Home Blog Page 46

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ತಮಗೆ ಸಮಾಧಾನಕರವಾಗಿಲ್ಲ: ಶಾಸಕ ಇಕ್ಬಾಲ್ ಹುಸೇನ್

ರಾಮನಗರ: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ತಮಗೆ ಸಮಾಧಾನಕರವಾಗಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಬಜೆಟ್ನಲ್ಲಿ ಸೂಕ್ತ ಅನುದಾನ ನೀಡಲಾಗಿಲ್ಲ ಎಂದು ಹೇಳಿದರು.

ಭಕ್ಷಿಕೆರೆ ಒಡೆದು ಉಂಟಾದ ಪ್ರವಾಹ ಸಮಸ್ಯೆ ಕುರಿತು ಫೋಟೋಗಳನ್ನು ತೋರಿಸಿ ಮಾಹಿತಿ ನೀಡಿದ್ದೆ. ಹಿಂದಿನ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಹೇಳಿದರು.

ರಸ್ತೆ, ಚರಂಡಿ ಮತ್ತು ನೀರಾವರಿ ಸಮಸ್ಯೆಗಳ ಕುರಿತು ನಾಲ್ಕೈದು ಬಾರಿ ಮನವಿ ಮಾಡಿದ್ದೆ. ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಕೇಳಿದ್ದರೂ ಮುಖ್ಯಮಂತ್ರಿ ಯಾವುದೇ ಕ್ರಮ ಕೈಗೊಂಡಿಲ್ಲ. ಪಾರದರ್ಶಕವಾಗಿ ಅನುದಾನ ದೊರೆಯುತ್ತದೆ ಎಂಬ ನಂಬಿಕೆ ಇತ್ತು, ಆದರೆ ಅದು ನೆರವೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿ ಅವರನ್ನೇ ಸಂಪರ್ಕಿಸಬೇಕಾಗಿದೆ. ಹಿಂದೆ ಅವರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆಯೂ ಆಗಿರುವುದರಿಂದ ಮುಂದೆಯೂ ಅವರ ಮೇಲೆಯೇ ಜವಾಬ್ದಾರಿ ಇರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಯುವತಿ ಆತ್ಮಹತ್ಯೆ ಪ್ರಕರಣ: ಜೆಡಿಎಸ್ ಮುಖಂಡೆ ಪುತ್ರನಿಗೆ ಜಾಮೀನು ಮಂಜೂರು!

0

ಕಾರವಾರ: ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೆಡಿಎಸ್ ಮುಖಂಡೆಯ ಪುತ್ರನಿಗೆ ಧಾರವಾಡ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.

ಆರೋಪಿ ಚಿರಾಗ್ ಕೊಠಾರಕರ್ಗೆ ನ್ಯಾಯಾಲಯ ಜಾಮೀನು ನೀಡಿದೆ. ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರನ್ನು ಜನವರಿ 29ರಂದು ಕದ್ರಾ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಜೈಲಿನಲ್ಲಿ ಇದ್ದರು.

ರಿಶೇಲ್ ಡಿಸೋಜಾ ಎಂಬ ಯುವತಿಯನ್ನು ಚಿರಾಗ್ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಜನವರಿ 10ರಂದು ಕದ್ರಾದ ಕೆಪಿಸಿ ಕಾಲೊನಿಯಲ್ಲಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ನಮ್ಮ ಪುತ್ರಿಗೆ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಚಿರಾಗ್ ವಿರುದ್ಧ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.

ಚಿರಾಗ್ ಬಂಧಿಸುವಂತೆ ಆಗ್ರಹಿಸಿ ರಿಶೇಲ್ ಕುಟುಂಬದವರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ನಮ್ಮ ಜೀವನದ ನಿಜವಾದ ಗುರು ಎಂದರೆ ನಾವೇ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಪ್ರತಿಯೊಬ್ಬರೂ ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಜೀವನದ ನಿಜವಾದ ಗುರು ಎಂದರೆ ನಾವೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಮಹಿಳಾ ಅಧಿಕಾರಿಗಳ ಮತ್ತು ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರು ಚಾಲನೆ ನೀಡಿದರು.

ಪ್ರತಿಯೊಬ್ಬರೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು, ನಾನು ಅರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತೇನೆ. ಕಳೆದ 25 ವರ್ಷಗಳಿಂದ ನಿರಂತರವಾಗಿ ಯೋಗ, ಏರೋಬಿಕ್ಸ್‌ ಮಾಡಿಕೊಂಡು ಬರುತಿದ್ದೇನೆ. ನಾನು ಇದುವರೆಗೂ 19 ಯೋಗ ಶಿಬಿರಗಳಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ರಾಮದೇವ್‌ ಬಾಬಾ ಅವರ 11 ಯೋಗ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ವಯಸ್ಸಿಗಿಂತ ಆರೋಗ್ಯವೇ ನಮಗೆ ಮುಖ್ಯ. ವಯಸ್ಸಾದಾಗ ನಮ್ಮನ್ನು ಮಕ್ಕಳು, ನೋಡಿಕೊಳ್ಳುತ್ತಾರೆ ಅಂತ ನಾವು ಕೂರಬಾರದು. ಆದರೆ ಇಂದು ಆ ದೃಷ್ಟಿಕೋನವೇ ಬದಲಾಗಿದೆ. ನಾವು ಸದೃಢವಾಗಿ ಇರುವವರೆಗೂ ನಮ್ಮನ್ನು ಎಲ್ಲರೂ ನೋಡಿಕೊಳ್ಳುತ್ತಾರೆ. ಆದರೆ, ನಾವು ಅವರಿಗೆ ಭಾರ ಆದಾಗ ನಮ್ಮನ್ನು ನೋಡಿಕೊಳ್ಳಲು ಬೇಜಾರು ಮಾಡುತ್ತಾರೆ. ಹೀಗಾಗಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಸದಾ‌ ಒತ್ತಡದಿಂದ‌ ಕಾರ್ಯನಿರ್ವಹಿಸುವ ಇಲಾಖೆಯ ಸಿಬ್ಬಂದಿ ವರ್ಗದವರಿಗೆ‌ ಇಂತಹ ಕ್ರೀಡಾಸ್ಪರ್ಧೆಗಳು ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಹಾಗೂ ಬೌದ್ಧಿಕ ಮಟ್ಟ ವೃದ್ಧಿ ಆಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂಬುದೇ ನನ್ನ ಆಶಯ ಎಂದು ತಿಳಿಸಿದರು.

PG ಮೆಡಿಕಲ್ ಕೌನ್ಸೆಲಿಂಗ್ ಫೈನಲ್ ರೌಂಡ್: 39 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ – KEA

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದ್ದು, ಒಟ್ಟು 39 ಮಂದಿಗೆ ಸೀಟು ದೊರೆತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ಸುತ್ತಿನ ಸೀಟು ಹಂಚಿಕೆಯ ನಂತರವೂ ಇನ್ನೂ 744 ಸೀಟುಗಳು ಖಾಲಿ ಉಳಿದಿವೆ ಎಂದು ವಿವರಿಸಿದ್ದಾರೆ. ಇದುವರೆಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಕೋರ್ಸ್ ಶುಲ್ಕದ ಡಿಡಿ ಅಥವಾ ಚೆಕ್ ಸಲ್ಲಿಸಿ ಆಪ್ಷನ್ ದಾಖಲಿಸಲು ಇಂದು ಇಡೀ ದಿನ ಅವಕಾಶ ನೀಡಲಾಗಿತ್ತು. ಒಟ್ಟು 55 ಮಂದಿ ಡಿಡಿ ಅಥವಾ ಚೆಕ್ ಸಲ್ಲಿಸಿದ್ದರು.

ಆದರೆ ಅವರಲ್ಲಿ 41 ಮಂದಿ ಮಾತ್ರ ಆಪ್ಷನ್ ದಾಖಲಿಸಿದ್ದರಿಂದ ಅವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೀಟು ಪಡೆದ ಅಭ್ಯರ್ಥಿಗಳು ಮಾರ್ಚ್ 12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ ತೋಟಕ್ಕೆ ತೆರಳಿದ್ದ ವ್ಯಕ್ತಿ ಸಾವು

0

ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮತ್ತೊಂದು ಜೀವ ಬಲಿ ಪಡೆದಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿ ಪ್ರದೇಶದಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಗಣಪತಿ (49) ಎಂಬ ಬೆಳೆಗಾರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಡಹಗಲೇ ಕಾಡಾನೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.

ಇತ್ತೀಚೆಗೆ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಕಾಡಾನೆ ದಾಳಿಗೆ ಬಲಿಯಾಗಿದ್ದರೆ, ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಲಜಾಕ್ಷಿ ಕೂಡ ಮೃತಪಟ್ಟಿದ್ದರು.

ಸತತವಾಗಿ ನಡೆಯುತ್ತಿರುವ ಈ ದಾಳಿಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮನೆಮುಂದೆ ನಿಲ್ಲಿಸಿದ್ದ ಗ್ಯಾಸ್ ಸರಬರಾಜು ವಾಹನದಿಂದ ಸಿಲಿಂಡರ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

0

ರಾಮನಗರ: ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆಮುಂದೆ ನಿಲ್ಲಿಸಿದ್ದ ಗ್ಯಾಸ್ ಸರಬರಾಜು ವಾಹನದಿಂದ ಸಿಲಿಂಡರ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹೇಶ್ ನಾಯಕ್ (19) ಮತ್ತು ಗೋವಿಂದರಾಜು (20) ಎಂದು ಗುರುತಿಸಲಾಗಿದೆ. ಆರೋಪಿಗಳು ಗ್ಯಾಸ್ ಸರಬರಾಜು ವಾಹನದಿಂದ 8 ಸಿಲಿಂಡರ್ ಕದ್ದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತರಿಂದ 8 ಗ್ಯಾಸ್ ಸಿಲಿಂಡರ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗೋಕರ್ಣ ಬೀಚ್‌ನಲ್ಲಿ ಗಾಂಜಾ ಸೇವನೆ: ಬೆಂಗಳೂರು ಮೂಲದ ಇಬ್ಬರು ಐಟಿ ಉದ್ಯೋಗಿಗಳ ಬಂಧನ

ಕಾರವಾರ: ಗಾಂಜಾ ಸೇವಿಸಿ ಗೋಕರ್ಣ ಕಡಲ ತೀರದಲ್ಲಿ ಅಮಲಿನಲ್ಲಿ ಅಲೆದಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಐಟಿ ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಎಂ.ಎಸ್. ಪವನ್ (28) ಮತ್ತು ರಾಘು ಸೆಲ್ವರಂಗನ್ (30) ಎಂದು ಗುರುತಿಸಲಾಗಿದೆ. ಗೋಕರ್ಣದ ರುದ್ರಪಾದದ ಕರಿಯಪ್ಪನ ಕಟ್ಟೆ ಬಳಿ ಇರುವ ಬ್ಲೂ ಪೀನ್ ಬೀಚ್ ಸ್ಟೇಟ್ ರೆಸಾರ್ಟ್ ಎದುರಿನ ಸಮುದ್ರ ತೀರದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿದ ಖದೀಮರು

ಚಾಮರಾಜನಗರ: ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣಗಳು ದಿನೇ ದಿನೇ ಮತ್ತೆ ಹೆಚ್ಚಾಗಿವೆ. ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿರುವ ಬಸವೇಶ್ವರ ಹಾಗೂ ಮಾರಮ್ಮ ದೇವಸ್ಥಾನಗಳ ಬಾಗಿಲುಗಳನ್ನು ಮುರಿದು ಕಳ್ಳರು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ತಡರಾತ್ರಿ ನಡೆದ ಈ ಕಳ್ಳತನದಲ್ಲಿ ಸುಮಾರು 4 ಕೆ.ಜಿ ಬೆಳ್ಳಿ ಹಾಗೂ 30 ಗ್ರಾಂ ಚಿನ್ನಾಭರಣ ಕಳ್ಳರ ಕೈಗೆ ಸಿಕ್ಕಿದ್ದು, ಬಳಿಕ ಅವರು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ಮೊದಲು ಸಿಸಿಟಿವಿ ಕ್ಯಾಮೆರಾದ ಹಾರ್ಡಿಸ್ಕ್ ತೆಗೆದುಕೊಂಡು ಹೋಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನ ನಡೆದ ಘಟನೆ ಇನ್ನೂ ಮಾಸುವ ಮುನ್ನವೇ ಮತ್ತೆ ಕಳ್ಳರು ಕೈಚಳಕ ತೋರಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇದೀಗ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ಪರಿಶೀಲನೆ ಮುಂದುವರಿದಿದೆ.

ಶೀಘ್ರದಲ್ಲೇ ರಾಜ್ಯದಲ್ಲಿ 56 ಸಾವಿರ ಖಾಲಿ ಹುದ್ದೆಗಳ ಭರ್ತಿ: ಸಚಿವ ಬೋಸರಾಜು

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಸುಮಾರು 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವ ಬೋಸರಾಜು ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಈ ಕುರಿತು ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಸುಮಾರು 2.84 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಒಳಮೀಸಲಾತಿ ಹಾಗೂ ಕೋರ್ಟ್ ವಿಚಾರಗಳನ್ನು ನೆಪವನ್ನಾಗಿ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ವಿಳಂಬಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಸಚಿವ ಬೋಸರಾಜು, ಒಟ್ಟು 56,432 ಹುದ್ದೆಗಳ ನೇಮಕಾತಿಗೆ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿಯೇ ನಿರ್ಧಾರವಾಗಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದರು.

371ಜೆ ನಿಯಮದ ಪ್ರಕಾರವೂ ನೇಮಕಾತಿ ನಡೆಯಲಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದರೆ ಈ ತಿಂಗಳಲ್ಲೇ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಷ್ಟ್ರಧ್ವಜ ಅವಮಾನ ಆರೋಪ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು

0

ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ರಾಷ್ಟ್ರಧ್ವಜವನ್ನು ಬಳಸಿದ ರೀತಿಯೇ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 8ರಂದು ಟಿ20 ವಿಶ್ವಕಪ್ ಫೈನಲ್‌ ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಪಾಂಡ್ಯ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಹಿನ್ನೆಲೆಯಲ್ಲಿ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ. ಸಂಭ್ರಮಾಚರಣೆಯ ವೇಳೆ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (1971) ಪ್ರಕಾರ ರಾಷ್ಟ್ರಧ್ವಜವನ್ನು ವಸ್ತ್ರದಂತೆ ಬಳಸಬಾರದು ಹಾಗೂ ಅದು ನೆಲಕ್ಕೆ ತಾಗಬಾರದು ಎಂಬ ನಿಯಮವಿದೆ. ಪಾಂಡ್ಯ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯ ಪುಣೆ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ. ಆರೋಪ ಸಾಬೀತಾದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶವಿದೆ.

 

error: Content is protected !!