Home Blog Page 43

ಯಶ್ ವಿರುದ್ಧ ರಿಷಿಕಾ ಸಿಂಗ್ ವಿವಾದಾತ್ಮಕ ವಿಡಿಯೋ: ‘ಹೆಣ್ಮಕ್ಕಳಿಗೆ ಗೌರವ ಕೊಡದಿದ್ದರೆ ಕರ್ನಾಟಕದಿಂದ ಹೊರಹೋಗಿ’ ಎಂದ ನಟಿ

‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವ ಬೆನ್ನಲ್ಲೇ ನಟಿ ರಿಷಿಕಾ ಸಿಂಗ್ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಟ್ರೈಲರ್‌ನ್ನು ಟೀಕಿಸಿದ ರಿಷಿಕಾ, ಯಶ್ ಅವರನ್ನು ಉದ್ದೇಶಿಸಿ ‘ಹೆಣ್ಮಕ್ಕಳಿಗೆ ಗೌರವ ಕೊಡದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದ ಪ್ರಮುಖ ನಟಿಯರು ಯಶ್ ಜೊತೆ ಕೆಲಸ ಮಾಡಿದ ಅನುಭವವನ್ನು ಶ್ಲಾಘಿಸಿದ್ದರು. ಟ್ರೈಲರ್‌ಗೆ ಕೂಡ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ನಡುವೆ ನಟಿ ರಿಷಿಕಾ ಸಿಂಗ್ ತಮ್ಮ ವಿಡಿಯೋದಲ್ಲಿ ಟ್ರೈಲರ್ ಹಾಗೂ ಯಶ್ ಅವರ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಣ್ಮಕ್ಕಳಿಗೆ ಗೌರವ ನೀಡುವಂತೆ ಸಲಹೆ ನೀಡಿದ ಅವರು, ತಮ್ಮ ಹೇಳಿಕೆಯ ಕೊನೆಯಲ್ಲಿ ‘ಐ ಆಮ್ ಟಾಕ್ಸಿಕ್’ ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಚರ್ಚೆ ಆರಂಭಿಸಿದ್ದಾರೆ. ‘ಸಿನಿಮಾದಲ್ಲಿ ನಟಿಸಿರುವ ನಟಿಯರೇ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ವೃತ್ತಿಪರವಾಗಿ ಕೆಲಸ ಮಾಡಿದ್ದಾರೆ. ಹಾಗಿದ್ದಾಗ ಈ ರೀತಿಯ ಟೀಕೆ ಏಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.

ಕೆಲವರು ರಿಷಿಕಾ ಅವರ ಹಳೆಯ ಸಿನಿಮಾಗಳ ದೃಶ್ಯಗಳು ಮತ್ತು ಫೋಟೋಗಳನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಯನ್ನು ದ್ವಂದ್ವ ನಿಲುವು ಎಂದು ಟೀಕಿಸಿದ್ದಾರೆ. ಯಶ್ ಅಭಿಮಾನಿಗಳು ಕೂಡ ನಟಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಷಿಕಾ ಸಿಂಗ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿದ್ದು, ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ತುಂಟರು’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಮೊದಲ ‘ಬಿಗ್‌ಬಾಸ್’ ಸೀಸನ್‌ನಲ್ಲೂ ಅವರು ಸ್ಪರ್ಧಿಯಾಗಿದ್ದರು.

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಅಣ್ಣಾಮಲೈ: ಮಠದಲ್ಲಿ ಸನ್ಮಾನ, ಅಭಿಮಾನಿಗಳಿಂದ ಭರ್ಜರಿ ಸ್ವಾಗತ

0

ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಮಠದ ವತಿಯಿಂದ ಪ್ರಸಾದ ಹಾಗೂ ಭಾವಚಿತ್ರ ನೀಡಿ ಗೌರವಿಸಲಾಯಿತಲ್ಲದೆ, ಅವರ ಆಗಮನದ ವೇಳೆ ಅಭಿಮಾನಿಗಳು ಮತ್ತು ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು.

ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ಅಣ್ಣಾಮಲೈ ಬಳಿಕ ಮಠದ ಪ್ರಸಾದ ಸ್ವೀಕರಿಸಿದರು.

ಮಠದ ಪರವಾಗಿ ಪ್ರಸಾದ ಹಾಗೂ ಶ್ರೀಕೃಷ್ಣ ದೇವರ ಭಾವಚಿತ್ರ ನೀಡಿ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಿಂದಲೇ ಅಣ್ಣಾಮಲೈ ಅವರಿಗೆ ಈ ಭಾಗದೊಂದಿಗೆ ಆತ್ಮೀಯ ನಂಟಿದ್ದು, ಅವರ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಮಠಕ್ಕೆ ಆಗಮಿಸಿ ಭೇಟಿಯಾದರು.

ಬಿಜೆಪಿಯಿಂದ ಹೊರಬಂದು ‘ವೀ ದ ಲೀಡರ್ಸ್ ಮೂವ್‌ಮೆಂಟ್’ ಆರಂಭಿಸಿದ ಬಳಿಕ ಉಡುಪಿಗೆ ನೀಡಿರುವ ಇದು ಎರಡನೇ ಭೇಟಿಯಾಗಿದ್ದು, ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಅಣ್ಣಾಮಲೈ ಅವರ ಭೇಟಿ ಉಡುಪಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯಿತು.

ನಟಿ ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್ ಪ್ರಕರಣ:‌ ಸಿಸಿಟಿವಿ ದೃಶ್ಯ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಸಲ್ಲಿಸಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಅಗತ್ಯ ವೀಡಿಯೊಗಳನ್ನು ಒದಗಿಸುವುದಾಗಿ ಸಿಐಎಸ್‌ಎಫ್ ನ್ಯಾಯಾಲಯಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಲಾಗಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ರನ್ಯಾ ಪರ ವಕೀಲ ವೈ.ಎಲ್. ಮಹೇಶ್, ಹಿಂದಿನ ನ್ಯಾಯಾಲಯದ ಆದೇಶವನ್ನು ಸಿಐಎಸ್‌ಎಫ್ ಸಮರ್ಪಕವಾಗಿ ಪಾಲಿಸಿಲ್ಲ ಎಂದು ವಾದ ಮಂಡಿಸಿದರು.

2025ರ ಮಾರ್ಚ್ 3ರ ಸಿಸಿಟಿವಿ ದೃಶ್ಯಾವಳಿಯನ್ನು ಸ್ಪಷ್ಟ ರೂಪದಲ್ಲಿ ಒದಗಿಸುವಂತೆ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದರು.

ಸಿಐಎಸ್‌ಎಫ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ತಿಳಿಸಿ, ಅರ್ಜಿದಾರರು ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾರ್ಚ್ 3ರ ಸಂಜೆ 4.30ರಿಂದ ಮಾರ್ಚ್ 4ರ ಬೆಳಿಗ್ಗೆ 11 ಗಂಟೆಯವರೆಗಿನ ದೃಶ್ಯಾವಳಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಭರವಸೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಸಂಬಂಧಿತ ಸಿಸಿಟಿವಿ ದೃಶ್ಯಾವಳಿಯನ್ನು ಒದಗಿಸುವಂತೆ ಸೂಚಿಸಿ ಅರ್ಜಿಯನ್ನು ಮುಕ್ತಾಯಗೊಳಿಸಿತು.

FCRA ತಿದ್ದುಪಡಿ ಮಸೂದೆ 2026 ಜೆಪಿಸಿಗೆ ರವಾನೆ; 31 ಸದಸ್ಯರ ಜಂಟಿ ಸಮಿತಿ ರಚನೆಗೆ ಕೇಂದ್ರ ಸರ್ಕಾರದ ಪ್ರಸ್ತಾವನೆ

0

ನವದೆಹಲಿ: ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026 ಅನ್ನು ಸಮಗ್ರ ಪರಿಶೀಲನೆ ಹಾಗೂ ಅಗತ್ಯ ಸಲಹೆಗಳಿಗಾಗಿ ಸಂಸತ್ತಿನ ಜಂಟಿ ಸಮಿತಿಗೆ (JPC) ರವಾನಿಸಿದೆ.

ಮಸೂದೆಯ ಪರಿಶೀಲನೆಗಾಗಿ ರಚಿಸಲಾಗುವ ಜಂಟಿ ಸಮಿತಿಯಲ್ಲಿ ಒಟ್ಟು 31 ಸದಸ್ಯರು ಇರಲಿದ್ದಾರೆ. ಲೋಕಸಭೆಯಿಂದ 21 ಹಾಗೂ ರಾಜ್ಯಸಭೆಯಿಂದ 10 ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲು ಪ್ರಸ್ತಾವಿಸಲಾಗಿದೆ.

ಈ ಜಂಟಿ ಸಮಿತಿಯು ಮಸೂದೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯ ಸಲಹೆಗಳನ್ನು ಪಡೆದು ತನ್ನ ವರದಿಯನ್ನು 2026ರ ಚಳಿಗಾಲದ ಸಂಸತ್ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಲೋಕಸಭೆಗೆ ಸಲ್ಲಿಸಬೇಕೆಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.

ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು FCRA ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸುವ ಪ್ರಸ್ತಾವನೆ ಮಂಡಿಸುತ್ತಿದ್ದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಮಸೂದೆಯ ಮೂಲಕ ಎನ್‌ಜಿಒಗಳು ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ವಿಪಕ್ಷಗಳು, ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿವೆ.

ಇದೇ ವೇಳೆ, ಆರ್‌ಎಸ್‌ಎಸ್‌ ವಿದೇಶಿ ನಿಧಿಯನ್ನು ಪಡೆಯುತ್ತಿರುವುದನ್ನು ಉಲ್ಲೇಖಿಸಿದ ವಿಪಕ್ಷಗಳು, ಒಂದು ಕಡೆ ವಿದೇಶಿ ನಿಧಿ ಪಡೆಯುವ ಸಂಸ್ಥೆಗಳಿಗೆ ಅವಕಾಶ ನೀಡಿ ಮತ್ತೊಂದೆಡೆ ಎನ್‌ಜಿಒಗಳು ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದವು.

ಮಸೂದೆಯನ್ನು ಇದೀಗ ಜೆಪಿಸಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಸಮಿತಿಯ ಪರಿಶೀಲನೆ ಹಾಗೂ ಅದರ ಶಿಫಾರಸುಗಳ ಬಳಿಕ ಮುಂದಿನ ಸಂಸತ್ ಅಧಿವೇಶನದಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಬರುವ ಸಾಧ್ಯತೆಯಿದೆ.

ಬಿ. ನಾಗೇಂದ್ರ ಸಚಿವರಾಗಿರುವವರೆಗೆ ಅಧಿವೇಶನಕ್ಕೆ ಅವಕಾಶವಿಲ್ಲ; ಕೂಡಲೇ ರಾಜೀನಾಮೆ ಪಡೆಯುವಂತೆ ಆರ್‌. ಅಶೋಕ್‌ ಆಗ್ರಹ

0

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರು ಸಚಿವರಾಗಿರುವವರೆಗೆ ವಿಧಾನಸಭೆ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೂಡಲೇ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌. ಅಶೋಕ್‌, ಸದನದಲ್ಲಿ ಪ್ರತಿಯೊಂದು ವಿಚಾರಕ್ಕೂ ಮುಖ್ಯಮಂತ್ರಿಯೇ ಉತ್ತರ ನೀಡುವುದಾದರೆ ಸಚಿವರು ಏಕೆ ಬೇಕು ಎಂದು ಪ್ರಶ್ನಿಸಿದರು. ಜನರ ತೆರಿಗೆ ಹಣದಲ್ಲಿ ಸಚಿವರಿಗೆ ಕಾರು, ಮನೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ಚಕ್ರಾಧಿಪತ್ಯವಲ್ಲ. ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸಂವಿಧಾನ ನೀಡಿರುವ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿಯೇ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದಾದರೆ ಸಚಿವರನ್ನು ಅಧಿವೇಶನದಿಂದ ಹೊರಗಿಡಲಿ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸಭೆ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ. ಆದರೆ, ಅದಕ್ಕೂ ಮುನ್ನ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆರ್‌. ಅಶೋಕ್‌ ಒತ್ತಾಯಿಸಿದರು.

ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಆರಂಭಿಸಲಿದೆ ಎಂದು ಆರ್‌. ಅಶೋಕ್‌ ತಿಳಿಸಿದರು. ಪ್ರತಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದು, ವಿಧಾನಸಭೆ ಅಧಿವೇಶನದ ಒಳಗೂ ಹಾಗೂ ಹೊರಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಳೆದ ಬಾರಿ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದು ಏಕೆ? ಇದೀಗ ಮತ್ತೆ ಅವರನ್ನು ಸಚಿವರನ್ನಾಗಿ ಮಾಡಿದ್ದು ಏಕೆ? ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಬಿ. ನಾಗೇಂದ್ರ ಅವರು ಇನ್ನೂ ಆರೋಪಿಯಾಗಿದ್ದಾರೆ ಎಂದು ಹೇಳಿದ ಆರ್‌. ಅಶೋಕ್‌, ಅವರ ವಿರುದ್ಧ ವಿವಿಧ ತನಿಖಾ ಸಂಸ್ಥೆಗಳಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಸಿಬಿಐನಲ್ಲಿ ಮೂರು ಪ್ರಕರಣಗಳು, ಲೋಕಾಯುಕ್ತದಲ್ಲಿ ಐದು ಪ್ರಕರಣಗಳು, ಎಸ್‌ಐಟಿಯಲ್ಲಿ ಒಂದು ಪ್ರಕರಣ ಹಾಗೂ ಕಾರವಾರದಲ್ಲಿ ಸಿಐಡಿ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಅವರು ಹೇಳಿದರು. ಚೆನ್ನೈನಲ್ಲಿಯೂ ಪ್ರಕರಣವೊಂದು ನಡೆಯುತ್ತಿದೆ ಎಂದು ಉಲ್ಲೇಖಿಸಿದ ಆರ್‌. ಅಶೋಕ್‌, ಇಂತಹ ಪರಿಸ್ಥಿತಿಯಲ್ಲಿ ನಾಗೇಂದ್ರ ಅವರು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ ಮತ್ತು ಇಲಾಖೆಯ ಕೆಲಸವನ್ನು ಯಾವಾಗ ನಿರ್ವಹಿಸುತ್ತಾರೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವನ್ನು ಪ್ರಸ್ತಾಪಿಸಿದ ಆರ್‌. ಅಶೋಕ್‌, ₹187 ಕೋಟಿ ಹಗರಣದಲ್ಲಿ ₹89 ಕೋಟಿ ಅಕ್ರಮ ನಡೆದಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದರು ಎಂದು ಹೇಳಿದರು.

ದಲಿತರ ಹಣಕ್ಕೆ ಸಂಬಂಧಿಸಿದ ಅಕ್ರಮದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟದಲ್ಲಿ ಮುಂದುವರಿಸಿದರೆ ಇಡೀ ಸಚಿವ ಸಂಪುಟವೇ ಕಳಂಕಿತವಾಗುತ್ತದೆ ಎಂದು ಆರ್‌. ಅಶೋಕ್‌ ಆರೋಪಿಸಿದರು.

ಬಿ. ನಾಗೇಂದ್ರ ಅವರು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರಿರಬಹುದು ಎಂಬ ಅನುಮಾನವಿದೆ ಎಂದು ಆರ್‌. ಅಶೋಕ್‌ ಹೇಳಿದ್ದಾರೆ.

ಮೋಸ ಮಾಡಿ ವಿಮಾ ಪರಿಹಾರ ಪಡೆಯಲು ಅವಕಾಶವಿಲ್ಲ; ₹5.70 ಲಕ್ಷ ಪರಿಹಾರ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

0

ಬೆಂಗಳೂರು: ವಿಮಾ ಕಂಪನಿಗಳು ಸಾರ್ವಜನಿಕ ಹಣವನ್ನು ನಿರ್ವಹಿಸುತ್ತವೆ. ಹೀಗಾಗಿ ಮೋಸದ ಆಧಾರದ ಮೇಲೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ತಪ್ಪಾಗಿ ಟೆಂಪೋ ಟ್ರ್ಯಾಕ್ಸ್ ವಾಹನವನ್ನು ಸಿಲುಕಿಸಿ ಪರಿಹಾರ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧಿಕರಣ ನೀಡಿದ್ದ ₹5.70 ಲಕ್ಷ ಪರಿಹಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ರಸ್ತೆ ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚಿನ ಪರಿಹಾರ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಅಪಘಾತಕ್ಕೆ ಟೆಂಪೋ ಟ್ರ್ಯಾಕ್ಸ್ ವಾಹನ ಡಿಕ್ಕಿ ಹೊಡೆದಿದೆ ಎಂಬುದಕ್ಕೆ ಆರಂಭಿಕ ದೂರಿನಲ್ಲಿ ಯಾವುದೇ ಉಲ್ಲೇಖವಿರಲಿಲ್ಲ. ಬದಲಾಗಿ, ಮೃತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಹಿಂಬದಿ ಸವಾರನ ಹೇಳಿಕೆಯ ಪ್ರಕಾರ, ಮೃತ ಚಾಲಕನೇ ಅತಿವೇಗವಾಗಿ ವಾಹನ ಚಲಾಯಿಸಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದ ಎಂದು ತಿಳಿದುಬಂದಿತ್ತು.

ಆದರೆ, ಅಪಘಾತ ಸಂಭವಿಸಿದ ಸುಮಾರು ಒಂದು ತಿಂಗಳ ಬಳಿಕ ಟೆಂಪೋ ಟ್ರ್ಯಾಕ್ಸ್ ವಾಹನವನ್ನು ಪ್ರಕರಣದಲ್ಲಿ ಸೇರ್ಪಡೆ ಮಾಡಲಾಗಿತ್ತು. ಅಲ್ಲದೆ, ಪ್ರಕರಣದ ಪ್ರತ್ಯಕ್ಷ ಸಾಕ್ಷಿಯೊಬ್ಬರು ಕ್ರಿಮಿನಲ್ ನ್ಯಾಯಾಲಯದಲ್ಲಿ ತಮಗೆ ಅಪಘಾತದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಪರಿಹಾರ ನ್ಯಾಯಾಧಿಕರಣದ ಮುಂದೆ ಟೆಂಪೋ ಟ್ರ್ಯಾಕ್ಸ್ ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗಳಲ್ಲಿನ ವ್ಯತ್ಯಾಸವು ಪಾಟಿ ಸವಾಲಿನ ವೇಳೆ ಸಾಬೀತಾಗಿರುವುದನ್ನು ಹೈಕೋರ್ಟ್ ಗಮನಿಸಿದೆ. ಪರಿಹಾರ ಪಡೆಯುವ ಉದ್ದೇಶದಿಂದ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಾಧಿಕರಣ ನೀಡಿದ್ದ ಪರಿಹಾರದ ಆದೇಶವನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ, ಹೆಚ್ಚಿನ ಪರಿಹಾರ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ

2003ರ ಮೇ 11ರಂದು ಕೊರಟಗೆರೆ-ಬೆಂಗಳೂರು ರಸ್ತೆಯ ಶನಿದೇವರ ದೇವಸ್ಥಾನದ ಬಳಿ ಅಜರ್ ಎಂಬವರು ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಅಜರ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು.

ಮೃತರ ಪೋಷಕರು, ಹಾವೇರಿ ಮೂಲದ ಹನುಮಂತಗೌಡ ಪಾಟೀಲ್ ಅವರಿಗೆ ಸೇರಿದ ಟೆಂಪೋ ಟ್ರ್ಯಾಕ್ಸ್ ವಾಹನ ಡಿಕ್ಕಿ ಹೊಡೆದಿದ್ದರಿಂದಲೇ ಅಜರ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ವಿರುದ್ಧ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಆರಂಭದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಅಪಘಾತಕ್ಕೆ ಟೆಂಪೋ ಟ್ರ್ಯಾಕ್ಸ್ ವಾಹನವೇ ಕಾರಣ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಆದೇಶ ಪ್ರಶ್ನಿಸಿ ಮೃತರ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಿತ್ತು. ಬಳಿಕ ಈ ವಿಚಾರ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು, ಪ್ರಕರಣವನ್ನು ಮರುಪರಿಶೀಲನೆಗಾಗಿ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಲಾಗಿತ್ತು.

ನಂತರ ಪ್ರಕರಣದ ಮರು ವಿಚಾರಣೆ ನಡೆಸಿದ ಹುಬ್ಬಳ್ಳಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು ₹5.70 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೇ ವೇಳೆ ಹೆಚ್ಚಿನ ಪರಿಹಾರ ಕೋರಿ ಮೃತರ ಸಂಬಂಧಿಕರೂ ಅರ್ಜಿ ಸಲ್ಲಿಸಿದ್ದರು.

ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಪರಿಹಾರ ಪಡೆಯಲು ವಾಹನವನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಿರುವುದು ಹಾಗೂ ಸುಳ್ಳು ಸಾಕ್ಷ್ಯ ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ₹5.70 ಲಕ್ಷ ಪರಿಹಾರದ ಆದೇಶವನ್ನು ರದ್ದುಗೊಳಿಸಿದೆ.

ಗುಟ್ಕಾ, ಪಾನ್‌ ಮಸಾಲಾ ಮಾರಾಟಕ್ಕೆ ಕರ್ನಾಟಕದಲ್ಲಿ ಬ್ರೇಕ್‌: ಒಂದು ವರ್ಷದ ಅವಧಿಗೆ ಸಂಪೂರ್ಣ ನಿಷೇಧ

0

ಬೆಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇಂತಹ ಉತ್ಪನ್ನಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಹಾಗೂ ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ನಿಷೇಧ ಜಾರಿಗೆ ಬಂದಿದೆ ಎಂದು ತಿಳಿಸಲಾಗಿದೆ.

ಯಾವ ಉತ್ಪನ್ನಗಳಿಗೆ ನಿಷೇಧ ಅನ್ವಯ?

ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಬಳಿಕ ಗ್ರಾಹಕರು ಸುಲಭವಾಗಿ ಎರಡನ್ನೂ ಮಿಶ್ರಣ ಮಾಡಿಕೊಂಡು ಬಳಸುವ ರೀತಿಯಲ್ಲಿ ಮಾರಾಟ ಮಾಡುವ ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.

ಪ್ಯಾಕೆಟ್, ಸ್ಯಾಚೆಟ್ ಅಥವಾ ಯಾವುದೇ ಇತರೆ ಹೆಸರಿನಲ್ಲಿ ತಂಬಾಕು ಹಾಗೂ ನಿಕೋಟಿನ್ ಮಿಶ್ರಿತ ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ರಾಜ್ಯದಲ್ಲಿ ಉತ್ಪಾದಿಸುವುದು, ಸಂಗ್ರಹಿಸುವುದು, ವಿತರಿಸುವುದು, ಸಾಗಣೆ ಮಾಡುವುದು ಅಥವಾ ಮಾರಾಟ ಮಾಡುವುದು ನಿಷೇಧದ ವ್ಯಾಪ್ತಿಗೆ ಬರಲಿದೆ.

ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ನಿಷೇಧಿತ ಉತ್ಪನ್ನಗಳ ಮಾರಾಟ ಸೇರಿದಂತೆ ಈ ನಿಯಮಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಆನ್ ಲೈನ್ ಗೇಮಿಂಗ್ ಚಟಕ್ಕೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗೃಹಿಣಿ: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ

0

ನೆಲಮಂಗಲ: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಗೃಹಿಣಿಯೊಬ್ಬರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು 28 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ. ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ, ಸುಮಾರು 10 ವರ್ಷಗಳ ಹಿಂದೆ ಅರುಣ್ ಎಂಬುವವರನ್ನು ವಿವಾಹವಾಗಿದ್ದರು. ಮೂಲತಃ ಕಲಬುರಗಿ ನಿವಾಸಿಗಳಾಗಿದ್ದ ದಂಪತಿ ಕಳೆದ ಐದು ವರ್ಷಗಳಿಂದ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ರಂಜಿತಾ ಆನ್‌ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಗೇಮಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಅವರು, ಬಳಿಕ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ.

ರಂಜಿತಾ ಮಾಡಿದ್ದ ಸಾಲದಲ್ಲಿ ಸುಮಾರು ₹15 ಲಕ್ಷವನ್ನು ಅವರ ತಾಯಿ ಹಾಗೂ ಪತಿ ಸೇರಿ ಈಗಾಗಲೇ ತೀರಿಸಿದ್ದರು ಎಂದು ತಿಳಿದುಬಂದಿದೆ. ಆದರೂ ಆನ್‌ಲೈನ್ ಗೇಮಿಂಗ್ ಚಟವನ್ನು ಬಿಡದ ರಂಜಿತಾ ಮತ್ತೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಪತಿ ಅರುಣ್ ಕೆಲಸದ ನಿಮಿತ್ತ ಕಲಬುರಗಿಗೆ ತೆರಳಿದ್ದರು. ಈ ವೇಳೆ ರಂಜಿತಾ ತಮ್ಮ ಏಳು ವರ್ಷದ ಮಗನೊಂದಿಗೆ ಮನೆಯಲ್ಲಿ ಇದ್ದರು. ಕಳೆದ ರಾತ್ರಿ ಮನೆಯಲ್ಲಿ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸರ್ಕಾರಿ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕೋಲಾರ: ಗಂಡನನ್ನು ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾದ ಪತ್ನಿ!

0

ಕೋಲಾರ: ಗಂಡನನ್ನು ಕೊಂದು ಪತ್ನಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಕೋಲಾರ ತಾಲ್ಲೂಕು ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ (68) ಕೊಲೆಯಾದ ಪತಿಯಾಗಿದ್ದು, ಜಗದಾಂಭ (58) ಕೊಲೆ ಮಾಡಿದ ಪತ್ನಿಯಾಗಿದ್ದಾರೆ.

ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ನಿದ್ರೆ ಮಾಡಿದ‌ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಜಮೀನು ಮಾರಾಟ ಮಾಡಿದ ಹಣ ಕೊಟ್ಟಿಲ್ಲ ಹಾಗೂ  ಇರುವ ಜಮೀನನ್ನು ಮಾರಾಟ ಮಾಡುತ್ತಾನೆಂದು ಕೊಲೆ ಮಾಡಲಾಗಿದೆಯಂತೆ.

ಇಷ್ಟು ದಿನ ಪತಿ ಮತ್ತು ಪತ್ನಿ  ಪ್ರತ್ಯೇಕವಾಗಿಯೇ ಇದ್ದರು. ಆದರೆ ಹಣಕ್ಕಾಗಿ ಕಳೆದ ಎರಡು ಮೂರು ದಿನದಿಂದ ಪುಸಲಾಯಿಸಿ ತೋಟದ‌ ಮನೆಗೆ ಕೆರತಂದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಅಧಿಕಾರಿಗಳಿಂದ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೆಸರು ಡಿಲೀಟ್ ಆಗಿರುವುದನ್ನು ಪ್ರಶ್ನಿಸಿ ಪ್ರಕಾಶ್ ರಾಜ್ ವಿಡಿಯೋ ಮೂಲಕ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಚುನಾವಣಾ ಆಯೋಗದ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯಾದ್ಯಂತ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ರಮ ಹಾಗೂ ಗೊಂದಲಭರಿತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿರುವ ಮಾಹಿತಿ ಇದೆ.

ಆಗಸ್ಟ್ 11ರಂದು ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ತಾವು ಹುಟ್ಟಿ ಬೆಳೆದ, ಶಿಕ್ಷಣ ಪಡೆದ ಹಾಗೂ ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೇಗೆ ಡಿಲೀಟ್ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಯನ್ನು ‘ಒಂದು ಜೋಕ್’ ಎಂದು ವ್ಯಂಗ್ಯವಾಡಿದ್ದ ಅವರು, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದರು.

ಪ್ರಕಾಶ್ ರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿಗಳು, ಅವರು ಶಾಂತಿನಗರದ ಮತದಾರರಾಗಿದ್ದರು. ಆದರೆ SIR ಪ್ರಕ್ರಿಯೆಯಡಿ ನಡೆದ ಮನೆ-ಮನೆ ಪರಿಶೀಲನೆ ವೇಳೆ ಅವರು ತಮ್ಮ ನೋಂದಾಯಿತ ನಿವಾಸವಾದ ನಂಬರ್ 266, ಗಾರ್ಡನ್ ಅಪಾರ್ಟ್‌ಮೆಂಟ್‌ನಿಂದ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯವಾಗಿ ಬೂತ್ ಮಟ್ಟದ ಅಧಿಕಾರಿ (BLO) ವಿಚಾರಣೆ ನಡೆಸಿದಾಗ, ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಆ ನಿವಾಸದಲ್ಲಿ ವಾಸಿಸುತ್ತಿಲ್ಲ. ಬದಲಾಗಿ ಅಲ್ಲಿ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BLO ನೀಡಿದ ಮಾಹಿತಿಯ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ನಿಗದಿತ ವಿಳಾಸದಲ್ಲಿ ಪ್ರಕಾಶ್ ರಾಜ್ ಅವರು ದೀರ್ಘಕಾಲದಿಂದ ವಾಸಿಸುತ್ತಿಲ್ಲ ಎಂಬ ಕಾರಣಕ್ಕೆ ಅವರ ಹೆಸರನ್ನು ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಪಟ್ಟಿಗೆ (ASDDO) ಸೇರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ತಾವು ಶಾಂತಿನಗರದಲ್ಲೇ ಬೇರೆ ಸ್ಥಳದಲ್ಲಿ ವಾಸಿಸುತ್ತಿರುವುದಾಗಿ ಪ್ರಕಾಶ್ ರಾಜ್ ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಅವರು ಸ್ಥಳೀಯ BLO ಅವರನ್ನು ಸಂಪರ್ಕಿಸಿ ಫಾರ್ಮ್-6 ಸಲ್ಲಿಸಿದರೆ ಶಾಂತಿನಗರದ ಮತದಾರರ ಪಟ್ಟಿಯಲ್ಲಿ ಮತ್ತೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ತಮಗೆ ಮತ ಹಾಕದವರಿಗೆ ಮತದಾನದ ಹಕ್ಕಿನಿಂದಲೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಚುನಾವಣಾಧಿಕಾರಿಗಳ ಸ್ಪಷ್ಟನೆಯೊಂದಿಗೆ ಪ್ರಕಾಶ್ ರಾಜ್ ಅವರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವುದರ ಹಿಂದಿನ ಕಾರಣದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.