Home Blog Page 42

‘ಪ್ರಜಾ ಸೇವೆ’ ಅರಿವಾಗಿದ್ದು ಮೂರು ವರ್ಷಗಳ ಬಳಿಕವೇ?: ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರ ‘ಪ್ರಜಾ ಸೇವೆ’ ಎಂಬ ಹೊಸ ನಾಟಕ ಆರಂಭಿಸುವ ಮೂಲಕ ಕನ್ನಡಿಗರನ್ನು ಮಂಕು ಮಾಡಲು ಹೊರಟಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.

ಸುಮಾರು 60 ವರ್ಷಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಜೆಗಳ ಸೇವೆ ಮಾಡಬೇಕೆಂಬುದು ಈಗ ಅರಿವಾದಂತಿದೆ. ಇಷ್ಟು ವರ್ಷಗಳ ಕಾಲ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ಇದೀಗ ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಹೊಸ ಹೊಸ ಹೆಸರುಗಳನ್ನು ಇಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ವಿಫಲ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣೆ ವೇಳೆ ‘ಪ್ರಜೆಗಳೇ ಪ್ರಭುಗಳು’ ಎಂದು ಹೇಳಿ, ಜನರ ಸೇವೆ ಮಾಡುವುದಾಗಿ ಬಣ್ಣಬಣ್ಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳ ಬಳಿಕ ಪ್ರಜೆಗಳ ಸೇವೆ ಮಾಡಬೇಕೆಂಬುದು ಅರಿವಾಗಿದೆಯೇ? ಅಥವಾ ಲೂಟಿ ಮಾಡಲು ಹೊಸ ಹೆಸರನ್ನು ಬಳಸುತ್ತಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಕೂಡ ಹತ್ತು ಹಲವು ಹೊಸ ಹೆಸರುಗಳನ್ನು ಇಟ್ಟು ಸರ್ಕಾರದ ಹಣದಲ್ಲಿ ಪ್ರಚಾರ ಪಡೆದಿರುವುದನ್ನು ಯಾರೂ ಮರೆತಿಲ್ಲ. ಇದೀಗ ಮತ್ತೊಂದು ಹೊಸ ಹೆಸರಿನ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.

ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕುವೆ: ಪಿಎಸ್‌ಐ ಶಕುಂತಲಾ ನಾಯಕ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಶಕುಂತಲಾ ನಾಯಕ್ ಅವರು ನೂತನವಾಗಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೃತಪುರ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಕೃತಪುರ ಸೇವಾ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಎಸ್.ಪಿ., ನೂತನ ಪಿಎಸ್‌ಐ ಶಕುಂತಲಾ ನಾಯಕ್ ಅವರು ಈ ಹಿಂದೆ ಸಂಚಾರಿ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬೆಟಗೇರಿ ಬಡಾವಣೆ ಠಾಣೆಯ ಪಿಎಸ್‌ಐ ಆಗಿ ನೇಮಕಗೊಂಡಿದ್ದು, ತಮ್ಮ ಸೇವೆಯನ್ನು ಯಶಸ್ವಿಯಾಗಿ ಮುಂದುವರಿಸಲಿ ಎಂದು ಹಾರೈಸಿದರು.

ಸಿಪಿಐ ಧೀರಜ್ ಶಿಂಧೆ ಮಾತನಾಡಿ, ಶಕುಂತಲಾ ನಾಯಕ್ ಅವರು ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರೊಂದಿಗೆ ಬೆರೆತು ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಮ್ಯವಾಗಿ ವರ್ತಿಸಿ ಜನೋಪಯೋಗಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪೊಲೀಸ್ ಇಲಾಖೆಗೆ ಇಂತಹ ನಿಷ್ಠಾವಂತ ಅಧಿಕಾರಿಗಳ ಅಗತ್ಯವಿದ್ದು, ಬಡಾವಣೆ ಠಾಣೆಯಲ್ಲೂ ಅವರು ನಿಸ್ವಾರ್ಥ ಸೇವೆ ಮುಂದುವರಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕೃತಪುರ ಸೇವಾ ಸಮಿತಿ ಅಧ್ಯಕ್ಷ ಶಶಿ ಡಿಗ್ಗಾವಿ, ಸಿದ್ದು, ಕಾರ್ತಿಕ್, ಮಂಜು, ರಮೇಶ ಛಲವಾದಿ, ಸ್ವರೂಪ್ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಚಾರಿ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಇದೀಗ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಹಗಲಿರುಳು ಸ್ಪಂದಿಸುತ್ತೇನೆ. ಠಾಣಾ ವ್ಯಾಪ್ತಿಯಲ್ಲಿನ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸ್ಥಳೀಯರ ಹಿತ ಕಾಪಾಡಲು ನಿರಂತರವಾಗಿ ಶ್ರಮಿಸುತ್ತೇನೆ.

— ಶಕುಂತಲಾ ನಾಯಕ್, ಪಿಎಸ್‌ಐ, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ

ಖಾಲಿ ಇರುವ ವಕ್ಫ್ ಮಂಡಳಿ ಅಧ್ಯಕ್ಷರ ಹುದ್ದೆಗೆ ತಕ್ಷಣ ನೇಮಕ ಮಾಡಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷರ ಹುದ್ದೆ ಸುಮಾರು ಎರಡು ವರ್ಷಗಳಿಂದ ಖಾಲಿ ಇರುವ ಹಿನ್ನೆಲೆಯಲ್ಲಿ, ಅರ್ಹ ಹಾಗೂ ಸಮರ್ಥ ವ್ಯಕ್ತಿಯನ್ನು ತಕ್ಷಣ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ಜಿಲ್ಲಾಧ್ಯಕ್ಷ ಜಾಫರ್ ಡಾಲಾಯತ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವಕ್ಫ್ ಮಂಡಳಿಗೆ ಪೂರ್ಣ ಪ್ರಮಾಣದ ನಾಯಕತ್ವದ ಕೊರತೆಯಿಂದಾಗಿ ವಕ್ಫ್ ಆಸ್ತಿಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಅಭಿವೃದ್ಧಿ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳು ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಆಸ್ತಿಗಳಾಗಿವೆ. ಅವುಗಳ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆಗೆ ಜವಾಬ್ದಾರಿಯುತ ನಾಯಕತ್ವ ಅಗತ್ಯವಿದೆ. ದಾಖಲೆಗಳ ನಿರ್ವಹಣೆ, ಆಸ್ತಿಗಳ ಸಂರಕ್ಷಣೆ, ಒತ್ತುವರಿ ತಡೆ ಹಾಗೂ ತೆರವು, ಅಭಿವೃದ್ಧಿ ಕಾರ್ಯಗಳು ಮತ್ತು ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅಧ್ಯಕ್ಷರ ನೇಮಕ ಅನಿವಾರ್ಯವಾಗಿದೆ ಎಂದು ಹೇಳಿದರು.

ರಿಯಾಜಹಮ್ಮದ್ ದೊಡ್ಡಮನಿ ಮಾತನಾಡಿ, ಅಧ್ಯಕ್ಷರ ನೇಮಕದ ಬಳಿಕ ಗದಗ ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳ ಸಮಗ್ರ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು. ಅಕ್ರಮವಾಗಿ ಒತ್ತುವರಿ ಮಾಡಲಾಗಿರುವ ವಕ್ಫ್ ಆಸ್ತಿಗಳನ್ನು ಗುರುತಿಸಿ, ಕಾನೂನುಬದ್ಧವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅವುಗಳಿಂದ ಸಮುದಾಯ ಹಾಗೂ ಸಾರ್ವಜನಿಕರಿಗೆ ದೊರೆಯಬೇಕಾದ ಪ್ರಯೋಜನಗಳು ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸೈಯದ್ ಜಹೀರುದ್ದೀನ್ ಪೀರಜಾದೆ, ಕುತ್ಬುದ್ದೀನ್ ಶೇಖ್, ಡಾ. ಅಬ್ದುಲ್ ರಜಾಕ್ ಮಂಗಳೂರು, ಮಹಬೂಬ್ ಭಾಷಾ ಖಾಜಿ, ನಿಜಾಮುದ್ದೀನ್ ಕಾಟಾಪುರ, ಮಹಮ್ಮದ್ ಸಲೀಂ ಕರಡಿ ಹಾಗೂ ರಿಯಾಜ್ ಅಹ್ಮದ್ ಈಟಿ ಇದ್ದರು.

ಬಹಳ ಜನ ರಾಜೀನಾಮೆ ಕೊಡಬೇಡಿ ಎಂದಿದ್ದರು, ಆದ್ರೆ ಮಾತು ಕೊಟ್ಟಿದ್ದೆ: ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

0

ಚಿಕ್ಕಮಗಳೂರು: ‘ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಎಂದು ಹೇಳಿದ್ದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ರಾಜೀನಾಮೆ ನೀಡಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಡೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು. ತಾವು ಯಾವುದೋ ದೇವಸ್ಥಾನಕ್ಕೆ ಹೋದಾಗ ಕೆಲವರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿದ್ದರು. ಮೋದಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರಾ? ಸಂಗೊಳ್ಳಿ ರಾಯಣ್ಣ ಅವರ ರೀತಿಯಲ್ಲಿ ಹೋರಾಡಿದ್ದಾರಾ? ಎಂದು ಪ್ರಶ್ನಿಸಿದರು.

‘2 ಕೋಟಿ ಉದ್ಯೋಗ ಎಲ್ಲಿ? ಅಚ್ಚೇ ದಿನ್ ಎಲ್ಲಿ? ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು, ಮಾಡಿದ್ದಾರಾ? ಪ್ರಧಾನಿ ಆಗಿ 12 ವರ್ಷಗಳಾಗಿವೆ. ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದಿದ್ದರು, ಹಾಕಿದ್ದಾರಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ ಅವರು, ಜನರಿಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಟೀಕಿಸಿದರು.

ಇದೇ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ತಮ್ಮಯ್ಯ, ಯಾರಯ್ಯ ನಿನ್ನ ಮೇಲೆ ಸೋತದ್ದು? ಸಿ.ಟಿ. ರವಿ’ ಎಂದು ವ್ಯಂಗ್ಯವಾಡಿದರು. ಸಿ.ಟಿ. ರವಿ ತಮ್ಮ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿರುವುದಾಗಿ ಉಲ್ಲೇಖಿಸಿದ ಅವರು, ‘ನಾನು ಹೇಳಲ್ಲ, ನಮ್ಮ ಕಡೆ ಅವರನ್ನು ಲೂಟಿ ರವಿ ಎಂದು ಕರೆಯುತ್ತಾರೆ’ ಎಂದು ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸದ ಕಾರಣಕ್ಕೆ ತಮ್ಮ ಮುಖ್ಯಮಂತ್ರಿ ಸ್ಥಾನ ಹೋಯಿತು ಎಂದು ಸಿ.ಟಿ. ರವಿ ಹೇಳಿದ್ದಾರಂತೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ತಮ್ಮ ರಾಜೀನಾಮೆಯ ಕಾರಣವನ್ನೂ ವಿವರಿಸಿದ ಅವರು, ‘ನಾನು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡು ಎಂದರು, ಕೊಟ್ಟೆ. ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಎಂದಿದ್ದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಕೊಡಬೇಕು ಎಂದು ರಾಜೀನಾಮೆ ಕೊಟ್ಟೆ’ ಎಂದು ತಿಳಿಸಿದರು.

‘ರಾಜಕೀಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಯಾವುದೇ ಸರ್ಕಾರ ಇದ್ದರೆ, ಅದು ಸಿದ್ದರಾಮಯ್ಯ ಸರ್ಕಾರ’ ಎಂದು ಹೇಳುವ ಮೂಲಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಲಾ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ: 6 ವಿದ್ಯಾರ್ಥಿಗಳಿಗೆ ಗಾಯ

ಮರಳಿ ಗ್ರಾಮಕ್ಕೆ ತೆರಳುವಾಗ ಅವಘಡ: ಗಂಭೀರ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ

ಗದಗ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ವಿದ್ಯಾರ್ಥಿಗಳನ್ನು ಭೈರನಹಟ್ಟಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನರಗುಂದ ಪಟ್ಟಣದ ಪುಟ್ಟರಾಜ ಗವಾಯಿಗಳ ಸರ್ಕಲ್‌ ಬಳಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ನರಗುಂದ ಪಟ್ಟಣದ ರೊಟ್ರಾಕ್ಟ್ ಸ್ಕೂಲ್‌ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು KA-17/D-8588 ನೋಂದಣಿ ಸಂಖ್ಯೆಯ ಮಹೀಂದ್ರ ಸುಪ್ರೋ ಮ್ಯಾಕ್ಸಿ ಕ್ಯಾಬ್ ಶಾಲಾ ವಾಹನವು ಭೈರನಹಟ್ಟಿಗೆ ತೆರಳುತ್ತಿದ್ದಾಗ, ಚಾಲಕ ಗೌಡೇಶ್ ಹುಡೇದ ವಾಹನವನ್ನು ನಿಯಂತ್ರಿಸಲಾಗದೆ ಹುಬ್ಬಳ್ಳಿ-ವಿಜಾಪುರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಭೈರನಹಟ್ಟಿಯ ಅಭಿಷೇಕ್ ಗೌಡ (14), ಪ್ರಜ್ವಲ್ ಗೌಡ (14), ಶಿವು(15), ಮುದ್ದು ಪರಶುರಾಮ್  (10), ಸೌಮ್ಯ  (14) ಹಾಗೂ ಗುರುನಾಥ್  (13) ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಅಭಿಷೇಕ್ ಗೌಡ ಹಾಗೂ ಪ್ರಜ್ವಲ್ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ನಾಲ್ವರು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಚಾಲಕ ಗೌಡೇಶ್ ಹುಡೇದ ಅವರಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ.  ಘಟನೆ ಕುರಿತು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದಕ್ಕೆ ಬಿಗ್‌ ಟ್ವಿಸ್ಟ್‌! ಬೆಂಗಳೂರಿನಲ್ಲಿ ದಾಖಲಾಗಿದ್ದ FIR ಉತ್ತರಾಖಂಡಕ್ಕೆ ವರ್ಗಾವಣೆ

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಹಾಗೂ ಅದನ್ನು ಸಮರ್ಥಿಸಿಕೊಂಡ ಆರೋಪದ ಮೇಲೆ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಇದೀಗ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ.

ಕಾಂಗ್ರೆಸ್ ಮುಖಂಡ ರಾಮಪ್ಪ ಎಂಬುವರು ಸೆಪ್ಟೆಂಬರ್ 4ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಜೀರೋ ಎಫ್‌ಐಆರ್ ದಾಖಲಾಗಿತ್ತು. ಇದೀಗ ಘಟನೆ ನಡೆದ ಸ್ಥಳ ಆಧರಿಸಿ ಎಫ್‌ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಈ ವಿವಾದ ಸಂಬಂಧ ದೇಶಾದ್ಯಂತ ಸುಮಾರು 8 ಎಫ್‌ಐಆರ್‌ಗಳು ದಾಖಲಾಗಿವೆ.

ಅಖಿಲ ಭಾರತ ಆದಿವಾಸಿ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ನೀಡಿದ ಲಿಖಿತ ದೂರಿನ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 196(1)(ಬಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3(1)(ಯು), ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955ರ ಸಂಬಂಧಿತ ಸೆಕ್ಷನ್‌ಗಳ ಅಡಿ ಜೀರೋ ಎಫ್‌ಐಆರ್ ದಾಖಲಾಗಿತ್ತು.

2026ರ ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಭಾಷಣ ಮಾಡಿದ್ದರು. ಸಮಾವೇಶ ಮುಗಿದ ಬಳಿಕ ಆಗಸ್ಟ್ 10ರಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆ ಜಾಗದಲ್ಲಿ ಶುದ್ಧೀಕರಣ ಪೂಜೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಿಂದ ಮೈದಾನ ಅಪವಿತ್ರಗೊಂಡಿದೆ ಎಂಬಂತೆ ಬಿಂಬಿಸಿ ಅಪಮಾನ ಮಾಡುವ ಉದ್ದೇಶದಿಂದಲೇ ಈ ಶುದ್ಧೀಕರಣ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯವನ್ನು ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಮಸ್ಯೆಗಳನ್ನು ಬಗೆಹರಿಸಿ ಜನರಲ್ಲಿ ಹರ್ಷ ತರುವುದೇ ಸರ್ಕಾರದ ಯಶಸ್ಸಿನ ಮಾನದಂಡ: ಸಿಎಂ ಡಿ ಕೆ ಶಿವಕುಮಾರ್

0

ಕೂಡ್ಲಿಗಿ: “ಸರ್ಕಾರದ ಯಶಸ್ಸು ಜಾಹಿರಾತಿನಲ್ಲಿ ಇರುವುದಿಲ್ಲ. ಜನರ ಮುಖದಲ್ಲಿ ನಗು ಮೂಡಿದೆ ಎಂಬುದೇ ಯಶಸ್ಸಿನ ಮಾನದಂಡ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಜಾಸೇವೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

“ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸೇವೆ ಮಾಡಲು 136 ಸೀಟು ನೀಡಿ ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ಅವಕಾಶ ಕೊಟ್ಟಿದ್ದೀರಿ. ಇದು ಕೇವಲ ಸರ್ಕಾರ ಕಾರ್ಯಕ್ರಮ ಅಲ್ಲ. ಜನ ಸರ್ಕಾರದ ಬಳಿ ಹೋಗುವ ಕಾಲ ಹೋಗಿ, ಸರ್ಕಾರ ಜನರ ಬಳಿಗೆ ಹೋಗುವ ಕಾಲ ಬಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ” ಎಂದು ಹೇಳಿದರು.

“ವಿಧಾನಸೌಧ, ಜಿಲ್ಲಾ ಹಾಗೂ ತಾಲೂಕು, ಸರ್ಕಾರಿ ಕಚೇರಿಯಲ್ಲಿ ಕೂತು ಅಧಿಕಾರಿಗಳು ಕೆಲಸ ಮಾಡುವುದಲ್ಲ. ಜನರ ಕಷ್ಟ ಕೇಳಿ, ಅವರ ಸಮಸ್ಯೆ ಬಗೆಹರಿಸಲು ಹೊಸ ಇಲಾಖೆ ಆರಂಭೀಸಿದ್ದೇವೆ” ಎಂದರು.

ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ

“ಸಂಸದ ಜಿ ಸಿ ಚಂದ್ರಶೇಖರ ಅವರು ನನ್ನನ್ನು ನಾಡಿನ ದೊರೆ ಎಂದು ಸಂಬೋಧನೆ ಮಾಡಿದರು. ಆದರೆ, ನಾನು ನಾಡಿನ ದೊರೆ ಅಲ್ಲ, ಪ್ರಜಾಸೇವಕ ಎಂದು ಕರೆಯಬೇಕು. ನನಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ” ಎಂದು ಮನವಿ ಮಾಡಿದರು.

“ದೊರೆಗಳ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಪ್ರಜೆಗಳ ಬದುಕಿನಲ್ಲಿ ಬದಲಾವನೆ ತರಲು ಇಲಾಖೆ ತರಲಾಗಿದೆ. ಇದು ಕೇವಲ ಇಲಾಖೆ ಮಾತ್ರವಲ್ಲ. ಜನರ ಸಮಸ್ಯೆ ಆಲಿಸಿ, ಸ್ಪಂದಿಸಿ ಪರಿಹಾರ ನೀಡಲು ಈ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಡಿಸಿ ಕಚೇರಿ, ಮಂತ್ರಿ ಕಚೇರಿ, ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. ನಮ್ಮ ಅವಧಿಯಲ್ಲಿ ಈ ಪರಿಸ್ಥಿತಿ ಬದಲಾಗಿ, ಅಧಿಕಾರಿಗಳು ಜನರನ್ನು ಹುಡುಕಿಕೊಂಡು ಹೋಗಬೇಕು” ಎಂದು ಕರೆ ನೀಡಿದರು.

“ಕೂಡ್ಲಿಗಿಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಜಾಗಕ್ಕೆ ನಾವು ಹೋಗಿ ನಮಿಸಿದ್ದೇವೆ. ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆಯಲು ಶಕ್ತಿ ನೀಡುವಂತೆ ಮಹಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಆಡಳಿತ ಸಮಾಜದ ಕೊನೆ ವ್ಯಕ್ತಿಯನ್ನು ತಲುಪಬೇಕು ಎಂಬುದು ಗಾಂಧೀಜಿ ಅವರ ಸಂದೇಶ. ನಾವು ಬಸವಣ್ಣನ ನಾಡಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಅವರ ಐಕ್ಯ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ, ಬರ ಪ್ರದೇಶದ ರೈತರ ಸಮಸ್ಯೆ ನೋಡಿ ಇಲ್ಲಿಗೆ ಬದಿರುವೆ” ಎಂದು ತಿಳಿಸಿದರು.

ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ

“ನಾನು ಕೇವಲ ಹೆಲಿಕಾಪ್ಟರ್ ನಲ್ಲಿ ಮಾತ್ರ ಬರ ವೀಕ್ಷಣೆ ಮಾಡಿಲ್ಲ. ಪ್ರಯಾಣ ಮಾಡುವಾಗ ಈ ಭಾಗದ ಜಮೀನುಗಳನ್ನು ನೋಡಿದೆ. ಆದರೆ ವಿರೋಧ ಪಕ್ಷದವರು ಅದನ್ನು ಟೀಕಿಸುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬುದು ನಮ್ಮ ನಂಬಿಕೆ” ಎಂದು ತಿರುಗೇಟು ನೀಡಿದರು.

ಜನರ ಕಷ್ಟಕ್ಕೆ ಸ್ಪಂದಿಸಿ; ಅಧಿಕಾರಿಗಳಿಗೆ ಸೂಚನೆ

“ಪ್ರತಿ ಜಿಲ್ಲಾ ಮಂತ್ರಿ ತಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಭೇಟಿ ನೀಡಬೇಕು. ಜನರ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದ್ದೇನೆ. ನಂತರ ಎರಡನೇ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಮಾಡಬೇಕು. ಶಾಸಕರು ಪಂಚಾಯ್ತಿ ಮಟ್ಟದಲ್ಲಿ ಹೋಗಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿ ಹೋಗಬೇಕು, ಅಧಿಕಾರಿಗಳು ಜನರ ಮಧ್ಯೆ ಇರಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು” ಎಂದು ಸೂಚನೆ ನೀಡಿದರು.

“ಎಲ್ಲಾ ಸಮಸ್ಯೆ ಬಗೆಹರಿಸಲು ಆಗದೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಆದಷ್ಟು ಪರಿಹಾರ ನೀಡಲಾಗುವುದು. ಪಿಂಚಣಿ, ಭೂಮಿ ಗ್ಯಾರಂಟಿ, ಖಾತೆ ಸಮಸ್ಯೆ, ನಿವೇಶನ ಹಾಗೂ ಮನೆ ರಹಿತರು, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಇಲಾಖೆ ಮೂಲಕ ಬಗೆಹರಿಸಲಾಗುವುದು” ಎಂದರು.

ಸಮಸ್ಯೆ ಬಗೆಹರಿಸಲು ಕಾನೂನು ಹೋರಾಟಕ್ಕೆ ವಕೀಲರ ಸೇವೆ ಅವಕಾಶ ಬಳಸಿಕೊಳ್ಳಿ

“ನಿಮ್ಮ ಪಂಚಾಯಿತಿಗಳಲ್ಲಿ ನಿಮಗೆ ಅರ್ಜಿ ನೀಡುತ್ತಾರೆ. ನೀವು ಅವುಗಳ ಮೂಲಕ ನಿಮ್ಮ ಮನವಿ ಸಲ್ಲಿಸಬೇಕು. ಸುಮಾರು 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀವು ಅರ್ಜಿ ಕೊಟ್ಟ ನಂತರ ನಾವು ಅದನ್ನು ಮರೆಯುವುದಿಲ್ಲ. ಅದಕ್ಕೆ ಪರಿಹಾರ ಸಿಗುವವರೆಗೆ ಸರ್ಕಾರ ಕೆಲಸ ಮಾಡಲಿದೆ. ಪರಿಹಾರ ಸಿಗದಿದ್ದರೆ ಯಾವ ಕಾರಣಕ್ಕೆ ಆಗುವುದಿಲ್ಲ ಎಂದು ವಿವರಣೆ ನೀಡಲಾಗುವುದು. ಕಾನೂನು ಮೂಲಕ ಬಗೆಹರಿಸಬೇಕಾದ ಸಂದರ್ಭದಲ್ಲಿ ಕೋರ್ಟ್ ನಲ್ಲಿ ನಿಮ್ಮ ಪರ ವಾದ ಮಂಡಿಸಲು ವಕೀಲರ ಸೇವೆ ಒದಗಿಸಲಾಗುವುದು. ಬಡವರಿಗೆ ವಕೀಲರ ಸೇವೆ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು.

“ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಪವಿತ್ರವಾದ ಕೃಷ್ಣದೇವರಾಯನ ಭೂಮಿ ವಿಜಯನಗರ ಆಯ್ಕೆ ಮಾಡಿರುವೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ಸಮಸ್ಯೆ ಅರ್ಜಿ ಕೊಟ್ಟಿದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಸಮಸ್ಯೆ ಬಗೆಹರಿದಿದೆ ಎಂಬುದು ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸುತ್ತದೆ” ಎಂದರು.

ಪಾದಯಾತ್ರೆಯಿಂದ ನಮಗೇನು ಆತಂಕವಿಲ್ಲ, ಬಿಜೆಪಿಗರ ಬಿಪಿ-ಶುಗರ್ ಕಡಿಮೆಯಾಗುತ್ತದೆ: ಲಕ್ಷ್ಮಣ ಸವದಿ ವ್ಯಂಗ್ಯ

0

ಕಾರವಾರ: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಆತಂಕ ಉಂಟಾಗಿದೆ ಎಂಬುದು ಸುಳ್ಳು. ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

ಇಂದು ಅಂಕೋಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆ ನಡೆಸುವುದರಿಂದ ಅವರ ಬಿಪಿ ಮತ್ತು ಶುಗರ್‌ ಕಡಿಮೆಯಾಗಬಹುದು ಎಂದು ಟಾಂಗ್ ನೀಡಿದರು.

“ಬಿಜೆಪಿಗರಿಗೆ ಪಾದಯಾತ್ರೆಯಿಂದ ಬಿಪಿ-ಶುಗರ್ ಕಡಿಮೆಯಾದರೆ, ಅವರನ್ನು ಚಿಕಿತ್ಸೆ ನೀಡುವ ವೈದ್ಯರಿಗೆ ಆದಾಯದಲ್ಲಿ ನಷ್ಟವಾಗಬಹುದು ಎಂಬ ಆತಂಕ ಇರಬಹುದು. ಆದರೆ ಕಾಂಗ್ರೆಸ್‌ನವರಿಗೆ ಯಾವುದೇ ನಷ್ಟವಿಲ್ಲ” ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಗಿ ಹೇಳಿದರು.

ಬಿಜೆಪಿ ನಾಯಕರ ಪಾದಯಾತ್ರೆ ಕುರಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರ ಬಿಪಿ ಮತ್ತು ಶುಗರ್‌ ಕಡಿಮೆಯಾಗುತ್ತದೆ ಎಂಬುದೇ ಈ ಪಾದಯಾತ್ರೆಯ ದೊಡ್ಡ ಹೈಲೈಟ್ ಎಂದು ಟೀಕಿಸಿದರು.

ಇನ್ನು ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಕುರಿತು ಮಾತನಾಡಿದ ಸಚಿವ ಸವದಿ, ಮುಖ್ಯಮಂತ್ರಿಗಳೇ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬಳಿಕ ನಿಗಮ ಮಂಡಳಿಗಳ ಅಧ್ಯಕ್ಷರೂ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಮೊದಲೇ ಚರ್ಚೆಯಾಗಿತ್ತು ಎಂದು ಹೇಳಿದರು.

ನಿಗಮ ಮಂಡಳಿಗಳಿಗೆ ಶೀಘ್ರದಲ್ಲೇ ಹೊಸ ನೇಮಕಾತಿ ನಡೆಯಲಿದೆ. ಕೆಲವೇ ದಿನಗಳಲ್ಲಿ ನಿಗಮ ಮಂಡಳಿಗಳಿಗೂ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

101ರಿಂದ 180–200ಕ್ಕೆ ಬರಪೀಡಿತ ತಾಲೂಕುಗಳ ಸಂಖ್ಯೆ ಏರಿಕೆ ಸಾಧ್ಯತೆ: ಈಶ್ವರ್ ಖಂಡ್ರೆ

0

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಲ್‌ ನಿನೋ ಪ್ರಭಾವದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ತಿಂಗಳಾಂತ್ಯದ ವೇಳೆಗೆ 180ರಿಂದ 200 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಶೀಘ್ರವೇ 24 ಬ್ಲಾಕ್‌ಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ತಿಂಗಳಾಂತ್ಯಕ್ಕೆ ನಡೆಯುವ ಮತ್ತೊಂದು ಗ್ರೌಂಡ್ ಟ್ರೂಥಿಂಗ್‌ನಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 180ರಿಂದ 200ಕ್ಕೆ ತಲುಪಲಿದೆ ಎಂದರು.

ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥ ನಿರ್ವಹಣೆಗೆ ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸಲು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟದ ಉಪ ಸಮಿತಿಯ ಸದಸ್ಯರಾಗಿರುವುದಾಗಿ ಖಂಡ್ರೆ ತಿಳಿಸಿದರು. ಈ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್‌ನಿಂದ ಒಣಭೂಮಿ ಮತ್ತು ನೀರಾವರಿ ಭೂಮಿಗೆ ಪರಿಹಾರ ನೀಡಲಾಗುತ್ತದೆಯೆಂದೂ, ಇದರ ಜೊತೆಗೆ ರಾಜ್ಯದಲ್ಲಿ ತೀವ್ರ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವರೆಂದೂ ಸಚಿವರು ತಿಳಿಸಿದರು. ಪ್ರಸ್ತುತ ಬರಪೀಡಿತ ಎಂದು ಘೋಷಿಸಲಾಗಿರುವ 101 ಬ್ಲಾಕ್‌ಗಳಿಗೆ 2,600 ಕೋಟಿ ರೂಪಾಯಿ ನೀಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಬಿಜೆಪಿ ಸಂಸತ್ ಸದಸ್ಯರು ಮತ್ತು ನಾಯಕರು ರಾಜ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ಹೇರಿ ಹಣ ಕೊಡಿಸುವ ಕಾರ್ಯ ಮಾಡಬೇಕೆಂದೂ, ಅದು ಬಿಟ್ಟು ಪಾದಯಾತ್ರೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆಂದೂ ಸಚಿವ ಖಂಡ್ರೆ ಆಕ್ಷೇಪಿಸಿದರು.

ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ʼಗೆ ಹೋಗಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ! ಆರೋಪಿ ಅರೆಸ್ಟ್

0

ಮುಂಬೈ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಮುಂದಾಗಿದ್ದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆಯಾಗಿರುವುದು ಯಾಮಿನಿ (38) ಎಂಬುವರು. ಆಕೆಯ ಪತಿ ಕೃಷ್ಣ ಲಾಲ್ ಯಾದವ್ (41) ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಸಿದ್ಧರಾಗಿದ್ದ ಮಹಿಳೆ ಅಡುಗೆ ಮಾಡದೇ ಇದ್ದುದಕ್ಕೆ, ಕುಡಿದು ಬಂದಿದ್ದ ಪತಿ ಜಗಳ ತೆಗೆದು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಕೃಷ್ಣ ಲಾಲ್ ಕೆಲಸದಿಂದ ಮನೆಗೆ ಮರಳಿದಾಗ ಯಾಮಿನಿ ಬಳಿ ಅಡುಗೆ ಮಾಡಲು ತಿಳಿಸಿದ್ದ. ಆದರೆ ಯಾಮಿನಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಬೇಕಿರುವುದಾಗಿ ಅಡುಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಮದ್ಯದ ಅಮಲಿನಲ್ಲಿದ್ದ ಆರೋಪಿ, ತಮ್ಮ ಇಬ್ಬರು ಮಕ್ಕಳ ಮುಂದೆಯೇ ಯಾಮಿನಿಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದ.

ಹಲ್ಲೆಯ ಬಳಿಕ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವಿದೆ ಎಂದು ಯಾಮಿನಿ ಮಾತ್ರೆ ತರುವಂತೆ ಪತಿಗೆ ಕೇಳಿಕೊಂಡಿದ್ದರು. ಕೃಷ್ಣ ಲಾಲ್ ಮಾತ್ರೆ ತರಲು ತೆರಳಿದಾಗ ಮೆಡಿಕಲ್ ಬಂದ್ ಆಗಿದ್ದ ಕಾರಣ ಖಾಲಿ ಕೈಯಲ್ಲಿ ಹಿಂತಿರುಗಿದ್ದ. ಈ ವೇಳೆಗಾಗಲೇ ಮಹಿಳೆಯ ಹೊಟ್ಟೆ ಊದಿಕೊಂಡು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದರು.

ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕುತ್ತಿಗೆಯ ಮೂಳೆ ಮುರಿತ ಮತ್ತು ಕರುಳಿಗೆ ತೀವ್ರ ಹಾನಿ ಸೇರಿದಂತೆ ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಪತಿಯನ್ನು ವಿಚಾರಣೆ ನಡೆಸಿದಾಗ ಆತ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದು ಬಯಲಾಗುತ್ತಿದ್ದಂತೆ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.