Home Blog Page 480

ಬಿಡದಿಯ ತೋಟದಲ್ಲಿ ಕುಟುಂಬದೊಂದಿಗೆ ಸಂಕ್ರಾಂತಿ ಆಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ!

0

ರಾಮನಗರ:- ಬಿಡದಿಯ ತೋಟದಲ್ಲಿ ಇಂದು (ಗುರುವಾರ) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆತ್ಮೀಯವಾಗಿ ಆಚರಿಸಿದರು.

ಪರಂಪರೆಯ ಆಚರಣೆಗಳೊಂದಿಗೆ ಸಂಕ್ರಾಂತಿಯ ಸಂಭ್ರಮವನ್ನು ಹಂಚಿಕೊಂಡ ಅವರು, ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯುವ ಮೂಲಕ ಹಬ್ಬದ ಮಹತ್ವವನ್ನು ಸಾರಿದರು. ಈ ವೇಳೆ ಸಂಪ್ರದಾಯಬದ್ಧ ವಾತಾವರಣದಲ್ಲಿ ಹಬ್ಬದ ಸಡಗರ ಮನೆಮಾಡಿದ್ದು, ಸಂಕ್ರಾಂತಿಯ ಸಂತಸ ಎಲ್ಲರ ಮುಖದಲ್ಲೂ ಕಾಣಿಸಿಕೊಂಡಿತು.

ಕುಡಿದ ಮತ್ತಲ್ಲಿ ತಂದೆಯನ್ನೇ ಹೊಡೆದು ಕೊಲೆ‌ ಮಾಡಿದ ಪುತ್ರ!

0

ಕೊಡಗು:- ಜಿಲ್ಲೆಯ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ದೇವಯ್ಯನ ತೋಟದ ಮನೆಯಲ್ಲಿ ಕುಡಿದ ಮತ್ತಿನಲ್ಲಿ ಅಸ್ಸಾಂ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದಿದ್ದು, ಈ ವೇಳೆ ತಂದೆಯನ್ನೇ ಹೊಡೆದು ಪುತ್ರ ಕೊಲೆ‌ ಮಾಡಿರುವಂತಹ ಘಟನೆ ಜರುಗಿದೆ.

ಡಿ.‌12 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೂನೋ (60) ಕೊಲೆಯಾದ ವ್ಯಕ್ತಿ. ಪ್ರಶಾಂತ್ (28) ಕೊಲೆ ಮಾಡಿದ ಪುತ್ರ. ಕೊಲೆ‌ ಬಳಿಕ ಎಸ್ಟೇಟ್ ಮಾಲಿಕನಿಂದ ಮಡಿಕೇರಿಯ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಶಾಂತ್ ಮತ್ತು ಎಸ್ಟೇಟ್ ಮಾಲಿಕ ಮಂಡಿ ದೇವಯ್ಯ(65)ರನ್ನು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಕ್ರಾಂತಿ ದಿನವೇ ದುರಂತ; ಕ್ವಾರಿಯಲ್ಲಿ ಮುಳುಗಿ ಇಬ್ಬರು ಬಾಲಕರು ನೀರುಪಾಲು!

0

ಬಾಗಲಕೋಟೆ:- ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಮನೋಜ್ (17) ಹಾಗೂ ಪ್ರಮೋದ್ ಬಡಿಗೇರ (17) ಎಂದು ಗುರುತಿಸಲಾಗಿದ್ದು, ಇಬ್ಬರೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಾಲೇಜಿಗೆ ರಜೆ ಇದ್ದ ಕಾರಣ, ಸ್ನಾನಕ್ಕಾಗಿ ಕ್ವಾರಿಯ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ನೀರಿನಲ್ಲಿ ಮುಳುಗುತ್ತಿದ್ದ ಇನ್ನೊಬ್ಬ ಬಾಲಕನನ್ನು ಸ್ಥಳೀಯ ವ್ಯಕ್ತಿಯೊಬ್ಬರು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ. ಆದರೆ ಮನೋಜ್ ಹಾಗೂ ಪ್ರಮೋದ್ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾದರೂ, ವೈದ್ಯರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕಕ್ಕೆ ಮುಳುವಾದ ಕನ್ನಡಿಗ ಸಮರ್ಥ್; ಸೆಮಿಫೈನಲ್‌ನಲ್ಲಿ ಮಯಾಂಕ್ ಪಡೆಗೆ ಸೋಲು

0

ಬೆಂಗಳೂರು ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕರ್ನಾಟಕ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತೋ, ಅದೇ ವಿದರ್ಭ ತಂಡ ಈ ಬಾರಿ ಸೆಮಿಫೈನಲ್‌ನಲ್ಲಿ ಕರ್ನಾಟಕದ ಕನಸಿಗೆ ಬ್ರೇಕ್ ಹಾಕಿದೆ. ಇನ್ನೊಂದು ವಿಶೇಷ ಅಂಶವೆಂದರೆ, ಕರ್ನಾಟಕದ ಸೋಲಿಗೆ ಪ್ರಮುಖ ಕಾರಣನಾದವರು ಕರ್ನಾಟಕದವರೇ ಆಗಿರುವ ಆರ್. ಸಮರ್ಥ್. ಈ ಆವೃತ್ತಿಯಲ್ಲಿ ವಿದರ್ಭ ಪರ ಆಡುತ್ತಿರುವ ಸಮರ್ಥ್, ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆ ಎದುರಾಯಿತು. ಟೂರ್ನಿ ಪೂರ್ತಿ ಉತ್ತಮ ಫಾರ್ಮ್‌ನಲ್ಲಿದ್ದ ನಾಯಕ ಮಯಾಂಕ್ ಅಗರ್ವಾಲ್ (9) ಹಾಗೂ ದೇವದತ್ ಪಡಿಕ್ಕಲ್ (4) ಸಂಪೂರ್ಣವಾಗಿ ವಿಫಲರಾದರು. ಪರಿಣಾಮ, ತಂಡ 20 ರನ್‌ಗಳಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇನ್ನಿಂಗ್ಸ್ ನಿಭಾಯಿಸಿದ ಕರುಣ್ ನಾಯರ್ 76 ರನ್‌ಗಳ ಭರ್ಜರಿ ಆಟ ಆಡಿದರೂ ಶತಕ ತಲುಪಲು ಸಾಧ್ಯವಾಗಲಿಲ್ಲ. ಧೃವ್ 28 ರನ್‌ಗಳಿಗೆ ಔಟಾದರು. ಶ್ರೀಜಿತ್ 54 ರನ್‌ಗಳೊಂದಿಗೆ ತಂಡದ ಎರಡನೇ ಗರಿಷ್ಠ ಸ್ಕೋರರ್ ಆಗಿದರು. ಶ್ರೇಯಸ್ ಗೋಪಾಲ್ 36 ಮತ್ತು ಮನೋಹರ್ 26 ರನ್‌ಗಳ ಕೊಡುಗೆ ನೀಡಿದರು. ಕೊನೆಯ ಓವರ್‌ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಕರ್ನಾಟಕ 50 ಓವರ್‌ಗಳಲ್ಲಿ 280 ರನ್ ಕಲೆಹಾಕಿತು.

281 ರನ್‌ಗಳ ಗುರಿ ಬೆನ್ನಟ್ಟಿದ ವಿದರ್ಭ ತಂಡಕ್ಕೂ ಆರಂಭದಲ್ಲಿ ಅಡೆತಡೆ ಎದುರಾಯಿತು. ಕೇವಲ 9 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ, ಬಳಿಕ ಅಮನ್ ಮತ್ತು ಧೃವ್ ಜೋಡಿ ತಂಡವನ್ನು ಶತಕದ ಗಡಿ ದಾಟಿಸಿತು. ಧೃವ್ 47 ರನ್‌ಗಳಿಗೆ ಔಟಾದರೆ, ಅಮನ್ 128 ರನ್‌ಗಳ ಅಸಾಧಾರಣ ಇನ್ನಿಂಗ್ಸ್ ಆಡಿ ಗೆಲುವು ಖಚಿತಪಡಿಸಿದರು. ಅವರ ಜೊತೆ ಆರ್. ಸಮರ್ಥ್ ಅಜೇಯ 76 ರನ್‌ಗಳ ಇನ್ನಿಂಗ್ಸ್ ಆಡುತ್ತಾ ವಿದರ್ಭವನ್ನು ಫೈನಲ್‌ಗೆ ಕರೆದೊಯ್ದರು.

ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಪಲ್ಸರ್ ಬೈಕ್; ಯುವಕ-ಯುವತಿ ಜಸ್ಟ್ ಮಿಸ್

0

ಮಂಡ್ಯ: ಚಲಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿದ ಪರಿಣಾಮ ಪಲ್ಸರ್ ಬೈಕ್ ಹೊತ್ತಿ ಉರಿದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿ ಜರುಗಿದೆ.

ಹಾಡ್ಲಿ ಸರ್ಕಲ್‌ನ ಸುದೀಪ್ ಎಂಬುವವರಿಗೆ ಸೇರಿದ ಪಲ್ಸರ್ ಬೈಕ್ ಚಾಲನೆಯಲ್ಲಿದ್ದಾಗಲೇ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಳ್ಳಲು ಆರಂಭಿಸಿದೆ. ಕೂಡಲೇ ಎಚ್ಚೆತ್ತ ಯುವಕ–ಯುವತಿ ತಕ್ಷಣ ಬೈಕ್‌ನಿಂದ ಇಳಿದಿದ್ದಾರೆ. ಕೂಡಲೇ ಬೈಕ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಈ ಘಟನೆ ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟಾಕಿ ಕಿಡಿಯಿಂದ ಹೊತ್ತಿದ ಬ್ಯಾನರ್‌ಗೆ ಬೆಂಕಿ; ಕೂದಲೆಳೆಯಲ್ಲಿ ತಪ್ಪಿದ ದುರಂತ!

0

ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಲು ಸಿಡಿಸಿದ ಪಟಾಕಿಯ ಕಿಡಿ ತಗುಲಿ, ನಗರದ ಚಿಕ್ಕಪೇಟೆ ಪ್ರದೇಶದಲ್ಲಿ ಅಳವಡಿಸಿದ್ದ ಬ್ಯಾನರ್‌ ಒಂದು ಹೊತ್ತಿ ಉರಿದ ಘಟನೆ ನಡೆದಿದೆ.

ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸಂಕ್ರಾಂತಿ ಹಬ್ಬ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ರಸ್ತೆಯ ಉದ್ಘಾಟನೆ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದ ವೇಳೆ ಸ್ಥಳೀಯರು ಪಟಾಕಿ ಹಚ್ಚುವ ಮೂಲಕ ಸ್ವಾಗತಿಸಿದ್ದಾರೆ. ಈ ಸಂದರ್ಭ ಪಟಾಕಿಯ ಕಿಡಿ ಬ್ಯಾನರ್‌ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಕೆಆರ್ ಮಾರ್ಕೆಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತು ಕಾರ್ಯಕ್ರಮದ ಆಯೋಜಕ ರಾಘವ್ ಪ್ರತಿಕ್ರಿಯಿಸಿ, ಸಂಜೆ 6.30ರ ಸುಮಾರಿಗೆ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತೆರಳಿದ್ದು, ಎಲ್ಲವೂ ಸುಗಮವಾಗಿ ನಡೆದಿದೆ. ಸಣ್ಣ ಮಟ್ಟದ ಘಟನೆ ನಡೆದಿದ್ದು, ಈಗ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ| ವಿಷವಿಕ್ಕಿ ಚಿರತೆ ಹತ್ಯೆ ಕೇಸ್; ಆರೋಪಿ ಅರೆಸ್ಟ್!

0

ಚಾಮರಾಜನಗರ:- ತಾಲೂಕಿನ ಹೊಮ್ಮ–ಬಸವರಾಜಪುರ ಬಳಿ ಚಿರತೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದೊರೆಸ್ವಾಮಿಯನ್ನು ಬಂಧಿಸಿದ್ದಾರೆ.

ಚಿರತೆಯು, ಆರೋಪಿಗೆ ಸೇರಿದ ನಾಯಿ ಹಾಗೂ ಜಾನುವಾರುಗಳನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ, ಕರುವಿನ ಮಾಂಸಕ್ಕೆ ಕಾರ್ಬೋ ಪ್ಲೋರಾನ್ ಎಂಬ ಕ್ರಿಮಿನಾಶಕ ಬೆರೆಸಿ ವಿಷಪ್ರಶಾನ ಮಾಡಲಾಗಿದೆ ಎನ್ನಲಾಗಿದೆ. ವಿಷ ಬೆರೆಸಿದ ಮಾಂಸ ತಿಂದ ಪರಿಣಾಮ ಚಿರತೆ ಸಾವಿಗೀಡಾಗಿದ್ದು, ಘಟನೆಯ 24 ಗಂಟೆಗಳಲ್ಲಿ ಬಿಆರ್‌ಟಿ ಅರಣ್ಯ ಸಿಬ್ಬಂದಿ ಹಾಗೂ ಸಂತೇಮರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ತನಿಖೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಲಕ್ಕುಂಡಿಯಲ್ಲಿ ನಾಳೆಯಿಂದ ಪೂರ್ಣ ಪ್ರಮಾಣದ ಉತ್ಖನನ ಆರಂಭ – ವಿಶ್ವ ಪಾರಂಪರಿಕ ತಾಣಕ್ಕೆ ಸರ್ಕಾರ ಸಿದ್ಧತೆ: ಸಚಿವ ಎಚ್.ಕೆ. ಪಾಟೀಲ್

0

ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ಪೂರ್ಣ ಪ್ರಮಾಣದ ಉತ್ಖನನ ಕಾರ್ಯ ಆರಂಭವಾಗಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
“ಉತ್ಖನನಕ್ಕೆ ಬಿಸಿಲು ಅಗತ್ಯ. ಮಳೆಯಿದ್ದರೆ ಕಾರ್ಯಕ್ಕೆ ಅಡಚಣೆ ಆಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ನಾಳೆಯಿಂದ ಪೂರ್ಣ ಪ್ರಮಾಣದ ಉತ್ಖನನ ಆರಂಭ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಉತ್ಖನನಕ್ಕಾಗಿ ವಿಶೇಷ ತಜ್ಞರನ್ನು ನೇಮಕ ಮಾಡಲಾಗಿದ್ದು, ಲಕ್ಕುಂಡಿ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ವಿಶೇಷ ಐತಿಹಾಸಿಕ ಸ್ಥಳ ಎಂದು ಸಚಿವರು ಹೇಳಿದರು.
ಲಕ್ಕುಂಡಿಯಲ್ಲಿ 101 ದೇವಸ್ಥಾನಗಳು ಮತ್ತು 101 ಬಾವಿಗಳು ಇದ್ದು, ಇದು ಅಪಾರ ಸಂಸ್ಕೃತಿ, ಕಲಾಕೃತಿ ಮತ್ತು ಪರಂಪರೆಯ ಸಂಪತ್ತನ್ನು ಹೊಂದಿದೆ ಎಂದರು.

“ಮಳೆ ಬಂದಾಗ ಕೆಲ ಸಂದರ್ಭಗಳಲ್ಲಿ ಬಂಗಾರ, ಮುತ್ತು, ಹವಳ, ರತ್ನಗಳು ಸಿಗುತ್ತಿದ್ದವೆಂಬ ನಂಬಿಕೆ ಇದೆ. ಆದರೆ ಲಕ್ಕುಂಡಿಯ ನಿಜವಾದ ಸಂಪತ್ತು ನಿಧಿ ಅಲ್ಲ – ಅದರ ಇತಿಹಾಸ, ಸಂಸ್ಕೃತಿ ಮತ್ತು ಕಲಾ ಪರಂಪರೆ” ಎಂದು ಪಾಟೀಲ್ ಸ್ಪಷ್ಟಪಡಿಸಿದರು.

ಹಂಪಿ, ಬದಾಮಿ, ಪಟ್ಟದಕಲ್ಲು, ಸಹ್ಯಾದ್ರಿ ಬೆಟ್ಟಗಳಂತೆ ಲಕ್ಕುಂಡಿಯನ್ನು ಸಹ ವಿಶ್ವ ಪಾರಂಪರಿಕ ತಾಣ ಆಗಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಲಕ್ಕುಂಡಿ ಗ್ರಾಮದ ಸ್ಥಳಾಂತರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದ್ದು,
16 ಹೊಸ ದೇವಾಲಯ ಮತ್ತು ಬಾವಿಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ.
ಬಯಲು ಮಂದಿರ (ಮ್ಯೂಸಿಯಂ) ನಿರ್ಮಾಣಕ್ಕೆ ₹1 ಕೋಟಿ 65 ಲಕ್ಷ ಅನುದಾನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪೌರಾಯುಕ್ತೆಗೆ ಧಮ್ಕಿ ಪ್ರಕರಣದಲ್ಲಿ ರಾಜೀವ್ ಗೌಡ ಸಂಕಷ್ಟ: ಕೆಪಿಸಿಸಿ ಶಿಸ್ತು ನೋಟಿಸ್ ಜಾರಿ

0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಆರೋಪ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿದೆ. ಶಿಡ್ಲಘಟ್ಟದಲ್ಲಿ ನಡೆದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕೆಪಿಸಿಸಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ರಾಜೀವ್ ಗೌಡಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಪೌರಾಯುಕ್ತರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವಾಗ, ರಾಜೀವ್ ಗೌಡ ಅವರು ಅಸಭ್ಯ ಪದಗಳನ್ನು ಬಳಸಿ ವ್ಯಕ್ತಿಗತ ನಿಂದನೆ ಮಾಡಿದ್ದಾರೆ. ಈ ಸಂಭಾಷಣೆ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು, ಪಕ್ಷದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.

ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಪ್ರಕರಣ ಎಂದು ಪರಿಗಣಿಸಿ, ಈ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಸಮರ್ಪಕ ಉತ್ತರ ನೀಡದಿದ್ದಲ್ಲಿ ಶಿಸ್ತು ಸಮಿತಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಬೆಳವಣಿಗೆ ಶಿಡ್ಲಘಟ್ಟ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ರಾಜ್ಯ ಕಾಂಗ್ರೆಸ್ ವಲಯದಲ್ಲೂ ಸಂಚಲನ ಮೂಡಿಸಿದೆ.

ಕಾಗಿನೆಲೆ ಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

0

ಬೆಂಗಳೂರು/ರಾಯಚೂರು: ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ನಿಧನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ ಮತ್ತು ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ. ಶ್ರೀ ಮಠದ ಭಕ್ತಾದಿಗಳು ಹಾಗೂ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ” ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ (50) ಅವರು ಗುರುವಾರ ಬೆಳಗಿನ ಜಾವ 3:30ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಸ್ವಾಮೀಜಿ ಇತ್ತೀಚೆಗೆ ಜ.12, 13 ಮತ್ತು 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ, ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಪೂಜಾರಿಗಳ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ್ದರು. ರಾಜಕೀಯ ಹಸ್ತಕ್ಷೇಪವಿಲ್ಲದ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಊಟ ಮತ್ತು ವಿಶ್ರಾಂತಿ ಸರಿಯಾಗಿ ಆಗದೆ, ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ್ದು, ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಶ್ರೀಗಳ ನಿಧನಕ್ಕೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ.

error: Content is protected !!