Home Blog Page 4

ಕಲಿಕೆಯ ಅವಧಿಯಲ್ಲಿ ಉತ್ತಮ ಜ್ಞಾನ ಹೊಂದಿ

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳೇ ನಮ್ಮ ದೇಶದ ಭವ್ಯ ಭವಿಷ್ಯವಾಗಿದ್ದಾರೆ. ಓದುವ ಹಂತದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ ಎಂದು ರಾಜ್ಯದ ಕಾನೂನು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶನಿವಾರ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿಯುತ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗುದು ಬಹುಮಾನ ವಿತರಿಸಿ ಸಚಿವರು ಮಾತನಾಡಿದರು.

ಭಾರತದ ಭವ್ಯ ಭವಿಷ್ಯ ನಿರ್ಮಾಣದಲ್ಲಿ ಇಂದಿನ ಯುವ ಪೀಳಿಗೆ, ವಿದ್ಯಾರ್ಥಿಗಳ ಪಾತ್ರ ಅಪಾರವಿದೆ. ಕಲಿಯುವ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಹೊಂದಿ. ಮೊರಾರ್ಜಿ ದೇಸಾಯಿಯವರು ಇಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಗಳಾಗಿ, ಆರ್ಥಿಕ ಸಚಿವರಾಗಿ ಅಲ್ಲದೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಸುಭದ್ರ ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಿರಂತರವಾಗಿ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶೇ. 85ಕ್ಕಿಂತ ಅಧಿಕ ಫಲಿತಾಂಶ ಪಡೆಯುವದು ಸಣ್ಣ ಮಾತಲ್ಲ. ಎಲ್ಲರೂ ಉತ್ತಮ ಸಾಧನೆಗೈದಿದ್ದೀರಿ ಎಂದರಲ್ಲದೆ, ಇದಕ್ಕೆ ಕಾರಣರಾದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಲ್ಲಸಮುದ್ರ ಪದವಿಪೂರ್ವ ಕಾಲೇಜಿನ ಬೋಧಕ ಸಿಬ್ಬಂದಿಗಳನ್ನು ಸಚಿವರು ಸನ್ಮಾನಿಸಿದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ರವಿ ಗುಂಜೀಕರ, ಸಿದ್ದು ಪಾಟೀಲ ಸೇರಿದಂತೆ ಕಾಲೇಜಿನ ಪ್ರಾಚಾರ್ಯರು, ಅಸುಂಡಿ ಗ್ರಾ.ಪಂ ಅಧ್ಯಕ್ಷರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

“2024-25ನೇ ಸಾಲಿನಲ್ಲಿ ಮಲ್ಲಸಮುದ್ರ ಶಾಲೆಯಲ್ಲಿ 80 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಸರ್ಕಾರದ 10 ಸಾವಿರ ರೂ ನಗದು ಬಹುಮಾನಕ್ಕೆ ಭಾಜನರಾಗಿದ್ದೀರಿ. ಅಲ್ಲದೆ, ಶೇ. 100ರಷ್ಟು ಫಲಿತಾಂಶ ಪಡೆದಿದ್ದು ಅಭಿನಂದನೀಯ. ರಾಜ್ಯದ ಕ್ರೈಸ್ ಸಂಸ್ಥೆಯಯಡಿ 78 ಕಾಲೇಜುಗಳಿದ್ದು, ಮಲ್ಲಸಮುದ್ರದ ಕಾಲೇಜು ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಮುಂದಿನ ವರ್ಷ ಇಲ್ಲಿ ಕಲಿಯುವ ಎಲ್ಲ ಮಕ್ಕಳು ಸಹ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಲಿ”

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.

ವೈದ್ಯರ ಕರ್ತವ್ಯನಿಷ್ಠೆ ಶ್ರೇಷ್ಠವಾಗಿದೆ

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ಸಮಾಜದಲ್ಲಿ ವೈದ್ಯಕೀಯ ಸೇವೆ ಬಹಳ ಮುಖ್ಯ. ವೈದ್ಯಕೀಯ ಸೇವೆ ನೀಡುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಒಂದು ಪ್ರಾಣ ಉಳಿಸುವಲ್ಲಿ ವೈದ್ಯರು ತೋರುವ ಕರ್ತವ್ಯನಿಷ್ಠೆ ಬಹಳ ಮುಖ್ಯವಾದದ್ದು ಎಂದು ಮಹಿಳಾ ವೈದ್ಯಕೀಯ ಸಂಘದ ಅಧ್ಯಕ್ಷರಾದ ಸೋನಿಯಾ ಕರೂರ ಹೇಳಿದರು.

ಅವರು ನವಜ್ಯೋತಿ ವ್ಯಸನಮುಕ್ತಿ ಕೇಂದ್ರದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.

ಸಮಯದ ಹಂಗಿಲ್ಲದೆ ರೋಗಿಯೊಬ್ಬನ ಆರೈಕೆ ಮಾಡುವ ವೈದ್ಯರ ಸೇವೆ, ತ್ಯಾಗ, ಸಮಯ ಪ್ರಜ್ಞೆ ಸಮಾಜಕ್ಕೆ ಬಹಳ ಅವಶ್ಯವಾಗಿದೆ. ನಾನೂ ಕೂಡ ವೈದ್ಯಕೀಯ ವೃತ್ತಿಯಲ್ಲಿದ್ದು, ಈ ವೃತ್ತಿಯ ಎಲ್ಲಾ ಮಜಲುಗಳನ್ನು ಕಂಡು ಈ ವೃತ್ತಿಯಲ್ಲಿರುವವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಬೇವಿನಮರದ ಮಾತನಾಡಿ, ಎಷ್ಟೋ ಜನರು ಇವತ್ತು ವೈದರಿಂದ ಮರುಜೀವ ಪಡೆದು ಬದುಕಿದ್ದರೆ. ಅಂತಹ ವೈದರ ಸೇವೆಯನ್ನು ಸಮಾಜ ನೆನಪಿಡಬೇಕು ಎಂದು ಹೇಳಿದರು.

ಭಾಗ್ಯಲಕ್ಷ್ಮೀ ನವಲಗುಂದ್ ಸ್ವಾಗತಿಸಿದರು. ಶಿವಾನಂದ ಹಡಗಲಿ ನಿರೂಪಿಸಿದರು. ಶ್ವೇತಾ ಕೋಲೇಕರ್ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಹಾಗೂ ಚಿಕಿತ್ಸಾರ್ಥಿಗಳು ಹಾಜರಿದ್ದರು.

ಮಲ್ಲಸಮುದ್ರ ರಸ್ತೆ ನಿರ್ಮಾಣ ರಾಜ್ಯಕ್ಕೆ ಮಾದರಿಯಾಗಲಿ

ವಿಜಯಸಾಕ್ಷಿ ಸುದ್ದಿ, ಗದಗ: ಮಲ್ಲಸಮುದ್ರದ ಪೊಲೀಸ್ ಮೀಸಲು ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು ಗುಣಮಟ್ಟದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ನಿರ್ಮಿಸಬೇಕು ಎಂದು ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಗದಗಿನ ಮಲ್ಲಸಮುದ್ರದ ಪೊಲೀಸ್ ಮೀಸಲು ಕಚೇರಿ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ `ಥರ್ಡ್ ಐ’ ಯೋಜನೆ ಜಾರಿಗೊಳಿಸುವ ಮೂಲಕ ಜಿಲ್ಲಾದ್ಯಂತ ಕಾನೂನು ಪಾಲನೆಗೆ ಸಹಕಾರಿಯಾಗಿದೆ. ಸಾರ್ವಜನಿಕರು ನಿಯಮ ಪಾಲನೆಯೊಂದಿಗೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಲೂ ಪೊಲೀಸರಿಗೆ ಸಹಕಾರಿಯಾಗಿದೆ. ಆ ಮೂಲಕ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಪೊಲೀಸ್ ಇಲಾಖೆಗೆ ಎರಡು ವಾಹನಗಳನ್ನು ಹಸ್ತಾಂತರಿಸಲಾಗಿದೆ. ಒಂದು ವಾಹನವನ್ನು ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ ಹಾಗೂ ಇನ್ನೊಂದನ್ನು ವಿ.ಪ ಸದಸ್ಯ ಎಸ್.ವಿ. ಸಂಕನೂರರ ಪ್ರದೇಶಾಭಿವೃದ್ಧಿ ಅನುದಾನದಿಂದ ಒದಗಿಸಿರುವುದು ಇಲಾಖೆಗೆ ಸಹಕಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿದ್ದ ಅಡೆತಡೆಗಳನ್ನು ನಿವಾರಿಸಿದ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಸಚಿವರು ಪೊಲೀಸ್ ಇಲಾಖೆಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರಿಗೆ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, 1.6 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಒಂದು ಕೋಟಿ ರೂ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 50 ಲಕ್ಷ ರೂ ನೀಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಸಚಿವ ಎಚ್.ಕೆ. ಪಾಟೀಲ್ ಅನುದಾನ ಒದಗಿಸಿದ್ದಾರೆ ಎಂದರು.

ಶಾಲಾ ಸಂಸತ್ತು ರಚನೆ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ 2025/26ನೇ ಸಾಲಿನ ಶಾಲಾ ಸಂಸತ್ತು ರಚನೆ ಮಾಡಲಾಯಿತು.

ಪ್ರಧಾನ ಮಂತ್ರಿಯಾಗಿ ಮಹ್ಮದಾದಿಲ್ ಮಾಣಿಕಬಾಯಿ, ಉಪಪ್ರಧಾನ ಮಂತ್ರಿಯಾಗಿ ಮನೋಜ ಸಿದ್ದನಗೌಡರ, ಶಿಕ್ಷಣ ಮಂತ್ರಿ ಜ್ಯೋತಿ ಸಂಶಿ, ಪ್ರವಾಸ ಮತ್ತು ಕಾನೂನು ಮಂತ್ರಿ ಹರೀಶ ಜಾಧಾವ, ಬಿಸಿ ಊಟ ಮಂತ್ರಿ ಅಭಯ ಗಾಯಕವಾಡ, ನೀರಾವರಿ ಮಂತ್ರಿ ಪ್ರದೀಪ ಬಸಿಡೋಣಿ, ಸಂಸ್ಕೃತಿಕ ಮಂತ್ರಿ ತಮನ್‌ತಾಜ್ ಖಲೀಪನವರ, ಪ್ರರ್ಥನಾ ಮಂತ್ರಿ ಅಮಿತ ಅಳಗವಾಡಿ, ಕ್ರೀಡಾ ಮಂತ್ರಿ ಮಹ್ಮದ ಹನೀಫ್ ಎಳವತ್ತಿ, ಅರಣ್ಯ ಮಂತ್ರಿ ಪೂಜಾ ಮಡೆಪ್ಪನವರ, ಆರೋಗ್ಯ ಮಂತ್ರಿ ಅಮೃತಾ ಕರಿಗಾರ, ಸ್ವಚ್ಛತಾ ಮಂತ್ರಿಯಾಗಿ ತೈಸಿನ ದುರ್ಗಿಗುಡಿ ಆಯ್ಕೆಯಾದರು.

ಶಾಲಾ ಪ್ರಧಾನ ಗುರು ಪಿ.ಬಿ.

ಸಚಿವ ಎಚ್.ಕೆ. ಪಾಟೀಲರಿಂದ ರಾಮೇಶ್ವರ ದೇವಸ್ಥಾನ ವೀಕ್ಷಣೆ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೋಮೇಶ್ವರ ರಸ್ತೆಯಲ್ಲಿರುವ ಐತಿಹಾಸಿಕ ರಾಮೇಶ್ವರ ದೇವಸ್ಥಾನಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.

ಗದಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ, ಮಹತ್ವದ ದೇವಸ್ಥಾನಗಳಿವೆ. ಅವುಗಳ ಜೀರ್ಣೋದ್ಧಾರ ಮಾಡುವ ಮೂಲಕ ಯುವಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಸಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ರಾಮೇಶ್ವರ ದೇವಸ್ಥಾನದ ಇತಿಹಾಸ ಸೇರಿದಂತೆ ಎಲ್ಲ ವಿಷಯಗಳ ಕುರಿತು ತಿಳಿಸಿಕೊಡುವ ಪ್ರಯತ್ನಗಳಾಗಬೇಕಿದೆ. ಸರ್ಕಾರದಿಂದ ಜೀರ್ಣೋದ್ಧಾರ ಕೈಗೊಳ್ಳುವ ಮೂಲಕ ಮೂಲ ದೇವಸ್ಥಾನದ ರಚನೆಗೆ ತೊಂದರೆಯಾಗದಂತೆ ಮಾಡಲು ಪ್ರಯತ್ನ ಸಾಗಿದೆ. ದೇವಸ್ಥಾನ ಪ್ರದೇಶದ ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಫಾರೂಕ್ ಹುಬ್ಬಳ್ಳಿ, ಅ.ದ. ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕರವೇ ಮಹಿಳಾ ಅಧ್ಯಕ್ಷರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ಎಚ್.ಅಬ್ಬಿಗೇರಿಯವರು ಲಲಿತಾ ಉ.ಜಾಧವ ಇವರ ನಾಡು, ನುಡಿ, ನೆಲ, ಜಲ, ಹೋರಾಟವನ್ನು ಮೆಚ್ಚಿ ಇವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಗದಗ ತಾಲೂಕಿನ ಕದಡಿ ಗ್ರಾಮ ಘಟಕದ ಮಹಿಳಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶಿಸಿದ್ದಾರೆ.

ಆರ್‌ಎಸ್‌ಎಸ್ ಬ್ಯಾನ್ ವಿಚಾರ: ಪ್ರಿಯಾಂಕ ಖರ್ಗೆ ಹೇಳಿಕೆಗೆ ಯಡಿಯೂರಪ್ಪ ಆಕ್ರೋಶ!

ಬೆಂಗಳೂರು:- ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಿಂದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ಅನ್ನು ಬ್ಯಾನ್ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಮೊದಲು ಪ್ರಿಯಾಂಕ್ ಖರ್ಗೆ ದೇಶದ ಕ್ಷಮೆ ಕೇಳಬೇಕು. ಪ್ರಿಯಾಂಕ್ ಖರ್ಗೆ ಅವರೇ ಇಡೀ ದೇಶದ ಉದ್ದಗಲಕ್ಕೂ ಪ್ರಧಾನಿ ಮೋದಿ, ನಾನು ಸೇರಿದಂತೆ ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿದ್ದೇವೆ. ಮೊದಲು ನೀವು ಅಧಿಕಾರ ಬರುತ್ತೇವೆ ಅನ್ನೋದು ಕನಸಿನ ಮಾತು ಅಂತ ಲೇವಡಿ ಮಾಡಿದ್ದಾರೆ.

ಹಾಸನದಲ್ಲಿ ಹಾರ್ಟ್ ಅಟ್ಯಾಕ್ ಗೆ ಮತ್ತೊಂದು ಬಲಿ: ಕುಳಿತಲ್ಲೇ ಪ್ರಾಣಬಿಟ್ಟ ವ್ಯಕ್ತಿ!

ಹಾಸನ:- ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಗ್ರಾಮದಲ್ಲಿ ಹೃದಯಾಘಾತದಿಂದ ಕುಳಿತಲ್ಲೇ ವ್ಯಕ್ತಿಯೋರ್ವ ಪ್ರಾಣಬಿಟ್ಟ ಘಟನೆ ಜರುಗಿದೆ.

ನಿರ್ವಾಣಿಗೌಡ (63) ಮೃತಪಟ್ಟ ವ್ಯಕ್ತಿ. ಇವರು ಅಡವಿಬಂಟೇನಹಳ್ಳಿ ಗ್ರಾಮದ ನಿವಾಸಿ. ಇಂದು ಮನೆಗೆ ದಿನಸಿ ಸಾಮಾಗ್ರಿಗಳನ್ನು ತರಲು ಬೈಕ್‌ನಲ್ಲಿ ಹಗರೆಗೆ ಮೃತ ನಿರ್ವಾಣಿಗೌಡ ಬಂದಿದ್ದರು. ನ್ಯಾಯಬೆಲೆ ಅಂಗಡಿ ಬಳಿ ಕುಳಿತಿದ್ದಾಗ ಇದ್ದಕಿದ್ದ ಹಾಗೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವಿನ ಪ್ರಕರಣ ಮುಂದುವರಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ವೇತನ ಪಾವತಿಗೆ ನರೇಗಾ ಸಿಬ್ಬಂದಿಗಳ ಮನವಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ನರೇಗಾ ಸಿಬ್ಬಂದಿಗಳಿಗೆ ಕಳೆದ 6-7 ತಿಂಗಳ ವೇತನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ನರೇಗಾ ಸಿಬ್ಬಂದಿಗಳು ಶನಿವಾರ ತಾ.ಪಂ ಇ.ಓ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಫಕ್ಕೀರೇಶ ಮತ್ತು ಮಂಜುನಾಥ ತಳವಾರ ಮಾತನಾಡಿ, ತಾಲೂಕಿನಲ್ಲಿ ಜಿ.ಪಂ ಮತ್ತು ತಾ.ಪಂ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲ ಸಿಬ್ಬಂದಿಗಳಿಗೆ ಕಳೆದ ಜನವರಿ-2025ರ ಮಾಹೆಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಬರುವ ತಿಂಗಳಲ್ಲಿ ವೇತನ ಪಾವತಿಯಾಗದೇ ಇದ್ದಲ್ಲಿ ನೌಕರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಲಿದೆ. ಕೂಡಲೇ ಸಿಬ್ಬಂದಿಗಳ ಸಂಬಳಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಎರಡು ದಿನಗಳಲ್ಲಿ ವೇತನ ವಾವತಿಯಾಗದಿದ್ದರೆ ಜುಲೈ 7ರಿಂದ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಬೇಕೆಂದು ಉಲ್ಲೇಖಿತ ರಾಜ್ಯ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಕೆ. ಕರನಗೌಡ್ರು, ಎಂ.ಎಚ್. ಪಾಟೀಲ್, ಎಸ್.ಎಸ್. ಪಾಟೀಲ್, ಎಸ್.ವಿ. ಕುಲಕರ್ಣಿ, ಹರೀಶ, ಭಾರತಿ, ಶಿಲ್ಪಾ ಲಮಾಣಿ, ಗಂಗಮ್ಮ ಹರಿಜನ, ಶಿವಕ್ಕ ಮಾದರ, ಪರಮೇಶ ಲಮಾಣಿ, ವಿನೋದಕುಮಾರ ಲಮಾಣಿ, ಗೌರಮ್ಮ ಲಮಾಣಿ, ಭೀಮಪ್ಪ ರಾಠೋಡ ಮಂಜುಳಾ ಕಟ್ಟಿಮನಿ ಇದ್ದರು. ಮನವಿ ಸ್ವೀಕರಿಸಿದ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವದಾಗಿ ಹೇಳಿದರು.

ಹುಲಿ ವೇಷದ ಗಮ್ಮತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ. ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ ಇಂದಿಗೂ ತನ್ನ ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿದೆ.

ಈ ಹಬ್ಬದ ಆಚರಣೆಗೆ ಒಂದು ವಾರ ಮೊದಲಿಂದಲೇ ಎಲ್ಲೆಡೆ ಮೊಹರಂ ಹುಲಿಗಳದ್ದೇ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಹಿನ್ನೆಲೆಯಲ್ಲಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಮೈತುಂಬ ಹುಲಿ ವೇಷ ಬರೆಯಿಸಿಕೊಂಡು ಹಲಗೆ ಬಾರಿಸುತ್ತಾ ನಾದಕ್ಕೆ ತಕ್ಕಂತೆ ಹುಲಿ ಕುಣಿಯುತ್ತಾರೆ. ಅಳ್ಳೊಳ್ಳಿ ಬವ್ವಾ ವೇಷದೊಂದಿಗೆ ಜನರನ್ನು ಆಕರ್ಷಿಸುತ್ತಾ ಕಾಣಿಕೆ ಸ್ವೀಕರಿಸುತ್ತಾರೆ.

ತಮ್ಮ ಮಕ್ಕಳು ಹುಲಿಯಂತೆ ಶಕ್ತಿವಂತ, ಆರೋಗ್ಯವಂತ, ಉಜ್ವಲ ಭವಿಷ್ಯಕ್ಕಾಗಿ ಮತ್ತು ಇಷ್ಟಾರ್ಥ ಸಿದ್ದಿಗಾಗಿ ಅಲೈ ದೇವರಿಗೆ 5, 11, 21 ವರ್ಷ ಅಥವಾ ಜೀವಹುಲಿವೇಷದ ಹರಕೆ ಕಟ್ಟಿಕೊಳ್ಳುತ್ತಾರೆ. ಅದಕ್ಕಾಗಿ ಮೊಹರಂ ಹಬ್ಬದ ವೇಳೆ ಹುಲಿವೇಷ ಬರೆಸಿಕೊಳ್ಳುವ ಸಂಪ್ರದಾಯವಿದೆ. ಹುಲಿ ವೇಷ ಬರೆಯುವಾಗ ಹಳದಿ ಬಣ್ಣದ ಮೇಲೆ ನವಿಲಿನ ಚಿತ್ರ, ಹುಲಿಯ ಚಿತ್ರ, ಕುದುರೆಯ ಚಿತ್ರ, ಹಸ್ತ, ದೇವರ ಛತ್ರಿ, ಮೀನು, ಹಾವಿನ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗುತ್ತದೆ.

ಕೊನೆಯಲ್ಲಿ ವೇಷಕ್ಕೆ ದೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಕೈಗೆ ನವಿಲುಗರಿ ಕಟ್ಟಲಾಗುತ್ತದೆ. ಈ ಒಂದೊಂದು ಚಿತ್ರಗಳೂ ಕೂಡ ಅನೇಕ ಸಂದೇಶಗಳನ್ನು ಸಾರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಪಟ್ಟಣದಲ್ಲಿ ಹೊಸ ಬಟ್ಟೆ, ದಿನಸಿ ಸೇರಿ ಹಬ್ಬದ ವಸ್ತುಗಳ ಖರೀದಿ ಸಂಭ್ರಮ ಕಂಡುಬಂದಿತು. ಪಟ್ಟಣ ಸೇರಿ ಲಕ್ಷ್ಮೇಶ್ವರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ 52 ಕಡೆ ನಿಗದಿತ ಸ್ಥಳದಲ್ಲಿ ಪಾಂಜಾಗಳ ಪ್ರತಿಷ್ಠಾನೆ ಮಾಡಲಾಗಿದ್ದು, ಭಾನುವಾರ ಪಾಂಜಾಗಳ ಮೆರವಣಿಗೆ ನಡೆದು ಸಂಜೆ ಹೊಳೆಗೆ ಸಾಗಿಸುವ ಸಂಪ್ರದಾಯ ನೆರವೇರಿಸಲಾಗುತ್ತದೆ.

error: Content is protected !!