Home Blog Page 40

ಇಂದು ದೇಶಾದ್ಯಂತ  ಓಲಾ, ಊಬರ್, ರ‍್ಯಾಪಿಡೋ ಮುಷ್ಕರ: 6 ಗಂಟೆ ಆ್ಯಪ್ ಆಫ್, ಪ್ರಯಾಣಿಕರಿಗೆ ಭಾರೀ ತೊಂದರೆ

0

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಊಬರ್ ಹಾಗೂ ರ‍್ಯಾಪಿಡೋ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರು ಭಾರೀ ಮುಷ್ಕರಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ ಸೇವೆಗಳಲ್ಲಿ ಗಂಭೀರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಷ್ಕರದ ಭಾಗವಾಗಿ ಚಾಲಕರು ಸುಮಾರು ಆರು ಗಂಟೆಗಳ ಕಾಲ ತಮ್ಮ ಟ್ಯಾಕ್ಸಿ ಆ್ಯಪ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಲಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಮುಖ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬೆಂಬಲವಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈ ಮುಷ್ಕರಕ್ಕೆ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಚಾಲಕರ ಆದಾಯ ಭದ್ರತೆ, ದರ ನಿಯಂತ್ರಣ ಹಾಗೂ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಇಳಿಯಲಾಗಿದೆ.

ಸರ್ಕಾರದಿಂದ ಯಾವುದೇ ವ್ಯವಸ್ಥಿತ ದರ ನಿಗದಿ ಇಲ್ಲದ ಕಾರಣ, ಖಾಸಗಿ ಆ್ಯಪ್ ಕಂಪನಿಗಳು ತಮ್ಮದೇ ಇಚ್ಛೆಯಂತೆ ದರ ನಿಗದಿ ಮಾಡುತ್ತಿವೆ. ಇದರ ಪರಿಣಾಮ ಲಕ್ಷಾಂತರ ಗಿಗ್ ಕಾರ್ಮಿಕರು ತೀವ್ರ ಆದಾಯ ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.

ನಮ್ಮ ಮೆಟ್ರೋ ದರ ಏರಿಕೆ; ಕೇಂದ್ರದ ಮೇಲೆ ಬೊಟ್ಟು ಮಾಡಿದ ರಾಜ್ಯ ಸರ್ಕಾರದ ವಿರುದ್ದ HD ಕುಮಾರಸ್ವಾಮಿ ಆಕ್ರೋಶ

0

ಬೆಂಗಳೂರು:- ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದರ ಶೇ.5 ರಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ HD ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ನಾವ್ ಸತ್ಯ ಹೇಳ್ತಿವಿ ಅಂತ ಹೇಳ್ತಾ ಸುಳ್ಳು ಹೇಳ್ತಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರದ್ದು ಕೇವಲ 20% ಅಂತಾರೆ. ರಾಜ್ಯ ಸರ್ಕಾರ ಹೆಚ್ಚಿನ ಹಣ ಹಾಕುವಾಗ, ಕೇಂದ್ರ ಸರ್ಕಾರದ ಮೇಲೆ ಏಕೆ ದೂಷಿಸುತ್ತಿದ್ದಾರೆ? ದರ ನಿಗದಿ ಮಾಡೋದು ಯಾರು? ಕೇಂದ್ರ ಸರ್ಕಾರದ ಮೇಲೆ ಹಾಕುವ ಚಾಳಿ ಅವರಿಗೆ. ಬೇರೆ ರಾಜ್ಯಗಳಲ್ಲಿ ಯಾಕೆ ದರ ಏರಿಕೆ ಆಗ್ತಿಲ್ಲ? ಇಲ್ಲಿ ನಮ್ಮದು ಹೆಚ್ಚಿನ ಪಾಲು ಅಂದ ಮೇಲೆ ಅಧಿಕಾರ ಯಾರಿಗೆ ಇದೆ? ಅಂತ ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಹಲವಾರು ತಪ್ಪು ನಿರ್ಣಯ, ಜನವಿರೋಧಿ ನೀತಿಗಳನ್ನ ಕೇಂದ್ರದ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಜನರಿಗೆ ಗ್ಯಾರಂಟಿ ಕೊಡ್ತಿದ್ದೇವೆ ಈ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಿದ್ದೇವೆ ಅಂತಾರೆ. ರಾಜ್ಯದಲ್ಲಿ ತಲಾ ಆದಾಯ, ಆರ್ಥಿಕ ಶಕ್ತಿ ನೀಡಿದ್ದೇವೆ ಅಂತ ಪದೇ ಪದೇ ಜಾಹೀರಾತು ಕೊಡ್ತಿದ್ದಾರೆ. ಜನಕ್ಕೆ ತೊಂದರೆ ಇಲ್ಲ, ಆರ್ಥಿಕವಾಗಿ ಚೆನ್ನಾಗಿದ್ದಾರೆ ಅನ್ನೋದು ರಾಜ್ಯ ಸರ್ಕಾರದ ಭಾವನೆ. ಆದ್ದರಿಂದ ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಭ್ರಮೆ ಎಂದು HD ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2.97 ಕೋಟಿ ಮೌಲ್ಯದ ಗಾಂಜಾ ಸೀಜ್!

0

ದೇವನಹಳ್ಳಿ:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 2.97 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಕೆಟ್ ಮತ್ತು ಮಲೇಶಿಯಾ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಏರ್ಪೋಟ್ ಗೆ ಮೂವರು ಆರೋಪಿಗಳು ಬಂದಿದ್ದರು. ಈ ವೇಳೆ ಪರಿಶೀಲನೆ ಮಾಡಿದಾಗ ಮೂವರ ಲಗೇಜ್ ಬ್ಯಾಗ್ ನಲ್ಲಿ 2 ಕೋಟಿ 97 ಲಕ್ಷ ಮೌಲ್ಯದ 8.5 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಕೂಡಲೇ ಮೂವರನ್ನು ವಶಕ್ಕೆ ಪಡೆದು ಆರೋಪಿಗಳ ಮೇಲೆ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮನೆಯ ಜಗುಲಿಯಲ್ಲಿ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ; ದಿಡುಪೆ ಗ್ರಾಮಸ್ಥರಲ್ಲಿ ಆತಂಕ!

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಗ್ರಾಮದ ಕೊಂಡಾಳು ಪ್ರದೇಶದಲ್ಲಿ ಭೀಕರ ಘಟನೆ ಸಂಭವಿಸಿದೆ.

ನಾರಾಯಣ ಗೌಡರ ಮನೆಯ ಹೊರ ಜಗುಲಿಯಲ್ಲಿ ಮಲಗಿದ್ದ ಸಾಕು ನಾಯಿಯನ್ನು ರಾತ್ರಿ ವೇಳೆ ಚಿರತೆ ಕಚ್ಚಿಕೊಂಡು ಹೊತ್ತೊಯ್ದಿದ್ದು, ಮನೆಯೊಳಗಿನ ಬೆಕ್ಕು ಅದೃಷ್ಟವಶಾತ್ ಬದುಕುಳಿದಿದೆ. ಮನೆಯ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಘಟನೆ ಕುರಿತಾಗಿ ದಿಡುಪೆ ಗ್ರಾಮಸ್ಥರಲ್ಲಿ ಭೀತಿ ಮೂಡಿದ್ದು, ರಾತ್ರಿ ವೇಳೆ ಹೊರಗೆ ಹೋಗಲು ಜನರು ಹೆದರುತ್ತಿದ್ದಾರೆ. ಈ ಹಿಂದೆ ಸಹ ದಿಡುಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಚಿರತೆ ಹೊತ್ತೊಯ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯ ಸಂಚರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಪ್ರಾಣಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ

ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್‌ ಮಾಡಿದ್ದ ಗೋಡೌನ್ ಮೇಲೆ ದಾಳಿ; ಮಾಲೀಕ ಪೊಲೀಸರ ವಶಕ್ಕೆ

0

ಬಳ್ಳಾರಿ:- ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಧಿಕಾರಿಗಳು ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿರುವ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ.

ಸರ್ಕಾರದಿಂದ ಬಂದ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿದ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿರುವ ಶಂಕೆಯಿದೆ. ಖಚಿತ ಮಾಹಿತಿಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಎಡ್ವಿನ್ ಎಂಬ ವ್ಯಕ್ತಿಗೆ ಸೇರಿದ ಗೋಡೌನ್‌ನಲ್ಲಿ ಸುಮಾರು 4,000ಕ್ಕೂ ಹೆಚ್ಚು ಚೀಲ ಗೊಬ್ಬರ ಪತ್ತೆಹಚ್ಚಿದ್ದಾರೆ.

ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಯೂರಿಯಾ ಗೊಬ್ಬರ ಸ್ಟಾಕ್ ಮಾಡುವ ಜಾಲ ಸಕ್ರಿಯವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಪ್ರಸಕ್ತ ಸಂದರ್ಭದಲ್ಲಿ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರ ಬೇಡಿಕೆ ಕಡಿಮೆಯಿದ್ದು, ಜೂನ್ ತಿಂಗಳ ಮುಂಗಾರು ವೇಳೆಗೆ ಮಾತ್ರ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ ಈಗಿನಿಂದಲೇ ಗೊಬ್ಬರ ಸಂಗ್ರಹಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಕಳೆದ ವರ್ಷ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಎದುರಾಗಿ ಸರಬರಾಜು ಕೊರತೆಯಾಗಿದೆ. ಈ ಪ್ರಕರಣ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಕೆಆರ್ ಪುರ| ಅನಧಿಕೃತ ನೇಮ್–ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ!

0

ಬೆಂಗಳೂರು:- ಕೆಆರ್ ಪುರದಲ್ಲಿ ಎರಡನೇ ಹಂತದ ನೇಮ್ ಬೋರ್ಡಿಂಗ್ ಮತ್ತು ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ ಜಿಬಿಎ ವಲಯದ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ ಜರುಗಿದೆ.

50ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ರಾತ್ರಿ ವೇಳೆ ಕೆಆರ್ ಪುರ ಜಂಕ್ಷನ್ ನಿಂದ ಮೇಡಹಳ್ಳಿ ವರೆಗೆ ಕಾರ್ಯಾಚರಣೆ ನಡೆಸಿ, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಬ್ಯಾನರ್‌ಗಳು, ನೇಮ್ ಬೋರ್ಡಿಂಗ್‌ಗಳು ತೆರವು ಮಾಡಲಾಗಿದೆ.

ಫ್ಲೆಕ್ಸ್ ಬ್ಯಾನರ್‌ಗಳಿಗೆ ಎಲ್ಇಡಿ ಲೈಟ್ ಅಳಿಸಿದ್ದವರಿಗೆ ದಂಡ ವಿಧಿಸಲಾಗಿದೆ. ರಾಜಕಾರಣಿಗಳ ಬ್ಯಾನರ್‌ಗಳನ್ನೂ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಅನಧಿಕೃತ ನೇಮ್ ಬೋರ್ಡಿಂಗ್‌ಗಳಿಂದ ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಸಾಗಣೆ ಸುಗಮವಾಗಲು ಕ್ರಮ ಕೈಗೊಂಡಿದ್ದಾರೆ.

ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್ ಗಳ ಮೇಲೆ ಎಸಿ ದಾಳಿ; 2400 ಮೂಟೆಗಳು ಜಪ್ತಿ

0

ಬಳ್ಳಾರಿ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಜೋಳ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ರೂಪನಗುಡಿ ಗ್ರಾಮದಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್‌ಗಳ ಮೇಲೆ ಬಳ್ಳಾರಿ ಸಹಾಯಕ ಆಯುಕ್ತ (ಎಸಿ) ರಾಜೇಶ್ ಹೆಚ್.ಡಿ ನೇತೃತ್ವದಲ್ಲಿ ದಾಳಿ ನಡೆಸಿದರು. ಈ ದಾಳಿಯಲ್ಲಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿತು. ದಾಳಿ ವೇಳೆ ರೈತರಿಂದ ಪಹಣಿ ಪಡೆದಿದ್ದ 2400 ಜೋಳದ ಮೂಟೆಗಳು ಪತ್ತೆಯಾಗಿದ್ದು, ಅಧಿಕಾರಿಗಳಿಂದ ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಈ ಜಾಲವು ರೈತರಿಂದ ಕಡಿಮೆ ಬೆಲೆಯಲ್ಲಿ ಜೋಳ ಖರೀದಿಸಿ, ನಂತರ ಸೇವಾ ಸಹಕಾರ ಸಂಘದ ಮೂಲಕ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಂತೆ ಕಂಡು ಬಂದಿದೆ. ಈ ಅಕ್ರಮ ಖರೀದಿ–ಮಾರಾಟದಲ್ಲಿ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಕುರಿತು ಸಹ ಅನುಮಾನ ವ್ಯಕ್ತವಾಗಿದೆ.

ಈ ಸಂಬಂಧ ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಧಿಕಾರಿಗಳು ಆರೋಪಿಗಳನ್ನ ಪತ್ತೆಹಚ್ಚಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಹಾವೇರಿ| ರಾಣೇಬೆನ್ನೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ: 15ಕ್ಕೂ ಹೆಚ್ಚು ಜನರಿಗೆ ಗಾಯ!

0

ಹಾವೇರಿ: ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದ್ದು, ಜನರು ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿಯೇ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದ್ದು, 15ಕ್ಕೂ ಅಧಿಕ ಜನರಿಗೆ ದಾಳಿ ಮಾಡಿ ಗಾಯಗೊಳಿಸಿದೆ. ವಿಶೇಷವಾಗಿ ಬಾಲಕನ ಮೇಲೆ ನಡೆದ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಬಳಿಕ ಜಿಲ್ಲೆ ಹಾಗೂ ಪಟ್ಟಣಗಳಲ್ಲಿಯೂ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಣೇಬೆನ್ನೂರು ನಗರದ ಉಮಾಶಂಕರ್ ಹಾಗೂ ಗೌರಿಶಂಕರ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಸಂಜೆಯ ವೇಳೆ ಮನೆಯ ಮುಂದೆ ನಿಂತಿದ್ದ ಬಾಲಕನ ಮೇಲೆ ಏಕಾಏಕಿ ಶ್ವಾನಗಳು ದಾಳಿ ನಡೆಸಿದ್ದು, ಅದೃಷ್ಟವಶಾತ್ ಬಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಇದೇ ನಾಯಿಗಳು ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳ ಮೇಲೂ ದಾಳಿ ನಡೆಸಿ ಗಾಯಗೊಳಿಸಿವೆ. ಹಾವೇರಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಬೀದಿ ನಾಯಿಗಳ ದಾಳಿ ಮುಂದುವರಿದಿದ್ದರೂ, ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಪ್ರಕಾಶ ಕೋಳಿವಾಡ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿ, ಸೂಕ್ತ ಚಿಕಿತ್ಸೆ ಒದಗಿಸುವ ಭರವಸೆ ನೀಡಿದ್ದಾರೆ. ಈ ಮಧ್ಯೆ ಜನರ ಮೇಲೆ ದಾಳಿ ಮಾಡುತ್ತಿರುವ ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ; ಯತೀಂದ್ರ ಹೇಳಿಕೆಗೆ ಜಿ ಪರಮೇಶ್ವರ್ ಹೇಳಿದ್ದೇನು?

0

ಚಿಕ್ಕಮಗಳೂರು:-ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂಬ ಯತೀಂದ್ರ ಅವರ ಹೇಳಿಕೆ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಐದು ವರ್ಷ ಸಿದ್ದರಾಮಯ್ಯ ಅವರು ಯಾಕೆ ಸಿಎಂ ಆಗಿರಬಾರದು. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದರೆ ಅದು ಸಂತೋಷ. ರಾಜ್ಯಕ್ಕೆ ಸದ್ಯ ಒಂದು ಸ್ಥಿರವಾದ ಆಡಳಿತ ನೀಡುತ್ತಿರುವ ಸರ್ಕಾರದ ಅವಶ್ಯಕತೆಯಿದ್ದು, ಸಿದ್ದರಾಮಯ್ಯನವರು ಅಂತಹ ಆಡಳಿತವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಹೀಗಿರುವಾಗ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.

ನಾಯಕತ್ವದ ಬಗ್ಗೆ ಕಾರ್ಯಕರ್ತರ ಆಶಯಗಳ ಕುರಿತು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ನನಗೆ ಅವರವರದ್ದೇ ಆದ ಬೆಂಬಲಿಗರು ಮತ್ತು ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತ ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದು ಸಹಜ. ಆದರೆ, ಕೇವಲ ಕಾರ್ಯಕರ್ತರು ಹೇಳಿದ ತಕ್ಷಣ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹೈಕಮಾಂಡ್ ಎಂಬ ವ್ಯವಸ್ಥೆಯಿದೆ. ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿದೆ. ಹೈಕಮಾಂಡ್ ಒಪ್ಪಿಗೆ ನೀಡಿದ ಮೇಲೆ ಆ ವಿಷಯ ಅಲ್ಲಿಗೆ ಮುಗಿಯಿತು ಎಂದರು.

ಸಂಜೆ 7ರಿಂದ ರಾತ್ರಿ 9ರವರೆಗೂ ಮೊಬೈಲ್–ಟಿವಿ ಬಂದ್!

0

ವಿಜಯಸಾಕ್ಷಿ ಸುದ್ದಿ, ರೋಣ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳ ಓದಿನ ಹಿತದೃಷ್ಟಿಯಿಂದ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಯಂಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಹಾಗೂ ಟಿವಿಗಳನ್ನು ಸ್ವಿಚ್ ಆಫ್ ಮಾಡುವಂತೆ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚರಿಸದಂತೆ ಡಂಗುರ ಸಾರಲು ರೋಣ ತಾಲೂಕು ಪಂಚಾಯಿತಿ ಆದೇಶ ಹೊರಡಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಣ ಇವರ ಪತ್ರದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳ ಓದಿಗೆ ಶಾಂತ ವಾತಾವರಣ ಒದಗಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುಧಾರಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಈ ಕುರಿತು ರೋಣ ಹಾಗೂ ಗಜೇಂದ್ರಗಡ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಕ್ಷಣ ಡಂಗುರ ಸಾರುವಂತೆ ಕ್ರಮ ಕೈಗೊಂಡು, ಅನುಷ್ಠಾನಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಸಮಯದಲ್ಲಿ ಮೊಬೈಲ್, ಟಿವಿ ಹಾಗೂ ಜೋರಾದ ಸಂಗೀತದಿಂದ ಮಕ್ಕಳ ಅಧ್ಯಯನಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ತಾಲೂಕು ಪಂಚಾಯಿತಿ ಮನವಿ ಮಾಡಿದೆ.

“ಇವತ್ತಿನ ಮಕ್ಕಳಿಗೆ ಓದಲು ಸಮಯ ಕೊಡುವುದು ತುಂಬಾ ಮುಖ್ಯ. ಸಂಜೆ ಹೊತ್ತಿಗೆ ಟಿವಿ, ಮೊಬೈಲ್, ಜೋರಾದ ಹಾಡುಗಳಿಂದ ಮಕ್ಕಳ ಗಮನ ಬೇರೆಡೆ ಹೋಗುತ್ತಿತ್ತು. ಸರ್ಕಾರ ಹಾಗೂ ತಾಲೂಕು ಪಂಚಾಯತ್ ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಒಳ್ಳೆಯದು. ನಾವು ಗ್ರಾಮಸ್ಥರು ಎಲ್ಲರೂ ಈ ಕಾರ್ಯಕ್ಕೆ ಸಹಕರಿಸುತ್ತೇವೆ”

  • ಶಿವಾನಂದ,
    ಗ್ರಾಮಸ್ಥರು.

“ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಓದಿಗೆ ಅನುಕೂಲವಾಗುವ ಶಾಂತ ವಾತಾವರಣ ನಿರ್ಮಾಣವೇ ಈ ಕ್ರಮದ ಉದ್ದೇಶ. ಸಾರ್ವಜನಿಕರ ಸಹಕಾರದಿಂದ ಉತ್ತಮ ಫಲಿತಾಂಶ ಸಾಧಿಸಬಹುದು”

  • ಚಂದ್ರಶೇಖರ ಬಿ.ಕಂದಕೂರ.
    ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು.

error: Content is protected !!