತೆ ಕೊರೊನಾ ಕಾಲದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡಬೇಕು. ನನಗೂ ಬಳ್ಳಾರಿಯಲ್ಲಿ ಬಹಳ ಕೆಲಸ ಇವೆ. ಹೀಗಾಗಿ ನಾನು ಅರುಣ್ ಸಿಂಗ್ ಅವರ ಸಭೆಗೆ ಹೋಗುವುದಿಲ್ಲ. ನಾನು ಮೊದಲಿನಿಂದಲೂ ಯಡಿಯೂರಪ್ಪನವರ ಬೆಂಬಲಕ್ಕೆ ಇದ್ದೇನೆ. ನಾನು ಯಾವುದೇ ಸಚಿವ ಆಕಾಂಕ್ಷಿಯಲ್ಲ. ದೇವರು ಹಣೆ ಬರಹದಲ್ಲಿ ಬರೆದಿರುವುದೇ ನಡೆಯುತ್ತದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕಿದೆ. ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಜೊತೆಗೆ ಡಿಸಿಎಂ ಮಾಡಬೇಕು. ಬಳ್ಳಾರಿ ವಿಭಜನೆಯಿಂದ ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜಿಲ್ಲಾ ವಿಭಜನೆಯೇ ಕಾರಣ ಎಂದು ಹೇಳಿದ್ದಾರೆ.

ಕೋವಿಡ್ ಗೆ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಬಲಿ!

0

ವಿಜಯಸಾಕ್ಷಿ ಸುದ್ದಿ, ಹಾವೇರಿ

ಮಹಾಮಾರಿಗೆ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಬಲಿಯಾಗಿರುವ ಘಟನೆ ನಡೆದಿದೆ. ಅನಿತಾ (43) ಕೋವಿಡ್ ಗೆ ಬಲಿಯಾದ ತಾಲೂಕು ಅಧಿಕಾರಿಯಾಗಿದ್ದಾರೆ. ಮೃತ ಅನಿತಾ ಅವರು ತಾಲೂಕಿನ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅನಿತಾ ಅವರು ಕಳೆದ ಕೆಲವು ದಿನಗಳಿಂದ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿಯೇ ಸಾವನ್ನಪ್ಪಿದ್ದಾರೆ. ಇವರು ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ ಮಾಹಿತಿ ನೀಡಿದ್ದಾರೆ.

ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪ್ – ಗಂಭೀರ ಆರೋಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣರಾಗಿರುವ ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿವೆ. ಇದರ ಮಧ್ಯೆ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ, ನಾನು ಸ್ವಾಮಿ ಅಂತಾ ಹೇಳಿದರು. ಯಾವ ಸ್ವಾಮೀಜಿ ಅಂದರೆ ಯುವ ರಾಜಸ್ವಾಮೀಜಿ ಅಂದರು. ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದ್ದರು ಎಂದು ಹೇಳಿದ್ದಾರೆ.

ನಾನು ಯುವರಾಜ ಸ್ವಾಮಿ ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಈ ಕಾಲ್ ಹಿಂದೆ ಸಾಕಷ್ಟು ಷಡ್ಯಂತ್ರ ಅಡಗಿವೆ ಎಂದು ಗುಡುಗಿದ್ದಾರೆ.
ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ 5 ಬಾರಿ ಶಾಸಕರಾಗಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಪ್ರಾಮಾಣಿಕ ಕಾರ್ಯವನ್ನು ಅವರು ಮಾಡಿದ್ದಾರೆ. ನಾನು ಕೂಡ ತಂದೆಯ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ. ನನ್ನ ಫೋನ್ ಕೂಡ ಟ್ಯಾಪ್ ಆಗಿದೆ. ಈ ಕುರಿತು ಸ್ಪೀಕರ್ ಹಾಗೂ ಗೃಹ ಸಚಿವರಿಗೆ, ಡಿಜಿಗೆ ಪತ್ರ ನೀಡಿದ್ದೇನೆ ಎಂದು ಹೇಳಿದ್ದಾರೆ.

ಜೈಲಿನಲ್ಲಿದ್ದ ಮನುಷ್ಯನಿಗೆ ಯಾರು ಫೋನ್ ನೀಡಿದ್ದಾರೆ? ಅದರ ಕುರಿತು ತನಿಖೆಯಾಗಬೇಕು. ನಾನು ಹೋದ ಪ್ರದೇಶದಲ್ಲಿ ಒಂದಿಷ್ಟು ಹೊಸ ಜನ ಬರುತ್ತಾರೆ. ನಾನು ಎಲ್ಲಿ ಹೋಗುತ್ತೇನೆ? ಏನು ಮಾಡುತ್ತೇನೆ ಎಂದು ವಾಚ್ ಮಾಡುತ್ತಿದ್ದಾರೆ. ಹೀಗಾಗಿಯೇ ನನ್ನ ಫೋನ್ ಕೂಡ ಟ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನನ್ನ ಪೋನ್ ಟ್ಯಾಪ್ ಆಗುತ್ತಿದೆ. ಈ ಸಂಗತಿ ತನಿಖೆಯಿಂದಲೇ ತಿಳಿಯಬೇಕು ಎಂದು ಹೇಳಿದ್ದಾರೆ.

ಸತತ ಸುರಿಯುತ್ತಿರುವ ಮಳೆಗೆ ಓರ್ವ ಸಾವು!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಜಗದೀಶ ನಗರದ ಶಂಕರಪ್ಪ ಕಟ್ಟಿಮನಿ (45) ಎಂದು ಗುರುತಿಸಲಾಗಿದೆ.‌

ಕೂಲಿ ಕಾರ್ಮಿಕರಾಗಿದ್ದ ಶಂಕರಪ್ಪ, ನಿನ್ನೆ ಮಧ್ಯಾಹ್ನದ ವೇಳೆ ಮನೆ ಸಮೀಪದ ರೇಣುಕಾ ದೇವಸ್ಥಾನ ಎದುರಿಗೆ ಇರುವ ನಾಲೆಗೆ ಕಸ ಎಸೆಯಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಆಯತಪ್ಪಿ ನಾಲೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳೀಯರ ನೆರವಿನಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. 3 ಗಂಟೆ ಸುಮಾರಿಗೆ ಹೆಗ್ಗೇರಿ ಸ್ಮಶಾನದ ಬಳಿ ಇರುವ ರಸ್ತೆ ಸೇತುವೆ ಬಳಿ ಹತ್ತಿರ ಮೃತ ಸ್ಥಿತಿಯಲ್ಲಿ ಶಂಕರಪ್ಪ ಪತ್ತೆಯಾಗಿದ್ದಾರೆ.

ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಜೋರಾಗಿದ್ದರಿಂದ ಸೇತುವೆ ತನಕ ಕೊಚ್ಚಿಕೊಂಡು ಹೋಗಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದ್ದಾರೆ. ಶಂಕರಪ್ಪ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ, ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇಂದಿನ ಸಭೆಯೇ ಸಾಕ್ಷಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಭುಗಿಲೆದ್ದಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕ ಆಗಮಿಸಿದ್ದಾರೆ. ಹೀಗಾಗಿ ನಿನ್ನೆಗಿಂತಲೂ ಸದ್ಯ ಬಂಡಾಯದ ಬಿಸಿ ಹೆಚ್ಚಾಗಿದೆ. ಅನೇಕ ಶಾಸಕರು ಅರುಣ್ ಸಿಂಗ್ ಅವರನ್ನು ಇಂದು ಭೇಟಿ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಸಿಎಂ ಬದಲಾವಣೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಸಭೆಯನ್ನು ವರ್ಗಾಯಿಸಿದ್ದಾರೆ. ಸಭೆ ಇಂದು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಯುವುದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅರುಣ್ ಸಿಂಗ್ ಸಭೆಯನ್ನು ಬಿಜೆಪಿ ಕಚೇರಿಗೆ ಸ್ಥಳಾಂತರಿಸಿದ್ದಾರೆ.

ಶಾಸಕರು ನನ್ನನ್ನು ಭೇಟಿ ಮಾಡುವುದಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷರ ಮುಂದೆಯೇ ಭೇಟಿ ಮಾಡಬೇಕು ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಇಂದು ಬಿಜೆಪಿಯ ಸಂಸದರು, ಶಾಸಕರು, ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.

ಶಾಸಕ ರೇಣುಕಾಚಾರ್ಯ ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೇ, ಅರುಣ್ ಸಿಂಗ್ ಅವರ ಭೇಟಿಗಾಗಿ ಕಾಯುತ್ತಿದ್ದಾರೆ. ಇನ್ನು ಪಕ್ಷದ ವಿರುದ್ಧ ಈಗಾಗಲೇ ಅಸಮಾಧಾನಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ವಿರುದ್ಧ ಅರುಣ್ ಸಿಂಗ್ ಗೆ ದೂರು ನೀಡಲೂ ಕೆಲವು ಶಾಸಕರು ಸಿದ್ಧರಾಗಿದ್ದಾರೆ. ಅಲ್ಲದೇ, ಸಿಎಂ ವಿರುದ್ಧ ಹೇಳಲು ಹಲವು ಶಾಸಕರು ಸಿದ್ಧರಾಗಿದ್ದಾರೆ. ಬಿಜೆಪಿಯಲ್ಲಿನ ಬಂಡಾಯ ಜನರ ಮುಂದೆ ತೆರೆದುಕೊಳ್ಳುತ್ತಿದೆ. ಹೀಗಾಗಿ ರಾಜ್ಯದ ಜನತೆ ಬಿಜೆಪಿಯಲ್ಲಿನ ಬಂಡಾಯವನ್ನು ನೋಡುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕಾದಾಟಕ್ಕೆ ಒಂದೇ ದಿನ ಬಾಕಿ!

ವಿಜಯಸಾಕ್ಷಿ ಸುದ್ದಿ, ಸೌಥಾಂಪ್ಟನ್

ಐತಿಹಾಸಿಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಾರಂಭವಾಗಲು ಇನ್ನೂ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಹೀಗಾಗಿ ಎಲ್ಲರ ಚಿತ್ತ ನಾಳೆಯ ಪಂದ್ಯದತ್ತ ಎನ್ನುವಂತಾಗಿದೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡ ಎಂದೇ ಬಹುತೇಕರು ಭವಿಷ್ಯ ನುಡಿಯುತ್ತಿದ್ದಾರೆ.

ಸುಮಾರು ದಶಕಗಳ ನಂತರ ಟೆಸ್ಟ್ ಪಂದ್ಯವೊಂದು ತಟಸ್ಥ ಮೈದಾನದಲ್ಲಿ ನಡೆಯುತ್ತಿದೆ. ಉಭಯ ತಂಡಗಳು ತಾಯ್ನೆಲ ತೊರೆದು ಬೇರೊಂದು ದೇಶದ ಮೈದಾನದಲ್ಲಿ ಕಾದಾಡುತ್ತಿವೆ. ನಾಳೆಯಿಂದ ಪಂದ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಈಗಾಗಲೇ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳು ಕೂಡ ಜೋರಾಗುತ್ತಿವೆ.

ಇದುವರೆಗೂ ಏಳು ಬಾರಿ ತಟಸ್ಥ ಮೈದಾನದಲ್ಲಿ ತಂಡಗಳು ಸೆಣಸಾಟ ನಡೆಸಿವೆ. ಏಳು ಬಾರಿಯೂ ವಿವಿಧ ರಾಷ್ಟ್ರಗಳಲ್ಲಿ ಎರಡೂ ರಾಷ್ಟ್ರಗಳು ಕ್ರಿಕೆಟ್ ಆಡಿವೆ. ಏಳರಲ್ಲಿ ಒಂದೇ ಒಂದು ಬಾರಿ ನ್ಯೂಜಿಲ್ಯಾಂಡ್ ತಂಡ ಸೋತಿದೆ. ಅಷ್ಟರ ಮಟ್ಟಿಗೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ ಸಾಧಿಸಿದೆ.

2003 ವಿಶ್ವ ಕಪ್ ಪಂದ್ಯವೊಂದರಲ್ಲಿ ಮಾತ್ರವೇ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದೆ. ಸದ್ಯ 8ನೇ ಬಾರಿ ಬೇರೊಂದು ದೇಶದ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು ಎದುರಿಸುತ್ತಿದೆ. ಅದೂ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಕಾದಾಡುತ್ತಿವೆ.

ನ್ಯೂಜಿಲ್ಯಾಂಡ್ ತಂಡ ಹೀಗೆ ಭಾರತ ತಂಡದ ವಿರುದ್ಧ ಪ್ರಾಬಲ್ಯ ತೋರಿಸಿರುವುದು ಟೆಸ್ಟ್ ನಲ್ಲಿ ಅಲ್ಲ. ಆ ಏಳೂ ಅಂತಾರಾಷ್ಟ್ರೀಯ ಪಂದ್ಯಗಳು ಬೇರೆ ಬೇರೆ ಮಾದರಿಯ ಕ್ರಿಕೆಟ್ ಆಟದ್ದಾಗಿವೆ. ಈ ಬಾರಿಯ ತಟಸ್ಥ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಕುತೂಹಲಕ್ಕೆ ಕಾರಣವಾಗಿದೆ. ಭಾರತ ತಂಡದ ಈಗಿನ ಫಾರಂ ಮತ್ತು ಆಟಗಾರರಲ್ಲಿರುವ ಆತ್ಮವಿಶ್ವಾಸ ನೋಡಿದರೆ ನಮ್ಮ ತಂಡವೇ ಫೇವರೀಟ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏನೇ ಆಗಲಿ ಭಾರತ ಗೆದ್ದು ಬರಲಿ. ಆಲ್ ದಿ ಬೆಸ್ಟ್ ಇಂಡಿಯಾ…

ಕೊರೊನಾ ಸೋಂಕಿಗೆ ಒಳಗಾದರೂ ಜನರ ಈ ಹರಿಕಾರ ಬಿಡುತ್ತಿಲ್ಲ ಮಾನವೀಯ ಸೇವೆ!

ರಾಜು ದಖನಿ, ಹುಬ್ಬಳ್ಳಿ

ಜನಾಶೀರ್ವಾದ ನನ್ನ ಮೇಲಿರುವಾಗ ಯಾವ ಮಹಾಮಾರಿಗೂ ಅಂಜದೆ ಜನ ಸೇವೆಗೆ ಮುಂದಾಗುತ್ತೇನೆ ಎಂದು ಪಾಲಿಕೆಯ ಮಾಜಿ ಮಹಾಪೌರ ಹಾಗೂ ಧಾರವಾಡ ಜಿಲ್ಲಾ ಗ್ರಾಮಿಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಹೇಳಿದ್ದಾರೆ. ಅವರು, ಕೊವೀಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಅವರ ಆರೋಗ್ಯವನ್ನು ಸ್ವಲ್ಪ ಏರು ಪೇರು ಮಾಡಿತ್ತು. ಆದರೆ, ಕಳೆದ ಎರಡು ದಿನಗಳಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಹೊಂ ಐಸೋಲೆಷನ್ ಗೆ ಒಳಗಾಗಿದ್ದಾರೆ.

ವೈದ್ಯರ ಸೂಕ್ತ ಚಿಕಿತ್ಸೆ ಹಾಗೂ ಜನರ ಪ್ರೀತಿ ವಿಶ್ವಾಸವೇ ನನ್ನನ್ನು ಗುಣಮುಖವಾಗುವಂತೆ ಮಾಡಿದೆ. ಜನರ ಆ ಪ್ರೀತಿ ನನ್ನನ್ನು ಬೇಗ ಗುಣಮುಖನಾಗುವಂತೆ ಮಾಡಿದೆ ಎಂದು ಅನಿಲ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವಳಿ ನಗರದ ಸಿಕ್ಸ್ ಪ್ಯಾಕ್ ರಾಜಕಾರಣಿ ಹಾಗೂ ಖ್ಯಾತ ಸಂಗೀತಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಅವರು ಕೆಲ ನಾಯಕರಂತೆ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬದಲಾಗಿ ಜನ ಸೇವೆ ಮಾಡಲು ಪ್ರಾರಂಭಿಸಿದ್ದರು.

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು, ಹಗಲಿರುಳು ಜನ ಸೇವೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಮೆರೆದು ಉಚಿತ ಆಂಬುಲೆನ್ಸ್, ಊಟದ ವ್ಯವಸ್ಥೆ ಹಾಗೂ ಆಹಾರ ಕಿಟ್ ಗಳನ್ನು ಬಡವರಿಗೆ ಹಂಚಿದ್ದಾರೆ. ಕೈಲಾದವರ ಬೆನ್ನಿಗೆ ನಿಂತು ಲಾಕ್ ಡೌನ್ ನಲ್ಲಿ ನಗುಮುಖದ ಬದುಕು ಸಾಗಿಸುವಂತೆ ಮಾಡಿದ್ದಾರೆ.

ಒಬ್ಬ ರಾಜಕಾರಣಿ ಮಾಡಬೇಕಾಗಿದ್ದ ಕಾರ್ಯಕ್ಕಿಂತಲೂ ಹೆಚ್ಚನದನ್ನು ಅವರು ಮಾಡಿದ್ದಾರೆ. ಒಬ್ಬ ನಿಜವಾದ ರಾಜಕಾರಣಿಯಂತೆ ಜನರ ನೋವಿಗೆ ಸ್ಪಂದಿಸಿದ್ದಾರೆ. ನಾನಿದ್ದೇನೆ ನೀವು ಭಯಪಡಬೇಡಿ ಎಂಬ ಅವರ ಮಾತುಗಳು ಹಲವಾರು ಬಡ ಕುಟುಂಬಗಳ ಆತ್ಮವಿಶ್ವಾಸ ಹೆಚ್ಚಿಸಿದೆ.

ಜನರ ಸೇವೆಗೆಗಾಗಿ ಅನಿಲ್ ಕುಮಾರ್, ಆಂಬುಲೆನ್ಸ್ ವಾಹನ ಇಟ್ಟಿದ್ದಾರೆ. ಯಾರೇ ಕರೆ ಮಾಡಲಿ ತತ್ ಕ್ಷಣವೇ ಅಲ್ಲಿಗೆ ಹೋಗಿ ನಿಲ್ಲುತ್ತಾರೆ. ಎಷ್ಟೇ ದೂರವಿರಲಿ, ಯಾವುದೇ ಆಸ್ಪತ್ರೆಯಿರಲಿ ಹಿಂದೆ ನಿಂತು ಅಗತ್ಯ ಸೇವೆ ಒದಿಗಿಸಿದ್ದಾರೆ. ಹೀಗೆ ನೂರಾರು ಜೀವಗಳನ್ನು ಅನಿಲ್ ಕುಮಾರ್ ಅವರ ಮಾನವೀಯ ಕಾರ್ಯ ಉಳಿಸಿದೆ ಎಂದರೆ ತಪ್ಪಾಗಲಾರದು ಎಂದು ಜನರು ಮೆಚ್ಚುಗೆ ಮಾತುಗಳನ್ನು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಅಬ್ಬರಿಸಲಿದ್ದಾನೆ ಮಳೆರಾಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಇನ್ನೂ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಲೆನಾಡಿನಲ್ಲಂತೂ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಇದೇ ರೀತಿ ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದ್ದು ಜೂ. 17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂ. 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಸಮಯದಲ್ಲಿ ಶಿವಮೊಗ್ಗ , ಕೊಡಗು, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕರ್ನಾಟಕ ಪ್ರದೇಶದಲ್ಲಿ ಕೂಡ ಇಂದು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯ ಆರ್ಭಟ ಮುಂದುವರೆಯಲಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಕರಾವಳಿ ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇನ್ನೆರಡು ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನ – ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವು!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಲ್ಲಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ನಡೆದಿತ್ತು. ಆದರೆ, ಆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಆಂಬುಲೆನ್ಸ್‌ ಚಾಲಕನೊಬ್ಬ ಯುವತಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ನಗರದ ಫಿಲ್ಟರ್ ಬೆಡ್ ನಿವಾಸಿ ಪ್ರೇಮಕುಮಾರ ಅಲಿಯಾಸ್ ಪಿಂಟು (25) ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ.

ಯುವತಿ ಮಲಗಿರುವ ವೇಳೆ ಪಿಂಟು, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಸುತ್ತಮುತ್ತಲಿನ ಬೆಡ್‌ ಗಳಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಆತನನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಪ್ರೇಮಕುಮಾರ ಪರಾರಾಯಾಗಿದ್ದ. ಬ್ರಹ್ಮಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಪ್ರಯೋಗ; ವ್ಯಾಕ್ಸಿನೇಷನ್ ಬಸ್ ಗೆ ಚಾಲನೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ವ್ಯಾಕ್ಸಿನೇಷನ್‌ ಗೆ ಜಿಲ್ಲಾಡಳಿತ ಮುಂದಾಗಿದೆ.

ಮೊಬೈಲ್ ವ್ಯಾಕ್ಸಿನೇಷನ್‌ ಗಾಗಿಯೇ ಎರಡು ಸಾರಿಗೆ ಬಸ್ ಗಳನ್ನು ಸಿದ್ದಪಡಿಸಿದ್ದು, ವ್ಯಾಕ್ಸಿನ್ ಬಸ್ ಗೆ ಚಾಲನೆ ಸಿಕ್ಕಿದೆ. ಎನ್ ಇಕೆಎಸ್ ಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಈ ವಿಶೇಷ ಮೊವೈಲ್ ವ್ಯಾಕ್ಸಿನ್ ಬಸ್ ಗೆ ಚಾಲನೆ ನೀಡಿದ್ದಾರೆ.

ಬಸ್ ನಲ್ಲಿ ನೋಂದಣಿ, ಲಸಿಕೆ ಹಾಕುವ ಹಾಗೂ ನಿಗಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ವ್ಯಾಕ್ಸಿನ್ ಬಸ್ ನಲ್ಲಿ ಆರು ಜನ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನೇಷನ್‌ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಬಸ್ ಇಂದಿನಿಂದ ಅಫಜಲಪುರ, ಆಳಂದ ತಾಲೂಕಿನ ಹಳ್ಳಿಗಳಲ್ಲಿ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚರಿಸಲಿದೆ. ಈ ವ್ಯಾಕ್ಸಿನ್ ಬಸ್ ಮೂಲಕ ಗ್ರಾಮೀಣ ಭಾಗದಲ್ಲಿ ಲಸಿಕೆ ಆರಂಭವಾಗಲಿದೆ. ಆ ನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚಾರ ಮಾಡಿ ಜನರಿಕೆ ಲಸಿಕೆ ವಿತರಣೆ ಮಾಡಲಿದೆ.

ಈ ಬಸ್ ಮೂಲಕ ಶೇ. 100ರಷ್ಟು ವ್ಯಾಕ್ಸಿನೇಷನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಇದ್ದು ರಾಜ್ಯದಲ್ಲಿಯೇ ಕಲಬುರಗಿಯಲ್ಲಿ ಹೊಸ ಪ್ರಯತ್ನ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋರಿಕೆ ಮೇರೆಗೆ ಆಸ್ಪತ್ರೆ ಮಾದರಿಯಲ್ಲಿಯೇ ವಿಶೇಷ ವಿನ್ಯಾಸದ ಎರಡು ಬಸ್ ಸಿದ್ದಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗ.