Home Blog Page 45

ಉತ್ಪಾದನೋತ್ತರ ಕೃಷಿಯಲ್ಲಿ ತೊಡಗಿ ರೈತರು ಉದ್ಯಮಿಗಳಾಗಬಹುದು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕ

ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ. ರೈತರು ಉದ್ಯಮಿಗಳಾಗಬೇಕು .

ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ , ಉಪಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕಿದೆ. ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯ. ಇಂದಿನ ಪ್ರಶಸ್ತಿಗೆ ಭಾಜನರಾದ ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದರು.

ರೈತರ ಸಮಸ್ಯೆಗೆ ಓಗೊಟ್ಟ ಸ್ಪಂದನಾಶೀಲ ಸರ್ಕಾರ

ರೈತರಿಗೆ ಉತ್ತಮವಾದ ಬಿತ್ತನೆ ಬೀಜ, ಗೊಬ್ಬರ, ಔಷದಿ, ಸರ್ಕಾರ ಒದಗಿಸುತ್ತಿದ್ದು, ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ಸಹಾಯಧನವನ್ನು ನೀಡಲಾಗುತ್ತಿದೆ. ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ, ದೇಶದಲ್ಲಿ ನಂ.1 ರಾಜ್ಯವಾಗಿದ್ದು, ಈವರೆಗೆ 6000 ಕೋಟಿ ರೂ.ಗಳ ವಿಮೆಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ. ಕಬ್ಬು, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸುವುದಕ್ಕೆ ರೈತರು ಸೀಮಿತವಾಗುತ್ತಿದ್ದಾರೆ. ಆದರೆ ಬೆಳೆ ತೆಗೆದ ನಂತರ ಚಟುವಟಿಕೆಗಳಲ್ಲಿ ರೈತರು ಕೈಗೊಳ್ಳಬೇಕು.

ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಸಂಧಾನ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗಧಿ ಪಡಿಸಲಾಯಿತು. ಅಂತೆಯೇ ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂದಕ್ಕೆ 2400 ರೂ. ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದರು.

ಯುವಜನರು ಕೃಷಿಯಲ್ಲಿ ತೊಡಗಿಕೊಳ್ಳಬೇಕು

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಶೇ.80 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು. ಈಗ ಈ ಪ್ರತಿಶತ ಶೇ. 62 ಕ್ಕೆ ಇಳಿದಿದೆ. ಕೃಷಿಯಲ್ಲಿ ಉತ್ಪಾದನೋತ್ತರ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದರು.

ಕೃಷಿಭಾಗ್ಯ ಯೋಜನೆ ಮರುಸ್ಥಾಪನೆ

ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಬಹಳಷ್ಟು ಈಡೇರಿಸಲಾಗಿದ್ದು, ಅವುಗಳಲ್ಲಿ ಜಾರಿಯಾಗಿರುವ ಕೃಷಿ ಭಾಗ್ಯ ಯೋಜನೆ ಪ್ರಮುಖವಾಗಿದೆ. ಬಿಜೆಪಿ ತನ್ ಅಧಿಕಾರಾವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರ್ಕಾರ ಮತ್ತೊಮ್ಮೆ ಕೃಷಿ ಭಾಗ್ಯ ಯೋಜನೆಯನ್ನು ಮರುಸ್ಥಾಪಿಸಿದೆ.

ಸುಮಾರು 200 ಕೋಟಿ ಅನುದಾನವನ್ನು ಇದಕ್ಕಾಗಿ ನೀಡಲಾಗಿದೆ. ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಮಾಡಿದ ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಅತ್ಯಂತ ಪ್ರಮುಖವೆನಿಸಿವೆ. ಅಲ್ಲದೇ ಅನ್ನಭಾಗ್ಯ ಯೋಜನೆಗಳಿಂದ ಬಡವರು ಉಳಿತಾಯದಲ್ಲಿ ಹೂಡಿಕೆ ಮಾಡಬಹುದಾಗಿದೆ. ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವ ಉದ್ದೇಶದಿಂದ ಈ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ನೂರು ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿಕೆ ಶಿವಕುಮಾರ್

0

ಮಂಗಳೂರು: ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿಯವರು ದಿನಾಂಕ ಕೊಡಲಿ, ಬಿಡಲಿ ನಾನಂತೂ ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

“ಇಂದು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತಿದ್ದೇನೆ” ಎಂದು ತಿಳಿಸಿದರು.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆ” ಎಂದರು.

ಮುಂದಿನ ಐದು ವರ್ಷಗಳಿಗೆ ನಾನೇ ಸಿಎಂ ಎಂದು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಯಾವುದೇ ಊಹಾಪೋಹ ಇಲ್ಲ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಕೇಳಿದಾಗ, “ಅವರೇ ನಮ್ಮ ಹೈ ಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ” ಎಂದು ತಿಳಿಸಿದರು.

ಶಾಸಕ ಬಸವರಾಜು ಅವರು ಅಧಿಕಾರ ಒಪ್ಪಂದದ ಬಗ್ಗೆ ಸ್ಪಷ್ಟನೆ ಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಬಸವರಾಜು, ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನೇ ಪ್ರತಿಕ್ರಿಯೆ ನೀಡುವುದಿದ್ದರೂ ದೆಹಲಿಯವರು ಪ್ರತಿಕ್ರಿಯೆ ನೀಡಬೇಕು” ಎಂದು ತಿಳಿಸಿದರು.

ಲಕ್ಕುಂಡಿ ಪುನರುತ್ಥಾನಕ್ಕೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ: ₹10 ಕೋಟಿ ವೆಚ್ಚದ ಪಂಚ ದೇವಾಲಯ–ಪಂಚ ಬಾವಿ ಜೀರ್ಣೋದ್ಧಾರಕ್ಕೆ ಚಾಲನೆ

0

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಯೋಜನೆಗೆ ಇಂದು ಅಧಿಕೃತ ಚಾಲನೆ ನೀಡಿದೆ. ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಲಕ್ಕುಂಡಿಯ ಪಂಚ ದೇವಾಲಯ ಹಾಗೂ ಪಂಚ ಬಾವಿಗಳ ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಈ ಯೋಜನೆಯಡಿ ಛಬ್ಬೆರ ಬಾವಿ, ಸಿದ್ದರ ಬಾವಿ, ವಿದ್ಯಾಶಂಕರ ಲಿಂಗ ದೇವಸ್ಥಾನ, ಸೋಮನಕಟ್ಟಿ ಈಶ್ವರ ದೇವಾಲಯ, ಕಪ್ಪಚರ ಮಠ ಮತ್ತು ಫಕ್ಕೀರಸ್ವಾಮಿ ಮಠದ ಬಾವಿಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ಜೀರ್ಣೋದ್ಧಾರ ಕಾರ್ಯ ಲಕ್ಕುಂಡಿಯ ಪುರಾತನ ವೈಭವವನ್ನು ಮರಳಿ ತರುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಇದೇ ವೇಳೆ ಇತ್ತೀಚೆಗೆ ಲಕ್ಕುಂಡಿಯಲ್ಲಿ ನಡೆದ ಉತ್ಖನನದ ವೇಳೆ ಪತ್ತೆಯಾಗಿರುವ ಅಪರೂಪದ ಪುರಾತನ ವಸ್ತುಗಳನ್ನು ಸಚಿವರು ಹಾಗೂ ಗಣ್ಯರು ವೀಕ್ಷಿಸಿದರು. ಉತ್ಖನನದಲ್ಲಿ ಸುಮಾರು 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಇದರಲ್ಲಿ ಪ್ರಾಚೀನ ಕಾಲದ ಬಿಲ್ಲೆಗಳು, ಪ್ರಾಣಿಗಳ ಮೂಳೆಗಳು, ಕವಡೆಗಳು, ಮಡಿಕೆ ಚೂರುಗಳು, ಗಂಟೆಗಳು, ಲಿಂಗಗಳು, ಮುಕುಟ ಮಣಿಗಳು, ಧೂಪದ ಆಕೃತಿಯ ವಸ್ತುಗಳು ಹಾಗೂ ಅನೇಕ ಲೋಹದ ಅವಶೇಷಗಳು ಸೇರಿವೆ. ಈ ಪತ್ತೆಗಳು ಲಕ್ಕುಂಡಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿವೆ.

ಕಾರ್ಯಕ್ರಮದ ವಿಶೇಷತೆ ಎಂದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವೈಷಮ್ಯ ಮರೆತು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸಾಥ್ ನೀಡಿದರು. ಕೋಟೆ ವೀರಭದ್ರೇಶ್ವರ ದೇವಾಲಯದ ಅಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಕುಂಡಿಯನ್ನು ‘ವಿಶ್ವ ಪರಂಪರೆ ತಾಣ’ಗಳ ಪಟ್ಟಿಗೆ ಸೇರಿಸುವ ಕುರಿತು ಚರ್ಚೆ ನಡೆಯಿತು.

ಈ ವೇಳೆ ಗ್ರಾಮಸ್ಥರು ‘ನವ ಲಕ್ಕುಂಡಿ’ ನಿರ್ಮಾಣಕ್ಕೆ ಸಂಬಂಧಿಸಿದ ಮಹತ್ವದ ಮನವಿಯನ್ನು ಸಲ್ಲಿಸಿದರು. ಲಕ್ಕುಂಡಿಯಲ್ಲಿ ಅಡಗಿರುವ 101 ದೇವಸ್ಥಾನ ಹಾಗೂ 101 ಬಾವಿಗಳ ಸಂಪೂರ್ಣ ಗತವೈಭವ ಹೊರಬರಬೇಕಾದರೆ ಈಗಿರುವ ಗ್ರಾಮವನ್ನು ಸ್ಥಳಾಂತರಿಸುವುದು ಅನಿವಾರ್ಯ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಗ್ರಾಮಸ್ಥರಿಗೆ ಪರ್ಯಾಯವಾಗಿ ಹೊಸ ‘ನವ ಲಕ್ಕುಂಡಿ’ ಗ್ರಾಮವನ್ನು ನಿರ್ಮಿಸಿಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 

ಉಪೇಂದ್ರ ದಂಪತಿಯನ್ನು ಬಲೆಗೆ ಬೀಳಿಸಿದ ಸೈಬರ್ ಗ್ಯಾಂಗ್: ಬಿಹಾರ ಯುವಕ ಬಂಧನ

ಬೆಂಗಳೂರು: ತೆರೆಯ ಮೇಲೆ ಎಂತಹ ಸಂಕೀರ್ಣ ಸಮಸ್ಯೆಗಳನ್ನಾದರೂ ಬುದ್ಧಿವಂತಿಕೆಯಿಂದ ಬಿಡಿಸುವ ರಿಯಲ್ ಸ್ಟಾರ್ ಉಪೇಂದ್ರ, ನಿಜ ಜೀವನದಲ್ಲಿ ಸೈಬರ್ ವಂಚಕರ ಬಲೆಗೆ ಬಿದ್ದ ಘಟನೆ ಈಗ ಮತ್ತೆ ಚರ್ಚೆಗೆ ಬಂದಿದೆ. ಕಳೆದ ವರ್ಷ ನಟಿ ಪ್ರಿಯಾಂಕಾ ಉಪೇಂದ್ರ ಅವರ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಸುಮಾರು 1.5 ಲಕ್ಷ ರೂಪಾಯಿಗಳನ್ನು ದೋಚಿದ್ದ ಪ್ರಕರಣದಲ್ಲಿ ಪೊಲೀಸರು ಬಿಹಾರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣದ ಬೇರು ಸೆಪ್ಟೆಂಬರ್ 15ಕ್ಕೆ ಹೋಗುತ್ತದೆ. ಆ ದಿನ ಪ್ರಿಯಾಂಕಾ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಬುಕ್ ಮಾಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಅವರ ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ಕ್ಷಣದಲ್ಲೇ ಹ್ಯಾಕರ್‌ಗಳು ವಾಟ್ಸಾಪ್ ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪ್ರಿಯಾಂಕಾ ಹೆಸರಿನಲ್ಲಿ ಅವರ ಸಂಪರ್ಕದಲ್ಲಿದ್ದವರಿಗೆ ತುರ್ತು ಹಣ ಕೇಳುವ ಸಂದೇಶಗಳನ್ನು ರವಾನಿಸಲಾಗಿದೆ.

ಈ ಸಂದೇಶಗಳನ್ನು ನಂಬಿದ ಉಪೇಂದ್ರ ಅವರ ಮಗ, ತಾಯಿಯೇ ಹಣ ಕೇಳುತ್ತಿದ್ದಾರೆಂದು ಭಾವಿಸಿ 50 ಸಾವಿರ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಅಲ್ಲದೆ, ಉಪೇಂದ್ರ ಮತ್ತು ಅವರ ಮ್ಯಾನೇಜರ್‌ಗಳಿಗೂ ಕರೆ ಮಾಡುವ ಪ್ರಯತ್ನ ನಡೆದಿದ್ದು, ಅವರ ಫೋನ್‌ಗಳಿಗೂ ಹ್ಯಾಕ್ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಈ ರೀತಿ ಹಂತ ಹಂತವಾಗಿ ಒಟ್ಟು 1.5 ಲಕ್ಷ ರೂಪಾಯಿಗಳನ್ನು ಸೈಬರ್ ಖದೀಮರು ದೋಚಿದ್ದಾರೆ.

ಹಣ ಕಳೆದುಕೊಂಡ ಬಳಿಕ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಬಿಹಾರದ ದಶರಥಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ವಂಚಕರ ಜಾಲದ ಸುಳಿವು ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಬಂಧಿಸಲಾಗಿದ್ದು, ಆ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಯುವಕರು ಇದೇ ರೀತಿಯ ಆನ್‌ಲೈನ್ ವಂಚನೆಗಳಲ್ಲಿ ತೊಡಗಿಸಿಕೊಂಡಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸದ್ಯ ಸೆಂಟ್ರಲ್ ಡಿವಿಷನ್ ಸೈಬರ್ ಕ್ರೈಂ ಪೊಲೀಸರು ಪ್ರಕರಣದ ಆಳವಾದ ತನಿಖೆ ನಡೆಸುತ್ತಿದ್ದು, ಈ ಘಟನೆ ಸಾಮಾನ್ಯ ಜನರಿಗೆ ದೊಡ್ಡ ಎಚ್ಚರಿಕೆಯ ಘಂಟೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ದಂಪತಿಯೇ ವಂಚನೆಗೆ ಒಳಗಾಗಿರುವುದು, ಅಪರಿಚಿತ ಲಿಂಕ್‌ಗಳು ಮತ್ತು ತುರ್ತು ಹಣ ಕೇಳುವ ಮೆಸೇಜ್‌ಗಳ ಬಗ್ಗೆ ಎಷ್ಟು ಎಚ್ಚರಿಕೆ ಅಗತ್ಯವೋ ಎಂಬುದನ್ನು ಮತ್ತೆ ನೆನಪಿಸಿದೆ.

ಪ್ಯಾನ್-ಇಂಡಿಯಾ ಶೇಕ್‌ಡೌನ್: ಯಶ್ ‘ಟಾಕ್ಸಿಕ್’ಗೆ ಆಂಧ್ರ-ತೆಲಂಗಾಣದಲ್ಲಿ ₹120 ಕೋಟಿ ವಿತರಣೆ ಹಕ್ಕು ಮಾರಾಟ

ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಿಗೂ ಮುನ್ನವೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ಯಾನ್-ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆಯುತ್ತಿರುವ ‘ಟಾಕ್ಸಿಕ್’, ವಿತರಣೆ ಹಕ್ಕುಗಳ ಮಾರಾಟದಲ್ಲೇ ಇತಿಹಾಸ ನಿರ್ಮಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣಾ ಹಕ್ಕುಗಳನ್ನು ತೆಲುಗು ಚಿತ್ರರಂಗದ ಪ್ರಭಾವಿ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಸಂಸ್ಥೆ ಖರೀದಿ ಮಾಡಿದ್ದು, ಈ ಡೀಲ್‌ಗೆ ಬರೋಬ್ಬರಿ ₹120 ಕೋಟಿ ಮುಂಗಡ ಮೊತ್ತ ನೀಡಲಾಗಿದೆ. ಕಮಿಷನ್ ಆಧಾರದಲ್ಲಿ ನಡೆದ ಈ ಒಪ್ಪಂದ, ತೆಲುಗು ಹೊರಗಿನ ಸಿನಿಮಾವೊಂದು ಈ ರಾಜ್ಯಗಳಲ್ಲಿ ಪಡೆದ ಅತಿ ದೊಡ್ಡ ವಿತರಣೆ ಒಪ್ಪಂದವಾಗಿದೆ.

‘ಕೆಜಿಎಫ್ 2’ ಬಳಿಕ ಯಶ್ ಅವರ ಕ್ರೇಜ್ ದೇಶ-ವಿದೇಶಗಳಲ್ಲಿ ಭಾರೀ ಮಟ್ಟಿಗೆ ಹೆಚ್ಚಿರುವುದೇ ಈ ದಾಖಲೆ ಮಟ್ಟದ ಡೀಲ್‌ಗೆ ಪ್ರಮುಖ ಕಾರಣವಾಗಿದೆ. ನಾಲ್ಕು ವರ್ಷಗಳ ಬಳಿಕ ಯಶ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ನಿರೀಕ್ಷೆಗಳು ಗಗನಕ್ಕೇರಿವೆ. ಈ ಕಾರಣದಿಂದಲೇ ‘ಟಾಕ್ಸಿಕ್’ ವಿತರಣೆ ಹಕ್ಕಿಗಾಗಿ ತೆಲುಗಿನ ಹಲವು ದೊಡ್ಡ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆದಿದೆ.

ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಯಶ್ ಅವರೊಂದಿಗೆ ಜಂಟಿಯಾಗಿ ರೂಪಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡದೊಂದಿಗೆ ಸಿನಿಮಾ ನಿರ್ಮಾಣವಾಗಿದ್ದು, ಛಾಯಾಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಕೈಜೋಡಿಸಿದ್ದಾರೆ. ಸಂಗೀತ ನಿರ್ದೇಶನ ರವಿ ಬಸ್ರೂರು ಅವರದ್ದಾಗಿದ್ದು, ಸಂಕಲನ ಉಜ್ವಲ್ ಕುಲಕರ್ಣಿ ನಿರ್ವಹಿಸಿದ್ದಾರೆ.

ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಜೊತೆ ಅನ್ಬರಿವ್ ಹಾಗೂ ಕೆಚಾ ಖಂಪಾಕ್ಡಿ ಸಿನಿಮಾದ ಆಕ್ಷನ್ ದೃಶ್ಯಗಳಿಗೆ ವಿಶೇಷ ಮೆರುಗು ನೀಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ನಾಯಕಿಯರಾಗಿ ನಟಿಸಿದ್ದು, ಹಲವು ವಿದೇಶಿ ಕಲಾವಿದರು ಕೂಡ ಚಿತ್ರದಲ್ಲಿ ಭಾಗವಹಿಸಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಲಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಿರುವುದು ಭಾರತೀಯ ಸಿನಿಮಾರಂಗಕ್ಕೆ ಹೊಸ ಪ್ರಯೋಗವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಬಹುನಿರೀಕ್ಷಿತ ಸಿನಿಮಾ ಮಾರ್ಚ್ 19ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಮಂಡ್ಯದಲ್ಲಿ ಎನ್‌ಡಿಎ ಒಳಗದ್ದಲ: ನಿಖಿಲ್ ವಿರುದ್ಧ ಹೇಳಿಕೆ, ನಾರಾಯಣ್ ಗೌಡ ನಡೆಗೆ ಜೆಡಿಎಸ್ ತೀವ್ರ ಆಕ್ಷೇಪ

ಮಂಡ್ಯ: ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲವೇ? ಎಂಬ ಪ್ರಶ್ನೆ ಮತ್ತೆ ತಲೆ ಎತ್ತಿದೆ. ಮಾಜಿ ಸಚಿವ ಕೆ.ಸಿ.ನಾರಾಯಣ್ ಗೌಡ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಮೈತ್ರಿ ಧರ್ಮ ಪಾಲಿಸದೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, “ನಾರಾಯಣ್ ಗೌಡ್ರು, ನಾವು ಎಲ್ಲರೂ ಬಿಜೆಪಿ–ಜೆಡಿಎಸ್ ಸೇರಿ ಒಂದೇ ಎನ್‌ಡಿಎ. ಸಣ್ಣಪುಟ್ಟ ನೋವು ಇದ್ದರೆ ಪಕ್ಷದ ಒಳಗೆ ಚರ್ಚಿಸಬೇಕು. ನಾಯಕರು ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ನಮಗೆ ತುಂಬಾ ನೋವಾಗಿದೆ” ಎಂದು ಕಿಡಿಕಾರಿದರು.

“ಮಂಡ್ಯ ಜಿಲ್ಲೆಯಲ್ಲಿ ಯಾಕೆ ಇಂತಹ ಗೊಂದಲ ಸೃಷ್ಟಿಯಾಗುತ್ತಿದೆ? ನಮಗೆ ಅನುಮಾನ ಕಾಡುತ್ತಿದೆ. ಸ್ಥಳೀಯ ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸುವ ಮಾತುಗಳು ಎಷ್ಟು ಸರಿ? ಅಭ್ಯರ್ಥಿ ಘೋಷಣೆ ನಮ್ಮ ನಾಯಕರ ತೀರ್ಮಾನ. ಈ ವಿಷಯದಲ್ಲಿ ರಾಷ್ಟ್ರೀಯ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಕುರಿತು ಮಾತನಾಡಿದ ಡಿ.ರಮೇಶ್, “ಅವರು ನಮ್ಮ ಪಕ್ಷದ ನಾಯಕ. ರಾಜ್ಯ ಯುವ ಘಟಕದ ಅಧ್ಯಕ್ಷ. ಪಕ್ಷ ಸಂಘಟನೆ ವೇಳೆ ಹೇಳಿಕೆ ಕೊಡುವುದು ಸಹಜ. ನಿಮ್ಮ ನಾಯಕರು ಕೂಡ ಅಂಥ ಹೇಳಿಕೆ ಕೊಡ್ತಾರೆ. ದೇವೇಗೌಡ್ರು ಮತ್ತು ಕುಮಾರಸ್ವಾಮಿಗೆ ಇರುವ ಗೌರವವೇ ನಿಖಿಲ್‌ಗೂ ಇದೆ” ಎಂದು ಸ್ಪಷ್ಟಪಡಿಸಿದರು.

“ನಾರಾಯಣ್ ಗೌಡ್ರು ನಿರಂತರವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ದೂರು ನೀಡುವುದು ಅನಿವಾರ್ಯ. ಇನ್ನೊಂದು ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಮೈತ್ರಿ ಧರ್ಮ ಪಾಲಿಸಬೇಕು. ಬಿಜೆಪಿ ನೋವಾದ್ರೆ ಜೆಡಿಎಸ್‌ಗೆ ನೋವಾಗುತ್ತದೆ, ಜೆಡಿಎಸ್ ನೋವಾದ್ರೆ ಬಿಜೆಪಿ ಕಾರ್ಯಕರ್ತರಿಗೂ ನೋವಾಗುತ್ತದೆ” ಎಂದು ಎಚ್ಚರಿಸಿದರು.

ಶಿವಮೊಗ್ಗ ಪಾಲಿಕೆ ಚುನಾವಣೆ: ಹೈಕೋರ್ಟ್ ಮೆಟ್ಟಿಲೇರಿದ ಈಶ್ವರಪ್ಪ ಮಗ!

0

ಬೆಂಗಳೂರು: ಅವಧಿ ಮುಗಿದು ಎರಡೂವರೆ ವರ್ಷ ಕಳೆದಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಹಾಗೂ ಹೊಳಲ್ಕೆರೆ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ನೋಟಿಸ್ ನೀಡಲಾಗಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಗೆ 2018ರ ಆಗಸ್ಟ್ 31ರಂದು ಚುನಾವಣೆ ನಡೆದಿದ್ದು, ಐದು ವರ್ಷದ ಅವಧಿ 2023ರ ಆಗಸ್ಟ್ 30ರಂದು ಮುಗಿದಿದೆ. ಬಳಿಕ 2023ರ ನವೆಂಬರ್ 27ರಂದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಪಾಲಿಕೆ ಆಡಳಿತಾಧಿಕಾರಿಯ ಆಡಳಿತದಲ್ಲಿದೆ. ಕಾಯ್ದೆ ಪ್ರಕಾರ ಅವಧಿ ಮುಗಿದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಾಗಿದ್ದರೂ ಇದುವರೆಗೆ ಚುನಾವಣೆ ನಡೆಯದಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ನಗರದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದು ಅರ್ಜಿದಾರರು ದೂರಿದ್ದಾರೆ. ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬೀದಿ ದೀಪಗಳಂತಹ ಮೂಲಭೂತ ನಾಗರಿಕ ಸೇವೆಗಳ ಮೇಲ್ವಿಚಾರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಜೊತೆಗೆ ಪಾಲಿಕೆಯ ನಿಧಿಗಳ ಬಳಕೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲೂ ಪಾರದರ್ಶಕತೆ ಇಲ್ಲದಿರುವುದರಿಂದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ.

ಅಲ್ಲದೆ, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯಿದೆ ಸೆಕ್ಷನ್ 7 ಮತ್ತು 9ರ ಪ್ರಕಾರ ಸ್ಥಳೀಯ ಸಂಸ್ಥೆಯ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕಾಗಿದೆ. ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಕಾನೂನು ಹಾಗೂ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ದೀರ್ಘಕಾಲ ಚುನಾವಣೆ ನಡೆಸದಿರುವುದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಚುನಾವಣೆಯನ್ನು ತಕ್ಷಣ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಓರ್ವ ಸಾವು, 3ಕ್ಕೂ ಹೆಚ್ಚು ಮಂದಿಗೆ ಗಾಯ

0

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಹೊಸಕೋಟೆ–ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ.ಮಾರುತಿ ಒಮ್ನಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಈ ಅಪಘಾತ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಮಾರುತಿ ಒಮ್ನಿ ಕಾರು ಸಂಪೂರ್ಣ ನುಜುಗುಜ್ಜಾಗಿದೆ.

ಮಾರುತಿ ಒಮ್ನಿ ಕಾರಿನ ಚಾಲಕ ಒವರ್ಟೇಕ್ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆ ಮೇಲೆ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಗುದ್ದಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.

ಘಟನೆ ಹೊಸಕೋಟೆ ತಾಲ್ಲೂಕಿನ ಫ್ಯಾಕ್ಟರಿ ಗೇಟ್ ಸಮೀಪ ಸಂಭವಿಸಿದ್ದು, ಮಾಹಿತಿ ಪಡೆದ ತಕ್ಷಣ ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರಿಗೂ ಶಾಕ್! ಇನ್‌ಸ್ಟಾಗ್ರಾಂ ಖಾತೆ ಡಿಲೀಟ್

0

ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣವು ದಿನದಿಂದ ದಿನಕ್ಕೆ ಗೊಂದಲದ ತಿರುವು ತರುತ್ತಿದೆ. ಪೊಲೀಸ್ ತನಿಖೆಯ ವೇಳೆ ಸುಚಿತ್ರಾ ಮೊಬೈಲ್ ಪರಿಶೀಲನೆಯು, ಕಲಬುರಗಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದ ಹಲವು ಯುವಕರೊಂದಿಗೆ ಅವಳು ನಿತ್ಯ ಸಂಪರ್ಕದಲ್ಲಿದ್ದ ದೃಶ್ಯಗಳನ್ನು ಬಹಿರಂಗಪಡಿಸಿದೆ.

ಈ ಬೆಳವಣಿಗೆಯ ಪರಿಣಾಮವಾಗಿ, ಕೆಲ ಯುವಕರು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿ, ಇನ್ನೂ ಕೆಲವರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ತನಿಖೆ ವೇಳೆ ಹೆಸರು ಹೊರಬೀಳುವ ಭಯದಿಂದ ಆತಂಕಕ್ಕೊಳಗಾಗಿದ್ದಾರೆ.

ಸುಚಿತ್ರಾ ಪತಿಯು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಸುಚಿತ್ರಾ ತನ್ನ ಮೇಲೆ ಹಲ್ಲೆ ನಡೆಸಲು ಯುವಕರ ಸಹಾಯ ಕೇಳಿದ್ದಾಳೆ” ಎಂದು ಆರೋಪಿಸಿದ್ದಾರೆ. ಪ್ರಕರಣವು ಇತ್ತೀಚೆಗೆ ಹೆಚ್ಚುವರಿ ಅನಿಶ್ಚಿತತೆಯನ್ನು ಪಡೆದಿದೆ, ಹಾಗೂ ಪೊಲೀಸರು ಸಿದ್ಧಾಪುರ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದ್ದಾರೆ.

ಇದರ ನಡುವೆ, ಸಿದ್ದಾಪುರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ: ಎಎಸ್‌ಐ ಗಣಪತಿ ಭಟ್ ಮತ್ತು ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್. ಡಿವೈಎಸ್‌ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಯಾವುದೇ ಲೋಪ ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ದೀಪನ್ ತಿಳಿಸಿದ್ದಾರೆ.

ಪ್ರಕರಣವು ಹೀಗಾಗಿಯೇ ಸಾಮಾಜಿಕ ಮಾಧ್ಯಮ ಮತ್ತು ಯುವಕರಲ್ಲಿ ಭಾರಿ ಚರ್ಚೆ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಗಳು ಎದುರಾಗುವ ಸಾಧ್ಯತೆ ಇದೆ.

₹1.50 ಕೋಟಿ ಐಟಿ ದಂಡ ಪ್ರಶ್ನಿಸಿದ ವಿಜಯ್‌ಗೆ ಹಿನ್ನಡೆ: ಮದ್ರಾಸ್ ಹೈಕೋರ್ಟ್‌ನಿಂದ ರಿಟ್ ಅರ್ಜಿ ವಜಾ

ನಟ-ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ವಿರುದ್ಧದ ಆದಾಯ ತೆರಿಗೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ₹1.50 ಕೋಟಿ ದಂಡ ವಸೂಲಿಗೆ ಆದಾಯ ತೆರಿಗೆ ಇಲಾಖೆಗೆ ಮಾರ್ಗ ಸುಗಮಗೊಳಿಸಿದೆ.

2015ರ ಸೆಪ್ಟೆಂಬರ್‌ನಲ್ಲಿ ವಿಜಯ್ ನಿವಾಸದಲ್ಲಿ ನಡೆದ ಆದಾಯ ತೆರಿಗೆ ಶೋಧನೆಯ ವೇಳೆ ಪತ್ತೆಯಾದ ₹15 ಕೋಟಿ ಹೆಚ್ಚುವರಿ ಆದಾಯಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 2017ರಲ್ಲಿ ಮೌಲ್ಯಮಾಪನ ಆದೇಶ ಜಾರಿಯಾಗಿತ್ತು. ಬಳಿಕ ಡಿಸೆಂಬರ್ 2018ರಲ್ಲಿ ಸೆಕ್ಷನ್ 271AAB(1) ಅಡಿಯಲ್ಲಿ ದಂಡ ಪ್ರಕ್ರಿಯೆ ಆರಂಭಗೊಂಡಿತು.

ಈ ಮೌಲ್ಯಮಾಪನ ಆದೇಶವನ್ನು ವಿಜಯ್ ಅವರು ಆದಾಯ ತೆರಿಗೆ ಆಯುಕ್ತರ (ಅಪೀಲು) ಮುಂದೆ ಪ್ರಶ್ನಿಸಿದ್ದು, ಅಲ್ಲಿ ಭಾಗಶಃ ತಮ್ಮ ಪರ ತೀರ್ಪು ಲಭಿಸಿತ್ತು. ಆದರೆ, ಇಲಾಖೆ ಈ ತೀರ್ಪನ್ನು ಐಟಿಎಟಿಗೆ ಪ್ರಶ್ನಿಸಿತ್ತು. ಫ್ಯಾನ್ ಅಸೋಸಿಯೇಷನ್‌ಗೆ ಸಂಬಂಧಿಸಿದ ವೆಚ್ಚಗಳ ವಿಷಯ ಸೇರಿದಂತೆ ಕೆಲವು ಅಂಶಗಳಲ್ಲಿ ಐಟಿಎಟಿ ಇಲಾಖೆಯ ನಿಲುವನ್ನು ಭಾಗಶಃ ಸಮರ್ಥಿಸಿತು.

ಇದರ ನಡುವೆ, ದಂಡ ಪ್ರಕ್ರಿಯೆ ಸರಿಯಾಗಿ ಆರಂಭವಾಗಿಲ್ಲ ಎಂಬ ಕಾರಣ ಉಲ್ಲೇಖಿಸಿ, ಇಲಾಖೆ 2019ರಲ್ಲಿ ಸೆಕ್ಷನ್ 263 ಅಡಿಯಲ್ಲಿ ಮೌಲ್ಯಮಾಪನ ಪರಿಷ್ಕರಣೆಗಾಗಿ ನೋಟಿಸ್ ನೀಡಿತ್ತು. ಆದರೆ, ಮೇ 2022ರಲ್ಲಿ ಐಟಿಎಟಿ ಈ ಪರಿಷ್ಕರಣೆ ಆದೇಶವನ್ನು ರದ್ದುಪಡಿಸಿ, ದಂಡ ಪ್ರಕ್ರಿಯೆ ಈಗಾಗಲೇ ಮುಂದುವರಿದಿರುವುದರಿಂದ ಮತ್ತಷ್ಟು ಕ್ರಮ ಅನಾವಶ್ಯಕ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಅಂತಿಮ ದಂಡ ಆದೇಶವನ್ನು ಸೆಕ್ಷನ್ 275 ಅಡಿಯಲ್ಲಿ ನಿಗದಿತ ಕಾಲಾವಧಿಯೊಳಗೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಮಾತ್ರ ವಿಚಾರಣೆ ಸೀಮಿತವಾಗಿತ್ತು. ಮಧ್ಯಂತರ ಹಂತದಲ್ಲಿ ವಸೂಲಾತಿಗೆ ತಡೆ ನೀಡಲಾಗಿದ್ದರೂ, ಅಂತಿಮ ತೀರ್ಪಿನಲ್ಲಿ ಕೋರ್ಟ್ ನೋಟಿಸ್ ಹಾಗೂ ಪ್ರಕ್ರಿಯೆಗಳು ಸಂಪೂರ್ಣವಾಗಿ ಕಾಲಾವಧಿಯೊಳಗೇ ನಡೆದಿವೆ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನಿಂದ, ರಾಜಕೀಯ ರಂಗಕ್ಕೆ ಇತ್ತೀಚೆಗೆ ಕಾಲಿಟ್ಟಿರುವ ವಿಜಯ್ ಅವರಿಗೆ ಕಾನೂನು ಮಟ್ಟದಲ್ಲಿ ದೊಡ್ಡ ಹಿನ್ನಡೆ ಉಂಟಾಗಿದ್ದು, ಟಿವಿಕೆ ಪಕ್ಷದ ರಾಜಕೀಯ ಚಟುವಟಿಕೆಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ.

error: Content is protected !!