HomeGadag Newsಸಭಾಧ್ಯಕ್ಷ ಸ್ಥಾನ ಕ್ಷೇತ್ರದ ಸೇವೆಗೆ ಅಡ್ಡಿಯಾಗದು: ಜಿ.ಎಸ್. ಪಾಟೀಲ

ಸಭಾಧ್ಯಕ್ಷ ಸ್ಥಾನ ಕ್ಷೇತ್ರದ ಸೇವೆಗೆ ಅಡ್ಡಿಯಾಗದು: ಜಿ.ಎಸ್. ಪಾಟೀಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ರೋಣ ವಿಧಾನಸಭಾ ಕ್ಷೇತ್ರದ ಮುಂಡರಗಿ ತಾಲೂಕಿನ ಡಂಬಳ ಹೋಬಳಿಗೆ ಆಗಮಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಕದಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಸ್. ಪಾಟೀಲ, ಸಭಾಧ್ಯಕ್ಷ ಸ್ಥಾನದ ಜವಾಬ್ದಾರಿ ದೊರೆತಿದ್ದರೂ ರೋಣ ವಿಧಾನಸಭಾ ಕ್ಷೇತ್ರದ ಜನರ ಸೇವೆಯಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

ನಾನು ಸಭಾಧ್ಯಕ್ಷನಾಗಿದ್ದರೂ ಕ್ಷೇತ್ರದ ಜನರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ನನ್ನ ನಿಕಟ ಸಂಪರ್ಕ ನಿರಂತರವಾಗಿರಲಿದೆ. ಸಭಾಧ್ಯಕ್ಷ ಸ್ಥಾನ ಕ್ಷೇತ್ರದ ಜನರ ಸೇವೆಗೆ ಅಡ್ಡಿಯಾಗುವುದಿಲ್ಲ. ಅದೇ ರೀತಿ, ನನ್ನಿಂದಲೂ ಸಭಾಧ್ಯಕ್ಷ ಸ್ಥಾನದ ಘನತೆಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ತಾವು ಈ ಹಂತಕ್ಕೆ ಬರಲು ಕ್ಷೇತ್ರದ ಜನರು, ಕಾರ್ಯಕರ್ತರು ಹಾಗೂ ಹಿರಿಯರ ಪ್ರೀತಿ, ಸಹಕಾರ ಮತ್ತು ಮಾರ್ಗದರ್ಶನವೇ ಪ್ರಮುಖ ಕಾರಣವಾಗಿದೆ. ತಮಗೆ ದೊರೆತಿರುವ ಈ ಮಹತ್ವದ ಗೌರವವನ್ನು ಉಳಿಸಿಕೊಂಡು ಗದಗ ಜಿಲ್ಲೆ ಹಾಗೂ ರೋಣ ಕ್ಷೇತ್ರಕ್ಕೆ ಇನ್ನಷ್ಟು ಗೌರವ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ದ್ವೇಷ, ಆವೇಶವಿಲ್ಲದೆ ಸದನ ನಡೆಸುವ ಜವಾಬ್ದಾರಿ

ವಿಧಾನಸಭೆಯ ಕಲಾಪವನ್ನು ಯಾವುದೇ ದ್ವೇಷ ಅಥವಾ ಆವೇಶಕ್ಕೆ ಅವಕಾಶ ನೀಡದೆ ಸುಸೂತ್ರವಾಗಿ ನಡೆಸುವುದು ಸಭಾಧ್ಯಕ್ಷನ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿ.ಎಸ್. ಪಾಟೀಲ ಹೇಳಿದರು.

ಸಭಾಧ್ಯಕ್ಷ ಸ್ಥಾನದಲ್ಲಿದ್ದರೂ ಜನರೊಂದಿಗೆ ಒಡನಾಟ ಮುಂದುವರಿಸುವುದರ ಜತೆಗೆ ಆ ಸ್ಥಾನಕ್ಕೆ ಇರುವ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕಾಗಿದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಕ್ಷೇತ್ರದ ಜನರು ಸಂಪೂರ್ಣ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಮಂತ್ರಿ ಸ್ಥಾನದ ಜವಾಬ್ದಾರಿ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಜನರಿಗೆ ಹೆಚ್ಚಿನ ಅರಿವಿದೆ. ಆದರೆ ಸಭಾಧ್ಯಕ್ಷ ಸ್ಥಾನದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಹಲವರಿಗೆ ಪೂರ್ಣ ಮಾಹಿತಿ ಇಲ್ಲ. ಇದರಿಂದ ಇನ್ನು ಮುಂದೆ ತಾವು ಕ್ಷೇತ್ರದ ಜನರ ಕೈಗೆ ಸುಲಭವಾಗಿ ಸಿಗುವುದಿಲ್ಲ ಎಂಬ ಪ್ರೀತಿಯ ಆತಂಕ ಕೆಲವರಲ್ಲಿದೆ ಎಂದು ಹೇಳಿದರು.

ಆದರೆ, ಕೆಲವೇ ತಿಂಗಳುಗಳಲ್ಲಿ ಸಭಾಧ್ಯಕ್ಷ ಸ್ಥಾನದ ಜವಾಬ್ದಾರಿ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಎಲ್ಲರಿಗೂ ಸ್ಪಷ್ಟ ಅರಿವಾಗಲಿದೆ. ಕ್ಷೇತ್ರದ ಜನರೊಂದಿಗಿನ ಸಂಬಂಧ ಮತ್ತು ಸಂಪರ್ಕದಲ್ಲಿ ಯಾವುದೇ ಅಂತರ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದರು.

ಸಭಾಧ್ಯಕ್ಷರಾದ ಬಳಿಕ ಡಂಬಳ ಹೋಬಳಿ ಭಾಗಕ್ಕೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕದಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಿ.ಎಸ್. ಪಾಟೀಲ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಹೂಮಾಲೆ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರೋಣ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ) ಜಿ. ಪಾಟೀಲ, ಮರಿಯಪ್ಪ ಸಿದ್ದಣ್ಣವರ, ಮಹೇಶ ಗಡಗಿ, ಸೋಮಣ್ಣ ಗುಡ್ಡದ, ಕುಬೇರಪ್ಪ ಕೊಳ್ಳಾರ, ರೇವಣಸಿದ್ದ ಕರಿಗಾರ, ಕಳ್ಳೆಪ್ಪ ಪೂಜಾರ, ಬಸವರಡ್ಡಿ ಬಂಡಿಹಾಳ, ಬಾಬುಸಾಬ ಮೂಲಿಮನಿ, ನೂರಹಮ್ಮದ ಸರಕಾವಾಸ, ಕನಕಮೂರ್ತಿ ನರೇಗಲ್ಲ, ಮಲ್ಲಿಕಾರ್ಜುನ ಕಾರಪುಡಿ, ಜಯಮ್ಮ ಯಲಭೋವಿ, ಮಹಾದೇವಮ್ಮ ಕೊಳ್ಳಾರ, ಜ್ಯೋತಿ ಕುರಿ, ಕುಬೇರ ನಾಯ್ಕ, ನಾಗರಾಜ ಸಜ್ಜನ, ಸುರೇಶ ಗಡಗಿ, ಮಾರುತಿ ಎಮ್ಮಿ, ಕಾಶಣ್ಣ ಅಳವಂಡಿ, ಹನಮಂತ ಗದಗಿನ, ಮಲ್ಲಿಕಾರ್ಜುನ ಪ್ಯಾಟಿ, ಬಶೀರಹಮ್ಮದ ಒಡ್ಡಟ್ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಸಭಾಧ್ಯಕ್ಷ ಸ್ಥಾನ ನನಗೆ ದೊರೆತಿರುವುದು ದೊಡ್ಡ ಜವಾಬ್ದಾರಿಯಾಗಿದೆ. ಆದರೆ ಈ ಜವಾಬ್ದಾರಿ ನನ್ನ ಕ್ಷೇತ್ರದ ಜನರ ಸೇವೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಜನರೊಂದಿಗೆ ನಿಕಟ ಸಂಪರ್ಕ ಉಳಿಸಿಕೊಂಡು, ಸಭಾಧ್ಯಕ್ಷ ಸ್ಥಾನದ ಘನತೆಯನ್ನು ಕಾಪಾಡುತ್ತಲೇ ಗದಗ ಜಿಲ್ಲೆ ಮತ್ತು ರೋಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

– ಜಿ.ಎಸ್. ಪಾಟೀಲ, ಕರ್ನಾಟಕ ವಿಧಾನಸಭಾಧ್ಯಕ್ಷರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img