Home Blog Page 47

ರಾಷ್ಟ್ರಧ್ವಜ ಅವಮಾನ ಆರೋಪ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು

0

ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ರಾಷ್ಟ್ರಧ್ವಜವನ್ನು ಬಳಸಿದ ರೀತಿಯೇ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 8ರಂದು ಟಿ20 ವಿಶ್ವಕಪ್ ಫೈನಲ್‌ ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಪಾಂಡ್ಯ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಹಿನ್ನೆಲೆಯಲ್ಲಿ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ. ಸಂಭ್ರಮಾಚರಣೆಯ ವೇಳೆ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (1971) ಪ್ರಕಾರ ರಾಷ್ಟ್ರಧ್ವಜವನ್ನು ವಸ್ತ್ರದಂತೆ ಬಳಸಬಾರದು ಹಾಗೂ ಅದು ನೆಲಕ್ಕೆ ತಾಗಬಾರದು ಎಂಬ ನಿಯಮವಿದೆ. ಪಾಂಡ್ಯ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯ ಪುಣೆ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ. ಆರೋಪ ಸಾಬೀತಾದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶವಿದೆ.

 

ನೀರಿನ ಸಂಪ್ʼಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು..!

ನೆಲಮಂಗಲ: ನೀರಿನ ಸಂಪಿಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಮೃತ ಮಗುವನ್ನು ಬ್ಯಾಡರಹಳ್ಳಿಯ ಅಣ್ಣಯ್ಯ ಮತ್ತು ಋತು ದಂಪತಿಯ ಮಗ ಚಿರಾಗ್ ಎಂದು ಗುರುತಿಸಲಾಗಿದೆ.

ದಂಪತಿ ಸಂಬಂಧಿಕರ ಮದುವೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಕಾರ್ ತೊಳೆಯಲು ಅಣ್ಣಯ್ಯ ನೀರಿನ ಸಂಪಿನ ಮುಚ್ಚಳ ತೆರೆದು ಮನೆಯೊಳಗೆ ಹೋಗಿದ್ದರು. ಈ ಸಮಯದಲ್ಲಿ ಹೊರಗೆ ಆಟವಾಡುತ್ತಿದ್ದ ಚಿರಾಗ್ ಅಜಾಗರೂಕತೆಯಿಂದ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ.

ಮನೆಯಿಂದ ಹೊರಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಜೆಟ್ʼನಲ್ಲಿ ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಸಂಬಂಧ ಮಾತನಾಡಿದ ಅವರು, ಈ ಬಜೆಟ್ ಗಮನಿಸಿದರೆ ಈ ಸರಕಾರದ ಆರ್ಥಿಕ- ಬೌದ್ಧಿಕ ದಿವಾಳಿತನವು ಕೂಡ ಪ್ರದರ್ಶನಗೊಂಡಿದೆ. ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ತನ್ನ ರಾಜಕೀಯ ಸಂಧ್ಯಾಕಾಲದಲ್ಲಿರುವ ಈ ಸಂದರ್ಭದಲ್ಲಿ 17ನೇ ಬಜೆಟ್ ಮಂಡಿಸಿದ್ದಾರೆ.

ಅವರಿಗೆ ಒಂದು ಸುವರ್ಣಾವಕಾಶ ಇತ್ತು. ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಆಧಾರದ ಮೇಲೆ ರಾಜ್ಯದ ಸಂಕಷ್ಟಗಳಿಗೆ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಅವಕಾಶ ಇತ್ತು. ಆದರೆ, ಈ ಬಜೆಟ್ ನೋಡಿದಾಗ ಅಸಹಾಯಕರಾಗಿ ಕೈಚೆಲ್ಲಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ವಿಶ್ಲೇಷಿಸಿದರು.

ಒಟ್ಟಾರೆಯಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದಾಯ ಸಂಗ್ರಹದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡುವ ಮೂಲಕ ಈ ನಾಡಿನ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಎಂದರು.

ಬಂಡೀಪುರ–ನಾಗರಹೊಳೆ ಸಫಾರಿ ಬಂದ್ ನಿರ್ಧಾರ ಸಮರ್ಥಿಸಿದ ಸಚಿವ ಖಂಡ್ರೆ

ಬೆಂಗಳೂರು/ಚಾಮರಾಜನಗರ: ಕಳೆದ ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಬಳಿಕ ಷರತ್ತುಬದ್ಧವಾಗಿ ಪುನರಾರಂಭ ಮಾಡಿರುವ ಕ್ರಮವನ್ನು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಸಫಾರಿ ವರ್ಷಗಳಿಂದ ನಡೆಯುತ್ತಿದೆ. ಯಾವುದೇ ಸಮೀಕ್ಷೆ ನಡೆಸದೇ ಏಕಾಏಕಿ ಸಫಾರಿಯನ್ನು ನಿಲ್ಲಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಖಂಡ್ರೆ, ಸಫಾರಿಯನ್ನು ಏಕಾಏಕಿ ನಿಲ್ಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ನವೆಂಬರ್‌ನಲ್ಲಿ 15 ದಿನಗಳ ಅವಧಿಯಲ್ಲಿ ಮೂರು ಅಮೂಲ್ಯ ಜೀವಹಾನಿ ಸಂಭವಿಸಿತ್ತು. ಜೊತೆಗೆ ಒಬ್ಬರು ಶಾಶ್ವತ ಅಂಗವಿಕಲರಾಗಿದ್ದರು. ಈ ನಡುವೆ ಹುಲಿಗಳು ಕಾಡಿನಿಂದ ಹೊರಬಂದು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಗಾಗಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಎಂದು ಹೇಳಿದರು.

ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಗಳು ಕೂಡ ಸಫಾರಿ ರಾತ್ರಿ ವೇಳೆಯವರೆಗೆ ನಡೆಯುತ್ತಿರುವುದು, ಹೆಚ್ಚಿನ ವಾಹನ ಸಂಚಾರ ಹಾಗೂ ಪ್ರವಾಸಿಗರ ಒತ್ತಡದಿಂದ ವನ್ಯಜೀವಿಗಳು ಅಶಾಂತಗೊಂಡು ಕಾಡಿನಿಂದ ಹೊರಬರುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿ ಸಫಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದವು ಎಂದು ಸಚಿವರು ತಿಳಿಸಿದರು.

ಈ ಮಧ್ಯೆ ಮತ್ತೊಂದು ಹುಲಿ ದಾಳಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಿಬ್ಬಂದಿ ಹಾಗೂ ವಾಹನಗಳನ್ನು ಕಾಡಿನಂಚಿನ ಗ್ರಾಮಗಳಲ್ಲಿ ನಿಗಾ ವಹಿಸಲು ಬಳಸಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.

ಅಮೆರಿಕ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ದಾಳಿ: ಓರ್ವ ಭಾರತೀಯ ಸಿಬ್ಬಂದಿ ಸಾವು!

ಬಾಗ್ದಾದ್: ಇರಾಕ್‌ನ ಬಸ್ರಾ ಸಮೀಪ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಇರಾನ್ ಸೂಸೈಡ್ ಬೋಟ್ ದಾಳಿ ನಡೆಸಿದ ಪರಿಣಾಮ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಮಾರ್ಚ್ 11ರಂದು ದಾಳಿಗೊಳಗಾದ “ಸಫೇಸಿಯಾ ವಿಷ್ಣು” ಎಂಬ ಟ್ಯಾಂಕರ್ ಅಮೆರಿಕ ಮೂಲದ ಸಫೇಸಿಯಾ ಟ್ರಾನ್ಸ್ಪೋರ್ಟ್ ಇಂಕ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.

ದಾಳಿಯ ಸಂದರ್ಭದಲ್ಲಿ ಹಡಗಿನಲ್ಲಿ ಇದ್ದ ಉಳಿದ 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಕ್ಷಿಸಲ್ಪಟ್ಟ ನಾವಿಕರೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾಕ್ ಕರಾವಳಿ ಬಳಿ ನಡೆದ ಈ ದಾಳಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಕನಿಷ್ಠ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಇದಲ್ಲದೆ ಯುಎಇ ಕರಾವಳಿಯಲ್ಲಿ ಒಂದು ಹಡಗಿನ ಮೇಲೆ ದಾಳಿ ನಡೆದಿದ್ದು, ಒಮಾನ್ ಉತ್ತರ ಭಾಗದ ಸಮೀಪ ಮತ್ತೊಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುಬೈ ವಾಯುವ್ಯ ಭಾಗದಲ್ಲೂ ಮತ್ತೊಂದು ಹಡಗು ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಈ ಮೊದಲು ಎಚ್ಚರಿಕೆ ನೀಡಿತ್ತು. ಈ ಬೆದರಿಕೆಯ ನಡುವೆಯೂ ಆ ಮಾರ್ಗದಲ್ಲಿ ಸೀಮಿತ ಪ್ರಮಾಣದ ಹಡಗು ಸಂಚಾರ ಮುಂದುವರೆದಿದೆ.

ಅಡುಗೆ ಅನಿಲ ಕೊರತೆ; ಸಂಸದರು ಸಂಸತ್ತಿನಲ್ಲಿ ಮಾತನಾಡಿ ಜನರಿಗೆ ನ್ಯಾಯ ಒದಗಿಸಲಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿಯ ಯಾವುದೇ ಸಂಸದರು ಬಾಯಿ ಬಿಡುತ್ತಿಲ್ಲ. ಹಳ್ಳಿ ಜನರು, ರೈತರು ಹಾಗೂ ಹೊಟೇಲ್ ಗಳಿಗೆ ಸೌದೆ ಒಲೆ ಬಳಸಲು ಕಟ್ಟಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ” ಎಂದರು.

“ಈ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹೊಣೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ವಿಚಾರದಲ್ಲಿ ಕೇಂದ್ರದ ಧೋರಣೆ ಖಂಡನೀಯ. ನಾಗರಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಮುಂದೆ ಪರಿಸ್ಥಿತಿ ಹೇಗಿರುತ್ತದೆಯೋ ಹೇಗೋ ಈಗಾಗಲೇ ಗ್ಯಾಸ್ ಚಾಲಿತ ಆಟೋ ಬಂದ್ ಆಗಿದ್ದು, ಸಮಸ್ಯೆ ಹೆಚ್ಚುತ್ತಿದೆ” ಎಂದು ತಿಳಿಸಿದರು.

ಬ್ರೇಕ್ ಫಾಸ್ಟ್ ಬಿಲ್ʼನಲ್ಲಿ “ಗ್ಯಾಸ್ ಸಪ್ಲೈ ಚಾರ್ಜ್”: ಹೋಟೆಲ್ ವಿರುದ್ಧ ಗ್ರಾಹಕರ ಆಕ್ರೋಶ

ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ನಗರದಲ್ಲಿ ಅಡುಗೆ ಅನಿಲದ ಕೊರತೆ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದೆ. ನಗರದಲ್ಲಿನ ಒಂದು ಹೋಟೆಲ್‌ನಲ್ಲಿ ಬ್ರೇಕ್‌ಫಾಸ್ಟ್ ಮಾಡಿದ ಗ್ರಾಹಕರಿಗೆ ಬಿಲ್‌ನಲ್ಲಿ ‘ಗ್ಯಾಸ್ ಸಪ್ಲೈ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಸೇರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಪಿಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು Mr. ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿ ಬ್ರೇಕ್‌ಫಾಸ್ಟ್ ಮಾಡಿದ್ದಾರೆ. ನಂತರ ನೀಡಿದ ಬಿಲ್‌ನಲ್ಲಿ ಗ್ಯಾಸ್ ಸಪ್ಲೈ ಚಾರ್ಜ್ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣ ಸೇರಿಸಿರುವುದನ್ನು ನೋಡಿ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಬಿಲ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಬಿಲ್‌ಗೆ ನೆಟ್ಟಿಗರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ದೊಡ್ಡ ಮಟ್ಟದ ಸ್ಕ್ಯಾಮ್ ಆಗಿದ್ದು, ಸಾರ್ವಜನಿಕರನ್ನು ಲೂಟಿ ಮಾಡುವ ಪ್ರಯತ್ನವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಬೈಲ್ʼನಲ್ಲಿ ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋ ಸಂಗ್ರಹವೂ ಅಪರಾಧ: ಹೈಕೋರ್ಟ್

ಬೆಂಗಳೂರು: ಮೊಬೈಲ್ ಫೋನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಡುವುದೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ) ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ. ಬಿನೋಜ್ (38) ಎಂಬಾತ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ಅರ್ಜಿದಾರರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುವುದಷ್ಟೇ ಅಲ್ಲ, ಪ್ರಸಾರವಾಗುವ ಸಾಮರ್ಥ್ಯ ಹೊಂದಿರುವ ಇಂತಹ ಚಿತ್ರಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಡುವುದೂ ಸಹ ಪೋಕ್ಸೋ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ ಎಂದು ಪೀಠ ಹೇಳಿದೆ.

ಅರ್ಜಿದಾರರು ತಮ್ಮ ಫೋನ್‌ನಿಂದ ಮಕ್ಕಳ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನು ಯಾರಿಗೂ ಕಳುಹಿಸಿಲ್ಲ ಎಂಬ ಕಾರಣಕ್ಕೆ ಅವರು ಅಪರಾಧಕ್ಕೆ ಹೊಣೆಗಾರರಾಗುವುದಿಲ್ಲ ಎಂದು ಅರ್ಥೈಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಪ್ರಕರಣ ಈಗಾಗಲೇ ವಿಚಾರಣಾ ಹಂತದಲ್ಲಿದ್ದು, ಪೂರ್ಣ ಪ್ರಮಾಣದ ವಿಚಾರಣೆಯ ಬಳಿಕವೇ ಅರ್ಜಿದಾರ ದೋಷಮುಕ್ತರಾಗಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಅಪರಾಧ ಪ್ರಕರಣವೊಂದರ ತನಿಖೆ ವೇಳೆ ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದರು. ಪರಿಶೀಲನೆ ವೇಳೆ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಆರೋಪಿಯ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 67(ಬಿ) ಹಾಗೂ ಪೋಕ್ಸೋ ಕಾಯ್ದೆ ಸೆಕ್ಷನ್ 15 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆ ಮುಂದುವರಿಸಲು ಅವಕಾಶ ನೀಡಿದೆ.

 

ಯುದ್ಧ ಅಂತ್ಯಕ್ಕೆ ಇರಾನ್ ಮೂರು ಷರತ್ತು: ಅಮೆರಿಕ–ಇಸ್ರೇಲ್ʼಗೆ ಪೆಜೆಶ್ಕಿಯಾನ್ ಸಂದೇಶ

0

ಟೆಹ್ರಾನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಯುದ್ಧ ಕೊನೆಗೊಳ್ಳಬೇಕಾದರೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಸ್ಪಷ್ಟಪಡಿಸಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯದ ದೇಶಗಳ ಮೇಲೆ ನಡೆಯುತ್ತಿರುವ ದಾಳಿಗಳು ನಿಲ್ಲಬೇಕಾದರೆ ಮೂರು ಪ್ರಮುಖ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮೊದಲನೆಯದಾಗಿ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ಎರಡನೆಯದಾಗಿ ಸಂಘರ್ಷದ ವೇಳೆ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಮೂರನೆಯದಾಗಿ ಭವಿಷ್ಯದಲ್ಲಿ ಮತ್ತೆ ಆಕ್ರಮಣ ನಡೆಸುವುದಿಲ್ಲ ಎಂಬ ದೃಢವಾದ ಅಂತರರಾಷ್ಟ್ರೀಯ ಖಾತರಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿಯೂ ಈ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಇರಾನ್ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಯೋನಿಸ್ಟ್ ಆಡಳಿತ ಮತ್ತು ಅಮೆರಿಕ ಆರಂಭಿಸಿದ ಈ ಯುದ್ಧವನ್ನು ಕೊನೆಗೊಳಿಸಲು ಇದೇ ಏಕೈಕ ಮಾರ್ಗ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮೊದಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಬೇಷರತ್ತಾಗಿ ಶರಣಾಗಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೆಜೆಶ್ಕಿಯಾನ್, ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯುವ ಕನಸು ಮಾತ್ರ ಎಂದು ತಿರುಗೇಟು ನೀಡಿದ್ದರು.

 

ಕಾರ್ಯಕ್ರಮಗಳಲ್ಲಿ ದೀಪ ಬೆಳಗುವುದೇಕೆ? ಇದರ ಹಿಂದಿರುವ ಆಧ್ಯಾತ್ಮಿಕ ಮಹತ್ವ ತಿಳಿಯಿರಿ!

0

ಹೊಸ ಕಚೇರಿ ಅಥವಾ ಅಂಗಡಿ ಉದ್ಘಾಟನೆ ವೇಳೆ ಸಾಮಾನ್ಯವಾಗಿ ಟೇಪ್ ಕತ್ತರಿಸುವ ಪದ್ಧತಿ ಕಂಡುಬರುತ್ತದೆ.

ಆದರೆ ಭಾರತೀಯ ಸಂಪ್ರದಾಯದಲ್ಲಿ ದೀಪ ಬೆಳಗುವ ಆಚರಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಯಾವುದೇ ಶುಭ ಕಾರ್ಯವನ್ನು ದೀಪ ಬೆಳಗುವುದರ ಮೂಲಕ ಆರಂಭಿಸುವುದು ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ.

“ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಜ್ಯೋತಿ ಜನಾರ್ದನಃ:
ದೀಪೋ ಹರತು ಮೇ ಪಾಪಾನಿ, ಸಂಧ್ಯಾ ದೀಪ ನಮೋಸ್ತುತೇ” ಎಂಬ ಶ್ಲೋಕದ ಪ್ರಕಾರ, ದೀಪವು ಪರಬ್ರಹ್ಮನ ಸ್ವರೂಪವಾಗಿದ್ದು ಪಾಪಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಭಗವಂತನಿಗೆ ನೈವೇದ್ಯ ಅರ್ಪಿಸುವುದೂ ಸಹ ಅಗ್ನಿಯ ಮುಖಾಂತರವೇ ನಡೆಯುತ್ತದೆ. ಅದಕ್ಕಾಗಿ ದೀಪವನ್ನು ದೇವರ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.

ದೀಪದ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿ ಉರಿಯುತ್ತದೆ. ಈ ಮೇಲ್ಮುಖ ಚಲನೆಯು ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅನಾದಿಕಾಲದಿಂದಲೂ ಯಾವುದೇ ಕಾರ್ಯಕ್ರಮವನ್ನು ದೀಪ ಬೆಳಗುವುದರಿಂದಲೇ ಆರಂಭಿಸುವ ಪದ್ಧತಿ ಇದೆ.

ಮನೆಗಳಲ್ಲಿ ಕೂಡ ಬೆಳಗಿನ ಪೂಜೆ ಮಾಡುವ ಮೊದಲು ದೀಪ ಹಚ್ಚುವುದು ರೂಢಿಯಾಗಿದೆ. ದೀಪಾವಳಿ ಹಬ್ಬದಲ್ಲಿ ಮನೆ ತುಂಬಾ ದೀಪಗಳನ್ನು ಬೆಳಗಿಸುವುದು ಶುಭದ ಸಂಕೇತವೆಂದು ನಂಬಲಾಗಿದೆ.

ದೀಪವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ. ದೀಪದ ಬೆಳಕು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ.

ಸಭೆ-ಸಮಾರಂಭಗಳಲ್ಲಿ ದೀಪ ಬೆಳಗುವುದು ಅಗ್ನಿದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಂಕೇತವಾಗಿದೆ. ಅಗ್ನಿ ಪಂಚಭೂತಗಳಲ್ಲಿ ಒಂದಾಗಿದ್ದು (ಆಕಾಶ, ಭೂಮಿ, ಅಗ್ನಿ, ನೀರು, ವಾಯು) ಪ್ರಕೃತಿಯ ಸಮತೋಲನವನ್ನು ಕಾಯುವ ಶಕ್ತಿಯಾಗಿದೆ.

ಸಣ್ಣ ಅಥವಾ ದೊಡ್ಡ ವ್ಯಾಪಾರ ಆರಂಭಿಸುವಾಗ ದೀಪ ಬೆಳಗಿದರೆ ಆ ಸ್ಥಳದಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ ಎಂಬ ನಂಬಿಕೆಯೂ ಇದೆ. ರೈತರು ಕೂಡ ಬಿತ್ತನೆ ಮಾಡುವ ಮೊದಲು ಭೂಮಿಯಲ್ಲಿ ದೀಪ ಹಚ್ಚಿ ಪ್ರಾರ್ಥಿಸಿದರೆ ಉತ್ತಮ ಫಸಲು ದೊರೆಯುತ್ತದೆ ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ.

 

error: Content is protected !!