Home Blog Page 42

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರೋಣ ತಾಲೂಕಿನ ಜಿಗಳೂರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಇಡೀ ತಾಲೂಕನ್ನೇ ಶೋಕದಲ್ಲಿ ಮುಳುಗಿಸಿದೆ. ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರನ್ನು ಹೊತ್ತ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಗಜೇಂದ್ರಗಡದಿಂದ ರೋಣದತ್ತ ಸಾಗುತ್ತಿದ್ದ ಕ್ರೂಸರ್ ವಾಹನಕ್ಕೆ, ನಿಯಂತ್ರಣ ತಪ್ಪಿದ ಕ್ಯಾಂಟರ್ ಅಪ್ಪಳಿಸಿದ ಪರಿಣಾಮ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ರಸ್ತೆ ಮೇಲೆ ತಿರುಗಿಬಿದ್ದಿತ್ತು. ವಿಷಯ ತಿಳಿದ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಶುಕ್ರವಾರ ಸಂಜೆ ಗಜೇಂದ್ರಗಡ ಪಟ್ಟಣದ ಶಿವಾಜಿ ಪೇಟೆ ಹಾಗೂ ವಾಜಪೇಯಿ ನಗರದಲ್ಲಿರುವ ಮೃತರಾದ ಮರಿಮಬ ಹುನಗುಂದ, ಅನ್ನಪೂರ್ಣ ಬಾಗೋಜಿ, ಸುಜಾತಾ ಹೊಸಮನಿ ಅವರ ನಿವಾಸಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದುಡಿಮೆಗಾಗಿ ಹೊರಟ ಬಡ ಕಾರ್ಮಿಕರ ಜೀವ ಹೀಗೆ ರಸ್ತೆಯಲ್ಲಿ ಕಳೆದು ಹೋಗುವುದು ನೋವಿನ ಸಂಗತಿ. ಈ ನೋವನ್ನು ಸಂಪೂರ್ಣವಾಗಿ ತೀರಿಸಲಾಗದು. ಆದರೆ, ಸರ್ಕಾರ ಅವರ ಕುಟುಂಬದವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗುವುದು. ಅಗತ್ಯ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪರಿಹಾರದ ಧನ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಶೇಖಪ್ಪ ರಾಮಜಿ, ರಾಜು ಸಾಂಗ್ಲಿಕರ್, ಮುರ್ತುಜಾ ಡಾಲಾಯತ, ಅರ್ಜುನ್ ರಾಠೋಡ, ಪ್ರಭು ಚವಡಿ, ಶ್ರೀಧರ ಬಿದರಳ್ಳಿ ಸೇರಿದಂತೆ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಮೃತ ಕುಟುಂಬಗಳಿಗೆ ತಕ್ಷಣ ಪರಿಹಾರ ಧನ ಬಿಡುಗಡೆ ಆಗಬೇಕು. ಅಲ್ಲದೆ ಸರ್ಕಾರ ನೀಡುವ ಪರಿಹಾರವನ್ನು ಕನಿಷ್ಠ 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಗಾಯಾಳುಗಳಿಗೆ 2 ಲಕ್ಷ ರೂ ನೀಡಬೇಕು. ಕೇವಲ ಸರ್ಕಾರದ ಪರಿಹಾರವಲ್ಲ, ವೈಯಕ್ತಿಕ ನೆರವಿಗೂ ಒತ್ತು ನೀಡಬೇಕು.

– ದಾವಲಸಾಬ ತಾಳಿಕೋಟಿ
ಮುಸ್ಲಿಂ ಸಮಾಜದ ಮುಖಂಡರು.

ಲಕ್ಕುಂಡಿಯ ಗತವೈಭವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ: ಸಚಿವ ಡಾ. ಎಚ್.ಕೆ. ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಗದಗ: ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲಕ್ಕುಂಡಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಲಕ್ಕುಂಡಿಯ ಗತವೈಭವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.

ಲಕ್ಕುಂಡಿಯ ಚೌಕಿಮಠದ ಆವರಣದಲ್ಲಿ ಶುಕ್ರವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಗದಗ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಪಂಚ ದೇವಾಲಯಗಳು ಮತ್ತು ಪಂಚ ಬಾವಿಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಗಣರಾಜ್ಯೋತ್ಸವ ದಿನಾಚರಣೆಯಂದು ನಾವು ಹೇಳಿದಂತೆ ಲಕ್ಕುಂಡಿಯ ಪಂಚದೇವಾಲಯ, ಪಂಚ ಬಾವಿ ಅನಾವರಣ ಮಾಡಿದ್ದೇವೆ. ಉತ್ಖನನ ಕಾರ್ಯದಲ್ಲಿ ಶಿಲ್ಪಕಲೆ, ಪ್ರಾಚ್ಯಾವಶೇಷಗಳನ್ನು ಹೊರತಂದು ಲಕ್ಕುಂಡಿಯ ಗತವೈಭವ ಮರುಕಳಿಸುವಂತಾಗಬೇಕು. ಈ ಉತ್ಖನನ ಕಾರ್ಯ ಕೇವಲ ಆ ಸ್ಥಳದಲ್ಲಿನ ಬಂಗಾರ ಗುರುತಿಸುವುದಕ್ಕಲ್ಲ. ಆದರೆ ಲಕ್ಕುಂಡಿಯಲ್ಲಿನ ಭವ್ಯ ಐತಿಹಾಸಿಕ, ಸಾಂಸ್ಕೃತಿಕ, ಶಿಲ್ಪಕಲೆಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿದೆ. ಇಲ್ಲಿನ 101 ಬಾವಿ ಹಾಗೂ 101 ದೇವಾಲಯಗಳನ್ನು ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಸಿಕ್ಕಿರುವ ದೇವಾಲಯ, ಬಾವಿ ಪುನರುಜ್ಜೀವನ ನಡೆಸುತ್ತೇವೆ. ಈ ದೇವಾಲಯಗಳಿಗೆ ರಸ್ತೆ ಸಂಪರ್ಕ ಒದಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವಾಸ್ತವತೆಯನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಇತಿಹಾಸವನ್ನು ಹೆಕ್ಕಿ ತೆಗೆಯಲು ಸಹಕರಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪ್ರಾಧಿಕಾರದ ಕಚೇರಿಯಲ್ಲಿ ಒಂದು ರಜಿಸ್ಟರ್ ಹಾಗೂ ಕ್ಯಾಮರಾವನ್ನು ಇಡಲಾಗಿದ್ದು, ಗ್ರಾಮಸ್ಥರು, ಹಿರಿಯರು, ಅನುಭವಿಗಳು ಹೇಳುವ ಅಂಶಗಳನ್ನು ಇಲ್ಲಿ ದಾಖಲಿಸುವ ಕಾರ್ಯವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಲಕ್ಕುಂಡಿಗೆ ಹೊಸ ಸ್ವರೂಪ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಅನುದಾನ ನೀಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರ ಸಹಕಾರವೂ ಸಹ ಇದೆ. ಎಂದೂ ಕಂಡರಿಯದ ಪ್ರಾಚ್ಯಾವಶೇಷದ ಉತ್ಖನನ ಕಾರ್ಯ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ಅ.ಧ. ಕಟ್ಟಿಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ತೇಜೇಶ್ವರ ಸೇರಿದಂತೆ ಗಣ್ಯರು, ಪ್ರಮುಖರು, ಗ್ರಾಮದ ಹಿರಿಯರು ಹಾಜರಿದ್ದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿದರು.

ವಿದ್ಯಾಶಂಕರಲಿಂಗ ದೇವಾಲಯ, ಸೋಮನಕಟ್ಟಿ ಸೋಮಲಿಂಗೇಶ್ವರ ದೇವಾಲಯ, ಚೌಕಿಮಠದ ಈಶ್ವರ ದೇವಾಲಯ, ಚೌಕಿಮಠದ ಅರ್ಧ ನಾರೀಶ್ವರ ದೇವಾಲಯ, ಕಪ್ಪಚರಮಠ ಮತ್ತು ಬಾವಿಗಳನ್ನು ಅನಾವರಣಗೊಳಿಸಲಾಯಿತು. ಅಂತೆಯೇ ಛಬ್ಬೇರ ಬಾವಿ, ಸಿದ್ದರಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಚೌಕಿಮಠದ ಬಾವಿ, ಸೋಮನಕಟ್ಟಿ ಸೋಮಲಿಂಗೇಶ್ವರ ಬಾವಿಗಳನ್ನು ಅನಾವರಣಗೊಳಿಸಲಾಯಿತು.

“ಈ ಹಿಂದೆ ಲಕ್ಕುಂಡಿಯಲ್ಲಿ 10 ಪಲ್ಲಕ್ಕಿಗಳನ್ನು ತೆಗೆದುಕೊಂಡು ಲಕ್ಕುಂಡಿಯ ಪ್ರತಿ ಬೀದಿಗೆ ಬಂದಾಗ ನೀವು ನಿಮ್ಮ ಮನೆಯಲ್ಲಿನ ಶಿಲ್ಪ, ವಾಸ್ತು, ಮುತ್ತು, ಹವಳ, ಆಯುಧಗಳನ್ನು ನೀಡಿದ್ದೀರಿ. ಲಕ್ಕುಂಡಿಯ ಜನರು ವಿಶಾಲ ಮನೋಭಾವವುಳ್ಳವರು. ಲಕ್ಕುಂಡಿಯ ಪ್ರಜ್ವಲ ರಿತ್ತಿ ಕುಟುಂಬದವರ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಎಲ್ಲರೂ ಮೆಚ್ಚುವಂತಹದ್ದಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಿತ್ತಿ ಕುಟುಂಬದವರನ್ನು ಅಭಿನಂದಿಸಿದ್ದಾರೆ”

– ಎಚ್.ಕೆ. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು.

ಲವರ್ಸ್ ಡೇ ದಿನದಂದು ನಂದಿಬೆಟ್ಟಕ್ಕೆ ಹೋಗೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸುದ್ದಿ ನೋಡಿ!

0

ಚಿಕ್ಕಬಳ್ಳಾಪುರ:- ಫೆಬ್ರವರಿ 14ರ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರೇಮಿಗಳು ಸೇರಿದಂತೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರಣಯ ಪಕ್ಷಿಗಳ ಕಲರವೇ ಹೆಚ್ಚಾಗಿರುತ್ತಿದೆ. ಈ ದಿನದಂದು ಕೆಲ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡರೆ, ಮತ್ತೆ ಕೆಲವರು ಒಬ್ಬರಿಗೊಬ್ಬರು ತಬ್ಬಿ ಮುದ್ದಾಡುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ. ಆದರೆ ಈ ಭಾರಿ ಪ್ರೇಮಿಗಳ ದಿನಾಚರಣೆಗೆ ಅಂದರೆ ಫೆ.14ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿಗಿರಿಧಾಮ ಬಂದ್​ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳಲಾಗಿದ್ದು, ಡಿಸಿ ಜಿ.ಪ್ರಭು ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ?

ನಂದಿ ಬೆಟ್ಟಕ್ಕೆ ಪ್ರತಿ ವರ್ಷದಂತೆ ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಸಲುವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.

ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗಡೆಯಿಂದ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯ ವರ್ತನೆಗಳನ್ನು ಮಾಡಿ ಈ ಆಚರಣೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರು ಭಾಗವಹಿಸುವುದರಿಂದ ಕುಡಿದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು, ಇತರ ಪ್ರವಾಸಿಗರಿಗೆ ತೊಂದರೆ ನೀಡುವುದು ಹಾಗೂ ಬೆಟ್ಟದ ಮೇಲೆ ನಿಷೇಧಿತ ಅಪಾಯಕರ ಸ್ಥಳಗಳಿಗೆ ಹೋಗುವ ಸಾಧ್ಯತೆಗಳು ಇರುತ್ತವೆ.

ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಸಹ ಯಾವುದೇ ಪ್ರಯೋಜನೆಗಳು ಆಗುವ ಸಾಧ್ಯತೆ ಇಲ್ಲ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸಲ್ಲ; ಸರ್ಕಾರದ ಮೇಲಿನ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!

0

ಬೆಂಗಳೂರು:- ಬೆಂಗಳೂರು ಮೆಟ್ರೋ ಪ್ರಯಾಣದ ದರ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ಏರಿಕೆ ಆಗಲಿದೆ.

ಈ ನಿರ್ಧಾರವು ಸಾರ್ವಜನಿಕರಲ್ಲಿ ವಿರೋಧ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಬಾಯ್ಕಾಟ್ ಕ್ಯಾಂಪೇನ್ ಆರಂಭವಾಗಿದೆ. ಅಷ್ಟೇ ಅಲ್ಲ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜಕೀಯ ಜಟಾಪಟಿ ಶುರುವಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರವೇ ಕಾರಣ ಅಂತಿದ್ರೆ, ಕಾಂಗ್ರೆಸ್ ನಾಯಕರು ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ದರ ಏರಿಕೆ ಸಮಿತಿಯನ್ನ ಬದಲಾಯಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ. ದರ ನಿಗದಿ ಸಮಿತಿ ನಿಗದಿತ ಅವಧಿಯೊಳಗೆ ಶಿಫಾರಸು ಸಲ್ಲಿಸಬೇಕು. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನ ಮೆಟ್ರೋ ಆಡಳಿತ ಶಿಫಾರಸು ಒಪ್ಪಿ ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬಿಎಂಆರ್​ಸಿಎಲ್​ಗೆ ಅಧಿಕಾರವಿಲ್ಲ. ಶಿಫಾರಸು ರದ್ದುಗೊಳಿಸುವ, ಉಲ್ಲಂಘಿಸುವ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

ಈ ದರ ನಿಗದಿ ಕಮಿಟಿಯನ್ನು ಕೇಂದ್ರ ಸರ್ಕಾರ ರಚಿಸುತ್ತದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಿರುತ್ತಾರೆ. ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತೆ. ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾನೂನು ದರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿಪಡಿಸುತ್ತದೆಯಾದರೂ, ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆಯೂ ಕಾನೂನಿನ ಗಡಿಗಳನ್ನು ಮೀರಿದೆ. ನಾವು ನಿಮ್ಮೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು. ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು. ನಾನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ.

ಕೋಲಾರ| ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ಕು ಯುವಕರು ಅರೆಸ್ಟ್

0

ಕೋಲಾರ: ಮಾಲೂರು ಪೊಲೀಸರು ಲಕ್ಕೂರು ಗ್ರಾಮದ ಬಳಿ ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ಕು ಯುವಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ಮೂಲದ ಸೈಯದ್ ನಹೀಂ, ಮಹಮ್ಮದ್ ಇಂಜುಮಾನ್, ಇಕ್ಬಾಲ್ ಶೇಕ್ ವಿಕ್ರಂ ಮತ್ತು ಮಹಮ್ಮದ್ ತೋಹಿದ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಅಕ್ರಮವಾಗಿ ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದುದರಿಂದ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭ, ಆರೋಪಿಗಳ ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಚುನಾವಣೆಗೂ ಮುನ್ನ ಉಚಿತ ಘೋಷಣೆಗಳ ಪರಿಶೀಲನೆಗೆ ಸಿದ್ಧ: ಸುಪ್ರೀಂ ಕೋರ್ಟ್

0

ನವದೆಹಲಿ: ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡುವ ಉಚಿತ ಕೊಡುಗೆಗಳ ಕುರಿತು ಸೂಕ್ಷ್ಮ ಪರಿಶೀಲನೆ ನಡೆಸಲು ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬಿಜೆಪಿ ನಾಯಕ ಹಾಗೂ ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಅಶ್ವಿನಿ ಉಪಾಧ್ಯಾಯ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ,

ಈ ವಿಚಾರವು ಅತ್ಯಂತ ಮಹತ್ವದ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದ್ದು, ಮೂವರು ನ್ಯಾಯಾಧೀಶರ ಪೀಠದಿಂದ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಈ ವಿಷಯ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟ ಸಿಜೆಐ, ಮಾರ್ಚ್ ವರೆಗೆ ಕಾಯುವಂತೆ ಸೂಚಿಸಿದರು.

ಅರ್ಜಿಯಲ್ಲಿ ಏನು ಹೇಳಲಾಗಿದೆ?

ಅರ್ಜಿಯಲ್ಲಿ, ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡುವ ಉಚಿತ ಘೋಷಣೆಗಳು ಚುನಾವಣಾ ದುಷ್ಕೃತ್ಯಕ್ಕೆ ಸಮಾನವಾಗಿವೆ ಎಂದು ಆರೋಪಿಸಲಾಗಿದೆ. ಮುಂದೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಉಚಿತ ಭರವಸೆಗಳು ಭ್ರಷ್ಟ ಪದ್ಧತಿಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ಅರ್ಜಿದಾರರು ಹೇಳಿದ್ದಾರೆ.

ಉಚಿತ ಕೊಡುಗೆಗಳು ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪಕ್ಷಗಳು “ಸೂರ್ಯ-ಚಂದ್ರರನ್ನು ಬಿಟ್ಟು ಉಳಿದೆಲ್ಲವನ್ನೂ ಕೊಡುತ್ತೇವೆ” ಎಂಬ ರೀತಿಯಲ್ಲಿ ಜನರನ್ನು ಮರುಳು ಮಾಡುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾರಕವಾಗಿದ್ದು, ಸಂವಿಧಾನಾತ್ಮಕ ತತ್ವಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿದೆ.

ಆದ್ದರಿಂದ, ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡುವ ಭರವಸೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅರ್ಜಿಯ ವಿಚಾರಣೆ ರಾಜಕೀಯವಾಗಿ ಮಹತ್ವ ಪಡೆದಿದೆ.

ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅಪಘಾತ; 13 ಜನ ಸಾವು, 34 ಮಂದಿಯ ಸ್ಥಿತಿ ಗಂಭೀರ

0

ಕಠ್ಮಂಡು: ಮದುವೆಯ ಸಂಭ್ರಮ ಕ್ಷಣಾರ್ಧದಲ್ಲೇ ಮಹಾವಿಪತ್ತಾಗಿ ಮಾರ್ಪಟ್ಟ ಘಟನೆ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ನಡೆದಿದೆ. ಉತ್ತರಾಖಂಡ ಗಡಿಗೆ ಸಮೀಪದ ಈ ಪ್ರದೇಶದಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಪರ್ವತ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ದುರ್ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ, ಪಶ್ಚಿಮ ನೇಪಾಳದ ಸುದುರ್ಪಾಶ್ಚಿಮ್ ಪ್ರದೇಶದ ಪುರ್ಚೌರಿ ಪುರಸಭೆಯ ಬದ್ಗಾಂವ್ ಬಳಿ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಮದುವೆ ದಿಬ್ಬಣದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ 8 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಬೈತಾಡಿ ಮತ್ತು ದಾದೇಲ್ಧುರಾ ಜಿಲ್ಲೆಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಜನರು, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು. ದುರ್ಗಮ ಪರ್ವತ ಪ್ರದೇಶ ಮತ್ತು ಆಳವಾದ ಕಂದಕ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದ್ದರೂ, ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಸಲಾಯಿತು.

ಪ್ರಾಥಮಿಕ ವರದಿಗಳ ಪ್ರಕಾರ, ಭಾರ ಹೊತ್ತಿದ್ದ ಬಸ್ ಏರುಗಾಡು ರಸ್ತೆಯಲ್ಲಿ ಸಾಗುವ ವೇಳೆ ತಾಂತ್ರಿಕ ದೋಷದಿಂದ, ವಿಶೇಷವಾಗಿ ಪ್ರೆಶರ್ ಪೈಪ್ ಒಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ನೇಪಾಳ ಅಧಿಕಾರಿಗಳು ವಿವರವಾದ ತನಿಖೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಎಂದರೆ ಕರಪ್ಶನ್, ಕಮಿಷನ್, ಕನ್ನಿಂಗ್- ಕಮ್ಯುನಲ್: ಛಲವಾದಿ ನಾರಾಯಣಸ್ವಾಮಿ ಆರೋಪ

0

ದೊಡ್ಡಬಳ್ಳಾಪುರ: ಈ ಬಾರಿ ಕೇಂದ್ರ ಬಜೆಟ್‍ನಲ್ಲಿ 3 ಸಿಗಳಿವೆ. ಒಂದನೆಯದು ಕಂಟಿನ್ಯೂಯಿಟಿ, ಕಳೆದ ಬಜೆಟ್‍ನ ಮುಂದುವರಿಕೆ ಇದರಲ್ಲಿದೆ. ಯಾವ ಬೆಲೆಯೂ ಹೆಚ್ಚಾಗಿಲ್ಲ; ತೆರಿಗೆಯೂ ಹೆಚ್ಚು ಕಡಿಮೆ ಆಗಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಬಾರಿ 12 ಲಕ್ಷಕ್ಕೆ ತೆರಿಗೆ ವಿನಾಯಿತಿ ನೀಡಿದ್ದರು. ಅದರಲ್ಲಿ ವ್ಯತ್ಯಾಸ ಮಾಡಿಲ್ಲ; ಜನರಿಗೆ ಸೌಲಭ್ಯ ಕೊಡಲು ಒತ್ತು ಕೊಟ್ಟಿದ್ದಾರೆ. 2ನೇ ಸಿ; ಕ್ರೆಡಿಬಿಲಿಟಿ. ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದೇವೆ. 3ನೇ ಸಿ- ಕಮಿಟ್‍ಮೆಂಟ್. ನಾವು ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಲ್ಲ. ನಾವು ಬದ್ಧತೆಯನ್ನು ಪ್ರದರ್ಶಿಸಿದ್ದೇವೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷದ 3 ಸಿ. ಅಂದರೆ, ಕರಪ್ಶನ್ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರದಲ್ಲಿ ನಿಪುಣರು. ಮೋದಿಯವರ ಸರಕಾರ 12 ವರ್ಷ ಪೂರೈಸುತ್ತಿದ್ದು, ಈ 12 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳಿಲ್ಲ. ಕಾಂಗ್ರೆಸ್ಸೆಂದರೆ ಕಮಿಷನ್; ಟೆಂಡರ್ ಹಾಕು ಕಮಿಷನ್ ಹೊಡಿ ಎಂಬ ನೀತಿ. ಅದಾದ ಮೇಲೆ ಕನ್ನಿಂಗ್, ಕಮ್ಯುನಲ್, ಕಾಸ್ಟಿಸಂ, ಓಲೈಕೆಗಳು ಎಂದು ಆಕ್ಷೇಪಿಸಿದರು.

ಈ ಸಾರಿಯ ಕೇಂದ್ರ ಬಜೆಟ್‍ನಲ್ಲಿ ಇಲ್ಲಿ ಯಾರನ್ನೂ ಓಲೈಕೆ ಮಾಡುವ ಕೆಲಸವನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಾಡಿಲ್ಲ. ಅದು ಬಿಜೆಪಿಯ ನೀತಿ ಎಂದು ತಿಳಿಸಿದರು. ಕಾಂಗ್ರೆಸ್ ಬಜೆಟ್ ಇದಾಗಿದ್ದರೆ ತಾರತಮ್ಯ ಮತ್ತು ಓಲೈಕೆಗಳನ್ನು ಬಹಳಷ್ಟು ಕಾಣಬಹುದಾಗಿತ್ತು ಎಂದು ಟೀಕಿಸಿದರು.

ಬಿಗ್​​ಬಾಸ್ ವಿನ್ನರ್​ ಗಿಲ್ಲಿಗೆ ವಿರುದ್ಧ ಮತ್ತೊಂದು ದೂರು ದಾಖಲು

ಬಿಗ್‌ಬಾಸ್ ಕನ್ನಡ ಸೀಸನ್ 12 ವಿಜೇತರಾಗಿ ಹೊರಹೊಮ್ಮಿದ ಬಳಿಕ ಗಿಲ್ಲಿ ನಟ ಕರ್ನಾಟಕದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ. ರಿಯಾಲಿಟಿ ಶೋನಲ್ಲಿ ತೋರಿದ ಆತ್ಮವಿಶ್ವಾಸ, ಆಟದ ಶೈಲಿ ಮತ್ತು ವ್ಯಕ್ತಿತ್ವವೇ ಅವರಿಗೆ ಭಾರೀ ಅಭಿಮಾನಿ ಬಳಗವನ್ನು ತಂದಿದೆ. ಬಿಗ್‌ಬಾಸ್ ಗೆಲುವಿನೊಂದಿಗೆ ಗಿಲ್ಲಿಯ ವೃತ್ತಿಜೀವನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಆದರೆ ಇದೇ ಹೊತ್ತಿನಲ್ಲಿ ಗಿಲ್ಲಿ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಗಿಲ್ಲಿ ಬಿಗ್‌ಬಾಸ್‌ಗೆ ತೆರಳುವ ಮುನ್ನ ನಟಿಸಿದ್ದ ‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಇಂದು (ಫೆಬ್ರವರಿ 6) ಬಿಡುಗಡೆಯಾಗಿದ್ದು, ಚಿತ್ರದ ನಿರ್ಮಾಪಕರು ಗಿಲ್ಲಿ ನಟ ವಿರುದ್ಧ ಫಿಲಂ ಚೇಂಬರ್‌ಗೆ ದೂರು ದಾಖಲಿಸಿದ್ದಾರೆ.

ನಿರ್ಮಾಪಕ ತೇಜಸ್ವಿ ಎಸ್ ಅವರ ಹೇಳಿಕೆಯಂತೆ, ಗಿಲ್ಲಿಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು. ಅವರು ಕೇಳಿದಷ್ಟು ಸಂಭಾವನೆಯನ್ನು ಬಿಗ್‌ಬಾಸ್‌ಗೆ ಹೋಗುವ ಮುನ್ನವೇ ಪಾವತಿಸಲಾಗಿದೆ. ಆದರೆ ಸಿನಿಮಾ ಬಿಡುಗಡೆ ಹಂತದಲ್ಲಿ ಗಿಲ್ಲಿ ಯಾವುದೇ ರೀತಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

“ಕರೆ ಮಾಡಿದರೆ ಫೋನ್ ಎತ್ತುತ್ತಿಲ್ಲ. ಕನಿಷ್ಠ ನಮ್ಮ ಸಿನಿಮಾದ ಬಗ್ಗೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಕೂಡ ಇಲ್ಲ. ಸ್ಟಾರ್ ಆದ್ಮೇಲೆ ಜವಾಬ್ದಾರಿ ಇರಬೇಕು” ಎಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ದೂರು ದಾಖಲಿಸಿಕೊಂಡಿದ್ದು, ಗಿಲ್ಲಿಯನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕತೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಗಿಲ್ಲಿ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಕಲಾವಿದರಾದ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸ್ಟಾರ್ ಆಗುವ ಕ್ಷಣಕ್ಕಿಂತ, ಆ ಸ್ಟಾರ್‌ಡಮ್‌ನೊಂದಿಗೆ ಬರುವ ಜವಾಬ್ದಾರಿಯೇ ದೊಡ್ಡದು ಎಂಬ ಚರ್ಚೆ ಈ ಪ್ರಕರಣದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಆರಂಭವಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಕಡಿತ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

0

ನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ ಎಂದು ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯವನ್ನು ಸದನದ ಗಮನಕ್ಕೆ ತಂದ ಅವರು, ಬೆಳಗಾವಿ ವಿಮಾನ ನಿಲ್ದಾಣವನ್ನು 262.64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ 25.98 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣಾ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ಈ ಹಿಂದೆ ಐದು ವಿಮಾನಯಾನ ಸಂಸ್ಥೆಗಳು 13 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದರೆ, ಇದೀಗ ಕೇವಲ ಎರಡು ಸಂಸ್ಥೆಗಳು ಮಾತ್ರ ಸೇವೆ ನೀಡುತ್ತಿದ್ದು, ಹಾರಾಟಗಳು ಐದು ನಗರಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಹೇಳಿದರು.

2024-25ನೇ ಸಾಲಿನಲ್ಲಿ ಸುಮಾರು 3.40 ಲಕ್ಷ ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬರದಿದ್ದರೂ ವಿಮಾನಯಾನ ಸೇವೆಗಳು ಹಂತ ಹಂತವಾಗಿ ಸ್ಥಗಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಈರಣ್ಣ ಕಡಾಡಿ ಹೇಳಿದರು.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸಬ್ಸಿಡಿ ದೊರೆಯುವವರೆಗೂ ಮಾತ್ರ ವಿಮಾನಯಾನ ಸಂಸ್ಥೆಗಳು ಸೇವೆ ಮುಂದುವರಿಸಿ, ಯೋಜನೆ ಮುಗಿದ ಬಳಿಕ ಹಾರಾಟಗಳನ್ನು ನಿಲ್ಲಿಸುತ್ತಿವೆ ಎಂದು ಅವರು ಆರೋಪಿಸಿದರು. ಬೆಳಗಾವಿಯಿಂದ ಬೆಂಗಳೂರು, ಹೈದರಾಬಾದ್ ಹಾಗೂ ದೆಹಲಿಗೆ ಸುಮಾರು 85% ಪ್ರಯಾಣಿಕರು ಪ್ರಯಾಣಿಸುತ್ತಿರುವಾಗಲೂ ಸೇವೆಗಳನ್ನು ಕಡಿತಗೊಳಿಸಿರುವುದು ಅಸಮಂಜಸವಾಗಿದೆ ಎಂದು ಹೇಳಿದರು.

ಹೀಗಾಗಿ, ಸೇವೆಗಳನ್ನು ಸ್ಥಗಿತಗೊಳಿಸಿರುವ ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಅವರು ರಾಜ್ಯಸಭೆಯಲ್ಲಿ ಒತ್ತಾಯಿಸಿದರು. ಜೊತೆಗೆ ಮುಂಬೈ, ಪುಣೆ, ಇಂದೋರ್ ಹಾಗೂ ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಪುನರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

error: Content is protected !!