Home Blog Page 44

ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ಅಭಿಪ್ರಾಯ ಕೇಳಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

0

ಮಂಗಳೂರು: ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

“ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದರು.

ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂದು ಕೇಳಿದಾಗ, “ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು” ಎಂದು ತಿಳಿಸಿದರು.

ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, “ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ” ಎಂದರು.

ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, “ಸಮಯವೇ ಉತ್ತರ ನೀಡಲಿದೆ” ಎಂದರು.

ಸಿಲಿಕಾನ್ ಸಿಟಿಯಲ್ಲಿ ಚಿರತೆ ಭೀತಿ: ಜೆಪಿ ನಗರ ಅಂಜನಾಪುರದಲ್ಲಿ CCTVಗೆ ಸೆರೆಯಾದ ಚಿರತೆ ಓಡಾಟ

0

ಬೆಂಗಳೂರು: ಚಾಮರಾಜನಗರ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಹುಲಿ–ಚಿರತೆಯ ಹಾವಳಿ ವರದಿಯಾಗುತ್ತಿದ್ದ ನಡುವೆಯೇ, ಇದೀಗ ರಾಜಧಾನಿ ಬೆಂಗಳೂರಿನಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಜೆಪಿ ನಗರದ 9ನೇ ಫೇಸ್ ಸಮೀಪದ ಅಂಜನಾಪುರ ಬಿಡಿಎ ಲೇಔಟ್‌ನಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಟ ನಡೆಸುತ್ತಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ರಾತ್ರಿ–ಹಗಲು ಎನ್ನದೇ ಚಿರತೆ ಸಂಚರಿಸುತ್ತಿರುವ ದೃಶ್ಯಗಳು ಮನೆಗಳ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಕಳೆದ ಒಂದು ವಾರದಲ್ಲಿ ನಾಲ್ಕು–ಐದು ಬಾರಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಹೆಜ್ಜೆ ಇಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಕಾರಿನಲ್ಲಿ ಹೊರಡುವ ವೇಳೆ ಚಿರತೆ ಅಡ್ಡ ಬಂದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ಅಂಜನಾಪುರದ ಸಮೀಪದಲ್ಲೇ ತುರಹಳ್ಳಿ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶಗಳಿದ್ದು, ಅಲ್ಲಿನ ಚಿರತೆಗಳು ನಾಡಿನತ್ತ ನುಗ್ಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರಕ್ಕೆ ಲಗ್ಗೆಯಿಟ್ಟಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂಬ ಆರೋಪವೂ ಕೇಳಿಬಂದಿದೆ.

ಚಿರತೆ ಹಾವಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶೌಚಾಲಕ್ಕೆಂದು ಬಸ್ಸಿನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕಂಟೇನರ್: 6 ಮಂದಿ ಸಾವು

0

ಮಥುರಾ : ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗ ಮತ್ತು ನಿಯಮ ಉಲ್ಲಂಘನೆಯಿಂದ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶನಿವಾರ ಬೆಳಗಿನ ಜಾವ 2:45ರ ಸುಮಾರಿಗೆ ನಡೆದ ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 88 ಬಳಿ ಈ ಅಪಘಾತ ಸಂಭವಿಸಿದ್ದು, ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪ್ರಯಾಣದ ಮಧ್ಯೆ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯಕ್ಕಾಗಿ ನಿಲ್ಲಿಸಲಾಗಿತ್ತು. ಆದರೆ ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ನಿಯಮ ಉಲ್ಲಂಘಿಸಿ ರಸ್ತೆ ಮೇಲೆಯೇ ನಿಲ್ಲಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಹಿಂದಿನಿಂದ ಅತಿವೇಗದಲ್ಲಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು, ಬಸ್ ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಡಿಕ್ಕಿಯ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ. ಮೃತರಲ್ಲಿ ಬಸ್ತಿ ನಿವಾಸಿ ದೇವೇಶ್, ಔರೈಯಾದ ಸೋನು, ಕನ್ನೌಜ್ನ ಅಸ್ಲಾಂ ಮತ್ತು ದೆಹಲಿಯ ಸಂತೋಷ್ ಎಂದು ನಾಲ್ವರನ್ನು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹೈವೇಯಲ್ಲೇ ಬಸ್ ನಿಲ್ಲಿಸಿರುವುದು ಹಾಗೂ ಕಂಟೇನರ್‌ನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಇಂದು ದೇಶಾದ್ಯಂತ  ಓಲಾ, ಊಬರ್, ರ‍್ಯಾಪಿಡೋ ಮುಷ್ಕರ: 6 ಗಂಟೆ ಆ್ಯಪ್ ಆಫ್, ಪ್ರಯಾಣಿಕರಿಗೆ ಭಾರೀ ತೊಂದರೆ

0

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಊಬರ್ ಹಾಗೂ ರ‍್ಯಾಪಿಡೋ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರು ಭಾರೀ ಮುಷ್ಕರಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ ಸೇವೆಗಳಲ್ಲಿ ಗಂಭೀರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಷ್ಕರದ ಭಾಗವಾಗಿ ಚಾಲಕರು ಸುಮಾರು ಆರು ಗಂಟೆಗಳ ಕಾಲ ತಮ್ಮ ಟ್ಯಾಕ್ಸಿ ಆ್ಯಪ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಲಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಮುಖ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬೆಂಬಲವಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈ ಮುಷ್ಕರಕ್ಕೆ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಚಾಲಕರ ಆದಾಯ ಭದ್ರತೆ, ದರ ನಿಯಂತ್ರಣ ಹಾಗೂ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಇಳಿಯಲಾಗಿದೆ.

ಸರ್ಕಾರದಿಂದ ಯಾವುದೇ ವ್ಯವಸ್ಥಿತ ದರ ನಿಗದಿ ಇಲ್ಲದ ಕಾರಣ, ಖಾಸಗಿ ಆ್ಯಪ್ ಕಂಪನಿಗಳು ತಮ್ಮದೇ ಇಚ್ಛೆಯಂತೆ ದರ ನಿಗದಿ ಮಾಡುತ್ತಿವೆ. ಇದರ ಪರಿಣಾಮ ಲಕ್ಷಾಂತರ ಗಿಗ್ ಕಾರ್ಮಿಕರು ತೀವ್ರ ಆದಾಯ ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.

ನಮ್ಮ ಮೆಟ್ರೋ ದರ ಏರಿಕೆ; ಕೇಂದ್ರದ ಮೇಲೆ ಬೊಟ್ಟು ಮಾಡಿದ ರಾಜ್ಯ ಸರ್ಕಾರದ ವಿರುದ್ದ HD ಕುಮಾರಸ್ವಾಮಿ ಆಕ್ರೋಶ

0

ಬೆಂಗಳೂರು:- ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದರ ಶೇ.5 ರಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ HD ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ನಾವ್ ಸತ್ಯ ಹೇಳ್ತಿವಿ ಅಂತ ಹೇಳ್ತಾ ಸುಳ್ಳು ಹೇಳ್ತಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರದ್ದು ಕೇವಲ 20% ಅಂತಾರೆ. ರಾಜ್ಯ ಸರ್ಕಾರ ಹೆಚ್ಚಿನ ಹಣ ಹಾಕುವಾಗ, ಕೇಂದ್ರ ಸರ್ಕಾರದ ಮೇಲೆ ಏಕೆ ದೂಷಿಸುತ್ತಿದ್ದಾರೆ? ದರ ನಿಗದಿ ಮಾಡೋದು ಯಾರು? ಕೇಂದ್ರ ಸರ್ಕಾರದ ಮೇಲೆ ಹಾಕುವ ಚಾಳಿ ಅವರಿಗೆ. ಬೇರೆ ರಾಜ್ಯಗಳಲ್ಲಿ ಯಾಕೆ ದರ ಏರಿಕೆ ಆಗ್ತಿಲ್ಲ? ಇಲ್ಲಿ ನಮ್ಮದು ಹೆಚ್ಚಿನ ಪಾಲು ಅಂದ ಮೇಲೆ ಅಧಿಕಾರ ಯಾರಿಗೆ ಇದೆ? ಅಂತ ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಹಲವಾರು ತಪ್ಪು ನಿರ್ಣಯ, ಜನವಿರೋಧಿ ನೀತಿಗಳನ್ನ ಕೇಂದ್ರದ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಜನರಿಗೆ ಗ್ಯಾರಂಟಿ ಕೊಡ್ತಿದ್ದೇವೆ ಈ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಿದ್ದೇವೆ ಅಂತಾರೆ. ರಾಜ್ಯದಲ್ಲಿ ತಲಾ ಆದಾಯ, ಆರ್ಥಿಕ ಶಕ್ತಿ ನೀಡಿದ್ದೇವೆ ಅಂತ ಪದೇ ಪದೇ ಜಾಹೀರಾತು ಕೊಡ್ತಿದ್ದಾರೆ. ಜನಕ್ಕೆ ತೊಂದರೆ ಇಲ್ಲ, ಆರ್ಥಿಕವಾಗಿ ಚೆನ್ನಾಗಿದ್ದಾರೆ ಅನ್ನೋದು ರಾಜ್ಯ ಸರ್ಕಾರದ ಭಾವನೆ. ಆದ್ದರಿಂದ ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಭ್ರಮೆ ಎಂದು HD ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2.97 ಕೋಟಿ ಮೌಲ್ಯದ ಗಾಂಜಾ ಸೀಜ್!

0

ದೇವನಹಳ್ಳಿ:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 2.97 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಕೆಟ್ ಮತ್ತು ಮಲೇಶಿಯಾ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಏರ್ಪೋಟ್ ಗೆ ಮೂವರು ಆರೋಪಿಗಳು ಬಂದಿದ್ದರು. ಈ ವೇಳೆ ಪರಿಶೀಲನೆ ಮಾಡಿದಾಗ ಮೂವರ ಲಗೇಜ್ ಬ್ಯಾಗ್ ನಲ್ಲಿ 2 ಕೋಟಿ 97 ಲಕ್ಷ ಮೌಲ್ಯದ 8.5 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಕೂಡಲೇ ಮೂವರನ್ನು ವಶಕ್ಕೆ ಪಡೆದು ಆರೋಪಿಗಳ ಮೇಲೆ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮನೆಯ ಜಗುಲಿಯಲ್ಲಿ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ; ದಿಡುಪೆ ಗ್ರಾಮಸ್ಥರಲ್ಲಿ ಆತಂಕ!

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಗ್ರಾಮದ ಕೊಂಡಾಳು ಪ್ರದೇಶದಲ್ಲಿ ಭೀಕರ ಘಟನೆ ಸಂಭವಿಸಿದೆ.

ನಾರಾಯಣ ಗೌಡರ ಮನೆಯ ಹೊರ ಜಗುಲಿಯಲ್ಲಿ ಮಲಗಿದ್ದ ಸಾಕು ನಾಯಿಯನ್ನು ರಾತ್ರಿ ವೇಳೆ ಚಿರತೆ ಕಚ್ಚಿಕೊಂಡು ಹೊತ್ತೊಯ್ದಿದ್ದು, ಮನೆಯೊಳಗಿನ ಬೆಕ್ಕು ಅದೃಷ್ಟವಶಾತ್ ಬದುಕುಳಿದಿದೆ. ಮನೆಯ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಘಟನೆ ಕುರಿತಾಗಿ ದಿಡುಪೆ ಗ್ರಾಮಸ್ಥರಲ್ಲಿ ಭೀತಿ ಮೂಡಿದ್ದು, ರಾತ್ರಿ ವೇಳೆ ಹೊರಗೆ ಹೋಗಲು ಜನರು ಹೆದರುತ್ತಿದ್ದಾರೆ. ಈ ಹಿಂದೆ ಸಹ ದಿಡುಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಚಿರತೆ ಹೊತ್ತೊಯ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯ ಸಂಚರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಪ್ರಾಣಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ

ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್‌ ಮಾಡಿದ್ದ ಗೋಡೌನ್ ಮೇಲೆ ದಾಳಿ; ಮಾಲೀಕ ಪೊಲೀಸರ ವಶಕ್ಕೆ

0

ಬಳ್ಳಾರಿ:- ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಧಿಕಾರಿಗಳು ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿರುವ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ.

ಸರ್ಕಾರದಿಂದ ಬಂದ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿದ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿರುವ ಶಂಕೆಯಿದೆ. ಖಚಿತ ಮಾಹಿತಿಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಎಡ್ವಿನ್ ಎಂಬ ವ್ಯಕ್ತಿಗೆ ಸೇರಿದ ಗೋಡೌನ್‌ನಲ್ಲಿ ಸುಮಾರು 4,000ಕ್ಕೂ ಹೆಚ್ಚು ಚೀಲ ಗೊಬ್ಬರ ಪತ್ತೆಹಚ್ಚಿದ್ದಾರೆ.

ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಯೂರಿಯಾ ಗೊಬ್ಬರ ಸ್ಟಾಕ್ ಮಾಡುವ ಜಾಲ ಸಕ್ರಿಯವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಪ್ರಸಕ್ತ ಸಂದರ್ಭದಲ್ಲಿ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರ ಬೇಡಿಕೆ ಕಡಿಮೆಯಿದ್ದು, ಜೂನ್ ತಿಂಗಳ ಮುಂಗಾರು ವೇಳೆಗೆ ಮಾತ್ರ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ ಈಗಿನಿಂದಲೇ ಗೊಬ್ಬರ ಸಂಗ್ರಹಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಕಳೆದ ವರ್ಷ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಎದುರಾಗಿ ಸರಬರಾಜು ಕೊರತೆಯಾಗಿದೆ. ಈ ಪ್ರಕರಣ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಕೆಆರ್ ಪುರ| ಅನಧಿಕೃತ ನೇಮ್–ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ!

0

ಬೆಂಗಳೂರು:- ಕೆಆರ್ ಪುರದಲ್ಲಿ ಎರಡನೇ ಹಂತದ ನೇಮ್ ಬೋರ್ಡಿಂಗ್ ಮತ್ತು ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ ಜಿಬಿಎ ವಲಯದ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ ಜರುಗಿದೆ.

50ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ರಾತ್ರಿ ವೇಳೆ ಕೆಆರ್ ಪುರ ಜಂಕ್ಷನ್ ನಿಂದ ಮೇಡಹಳ್ಳಿ ವರೆಗೆ ಕಾರ್ಯಾಚರಣೆ ನಡೆಸಿ, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಬ್ಯಾನರ್‌ಗಳು, ನೇಮ್ ಬೋರ್ಡಿಂಗ್‌ಗಳು ತೆರವು ಮಾಡಲಾಗಿದೆ.

ಫ್ಲೆಕ್ಸ್ ಬ್ಯಾನರ್‌ಗಳಿಗೆ ಎಲ್ಇಡಿ ಲೈಟ್ ಅಳಿಸಿದ್ದವರಿಗೆ ದಂಡ ವಿಧಿಸಲಾಗಿದೆ. ರಾಜಕಾರಣಿಗಳ ಬ್ಯಾನರ್‌ಗಳನ್ನೂ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಅನಧಿಕೃತ ನೇಮ್ ಬೋರ್ಡಿಂಗ್‌ಗಳಿಂದ ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಸಾಗಣೆ ಸುಗಮವಾಗಲು ಕ್ರಮ ಕೈಗೊಂಡಿದ್ದಾರೆ.

ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್ ಗಳ ಮೇಲೆ ಎಸಿ ದಾಳಿ; 2400 ಮೂಟೆಗಳು ಜಪ್ತಿ

0

ಬಳ್ಳಾರಿ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಜೋಳ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ರೂಪನಗುಡಿ ಗ್ರಾಮದಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್‌ಗಳ ಮೇಲೆ ಬಳ್ಳಾರಿ ಸಹಾಯಕ ಆಯುಕ್ತ (ಎಸಿ) ರಾಜೇಶ್ ಹೆಚ್.ಡಿ ನೇತೃತ್ವದಲ್ಲಿ ದಾಳಿ ನಡೆಸಿದರು. ಈ ದಾಳಿಯಲ್ಲಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿತು. ದಾಳಿ ವೇಳೆ ರೈತರಿಂದ ಪಹಣಿ ಪಡೆದಿದ್ದ 2400 ಜೋಳದ ಮೂಟೆಗಳು ಪತ್ತೆಯಾಗಿದ್ದು, ಅಧಿಕಾರಿಗಳಿಂದ ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಈ ಜಾಲವು ರೈತರಿಂದ ಕಡಿಮೆ ಬೆಲೆಯಲ್ಲಿ ಜೋಳ ಖರೀದಿಸಿ, ನಂತರ ಸೇವಾ ಸಹಕಾರ ಸಂಘದ ಮೂಲಕ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಂತೆ ಕಂಡು ಬಂದಿದೆ. ಈ ಅಕ್ರಮ ಖರೀದಿ–ಮಾರಾಟದಲ್ಲಿ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಕುರಿತು ಸಹ ಅನುಮಾನ ವ್ಯಕ್ತವಾಗಿದೆ.

ಈ ಸಂಬಂಧ ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಧಿಕಾರಿಗಳು ಆರೋಪಿಗಳನ್ನ ಪತ್ತೆಹಚ್ಚಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

error: Content is protected !!