Home Blog Page 41

ಸಂಜೆ 7ರಿಂದ ರಾತ್ರಿ 9ರವರೆಗೂ ಮೊಬೈಲ್–ಟಿವಿ ಬಂದ್!

0

ವಿಜಯಸಾಕ್ಷಿ ಸುದ್ದಿ, ರೋಣ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳ ಓದಿನ ಹಿತದೃಷ್ಟಿಯಿಂದ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಯಂಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಹಾಗೂ ಟಿವಿಗಳನ್ನು ಸ್ವಿಚ್ ಆಫ್ ಮಾಡುವಂತೆ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚರಿಸದಂತೆ ಡಂಗುರ ಸಾರಲು ರೋಣ ತಾಲೂಕು ಪಂಚಾಯಿತಿ ಆದೇಶ ಹೊರಡಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಣ ಇವರ ಪತ್ರದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳ ಓದಿಗೆ ಶಾಂತ ವಾತಾವರಣ ಒದಗಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುಧಾರಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಈ ಕುರಿತು ರೋಣ ಹಾಗೂ ಗಜೇಂದ್ರಗಡ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಕ್ಷಣ ಡಂಗುರ ಸಾರುವಂತೆ ಕ್ರಮ ಕೈಗೊಂಡು, ಅನುಷ್ಠಾನಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಸಮಯದಲ್ಲಿ ಮೊಬೈಲ್, ಟಿವಿ ಹಾಗೂ ಜೋರಾದ ಸಂಗೀತದಿಂದ ಮಕ್ಕಳ ಅಧ್ಯಯನಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ತಾಲೂಕು ಪಂಚಾಯಿತಿ ಮನವಿ ಮಾಡಿದೆ.

“ಇವತ್ತಿನ ಮಕ್ಕಳಿಗೆ ಓದಲು ಸಮಯ ಕೊಡುವುದು ತುಂಬಾ ಮುಖ್ಯ. ಸಂಜೆ ಹೊತ್ತಿಗೆ ಟಿವಿ, ಮೊಬೈಲ್, ಜೋರಾದ ಹಾಡುಗಳಿಂದ ಮಕ್ಕಳ ಗಮನ ಬೇರೆಡೆ ಹೋಗುತ್ತಿತ್ತು. ಸರ್ಕಾರ ಹಾಗೂ ತಾಲೂಕು ಪಂಚಾಯತ್ ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಒಳ್ಳೆಯದು. ನಾವು ಗ್ರಾಮಸ್ಥರು ಎಲ್ಲರೂ ಈ ಕಾರ್ಯಕ್ಕೆ ಸಹಕರಿಸುತ್ತೇವೆ”

  • ಶಿವಾನಂದ,
    ಗ್ರಾಮಸ್ಥರು.

“ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಓದಿಗೆ ಅನುಕೂಲವಾಗುವ ಶಾಂತ ವಾತಾವರಣ ನಿರ್ಮಾಣವೇ ಈ ಕ್ರಮದ ಉದ್ದೇಶ. ಸಾರ್ವಜನಿಕರ ಸಹಕಾರದಿಂದ ಉತ್ತಮ ಫಲಿತಾಂಶ ಸಾಧಿಸಬಹುದು”

  • ಚಂದ್ರಶೇಖರ ಬಿ.ಕಂದಕೂರ.
    ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು.

ಕಿಡಿಗೇಡಿಗಳ ಕೃತ್ಯ; ನೀರು ಪೂರೈಕೆಯಲ್ಲಿ ವ್ಯತ್ಯಯ

0

ವಿಜಯಸಾಕ್ಷಿ ಸುದ್ದಿ, ಗದಗ: ಕಿಡಿಗೇಡಿಗಳು ನೀರು ಸರಬರಾಜು ಪೈಪ್‌ಲೈನ್‌ಗಳಲ್ಲಿ ಕಲ್ಲು, ಬಾಟಲಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ತುಂಬಿ ನೀರು ಸರಬರಾಜು ವ್ಯವಸ್ಥೆಗೆ ಅಡ್ಡಿಪಡಿಸಿರುವ ಪರಿಣಾಮ ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಪ್ರಕರಣ 1: ನಗರದ ಭೀಷ್ಮಕೆರೆ ಎದುರಿನ ಬನ್ನಿಕಟ್ಟಿ ಹತ್ತಿರದಲ್ಲಿ ಕೆಲವು ದಿನಗಳ ಹಿಂದೆ ನೀರು ಪೈಪ್‌ಲೈನ್ ಮೂಲಕ ಸರಬರಾಜು ಆಗದ ಹಿನ್ನೆಲೆ ಲೈನ್ ತೆರೆಯಿಸಿ ಪರಿಶೀಲನೆ ನಡೆಸಿದಾಗ, ಕಿಡಿಗೇಡಿಗಳು ನೀರು ಸರಬರಾಜು ಪೈಪ್‌ಲೈನ್‌ನಲ್ಲಿ ದೊಡ್ಡ ಹಾಗೂ ಸಣ್ಣ ಗಾತ್ರದ ಕಲ್ಲುಗಳನ್ನು ತುಂಬಿರುವುದು ಪತ್ತೆಯಾಗಿದೆ. ಈ ಕೃತ್ಯ ದುರುದ್ದೇಶಪೂರ್ವಕವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣ 2: ಬೆಟಗೇರಿಯ ಮಂಜುನಾಥ ನಗರ ಪ್ರದೇಶದಲ್ಲಿ ಐದು ಇಂಚು ಹಾಗೂ ಎರಡು ಇಂಚು ಲೈನ್‌ಗಳಲ್ಲಿ ಬಾಟಲಿಗಳು ಮತ್ತು ಕಲ್ಲುಗಳು ಸಿಲುಕಿಕೊಂಡ ಪರಿಣಾಮ ನೀರು ಸರಬರಾಜು ಅಸ್ತವ್ಯಸ್ತಗೊಂಡಿದೆ. ಮುಖ್ಯ ಲೈನ್ ತೆರೆಯಿಸಿ ಪರಿಶೀಲಿಸಿದಾಗ ಅನೇಕ ಕಡೆ ಲೈನ್‌ಗಳನ್ನು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿರುವುದು ಕಂಡು ಬಂದಿದೆ. ಇದರಿಂದ ಹಲವಾರು ಭಾಗಗಳಿಗೆ ನೀರು ಸರಿಯಾಗಿ ತಲುಪುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಘಟನೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು. ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಸಾರ್ವಜನಿಕರಿಗೆ ನೀರು ಸರಬರಾಜು ವಿಳಂಬವಾಗಿದ್ದು, ಇದು ಅತ್ಯಂತ ಗಂಭೀರ ವಿಷಯವಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ ಇಂತಹ ಕೃತ್ಯಗಳನ್ನು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೀರು ಸರಬರಾಜಿಗೆ ಅಡ್ಡಿಪಡಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಸಹಕರಿಸಿ, ಇಂತಹ ಕಿಡಿಗೇಡಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣ ನಗರಸಭೆ ಅಧಿಕಾರಿಗಳಿಗೆ ಅಥವಾ ಜಿಲ್ಲಾಡಳಿತ ಕಚೇರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸೇವೆಗೆ ಅಡ್ಡಿಯಾಗುವ ಇಂತಹ ಕೃತ್ಯಗಳನ್ನು ತಡೆಯಲು ಎಲ್ಲರ ಸಹಕಾರ ಅಗತ್ಯವಿದ್ದು, ನಗರದ ಪ್ರಜೆಗಳು ಜಾಗೃತೆಯಿಂದ ವರ್ತಿಸಿ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

U19 World Cup: 100 ರನ್‌ಗಳಿಂದ ಇಂಗ್ಲೆಂಡ್ ಮಣಿಸಿ 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ!

0

ಹರಾರೆ: ಅಂಡರ್‌19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಯುವ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ.

ಈ ಜಯದಿಂದ ಭಾರತ ಆರನೇ ಬಾರಿ U19 ವಿಶ್ವಕಪ್ ಶಿರೋಮಣಿಯನ್ನು ತನ್ನದಾಗಿಸಿತು.
ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್‌ಗಳನ್ನು ಕಲೆಹಾಕಿತು. ಈ ಭಾರೀ ಸ್ಕೋರ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿಯ ಅದ್ಭುತ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತು. ವೈಭವ್ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಭೀಕರ ಇನ್ನಿಂಗ್ಸ್ ಆಡಿದರು. ಇವರ ಈ ಶತಕದಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.

ಭಾರತದ ಆರಂಭಿಕ ಕ್ಷಣಗಳು ಕಷ್ಟಕರವಾಗಿದ್ದರೂ, ಆರನ್ ಜಾರ್ಜ್ 9 ರನ್‌ಗಳಷ್ಟೇ ಗಳಿಸಿದ್ದರೂ, ವೈಭವ್ ಮತ್ತು ನಾಯಕ ಆಯುಷ್ ಮ್ಹಾತ್ರೆ 142 ರನ್ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಸ್ಥಿರಗೊಳಿಸಿದರು. ಮ್ಹಾತ್ರೆ 51 ಎಸೆತಗಳಲ್ಲಿ 53 ರನ್ ಗಳಿಸಿದರೆ, ವೈಭವ್ 32 ಎಸೆತಗಳಲ್ಲಿ ಅರ್ಧಶತಕ, 55 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ 71 ಎಸೆತಗಳಲ್ಲಿ 150 ರನ್‌ಗಳನ್ನು ತಲುಪಿದ ವೈಭವ್ ಅಂತಿಮವಾಗಿ 80 ಎಸೆತಗಳಲ್ಲಿ 175 ರನ್‌ಗಳಿಂದ ಔಟಾದರು. ಕೊನೆಯ 7 ವಿಕೆಟ್‌ಗಳು 160 ರನ್‌ಗಳನ್ನು ಸೇರಿಸಿ ಭಾರತ 411 ರನ್‌ಗಳಷ್ಟು ಮಾಡಿತು.

ಇಂಗ್ಲೆಂಡ್ ತಂಡ 412 ರನ್‌ಗಳ ಗುರಿಯನ್ನು ಬೆನ್ನಟ್ಟಲು 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಕ್ಯಾಲೆಬ್ ಫಾಕ್ನರ್ 67 ಎಸೆತಗಳಲ್ಲಿ 115 ರನ್ ಗಳಿಸಿದರೂ, ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಕ್ಕಿರಲಿಲ್ಲ. ಬೆನ್ ಡಾಕಿನ್ಸ್ 66, ಬೆನ್ ಮೇಯಸ್ 45 ರನ್ ಗಳಿಸಿದರು. ಮಧ್ಯಮ ಓವರ್‌ಗಳಲ್ಲಿ 8 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಇಂಗ್ಲೆಂಡ್ ತಂಡ ಭಾರತ ನೀಡಿದ ಭಾರೀ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಭಾರತದ ಗೆಲುವಿಗೆ ವೈಭವ್ ಸೂರ್ಯವಂಶಿಯ ಶತಕ, ತಂಡದ ಸಮಗ್ರ ಪ್ರದರ್ಶನ ಮತ್ತು ಧೈರ್ಯವು ಪ್ರಮುಖ ಕಾರಣವಾಗಿದ್ದು, ಯುವ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಐತಿಹಾಸಿಕ ಕ್ಷಣವನ್ನು ನೀಡಿತು.

ಶಿವಮೊಗ್ಗ| ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡ್ತಿದ್ದ ಜಾಲ ಭೇದಿಸಿದ ಪೊಲೀಸರು!

0

ಶಿವಮೊಗ್ಗ:- ಶಿವಮೊಗ್ಗದಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಲಕ್ಷ್ಮಣಪ್ಪ ಬಂಧಿತ ಆರೋಪಿ. ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಇದರ ಜೊತೆಗೆ ನಾಡ ಬಂದೂಕು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಾರ್ಪೆಂಟರ್ ಆಗಿದ್ದ ಲಕ್ಷ್ಮಣಪ್ಪ, ತನ್ನ ಮನೆಯ ಪಕ್ಕದ ಹಳೆ ಮನೆಯಲ್ಲಿ ಬಂದೂಕು ತಯಾರಿಸುತ್ತಿದ್ದ . ಇದುವರೆಗೆ 7 ಸಿಂಗಲ್ ಬ್ಯಾರಲ್​​ ಬಂದೂಕುಗಳನ್ನು ತಯಾರಿಸಿಟ್ಟಿದ್ದಾನೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಬೇಟೆಗಾಗಿ ಬಳಸುವ ಉದ್ದೇಶದಿಂದ ಈ ನಾಡ ಬಂದೂಕುಗಳನ್ನು ಸಿದ್ಧಪಡಿಸಿ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ಪೊಲೀಸರು ದಾಳಿ ಮಾಡಿದಾಗ 7 ನಾಡ ಬಂದೂಕುಗಳು ಪತ್ತೆಯಾಗಿವೆ. ಇನ್ನು ತನಿಖೆಯ ವೇಳೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಯ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಬಂದೂಕುಗಳಿಗೆ ಅಗತ್ಯವಿರುವ ಟ್ರಿಗರ್, ಟ್ರಿಗರ್ ಗಾರ್ಡ್, ಬಿಡಿ ಭಾಗಗಳು ಹಾಗೂ ಹಳೆಯ ಸ್ಟೀರಿಂಗ್‌ಗಳನ್ನು ಶಿವಮೊಗ್ಗದ ವಿವಿಧ ಗುಜರಿ ಅಂಗಡಿಗಳಿಂದ ಖರೀದಿಸಲಾಗುತ್ತಿತ್ತು. ಬಂದೂಕಿಗೆ ಬೇಕಾದ ಮರದ ಹಿಡಿಕೆಗಳನ್ನು ಲಕ್ಷ್ಮಣಪ್ಪ ತಾನೇ ತಯಾರಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸದ್ಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯಡಿ ಲಕ್ಷ್ಮಣಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ರೈತರ ಆರ್ಥಿಕ ಅಭಿವೃದ್ಧಿಗೆ ಹಸುಗಳು ಸಹಕಾರಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ರೈತರು ಆರ್ಥಿಕವಾಗಿ ಸದೃಢರಾಗಲು ಹಸುಗಳು ಹಾಗೂ ಎತ್ತುಗಳ ಸಾಕಾಣಿಕೆ ಸಹಕಾರಿ ಎಂದು ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಅವರು ಪಟ್ಟಣ ಸಮೀಪದ ಕಣವಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಗದಗ, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಗದಗ, ಧಾರವಾಡ ಹಾಗೂ ಗದಗ, ಕಣವಿ ಸಹಕಾರಿ ಹಾಲು ಉತ್ಪಾದಕರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ತಾಲೂಕು ಮಟ್ಟದ ಮಿಶ್ರ ತಳಿ ಹಸುಗಳ ಅಧಿಕ ಹಾಲು ಇಳುವರಿ ಸ್ಪರ್ಧೆ, ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದರು.

ಹಸುಗಳ ಸಾಕಾಣಿಕೆಯಿಂದ ಇಳಿಕೆಯಿಂದಲ್ಲದೆ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ನಮ್ಮ ಪೂರ್ವಜರು ಪ್ರತಿಯೊಂದು ಕುಟುಂಬದಲ್ಲಿ ಹಸು ಹಾಗೂ ಎತ್ತುಗಳ ಸಾಕಾಣಿಕೆಯಿಂದ ಆರ್ಥಿಕವಾಗಿ ಅಭಿವೃದ್ಧಿಯ ಜೊತೆಯಲ್ಲಿ, ಉತ್ತಮ ಆರೋಗ್ಯವಂತ ಬದುಕು ಬದುಕುತ್ತಿದ್ದರು. ಈಗ ಹಳ್ಳಿಗಳಲ್ಲಿ ಹಸುಗಳ ಇಳಿಕೆಯಿಂದ ಹಳ್ಳಿಗಳು ಅನಾಥಾಶ್ರಮಗಳಾಗಿ ಪರಿಣಮಿಸುತ್ತಿದ್ದು, ಹಸುಗಳ ಸಾಕಾಣಿಕೆಯಿಂದ ಭೂಮಿ ಫಲವತ್ತತೆ ಹೊಂದಲು ಸಾಧ್ಯ. ಇದರಿಂದ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಡಿ.ಆರ್. ಪಾಟೀಲ್ ಮಾತನಾಡಿ, ಹಿಂದಿನ ಕಾಲದ ರೈತರ ಜೀವನ ಶೈಲಿ ಮರಳಿಸಬೇಕಾದರೆ ಪ್ರತಿಯೊಬ್ಬರೂ ಹಸುಗಳನ್ನು ಸಾಕಾಣಿಕೆ ಮಾಡಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದರು.

ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ ಮಾತನಾಡಿ, ಕೆ.ಸಿ.ಸಿ ಬ್ಯಾಂಕ್ ಸಹಯೋಗದಲ್ಲಿ ಜಾನುವಾರುಗಳ ಸಾಕಾಣಿಕೆಗೆ ಸಾಕಷ್ಟು ಸಹಾಯವನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಅಧ್ಯಕ್ಷತೆಯನ್ನು ಪರಪ್ಪ ಕೋಳಿವಾಡ, ಶಿವಕುಮಾರಗೌಡ ಪಾಟೀಲ, ಲಿಂಗರಾಜ ಪಾಟೀಲ, ಪ್ರಕಾಶ ಉಳವಿ, ಮಾಹಾದೇವಪ್ಪ ಬಟ್ಟೂರ, ಸವಿತಾ ಸೋಮಣ್ಣವರ, ಎಸ್.ವೈ. ಕೋರಿ, ಡಾ. ಎಚ್.ಬಿ. ಹುಲಗಣ್ಣವರ, ಲಿಂಗಯ್ಯ ಗೌರಿ, ಎಸ್.ಎಸ್. ಹೊಸಮಠ, ಎಂ.ಜಿ. ಮೇಟಿ, ಡಾ. ಎಚ್.ವಾಯ್. ಹೊನ್ನಿನಾಯ್ಕರ್, ಪ್ರಸನ್ನ ಪಟ್ಟೆದ, ಇಮಾಮಸಾಬ ಕಿಲ್ಲೇದಾರ, ಮಲ್ಲಪ್ಪ ಬಂದಕನವರ, ಸಿದ್ದಪ್ಪ ಜೊಂಡಿ, ಬಾಪುಸಾಬ ಕಿಲ್ಲೇದಾರ ಇದ್ದರು.

ಕಣವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ನಶಿಸುತ್ತಿರುವ ಕೃಷಿ ಚಟುವಟಿಕೆಗಳಿಗೆ ಕಾರಣ ಜಾನುವಾರುಗಳ ಕೊರತೆಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಪ್ರತಿಯೊಬ್ಬರೂ ಕೃಷಿಯೊಂದಿಗೆ ಜಾನುವಾರು ಸಾಕಾಣಿಕೆಯಿಂದ

ಮಕ್ಕಳ ಮನ ಮುದಗೊಳಿಸಿದ ಪಾಲಕರ ಆಟೋಟ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಪಂಚಾಚಾರ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾವು ಆಡುವಂತೆ ತಮ್ಮ ಪಾಲಕರೂ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡಿರುವುದನ್ನು ಕಂಡು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ಸಂತಸಪಟ್ಟರು.

ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಲಕರ ದಿನಾಚರಣೆಯನ್ನು ವೈಶಿಷ್ಟ್ಯಮಯವಾಗಿ ಆಚರಿಸಿದ ಶಾಲಾ ಬಳಗ ಮಕ್ಕಳೆದುರಿಗೆ ವೈವಿಧ್ಯಮಯ ಆಟೋಟಗಳನ್ನು ಪಾಲಕರಿಂದ ಆಡಿಸುವ ಮೂಲಕ ಚಿಣ್ಣರ ಮನ ಮುದಗೊಳ್ಳಲು ಕಾರಣರಾದರು.

ಮಹಿಳಾ ಪಾಲಕರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಸಿಗೆ ನೀರು ಹಾಕುವುದು, ಮ್ಯೂಸಿಕಲ್ ಚೇರ್, ಪುರುಷರಿಗಾಗಿ ಓಟ, ಬಾಟಲ್ ಜೋಡಣೆ, ಹಣೆಯ ಮೇಲಿನ ಬಿಸ್ಕತ್‌ನ್ನು ಕೈ ತಾಗಿಸದೆ ಬಾಯಿಗೆ ಬೀಳಿಸುವುದು ಸೇರಿದಂತೆ ವಿವಿಧ ಆಟಗಳನ್ನು ಆಡಿಸಲಾಯಿತು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ವಿ.ಎ. ಕುಂಬಾರ, ಪಾಲಕರು ದೈಹಿಕ, ಮಾನಸಿಕ ವೃದ್ಧಿಗಾಗಿ ಯಾವುದಾದರೊಂದು ಕಾರ್ಯಚಟುವಟಿಕೆಯಲ್ಲಿ ತೊಡಗಬೇಕು. ಈ ಮೂಲಕ ಅವರು ಸುಂದರ ಬದುಕು ಸಾಗಿಸುವಂತಾಗಬೇಕು ಎಂದರು.

ತಮ್ಮ ಮಕ್ಕಳ ಆಟ-ಪಾಠವನ್ನು ನೋಡಿ ಸಂತಸಪಡುವ ಪಾಲಕರೇ ಸ್ವತಃ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ಅದರಲ್ಲೂ ತಾಯಂದಿರು ಕ್ರೀಡೆಯಲ್ಲಿ ಪಾಲ್ಗೊಂಡಿರುವುದು ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬೆಟಗೇರಿ ಮಾತನಾಡಿ, ಪಾಲಕರಿಗಾಗಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಂದೆ-ತಾಯಿ, ಕುಟುಂಬದವರು ಭಾಗವಹಿಸುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಮತ್ತು ಪಾಲಕರು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದರು.

ದೈಹಿಕ ಶಿಕ್ಷಕ ರಫೀಕ ರೇವಡಿಗಾರ ಹಾಗೂ ವಿ.ಬಿ. ಬಿಂಗಿ ಪಾಲಕರಿಗೆ ವಿವಿಧ ಕ್ರೀಡೆಗಳನ್ನು ಆಡಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಆರ್‌ಎಎಫ್, ಪೊಲೀಸ್ ಪಡೆಯಿಂದ ಪರೇಡ್

0

ವಿಜಯಸಾಕ್ಷಿ ಸುದ್ದಿ, ರೋಣ: ನಾಗರಿಕ ಸಮಾಜದಲ್ಲಿ ಭಯವನ್ನು ಹೋಗಲಾಡಿಸಿ ನೆಮ್ಮದಿಯ ಬದುಕು ಕಳೆಯಲು ಕೇಂದ್ರ ಮೀಸಲು ಪಡೆ ಆರ್‌ಎಎಫ್ ಹಾಗೂ ಪೊಲೀಸ್ ಪಡೆಯಿಂದ ಪಟ್ಟಣದಲ್ಲಿ ಪರೇಡ್ ನಡೆಯಿತು.

ಶುಕ್ರವಾರ ಮಧ್ಯಾಹ್ನ ಪಟ್ಟಣದ ಸೂಡಿ ವೃತ್ತದಿಂದ ಆರಂಭಗೊಂಡ ಪರೇಡ್ ಮುಲ್ಲಾನಭಾವಿ ವೃತ್ತ, ಪೋತರಾಜನ ಕಟ್ಟೆ, ಜಕ್ಕಲಿ ಕ್ರಾಸ್, ಬಸ್ ನಿಲ್ದಾಣದ ಮೂಲಕ ಪೊಲೀಸ್ ಠಾಣೆ ತಲುಪಿತು.

ಈ ಸಂದರ್ಭದಲ್ಲಿ ಆರ್‌ಎಎಫ್‌ನ ಅಸಿಸ್ಟಂಟ್ ಕಮಾಂಡರ್ ಅನಿಲಕುಮಾರ ಜಾಧವ ಮಾತನಾಡಿ, ಜನರು ಭಯಮುಕ್ತ ವಾತಾವರಣದಲ್ಲಿ ಜೀವನ ನಡೆಸಬೇಕು ಎಂಬ ಮಹತ್ವದ ಉದ್ದೇಶದಿಂದ ಆರ್‌ಎಎಫ್ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳಿಂದ ಪರೇಡ್ ನಡೆಸಲಾಗುತ್ತಿದೆ. ಅಲ್ಲದೆ ರೋಣ ಪಟ್ಟಣದ ವಾತಾವರಣದ ಜೊತೆಗೆ ಇಲ್ಲಿನ ವ್ಯವಸ್ಥೆಯನ್ನು ಅರಿಯುವುದು ಹಾಗೂ ಸಕಾಲಕ್ಕೆ ಆಗಮಿಸಿ ರಕ್ಷಣೆ ನೀಡುವ ಹೊಣೆಗಾರಿಕೆಯನ್ನು ನಾವೆಲ್ಲರೂ ಹೊಂದಿದ್ದೇವೆ ಎಂದರು.

ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾತನಾಡಿ, ಸಾರ್ವಜನಿಕರ ರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಇಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹತೋಟಿಗೆ ತರಲು ಸಹ ಆರ್‌ಎಎಫ್ ತಂಡ ನಮ್ಮೊಂದಿಗೆ ಸಹಕರಿಸಲಿದೆ. ಮುಖ್ಯವಾಗಿ, ನಾಗರಿಕ ಸಮಾಜ ಸಹ ಪೊಲೀಸರ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿ ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತಿ ಅವಶ್ಯಕ ಎಂದರು.

ಆರ್‌ಎಎಫ್ ಪಿಎಸ್‌ಐ ಜೆ.ಜಿ. ಸುರೇಶ, ಪಿಎಸ್‌ಐ ಪ್ರಕಾಶ ಬಣಕಾರ, ವಿ.ಎಸ್. ಚವಡಿ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರೋಣ ತಾಲೂಕಿನ ಜಿಗಳೂರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಇಡೀ ತಾಲೂಕನ್ನೇ ಶೋಕದಲ್ಲಿ ಮುಳುಗಿಸಿದೆ. ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರನ್ನು ಹೊತ್ತ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಗಜೇಂದ್ರಗಡದಿಂದ ರೋಣದತ್ತ ಸಾಗುತ್ತಿದ್ದ ಕ್ರೂಸರ್ ವಾಹನಕ್ಕೆ, ನಿಯಂತ್ರಣ ತಪ್ಪಿದ ಕ್ಯಾಂಟರ್ ಅಪ್ಪಳಿಸಿದ ಪರಿಣಾಮ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ರಸ್ತೆ ಮೇಲೆ ತಿರುಗಿಬಿದ್ದಿತ್ತು. ವಿಷಯ ತಿಳಿದ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಶುಕ್ರವಾರ ಸಂಜೆ ಗಜೇಂದ್ರಗಡ ಪಟ್ಟಣದ ಶಿವಾಜಿ ಪೇಟೆ ಹಾಗೂ ವಾಜಪೇಯಿ ನಗರದಲ್ಲಿರುವ ಮೃತರಾದ ಮರಿಮಬ ಹುನಗುಂದ, ಅನ್ನಪೂರ್ಣ ಬಾಗೋಜಿ, ಸುಜಾತಾ ಹೊಸಮನಿ ಅವರ ನಿವಾಸಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದುಡಿಮೆಗಾಗಿ ಹೊರಟ ಬಡ ಕಾರ್ಮಿಕರ ಜೀವ ಹೀಗೆ ರಸ್ತೆಯಲ್ಲಿ ಕಳೆದು ಹೋಗುವುದು ನೋವಿನ ಸಂಗತಿ. ಈ ನೋವನ್ನು ಸಂಪೂರ್ಣವಾಗಿ ತೀರಿಸಲಾಗದು. ಆದರೆ, ಸರ್ಕಾರ ಅವರ ಕುಟುಂಬದವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗುವುದು. ಅಗತ್ಯ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪರಿಹಾರದ ಧನ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಶೇಖಪ್ಪ ರಾಮಜಿ, ರಾಜು ಸಾಂಗ್ಲಿಕರ್, ಮುರ್ತುಜಾ ಡಾಲಾಯತ, ಅರ್ಜುನ್ ರಾಠೋಡ, ಪ್ರಭು ಚವಡಿ, ಶ್ರೀಧರ ಬಿದರಳ್ಳಿ ಸೇರಿದಂತೆ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಮೃತ ಕುಟುಂಬಗಳಿಗೆ ತಕ್ಷಣ ಪರಿಹಾರ ಧನ ಬಿಡುಗಡೆ ಆಗಬೇಕು. ಅಲ್ಲದೆ ಸರ್ಕಾರ ನೀಡುವ ಪರಿಹಾರವನ್ನು ಕನಿಷ್ಠ 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಗಾಯಾಳುಗಳಿಗೆ 2 ಲಕ್ಷ ರೂ ನೀಡಬೇಕು. ಕೇವಲ ಸರ್ಕಾರದ ಪರಿಹಾರವಲ್ಲ, ವೈಯಕ್ತಿಕ ನೆರವಿಗೂ ಒತ್ತು ನೀಡಬೇಕು.

– ದಾವಲಸಾಬ ತಾಳಿಕೋಟಿ
ಮುಸ್ಲಿಂ ಸಮಾಜದ ಮುಖಂಡರು.

ಲಕ್ಕುಂಡಿಯ ಗತವೈಭವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ: ಸಚಿವ ಡಾ. ಎಚ್.ಕೆ. ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಗದಗ: ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲಕ್ಕುಂಡಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಲಕ್ಕುಂಡಿಯ ಗತವೈಭವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.

ಲಕ್ಕುಂಡಿಯ ಚೌಕಿಮಠದ ಆವರಣದಲ್ಲಿ ಶುಕ್ರವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಗದಗ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಪಂಚ ದೇವಾಲಯಗಳು ಮತ್ತು ಪಂಚ ಬಾವಿಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಗಣರಾಜ್ಯೋತ್ಸವ ದಿನಾಚರಣೆಯಂದು ನಾವು ಹೇಳಿದಂತೆ ಲಕ್ಕುಂಡಿಯ ಪಂಚದೇವಾಲಯ, ಪಂಚ ಬಾವಿ ಅನಾವರಣ ಮಾಡಿದ್ದೇವೆ. ಉತ್ಖನನ ಕಾರ್ಯದಲ್ಲಿ ಶಿಲ್ಪಕಲೆ, ಪ್ರಾಚ್ಯಾವಶೇಷಗಳನ್ನು ಹೊರತಂದು ಲಕ್ಕುಂಡಿಯ ಗತವೈಭವ ಮರುಕಳಿಸುವಂತಾಗಬೇಕು. ಈ ಉತ್ಖನನ ಕಾರ್ಯ ಕೇವಲ ಆ ಸ್ಥಳದಲ್ಲಿನ ಬಂಗಾರ ಗುರುತಿಸುವುದಕ್ಕಲ್ಲ. ಆದರೆ ಲಕ್ಕುಂಡಿಯಲ್ಲಿನ ಭವ್ಯ ಐತಿಹಾಸಿಕ, ಸಾಂಸ್ಕೃತಿಕ, ಶಿಲ್ಪಕಲೆಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿದೆ. ಇಲ್ಲಿನ 101 ಬಾವಿ ಹಾಗೂ 101 ದೇವಾಲಯಗಳನ್ನು ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಸಿಕ್ಕಿರುವ ದೇವಾಲಯ, ಬಾವಿ ಪುನರುಜ್ಜೀವನ ನಡೆಸುತ್ತೇವೆ. ಈ ದೇವಾಲಯಗಳಿಗೆ ರಸ್ತೆ ಸಂಪರ್ಕ ಒದಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವಾಸ್ತವತೆಯನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಇತಿಹಾಸವನ್ನು ಹೆಕ್ಕಿ ತೆಗೆಯಲು ಸಹಕರಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪ್ರಾಧಿಕಾರದ ಕಚೇರಿಯಲ್ಲಿ ಒಂದು ರಜಿಸ್ಟರ್ ಹಾಗೂ ಕ್ಯಾಮರಾವನ್ನು ಇಡಲಾಗಿದ್ದು, ಗ್ರಾಮಸ್ಥರು, ಹಿರಿಯರು, ಅನುಭವಿಗಳು ಹೇಳುವ ಅಂಶಗಳನ್ನು ಇಲ್ಲಿ ದಾಖಲಿಸುವ ಕಾರ್ಯವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಲಕ್ಕುಂಡಿಗೆ ಹೊಸ ಸ್ವರೂಪ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಅನುದಾನ ನೀಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರ ಸಹಕಾರವೂ ಸಹ ಇದೆ. ಎಂದೂ ಕಂಡರಿಯದ ಪ್ರಾಚ್ಯಾವಶೇಷದ ಉತ್ಖನನ ಕಾರ್ಯ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ಅ.ಧ. ಕಟ್ಟಿಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ತೇಜೇಶ್ವರ ಸೇರಿದಂತೆ ಗಣ್ಯರು, ಪ್ರಮುಖರು, ಗ್ರಾಮದ ಹಿರಿಯರು ಹಾಜರಿದ್ದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿದರು.

ವಿದ್ಯಾಶಂಕರಲಿಂಗ ದೇವಾಲಯ, ಸೋಮನಕಟ್ಟಿ ಸೋಮಲಿಂಗೇಶ್ವರ ದೇವಾಲಯ, ಚೌಕಿಮಠದ ಈಶ್ವರ ದೇವಾಲಯ, ಚೌಕಿಮಠದ ಅರ್ಧ ನಾರೀಶ್ವರ ದೇವಾಲಯ, ಕಪ್ಪಚರಮಠ ಮತ್ತು ಬಾವಿಗಳನ್ನು ಅನಾವರಣಗೊಳಿಸಲಾಯಿತು. ಅಂತೆಯೇ ಛಬ್ಬೇರ ಬಾವಿ, ಸಿದ್ದರಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಚೌಕಿಮಠದ ಬಾವಿ, ಸೋಮನಕಟ್ಟಿ ಸೋಮಲಿಂಗೇಶ್ವರ ಬಾವಿಗಳನ್ನು ಅನಾವರಣಗೊಳಿಸಲಾಯಿತು.

“ಈ ಹಿಂದೆ ಲಕ್ಕುಂಡಿಯಲ್ಲಿ 10 ಪಲ್ಲಕ್ಕಿಗಳನ್ನು ತೆಗೆದುಕೊಂಡು ಲಕ್ಕುಂಡಿಯ ಪ್ರತಿ ಬೀದಿಗೆ ಬಂದಾಗ ನೀವು ನಿಮ್ಮ ಮನೆಯಲ್ಲಿನ ಶಿಲ್ಪ, ವಾಸ್ತು, ಮುತ್ತು, ಹವಳ, ಆಯುಧಗಳನ್ನು ನೀಡಿದ್ದೀರಿ. ಲಕ್ಕುಂಡಿಯ ಜನರು ವಿಶಾಲ ಮನೋಭಾವವುಳ್ಳವರು. ಲಕ್ಕುಂಡಿಯ ಪ್ರಜ್ವಲ ರಿತ್ತಿ ಕುಟುಂಬದವರ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಎಲ್ಲರೂ ಮೆಚ್ಚುವಂತಹದ್ದಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಿತ್ತಿ ಕುಟುಂಬದವರನ್ನು ಅಭಿನಂದಿಸಿದ್ದಾರೆ”

– ಎಚ್.ಕೆ. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು.

ಲವರ್ಸ್ ಡೇ ದಿನದಂದು ನಂದಿಬೆಟ್ಟಕ್ಕೆ ಹೋಗೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸುದ್ದಿ ನೋಡಿ!

0

ಚಿಕ್ಕಬಳ್ಳಾಪುರ:- ಫೆಬ್ರವರಿ 14ರ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರೇಮಿಗಳು ಸೇರಿದಂತೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರಣಯ ಪಕ್ಷಿಗಳ ಕಲರವೇ ಹೆಚ್ಚಾಗಿರುತ್ತಿದೆ. ಈ ದಿನದಂದು ಕೆಲ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡರೆ, ಮತ್ತೆ ಕೆಲವರು ಒಬ್ಬರಿಗೊಬ್ಬರು ತಬ್ಬಿ ಮುದ್ದಾಡುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ. ಆದರೆ ಈ ಭಾರಿ ಪ್ರೇಮಿಗಳ ದಿನಾಚರಣೆಗೆ ಅಂದರೆ ಫೆ.14ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿಗಿರಿಧಾಮ ಬಂದ್​ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳಲಾಗಿದ್ದು, ಡಿಸಿ ಜಿ.ಪ್ರಭು ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ?

ನಂದಿ ಬೆಟ್ಟಕ್ಕೆ ಪ್ರತಿ ವರ್ಷದಂತೆ ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಸಲುವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.

ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗಡೆಯಿಂದ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯ ವರ್ತನೆಗಳನ್ನು ಮಾಡಿ ಈ ಆಚರಣೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರು ಭಾಗವಹಿಸುವುದರಿಂದ ಕುಡಿದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು, ಇತರ ಪ್ರವಾಸಿಗರಿಗೆ ತೊಂದರೆ ನೀಡುವುದು ಹಾಗೂ ಬೆಟ್ಟದ ಮೇಲೆ ನಿಷೇಧಿತ ಅಪಾಯಕರ ಸ್ಥಳಗಳಿಗೆ ಹೋಗುವ ಸಾಧ್ಯತೆಗಳು ಇರುತ್ತವೆ.

ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಸಹ ಯಾವುದೇ ಪ್ರಯೋಜನೆಗಳು ಆಗುವ ಸಾಧ್ಯತೆ ಇಲ್ಲ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

error: Content is protected !!