Home Blog Page 38

ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ: ರೈತರಿಗೆ ಶಾಸಕ ಡಾ. ಚಂದ್ರು ಲಮಾಣಿ ಹೊಸ ಸಂದೇಶ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಚಯಿಸಿರುವ ನ್ಯಾನೋ ಯೂರಿಯಾ ಗೊಬ್ಬರದ ಸಮರ್ಪಕ ಬಳಕೆಯಿಂದ ರೈತರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಸೂರಣಗಿ ಗ್ರಾಮದ ವಿಎಸ್‌ಎಸ್ ಬ್ಯಾಂಕ್ ವತಿಯಿಂದ ರೈತ ಬಸವರಾಜ ಸಾಸಲವಾಡ ಅವರ ಜೋಳದ ಹೊಲದಲ್ಲಿ ಆಯೋಜಿಸಿದ್ದ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾವನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಕಡಿಮೆ ಪ್ರಮಾಣದಲ್ಲಿಯೇ ಉತ್ತಮ ಫಲಿತಾಂಶ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ಗೊಬ್ಬರ ಬಳಕೆ ಕಡಿಮೆಯಾಗುವುದರ ಜೊತೆಗೆ ಸಾಗಣೆ ಮತ್ತು ಸಿಂಪರಣೆ ಸುಲಭವಾಗಲಿದೆ. ಡ್ರೋನ್ ತಂತ್ರಜ್ಞಾನದ ಬಳಕೆಯಿಂದ ಸಮಯ ಹಾಗೂ ಕಾರ್ಮಿಕ ವೆಚ್ಚವೂ ಗಣನೀಯವಾಗಿ ಉಳಿತಾಯವಾಗುತ್ತದೆ ಎಂದು ಹೇಳಿದರು.

ನ್ಯಾನೋ ಯೂರಿಯಾದ ಸರಿಯಾದ ಬಳಕೆ, ಸಿಂಪರಣೆಯ ಹಂತಗಳು ಹಾಗೂ ಅದರ ಪ್ರಯೋಜನಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ನಿರಂತರ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಕೃಷಿಯೂ ಹೆಚ್ಚು ಲಾಭದಾಯಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷೆ ಶಶಿಕಲಾ ಸಾಸಲವಾಡ, ನಿರ್ದೇಶಕರಾದ ಬಸವರಾಜ ಚಕ್ರಸಾಲಿ, ನಾಗರಾಜ ಹಾವಳಕೇರಿ, ವೀರೇಶ ಸಾಸಲವಾಡ, ಸಚಿನ್ ಮೇಲ್ಮುರಿ, ತುಕಾರಾಮ ಲಮಾಣಿ, ಬಸವರಾಜ ಕರಡಿಕೊಪ್ಪ, ಅರುಣ ಕಳ್ಳಿಹಾಳ, ಕುಮಾರ ಬೆಟಗೇರಿ, ಮಲ್ಲಿಕಾರ್ಜುನ ಶೀರನಹಳ್ಳಿ, ಫಕ್ಕೀರೇಶ ಕುರುಬರ, ಅಪ್ಪಣ್ಣ ಬಲಿಗಾರ, ಈರಣ್ಣ ಶೀರನಹಳ್ಳಿ ಸೇರಿದಂತೆ ಬ್ಯಾಂಕಿನ ಪದಾಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಡ್ರೋನ್ ತಂತ್ರಜ್ಞಾನ ಮತ್ತು ನ್ಯಾನೋ ಯೂರಿಯಾ ಬಳಕೆಯಿಂದ ರೈತರ ವೆಚ್ಚ ಕಡಿಮೆಯಾಗಿ ಕೃಷಿ ಹೆಚ್ಚು ಲಾಭದಾಯಕವಾಗಲಿದೆ.”

— ಡಾ. ಚಂದ್ರು ಲಮಾಣಿ, ಶಾಸಕ

ಬೇರೆ ಮದುವೆಗೆ ಒಪ್ಪಿದ ಪ್ರೇಯಸಿ: ಯುವತಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ!

ಬೆಂಗಳೂರು: ಮೂರು ವರ್ಷಗಳ ಪ್ರೀತಿಯನ್ನು ತೊರೆದು ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಪ್ರೇಯಸಿಗೆ ಯುವಕನೊಬ್ಬ ಚಾಕುವಿನಿಂದ ಇರಿದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ನರಸಾಪುರ ಮೂಲದ ನವಾಜ್‌ ಎಂಬ ಯುವಕ, ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್‌ ಎಂಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ, ನಂದಿನಿ ದಾಸ್‌ ನವಾಜ್‌ನಿಂದ ದೂರವಾಗಿ ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ನವಾಜ್‌ ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಆರೋಪಿ ನವಾಜ್‌ ಕೂಡ ತನ್ನ ಕತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

37 ವರ್ಷಗಳ ಬಳಿಕ ಒಂದಾದ ಗೆಳೆಯರು..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಬೆಸೆಯುವ ಸ್ನೇಹ ಜೀವನದ ಅತ್ಯಂತ ಅಮೂಲ್ಯ ಬಾಂಧವ್ಯವಾಗಿದ್ದು, ವರ್ಷಗಳು ಕಳೆದರೂ ಆ ಗೆಳೆತನದ ನೆನಪು ಎಂದಿಗೂ ಮಾಸುವುದಿಲ್ಲ ಎಂದು ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.

ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಪುರಸಭೆ ಉಮಾ ವಿದ್ಯಾಲಯದ 1987-88ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಇತರ ಸಂಘಟನೆಗಳಿಗೂ ಮಾದರಿಯಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘಗಳು ಕೇವಲ ಸ್ನೇಹಮಿಲನಕ್ಕೆ ಸೀಮಿತವಾಗದೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಘಟಿತ ಪ್ರಯತ್ನದಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವುದು ಅವರಲ್ಲಿ ಮತ್ತಷ್ಟು ಸಾಧನೆ ಮಾಡುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಸಣ್ಣ ಹೊಳಲಾಪುರ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಣ್ಣ ಬೆಟಗೇರಿ, ಸುರೇಶ ಜಗ್ಗಲ, ಶೇಖಣ್ಣ ಕಾಳೆ, ಗೆಳೆಯರ ಬಳಗದ ಅಧ್ಯಕ್ಷ ಬೀರಪ್ಪ ಕಾಳೆ, ಉಪಾಧ್ಯಕ್ಷ ಮಹಾಂತೇಶ ಪಡಿಗೇರಿ ಸೇರಿದಂತೆ ಬಳಗದ ಸದಸ್ಯರು, ಹಿರಿಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಹಳೆಯ ವಿದ್ಯಾರ್ಥಿಗಳ ಸಂಘಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಲು ಸಾಧ್ಯ.”

— ಬಸಣ್ಣ ಬೆಟಗೇರಿ

ಭೂಕುಸಿತ ಭೀತಿ: ಸಕಲೇಶಪುರ ಆನೆಮಹಲ್‌ ನಿವಾಸಿಗಳಲ್ಲಿ ಆತಂಕ!

ಹಾಸನ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಕಲೇಶಪುರ ತಾಲೂಕಿನಲ್ಲಿ ಭೂಕುಸಿತದ ಆತಂಕ ಮತ್ತೆ ಎದುರಾಗಿದೆ.

ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೂದುರಂತಗಳ ಹಿನ್ನೆಲೆಯಲ್ಲಿ, ಸಕಲೇಶಪುರದ ಆನೆಮಹಲ್‌ ಪ್ರದೇಶದ ಹತ್ತಾರು ಕುಟುಂಬಗಳು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಭೂಕುಸಿತದ ಅಪಾಯ ಎದುರಾಗುತ್ತಿದ್ದು, ಕಳೆದ ವರ್ಷ ಜಿಲ್ಲಾಡಳಿತವು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆ ಹೆಚ್ಚಾದ ಸಂದರ್ಭದಲ್ಲಿ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಆದರೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದೆ ಎಲ್ಲಿಗೆ ತೆರಳಬೇಕು ಎಂದು ಆನೆಮಹಲ್‌ ನಿವಾಸಿಗಳು ಪ್ರಶ್ನಿಸಿದ್ದಾರೆ.

ಮಳೆಗಾಲದಲ್ಲಿ ಜೀವಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ವಿಜ್ಞಾನಿ ಡಾ. ಲತಾ ಅವರ ಮಾಹಿತಿ ಪ್ರಕಾರ, ಕರಾವಳಿ ಜಿಲ್ಲೆಗಳು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಭಾಗಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೂರು ದಿನಗಳ ಬಳಿಕ ಈ ಭಾಗಗಳಲ್ಲಿ ಮಳೆಯ ಪ್ರಮಾಣ ಹಂತ ಹಂತವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.

ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ. ಮುಂದಿನ 10 ದಿನಗಳ ಕಾಲ ಈ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆ ಬಂದರೂ ಪ್ರಮಾಣ ಕಡಿಮೆ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Rain Safety Tips: ಮಳೆಗಾಲದಲ್ಲಿ ಕರೆಂಟ್‌ ಶಾಕ್‌ನಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

ಮಳೆಗಾಲದಲ್ಲಿ ಸಿಡಿಲು, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಜತೆಗೆ ಮನೆಗಳಲ್ಲಿ ವಿದ್ಯುತ್‌ ಶಾಕ್‌ ಮತ್ತು ಶಾರ್ಟ್‌ ಸರ್ಕ್ಯೂಟ್‌ ಘಟನೆಗಳೂ ಹೆಚ್ಚಾಗುತ್ತವೆ.

ಸ್ವಿಚ್‌ಬೋರ್ಡ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ಸೇರಿದಂತೆ ವಿದ್ಯುತ್‌ ಉಪಕರಣಗಳನ್ನು ಬಳಸುವಾಗ ಸ್ವಲ್ಪ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಮಳೆಯ ನೀರು ಗೋಡೆಗಳು ಹಾಗೂ ಸ್ವಿಚ್‌ಬೋರ್ಡ್‌ಗಳಿಗೆ ತಾಕುವುದು, ಅರ್ಥಿಂಗ್‌ ವ್ಯವಸ್ಥೆ ದೋಷಪೂರಿತವಾಗಿರುವುದು ಅಥವಾ ಒದ್ದೆ ಕೈಯಲ್ಲಿ ವಿದ್ಯುತ್‌ ಉಪಕರಣಗಳನ್ನು ಮುಟ್ಟುವುದು ವಿದ್ಯುತ್‌ ಶಾಕ್‌ಗೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ಅರ್ಹ ಎಲೆಕ್ಟ್ರಿಷಿಯನ್‌ ಮೂಲಕ ದುರಸ್ತಿ ಮಾಡಿಸಿಕೊಳ್ಳುವುದು ಅಗತ್ಯ.

ಮನೆಯ ಅರ್ಥಿಂಗ್‌ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಅರ್ಥಿಂಗ್‌ ಸರಿಯಾಗಿದ್ದರೆ ಹೆಚ್ಚುವರಿ ವಿದ್ಯುತ್‌ ಸುರಕ್ಷಿತವಾಗಿ ನೆಲಕ್ಕೆ ಹರಿದು ಅಪಾಯ ತಪ್ಪುತ್ತದೆ. ಅರ್ಥಿಂಗ್‌ನಲ್ಲಿ ದೋಷವಿದ್ದರೆ ವಿದ್ಯುತ್‌ ಉಪಕರಣಗಳಲ್ಲಿ ವಿದ್ಯುತ್‌ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ವಿದ್ಯುತ್‌ ಉಪಕರಣಗಳನ್ನು ಬಳಸುವಾಗ ಒದ್ದೆ ಕೈಗಳಿಂದ ಮುಟ್ಟಬಾರದು. ಐಎಸ್‌ಐ (ISI) ಗುಣಮಟ್ಟದ ವಿದ್ಯುತ್‌ ಉಪಕರಣಗಳನ್ನೇ ಬಳಸಬೇಕು. ವೈರ್‌ ಹಾನಿಗೊಳಗಾದ ಅಥವಾ ದೋಷವಿರುವ ಉಪಕರಣಗಳನ್ನು ಮಳೆಗಾಲದಲ್ಲಿ ಬಳಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಸುರಕ್ಷಿತ.

ಪ್ಲಗ್‌ಗಳನ್ನು ಸಾಕೆಟ್‌ಗೆ ಅಳವಡಿಸುವಾಗ ಮೊದಲು ಪ್ಲಗ್‌ ಹಾಕಿ ಬಳಿಕ ಸ್ವಿಚ್‌ ಆನ್‌ ಮಾಡಬೇಕು. ಪ್ಲಗ್‌ ತೆಗೆದುಹಾಕುವಾಗ ವೈರ್‌ ಎಳೆಯದೆ ಪ್ಲಗ್‌ನನ್ನೇ ಹಿಡಿದು ತೆಗೆಯಬೇಕು. ಮಕ್ಕಳ ಕೈಗೆ ಸಿಗುವ ಸ್ಥಳದಲ್ಲಿರುವ ಸಾಕೆಟ್‌ಗಳನ್ನು ಸುರಕ್ಷತಾ ಕವರ್‌ಗಳಿಂದ ಮುಚ್ಚಿಡುವುದು ಉತ್ತಮ.

ಗೀಸರ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ಸೇರಿದಂತೆ ಹೆಚ್ಚಿನ ವಿದ್ಯುತ್‌ ಬಳಕೆಯ ಉಪಕರಣಗಳಿಗೆ ಸುರಕ್ಷತಾ ಪ್ಲಗ್‌ಗಳನ್ನು ಅಳವಡಿಸಬೇಕು. ಯಾವುದೇ ವಿದ್ಯುತ್‌ ಸಾಧನವನ್ನು ಬಳಸುವಾಗ ರಬ್ಬರ್‌ ಬೂಟ್‌ ಅಥವಾ ಒಣ ಚಪ್ಪಲಿ ಧರಿಸುವುದು ಹಾಗೂ ದುರಸ್ತಿ ವೇಳೆ ರಬ್ಬರ್‌ ಗ್ಲೌಸ್‌ ಬಳಸುವುದು ಸುರಕ್ಷತೆಗೆ ನೆರವಾಗುತ್ತದೆ.

ಅಲ್ಲದೆ, ನೀರಿನ ನಲ್ಲಿಗಳು ಅಥವಾ ನೀರು ಸೋರಿಕೆಯಿರುವ ಸ್ಥಳಗಳ ಸಮೀಪ ವಿದ್ಯುತ್‌ ಸಾಧನಗಳನ್ನು ಇಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಮಳೆಗಾಲದಲ್ಲಿ ವಿದ್ಯುತ್‌ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಅಪಾಯಗಳನ್ನು ಬಹುತೇಕ ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ರಂಗಭೂಮಿಯಿಂದ ಬೆಳ್ಳಿತೆರೆಗೆ ಇಶಾ ಲಂಕೇಶ್: ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಹೊಸ ಸಿನಿಮಾ ಘೋಷಣೆ

ಬೆಂಗಳೂರು: ಪಿ. ಲಂಕೇಶ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್, ನಿರ್ದೇಶಕ ಪ್ರೀತಂ ಗುಬ್ಬಿ ಅವರ ಹೊಸ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲಿದ್ದಾರೆ.

ನವಿಶಾ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಶಿವರಾಜ್ ಕನಗನಪಲ್ಲಿ ಬಂಡವಾಳ ಹೂಡುತ್ತಿದ್ದು, ಇದು ಸಂಸ್ಥೆಯ ಎರಡನೇ ಸಿನಿಮಾ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಬಹಿರಂಗಪಡಿಸದ ಚಿತ್ರತಂಡ, ಸದ್ಯ ನಾಯಕಿಯಾಗಿ ಇಶಾ ಲಂಕೇಶ್ ಅವರನ್ನು ಅಧಿಕೃತವಾಗಿ ಪರಿಚಯಿಸಿದೆ.

ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ಇಶಾ, ನಟನೆಯ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಮೊದಲ ಸಿನಿಮಾದಲ್ಲೇ ಪ್ರೀತಂ ಗುಬ್ಬಿಯಂತಹ ಯಶಸ್ವಿ ನಿರ್ದೇಶಕರ ಜೊತೆ ಕೈಜೋಡಿಸಿರುವುದು ಗಮನ ಸೆಳೆದಿದೆ.

ಪಿ. ಲಂಕೇಶ್ ಅವರ ಮೊಮ್ಮಗಳು ಎಂಬ ಹಿನ್ನೆಲೆಯೊಂದಿಗೆ ಚಿತ್ರರಂಗಕ್ಕೆ ಬರುತ್ತಿರುವ ಇಶಾ ಲಂಕೇಶ್ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದ್ದು, ಚಿತ್ರದ ಉಳಿದ ಕಲಾವಿದರು ಹಾಗೂ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.

ವಯನಾಡು ಭೂಕುಸಿತ ದುರಂತ; ಮೃತರ ಸಂಖ್ಯೆ 6ಕ್ಕೆ ಏರಿಕೆ, ತೀವ್ರಗೊಂಡ ಶೋಧ ಕಾರ್ಯಾಚರಣೆ

ವಯನಾಡು: ಕೇರಳದ ವಯನಾಡು ಜಿಲ್ಲೆಯ ಕಳ್ಳಾಡಿ ಬಳಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಬುಧವಾರ (ಜು.9) ರಕ್ಷಣಾ ಸಿಬ್ಬಂದಿ ಇನ್ನೂ ಮೂರು ಮೃತದೇಹಗಳನ್ನು ಹೊರತೆಗೆದಿದ್ದು, ಒಟ್ಟು ಮೃತರ ಸಂಖ್ಯೆ 6ಕ್ಕೆ ತಲುಪಿದೆ.

ಕೇರಳ ಸಚಿವರಾದ ಎ.ಪಿ. ಅನಿಲ್ ಕುಮಾರ್ ಹಾಗೂ ಟಿ. ಸಿದ್ದಿಕ್ ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆಯ ಮೊದಲ ವಲಯದಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಶವ ದುರಂತ ಸ್ಥಳದ ಸಮೀಪದ ನದಿಯಲ್ಲಿ ಪತ್ತೆಯಾಗಿದೆ. ಮೂರನೇ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ವಲಯ 1, ವಲಯ 2 ಹಾಗೂ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ರಾಹುಲ್ ಶರ್ಮಾ ಹಾಗೂ ಬಿಹಾರದ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ವೈತಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.

ಇದಕ್ಕೂ ಮುನ್ನ ದುರಂತ ಕುರಿತು ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ನಾಪತ್ತೆಯಾದವರ ಪತ್ತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ತಿಳಿಸಿದ್ದರು. ದುರಂತದಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನಾಲ್ವರ ಸ್ಥಿತಿ ಸ್ಥಿರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಳೆಗೆ ನಲುಗಿದ ಶೃಂಗೇರಿ: ಕಳಪೆ ಕಾಮಗಾರಿಯೇ ಕಾರಣವೇ? ಬಿರುಕು ಬಿಟ್ಟ ತಡೆಗೋಡೆ ಜನರಲ್ಲಿ ಆತಂಕ

ಚಿಕ್ಕಮಗಳೂರು: ಶೃಂಗೇರಿ ತಾಲೂಕು ಕಚೇರಿ ಮುಂಭಾಗದ 2 ಕೋಟಿ ರೂ. ವೆಚ್ಚದ ತಡೆಗೋಡೆ ಮಳೆ ಆರಂಭವಾಗುತ್ತಿದ್ದಂತೆಯೇ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಗೋಡೆಯ ಕೆಳಭಾಗದಲ್ಲಿರುವ 4 ಮನೆಗಳು ಮತ್ತು 18ಕ್ಕೂ ಹೆಚ್ಚು ಅಂಗಡಿಗಳಿಗೆ ಜೀವಭೀತಿ ಎದುರಾಗಿದ್ದು, ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಆರಂಭಿಸಿದೆ.

ಸುಮಾರು 50 ಅಡಿ ಎತ್ತರ, 120 ಅಡಿ ಅಗಲದ ತಡೆಗೋಡೆಯಲ್ಲಿ ಬಿರುಕು ಕ್ಷಣಕ್ಷಣಕ್ಕೂ ವಿಸ್ತರಿಸುತ್ತಿದೆ. ಗೋಡೆ ಕುಸಿದರೆ ಭದ್ರಾ ನದಿಯ ದಡದಲ್ಲಿರುವ ಕಟ್ಟಡಗಳು ಅಪಾಯಕ್ಕೆ ಸಿಲುಕಲಿದ್ದು, ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸಂಚಾರಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.

2024ರ ಭೂಕುಸಿತದ ಬಳಿಕ ನಿರ್ಮಿಸಲಾದ ಈ ತಡೆಗೋಡೆ ಕೆಲವೇ ತಿಂಗಳಲ್ಲಿ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿ ಆರೋಪಕ್ಕೆ ಕಾರಣವಾಗಿದೆ. ಗೋಡೆಯೊಳಗೆ ಮಣ್ಣು ತುಂಬಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಸಚಿವ ಡಿ.ಎನ್. ಜೀವರಾಜ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ ಪ್ರಶ್ನಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇತ್ತ ತಾಲೂಕು ಆಡಳಿತ ಮನೆ ಹಾಗೂ ಅಂಗಡಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದು, ಕಾಳಜಿ ಕೇಂದ್ರ ತೆರೆಯಲು ಮುಂದಾಗಿದೆ. ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಅನುಪ್ ತಿಳಿಸಿದ್ದಾರೆ.

ಜನರ ಸೇವೆಯೇ ಆಡಳಿತದ ಧರ್ಮ; ಕರ್ತವ್ಯ ಲೋಪ ಸಹಿಸುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆಡಳಿತದ ಕಾರ್ಯಕ್ಷಮತೆ, ಜನಸೇವೆ, ಅಭಿವೃದ್ಧಿ ಮತ್ತು ಅಧಿಕಾರಿಗಳ ಹೊಣೆಗಾರಿಕೆ ಕುರಿತು ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ಸಂದೇಶ ನೀಡಿದರು.

“ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ ಜನಾದೇಶ ಕೇಳುತ್ತೇವೆ. ಆದರೆ ಅಧಿಕಾರಿಗಳು ಪ್ರತಿದಿನ ಜನರ ವಿಶ್ವಾಸಕ್ಕೆ ಉತ್ತರದಾಯಕರಾಗಿರಬೇಕು. ಕರ್ತವ್ಯ ನಿರ್ವಹಿಸದಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಅದು ಜನತೆಗೆ ಮಾಡುವ ದ್ರೋಹ” ಎಂದು ಅವರು ಹೇಳಿದರು.

ಆಡಳಿತದಲ್ಲಿ ಶಿಸ್ತಿಗೆ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದ ಮುಖ್ಯಮಂತ್ರಿ, “ಸಭೆಯ ಮಧ್ಯೆ ಯಾವುದೇ ಅಧಿಕಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದರೆ, ಸಭೆ ಮುಗಿಯುವ ವೇಳೆಗೆ ಅವರ ಅಮಾನತು ಆದೇಶ ಸಿದ್ಧವಾಗಿರುತ್ತದೆ. ಶಿಸ್ತು ಎನ್ನುವುದು ಆಡಳಿತದ ಮೊದಲ ನಿಯಮ” ಎಂದು ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲೇ ನೆಲೆಸಬೇಕು ಎಂದು ಸೂಚಿಸಿದ ಅವರು, “ಜನರ ಸಮಸ್ಯೆಗಳನ್ನು ಕೇಳಲು ಅಧಿಕಾರಿಗಳು ಜನರ ಬಳಿಯೇ ಇರಬೇಕು. ಸಣ್ಣ ಕೆಲಸಗಳಿಗೂ ಜನರನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿಸುವ ಸಂಸ್ಕೃತಿ ಕೊನೆಗಾಣಬೇಕು. ಸಾಧ್ಯವಾದಷ್ಟು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗಬೇಕು” ಎಂದರು.

ಪ್ರತಿ ಜಿಲ್ಲಾ ಮಟ್ಟದ ಅಧಿಕಾರಿಯೂ ತಮ್ಮ ಅಧೀನ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ನಿತ್ಯ ಮಾಹಿತಿ ಹೊಂದಿರಬೇಕು ಎಂದು ಸೂಚಿಸಿದ ಅವರು, “ಯಾರು ಯಾವ ಗ್ರಾಮಕ್ಕೆ ಭೇಟಿ ನೀಡಿದರು, ಯಾವ ಸಮಸ್ಯೆ ಪರಿಹರಿಸಿದರು ಎಂಬುದರ ದಾಖಲೆ ಪ್ರತಿದಿನ ನವೀಕರಿಸಬೇಕು. ಫೀಲ್ಡ್ ಆಡಳಿತವೇ ಉತ್ತಮ ಆಡಳಿತದ ಅಳತೆ” ಎಂದು ಹೇಳಿದರು.

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರ ಸ್ಥಾಪಿಸಿರುವ *ಪ್ರಜಾಸೇವಾ ಇಲಾಖೆ*ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚಿಸಿದ ಅವರು, “ಶಾಸಕರು, ಸಚಿವರು ಮತ್ತು ಅಧಿಕಾರಿಗಳು ಜನರ ಬಳಿಗೆ ತೆರಳಬೇಕು. ನಾನು ನಡೆಸುತ್ತಿರುವ ಜನಸ್ಪಂದನ ಮಾದರಿಯನ್ನೇ ಆಡಳಿತದ ಎಲ್ಲ ಹಂತಗಳಲ್ಲೂ ಅಳವಡಿಸಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಯಾವುದೇ ಸಮಸ್ಯೆಯನ್ನು ವಿಳಂಬ ಮಾಡದೆ ಪರಿಹರಿಸಬೇಕು” ಎಂದು ನಿರ್ದೇಶನ ನೀಡಿದರು.

ನಗರಾಭಿವೃದ್ಧಿಯಲ್ಲಿ ಯೋಜನಾಬದ್ಧತೆ ಅನಿವಾರ್ಯ ಎಂದು ಹೇಳಿದ ಮುಖ್ಯಮಂತ್ರಿ, “ಅವೈಜ್ಞಾನಿಕ ಬಡಾವಣೆಗಳಿಗೆ ಅವಕಾಶವಿಲ್ಲ. ನಗರಗಳು ಮತ್ತು ಪಟ್ಟಣಗಳು ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನಾಬದ್ಧವಾಗಿ ಬೆಳೆಯಬೇಕು. ಸರ್ಕಾರದ ನೀತಿ ತೀರ್ಮಾನಗಳನ್ನು ಅಧಿಕಾರಿಗಳು ಅಕ್ಷರಶಃ ಜಾರಿಗೆ ತರಬೇಕು” ಎಂದರು.

ಕಂದಾಯ ಇಲಾಖೆಯ *ಇ-ಖಾತೆ ಕ್ರಾಂತಿ*ಯನ್ನು ಉಲ್ಲೇಖಿಸಿದ ಅವರು, “ಒಂದು ರೂಪಾಯಿಯೂ ವೆಚ್ಚವಿಲ್ಲದೆ ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ” ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರಿವರ್ತನೆಯ ಘೋಷಣೆ ಮಾಡಿದ ಮುಖ್ಯಮಂತ್ರಿ, “ಕೆಪಿಎಸ್ ಶಾಲೆಗಳ ಯಶಸ್ವಿ ಮಾದರಿಯಂತೆ ಸಿಎಸ್‌ಆರ್ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಮಕ್ಕಳಿಗೂ ನಗರಮಟ್ಟದ ಶಿಕ್ಷಣ ದೊರೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ 10 ರಿಂದ 20 ಗುಣಮಟ್ಟದ ಶಾಲೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಸರ್ಕಾರ ಮತ್ತು ಕೈಗಾರಿಕಾ ವಲಯ ಒಟ್ಟಾಗಿ ಕೆಲಸ ಮಾಡಲಿದೆ” ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಮಾತನಾಡಿದ ಅವರು, “ಈ ವಿಷಯದಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಜವಾಬ್ದಾರಿ. ಬಿಎಲ್‌ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ಅಗತ್ಯ ದಾಖಲೆಗಳನ್ನು ಸರ್ಕಾರವೇ ಒದಗಿಸುತ್ತದೆ. ಒಬ್ಬ ಅರ್ಹ ಮತದಾರನ ಹಕ್ಕೂ ಕಳೆದುಹೋಗಬಾರದು” ಎಂದು ಸೂಚಿಸಿದರು.

ಯುವಜನರ ಉದ್ಯೋಗಾವಕಾಶಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಘೋಷಿಸಿದ ಅವರು, ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.

ಸಾಮಾಜಿಕ ಸಾಮರಸ್ಯ ಮತ್ತು ಸಂವಿಧಾನ ಮೌಲ್ಯಗಳ ಪ್ರಸಾರಕ್ಕಾಗಿ ರಾಜ್ಯಾದ್ಯಂತ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಂದು ಸಂಘಕ್ಕೂ ₹10 ಲಕ್ಷ ಅನುದಾನ ನೀಡಲಾಗುವುದು. ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ಸಂವಿಧಾನದ ಆದರ್ಶಗಳನ್ನು ಸಮಾಜದ ಮನೆಮನೆಗೆ ತಲುಪಿಸುವ ಸಾಂಸ್ಕೃತಿಕ ಚಳವಳಿಯಾಗಿ ಇದು ರೂಪುಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೊನೆಗೆ ಕಂದಾಯ ಭೂಮಿಯ ಸಮಗ್ರ ಆಡಿಟ್‌ಗೆ ಸೂಚನೆ ನೀಡಿದ ಅವರು, “ರಾಜ್ಯದ ಪ್ರತಿಯೊಂದು ಇಂಚು ಸರ್ಕಾರಿ ಭೂಮಿಯ ನಿಖರ ಮಾಹಿತಿ ಸರ್ಕಾರದ ಬಳಿ ಇರಬೇಕು. ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಒದಗಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು” ಎಂದು ತಿಳಿಸಿದರು.