Home Blog Page 40

ಕರ್ನಾಟಕದಲ್ಲಿ ಕೈ ಕೊಟ್ಟ ಮಳೆ: ತರಕಾರಿ ಬೆಲೆ ಸದ್ದಿಲ್ಲದೆ ಏರಿಕೆ, ಗ್ರಾಹಕರು ಕಂಗಾಲು

0

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯ ಪರಿಣಾಮ ತರಕಾರಿ ಬೆಲೆಗಳ ಮೇಲೆ ಪರಿಣಾಮ ಬೀರಿದೆ.

ಹಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಖರ್ಚಾಗುತ್ತಿದೆ. ಮಳೆ ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಬೆಳೆ ಹಾನಿಯಾಗಿದೆ. ಕೆಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಇನ್ನೂ ಕೆಲವು ಕಡೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ನಡೆದಿಲ್ಲ.

ಇದರ ಪರಿಣಾಮ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ಈರುಳ್ಳಿ, ಟೊಮೆಟೊ, ಬೀಟ್‌ರೂಟ್, ಸೌತೆಕಾಯಿ, ಕ್ಯಾರೆಟ್ ಮತ್ತು ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರ ಹೆಚ್ಚಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹೊಸ ಫಸಲು ಮಾರುಕಟ್ಟೆಗೆ ಬರುವುದರಿಂದ ತರಕಾರಿ ಬೆಲೆ ಇಳಿಕೆಯಾಗುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್‌ನಲ್ಲೇ ಬೆಲೆ ಏರಿಕೆಯಾಗಿದೆ.

ವ್ಯಾಪಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಮಳೆ ಮುಂದುವರಿದು ತರಕಾರಿ ಪೂರೈಕೆ ಹೆಚ್ಚಾದರೆ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.

ಹಾಪ್‌ಕಾಮ್ಸ್‌ನಲ್ಲಿ ಸದ್ಯ ತರಕಾರಿಗಳ ದರ ಹೀಗಿದೆ.

ಈರುಳ್ಳಿ ಕೆಜಿಗೆ 78 ರೂಪಾಯಿ.

ಸೌತೆಕಾಯಿ 48ರಿಂದ 60 ರೂಪಾಯಿ.

ನಾಟಿ ಕ್ಯಾರೆಟ್ 68ರಿಂದ 70 ರೂಪಾಯಿ.

ಬೀಟ್‌ರೂಟ್ 50 ರೂಪಾಯಿ.

ಬೆಳ್ಳುಳ್ಳಿ 300 ರೂಪಾಯಿ.

ಟೊಮೆಟೊ 30 ರೂಪಾಯಿ.

ಆಲೂಗಡ್ಡೆ 46ರಿಂದ 50 ರೂಪಾಯಿ.

ನುಗ್ಗೆಕಾಯಿ 70 ರೂಪಾಯಿ.

ಮಂಗಳೂರು ಸೌತೆಕಾಯಿ 64 ರೂಪಾಯಿ.

ಇನ್ನು ಸಕ್ಕರೆ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿದ್ದರೂ, ಬೆಲ್ಲದ ಬೆಲೆ ಏರಿಕೆಯಾಗಿದೆ.

ಸದ್ಯ ಒಂದು ಕೆಜಿ ಬೆಲ್ಲದ ಬೆಲೆ 75 ರೂಪಾಯಿ ದಾಟಿದೆ.

ಕಬ್ಬಿನ ಇಳುವರಿ ಕಡಿಮೆಯಾಗಿರುವುದು ಹಾಗೂ ಮಾರುಕಟ್ಟೆಗೆ ಬರುತ್ತಿರುವ ಬೆಲ್ಲದ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲೂ ಬೆಲ್ಲದ ಬೆಲೆ ಇದೇ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕದ ಹಲವೆಡೆ ಇಂದು-ನಾಳೆ ಗುಡುಗು ಸಹಿತ ಮಳೆ: ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ಘೋಷಣೆ!

0

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಸೆಪ್ಟೆಂಬರ್ 23 ಮತ್ತು 24ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.

ಸೆ.23ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೆ.24ರಂದು ಈ ಮೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೆ.23ರಂದು ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಯಾದಗಿರಿ, ಧಾರವಾಡ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಹಲವು ಕಡೆ ಸಾಧಾರಣ ಮಳೆಯಾಗಲಿದೆ.

ಸೆ.24ರಂದು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆಯಿದ್ದು, ಹಾವೇರಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೆ.23ರಂದು ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಸೆ.24ರಂದು ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆಯಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇನ್ನು ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ 8 ಸೆಂ.ಮೀ. ಮಳೆಯಾಗಿದೆ. ಬೆಂಗಳೂರು ನಗರದ ಹೆಸರಘಟ್ಟ ಮತ್ತು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ತಲಾ 6 ಸೆಂ.ಮೀ., ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ 5 ಸೆಂ.ಮೀ. ಮಳೆ ದಾಖಲಾಗಿದೆ.

ಉಕ್ಕಿ ಹರಿದ ಹಳ್ಳದಲ್ಲಿ ಸಿಲುಕಿದ ಕಾರು; ನಾಲ್ವರು ಯುವಕರು ಪವಾಡಸದೃಶ ಪಾರು!

0

ಭಾರಿ ಮಳೆ: ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಯುವಕರ ರಕ್ಷಣೆ

ಗದಗ: ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ರೋಣ ತಾಲೂಕಿನ ನಾಗರಾಳ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರೊಂದು ಸಿಲುಕಿಕೊಂಡು, ಅದರಲ್ಲಿದ್ದ ನಾಲ್ವರು ಯುವಕರು ಕೆಲಕಾಲ ಆತಂಕದಲ್ಲಿ ಸಿಲುಕಿದ ಘಟನೆ ನಡೆದಿದೆ.

ಗದಗದಿಂದ ನಾಗರಾಳ ಗ್ರಾಮಕ್ಕೆ ತೆರಳುತ್ತಿದ್ದ ಕಾರು, ನೀರಲಗಿ–ನಾಗರಾಳ ಗ್ರಾಮದ ಮಧ್ಯಭಾಗದಲ್ಲಿ ಉಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ನಾಗರಾಳ ಗ್ರಾಮದ ನಾಲ್ವರು ಯುವಕರು ಅಪಾಯದಲ್ಲಿ ಸಿಲುಕಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಸ್ಥಳೀಯರ ಸಮಯೋಚಿತ ನೆರವಿನಿಂದ ನಾಲ್ವರೂ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯ ಬಳಿಕ ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳನ್ನು ದಾಟಲು ವಾಹನ ಸವಾರರು ಮುಂದಾಗಬಾರದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

H.K ಪಾಟೀಲರ ರಾಜೀನಾಮೆ ಎಚ್ಚರಿಕೆಗೆ ಎಚ್ಚೆತ್ತ ಸರ್ಕಾರ! ಗದಗದ 3 ತಾಲೂಕುಗಳಿಗೆ ‘ಮಧ್ಯದ ಬರ’ ಘೋಷಣೆ!

0

ಗದಗ: ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಮೂರು ತಾಲೂಕುಗಳಿಗೆ ಬರದ ಬರೆ ಎಳೆದಿದೆ.

ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳನ್ನು ಮಧ್ಯಮ ಬರಪೀಡಿತ ತಾಲೂಕುಗಳಾಗಿ ಗುರುತಿಸಿ, ಗ್ರೌಂಡ್‌ ಟ್ರೂಥಿಂಗ್‌ಗೆ ಒಳಪಡಿಸಲು ಸರ್ಕಾರ ಆದೇಶಿಸಿದೆ.

ಸೆ.22ರಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಮೂರು ತಾಲೂಕುಗಳನ್ನು ಬರ ಮೌಲ್ಯಮಾಪನದ ಪಟ್ಟಿಗೆ ಸೇರಿಸಲಾಗಿದೆ. ಸೆ.24 ಮತ್ತು 25ರಂದು ಕ್ಷೇತ್ರಮಟ್ಟದಲ್ಲಿ ಬೆಳೆಹಾನಿ ಹಾಗೂ ಬರ ಪರಿಸ್ಥಿತಿಯ ವಾಸ್ತವ ಪರಿಶೀಲನೆ ನಡೆಯಲಿದೆ.

ಇದರ ಬೆನ್ನಲ್ಲೇ ಶಾಸಕ ಎಚ್.ಕೆ. ಪಾಟೀಲರ ರಾಜೀನಾಮೆ ಎಚ್ಚರಿಕೆ ಕೂಡ ಮತ್ತೆ ಚರ್ಚೆಗೆ ಬಂದಿದೆ. ಸೆ.20ರಂದು ಮುಳಗುಂದದಲ್ಲಿ ನಡೆದ ರೈತರ ಹೋರಾಟದಲ್ಲಿ ಮಾತನಾಡಿದ್ದ ಅವರು, ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳು ಬರದ ಪಟ್ಟಿಗೆ ಸೇರ್ಪಡೆಯಾಗಿರುವುದು ಜಿಲ್ಲೆಯ ರೈತರಲ್ಲಿ ನಿಟ್ಟುಸಿರು ಮೂಡಿಸಿದೆ.

ಆದರೆ, ಸದ್ಯ ಮೂರು ತಾಲೂಕುಗಳನ್ನು ‘ಮಧ್ಯಮ ಬರ’ ಎಂದು ವರ್ಗೀಕರಿಸಲಾಗಿದೆ. ಮುಂದಿನ ಗ್ರೌಂಡ್‌ ಟ್ರೂಥಿಂಗ್‌ ಹಾಗೂ ಕ್ಷೇತ್ರ ಪರಿಶೀಲನೆಯ ಬಳಿಕ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ.

ಮೂರು ತಿಂಗಳ GEN-Z ಹೋರಾಟಕ್ಕೆ ಮೊದಲ ಜಯ: ಗದಗ ತಾಲೂಕಿಗೆ ‘ಮಧ್ಯಮ ಬರ’ ಘೋಷಣೆ!

0

ಗದಗ: ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಕಳೆದ ಮೂರು ತಿಂಗಳಿಂದ ನಿರಂತರ ಹೋರಾಟ ನಡೆಸಿದ್ದ GEN-Z ಯುವಕರು, ರೈತರು, ಮಹಿಳೆಯರು ಹಾಗೂ ನಾಗರಿಕರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.

ರಾಜ್ಯ ಸರ್ಕಾರ ಗದಗ ತಾಲೂಕನ್ನು ‘ಮಧ್ಯಮ ಬರಪೀಡಿತ ತಾಲೂಕು’ ಎಂದು ಘೋಷಿಸಿರುವುದನ್ನು ಹೋರಾಟಗಾರರು ಸ್ವಾಗತಿಸಿದ್ದಾರೆ. ಆದರೆ, ಗದಗ ತಾಲೂಕಿನ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಸಂಪೂರ್ಣ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಬೇಕು. ಇಲ್ಲವಾದರೆ ಮುಂದಿನ ಹಂತದಲ್ಲಿ ಮತ್ತೆ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ.

ಮಳೆ ಕೊರತೆಯಿಂದ ಬೆಳೆಹಾನಿ ಉಂಟಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ GEN-Z ಮತದಾರರು ಮತ್ತು ನಾಗರಿಕರ ವೇದಿಕೆಯ ನೇತೃತ್ವದಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ನಾಗರಿಕರು ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲದೆ ಹೋರಾಟ ನಡೆಸಿದ್ದರು.

ಹೋರಾಟದ ಭಾಗವಾಗಿ ರಕ್ತ ಸಹಿ ಅಭಿಯಾನ, ಮನವಿ ಪತ್ರ ಸಲ್ಲಿಕೆ, ಪಾದಯಾತ್ರೆ, ಪ್ರತಿಭಟನೆ, ಸಾರ್ವಜನಿಕ ಸಭೆಗಳು, ಗ್ರಾಮ ಹಾಗೂ ವಾರ್ಡ್ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕವೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿತ್ತು.

ಬಿಸಿಲು, ಮಳೆ ಹಾಗೂ ಹಲವು ಅಡೆತಡೆಗಳ ನಡುವೆಯೂ ಹೋರಾಟಗಾರರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯದೆ ಹೋರಾಟ ಮುಂದುವರಿಸಿದ್ದರು. ವಿಶೇಷವಾಗಿ ರೈತರು, ಮಹಿಳೆಯರು ಹಾಗೂ ಯುವಕರು ಸ್ವಯಂಪ್ರೇರಣೆಯಿಂದ ರಕ್ತದಿಂದ ಸಹಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರ ಗದಗ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ಘೋಷಿಸಿರುವುದನ್ನು ವೇದಿಕೆ ಸ್ವಾಗತಿಸಿದ್ದು, ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದೆ. ಆದರೆ, ಕೇವಲ ಮಧ್ಯಮ ಬರದ ವರ್ಗೀಕರಣದಿಂದ ರೈತರ ಸಂಕಷ್ಟಕ್ಕೆ ಪೂರ್ಣ ಪ್ರಮಾಣದ ಪರಿಹಾರ ದೊರೆಯುವುದಿಲ್ಲ ಎಂದು ವೇದಿಕೆ ತಿಳಿಸಿದೆ.

ಬೆಳೆಹಾನಿಗೊಳಗಾದ ಅರ್ಹ ರೈತರಿಗೆ ತ್ವರಿತ ಹಾಗೂ ಸಮರ್ಪಕ ಪರಿಹಾರ ನೀಡಬೇಕು. ಪಾರದರ್ಶಕವಾಗಿ ಬೆಳೆಹಾನಿ ಸಮೀಕ್ಷೆ ನಡೆಸಿ ಯಾವುದೇ ರೈತ ಪರಿಹಾರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂದು ವೇದಿಕೆ ಆಗ್ರಹಿಸಿದೆ.

ರೈತರ ಕೃಷಿ ಸಾಲದ ಮರುಪಾವತಿಗೆ ಕಾಲಾವಕಾಶ ನೀಡುವುದರ ಜೊತೆಗೆ ಬಡ್ಡಿ ಮನ್ನಾ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಹಾಗೂ ಕುಡಿಯುವ ನೀರು ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು ಎಂದು ವೇದಿಕೆ ಆಗ್ರಹಿಸಿದೆ.

ಇದರೊಂದಿಗೆ, ಬರದಿಂದ ಉದ್ಯೋಗ ಕಳೆದುಕೊಂಡ ಗ್ರಾಮೀಣ ಜನರಿಗೆ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ನೀಡಬೇಕು ಎಂಬ ಬೇಡಿಕೆಯನ್ನೂ ವೇದಿಕೆ ಮುಂದಿಟ್ಟಿದೆ.

ಬರ ಘೋಷಣೆಯಿಂದ ಹೋರಾಟ ಸಂಪೂರ್ಣ ಅಂತ್ಯಗೊಂಡಿಲ್ಲ ಎಂದು GEN-Z ವೇದಿಕೆ ಸ್ಪಷ್ಟಪಡಿಸಿದೆ. ಸರ್ಕಾರದ ಘೋಷಣೆಯ ಪ್ರಯೋಜನ ಪ್ರತಿಯೊಬ್ಬ ಸಂತ್ರಸ್ತ ರೈತನ ಮನೆಬಾಗಿಲಿಗೆ ತಲುಪಿದಾಗ ಮಾತ್ರ ಹೋರಾಟದ ನಿಜವಾದ ಯಶಸ್ಸು ಸಾಧ್ಯ ಎಂದು ತಿಳಿಸಿದೆ.

ಮಧ್ಯಮ ಬರದ ಬದಲು ಸಂಪೂರ್ಣ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವುದು ಹಾಗೂ ರೈತರಿಗೆ ಅಗತ್ಯ ಪರಿಹಾರ ನೀಡುವ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟ ನಡೆಸುವುದು ಅನಿವಾರ್ಯ ಎಂದು GEN-Z ವೇದಿಕೆ ಎಚ್ಚರಿಕೆ ನೀಡಿದೆ.

ಈ ಕುರಿತು ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಮಾತನಾಡಿ, “ಮೂರು ತಿಂಗಳ ಹೋರಾಟಕ್ಕೆ ಸ್ಪಂದಿಸಿ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ, ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಕೇವಲ ಮಧ್ಯಮ ಬರ ಎಂದು ಘೋಷಿಸಿರುವುದು ಸಮರ್ಪಕವಲ್ಲ. ಗದಗವನ್ನು ಸಂಪೂರ್ಣ ಬರಗಾಲ ಪೀಡಿತ ಎಂದು ಘೋಷಿಸಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ” ಎಂದು ಹೇಳಿದರು.

ಹೊನ್ನಾವರ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ; ಶೌಚಾಲಯಕ್ಕೂ ನೀರಿಲ್ಲದೆ ಮಕ್ಕಳ ಪರದಾಟ!

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊದಕೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆಯ ಸಮಸ್ಯೆ ಎದುರಾಗಿದೆ.

ಶಾಲೆಯಲ್ಲಿ 36 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶೌಚಾಲಯ ಬಳಕೆಗೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಶಾಲೆಯಲ್ಲಿರುವ ನಳ ತುಂಡಾಗಿ ಹಲವು ತಿಂಗಳುಗಳಾಗಿದ್ದು, ಇನ್ನೂ ದುರಸ್ತಿ ಮಾಡಲಾಗಿಲ್ಲ ಎನ್ನಲಾಗಿದೆ. ಹೀಗಾಗಿ ಮಕ್ಕಳು ಬಾವಿಯಿಂದ ನೀರು ಸೇದಿ, ಭಾರವಾದ ಬಕೆಟ್‌ಗಳಲ್ಲಿ ನೀರು ತುಂಬಿಕೊಂಡು ಶೌಚಾಲಯಕ್ಕೆ ಕೊಂಡೊಯ್ದು ಬಳಸಬೇಕಾದ ಪರಿಸ್ಥಿತಿ ಇದೆ.

ಇದರ ಜೊತೆಗೆ ಶಾಲೆಯ ಸುತ್ತಮುತ್ತಲೂ ತ್ಯಾಜ್ಯ ಹಾಗೂ ಗಲೀಜು ಕಂಡುಬರುತ್ತಿದ್ದು, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಬಾವಿಗೆ ಅಳವಡಿಸಿರುವ ವಿದ್ಯುತ್ ತಂತಿಯೂ ನೆಲಕ್ಕೆ ತಾಗುವ ಸ್ಥಿತಿಯಲ್ಲಿದೆ ಎನ್ನಲಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಯ ಮೇಲ್ಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್‌ಗಳೂ ಸರಿಯಾದ ರೀತಿಯಲ್ಲಿ ಇಲ್ಲ ಎನ್ನಲಾಗಿದ್ದು, ಬಲವಾದ ಗಾಳಿ ಬೀಸಿದ ಸಂದರ್ಭದಲ್ಲಿ ಅವು ಬಿದ್ದು ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಪೋಷಕರು ತಿಳಿಸಿದ್ದಾರೆ.

ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ಐಶ್ವರ್ಯಾಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

0

ಮಂಡ್ಯ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಆರೋಪದ ಪ್ರಕರಣದಲ್ಲಿ ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಾಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿದ್ದ ಹಿನ್ನೆಲೆಯಲ್ಲಿ ಐಶ್ವರ್ಯಾ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ವೇಳೆ, ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರ ಬಳಿ ಕ್ಷಮೆಯಾಚಿಸಿದರೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.

ನ್ಯಾಯಾಲಯದ ಸೂಚನೆಯ ಬಳಿಕ ಐಶ್ವರ್ಯಾ ಅವರು ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಉದ್ವೇಗದಿಂದ ಅಹಿತಕರ ಘಟನೆ ನಡೆದಿದೆ ಎಂದು ಅವರು ಹೇಳಿದ್ದು, ತಮ್ಮ ವರ್ತನೆಯಿಂದ ಪಿಎಸ್‌ಐಗೆ ನೋವಾಗಿದ್ದರೆ ಬೇಷರತ್ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಅಷ್ಟಕ್ಕೂ ಈ ಪ್ರಕರಣ ನಡೆದಿದ್ದು ಹೇಗೆ ಅನ್ನೋದಾದರೆ, ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಐಶ್ವರ್ಯಾ ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ವಿಚಾರದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು ಎಂದು ವರದಿಯಾಗಿದೆ. ಈ ವೇಳೆ ಪಿಎಸ್‌ಐಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಸವಿತಾ ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಐಶ್ವರ್ಯಾ ಅವರ ಕಡೆಯಿಂದಲೂ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರತಿದೂರು ನೀಡಲಾಗಿದೆ ಎಂದು ವರದಿಯಾಗಿದೆ.

ಇದೀಗ ಹೈಕೋರ್ಟ್ ಐಶ್ವರ್ಯಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದರಿಂದ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.

ಮಂಗಳೂರಿನಲ್ಲಿ ಭೀಕರ ಅಪಘಾತ; ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

0

ಮಂಗಳೂರು: ಅತಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಮಂಗಳೂರಿನ ಮರೋಳಿ ಬಳಿ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಈ ಘಟನೆ ನಡೆದಿದೆ.

ಪಡೀಲ್ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿದ್ದ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ವಿದ್ಯುತ್ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದಿದೆ.

ಅಪಘಾತದ ವೇಳೆ ಕಾರಿನಲ್ಲಿದ್ದ ಚಾಲಕ ಹಾಗೂ ಸಹ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಮೀನು ಮಾರಾಟದ ಬಾಕಿ ಹಣ ಸಿಗದೆ ಮನನೊಂದು ರೈತ ಸಂಘದ ಮುಖಂಡ ನೇಣಿಗೆ ಶರಣು!

0

ಚಿಕ್ಕಬಳ್ಳಾಪುರ: ಜಮೀನು ಮಾರಾಟ ಮಾಡಿದ ಬಳಿಕ ಬಾಕಿ ಹಣ ಕೈಸೇರದೆ ಮಾನಸಿಕವಾಗಿ ನೊಂದಿದ್ದ ರೈತ ಸಂಘದ ತಾಲೂಕು ಅಧ್ಯಕ್ಷರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ ಅವರು ನಗರದ ವಾಪಸಂದ್ರ ಬಡಾವಣೆಯಲ್ಲಿರುವ ರೈತ ಸಂಘದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಚೇರಿಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ರೈತ ಸಂಘದ ಕಚೇರಿ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೇಲ್ಭಾಗದಲ್ಲಿದ್ದು, ಅಲ್ಲಿಯೇ ಘಟನೆ ನಡೆದಿದೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

19.50 ಲಕ್ಷ ರೂ. ಬಾಕಿ ಹಣ ನೀಡದೆ ಸತಾಯಿಸಿದ ಆರೋಪ:

ಪೊಲೀಸರು ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಜಮೀನು ಮಾರಾಟದ ಬಳಿಕ ಬರಬೇಕಿದ್ದ ಬಾಕಿ ಹಣ ಸಿಗದೆ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬವರಿಗೆ ಒಟ್ಟು 77 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಜಮೀನು ಖರೀದಿಸಿದ್ದ ವ್ಯಕ್ತಿ ಮುಂಗಡ ಹಾಗೂ ವಿವಿಧ ಕಂತುಗಳ ರೂಪದಲ್ಲಿ 57.50 ಲಕ್ಷ ರೂಪಾಯಿ ಪಾವತಿಸಿದ್ದು, ಉಳಿದ 19.50 ಲಕ್ಷ ರೂಪಾಯಿ ಹಣವನ್ನು ಪಾವತಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

ಬಾಕಿ ಹಣವನ್ನು ನೀಡದೆ ಸುಮಾರು ಹತ್ತು ತಿಂಗಳಿನಿಂದ ಕಾಲಹರಣ ಮಾಡಲಾಗುತ್ತಿತ್ತು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಬರಬೇಕಿದ್ದ ಹಣ ಕೈಸೇರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ತೀವ್ರವಾಗಿ ನೊಂದಿದ್ದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.

ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಮೀನು ಮಾರಾಟಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ಹಾಗೂ ಬಾಕಿ ಹಣ ಪಾವತಿಯಾಗದಿರುವ ಕುರಿತು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಹಲವೆಡೆ ಮುಂದಿನ ಮೂರು ದಿನ ವರುಣಾರ್ಭಟ: ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ!

0

ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಬೆನ್ನಲ್ಲೇ ಇದೀಗ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಬುಧವಾರ ಇಡೀ ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.

ಗುರುವಾರ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಇದೇ ವೇಳೆ ದಕ್ಷಿಣ ಒಳನಾಡು ಕರ್ನಾಟಕಕ್ಕೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರವೂ ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಅತಿ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಾರಿ ಮುಂಗಾರು ಆರಂಭದಿಂದಲೂ ರಾಜ್ಯದಲ್ಲಿ ಮಳೆ ಕೊರತೆ ಕಂಡುಬಂದಿದ್ದು, ಇದೀಗ ಸೆಪ್ಟೆಂಬರ್‌ನಲ್ಲೂ ಮಳೆಯ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳ ಮೇಲೂ ಮಳೆ ಕೊರತೆಯ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಕರಾವಳಿ ಭಾಗದಲ್ಲಿ ಈಗಾಗಲೇ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ, ಹಳ್ಳ-ಕೊಳ್ಳಗಳು ಹಾಗೂ ತಗ್ಗು ಪ್ರದೇಶಗಳ ಜನರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ದಕ್ಷಿಣ ಒಳನಾಡಿನಲ್ಲೂ ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ ಮೂರು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಮಳೆ ಪ್ರಮಾಣ ಮತ್ತು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.