Home Blog Page 46

ಶಿವಮೊಗ್ಗ ಪಾಲಿಕೆ ಚುನಾವಣೆ: ಹೈಕೋರ್ಟ್ ಮೆಟ್ಟಿಲೇರಿದ ಈಶ್ವರಪ್ಪ ಮಗ!

0

ಬೆಂಗಳೂರು: ಅವಧಿ ಮುಗಿದು ಎರಡೂವರೆ ವರ್ಷ ಕಳೆದಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಹಾಗೂ ಹೊಳಲ್ಕೆರೆ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ನೋಟಿಸ್ ನೀಡಲಾಗಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಗೆ 2018ರ ಆಗಸ್ಟ್ 31ರಂದು ಚುನಾವಣೆ ನಡೆದಿದ್ದು, ಐದು ವರ್ಷದ ಅವಧಿ 2023ರ ಆಗಸ್ಟ್ 30ರಂದು ಮುಗಿದಿದೆ. ಬಳಿಕ 2023ರ ನವೆಂಬರ್ 27ರಂದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಪಾಲಿಕೆ ಆಡಳಿತಾಧಿಕಾರಿಯ ಆಡಳಿತದಲ್ಲಿದೆ. ಕಾಯ್ದೆ ಪ್ರಕಾರ ಅವಧಿ ಮುಗಿದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಾಗಿದ್ದರೂ ಇದುವರೆಗೆ ಚುನಾವಣೆ ನಡೆಯದಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ನಗರದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದು ಅರ್ಜಿದಾರರು ದೂರಿದ್ದಾರೆ. ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬೀದಿ ದೀಪಗಳಂತಹ ಮೂಲಭೂತ ನಾಗರಿಕ ಸೇವೆಗಳ ಮೇಲ್ವಿಚಾರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಜೊತೆಗೆ ಪಾಲಿಕೆಯ ನಿಧಿಗಳ ಬಳಕೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲೂ ಪಾರದರ್ಶಕತೆ ಇಲ್ಲದಿರುವುದರಿಂದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ.

ಅಲ್ಲದೆ, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯಿದೆ ಸೆಕ್ಷನ್ 7 ಮತ್ತು 9ರ ಪ್ರಕಾರ ಸ್ಥಳೀಯ ಸಂಸ್ಥೆಯ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕಾಗಿದೆ. ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಕಾನೂನು ಹಾಗೂ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ದೀರ್ಘಕಾಲ ಚುನಾವಣೆ ನಡೆಸದಿರುವುದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಚುನಾವಣೆಯನ್ನು ತಕ್ಷಣ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಓರ್ವ ಸಾವು, 3ಕ್ಕೂ ಹೆಚ್ಚು ಮಂದಿಗೆ ಗಾಯ

0

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಹೊಸಕೋಟೆ–ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ.ಮಾರುತಿ ಒಮ್ನಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಈ ಅಪಘಾತ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಮಾರುತಿ ಒಮ್ನಿ ಕಾರು ಸಂಪೂರ್ಣ ನುಜುಗುಜ್ಜಾಗಿದೆ.

ಮಾರುತಿ ಒಮ್ನಿ ಕಾರಿನ ಚಾಲಕ ಒವರ್ಟೇಕ್ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆ ಮೇಲೆ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಗುದ್ದಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.

ಘಟನೆ ಹೊಸಕೋಟೆ ತಾಲ್ಲೂಕಿನ ಫ್ಯಾಕ್ಟರಿ ಗೇಟ್ ಸಮೀಪ ಸಂಭವಿಸಿದ್ದು, ಮಾಹಿತಿ ಪಡೆದ ತಕ್ಷಣ ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರಿಗೂ ಶಾಕ್! ಇನ್‌ಸ್ಟಾಗ್ರಾಂ ಖಾತೆ ಡಿಲೀಟ್

0

ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣವು ದಿನದಿಂದ ದಿನಕ್ಕೆ ಗೊಂದಲದ ತಿರುವು ತರುತ್ತಿದೆ. ಪೊಲೀಸ್ ತನಿಖೆಯ ವೇಳೆ ಸುಚಿತ್ರಾ ಮೊಬೈಲ್ ಪರಿಶೀಲನೆಯು, ಕಲಬುರಗಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದ ಹಲವು ಯುವಕರೊಂದಿಗೆ ಅವಳು ನಿತ್ಯ ಸಂಪರ್ಕದಲ್ಲಿದ್ದ ದೃಶ್ಯಗಳನ್ನು ಬಹಿರಂಗಪಡಿಸಿದೆ.

ಈ ಬೆಳವಣಿಗೆಯ ಪರಿಣಾಮವಾಗಿ, ಕೆಲ ಯುವಕರು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿ, ಇನ್ನೂ ಕೆಲವರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ತನಿಖೆ ವೇಳೆ ಹೆಸರು ಹೊರಬೀಳುವ ಭಯದಿಂದ ಆತಂಕಕ್ಕೊಳಗಾಗಿದ್ದಾರೆ.

ಸುಚಿತ್ರಾ ಪತಿಯು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಸುಚಿತ್ರಾ ತನ್ನ ಮೇಲೆ ಹಲ್ಲೆ ನಡೆಸಲು ಯುವಕರ ಸಹಾಯ ಕೇಳಿದ್ದಾಳೆ” ಎಂದು ಆರೋಪಿಸಿದ್ದಾರೆ. ಪ್ರಕರಣವು ಇತ್ತೀಚೆಗೆ ಹೆಚ್ಚುವರಿ ಅನಿಶ್ಚಿತತೆಯನ್ನು ಪಡೆದಿದೆ, ಹಾಗೂ ಪೊಲೀಸರು ಸಿದ್ಧಾಪುರ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದ್ದಾರೆ.

ಇದರ ನಡುವೆ, ಸಿದ್ದಾಪುರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ: ಎಎಸ್‌ಐ ಗಣಪತಿ ಭಟ್ ಮತ್ತು ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್. ಡಿವೈಎಸ್‌ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಯಾವುದೇ ಲೋಪ ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ದೀಪನ್ ತಿಳಿಸಿದ್ದಾರೆ.

ಪ್ರಕರಣವು ಹೀಗಾಗಿಯೇ ಸಾಮಾಜಿಕ ಮಾಧ್ಯಮ ಮತ್ತು ಯುವಕರಲ್ಲಿ ಭಾರಿ ಚರ್ಚೆ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಗಳು ಎದುರಾಗುವ ಸಾಧ್ಯತೆ ಇದೆ.

₹1.50 ಕೋಟಿ ಐಟಿ ದಂಡ ಪ್ರಶ್ನಿಸಿದ ವಿಜಯ್‌ಗೆ ಹಿನ್ನಡೆ: ಮದ್ರಾಸ್ ಹೈಕೋರ್ಟ್‌ನಿಂದ ರಿಟ್ ಅರ್ಜಿ ವಜಾ

ನಟ-ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ವಿರುದ್ಧದ ಆದಾಯ ತೆರಿಗೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ₹1.50 ಕೋಟಿ ದಂಡ ವಸೂಲಿಗೆ ಆದಾಯ ತೆರಿಗೆ ಇಲಾಖೆಗೆ ಮಾರ್ಗ ಸುಗಮಗೊಳಿಸಿದೆ.

2015ರ ಸೆಪ್ಟೆಂಬರ್‌ನಲ್ಲಿ ವಿಜಯ್ ನಿವಾಸದಲ್ಲಿ ನಡೆದ ಆದಾಯ ತೆರಿಗೆ ಶೋಧನೆಯ ವೇಳೆ ಪತ್ತೆಯಾದ ₹15 ಕೋಟಿ ಹೆಚ್ಚುವರಿ ಆದಾಯಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 2017ರಲ್ಲಿ ಮೌಲ್ಯಮಾಪನ ಆದೇಶ ಜಾರಿಯಾಗಿತ್ತು. ಬಳಿಕ ಡಿಸೆಂಬರ್ 2018ರಲ್ಲಿ ಸೆಕ್ಷನ್ 271AAB(1) ಅಡಿಯಲ್ಲಿ ದಂಡ ಪ್ರಕ್ರಿಯೆ ಆರಂಭಗೊಂಡಿತು.

ಈ ಮೌಲ್ಯಮಾಪನ ಆದೇಶವನ್ನು ವಿಜಯ್ ಅವರು ಆದಾಯ ತೆರಿಗೆ ಆಯುಕ್ತರ (ಅಪೀಲು) ಮುಂದೆ ಪ್ರಶ್ನಿಸಿದ್ದು, ಅಲ್ಲಿ ಭಾಗಶಃ ತಮ್ಮ ಪರ ತೀರ್ಪು ಲಭಿಸಿತ್ತು. ಆದರೆ, ಇಲಾಖೆ ಈ ತೀರ್ಪನ್ನು ಐಟಿಎಟಿಗೆ ಪ್ರಶ್ನಿಸಿತ್ತು. ಫ್ಯಾನ್ ಅಸೋಸಿಯೇಷನ್‌ಗೆ ಸಂಬಂಧಿಸಿದ ವೆಚ್ಚಗಳ ವಿಷಯ ಸೇರಿದಂತೆ ಕೆಲವು ಅಂಶಗಳಲ್ಲಿ ಐಟಿಎಟಿ ಇಲಾಖೆಯ ನಿಲುವನ್ನು ಭಾಗಶಃ ಸಮರ್ಥಿಸಿತು.

ಇದರ ನಡುವೆ, ದಂಡ ಪ್ರಕ್ರಿಯೆ ಸರಿಯಾಗಿ ಆರಂಭವಾಗಿಲ್ಲ ಎಂಬ ಕಾರಣ ಉಲ್ಲೇಖಿಸಿ, ಇಲಾಖೆ 2019ರಲ್ಲಿ ಸೆಕ್ಷನ್ 263 ಅಡಿಯಲ್ಲಿ ಮೌಲ್ಯಮಾಪನ ಪರಿಷ್ಕರಣೆಗಾಗಿ ನೋಟಿಸ್ ನೀಡಿತ್ತು. ಆದರೆ, ಮೇ 2022ರಲ್ಲಿ ಐಟಿಎಟಿ ಈ ಪರಿಷ್ಕರಣೆ ಆದೇಶವನ್ನು ರದ್ದುಪಡಿಸಿ, ದಂಡ ಪ್ರಕ್ರಿಯೆ ಈಗಾಗಲೇ ಮುಂದುವರಿದಿರುವುದರಿಂದ ಮತ್ತಷ್ಟು ಕ್ರಮ ಅನಾವಶ್ಯಕ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಅಂತಿಮ ದಂಡ ಆದೇಶವನ್ನು ಸೆಕ್ಷನ್ 275 ಅಡಿಯಲ್ಲಿ ನಿಗದಿತ ಕಾಲಾವಧಿಯೊಳಗೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಮಾತ್ರ ವಿಚಾರಣೆ ಸೀಮಿತವಾಗಿತ್ತು. ಮಧ್ಯಂತರ ಹಂತದಲ್ಲಿ ವಸೂಲಾತಿಗೆ ತಡೆ ನೀಡಲಾಗಿದ್ದರೂ, ಅಂತಿಮ ತೀರ್ಪಿನಲ್ಲಿ ಕೋರ್ಟ್ ನೋಟಿಸ್ ಹಾಗೂ ಪ್ರಕ್ರಿಯೆಗಳು ಸಂಪೂರ್ಣವಾಗಿ ಕಾಲಾವಧಿಯೊಳಗೇ ನಡೆದಿವೆ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನಿಂದ, ರಾಜಕೀಯ ರಂಗಕ್ಕೆ ಇತ್ತೀಚೆಗೆ ಕಾಲಿಟ್ಟಿರುವ ವಿಜಯ್ ಅವರಿಗೆ ಕಾನೂನು ಮಟ್ಟದಲ್ಲಿ ದೊಡ್ಡ ಹಿನ್ನಡೆ ಉಂಟಾಗಿದ್ದು, ಟಿವಿಕೆ ಪಕ್ಷದ ರಾಜಕೀಯ ಚಟುವಟಿಕೆಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ.

ಬೆಂಗಳೂರು ಏರ್‌ಪೋರ್ಟ್ ​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

0

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಮಾಯವಾಗಿವೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರಿಗೆ ಈ ಕಹಿ ಅನುಭವವಾಗಿದೆ. ಅವರ ಬ್ಯಾಗ್‌ ನಲ್ಲಿದ್ದ ಸುಮಾರು 790 ಗ್ರಾಂ ಚಿನ್ನ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳು ಕಳುವಾಗಿವೆ ಎಂದು ತಿಳಿದುಬಂದಿದೆ.

ಪ್ರಯಾಣಿಕರ ಬ್ಯಾಗ್‌ನಲ್ಲಿ ಚಿನ್ನಾಭರಣಗಳು ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಪಾಸಣೆ ನಡೆಸಿ ಟ್ಯಾಗ್ ಮಾಡಿದ್ದರು. ಆದರೆ ದುಬೈ ತಲುಪಿದ ನಂತರ ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಕಳ್ಳತನದ ಹಿಂದೆ ವಿಮಾನ ನಿಲ್ದಾಣದ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಂತ್ರಸ್ತ ಮಹಿಳೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಂದು ಅಂಡರ್-19 ವಿಶ್ವಕಪ್ ಫೈನಲ್: ಭಾರತ–ಇಂಗ್ಲೆಂಡ್ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ!

0

2026ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಫೈನಲ್ ಹಂತ ತಲುಪಿದ್ದು, ಇಂದು ಹೊಸ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ಯುವ ತಂಡಗಳು ಹರಾರೆಯ ಐತಿಹಾಸಿಕ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪ್ರಶಸ್ತಿ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಪಂದ್ಯಾವಳಿಯಿಡೀ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ಗೆ ಅರ್ಹತೆ ಪಡೆದಿವೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನ ವಿರುದ್ಧ 311 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತು. ಇದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ರನ್ ಚೇಸ್ ಆಗಿದೆ.

ಈ ಪಂದ್ಯದಲ್ಲಿ ಆರನ್ ಜಾರ್ಜ್ ಶತಕದೊಂದಿಗೆ ಮಿಂಚಿದರೆ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಟೂರ್ನಿಯುದ್ದಕ್ಕೂ ಭಾರತ ಒಂದೂ ಪಂದ್ಯವನ್ನು ಸೋಲದೇ ಅಜೇಯವಾಗಿ ಸಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನ ಹೊಂದಿದೆ. ಈ ಮೂಲಕ ಟೀಮ್ ಇಂಡಿಯಾ ಆರನೇ ಬಾರಿ ಅಂಡರ್-19 ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ಇತ್ತ ಇಂಗ್ಲೆಂಡ್ ತಂಡವೂ ಭರ್ಜರಿ ಫಾರ್ಮ್‌ನಲ್ಲಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ರೋಚಕ ಗೆಲುವು ಸಾಧಿಸಿದೆ. ಸಮತೋಲನಗೊಂಡ ತಂಡ ಸಂಯೋಜನೆ ಹಾಗೂ ಪಂದ್ಯ ತಿರುಗಿಸುವ ಆಟಗಾರರನ್ನು ಹೊಂದಿರುವ ಇಂಗ್ಲೆಂಡ್, ಎರಡನೇ ಬಾರಿ ಅಂಡರ್-19 ವಿಶ್ವಕಪ್ ಗೆಲ್ಲುವ ಕನಸಿನಲ್ಲಿದೆ.

ಅಂಕಿಅಂಶಗಳ ದೃಷ್ಟಿಯಿಂದ ನೋಡಿದರೆ, ಭಾರತ–ಇಂಗ್ಲೆಂಡ್ ನಡುವಿನ ಮುಖಾಮುಖಿ ದಾಖಲೆಯಲ್ಲಿ ಟೀಮ್ ಇಂಡಿಯಾ ಮೇಲುಗೈ ಹೊಂದಿದೆ. ಎರಡೂ ತಂಡಗಳು ಇದುವರೆಗೆ ಒಟ್ಟು 55 ಪಂದ್ಯಗಳಲ್ಲಿ ಎದುರಿಸಿದ್ದು, ಭಾರತ 41 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್ 13 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಬೈಕ್‌ಗೆ ಕಾರು ಗುದ್ದಿ ಎಸ್ಕೇಪ್: ಹಿರಿಯ ನಟ ಮಣಿಯನ್‌ಪಿಳ್ಳ ರಾಜು ಬಂಧನ

ಹಿರಿಯ ಮಲಯಾಳಂ ನಟ ಹಾಗೂ ನಿರ್ಮಾಪಕ ಮಣಿಯನ್‌ಪಿಳ್ಳ ರಾಜು ಅವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಿರುವನಂತಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣದಲ್ಲಿ, ಗಾಯಾಳುಗಳಿಗೆ ನೆರವು ನೀಡದೇ ಸ್ಥಳದಿಂದ ಪರಾರಿಯಾದ ಆರೋಪದ ಮೇಲೆ ನಟನ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.

ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದ ವಝುತಕಾಡ್ ಪ್ರದೇಶದ ತ್ರಿವೇಂಡ್ರಮ್ ಕ್ಲಬ್ ಬಳಿ ಈ ಘಟನೆ ನಡೆದಿದೆ. ರಾಜು ಅವರು ಚಲಾಯಿಸುತ್ತಿದ್ದ KL-01-CJ-0004 ಸಂಖ್ಯೆಯ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸಾಗುತ್ತಿದ್ದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎಂಬ ಸುಮಾರು 20 ವರ್ಷದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಒಬ್ಬ ಯುವಕನ ಕಾಲಿನ ಮೂಳೆ ಮುರಿದಿದ್ದು, ಮತ್ತೊಬ್ಬನಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ.

ಅಪಘಾತದ ನಂತರ ನಟ ಮಣಿಯನ್‌ಪಿಳ್ಳ ರಾಜು ಅವರು ಗಾಯಾಳುಗಳಿಗೆ ಯಾವುದೇ ನೆರವು ನೀಡದೇ ಸ್ಥಳದಿಂದ ಹೊರಟುಹೋಗಿದ್ದಾರೆ ಎನ್ನಲಾಗಿದೆ. ಅಪಘಾತ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ರಾಜು ಅವರು ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತದ ಸಮಯದಲ್ಲಿ ಕಾರು ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪಘಾತದ ವೇಳೆ ಮದ್ಯ ಸೇವಿಸಿರುವುದು ದೃಢಪಟ್ಟಲ್ಲಿ ಹೆಚ್ಚುವರಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನಟ ರಾಜು, “ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ನಂತರ ನಾನು ಗಾಬರಿಗೊಂಡು ಅಲ್ಲಿಂದ ಹೊರಟೆ,” ಎಂದು ಹೇಳಿದ್ದಾರೆ. ತಾನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವುದು, ಚಿಕನ್ ಗುನ್ಯಾದಿಂದ ಬಳಲುತ್ತಿರುವುದು ಹಾಗೂ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಸ್ಥಳದಲ್ಲೇ ಉಳಿಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಬೇರೆವರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸದ್ಯ ಪೊಲೀಸರು BNS ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ನಿರ್ಲಕ್ಷ್ಯದ ಚಾಲನೆ ಹಾಗೂ ಅಪಘಾತದ ಮಾಹಿತಿ ನೀಡದೇ ಪರಾರಿಯಾದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ವರದಿ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಲಿದೆ.

WPL 2026: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ RCB: ಸಿಂಹಿಣಿಯರಿಗೆ ಹಣದ ಸುರಿಮಳೆ! ಡೆಲ್ಲಿಗೂ ಭರ್ಜರಿ ಬಹುಮಾನ

0

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸತತ ನಾಲ್ಕನೇ ಬಾರಿ ಫೈನಲ್ ತಲುಪಿದ್ದ ಡೆಲ್ಲಿ ತಂಡಕ್ಕೆ ಈ ಬಾರಿ ಕೂಡ ಟ್ರೋಫಿ ಕೈ ತಪ್ಪಿದ್ದು, ರನ್ನರ್‌-ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ RCB ತಂಡ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಸ್ಫೋಟಕ ಇನ್ನಿಂಗ್ಸ್‌ಗಳ ನೆರವಿನಿಂದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು.

ಈ ಜಯದೊಂದಿಗೆ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಋತುವಿನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಶ್ರೇಷ್ಠ ಸಾಧನೆ ಮಾಡಿದ ತಂಡವಾಗಿ ಹೊರಹೊಮ್ಮಿತು.

ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಂಟು ಪಂದ್ಯಗಳಲ್ಲಿ ನಾಲ್ಕು ಜಯ ಹಾಗೂ ನಾಲ್ಕು ಸೋಲುಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಡೆಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರೂ, ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು.

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿ 2023ರಲ್ಲಿ ನಡೆದಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಅಂದು ನೀಡಿದಂತೆ ಈ ಬಾರಿಯೂ ವಿಜೇತ ತಂಡಕ್ಕೆ ₹6 ಕೋಟಿ ಬಹುಮಾನ ನಿಗದಿಪಡಿಸಲಾಗಿತ್ತು. ಚಾಂಪಿಯನ್ RCB ತಂಡವು ₹6 ಕೋಟಿ ಮೊತ್ತವನ್ನು ಪಡೆದುಕೊಂಡಿತು. ರನ್ನರ್‌-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ₹3 ಕೋಟಿ ಬಹುಮಾನ ಲಭಿಸಿತು.

ಪಂದ್ಯಾವಳಿಯ ಅತ್ಯುತ್ತಮ ಆಟಗಾರಿಗೆ ₹5 ಲಕ್ಷ ಬಹುಮಾನ ನೀಡಲಾಯಿತು. ಆರೆಂಜ್ ಕ್ಯಾಪ್‌, ಪರ್ಪಲ್ ಕ್ಯಾಪ್‌, ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಆಟಗಾರ್ತಿ ಹಾಗೂ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ್ತಿಗೂ ತಲಾ ₹5 ಲಕ್ಷ ಬಹುಮಾನ ನೀಡಲಾಯಿತು. ಫೈನಲ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್‌ ಆಡಿದ ಸ್ಮೃತಿ ಮಂಧಾನ ಅವರಿಗೆ ₹2.5 ಲಕ್ಷ ವಿಶೇಷ ಬಹುಮಾನ ಲಭಿಸಿತು.

Power Cut Bengaluru; ಬೆಂಗಳೂರಿನ ಹಲವೆಡೆ ಶನಿವಾರ ಪವರ್ ಕಟ್; ಇಲ್ಲಿದೆ ಕರೆಂಟ್ ಇಲ್ಲದ ಏರಿಯಾಗಳ ಪಟ್ಟಿ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಫೆಬ್ರವರಿ 7ರ ಶನಿವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅದರಂತೆ ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ, ತಿಮ್ಮೇನಹಳ್ಳಿ, ಎಂ.ಸಿ. ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ: ಅರಣ್ಯ ಸಿಬ್ಬಂದಿ ಆದೇಶ

0

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿ ಭದ್ರತಾ ವಲಯವನ್ನು ಸಕ್ರಿಯಗೊಳಿಸಿದೆ. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಭಕ್ತರ ಜೀವ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರವೀಣ್ ಎಂಬ ಭಕ್ತ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆ ಮಾರ್ಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಗೆ ಆದೇಶ ನೀಡಿದೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪ್ರತಿ ಕಿಲೋಮೀಟರ್‌ಗೆ ಒಂದೊಂದು ಭದ್ರತಾ ತಂಡವನ್ನು ನಿಯೋಜಿಸಲಾಗಿದ್ದು, ಒಟ್ಟು 8 ತಂಡಗಳು ಹೈಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ತಂಡಗಳಿಗೆ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ನೀಡಲಾಗಿದ್ದು, ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಮತ್ತು ಎಪಿಸಿ ಕ್ಯಾಂಪ್ ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ.

ಭಕ್ತರು ಒಬ್ಬೊಬ್ಬರಾಗಿ ಅಥವಾ ಒಂಟಿಯಾಗಿ ಕಾಡಿನೊಳಗೆ ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪಾದಯಾತ್ರೆ ಗುಂಪು ಗುಂಪಾಗಿ ಮಾತ್ರ ನಡೆಯಬೇಕು. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಡ್ರೋನ್ ಕ್ಯಾಮರಾಗಳ ಮೂಲಕವೂ ನಿರಂತರ ನಿಗಾವಹಿಸಲಾಗುತ್ತಿದೆ.

ಫೆಬ್ರವರಿ 14ರಿಂದ 18ರವರೆಗೆ ನಡೆಯುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.

ಜನವರಿ 21ರಂದು ಮುಂಜಾನೆ ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 150ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ವೇಳೆ ತೆರಳುತ್ತಿದ್ದಾಗ ಚಿರತೆ ಪ್ರವೀಣ್ ಕುಮಾರ್ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

error: Content is protected !!