Home Blog Page 5

ಬೆಂಗಳೂರಿನಲ್ಲಿ ಮಳೆ ಅವಾಂತರ: ಮುರಿದು ಬಿದ್ದ ಮರದ ಕೊಂಬೆ- ತಪ್ಪಿದ ದುರಂತ

0

ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅಲಿ ಅಸ್ಕರ್ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿ ಹಿಂದಿನ ಗೇಟ್ ಬಳಿ ಬೆಳಗ್ಗೆ ದೊಡ್ಡ ಮರದ ಕೊಂಬೆ ಏಕಾಏಕಿ ರಸ್ತೆಗೆ ಬಿದ್ದಿದೆ.

ಆ ಸಮಯದಲ್ಲಿ ಅಲ್ಲಿ ಇದ್ದ ಟ್ರಾಫಿಕ್ ಪೊಲೀಸ್, ಸೆಕ್ಯೂರಿಟಿ ಗಾರ್ಡ್ ಮತ್ತು ಬಿಬಿಎಂಪಿ ಸಿಬ್ಬಂದಿ ಮೂವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.

ಈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿ, ಅಲಿ ಅಸ್ಕರ್ ರಸ್ತೆಯ ಬದಲಿಗೆ ಪ್ರಯಾಣಿಕರು ಇನ್‌ಫೆಂಟ್ರಿ ರಸ್ತೆ ಮಾರ್ಗವನ್ನು ಬಳಸುವಂತೆ ತಿಳಿಸಿದ್ದಾರೆ.

ಅದೇ ರೀತಿ ಆರ್‌.ಸಿ.ಪುರದಲ್ಲಿಯೂ ಮರ ಬಿದ್ದು ರಸ್ತೆ ಬಂದಾಗಿದೆ. ಇದರಿಂದ ರಾಮಚಂದ್ರಾಪುರ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಭೂಪಸಂದ್ರ ರಸ್ತೆ ಪರ್ಯಾಯ ಮಾರ್ಗವಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ| ಪ್ರವಾಸಿ ತಾಣ ಬಲಮುರಿಯಲ್ಲಿ ಈಜಲು ಹೋಗಿ ಯುವಕ ಸಾವು!

0

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿ ತಾಣ ಬಲಮುರಿಯಲ್ಲಿ ಈಜಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ 24 ವರ್ಷದ ದಿನೇಶ್ ಮೃತ ಯುವಕ. ಈತ ಎಚ್.ಡಿ.ಕೋಟೆಯ ಸರಗೂರಿನ ನಿವಾಸಿ ಎನ್ನಲಾಗಿದೆ. ಘಟನೆಯ ಸ್ಥಳಕ್ಕೆ ಕೆ.ಆರ್.ಎಸ್. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಸೇಸೀವ್ ಗಂಡನಿಂದ ಸಮೀಕ್ಷೆ ಅಧಿಕಾರಿಗಳ ಮೇಲೆ ಹಲ್ಲೆ; ಅಷ್ಟಕ್ಕೂ ಏನಾಯ್ತು?

0

ಬೆಂಗಳೂರು: ಹೆಂಡತಿಯ ನಂಬರ್ ಪಡೆದ ಸಮೀಕ್ಷೆದಾರರ ಮೇಲೆ ಪೊಸೇಸೀವ್ ಗಂಡನಿಂದ ಹಲ್ಲೆ ನಡೆದಿರುವ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆದೇಶದಂತೆ ನಡೆಯುತ್ತಿರುವ ಸಮೀಕ್ಷೆ ಕಾರ್ಯದಲ್ಲಿ ಜೂನಿಯರ್ ಅಸಿಸ್ಟೆಂಟ್ ಅಭಿಷೇಕ್ ನೇತೃತ್ವದ ತಂಡ ಸ್ಟೀಫನ್@ಅನಿಲ್ ಅವರ ಮನೆಯ ಬಳಿ ಭೇಟಿ ನೀಡಿತ್ತು. ಮನೆಯಲ್ಲಿದ್ದವರು ಅವರ ಪತ್ನಿ ಮಾತ್ರ. ಸಮೀಕ್ಷೆ ಸಲುವಾಗಿ ಫೋನ್ ನಂಬರ್ ಮತ್ತು ಆಧಾರ್ ಕಾರ್ಡ್ ಫೋಟೋ ತೆಗೆದುಕೊಂಡ ಅಧಿಕಾರಿಗಳು ನಂತರ ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಿ ತೆರಳಿದ್ದರು.

ಆತನ ಗಂಡ ಸ್ಟೀಫನ್@ಅನಿಲ್ ಬಳಿಕ ಅಧಿಕಾರಿಗಳನ್ನು ಹುಡುಕಿ, “ತಾನು ಇಲ್ಲದಾಗ, ಮನೆಗೆ ಹೇಗೆ ಬಂದು ಫೋನ್ ನಂಬರ್ ಫೋಟೋ ಪಡೆದಿರಿ?” ಎಂದು ಅವಾಝ್ ಮಾಡುತ್ತ, ಮುಖಕ್ಕೆ ಪಂಚ್ ಮಾಡಿ ಹಲ್ಲೆ ಮಾಡಿದ್ದಾನೆ. ಇದರಿಂದ ಬೆದರಿದ ಅಧಿಕಾರಿಗಳು ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಮುಂದುವರಿಸಿದ್ದಾರೆ.

ರೈಲ್ವೇ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

0

ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲ್ಲೂಕಿನ ಕಣಿವೆ ಹಳ್ಳಿಯಲ್ಲಿ ರೈಲ್ವೆ ಹಳಿ ಲಯ ತಪ್ಪಿ, ಹಳಿಗೆ ಹಾಕಿದ್ದ ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು.

ಬುಧವಾರ ರಾತ್ರಿಯ ಮಳೆಯಿಂದ ಕಾಲುವೆಯ ನೀರು ಹರಿದ ಪರಿಣಾಮ ಈ ಹಳಿ ಹಾಳಾಗಿತ್ತು. ಇಂದು ಬೆಳಿಗ್ಗೆ ಚಿಕ್ಕಮಗಳೂರಿನಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಹಳ್ಳಿಗೆ ತಲುಪುತ್ತಿದ್ದಂತೆ, ರೈಲ್ವೆ ಸಿಬ್ಬಂದಿ ತಕ್ಷಣ ಲೋಕೋಪೈಲಟ್‌ಗೆ ತುರ್ತು ಮಾಹಿತಿ ನೀಡಿದ್ದಾರೆ. ಸಮಯಪ್ರಜ್ಞೆಯಿಂದ ರೈಲು ನಿಲ್ಲಿಸಿದ ಕಾರಣ, ಸಂಭವಿಸಬಹುದಿದ್ದ ದೊಡ್ಡ ಅಪಘಾತ ತಪ್ಪಿಸಿಕೊಳ್ಳಲಾಗಿದೆ.

ತುರ್ತು ದುರಸ್ತಿ ಕಾರ್ಯದ ಬಳಿಕ ರೈಲು ಶಿವಮೊಗ್ಗದತ್ತ ಪ್ರಯಾಣ ಮುಂದುವರಿಸಿದೆ. ಹಳಿಯ ಪಕ್ಕದಲ್ಲೇ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದ ಕಾರಣ, ರೈಲ್ವೆ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಇಂದು ಹಾಸನಾಂಬೆ ದರ್ಶನಕ್ಕೆ ಶಾಸ್ತ್ರೋಕ್ತ ತೆರೆ: ಕೆಲವೇ ಗಂಟೆಗಳಲ್ಲಿ ಮುಚ್ಚಲಿದೆ ದೇವಿ ಗರ್ಭಗುಡಿ!

0

ಹಾಸನ: ಹಾಸನದ ಶಕ್ತಿದೇವತೆ, ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮುಚ್ಚಲಿದೆ.

ವರ್ಷಕ್ಕೆ ಒಂದೇ ಬಾರಿ ಮಾತ್ರ ದರ್ಶನ ಕೊಡುವ ಹಾಸನಾಂಬೆ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ಈಗಾಗಲೇ ಹಾಸನಾಂಬ ದೇವಿ ಸಾರ್ವಜನಿಕ ದರ್ಶನ ಅಂತ್ಯಗೊಂಡಿದ್ದು, ಪೂಜೆಗಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗ್ಗೆವರೆಗೂ ಹಾಸನಾಂಬ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಕಡೆಗಳಿಗೆಯಲ್ಲೂ ಭಕ್ತಗಣ ಹಾಸನಾಂಬ ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಬಾಗಿಲು ಮುಚ್ಚುವ ಕಾರ್ಯ ನಡೆಯುತ್ತದೆ. ಮುಚ್ಚುವ ಮುನ್ನ ಅರ್ಚಕರು ದೀಪ ಹಚ್ಚಿ, ಹೂವು ಹಾಗೂ ನೈವೇದ್ಯವನ್ನು ದೇವಿಯ ಮುಂದೆ ಅರ್ಪಿಸಲಿದ್ದಾರೆ. ಅನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ

ಇನ್ನೂ ಅಕ್ಟೋಬರ್ 9ರಂದು ದೇವಸ್ಥಾನದ ಬಾಗಿಲು ತೆರೆಯಲ್ಪಟ್ಟಿತ್ತು. ಈ ಅವಧಿಯಲ್ಲಿ ಸುಮಾರು 27 ಲಕ್ಷ ಭಕ್ತರು ದರ್ಶನ ಪಡೆದಿದ್ದು, 23 ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ಲಾಡು ಪ್ರಸಾದ, ದೇವಿಯ ಸೀರೆ ಮಾರಾಟ ಮತ್ತು ದಾನದಿಂದ ಬಂದಿದ್ದು, ಈ ವರ್ಷದ ಜಾತ್ರಾ ಮಹೋತ್ಸವ ಹೊಸ ಇತಿಹಾಸ ಬರೆದಿದೆ.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಅದಿದೇವತೆ ಹಾಸನಾಂಬೆಯ ಮಹಿಮೆ, ಪವಾಡ ಅಪಾರ. ದರ್ಶನಾಂತ್ಯದಲ್ಲಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ ಮಹಾದೀಪ ನಂದುವುದಿಲ್ಲ. ಹೂವು ಬಾಡಿರುವುದಿಲ್ಲ ಅನ್ನೋ ನಂಬಿಕೆ ಇರುವುದರಿಂದ ಅಮ್ಮನ ಪವಾಡ ಶಕ್ತಿ ಎಲ್ಲಡೆ ಪಸರಿಸಿದೆ. ಇಂತಹ ಶಕ್ತಿದೇವತೆ ಈ ಬಾರಿಯ ದರ್ಶನೋತ್ಸವಕ್ಕೆ ಇಂದು ಶಾಸ್ತ್ರೋಕ್ತವಾಗಿ ತೆರೆ ಬೀಳಲಿದೆ.

ರೈಲ್ವೆ ನಿಲ್ದಾಣದಲ್ಲಿ 6 ತಿಂಗಳ ಗಂಡು ಮಗು ಅಪಹರಣ: ಮಹಿಳೆ ಅರೆಸ್ಟ್!

0

ಮೈಸೂರು:- ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ಆರು ತಿಂಗಳ ಗಂಡು ಮಗುವನ್ನು ಕದ್ದ ಮಹಿಳೆ ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಮೂಲದ 50 ವರ್ಷದ ನಂದಿನಿ ಬಂಧಿತ ಮಹಿಳೆ. ಮಗುವನ್ನು ತಕ್ಷಣ ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಮಗುವಿನ ಪೋಷಕರು ಪ್ಲಾಟ್‌ಫಾರ್ಮ್‌ನಲ್ಲಿ ನಿದ್ದೆಯಲ್ಲಿ ಇದ್ದಾಗ, ಮಹಿಳೆ ಮಗು ಅನ್ನು ಕದ್ದೊಯ್ದಳು. ತಾಯಿ ಎಚ್ಚರಗೊಂಡಾಗ ಮಗು ಕಾಣೆಯಾಗಿರುವುದು ತಿಳಿದು, ರೈಲ್ವೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯ ಮೂಲಕ ಮಹಿಳೆ ಮಗುವನ್ನು ಅಪಹರಿಸಿದ್ದಾಳೆ ಎಂದು ದೃಢಪಟ್ಟಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಗದಗ| ತ್ರಿವೇಣಿ ಹೋಟೆಲ್‌ ನಲ್ಲಿ ಅಗ್ನಿ ಅವಘಡ: 10 ಲಕ್ಷಕ್ಕೂ ಹೆಚ್ಚು ಹಾನಿ!

0

ಗದಗ: ಇಲ್ಲಿನ ತಿಲಕ್ ಪಾರ್ಕ್ ಬಳಿ ಇರುವ ತ್ರಿವೇಣಿ ಹೋಟೆಲ್‌ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.

 

ಬೆಂಕಿ ಹೊತ್ತಿದ ಪರಿಣಾಮ, ಹೋಟೆಲ್‌ನಲ್ಲಿ ಅಡುಗೆ ಸಾಮಗ್ರಿಗಳು, ಪೀಠೋಪಕರಣಗಳು ಸೇರಿದಂತೆ ಬಹುಭಾಗ ಭಸ್ಮವಾಗಿದೆ. ಹಾನಿಯ ಅಂದಾಜು ಸುಮಾರು 10 ಲಕ್ಷ ರೂ. ಎಂದು ಹೇಳಲಾಗಿದೆ. ನಾಗೇಶ್ ಈರಪ್ಪ ಸವಡಿ ಅವರಿಗೆ ಈ ಹೋಟೆಲ್ ಸೇರಿದ್ದು, ಒಂದು ಅಂತಸ್ತಿನ ಹೋಟೆಲ್‌ನ ಬಹುಭಾಗ ಬೆಂಕಿಗೆ ಒಳಗಾಗಿದೆ.

ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್‌ಗಳು ಮತ್ತು ಪಕ್ಕದ ಕಟ್ಟಡಗಳಿಗೆ ಬೆಂಕಿ ತಲುಪುವ ಮೊದಲು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರ ಕೈಚಳಕ: 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ!

0

ಹಾವೇರಿ: ನಗರದ ಹೃದಯಭಾಗದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರು ಕೈಚಳಕ ತೋರಿದ್ದು, 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ.

ಮಠದ ಎರಡು ಕೋಣೆಯ ಬೀಗ ಮುರಿದಿರುವ ಕಳ್ಳರು, 10,67,668 ರೂ. ಮೌಲ್ಯದ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಡಾ. ವೀಣಾ ಎಸ್ ಮತ್ತು ಶ್ರೀನಿವಾಸ ವೈದ್ಯರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಸ್ಥಳಕ್ಕೆ ಹಾವೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನವಾದ ವಸ್ತುಗಳು:

15 ಗ್ರಾಂ ಬಂಗಾರದ ಸರದ ಹುಕ್ಕು – 1,79,550 ರೂ.

18 ಗ್ರಾಂ ಬಂಗಾರದ ಸರ + ಒಂದು ಹುಕ್ಕು – 2,15,460 ರೂ.

6 ಗ್ರಾಂ ಬಂಗಾರದ ಪುಷ್ಪ ಎಲೆ – 71,820 ರೂ.

2 ಬೆಳ್ಳಿ ತಂಬಿಗೆ, 6 ಬೆಳ್ಳಿ ಆಚುಮ್ಯ ಲೋಟ, 6 ಬೆಳ್ಳಿ ಉದ್ದರಣಿ, 2 ಬೆಳ್ಳಿ ತಟ್ಟೆ, 1 ಬೆಳ್ಳಿ ಆರತಿ – 2,70,920 ರೂ.

75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 3 ಕಳಸ – 1,00,000 ರೂ.

60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು – 42,000 ರೂ.

18 ಕೆ.ಜಿ ತಾಮ್ರದ 50 ತಂಬಿಗಳು – 17,928 ರೂ.

207 ಕೆ.ಜಿ ಹಿತ್ತಾಳೆಯ 2 ಸಾಲು ದೀಪಗಳು – 42,000 ರೂ.

40 ಕೆ.ಜಿ ಹಿತ್ತಾಳೆಯ 20 ಗಂಟೆಗಳು – 20,000 ರೂ.

ಒಟ್ಟು ಹಾನಿ: 10,67,668 ರೂ.

ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯು ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಕಾಟ – ಕಚೇರಿ ಸಿಬ್ಬಂದಿ ಸುಸ್ತೋ ಸುಸ್ತು!

0

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ಜವಾಬ್ದಾರಿಗಳೆಲ್ಲ ನಡೆಯುವ ಜಿಲ್ಲಾಡಳಿತ ಭವನದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದೆ.

ಪ್ರತಿ ದಿನ ಭವನಕ್ಕೆ ಜನರು ವಿವಿಧ ಕೆಲಸಗಳಿಗೆ ಬರುತ್ತಾರೆ. ಆದರೆ ನಾಯಿಗಳು ಭವನದ ಎಲ್ಲಾ ಕೋಣೆಗಳಿಗೆ ತಮ್ಮ ಹಕ್ಕು ವಹಿಸಿಕೊಂಡಂತೆ ವರ್ತಿಸುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಒಂದಲ್ಲ ಎರಡಲ್ಲ 18ಕ್ಕೂ ಹೆಚ್ಚು ನಾಯಿಗಳು ಇವೆ. ಒಂದೊಂದು ನಾಯಿಗಳು ಒಂದೊಂದು ಕಚೇರಿಯನ್ನು ಹಂಚಿಕೊಂಡಂತೆ ಕಂಡು ಬಂದಿದೆ. ಆ ಕಚೇರಿ ಹತ್ತಿರ ಹೊದ್ರೆ, ಅಲ್ಲೊಂದು ಬೌ ಎನ್ನುತ್ತೆ, ಈ ಕಡೆ ಕಚೇರಿಗೆ ಬಂದ್ರೆ ಇಲ್ಲೊಂದು ಬೌ ಬೌ ಎನ್ನುತ್ತೆ, ಇಲ್ಲಿರುವ ನಾಯಿಗಳು ಕೆಲವು ಸಿಬ್ಬಂದಿಗಳಿಗೆ ಅಭ್ಯಾಸವಾಗಿದ್ರೆ. ಕಚೇರಿಗೆ ಬರೊ ಸಾರ್ವಜನಿಕರನ್ನ ಕಂಡ್ರೆ ಬೌ ಬೌ ಮಾಡ್ತಿವೆ.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನಾಯಿಗಳಿಂದ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಭವನಕ್ಕೆ ಭೇಟಿ ನೀಡುವವರಿಗೆ ಮುಂಚಿತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮಹಿಳೆ ಮೇಲೆ ಹಲ್ಲೆ, ಚಿನ್ನಾಭರಣ ಕಳವು: ತಂಗಿ ಮಗನಿಂದಲೇ ಕೃತ್ಯ

0

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಕ್ರಾಸ್ ಬಳಿ ಮಹಿಳೆಯೋರ್ವರ ಮನೆಯಲ್ಲಿ ಕಳ್ಳತನ ನಡೆದಿದೆ.

ವೀರಮ್ಮ ಅವರ ಮನೆಗೆ ನುಗ್ಗಿದ ಕಳ್ಳ, ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದ. ಮಹಿಳೆ ಪತಿ ಉಮಾಪತಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ನವೀನ್ ಎಂದು ಗುರುತಿಸಲಾಗಿದೆ. ಅಚ್ಚರಿ ಸಂಗತಿ ಅಂದ್ರೆ, ಹಲ್ಲೆಗೊಳಗಾದ ವೀರಮ್ಮ ಅವರ ತಂಗಿ ಮಗನಿಂದಲೇ ಈ ಕೃತ್ಯ ನಡೆದಿದೆ. ಆರೋಪಿ ಹಣಕ್ಕಾಗಿ ಈ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆಯಲ್ಲಿ ವೀರಮ್ಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

error: Content is protected !!