Home Blog Page 39

ಬಿಹಾರದ ರಾಜಗೀರ್‌ನಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

0

ನಾಲಂದಾ: ಬೌದ್ಧ ಮತ್ತು ಜೈನರಿಗೆ ಪವಿತ್ರವೆನಿಸಿದ ಬಿಹಾರದ ರಾಜಗೀರ್‌ನಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಅನುಮಾನಗಳನ್ನು ಮೂಡಿಸಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಾಯಿ, ಮಗ ಮತ್ತು ಇಬ್ಬರು ಪುತ್ರಿಯರು ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಈ ನಾಲ್ವರು ನೇಪಾಳ ಪ್ರವಾಸ ಮುಗಿಸಿ ಜ.30ರಂದು ರಾಜಗೀರ್‌ಗೆ ಆಗಮಿಸಿ ಕೊಠಡಿ ಬುಕ್‌ ಮಾಡಿಕೊಂಡಿದ್ದರು. ಬಳಿಕ ನಾಲಂದಾದ ಪಾವಾಪುರಿಗೆ ತೆರಳುವ ಯೋಜನೆ ಹೊಂದಿದ್ದರು. ಆದರೆ, ಮೂರು ದಿನಗಳ ಕಾಲ ಕೊಠಡಿಯಿಂದ ಯಾರೂ ಹೊರಬಂದಿರಲಿಲ್ಲ.

ಶುಕ್ರವಾರ ಬೆಳಿಗ್ಗೆ ಕೊಠಡಿಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಮ್ಯಾನೇಜರ್‌ ಮಾಹಿತಿ ನೀಡಿದ ಬಳಿಕ, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ನಾಲ್ಕೂ ಶವಗಳು ಒಂದೇ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಥಳದಿಂದ ನಿದ್ರೆ ಮಾತ್ರೆಗಳ ದೊಡ್ಡ ಪ್ರಮಾಣ ಪತ್ತೆಯಾಗಿರುವುದು ಆತ್ಮಹತ್ಯೆಗೂ ಮುನ್ನ ಮದ್ದು ಸೇವಿಸಿರಬಹುದೆಂಬ ಶಂಕೆ ಮೂಡಿಸಿದೆ. ಮೃತರಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳು ಹಾಗೂ ನಗದು ಹಣ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದ ತನಿಖೆಗಾಗಿ ನಾಲಂದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ಜೊತೆಗೆ ಕರ್ನಾಟಕದ ಗುಬ್ಬಿಗೆ ಇಬ್ಬರು ಪೊಲೀಸರ ತಂಡವನ್ನು ಕಳುಹಿಸಲಾಗಿದೆ.

ರಾಜಗೀರ್ ಪೊಲೀಸರು, “ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಗುಬ್ಬಿ ಪೊಲೀಸರ ಸಹಕಾರದೊಂದಿಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಎಲ್ಲಾ ಶವಗಳನ್ನು ಬಿಹಾರ್ ಶರೀಫ್‌ನ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ಮಂಡಳಿಯಿಂದ ವೀಡಿಯೊಗ್ರಫಿಯೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ BCCI 7.5 ಕೋಟಿ ರೂ. ನಗದು ಬಹುಮಾನ

0

ನವದೆಹಲಿ: ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ 2026ರ ಅಂಡರ್-19 ವಿಶ್ವಕಪ್‌ನ್ನು ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಭಾರತದ ಅಂಡರ್-19 ತಂಡದ ಸಾಧನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹರ್ಷ ವ್ಯಕ್ತಪಡಿಸಿದ್ದು, ಯುವ ಆಟಗಾರರ ಅಸಾಧಾರಣ ಪ್ರದರ್ಶನವನ್ನು ಮೆಚ್ಚಿ ಈ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

“2026ರ ಅಂಡರ್-19 ವಿಶ್ವಕಪ್‌ನ್ನು ಗೆದ್ದ ಭಾರತದ ತಂಡದ ಬಗ್ಗೆ ಇಡೀ ದೇಶ ಹಾಗೂ ಬಿಸಿಸಿಐಗೆ ಅಪಾರ ಹೆಮ್ಮೆ ಇದೆ. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ರೀತಿ ಹಾಗೂ ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಫೈನಲ್ ತಲುಪಿ ಪ್ರಶಸ್ತಿ ಗೆದ್ದಿರುವುದು ಅತ್ಯಂತ ಪ್ರಶಂಸನೀಯವಾಗಿದೆ. ಈ ಸಾಧನೆಯನ್ನು ಗೌರವಿಸುವ ಸಲುವಾಗಿ ತಂಡಕ್ಕೆ 7.5 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ” ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: ಸಾವಿನ ಸಂಖ್ಯೆ 25ಕ್ಕೆ ಏರಿಕೆ, ಇಬ್ಬರ ಬಂಧನ

0

ಅಸ್ಸಾಂ: ಮೇಘಾಲಯದ ಸುಟಂಗಾ ಪ್ರದೇಶದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಗಣಿಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಮೇಘಾಲಯ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೂರ್ವ ಜೈನ್ತಿಯಾ ಹಿಲ್ಸ್ ಎಸ್‌ಪಿ ವಿಕಾಸ್ ಕುಮಾರ್, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.

ಸ್ಫೋಟ ಸಂಭವಿಸಿದ ದಿನ ಗಣಿಯೊಳಗೆ ಎಷ್ಟು ಕಾರ್ಮಿಕರು ಇದ್ದರು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳ ಪ್ರಕಾರ, ಸ್ಫೋಟದ ವೇಳೆ 70ರಿಂದ 100 ಜನ ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ರ್ಯಾಟ್ ಹೋಲ್ ಗಣಿಗಾರಿಕೆ ಮೂಲಕ ಅಕ್ರಮವಾಗಿ ಕಲ್ಲಿದ್ದಲು ಹೊರತೆಗೆದಿರುವುದು ಕೂಡ ಪತ್ತೆಯಾಗಿದೆ.

ಕಳಪೆ ಗೋಚರತೆ ಹಾಗೂ ಅಪಾಯಕಾರಿ ಪರಿಸ್ಥಿತಿಗಳ ಕಾರಣದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಗುರುವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಶುಕ್ರವಾರ ರಾತ್ರಿ ನಾಲ್ವರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಶಿಲ್ಲಾಂಗ್ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದರಿಂದ ಒಟ್ಟು ಸಾವಿನ ಸಂಖ್ಯೆ 25ಕ್ಕೆ ಏರಿದೆ.

ಈ ಪೈಕಿ 17 ಜನರ ಗುರುತು ಪತ್ತೆಯಾಗಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಹೆತ್ತ ತಾಯಿ ಕೈಯಲ್ಲೇ ಕಂದನ ವ್ಯವಹಾರ: ಶ್ರೀನಿವಾಸಪುರದಲ್ಲಿ 5 ದಿನದ ಮಗು ₹2 ಲಕ್ಷಕ್ಕೆ ಮಾರಾಟ

ಕೋಲಾರ: ತಾಯಿತನದ ಪಾವಿತ್ರ್ಯಕ್ಕೂ ಬೆಲೆ ಕಟ್ಟಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹೆತ್ತ ಗಂಡು ಮಗುವನ್ನು ಕೇವಲ ಐದು ದಿನಗಳಲ್ಲಿ ಲಕ್ಷ ಲಕ್ಷ ಹಣಕ್ಕಾಗಿ ಮಾರಾಟ ಮಾಡಿರುವ ಆರೋಪದಡಿ ದಂಪತಿ ಮತ್ತು ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೀತು ಮತ್ತು ರಾಘವೇಂದ್ರ ದಂಪತಿಗೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಮೂರನೇ ಮಗು ಜನಿಸಿತ್ತು. ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿದ್ದ ಈ ದಂಪತಿ, ಮತ್ತೊಂದು ಮಗು ಬೇಡವೆಂದು ನಿರ್ಧರಿಸಿ, ಗಂಡು ಮಗುವನ್ನು 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಪತಿ ರಾಘವೇಂದ್ರಗೆ ಪರಿಚಿತನಾಗಿದ್ದ ನಾರಾಯಣಸ್ವಾಮಿ ಎಂಬಾತ ಈ ಮಕ್ಕಳ ಮಾರಾಟ ಜಾಲದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾನೆ. ದಂಪತಿಯಿಂದ ಮಗು ಪಡೆದುಕೊಂಡ ನಾರಾಯಣಸ್ವಾಮಿ, ಅದನ್ನು ಚಿಂತಾಮಣಿ ಮೂಲದ ವ್ಯಕ್ತಿಗೆ ಇನ್ನಷ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಮಗು ಮಾರಾಟದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಶ್ರೀನಿವಾಸಪುರ ಪೊಲೀಸರು ದಂಪತಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಮಧ್ಯವರ್ತಿ ನಾರಾಯಣಸ್ವಾಮಿಯನ್ನು ಬಂಧಿಸಿ, ಮಗು ಯಾರ ಬಳಿ ಇದೆ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

ಸದ್ಯ ಮಗು ಮರಳಿ ವಾಪಸ್ ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಈ ಪ್ರಕರಣದ ಹಿಂದೆ ಸಂಘಟಿತ ಮಕ್ಕಳ ಮಾರಾಟ ಜಾಲವಿದೆಯೇ ಎಂಬುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆ.

ಸರ್ಕಾರಿ ಶಾಲೆ ಜಗಲಿಯಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!

0

ಶಿವಮೊಗ್ಗ: ಸರ್ಕಾರಿ ಶಾಲೆಯ ಜಗಲಿಯಲ್ಲೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ನಡೆದಿದೆ.

ಬೈಸೆ ಸರ್ಕಾರಿ ಶಾಲೆಯ ಜಗಲಿಯ ಮೇಲಿನ ಮರದ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ರಾಕೇಶ್ ಜೋಗಿ (28) ಎಂದು ಗುರುತಿಸಲಾಗಿದೆ. ಮೃತ ರಾಕೇಶ್ ಬೈಸೆ ಗ್ರಾಮದ ನಿವಾಸಿಯಾಗಿದ್ದಾರೆ.

ಶನಿವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು, ಶಾಲೆಗೆ ಬಂದ ವಿದ್ಯಾರ್ಥಿನಿಯೊಬ್ಬಳು ಮೃತದೇಹವನ್ನು ಕಂಡು ಕೂಗಿಕೊಂಡು ಓಡಿಹೋಗಿದ್ದಾಳೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮೃತ ರಾಕೇಶ್ ರಾತ್ರಿ ವೇಳೆ ಮನೆಯಿಂದ ಹಗ್ಗ ತೆಗೆದುಕೊಂಡು ಹೊರಟಿದ್ದಾನೆ ಎನ್ನಲಾಗಿದ್ದು, ಬೆಳಿಗ್ಗೆ ವರೆಗೆ ಮನೆಗೆ ಮರಳದ ಕಾರಣ ಪೋಷಕರು ಹುಡುಕಾಟ ಆರಂಭಿಸಿದ್ದರು. ನಂತರ ಶನಿವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ಗೃಹ ಸಚಿವ ಪರಮೇಶ್ವರ್ ಪರೋಕ್ಷ ಸ್ಪಷ್ಟನೆ

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ ಎಂಬುದನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಹಂಚಿಕೆ ಕುರಿತು ಯಾವುದೇ ಪ್ರಸ್ತಾಪವೇ ನಡೆದಿಲ್ಲ ಎಂದು ಹೇಳಿದ್ದಾರೆ.

“ಸಿಎಂ ಅಧಿಕಾರ ಹಂಚಿಕೆಯ ಮಾತೇ ನಡೆದಿಲ್ಲ. ಅದು ನಡೆದಿಲ್ಲ ಎಂದ ಮೇಲೆ ಅದರ ಜಾರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಿಸಿದೆ. ಹೈಕಮಾಂಡ್ ಎಲ್ಲಾದರೂ ಸಿದ್ದರಾಮಯ್ಯ ಬೇಡ ಎಂದು ಹೇಳಿದೆಯೇ? ಇಲ್ಲ ತಾನೇ” ಎಂದು ಪರಮೇಶ್ವರ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಬದಲಾವಣೆ ಕುರಿತು ಹೈಕಮಾಂಡ್ ಎಲ್ಲೂ ಮಾತನಾಡಿಲ್ಲ ಎಂದು ಹೇಳಿದ ಅವರು, “ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹೈಕಮಾಂಡ್‌ಗೆ ಗೊಂದಲವಾಗಿದೆ ಎಂಬ ಭಾವನೆ ಇಲ್ಲ. ಹೈಕಮಾಂಡ್ ತನ್ನ ಅಗತ್ಯ ಇದ್ದಾಗ ಮಾತನಾಡುತ್ತದೆ. ಈಗ ಸುಮ್ಮನಿದೆ ಎಂದರೆ ಬದಲಾವಣೆಗಳಿಲ್ಲ ಎಂಬುದರ ಅರ್ಥ” ಎಂದು ಹೇಳಿದರು.

ಪಕ್ಷದೊಳಗೆ ಒಬ್ಬೊಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು ಎಂದ ಅವರು, ಸಿಎಂ ಕುರ್ಚಿ ಬಗ್ಗೆ ಗೊಂದಲ ಇದ್ದಿದ್ದರೆ ಸಿಎಲ್ಪಿ ಸಭೆಯಲ್ಲಿ ಶಾಸಕರು ಪ್ರಶ್ನೆ ಎತ್ತುತ್ತಿದ್ದರು. ಆದರೆ ಯಾರೂ ಆ ಬಗ್ಗೆ ಮಾತನಾಡಿಲ್ಲ. ಅದರಿಂದ ಯಾವುದೇ ಗೊಂದಲ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಯತೀಂದ್ರ ಅವರಿಗೆ ಅವರದೇ ಆದ ಸೋರ್ಸ್ ಇರಬಹುದು. ಅದನ್ನೇ ಅವರು ಹೇಳಿರಬಹುದು” ಎಂದು ಪ್ರತಿಕ್ರಿಯಿಸಿದರು.

ಹಾಸನದಿಂದಲೇ ಪ್ರಧಾನಿ ಅಥವಾ ಮುಖ್ಯಮಂತ್ರಿ? ಕೋಡಿಮಠದ ಶಿವಯೋಗಿ ಸ್ವಾಮೀಜಿ ಸ್ಪೋಟಕ ಭವಿಷ್ಯ

0

ಹಾಸನ: ರಾಜ್ಯ ಮತ್ತು ರಾಷ್ಟ್ರ ರಾಜಕೀಯದ ಭವಿಷ್ಯ ಹಾಸನ ಜಿಲ್ಲೆಯ ಸುತ್ತ ತಿರುಗುವ ಕಾಲ ಸಮೀಪಿಸುತ್ತಿದೆ ಎಂದು ಗಜೇಂದ್ರಗಡದ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನಾಂಬ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ರಾಜಕೀಯದಲ್ಲಿಯೂ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ, ಹಾಸನದೊಳಗಿಂದಲೇ ಹೊರಬರುವ ಯೋಗಗಳಿವೆ ಎಂದು ಹೇಳಿದರು.

ರಾಜಕೀಯದೊಂದಿಗೆ ಮಠದ ಸಂಬಂಧದ ಕುರಿತು ಮಾತನಾಡಿದ ಸ್ವಾಮೀಜಿ, ನಾನು ಯಾವುದೇ ರಾಜಕಾರಣಿಯಿಂದ ಹಣ ಪಡೆದಿಲ್ಲ, ಯಾರನ್ನೂ ಕರೆದು ಸನ್ಮಾನ ಮಾಡಿಲ್ಲ. ಮಠದ ಸಾನಿಧ್ಯ ಎಂದರೆ ರಾಜಕಾರಣಿಗಳಿಗೆ ಆಶೀರ್ವಾದ ನೀಡಿ ಸಮಾಜವನ್ನು ಶುದ್ಧ ಬದುಕಿನತ್ತ ನಡೆಸುವುದು ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಮುಂದಿನ ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಮನೆತನಕ್ಕೆ ಅಂಟಿಕೊಂಡಿರುವ ಕಪ್ಪುಚುಕ್ಕಿ ಬಹಿರಂಗವಾಗಲಿದೆ. ಹಳ್ಳಿ–ಹಳ್ಳ ತುಂಬಿ ಹರಿಯುವ ಕಾಲದಲ್ಲಿ, ಉಳ್ಳವನು ಶಿವಪೂಜೆ ಮಾಡುವಾಗ ಸಂಸಾರ ನಿಸ್ಸಂಗ ಪರಿತ್ಯಾಗಿಯಾಗಿ ಮತ್ತೊಮ್ಮೆ ಹಾಸನದಿಂದಲೇ ರಾಜ್ಯ ಅಥವಾ ದೇಶದ ನಾಯಕತ್ವ ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಬಗ್ಗೆ ಹಾಗೂ 2012ರಲ್ಲಿ ನರೇಂದ್ರ ಮೋದಿ ಮೂರು ಬಾರಿ ಪ್ರಧಾನಿಯಾಗುವ ಬಗ್ಗೆ ತಾವು ನುಡಿದ ಭವಿಷ್ಯಗಳು ನಿಜವಾದುದನ್ನು ಅವರು ಸ್ಮರಿಸಿದರು.

ಹಾಸನದ ಭವಿಷ್ಯ ಕುರಿತು ಮಾತನಾಡಿದ ಅವರು, ಕಿಡಿಗಣ್ಣಯ್ಯ ಮಹಾಸ್ವಾಮಿಗಳ ಪುಣ್ಯದ ಫಲವಾಗಿ ಹಾಸನದಲ್ಲಿ ಮತ್ತೆ ಶಕ್ತಿಶಾಲಿ ನಾಯಕತ್ವ ಬೆಳೆಯಲಿದೆ. ಕೆಂಪು ಭಾವುಟ ಹಾರಿಸುವಂತಹ ವ್ಯಕ್ತಿಗಳು ಮರಳಿ ಬಂದು ಹಾಸನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಪ್ರಸ್ತುತ ಕಾಂಗ್ರೆಸ್ ಸರ್ಕಾರ ಸುಮಾರು ಎರಡು ವರ್ಷ ಮುಂದುವರಿಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಯೋಜನೆಗಳ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮುಂದೆ ಸ್ವಲ್ಪ ಅಲುಗಾಟದ ಕಾಲ ಬರುವ ಸೂಚನೆಗಳಿದ್ದು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಇದೇ ವೇಳೆ, ದೇಶದ ರಾಜಕೀಯ ಭವಿಷ್ಯ ಕುರಿತು ಮಾತನಾಡಿದ ಸ್ವಾಮೀಜಿ, ಮುಂದಿನ 25–28 ವರ್ಷಗಳವರೆಗೆ ಈಗಿರುವ ಶಕ್ತಿಗಳೇ ದೇಶವನ್ನು ಮುನ್ನಡೆಸಲಿದ್ದು, 2029ರ ಚುನಾವಣೆಯಲ್ಲಿ 450ರಿಂದ 472 ಸ್ಥಾನಗಳೊಂದಿಗೆ ಹೊಸ ಇತಿಹಾಸ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದರು.

ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ಅಭಿಪ್ರಾಯ ಕೇಳಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

0

ಮಂಗಳೂರು: ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

“ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದರು.

ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂದು ಕೇಳಿದಾಗ, “ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು” ಎಂದು ತಿಳಿಸಿದರು.

ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, “ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ” ಎಂದರು.

ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, “ಸಮಯವೇ ಉತ್ತರ ನೀಡಲಿದೆ” ಎಂದರು.

ಸಿಲಿಕಾನ್ ಸಿಟಿಯಲ್ಲಿ ಚಿರತೆ ಭೀತಿ: ಜೆಪಿ ನಗರ ಅಂಜನಾಪುರದಲ್ಲಿ CCTVಗೆ ಸೆರೆಯಾದ ಚಿರತೆ ಓಡಾಟ

0

ಬೆಂಗಳೂರು: ಚಾಮರಾಜನಗರ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಹುಲಿ–ಚಿರತೆಯ ಹಾವಳಿ ವರದಿಯಾಗುತ್ತಿದ್ದ ನಡುವೆಯೇ, ಇದೀಗ ರಾಜಧಾನಿ ಬೆಂಗಳೂರಿನಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಜೆಪಿ ನಗರದ 9ನೇ ಫೇಸ್ ಸಮೀಪದ ಅಂಜನಾಪುರ ಬಿಡಿಎ ಲೇಔಟ್‌ನಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಟ ನಡೆಸುತ್ತಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ರಾತ್ರಿ–ಹಗಲು ಎನ್ನದೇ ಚಿರತೆ ಸಂಚರಿಸುತ್ತಿರುವ ದೃಶ್ಯಗಳು ಮನೆಗಳ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಕಳೆದ ಒಂದು ವಾರದಲ್ಲಿ ನಾಲ್ಕು–ಐದು ಬಾರಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಹೆಜ್ಜೆ ಇಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಕಾರಿನಲ್ಲಿ ಹೊರಡುವ ವೇಳೆ ಚಿರತೆ ಅಡ್ಡ ಬಂದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ಅಂಜನಾಪುರದ ಸಮೀಪದಲ್ಲೇ ತುರಹಳ್ಳಿ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶಗಳಿದ್ದು, ಅಲ್ಲಿನ ಚಿರತೆಗಳು ನಾಡಿನತ್ತ ನುಗ್ಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರಕ್ಕೆ ಲಗ್ಗೆಯಿಟ್ಟಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂಬ ಆರೋಪವೂ ಕೇಳಿಬಂದಿದೆ.

ಚಿರತೆ ಹಾವಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶೌಚಾಲಕ್ಕೆಂದು ಬಸ್ಸಿನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕಂಟೇನರ್: 6 ಮಂದಿ ಸಾವು

0

ಮಥುರಾ : ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗ ಮತ್ತು ನಿಯಮ ಉಲ್ಲಂಘನೆಯಿಂದ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶನಿವಾರ ಬೆಳಗಿನ ಜಾವ 2:45ರ ಸುಮಾರಿಗೆ ನಡೆದ ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 88 ಬಳಿ ಈ ಅಪಘಾತ ಸಂಭವಿಸಿದ್ದು, ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪ್ರಯಾಣದ ಮಧ್ಯೆ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯಕ್ಕಾಗಿ ನಿಲ್ಲಿಸಲಾಗಿತ್ತು. ಆದರೆ ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ನಿಯಮ ಉಲ್ಲಂಘಿಸಿ ರಸ್ತೆ ಮೇಲೆಯೇ ನಿಲ್ಲಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಹಿಂದಿನಿಂದ ಅತಿವೇಗದಲ್ಲಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು, ಬಸ್ ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಡಿಕ್ಕಿಯ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ. ಮೃತರಲ್ಲಿ ಬಸ್ತಿ ನಿವಾಸಿ ದೇವೇಶ್, ಔರೈಯಾದ ಸೋನು, ಕನ್ನೌಜ್ನ ಅಸ್ಲಾಂ ಮತ್ತು ದೆಹಲಿಯ ಸಂತೋಷ್ ಎಂದು ನಾಲ್ವರನ್ನು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹೈವೇಯಲ್ಲೇ ಬಸ್ ನಿಲ್ಲಿಸಿರುವುದು ಹಾಗೂ ಕಂಟೇನರ್‌ನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

error: Content is protected !!