Home Blog Page 469

ಸಿಎಂ ಬದಲಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಬೇಡ: ಶಾಸಕ ಹೆಚ್.ಸಿ. ಬಾಲಕೃಷ್ಣ

0

ರಾಮನಗರ: ಸಿಎಂ ಬದಲಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿಗಳು ಮೂಗು ತೂರಿಸಬಾರದು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಶಾಸಕ ಹೆಚ್.ಸಿ. ಬಾಲಕೃಷ್ಣ, ಈ ವಿಷಯದಲ್ಲಿ ತಾವು ಮಧ್ಯೆ ತಲೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಯಾತ್ರೆ ಕುರಿತು ಪ್ರತಿಕ್ರಿಯಿಸಿದರು. ಡಿಕೆಶಿಗೆ ಅಸ್ಸಾಂ ವಿಧಾನಸಭಾ ಚುನಾವಣೆಯ ಉಸ್ತುವಾರಿ ನೀಡಲಾಗಿದ್ದು, ಅದಕ್ಕೆ ಸಂಬಂಧಿಸಿದ ಚರ್ಚೆಗಾಗಿ ಅವರು ದೆಹಲಿಗೆ ತೆರಳಿದ್ದಾರೆ. ಪಕ್ಷ ಅಂದಮೇಲೆ ನಾನಾ ವಿಚಾರಗಳು ಇರುತ್ತವೆ. ಅವುಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ ಬಳಿ ಹೋಗುವುದು ಸಹಜ ಎಂದು ಹೇಳಿದರು.

ಸಿಎಂ ಆಯ್ಕೆ ಕುರಿತು ಚರ್ಚೆ ಮಾಡುವಷ್ಟು ನಾವು ದೊಡ್ಡವರಲ್ಲ. ಇದು ನನಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ಮೂರನೇ ವ್ಯಕ್ತಿಗಳು ತಲೆ ಹಾಕಬಾರದು ಎಂದು ಡಿಸಿಎಂ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಹೆಚ್.ಸಿ. ಬಾಲಕೃಷ್ಣ ಹೇಳಿದರು.

ಇನ್ನೂ ಸಂಕ್ರಾಂತಿಯ ಬಳಿಕ ನಡೆಯಬಹುದಾದ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ಕೇಳಿದರೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತೇನೆ. ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡ ಹಾಕುತ್ತಿಲ್ಲ. ಎಲ್ಲ ನಿರ್ಧಾರಗಳನ್ನು ಹೈಕಮಾಂಡ್‌ವೇ ಕೈಗೊಳ್ಳುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಲೀಸ್ ಬೇಸ್ಡ್ ಸಿಎಂ’ ಎಂದು ಕುಮಾರಸ್ವಾಮಿ ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಲೀಸ್ ಬೇಸ್ಡ್ ಸಿಎಂ ಯಾರು ಎಂಬುದನ್ನು ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಅವರು ರಾಜ್ಯ ರಾಜಕಾರಣಕ್ಕಾದರೂ ಬರಲಿ, ಸ್ಥಳೀಯ ಚುನಾವಣೆಗಳಿಗಾದರೂ ಸ್ಪರ್ಧಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ, ಎಲ್ಲಿಯಾದರೂ ಸ್ಪರ್ಧೆ ಮಾಡಬಹುದು ಎಂದು ಟೀಕಿಸಿದರು.

ಮದ್ಯದ ಮಸ್ತಿಯಲ್ಲಿ ಮಧ್ಯ ರಸ್ತೆಯೇ ರಂಗಮಂಚ: ಗದಗದಲ್ಲಿ ಬಸ್ ನಿಲ್ಲಿಸಿ ಕುಡುಕನ ಭಾರೀ ಗಲಾಟೆ

0

ಗದಗ: ನಗರದ ಮುಳಗುಂದ ನಾಕಾದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ನಡೆಸಿದ ಹೈಡ್ರಾಮಾ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗದಗದಿಂದ ಅಂತೂರು–ಬೆಂತೂರು ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ಅಡ್ಡಗಟ್ಟಿ, ಬಸ್ ಮುಂದೆ ಮಲಗಿ, ಬಸ್ ಮುಂದಕ್ಕೆ ಸಾಗದಂತೆ ಅಡ್ಡಿಪಡಿಸಿದ್ದಾನೆ.

ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕ, ಬಸ್‌ನಲ್ಲಿ 53 ಸೀಟ್‌ಗಳನ್ನು ಹಾಕಿರುವುದೇ ಸಮಸ್ಯೆ ಎಂದು ಕಾರಣ ಹೇಳಿ, ಚಾಲಕ ಮತ್ತು ನಿರ್ವಾಹಕರೊಂದಿಗೆ ಜಗಳ ಆರಂಭಿಸಿದ್ದಾನೆ. “ಬಸ್ ಮುಂದಕ್ಕೆ ಬಿಡೋದಿಲ್ಲ”, “ನನ್ನ ಮೇಲೆ ಬಸ್ ಹತ್ತಿಸಿಕೊಂಡು ಹೋದ್ರು ಪರವಾಗಿಲ್ಲ” ಎಂದು ಕೂಗಾಡುತ್ತಾ ಸಾರ್ವಜನಿಕರ ಗಮನ ಸೆಳೆದಿದ್ದಾನೆ.

ಈ ಹೈಡ್ರಾಮಾದಿಂದ ಬಸ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಬದಿಯಲ್ಲಿ ನಿಂತಿತ್ತು. ಪ್ರಯಾಣಿಕರು ಅಸಹಾಯಕ ಸ್ಥಿತಿಗೆ ತಲುಪಿದ್ದು, ಚಾಲಕ ಮತ್ತು ಕಂಡಕ್ಟರ್ ಕುಡುಕನ ವರ್ತನೆಗೆ ಸಂಪೂರ್ಣ ಸುಸ್ತಾಗಿ ಹೋಗಿದ್ದಾರೆ.

ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸಾರ್ವಜನಿಕರು ಇಂತಹ ವರ್ತನೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಹೊಸ ಹೂಡಿಕೆ: ಸಚಿವ ಎಂ.ಬಿ. ಪಾಟೀಲ್

0

ಬೆಂಗಳೂರು: ಕಳೆದ ವರ್ಷದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು ₹1.53 ಲಕ್ಷ ಕೋಟಿ ಮೊತ್ತದ ಹೊಸ ಹೂಡಿಕೆಯನ್ನು ಒಳಗೊಂಡ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಶನಿವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಗೆ ತೆರಳುವ ಮುನ್ನ ಅವರು ಈ ಸಂಬಂಧದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು. ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ಕುರಿತು ಹೇಳಿಕೆ ನೀಡಿದ ಅವರು, ತಯಾರಿಕಾ ವಲಯ, ಪುನರುತ್ಪಾದನೀಯ ಇಂಧನ, ಡೇಟಾ ಸೆಂಟರ್‌ಗಳು ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಸ್ಥಾಪನೆಗೆ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿರುವುದಾಗಿ ಹೇಳಿದರು.

ಈ ಹೂಡಿಕೆ ಪ್ರಸ್ತಾವನೆಗಳು ಇನ್ನೂ ಕೆಲವೇ ದಿನಗಳಲ್ಲಿ ‘ಕರ್ನಾಟಕ ಉದ್ಯೋಗ ಮಿತ್ರ’ ವೇದಿಕೆಗೆ ಸಲ್ಲಿಕೆಯಾಗಲಿದ್ದು, ಮುಂದಿನ ಹಂತದ ಅನುಮೋದನಾ ಪ್ರಕ್ರಿಯೆಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸ್ಲಮ್ ಬೋರ್ಡ್ ಮನೆಗಳ ಅಂಕಿಅಂಶಗಳ ಬಾಂಬ್: ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ತೀವ್ರ ವಾಗ್ದಾಳಿ

0

ಹುಬ್ಬಳ್ಳಿ: ನಗರದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸ್ಲಮ್ ಬೋರ್ಡ್‌ನಿಂದ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿರುವುದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯವನ್ನೇ ತ್ಯಜಿಸುತ್ತೇನೆ ಎಂದು ಅವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರದಲ್ಲಿದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳ ಒತ್ತಡ ಇರಲಿಲ್ಲ. ಆದರೂ ಬಡವರಿಗೆ ಮನೆ ಕೊಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನಡುವೆಯೂ ಮನೆ ನಿರ್ಮಾಣ ಮತ್ತು ಹಂಚಿಕೆ ಕಾರ್ಯ ಮುಂದುವರಿಸಿದೆ ಎಂದು ಹೇಳಿದರು.

2024ರಲ್ಲಿ 36,789 ಮನೆಗಳನ್ನು ಈಗಾಗಲೇ ವಿತರಿಸಲಾಗಿದೆ. ಇದೀಗ ಎರಡನೇ ಹಂತದಲ್ಲಿ 42,345 ಮನೆಗಳನ್ನು ಜನವರಿ 24ರಂದು ಹಂಚಿಕೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಏಪ್ರಿಲ್–ಮೇ ತಿಂಗಳಲ್ಲಿ ವಿತರಿಸುವ ಗುರಿ ಇದೆ. ಒಟ್ಟು 1,80,253 ಮನೆಗಳ ನಿರ್ಮಾಣ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಮನೆಗೆ ರಾಜ್ಯ ಸರ್ಕಾರ 4 ಲಕ್ಷ ರೂ. ನೀಡುತ್ತಿದ್ದು, ಕೇಂದ್ರ–ರಾಜ್ಯ ಸಬ್ಸಿಡಿಯೊಂದಿಗೆ ಫಲಾನುಭವಿಗಳು ಕೇವಲ 1 ಲಕ್ಷ ರೂ. ಪಾವತಿಸಬೇಕಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ 20,363 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು.

ಹುಬ್ಬಳ್ಳಿಯಲ್ಲಿ 1,008 ಮನೆ ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,767 ಮನೆ ಹಂಚಿಕೆ ಮಾಡಲಾಗುತ್ತಿದೆ. ಜನವರಿ 24ರ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟಿನಲ್ಲಿ, ಜಮೀರ್ ಅಹ್ಮದ್ ಅವರ ಈ ಸವಾಲು ಮತ್ತು ಅಂಕಿಅಂಶಗಳು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಭಾರೀ ಚರ್ಚೆಗೆ ವೇದಿಕೆ ಸಿದ್ಧಪಡಿಸಿದೆ.

ಬೆಂಗಳೂರು ಮೆಟ್ರೋ ದೇಶದಲ್ಲೇ ದುಬಾರಿ: ದರ ಏರಿಕೆಗೆ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ

0

ಬೆಂಗಳೂರು: ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದ್ದು, ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ, ಚೆನ್ನೈ ಮತ್ತು ಕೊಚ್ಚಿ ಮೆಟ್ರೋಗಳಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಇರುವ ದರವನ್ನು ಬೆಂಗಳೂರಿನ ಮೆಟ್ರೋದೊಂದಿಗೆ ಹೋಲಿಸಿದರೆ ಇಲ್ಲಿ ದರ ದ್ವಿಗುಣವಾಗಿದೆ ಎಂದು ಹೇಳಿದರು.

ಮುಂದಿನ ಫೆಬ್ರವರಿಯಲ್ಲಿ ಮತ್ತೆ ಬಿಎಂಆರ್‌ಸಿಎಲ್ ಶೇ.5 ರಷ್ಟು ಸ್ವಯಂಚಾಲಿತ ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಜನರಿಂದ ಸುಲಿಗೆ ಮಾಡುವಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು.

ಇದೇ ವೇಳೆ, ಕಳೆದ ನಾಲ್ಕು ವರ್ಷಗಳಿಂದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ತೀವ್ರವಾಗಿ ವಿಳಂಬವಾಗಿದ್ದು, ಇದಕ್ಕೂ ಬಿಎಂಆರ್‌ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಹಿಂದೆ ದರ ನಿಗದಿ ಸಮಿತಿ ತೆಗೆದುಕೊಂಡ ನಿರ್ಧಾರವೇ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದೆವು. ಆದರೆ ಬಿಎಂಆರ್‌ಸಿಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪು ನಿರ್ಧಾರವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ಪಷ್ಟ ಸಂದೇಶ ನೀಡಿದ ಅವರು, ರಾಜ್ಯ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರವಾಗಿ ನಿಲ್ಲಬೇಕು ಎಂದು ಹೇಳಿದರು. ಮೆಟ್ರೋ ದರ ನಿಗದಿ ಮಾಡುವ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಚಾರದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಭರತ್ ರೆಡ್ಡಿ ನೀಡಿದ ಬೆದರಿಕೆ ಹೇಳಿಕೆ ಶಾಸಕರಿಗೆ ತಕ್ಕದ್ದೇ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

0

ಬಳ್ಳಾರಿ: ಭರತ್ ರೆಡ್ಡಿಯವರು 5 ನಿಮಿಷ ಸಾಕು; ಜನಾರ್ಧನ ರೆಡ್ಡಿಯವರ ಮನೆ ಸುಟ್ಟು ಭಸ್ಮ ಮಾಡುತ್ತೇನೆ ಎಂದಿದ್ದಾರೆ. ಇದು ಶಾಸಕರು ಆಡುವ ಮಾತೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ಬಿಜೆಪಿ ವತಿಯಿಂದ ಬಳ್ಳಾರಿಯಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಥ ಭಸ್ಮಾಸುರನಿಗೆ ಜನ್ಮ ಕೊಟ್ಟಿದ್ದಾರೆ ಈ ಬಳ್ಳಾರಿಯಲ್ಲಿ ಎಂದು ಕಳವಳ ವ್ಯಕ್ತಪಡಿಸಿದರು. ಇವತ್ತಲ್ಲ ನಾಳೆ ಜನಾರ್ಧನ ರೆಡ್ಡಿ ಮುಗಿಸಿ ಬಿಡುವುದಾಗಿ ಹೇಳುತ್ತೀರಿ. ಏನು ಅಷ್ಟೂ ತಾಕತ್ತಿದೆಯೇ ನಿಮಗೆ ಎಂದು ಸವಾಲು ಹಾಕಿದರು.

ನಾವೂ ನೋಡುತ್ತೇವೆ; ನಾವು ಯಾವುದಕ್ಕೂ ಹೆದರುವ ಮಕ್ಕಳಲ್ಲ. ನಾವೂ ಇಳಿಯುತ್ತೇವೆ. ನಿಮ್ಮಂತೆ ದುಂಡಾವರ್ತಿ ಮಾಡುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರರು ಕೊಟ್ಟ ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸಲು ಸಾಧ್ಯವಿದೆ. ಅದನ್ನು ಕಲಿಸಿ ತೋರಿಸುತ್ತೇವೆ ಎಂದು ತಿಳಿಸಿದರು.

ನೀವು ಕೋಪ ಮಾಡಿಕೊಂಡು ಮೂಗು ಕುಯ್ದು ಹಾಕಿದರೆ ಅದು ಮತ್ತೆ ಬೆಳೆಯದು ಎಂದು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಕಿವಿಮಾತು ಹೇಳಿದರು. ನಿಮ್ಮ ಕೋಪದ ಕೂಸು, ಪಾಪದ ಕೂಸು ನಿಮ್ಮ ಮೇಲೆ ಹಗೆತನ ಸಾಧಿಸುತ್ತಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ತಾಲೂಕಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ಇತ್ತೀಚೆಗೆ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸರ್ಕಾರ ಮೀಸಲಿಟ್ಟಿದೆ. ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಭೂಮಿಯನ್ನು ಆಸ್ಪತ್ರೆ ಯೋಜನೆಗಾಗಿ ಗುರುತಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಈ ಆಸ್ಪತ್ರೆಯ ಜಾಗ ಗುರುತು ಹಾಗೂ ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ.ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಅವರು ಜಮೀನು ಪರಿಶೀಲನೆಗೆ ತೆರಳಿದ್ದರು.

ಪರಿಶೀಲನೆ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

“ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಬೇಕು” ಎಂದು ಬೆದರಿಕೆ ಹಾಕಿರುವ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿವೆ. ನಂತರ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ಸಿನ ಬಳ್ಳಾರಿ ಜಿಲ್ಲೆಯ ನಾಯಕರ ಕುರ್ಚಿ ಅಲ್ಲಾಡ ತೊಡಗಿದೆ: ಬಸವರಾಜ ಬೊಮ್ಮಾಯಿ

0

ಬಳ್ಳಾರಿ: ಜನಾರ್ಧನ ರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ಬಿ.ಶ್ರೀರಾಮುಲು ಅವರು ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ಸಿನ ಬಳ್ಳಾರಿ ಜಿಲ್ಲೆಯ ನಾಯಕರ ಕುರ್ಚಿ ಅಲ್ಲಾಡತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ವಿಶ್ಲೇಷಿಸಿದ್ದಾರೆ.

ಬಿಜೆಪಿ ವತಿಯಿಂದ ಬಳ್ಳಾರಿಯಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮುಲು ಅವರ ವೇಗ- ಜನಾರ್ಧನ ರೆಡ್ಡಿಯವರ ಶಕ್ತಿ, ಬಿರುಗಾಳಿ ಮತ್ತು ಬೆಂಕಿಯಂತೆ ಎಂದು ಅವರು ನುಡಿದರು. ಇದೇ ಕಾರಣಕ್ಕಾಗಿ ಬಳ್ಳಾರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿಸಿದರು.

ಅವರ ಬಳಿ ಎಷ್ಟು ಗುಂಡಿದೆಯೋ ನಾವೂ ನೋಡೋಣ ಎಂದು ಸವಾಲು ಹಾಕಿದರು. ಅವರೆಷ್ಟೇ ಗುಂಡು ಹೊಡೆದರೂ ನಮ್ಮ ಶಕ್ತಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಹುಬ್ಬಳ್ಳಿಯಲ್ಲಿ ಪೊಲೀಸರು ದಲಿತ ಹೆಣ್ಮಗಳ ಬಟ್ಟೆ ತೆಗೆದಿದ್ದಾರೆ. ಅವರೇ ತೆಗೆದಿದ್ದಾರೆಂದು ಕಮೀಷನರ್ ಸುಳ್ಳು ಕಟ್ಟು ಕಥೆ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ: CM ಸಿದ್ದರಾಮಯ್ಯ

0

ಬೆಂಗಳೂರು: ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದರು.

ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ವತಿಯಿಂದ ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ ಗಳ ಆರೋಗ್ಯ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇದಕ್ಕಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಸರ್ಕಾರ 10 ಎಕರೆ ಸ್ಥಳವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಂದವಾಗಿದೆ ಎಂದರು.

ಪ್ರೇಮ್ ಜಿ ಪ್ರತಿಷ್ಠಾನಕ್ಕೆ ಸರ್ಕಾರ ಆಭಾರಿ
ಅಜೀಂ ಪ್ರೇಮ್ ಜಿ ಅವರ ಈ ಮಹತ್ಕಾರ್ಯಕ್ಕೆ ಸರ್ಕಾರ ಆಭಾರಿಯಾಗಿದೆ. ಅದರಲ್ಲಿಯೂ ಉಚಿತವಾಗಿ ಈ ಕಾರ್ಯವನ್ನು ನೆರವೇರಿಸಲು ಮುಂದಾಗಿರುವುದು ಶ್ರೇಷ್ಠ ಕಾರ್ಯ ಎಂದರು .

ಶಿಕ್ಷಣಕ್ಕೆ ನೆರವು
ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಕಳೆದ 25 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ. 2021ರಲ್ಲಿ ಶಿಕ್ಷಕರ ತರಬೇತಿಗೆ, 2024 ರಲ್ಲಿ ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡುವ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ರೂ ನೀಡುವ ಮೂಲಕ ಕೈಜೋಡಿಸಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಓದಿರುವವವರಿಗೆ ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನವನ್ನು ದೀಪಿಕಾ ವಿದ್ಯಾರ್ಥಿ ವೇತನದಡಿ ನೀಡುತ್ತಿದ್ದಾರೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಅಜೀಂ ಪ್ರೇಮ್ ಜಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಸಾರ್ವಜನಿಕ ವ್ಯವಸ್ಥೆಗಳು ಬಲಗೊಳ್ಳಬೇಕು
ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಬೆಹರ್ , ಸಾರ್ವಜನಿಕ ವ್ಯವಸ್ಥೆಗಳಲ್ಲಿ ನಂಬಿಕೆಯಿಟ್ಟಿರುವ ಸಂಸ್ಥೆಯಾಗಿದ್ದು, ಸಾರ್ವಜನಿಕ ವ್ಯವಸ್ಥೆಗಳು ಬಲಗೊಳ್ಳಬೇಕು ಎಂದರು. ಆರೋಗ್ಯ ಶುರುವಾಗುವುದು ಆಶಾ ಕಾರ್ಯಕರ್ತರು,

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ. ನಮ್ಮ ಜನತೆ ಖಾಯಿಲೆ ಬೀಳದಿರುವಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಬೇಕು. ಕರ್ನಾಟಕ ಅತ್ಯಂತ ಕ್ರಿಯಾಶೀಲ ರಾಜ್ಯವಾಗಿದ್ದು, ಆರೋಗ್ಯ ವ್ಯವಸ್ಥೆಯನ್ನು ಬಲಬಡಿಸುವಲ್ಲಿ ಅಧಿಕಾರಿಗಳು, ಆಡಳಿತ ಒಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳ್ಳಾರಿ ಬ್ಯಾನರ್ ಗಲಾಟೆ: ಮೃತ ರಾಜಶೇಖರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದ ಬಿಜೆಪಿ

0

ಬಳ್ಳಾರಿ: ನಗರದಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಸಾವಿಗೆ ಸಂಬಂಧಿಸಿದಂತೆ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಬಿಜೆಪಿ ನಿಯೋಗ ರಾಜಶೇಖರ್ ಕುಟುಂಬಕ್ಕೆ ಭೇಟಿ ನೀಡಿ 10 ಲಕ್ಷ ರೂ. ಪರಿಹಾರವನ್ನು ನಗದು ಚೆಕ್ ರೂಪದಲ್ಲಿ ಹಸ್ತಾಂತರಿಸಿದೆ.

ಶನಿವಾರ ರಾಜಶೇಖರ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಈ ಬಗ್ಗೆ ಆರ್. ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ, “ರಾಜಶೇಖರ್ ಅವರ ಸಾವಿಗೆ ನ್ಯಾಯ ಒದಗಿಸುವುದು ನಮ್ಮ ಹೊಣೆ. ಕುಟುಂಬದ ನೋವಿಗೆ ಈ ಸಹಾಯಧನ ಕೇವಲ ತಾತ್ಕಾಲಿಕ ಪರಿಹಾರ. ನಿಜವಾದ ನ್ಯಾಯವೆಂದರೆ ನಿಷ್ಪಕ್ಷಪಾತ ತನಿಖೆ” ಎಂದು ಹೇಳಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದಿದೆ, ಕಾಂಗ್ರೆಸ್ ಶಾಸಕರ ಗೂಂಡಾಗಿರಿ ವ್ಯಾಪಕವಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಕರಣ ಇದೀಗ ರಾಜಕೀಯ ಮಟ್ಟದಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತಿದೆ.

error: Content is protected !!