ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹಿನ್ನೆಲೆ ಸೈಬರ್ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಬಂಧಿತರೆಲ್ಲರೂ ಸುಶಿಕ್ಷಿತರಾಗಿದ್ದು, ಉತ್ತಮ ವೃತ್ತಿಜೀವನ ಹೊಂದಿದ್ದವರಾಗಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ರವಿಕುಮಾರ್ (24), ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ರಂಜಿತ್ ಕುಮಾರ್ (25) ಹಾಗೂ ತೀರ್ಥಹಳ್ಳಿ ಮೂಲದ ಚಂದ್ರಕಾಂತ್ (33) ಅವರನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಪದವಿ ಪೂರ್ಣಗೊಳಿಸಿದ್ದು, ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇತ್ತೀಚೆಗೆ ಯೂಟ್ಯೂಬ್ ಮೂಲಕ ಆದಾಯ ಗಳಿಸಲು ಆರಂಭಿಸಿದ್ದ ಆತ, ಹೆಚ್ಚಿನ ವೀಕ್ಷಣೆ ಹಾಗೂ ಆದಾಯದ ಆಸೆಯಿಂದ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಅಪ್‌ಲೋಡ್ ಮಾಡಲು ಆರಂಭಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮತ್ತೊಬ್ಬ ಆರೋಪಿ ರಂಜಿತ್ ಕುಮಾರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ವಾರ್ಷಿಕ ಸುಮಾರು ₹20 ಲಕ್ಷ ವೇತನ ಪಡೆಯುತ್ತಿದ್ದ. ತಾಂತ್ರಿಕ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಹಲವು ನಟಿಯರ ಎಐ ಆಧಾರಿತ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸುತ್ತಿದ್ದ ಆತ, ಕೇವಲ ಮನರಂಜನೆ ಮತ್ತು ಮೋಜಿಗಾಗಿ ಈ ಕೃತ್ಯ ನಡೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮೂರನೇ ಆರೋಪಿ ಚಂದ್ರಕಾಂತ್ ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ. ಉತ್ತಮ ಸಂಬಳ ಪಡೆಯುತ್ತಿದ್ದ ಆತ ಕೂಡ ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮಾಡಿ ವಿಕೃತ ಸಂತೋಷ ಪಡೆಯುತ್ತಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಹೈ-ಎಂಡ್ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ವಿವಿಧ ಎಐ ಆ್ಯಪ್‌ಗಳು ಮತ್ತು ಸಾಫ್ಟ್‌ವೇರ್‌ಗಳ ನೆರವಿನಿಂದ ನಟಿಯರ ಮುಖಗಳನ್ನು ಅಶ್ಲೀಲ ವಿಡಿಯೋಗಳಿಗೆ ಜೋಡಿಸಿ ಡೀಪ್‌ಫೇಕ್ ಕಂಟೆಂಟ್ ಸೃಷ್ಟಿಸುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸೈಬರ್ ಕಮಾಂಡ್ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಡೀಪ್‌ಫೇಕ್ ಕಂಟೆಂಟ್ ಸೃಷ್ಟಿ ಮತ್ತು ಪ್ರಸಾರದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

