Home Blog Page 46

ಸಂತ್ರಸ್ತರ ಅಳಲು ಆಲಿಸಿದ ಸಚಿವ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ: ಅಧಿಕ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗದಗ ನಗರದ ಗಂಗಿಮಡಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಸೋಮವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತು ನೆರವು ಹಾಗೂ ಶಾಶ್ವತ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಂತ್ರಸ್ತರೊಂದಿಗೆ ನೇರವಾಗಿ ಮಾತನಾಡಿದ ಸಚಿವರು, “ನಿಮ್ಮ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕನ ಮಾಡಿದ್ದೇನೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಧೈರ್ಯ ತುಂಬಿದರು.
ಗಂಗಿಮಡಿ ಪ್ರದೇಶದಲ್ಲಿ ಒಟ್ಟು 96 ಕುಟುಂಬಗಳು ತಗಡಿನ ಶೇಡ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಭಾರೀ ಮಳೆಯಿಂದ 9 ಶೇಡ್‌ಗಳು ಸಂಪೂರ್ಣ ಕುಸಿದಿವೆ. ಈಗಾಗಲೇ ಜಿಲ್ಲಾಡಳಿತದಿಂದ 88 ಕುಟುಂಬಗಳಿಗೆ ತಲಾ ₹5 ಸಾವಿರ ನೆರವು ವಿತರಿಸಲಾಗಿದ್ದು, ಉಳಿದವರಿಗೆ ಶೀಘ್ರವೇ ಸಹಾಯಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕೆಲವರು ಮನೆಗಳಿದ್ದರೂ ಶೇಡ್‌ಗಳಲ್ಲಿ ವಾಸಿಸುತ್ತಿರುವ ಮಾಹಿತಿ ಗಮನಕ್ಕೆ ಬಂದಿದೆ. ಅರ್ಹರನ್ನು ಗುರುತಿಸಿ ಮೊದಲ ಹಂತದಲ್ಲಿ ನಿರ್ಮಾಣವಾಗುತ್ತಿರುವ 1000 ಮನೆಗಳಲ್ಲಿ ನಿಜವಾದ ಸಂತ್ರಸ್ತರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
“₹5 ಸಾವಿರ ಸಾಲದು” – ಸಂತ್ರಸ್ತರ ಮನವಿ
ಸಂಪೂರ್ಣ ಹಾನಿಗೊಳಗಾದ 9 ಕುಟುಂಬಗಳು, “₹5 ಸಾವಿರ ನೆರವು ಸಾಕಾಗುವುದಿಲ್ಲ. ಕನಿಷ್ಠ ₹20 ಸಾವಿರ ಸಹಾಯಧನ ನೀಡಬೇಕು” ಎಂದು ಸಚಿವರ ಮುಂದೆ ಮನವಿ ಮಾಡಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪ್ರಸ್ತುತ ಸಂತ್ರಸ್ತರು ಶಾಲಾ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದು, ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿಗಳು ಈಗಾಗಲೇ ಆಹಾರ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ. 96 ಕುಟುಂಬಗಳಲ್ಲಿ ಯಾರಿಗೆ ಮನೆ ಇದೆ, ಯಾರಿಗೆ ಇಲ್ಲ ಎಂಬುದರ ಸಮಗ್ರ ಪರಿಶೀಲನೆ ನಡೆಸಿ, ನಗರಸಭೆ ನಿಯಮಾವಳಿಗಳ ಅನ್ವಯ ಅರ್ಹರಿಗೆ ಮನೆ ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಸಚಿವರ ಮುಂದೆ ಮಂಜೂರಾದ ಮನೆಗಳ ಮರುಸರ್ವೇ ನಡೆಸಬೇಕು, ಮನೆ ಪಡೆದು ಬಾಡಿಗೆಗೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು, ಸೋಲಾರ್ ಲೈಟ್ ಅಳವಡಿಸಬೇಕು, ಮೂಲಭೂತ ಸೌಲಭ್ಯ ಒದಗಿಸಬೇಕು,
ಮನೆ ಸಿಗುವವರೆಗೆ ಇಲ್ಲಿಯೇ ವಾಸಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಸ್‌.ಎನ್‌. ಬಳ್ಳಾರಿ, ನೀಲವ್ವ ಬೋಳನವರ, ಸಿದ್ದು ಪಾಟೀಲ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಡಾ. ಎಸ್‌.ಎಸ್‌. ನೀಲಗುಂದ, ಆರ್‌.ಎಸ್‌. ಬುರಡಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
“ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಅರ್ಹರಿಗೆ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.”
ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ 
 “ನಮ್ಮ ಅಳಲಿಗೆ ಸ್ಪಂದಿಸಿ ಸಚಿವರು ಸ್ಥಳಕ್ಕೆ ಬಂದು ಪರಿಶೀಲಿಸಿರುವುದು ನಮಗೆ ಧೈರ್ಯ ತಂದಿದೆ.”
ಗಂಗಿಮಡಿ ನಿವಾಸಿಗಳು

ಬೆಂಗಳೂರು ರಸ್ತೆಯಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ದಂಧೆ! ಪೊಲೀಸ್ ಠಾಣೆ ಕೂಗಳತೆಯಲ್ಲೇ ಕೃತ್ಯ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕುಖ್ಯಾತ ‘ಪಂಕ್ಚರ್ ಮಾಫಿಯಾ’ ಮತ್ತೆ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

ನಗರದ ಕೆಲ ಪ್ರಮುಖ ರಸ್ತೆಗಳಲ್ಲಿಯೇ ತಡರಾತ್ರಿ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಚೆಲ್ಲಿ ವಾಹನ ಸವಾರರಿಗೆ ಬಲೆ ಬೀಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವೆಂದರೆ ಈ ಬಾರಿ ಪೊಲೀಸ್ ಠಾಣೆಯೊಂದರ ಸಮೀಪದ ರಸ್ತೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ವರದಿಗಳ ಪ್ರಕಾರ, ಈ ಜಾಲವು ರಾತ್ರಿ ವೇಳೆ ರಸ್ತೆಗಳ ಮೇಲೆ ಚೂಪಾದ ಮೊಳೆಗಳನ್ನು ಹರಡುತ್ತದೆ. ಬೆಳಗ್ಗೆ ಆ ಮಾರ್ಗದಲ್ಲಿ ಸಾಗುವ ದ್ವಿಚಕ್ರ ವಾಹನ ಹಾಗೂ ಕಾರುಗಳ ಟೈರ್‌ಗಳು ಪಂಕ್ಚರ್ ಆಗುತ್ತವೆ. ನಂತರ ಸವಾರರು ಹತ್ತಿರದ ಪಂಕ್ಚರ್ ಅಂಗಡಿಗಳಿಗೆ ತೆರಳುವಂತೆ ಮಾಡಲಾಗುತ್ತದೆ. ಅಲ್ಲಿ ಅನಗತ್ಯವಾಗಿ ಟೈರ್ ಬದಲಾವಣೆ, ರಿಪೇರಿ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತದೆ ಎಂಬ ಆರೋಪ ಇದೆ.

ಈ ರೀತಿಯ ದಂಧೆ ನಗರದಲ್ಲಿ ಹಿಂದೆಯೂ ಬೆಳಕಿಗೆ ಬಂದಿದ್ದರೂ, ಇದೀಗ ಪೊಲೀಸ್ ಠಾಣೆಯ ಸುತ್ತಮುತ್ತಲೇ ನಡೆದಿರುವ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾನೂನು ವ್ಯವಸ್ಥೆಯ ಕಣ್ಣೆದುರಲ್ಲೇ ಇಂತಹ ಚಟುವಟಿಕೆ ನಡೆಯುತ್ತಿರುವುದು ಪೊಲೀಸ್ ಗಸ್ತು ಹಾಗೂ ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು @Karnataka Portfolio ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕರು ಇಂತಹ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸಲಹೆ ನೀಡಲಾಗಿದೆ.

ಮುಂಗಾರು ಅಬ್ಬರಕ್ಕೆ ನರೇಗಲ್ಲ ತತ್ತರ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಜಕ್ಕಲಿ, ಅಬ್ಬಿಗೇರಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ನಿಡಗುಂದಿ ಕೊಪ್ಪ, ಹಾಳಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಸಂಜೆ ಎರಡು ತಾಸಿಗೂ ಅಧಿಕ ಕಾಲ ಸುರಿದ ಭರ್ಜರಿ ಮಳೆ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಬೇಸಿಗೆಯ ಬಿಸಿಗೆ ಕಂಗೆಟ್ಟಿದ್ದ ಜನರು ಮಳೆಯಿಂದ ತಂಪು ಅನುಭವಿಸಿದ್ದು, ಹೊಲಗಳಲ್ಲಿ ತೇವಾಂಶ ಹೆಚ್ಚಿದ ಹಿನ್ನೆಲೆ ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಹಲವೆಡೆ ಹೊಲಗದ್ದೆಗಳು ನೀರಿನಿಂದ ತುಂಬಿ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದವು.
ಆದರೆ ಇದೇ ಮಳೆ ಜಕ್ಕಲಿ ಗ್ರಾಮದಲ್ಲಿ ಅವಾಂತರಕ್ಕೂ ಕಾರಣವಾಯಿತು. ಗ್ರಾಮದ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ಮುಳ್ಳಿನ ಕೊಂಪೆ ರಸ್ತೆ ಮಧ್ಯೆ ಬಿದ್ದು, ಜಕ್ಕಲಿ–ರೋಣ ಸಂಪರ್ಕ ರಸ್ತೆ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಿಗ್ಗೆ ಕೆಲ ಗಂಟೆಗಳ ಕಾಲ ಬಂದ್ ಆಗಿತ್ತು.
ರವಿವಾರ ಬೆಳಿಗ್ಗೆ ರೋಣದಿಂದ ಜಕ್ಕಲಿ ಕಡೆ ಬರುತ್ತಿದ್ದ ಕೆಲವು ಬಸ್‌ಗಳು ದಾರಿ ಮಧ್ಯೆ ಅಡ್ಡಿಯಾದ ಮುಳ್ಳಿನ ಕೊಂಪೆಯಿಂದ ಮುಂದೆ ಸಾಗಲು ಸಾಧ್ಯವಾಗದೆ ಹಿಂತಿರುಗಿದವು ಎಂದು ತಿಳಿದು ಬಂದಿದೆ.
ಹಳ್ಳದ ನೀರು ರಭಸವಾಗಿ ಹರಿದು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದ ಪರಿಣಾಮ ರೈತರು ಆತಂಕಕ್ಕೀಡಾಗಿದ್ದಾರೆ. ಕೆಲ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯ ಭೀತಿ ಎದುರಾಗಿದೆ.
ನಂತರ ಗ್ರಾಮಸ್ಥರೇ ಸ್ವಯಂಪ್ರೇರಿತವಾಗಿ ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಮಧ್ಯೆ ಬಿದ್ದಿದ್ದ ಮುಳ್ಳಿನ ಕೊಂಪೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
“ವಿಂಡ್ ಪವರ್ ರಸ್ತೆಯೇ ಸಮಸ್ಯೆಗೆ ಮೂಲ”
ಅಗಸರ ಹಳ್ಳಕ್ಕೆ ವಿಂಡ್ ಪವರ್ ಕಂಪನಿ ಅಡ್ಡಲಾಗಿ ರಸ್ತೆ ನಿರ್ಮಿಸಿರುವುದರಿಂದ ನೀರಿನ ಸಹಜ ಹರಿವಿಗೆ ತೊಂದರೆಯಾಗುತ್ತಿದೆ. ರಸ್ತೆಯ ಕೆಳಭಾಗದಲ್ಲಿ ಸಣ್ಣ ಸೇತುವೆ ನಿರ್ಮಿಸಿರುವುದರಿಂದಲೇ ನೀರು ಉಕ್ಕಿ ಹರಿದು ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಾಣ ಕೊಟ್ಟರೂ ಭೂಮಿ ಬಿಡೋದಿಲ್ಲ!

ವಿಜಯಸಾಕ್ಷಿ ಸುದ್ದಿ, ಗದಗ: ನರಸಾಪುರ–ನಾಗಸಮುದ್ರ ಸರಹದ್ದಿನ ಫಲವತ್ತಾದ ಕೃಷಿಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕರವೇ ಎಚ್. ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಮಾತನಾಡಿ, “ರೈತರ ವಿರೋಧದ ನಡುವೆಯೇ 250 ಎಕರೆಗಿಂತ ಹೆಚ್ಚು ಭೂಮಿಯನ್ನು ಕೆಐಎಡಿಬಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ” ಎಂದು ಹೇಳಿದರು.
ಈ ಹಿಂದೆ ಇದೇ ಭಾಗದಲ್ಲಿ 170 ಎಕರೆಗೂ ಅಧಿಕ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಳಿಕ ಚಿಕ್ಕೊಪ್ಪ–ನಾಗಸಮುದ್ರ ಮಧ್ಯದ ಸುಮಾರು 198 ಎಕರೆ ಭೂಮಿಯನ್ನು ಒಳಚರಂಡಿ ಶುದ್ಧೀಕರಣ ಘಟಕಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಈಗ ಉಳಿದಿರುವ ಅಲ್ಪಭೂಮಿಯನ್ನೂ ಕಸಿದುಕೊಳ್ಳಲು ಮುಂದಾಗಿರುವುದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ–1966ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಮುಂದಿನ 15 ದಿನಗಳೊಳಗೆ ಹಿಂಪಡೆಯಬೇಕು. ಜೊತೆಗೆ ರೈತರ ವಿರೋಧದ ನಡುವೆಯೇ ಫಲವತ್ತಾದ ಜಮೀನಿನಲ್ಲಿ ವಿಂಡ್ ಪ್ಯಾನ್ ಅಳವಡಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಯಮನೂರಸಾಬ ನದಾಫ್ ಮಾತನಾಡಿ, “ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಕೈಗಾರಿಕಾ ಪ್ರದೇಶಗಳನ್ನು ಸಚಿವರ ಕ್ಷೇತ್ರದಲ್ಲೇ ಸ್ಥಾಪಿಸಲಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಗತಿಪರ ಹೋರಾಟಗಾರ ಶಾಂತಯ್ಯ ಮುತ್ತಿನಿಪೆಂಡಿಮಠ ಮಾತನಾಡಿ, “ಕೆಐಎಡಿಬಿ ಹಾಗೂ ವಿಂಡ್ ಪ್ಯಾನ್ ಕಂಪನಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲದಿದ್ದರೆ ರೈತರು ಮತ್ತು ಗ್ರಾಮಸ್ಥರೊಂದಿಗೆ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಚಾಲಕ ಬಸಯ್ಯ ಗುಡ್ಡಿಮಠ, ಸಂತೋಷ ಹಿರೇಮಠ, ಕುಮಾರಗೌಡ ಬರಮಗೌಡ್ರ, ಯಶವಂತ ಉಪ್ಪಾರ, ಗುರುಯ್ಯ, ಶಾಂತಯ್ಯ, ಶಿವರಾಜ್ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
“ಪ್ರಾಣ ಕೊಟ್ಟರೂ ಭೂಮಿ ಬಿಡುವುದಿಲ್ಲ. ನಮ್ಮ ಭೂಮಿಗೆ ಕೈ ಹಾಕಿದರೆ ರೈತರು ಸುಮ್ಮನಿರುವುದಿಲ್ಲ”
ಮಲ್ಲಿಕಾರ್ಜುನ ಕಿರೇಸೂರ,
ಕರವೇ ಗೌರವಾಧ್ಯಕ್ಷ

ಇಂಧನ ದರ ಏರಿಕೆಗೆ ವೆಲ್ಫೇರ್ ಪಾರ್ಟಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರಗಳನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿರುವ ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್, ಇಂಧನ ದರ ಏರಿಕೆಯಿಂದ ಸಾಮಾನ್ಯ ಜನತೆ, ರೈತರು, ಕಾರ್ಮಿಕರು, ಸಾರಿಗೆ ಕ್ಷೇತ್ರ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಭಾರೀ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆರೋಪಿಸಿದರು.
ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹಲವು ಬಾರಿ ಹೆಚ್ಚಿಸಲಾಗಿದ್ದು, ಅನೇಕ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹7 ಕ್ಕೂ ಹೆಚ್ಚು ಹಾಗೂ ಡೀಸೆಲ್ ದರ ₹7.50 ರವರೆಗೆ ಏರಿಕೆಯಾಗಿದೆ. ಇತ್ತೀಚಿನ ಹೆಚ್ಚಳದಲ್ಲೇ ಪೆಟ್ರೋಲ್ ₹2.61 ಹಾಗೂ ಡೀಸೆಲ್ ₹2.71 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಹಾಗೂ ಗೃಹ ಬಳಕೆಯ LPG ಸಿಲಿಂಡರ್ ದರಗಳ ಏರಿಕೆಯಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಜನರಿಗೆ ಅದರ ಪ್ರಯೋಜನ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಕೃಷಿ ವೆಚ್ಚ, ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ರೈತರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯದ VAT ತೆರಿಗೆ ಕಡಿತಗೊಳಿಸಬೇಕು. ಗೃಹ ಹಾಗೂ ವಾಣಿಜ್ಯ LPG ಸಿಲಿಂಡರ್ ದರ ಇಳಿಸಿ ಜನರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ನಾಗರಿಕ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ವೆಲ್ಫೇರ್ ಪಾರ್ಟಿ ಕರೆ ನೀಡಿದೆ.
 “ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ನಿರಂತರ ಏರಿಕೆ ಸಾಮಾನ್ಯ ಜನರ ಮೇಲಿನ ಆರ್ಥಿಕ ಶೋಷಣೆಯಾಗಿದೆ”
ತಾಹೇರ್ ಹುಸೇನ್ರಾ
ಜ್ಯಾಧ್ಯಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ

ಜನರ ಯೋಜನೆಗಳೇ ಜಿಲ್ಲೆಯ ಅಭಿವೃದ್ಧಿಗೆ ದಿಕ್ಕು

ವಿಜಯಸಾಕ್ಷಿ ಸುದ್ದಿ, ಗದಗ: ಜನರಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಆಡಳಿತ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಯೋಜನಾ ಸಮಿತಿ ರಚಿಸಲಾಗಿದ್ದು, ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಕಾನೂನು ಅನುಷ್ಠಾನಗೊಳಿಸುವಲ್ಲಿ ಗದಗ ಜಿಲ್ಲೆ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಮ ಮಟ್ಟದಲ್ಲೇ ಸಭೆಗಳನ್ನು ನಡೆಸಿ ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ. ಜನರ ಕಲ್ಯಾಣಕ್ಕಾಗಿ ಯೋಜನಾ ಸಮಿತಿ ಮಹತ್ವದ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ಯೋಜನೆಗಳು ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಚಿವರು ಹೇಳಿದರು.
ಮುಂದಿನ ಆಯವ್ಯಯ ತಯಾರಿಕೆಗೆ ಜನರ ಅಭಿಪ್ರಾಯ ಮತ್ತು ಸ್ಥಳೀಯ ಅಗತ್ಯತೆಗಳು ಆಧಾರವಾಗಬೇಕು. ಜನರ ಆಲೋಚನೆಗಳಿಗೆ ಸ್ಪೂರ್ತಿ ತುಂಬುವ ಕಾರ್ಯ ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಲಕ್ಕುಂಡಿ ಐತಿಹಾಸಿಕ ಪ್ರದೇಶ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ವಿವಿಧ ನೂತನ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಕೆ.ಎಚ್. ಪಾಟೀಲ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಯಿಂದ ತಾಲೂಕು ಪಂಚಾಯಿತಿ, ಅಲ್ಲಿಂದ ಜಿಲ್ಲಾ ಪಂಚಾಯಿತಿ ಮಟ್ಟದವರೆಗೆ ಅಭಿವೃದ್ಧಿ ಯೋಜನೆಗಳನ್ನು ಸಂಗ್ರಹಿಸಿ ಅನುಷ್ಠಾನಗೊಳಿಸಿದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಎಲ್‌.ಡಿ. ಚಂದಾವರಿ, ಕೃಷ್ಣ ಪರಾಪೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
“ಜನರ ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಯೋಜನೆಗಳೇ ಶಾಶ್ವತ ಅಭಿವೃದ್ಧಿಗೆ ಅಡಿಪಾಯ.”
ಡಾ. ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
“ಗದಗ ದೇಶಕ್ಕೆ ಮಾದರಿ ಆಗಬೇಕು”
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಜನರ ಭಾವನೆಗಳನ್ನು ಅರಿತು ಜಿಲ್ಲಾ ಯೋಜನಾ ಸಮಿತಿ ಕಾರ್ಯನಿರ್ವಹಿಸಬೇಕು ಎಂದರು.
2027-28ನೇ ಸಾಲಿನ ಅಭಿವೃದ್ಧಿ ಯೋಜನೆಗಳು ಜನರಿಂದಲೇ ರೂಪುಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಗದಗ ಜಿಲ್ಲೆ ದೇಶದಲ್ಲೇ ಮಾದರಿಯಾಗಬೇಕು. ಆಗ ಮಾತ್ರ ಗ್ರಾಮರಾಜ್ಯ ಮತ್ತು ರಾಮರಾಜ್ಯದ ಕನಸು ಸಾಕಾರವಾಗುತ್ತದೆ ಎಂದು ಹೇಳಿದರು.

ಕೋಮು ಗೂಂಡಾಗಳ ಕೇಸ್ ವಾಪಸ್ ನಿರ್ಧಾರ ರದ್ದುಪಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ಸಂಘ ಪರಿವಾರದ ಮುಖಂಡರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹುಯಿಲಗೋಳ ನಾರಾಯಣ ವೃತ್ತ (ಟಾಂಗಾಕೂಟ)ದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಗದಗ ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, “ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಭಾಷಣ ಹಾಗೂ ಗಲಭೆ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲೆಯೇ ದಾಳಿ ನಡೆಸಿದೆ” ಎಂದು ಆರೋಪಿಸಿದರು.
ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಗೆ ಕಾರಣವಾಗಿರುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರ ವಿಶೇಷ ರಿಯಾಯಿತಿ ನೀಡುತ್ತಿರುವುದು ಪ್ರಶ್ನಾರ್ಹ ಎಂದು ಅವರು ಹೇಳಿದರು.
ಅಮಾಯಕರು, ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಿರಂತರವಾಗಿ ಕೋಮು ಪ್ರಚೋದನೆ ಮಾಡುವವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಫ್ದಾರ್ ಮಾತನಾಡಿ, “ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ ಸರ್ಕಾರ ಕಾನೂನು ಅಡಚಣೆ ನೆಪ ಹೇಳುತ್ತಿದೆ. ಆದರೆ ದ್ವೇಷ ಭಾಷಣ ಮಾಡುವವರ ಪ್ರಕರಣ ಹಿಂಪಡೆಯುವಾಗ ಯಾವುದೇ ಅಡ್ಡಿ ಕಾಣಿಸುತ್ತಿಲ್ಲ” ಎಂದು ಟೀಕಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಪ್ರಕರಣಗಳಲ್ಲಿ ಅನೇಕ ಅಮಾಯಕ ಯುವಕರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಕುಟುಂಬಗಳ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಪದಾಧಿಕಾರಿಗಳು, ಗದಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರ್, ಇಬ್ರಾಹಿಂ ಕುಂದರಪಿ, ಫಯಾಜ್ ಚಿನ್ನೂರ್, ರಶೀದ್ ಕಟ್ಟಿಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

77 ದಿನಗಳಲ್ಲೇ ತೀರ್ಪು..! ಬಾಲಕಿ ಹತ್ಯೆ ಪ್ರಕರಣದ ಅಪರಾಧಿಗೆ ಮರಣದಂಡನೆ

ಚೆನ್ನೈ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಧರ್ಮ ಮುನೀಶ್ವರನ್ ಎಂದು ಗುರುತಿಸಲಾಗಿದೆ. ಕೇವಲ 77 ದಿನಗಳಲ್ಲೇ ತನಿಖೆ ಹಾಗೂ ವಿಚಾರಣೆ ಪೂರ್ಣಗೊಂಡು ಕೋರ್ಟ್ ತೀರ್ಪು ಪ್ರಕಟಿಸಿದೆ.

ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಎರಡೂ ಆರೋಪಗಳಲ್ಲಿ ಅಪರಾಧಿ ಎಂದು ತೀರ್ಮಾನಿಸಿ ಪ್ರತ್ಯೇಕವಾಗಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ವಿಲಾತಿಕುಲಂನ 12ನೇ ತರಗತಿಯ 17 ವರ್ಷದ ವಿದ್ಯಾರ್ಥಿನಿ ಈ ವರ್ಷದ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಳು. ನಂತರ ಆಕೆಯ ಶವ ಮನೆಯ ಸಮೀಪದ ಕುರುಚಲು ಪ್ರದೇಶದಲ್ಲಿ ಪತ್ತೆಯಾಗಿತ್ತು.

ಘಟನೆ ಬಳಿಕ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಂತರ ಇದೀಗ ಗಂಭೀರ ಶಿಕ್ಷೆ ಪ್ರಕಟವಾಗಿದೆ.

“ಬದುಕಿದ್ದವರಿಗೇ ಡೆತ್ ಸರ್ಟಿಫಿಕೆಟ್!”- ಕೋಲಾರ ನಗರಸಭೆಯಲ್ಲಿ ನಕಲಿ ದಾಖಲೆಗಳ ದಂಧೆ ಶಂಕೆ; ಲೋಕಾಯುಕ್ತ ದಿಢೀರ್ ದಾಳಿ

ಕೋಲಾರ: ಜೀವಂತ ವ್ಯಕ್ತಿಗಳಿಗೆ ಮರಣ ಪ್ರಮಾಣ ಪತ್ರ ನೀಡಿರುವುದು ಸೇರಿದಂತೆ ಜನನ–ಮರಣ ದಾಖಲೆಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಲಾರ ನಗರಸಭೆ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ನಗರಸಭೆಯ ಆರೋಗ್ಯ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಿರುವುದು ಹಾಗೂ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜನನವಾಗದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣ ಪತ್ರ ವಿತರಿಸಿರುವ ಗಂಭೀರ ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋಲಾರ ಲೋಕಾಯುಕ್ತ ಎಸ್ಪಿ ಆಂಥೋಣಿ ಜಾನ್ ಸೂಚನೆ ಮೇರೆಗೆ ಇನ್ಸ್‌ಪೆಕ್ಟರ್ ಆಂಜಿನಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಈ ಕೆಟ್ಟ ಅಭ್ಯಾಸಗಳು ನಿಮ್ಮ ಗೌರವ ಹಾಳು ಮಾಡಬಹುದು: ಆಚಾರ್ಯ ಚಾಣಕ್ಯರ ಎಚ್ಚರಿಕೆ..!

ಸಮಾಜದಲ್ಲಿ ಹಣಕ್ಕಿಂತ ಗೌರವ ದೊಡ್ಡದು ಎಂದು ಹೇಳಲಾಗುತ್ತದೆ. ವ್ಯಕ್ತಿಯ ನಡವಳಿಕೆ, ಮಾತು ಹಾಗೂ ದೈನಂದಿನ ಅಭ್ಯಾಸಗಳೇ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ.

ಆದರೆ ತಿಳಿದೋ ತಿಳಿಯದೆಯೋ ಬೆಳೆಸಿಕೊಳ್ಳುವ ಕೆಲವು ಕೆಟ್ಟ ಅಭ್ಯಾಸಗಳು ವ್ಯಕ್ತಿಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಎಚ್ಚರಿಸಿದ್ದಾರೆ.

ಅತಿಯಾಗಿ ಮಾತನಾಡುವುದು:

ಪ್ರತಿಯೊಂದು ವಿಷಯದಲ್ಲೂ ಅನಗತ್ಯವಾಗಿ ಮಾತನಾಡುವ ವ್ಯಕ್ತಿ ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ ಎಂದು ಚಾಣಕ್ಯರು ಹೇಳಿದ್ದಾರೆ. ಹೆಚ್ಚು ಮಾತನಾಡುವುದರಿಂದ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ವ್ಯಕ್ತಿಯ ಇಮೇಜ್‌ಗೆ ಹಾನಿಯಾಗಬಹುದು. ಹೀಗಾಗಿ ಎಲ್ಲಿ, ಹೇಗೆ ಮತ್ತು ಎಷ್ಟು ಮಾತನಾಡಬೇಕು ಎಂಬ ಅರಿವು ಅಗತ್ಯ.

ಕೋಪ ನಿಯಂತ್ರಣದ ಕೊರತೆ:

ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿ ತನ್ನ ಮಾತು ಮತ್ತು ವರ್ತನೆಯಿಂದ ಇತರರ ಗೌರವ ಕಳೆದುಕೊಳ್ಳುತ್ತಾನೆ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಂತರ ವಿಷಾದಕ್ಕೆ ಕಾರಣವಾಗುತ್ತವೆ.

ದುರಾಸೆ ಮತ್ತು ಸ್ವಾರ್ಥ:

ಅತಿಯಾದ ದುರಾಸೆ ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನೂ ಸ್ವಾರ್ಥದ ದೃಷ್ಟಿಯಿಂದ ಮಾಡುವವರ ಮೇಲೆ ಜನರು ನಂಬಿಕೆ ಇಡುವುದಿಲ್ಲ. ಇದರ ಪರಿಣಾಮವಾಗಿ ಗೌರವವೂ ಕಡಿಮೆಯಾಗುತ್ತದೆ.

ಸಮಯದ ಮಹತ್ವ ಅರಿಯದಿರುವುದು:

ಸಮಯಕ್ಕೆ ಬೆಲೆ ಕೊಡದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ವಿಶ್ವಾಸ ಮತ್ತು ಗೌರವ ಸಿಗುತ್ತದೆ. ಕೆಲಸದಲ್ಲಿ ವಿಳಂಬ ಮಾಡಿದರೆ ವ್ಯಕ್ತಿಯ ವಿಶ್ವಾಸಾರ್ಹತೆ ಕುಸಿಯುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ದುರಹಂಕಾರ:

ಅತಿಯಾದ ಹೆಮ್ಮೆ ಮತ್ತು ದುರಹಂಕಾರ ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತದೆ. ದುರಹಂಕಾರ ಹೊಂದಿರುವ ವ್ಯಕ್ತಿಯನ್ನು ಸಮಾಜದಲ್ಲಿ ಹೆಚ್ಚು ಕಾಲ ಗೌರವಿಸುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ನಕಾರಾತ್ಮಕ ಚಿಂತನೆ:

ಯಾವಾಗಲೂ ದೂರು ನೀಡುವುದು ಮತ್ತು ನಕಾರಾತ್ಮಕ ಚಿಂತನೆ ಹೊಂದಿರುವುದು ಕೂಡ ವ್ಯಕ್ತಿಯ ಖ್ಯಾತಿಗೆ ಧಕ್ಕೆ ತರುತ್ತದೆ. ಸದಾ ನಕಾರಾತ್ಮಕ ಯೋಚನೆ ಹೊಂದಿರುವವರಿಂದ ಜನ ದೂರವಾಗುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.

error: Content is protected !!