Home Blog Page 5

ವೀರಭದ್ರೇಶ್ವರ–ಭದ್ರಕಾಳಿ ಕಲ್ಯಾಣೋತ್ಸವಕ್ಕೆ ಭಕ್ತಿಸಾಗರ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಸವೇಶ್ವರ ನಗರದ (ಶಹಪೂರಪೇಟೆ) ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ 74ನೇ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ 3ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ ಕಲ್ಯಾಣ ಮಹೋತ್ಸವವು ವೇದಘೋಷ, ಮಂಗಳವಾದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಪುರೋಹಿತರ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹವಾಚನ, ಸಂಕಲ್ಪ, ದೇವತಾ ಆವಾಹನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಿದೇವಿಯ ದೈವಿಕ ಕಲ್ಯಾಣೋತ್ಸವವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.

ಸಂಜೆ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಪೂಜಾ ಕೈಂಕರ್ಯಗಳ ಬಳಿಕ ಪವಿತ್ರ ಕಳಸವನ್ನು ದೇವಸ್ಥಾನದ ಶಿಖರದ ಮೇಲೆ ಪ್ರತಿಷ್ಠಾಪಿಸಲಾಯಿತು. ಕಳಸಾರೋಹಣವು ದೇವಾಲಯದ ಪಾವಿತ್ರ್ಯ, ಶಕ್ತಿ ಹಾಗೂ ಧಾರ್ಮಿಕ ಚೈತನ್ಯದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಭಕ್ತರು ದೇವರ ಕೃಪೆ ಹಾಗೂ ನಾಡಿನ ಸುಭಿಕ್ಷಕ್ಕಾಗಿ ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದೇವತೆಗಳಿಗೆ ಉಡಿ ತುಂಬುವ ಸಂಪ್ರದಾಯವೂ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಂಗಲಿಯರು ಹಾಗೂ ಭಕ್ತರು ಅರಿಶಿನ, ಕುಂಕುಮ, ಹೂವು, ತೆಂಗಿನಕಾಯಿ, ಧಾನ್ಯ ಸೇರಿದಂತೆ ಮಂಗಳದ್ರವ್ಯಗಳನ್ನು ಸಮರ್ಪಿಸಿ ದೇವಿಯರಿಗೆ ಉಡಿ ತುಂಬಿದರು.

ರಾತ್ರಿ ದೀಪಸ್ತಂಭಗಳಿಗೆ ದೀಪೋತ್ಸವ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದಿನವಿಡೀ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಆರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ದರ್ಶನ ಪಡೆದು ಪುನೀತರಾದರು.

ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಚೋಟಿ ಕಾಡಪ್ಪನವರ, ಉಪಾಧ್ಯಕ್ಷ ರಾಜು ತಡಸದ, ಕಾರ್ಯದರ್ಶಿ ನಾಗರಾಜ ಹಳ್ಳಿಕೇರಿ, ಖಜಾಂಚಿ ವಿಶ್ವನಾಥ ಕೆರಕಣ್ಣವರ ಸೇರಿದಂತೆ ಹಿರಿಯರು, ಮಹಿಳೆಯರು, ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ, ವರದಾನೇಶ್ವರಿ ಮಹಿಳಾ ಮಂಡಳದ ಸರ್ವ ಪದಾಧಿಕಾರಿಗಳು ಹಾಗೂ ಯುವಕ ಮಂಡಳದ ಸದಸ್ಯರು ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಆ. 29ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಆ. 31ರಂದು ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ಸಂಜೆ 6.15 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸೆಪ್ಟೆಂಬರ್ 1ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅಗ್ನಿ ಪ್ರವೇಶ ಹಾಗೂ ಸಂಜೆ 6.15 ಗಂಟೆಗೆ ಲಘುರಥೋತ್ಸವ ನಡೆಯಲಿದೆ.

ಸೆಪ್ಟೆಂಬರ್ 4ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಹಾಗೂ ಸೆಪ್ಟೆಂಬರ್ 8ರಂದು ಸಂಜೆ 7.30 ಗಂಟೆಗೆ ದೀಪಾಲಂಕಾರದೊಂದಿಗೆ ಪಾಲಕಿ ಉತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.

ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವವು ಭಕ್ತರ ಶ್ರದ್ಧೆ, ಧಾರ್ಮಿಕ ನಂಬಿಕೆ ಮತ್ತು ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಪ್ರತೀಕವಾಗಿದೆ. ಎಲ್ಲ ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಮುಂದಿನ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು.

— ರಾಚೋಟಿ ಕಾಡಪ್ಪನವರ, ಅಧ್ಯಕ್ಷರು, ಜಾತ್ರಾ ಮಹೋತ್ಸವ ಸಮಿತಿ

ಗದಗದ ಎಲ್ಲ ತಾಲೂಕುಗಳಿಗೂ ಬರದ ಬಿಸಿ: ಸರ್ಕಾರದ ತಾರತಮ್ಯಕ್ಕೆ ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ಹಾನಿಗೊಳಗಾಗಿವೆ. ರೈತರ ಬದುಕು ದುಸ್ತರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರವಿ ವಗ್ಗನವರ ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವ ಸರ್ಕಾರದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಯಾವುದೇ ತಾರತಮ್ಯ ಮಾಡದೆ ವಾಸ್ತವ ಪರಿಸ್ಥಿತಿಯ ಆಧಾರದ ಮೇಲೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಸಮಗ್ರ ಹಾಗೂ ಪಾರದರ್ಶಕ ಬೆಳೆ ನಷ್ಟ ಸಮೀಕ್ಷೆ ನಡೆಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರೈತರಿಗೆ ದೊರೆಯಬೇಕಿರುವ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೂ ಸಂಕಷ್ಟ ಎದುರಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಪ್ರಮಾಣದ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿರುವ ಬರ ಅಧ್ಯಯನದಿಂದ ರೈತರಿಗೆ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸಿರುವ ರವಿ ವಗ್ಗನವರ, ಬರ ಅಧ್ಯಯನ ಕೇವಲ ಕಾಗದಕ್ಕೆ ಸೀಮಿತವಾಗದೆ, ಅದರ ಆಧಾರದ ಮೇಲೆ ರೈತರ ಸಂಕಷ್ಟಕ್ಕೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ನೋವು, ಬೆಳೆ ನಷ್ಟ ಹಾಗೂ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸದೆ ಜಿಲ್ಲೆಯ ಎಲ್ಲ ತಾಲೂಕುಗಳ ರೈತರಿಗೆ ಸಮಾನವಾಗಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಕೂಡಲೇ ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳದಿದ್ದರೆ ರೈತರ ನೇತೃತ್ವದಲ್ಲಿ ಜಿಲ್ಲಾ ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬರ ಪರಿಹಾರ, ಬೆಳೆ ವಿಮೆ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರು ಸೇರಿದಂತೆ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಜಿಲ್ಲೆಯ ಉಳಿದ ತಾಲೂಕುಗಳ ರೈತರನ್ನು ಕಡೆಗಣಿಸುವುದು ಸರಿಯಲ್ಲ. ಮಳೆ ಕೊರತೆ ಮತ್ತು ಬೆಳೆ ನಷ್ಟದಿಂದ ಇಡೀ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ಜಿಲ್ಲಾ ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸಲಾಗುವುದು.

— ರವಿ ವಗ್ಗನವರ, ಜಿಲ್ಲಾ ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಗದಗ

ಸಿಹಿ ಟೂತ್‌ಪೇಸ್ಟ್‌ನಿಂದ ಶುಗರ್ ಹೆಚ್ಚುತ್ತಾ? ಡಯಾಬಿಟಿಸ್ ಇರುವವರು ತಿಳಿಯಲೇಬೇಕಾದ ವಿಷಯ!

0

ಡಯಾಬಿಟಿಸ್ ಇರುವವರು ಆಹಾರದಿಂದ ಹಿಡಿದು ದೈನಂದಿನ ಆರೋಗ್ಯದವರೆಗೆ ಹಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರ, ಪಾನೀಯಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಬಾಯಿಯ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ನೀಡುವುದು ಅಗತ್ಯ. ಅದರಲ್ಲೂ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಬಳಸುವ ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದ್ದರೆ ಅದನ್ನು ಡಯಾಬಿಟಿಸ್ ಇರುವವರು ಬಳಸಬಹುದೇ ಎಂಬ ಅನುಮಾನ ಕೆಲವರಲ್ಲಿದೆ.

ಟೂತ್‌ಪೇಸ್ಟ್ ಸಿಹಿಯಾಗಿ ರುಚಿ ನೀಡುತ್ತದೆ ಎಂದ ಮಾತ್ರಕ್ಕೆ ಅದರಲ್ಲಿ ಸಕ್ಕರೆ ಇದೆ ಎಂದು ಅರ್ಥವಲ್ಲ. ಟೂತ್‌ಪೇಸ್ಟ್‌ಗಳಲ್ಲಿ ಸಿಹಿ ರುಚಿಗಾಗಿ ವಿವಿಧ ಫ್ಲೇವರಿಂಗ್ ಏಜೆಂಟ್‌ಗಳು ಅಥವಾ ಸಕ್ಕರೆ ಇಲ್ಲದ ಸ್ವೀಟನರ್‌ಗಳನ್ನು ಬಳಸಬಹುದು. ಹೀಗಾಗಿ ಟೂತ್‌ಪೇಸ್ಟ್‌ನ ರುಚಿಯನ್ನು ಮಾತ್ರ ಆಧರಿಸಿ ಅದನ್ನು ಆಯ್ಕೆ ಮಾಡುವುದು ಸರಿಯಲ್ಲ. ಅದರಲ್ಲಿರುವ Ingredients ಮತ್ತು ಮುಖ್ಯವಾಗಿ Fluoride ಅಂಶವನ್ನು ಪರಿಶೀಲಿಸುವುದು ಹೆಚ್ಚು ಮುಖ್ಯ.

ಸಿಹಿ ರುಚಿಯ ಟೂತ್‌ಪೇಸ್ಟ್ ಬಳಸಬಹುದೇ?

ಹೌದು, ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದೆ ಎಂಬ ಕಾರಣಕ್ಕೆ ಮಾತ್ರ ಡಯಾಬಿಟಿಸ್ ಇರುವವರು ಅದನ್ನು ತಪ್ಪಿಸಬೇಕೆಂದಿಲ್ಲ. ಕೆಲವು ಟೂತ್‌ಪೇಸ್ಟ್‌ಗಳಲ್ಲಿರುವ ಸಿಹಿ ರುಚಿ ಸಕ್ಕರೆಯಿಂದ ಬರುವುದಿಲ್ಲ. ಆದ್ದರಿಂದ ಉತ್ಪನ್ನದ ಪ್ಯಾಕೆಟ್‌ನಲ್ಲಿರುವ Ingredients ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.

American Dental Association ಪ್ರಕಾರ, ಟೂತ್‌ಪೇಸ್ಟ್‌ಗಳಲ್ಲಿ ಸಿಹಿ ರುಚಿಗಾಗಿ ಬಳಸುವ ಕೆಲವು ಫ್ಲೇವರಿಂಗ್ ಏಜೆಂಟ್‌ಗಳು ಮತ್ತು ಕ್ಯಾಲೊರಿ ಇಲ್ಲದ ಸ್ವೀಟನರ್‌ಗಳು ಸಾಮಾನ್ಯವಾಗಿವೆ.

ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಏಕೆ ಮುಖ್ಯ?

ಡಯಾಬಿಟಿಸ್ ಇರುವವರು ಟೂತ್‌ಪೇಸ್ಟ್ ಆಯ್ಕೆ ಮಾಡುವಾಗ Fluoride ಇದೆಯೇ ಎಂಬುದನ್ನು ಗಮನಿಸುವುದು ಮುಖ್ಯ. ಫ್ಲೋರೈಡ್ ಹಲ್ಲಿನ ಎನಾಮೆಲ್‌ನ್ನು ಬಲಪಡಿಸಲು ಹಾಗೂ ಹಲ್ಲು ಕೊಳೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಫ್ಲೋರೈಡ್ ಟೂತ್‌ಪೇಸ್ಟ್ ಬಳಸಿ ಬ್ರಷ್ ಮಾಡುವುದು ಹಲ್ಲಿನ ರಕ್ಷಣೆಗೆ ಸಹಾಯಕವಾಗಿದೆ.

ಆದರೆ ಎಲ್ಲರಿಗೂ ಒಂದೇ ರೀತಿಯ ಟೂತ್‌ಪೇಸ್ಟ್ ಸೂಕ್ತವಾಗಿರಬೇಕೆಂದಿಲ್ಲ. ಹಲ್ಲುಗಳಲ್ಲಿ ಹೆಚ್ಚಿನ ಸೆನ್ಸಿಟಿವಿಟಿ, ರಕ್ತಸ್ರಾವ, ಊತ, ನೋವು ಅಥವಾ ಬೇರೆ ಯಾವುದೇ ದಂತ ಸಮಸ್ಯೆ ಇದ್ದರೆ ದಂತ ವೈದ್ಯರ ಸಲಹೆ ಪಡೆದು ಟೂತ್‌ಪೇಸ್ಟ್ ಆಯ್ಕೆ ಮಾಡುವುದು ಉತ್ತಮ.

ಡಯಾಬಿಟಿಸ್ ಇದ್ದವರಿಗೆ ಬಾಯಿಯ ಆರೋಗ್ಯ ಏಕೆ ಮುಖ್ಯ?

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಬಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಡಯಾಬಿಟಿಸ್ ಇರುವವರಲ್ಲಿ ಒಸಡು ಕಾಯಿಲೆ, ಹಲ್ಲು ಕೊಳೆಯುವುದು ಮತ್ತು ಬಾಯಿ ಒಣಗುವಂತಹ ಸಮಸ್ಯೆಗಳ ಅಪಾಯ ಹೆಚ್ಚಿರಬಹುದು. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಲ್ಲದಿದ್ದರೆ ಬಾಯಿಯಲ್ಲಿ ಉಂಟಾಗುವ ಸೋಂಕುಗಳು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು ಎಂದು CDC ತಿಳಿಸಿದೆ.

ಅದೇ ರೀತಿ ಒಸಡು ಕಾಯಿಲೆ ಇದ್ದರೆ ಡಯಾಬಿಟಿಸ್ ನಿಯಂತ್ರಣವೂ ಕಷ್ಟವಾಗಬಹುದು. ಹೀಗಾಗಿ ಡಯಾಬಿಟಿಸ್ ಇರುವವರು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಜೊತೆಗೆ ಬಾಯಿಯ ಸ್ವಚ್ಛತೆಗೂ ಆದ್ಯತೆ ನೀಡಬೇಕು.

ದಿನಕ್ಕೆ ಎಷ್ಟು ಬಾರಿ ಬ್ರಷ್ ಮಾಡಬೇಕು?

ಸಾಮಾನ್ಯವಾಗಿ ದಿನಕ್ಕೆ ಎರಡು ಬಾರಿ, ಸುಮಾರು ಎರಡು ನಿಮಿಷಗಳ ಕಾಲ ಹಲ್ಲುಗಳನ್ನು ಬ್ರಷ್ ಮಾಡುವುದು ಉತ್ತಮ. ಬೆಳಗ್ಗೆ ಬ್ರಷ್ ಮಾಡುವುದು ಮಾತ್ರವಲ್ಲದೆ, ರಾತ್ರಿ ಮಲಗುವ ಮುನ್ನವೂ ಬ್ರಷ್ ಮಾಡುವುದು ಮುಖ್ಯ. ಹಲ್ಲುಗಳ ನಡುವೆ ಸಿಲುಕಿರುವ ಆಹಾರದ ಕಣಗಳು ಮತ್ತು ಪ್ಲಾಕ್‌ಗಳನ್ನು ತೆಗೆದುಹಾಕಲು ಫ್ಲಾಸಿಂಗ್ ಅಥವಾ ಸೂಕ್ತವಾದ ಇಂಟರ್‌ಡೆಂಟಲ್ ಕ್ಲೀನಿಂಗ್ ವಿಧಾನವನ್ನು ಬಳಸಬಹುದು.

ಬ್ರಷ್ ಮಾಡುವಾಗ ತುಂಬಾ ಗಟ್ಟಿಯಾಗಿ ಹಲ್ಲುಗಳನ್ನು ಉಜ್ಜಬಾರದು. ಇದರಿಂದ ಒಸಡುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಮೃದುವಾಗಿ ಹಾಗೂ ಸರಿಯಾದ ರೀತಿಯಲ್ಲಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಮುಖ್ಯ.

ಟೂತ್‌ಪೇಸ್ಟ್ ಮಾತ್ರ ಸಾಕಾಗುವುದಿಲ್ಲ:

ಡಯಾಬಿಟಿಸ್ ಇರುವವರು ಉತ್ತಮ ಟೂತ್‌ಪೇಸ್ಟ್ ಬಳಸುವುದರ ಜೊತೆಗೆ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

  • ದಿನಕ್ಕೆ ಎರಡು ಬಾರಿ ಸುಮಾರು ಎರಡು ನಿಮಿಷ ಬ್ರಷ್ ಮಾಡಬೇಕು.
  • ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ಬಳಸುವುದು ಉತ್ತಮ.
  • ಹಲ್ಲುಗಳ ನಡುವಿನ ಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
  • ತುಂಬಾ ಗಟ್ಟಿಯಾಗಿ ಬ್ರಷ್ ಮಾಡುವುದನ್ನು ತಪ್ಪಿಸಬೇಕು.
  • ಸಕ್ಕರೆ ಮತ್ತು Added Sugar ಹೆಚ್ಚಿರುವ ಆಹಾರ, ಪಾನೀಯಗಳ ಸೇವನೆಯನ್ನು ಮಿತಿಗೊಳಿಸಬೇಕು.
  • ರಕ್ತದಲ್ಲಿನ ಸಕ್ಕರೆಯನ್ನು ವೈದ್ಯರ ಸಲಹೆಯಂತೆ ನಿಯಂತ್ರಣದಲ್ಲಿಡಬೇಕು.
  • ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ:

ಡಯಾಬಿಟಿಸ್ ಇರುವವರಿಗೆ ಬಾಯಿಯಲ್ಲಿ ಕೆಲವು ಸಮಸ್ಯೆಗಳು ಕಂಡುಬಂದರೆ ಅದನ್ನು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಬಾರದು. ಕೆಳಗಿನ ಲಕ್ಷಣಗಳು ಕಂಡುಬಂದರೆ ದಂತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ:

  • ಹಲ್ಲುಗಳಿಂದ ಪದೇಪದೇ ರಕ್ತಸ್ರಾವವಾಗುವುದು
  • ಒಸಡುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು
  • ಹಲ್ಲು ನೋವು ಕಾಣಿಸಿಕೊಳ್ಳುವುದು
  • ಹಲ್ಲುಗಳು ಅಲುಗಾಡುವುದು
  • ಹಲ್ಲುಗಳಲ್ಲಿ ಸೆನ್ಸಿಟಿವಿಟಿ ಹೆಚ್ಚಾಗುವುದು
  • ಬಾಯಿಯಿಂದ ನಿರಂತರ ದುರ್ವಾಸನೆ ಬರುವುದು
  • ಬಾಯಿ ಹೆಚ್ಚು ಒಣಗುವುದು
  • ಬಾಯಿಯಲ್ಲಿ ಗಾಯಗಳು ಪದೇಪದೇ ಕಾಣಿಸಿಕೊಳ್ಳುವುದು

ಕೆಂಪು, ಊದಿಕೊಂಡ ಅಥವಾ ಸುಲಭವಾಗಿ ರಕ್ತಸ್ರಾವವಾಗುವ ಒಸಡುಗಳು ಒಸಡು ಕಾಯಿಲೆಯ ಲಕ್ಷಣಗಳಾಗಿರಬಹುದು. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಮುಖ್ಯ.

ನಿಯಮಿತ ದಂತ ತಪಾಸಣೆ ಅಗತ್ಯ:

ಡಯಾಬಿಟಿಸ್ ಇರುವವರು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ದಂತ ತಪಾಸಣೆಯ ಮೂಲಕ ಹಲ್ಲು ಕೊಳೆಯುವುದು, ಒಸಡು ಕಾಯಿಲೆ ಸೇರಿದಂತೆ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. CDC ಕೂಡ ಡಯಾಬಿಟಿಸ್ ಇರುವವರು ನಿಯಮಿತ ದಂತ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತದೆ.

ಒಟ್ಟಿನಲ್ಲಿ, ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದೆ ಎಂಬ ಕಾರಣಕ್ಕೆ ಮಾತ್ರ ಡಯಾಬಿಟಿಸ್ ಇರುವವರು ಅದನ್ನು ತಪ್ಪಿಸಬೇಕೆಂದಿಲ್ಲ. ಟೂತ್‌ಪೇಸ್ಟ್‌ನ ರುಚಿಗಿಂತ ಅದರ Ingredients ಮತ್ತು Fluoride ಅಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಹಲ್ಲುಗಳ ನಡುವಿನ ಭಾಗವನ್ನು ಸ್ವಚ್ಛವಾಗಿಡುವುದು, ಸಕ್ಕರೆ ಸೇವನೆಯನ್ನು ನಿಯಂತ್ರಿಸುವುದು ಹಾಗೂ ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದು ಬಾಯಿಯ ಆರೋಗ್ಯಕ್ಕೆ ಮುಖ್ಯ.

ಡಯಾಬಿಟಿಸ್ ಇರುವವರಿಗೆ ಬಾಯಿಯ ಆರೋಗ್ಯವೂ ಒಟ್ಟಾರೆ ಆರೋಗ್ಯದ ಪ್ರಮುಖ ಭಾಗವಾಗಿದೆ. ಹೀಗಾಗಿ ಬಾಯಿಯಲ್ಲಿ ಯಾವುದೇ ಅಸಹಜ ಲಕ್ಷಣ ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ದಂತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಇದು ವೈಯಕ್ತಿಕ ವೈದ್ಯಕೀಯ ಅಥವಾ ದಂತ ಚಿಕಿತ್ಸೆಯ ಸಲಹೆಯಲ್ಲ. ನಿಮ್ಮ ಆರೋಗ್ಯ ಸ್ಥಿತಿ ಮತ್ತು ದಂತ ಸಮಸ್ಯೆಗೆ ಅನುಗುಣವಾಗಿ ವೈದ್ಯರು ಅಥವಾ ಅರ್ಹ ದಂತ ವೈದ್ಯರ ಸಲಹೆ ಪಡೆಯಿರಿ.

ಮನುಸ್ಮೃತಿ ವಿವಾದ: ರಾಹುಲ್‌ ಗಾಂಧಿ ವಿರುದ್ಧ ದೂರು ನೀಡಿದ ಸುಪ್ರೀಂ ಕೋರ್ಟ್‌ ವಕೀಲೆ ನಾಜಿಯಾ ಖಾನ್!

0

ನವದೆಹಲಿ: ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಮನುಸ್ಮೃತಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ದೂರು ದಾಖಲಿಸಿದ್ದಾರೆ.

ಪ್ರಾಚೀನ ಗ್ರಂಥದಿಂದ ಆಯ್ದ ಭಾಗಗಳನ್ನು ಮಾತ್ರ ಎತ್ತಿಹಿಡಿದು, ತಿರುಚಿ ಪ್ರಸ್ತುತಪಡಿಸುವ ಮೂಲಕ ಮನುಸ್ಮೃತಿಗೆ ಕಳಂಕ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಜಿಯಾ ಖಾನ್, ತಾವು ಕಲ್ಮಾ ಮತ್ತು ಶಹಾದಾ ಎರಡನ್ನೂ ಪಠಿಸುತ್ತೇನೆ ಎಂದೂ, ಜೊತೆಗೆ ‘ವಂದೇ ಮಾತರಂ’ ಹಾಡುವಾಗ ತಾನೊಬ್ಬಳು ಖಾನ್ ಆಗಿದ್ದರೂ ತನ್ನ ಬಗ್ಗೆ ತನಗೇ ಅಪಾರ ಹೆಮ್ಮೆ ಎನಿಸುತ್ತದೆ ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಕೇವಲ ಒಂದೇ ಅಧ್ಯಾಯವನ್ನು ಆಯ್ದುಕೊಂಡು, ಪದಗಳನ್ನು ತಿರುಚಿ, ಮನುಸ್ಮೃತಿಗೆ ಅಪಖ್ಯಾತಿ ತರುವ ಮತ್ತು ತಪ್ಪು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ತಾನು ಗೌರವಿಸುವುದಾಗಿ ತಿಳಿಸಿದ ಖಾನ್, ಭಾಷಣದ ವೇಳೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರೂ ಮನುಸ್ಮೃತಿ ಓದಬೇಕು ಅಥವಾ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಎಂದಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಖಾನ್, ರಾಹುಲ್ ಗಾಂಧಿ ಈ ರೀತಿ ಏಕೆ ಮಾಡಿದರು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 22ರಂದು ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಮಹಿಳೆಯರ ಗುರುತು ಕೇವಲ ತಂದೆ, ಪತಿ ಅಥವಾ ಮಗನ ಸಂಬಂಧಗಳಿಗೆ ಸೀಮಿತವಾಗಿರಬಾರದು, ಆಕೆ ತನಗೆ ತಾನೇ ಒಡತಿ, ಬೇರೆ ಯಾರಿಗೂ ಸೇರಿದವಳಲ್ಲ ಎಂದು ಪ್ರತಿಪಾದಿಸಿದ್ದರು.

ಈ ವೇಳೆ ಮನುಸ್ಮೃತಿಯ ಸಾಲುಗಳನ್ನು ಉಲ್ಲೇಖಿಸಿದ್ದ ರಾಹುಲ್, ಬಾಲ್ಯದಲ್ಲಿ ಹೆಣ್ಣು ತಂದೆಗೆ ಸೇರಿದವಳು, ಯೌವನದಲ್ಲಿ ಗಂಡನಿಗೆ ಸೇರಿದವಳು, ಪತಿ ತೀರಿಕೊಂಡಾಗ ಮಕ್ಕಳಿಗೆ ಸೇರಿದವಳು, ಆಕೆ ಎಂದಿಗೂ ಸ್ವತಂತ್ರಳಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ ಎಂದಿದ್ದರು. ಇದು ಮನುಸ್ಮೃತಿಯ ನೇರ ಉಲ್ಲೇಖವೆಂದೂ, ಇಂತಹ ಮಾತುಗಳು ನಾಚಿಕೆಗೇಡು ಎಂದೂ ಹೇಳಿದ್ದ ಅವರು, ಮಹಿಳೆಯರಿಗೆ ಸ್ವತಂತ್ರವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದರು.

ಭೂಸ್ವಾಧೀನ ಪರಿಹಾರದ ಜೊತೆ ಭಾವನಾತ್ಮಕ ನಷ್ಟ ಪರಿಹಾರವೂ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

0

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಟಿಯಂ) ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕೆಂದು ಕೋರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ದಿ. ಜಿ. ಸಿದ್ದರಾಮಯ್ಯ ಅವರ ವಾರಸುದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಧಾರವಾಡದ ಹೈಕೋರ್ಟ್ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದು ಪೀಠ ಸ್ಪಷ್ಟಪಡಿಸಿತು.

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300-ಎ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದ್ದರಿಂದ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಈ ಸಂಬಂಧ ಉಭಯ ಪಕ್ಷಕಾರರು ಯಾವುದೇ ನೋಟಿಫಿಕೇಶನ್‌ಗಾಗಿ ಕಾಯದೆ, 2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಗೆ ನೇರವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಯವರ ಸಮಕ್ಷಮ ಹಾಜರಾಗುವಂತೆ ಪೀಠ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ವಕೀಲ ಸಂಕೇತ್ ಶಂಕರಪ್ಪ ಅಂಬಲಿ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಜಿ. ಸಿದ್ಧರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯುವುದಕ್ಕಾಗಿ ನಡೆಯುತ್ತಿದ್ದ ನ್ಯಾಯಾಂಗ ಪ್ರಕ್ರಿಯೆ ನಡುವೆ ಸಿದ್ದರಾಮಯ್ಯ ಮೃತಪಟ್ಟಿದ್ದು, ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರೆಸಿ, ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ನೈಸ್ ವಿರುದ್ಧ ‘ನಥಿಂಗ್ ನೈಸ್’ ವೆಬ್ʼಸೈಟ್ ಬಿಡುಗಡೆ: ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು: ನೈಸ್ ವಿರುದ್ಧ ಜೆಡಿಎಸ್ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಜೆಡಿಎಸ್ “ನಥಿಂಗ್ ನೈಸ್” ವೆಬ್‌ಸೈಟ್ ಬಿಡುಗಡೆ ಮಾಡಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ವೆಬ್‌ಸೈಟ್ ಬಿಡುಗಡೆ ಮಾಡಿದರು.

ಈ ವೆಬ್‌ಸೈಟ್‌ನಲ್ಲಿ ನೈಸ್ ಯೋಜನೆಯ ಸಂಪೂರ್ಣ ವಿವರ, ಟೋಲ್ ಏಕೆ ಕಟ್ಟಬಾರದು, ಹೈಕೋರ್ಟ್ ಆದೇಶ ಏನು ಎಂಬುದು ಸೇರಿ ನೈಸ್ ಅಕ್ರಮದ ಸಂಪೂರ್ಣ ದಾಖಲಾತಿಗಳಿರಲಿದ್ದು, ಇದರ ಮೂಲಕ ಜನರಲ್ಲಿ ಜಾಗೃತಿ ಅಭಿಯಾನ ನಡೆಸಲು ಜೆಡಿಎಸ್ ಮುಂದಾಗಿದೆ.

ವೆಬ್‌ಸೈಟ್ ಬಿಡುಗಡೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನೈಸ್ ಸಂಸ್ಥೆಯಿಂದ 26 ವರ್ಷಗಳಿಂದ ಹಗರಣ ನಡೆದಿದೆ ಎಂದು ಆರೋಪಿಸಿದರು. ಸಾರ್ವಜನಿಕ ಹೆಸರಿನಲ್ಲಿ ನೈಸ್ ಅಭಿವೃದ್ಧಿಪಡಿಸಿಲ್ಲ, ರೈತರಿಗೆ ಪರಿಹಾರ ಸಿಕ್ಕಿಲ್ಲ, ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ, ನೈಸ್ ರಸ್ತೆಯಲ್ಲಿ ಓಡಾಡುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.

1997ರಲ್ಲಿ ಫ್ರೇಮ್‌ವರ್ಕ್ ಅಗ್ರಿಮೆಂಟ್ ಆಗಿದ್ದರೂ ಅದರ ಉಲ್ಲಂಘನೆ ಆಗಿದೆ ಎಂದ ಅವರು, 5 ಟೌನ್‌ಶಿಪ್ ಆಗಬೇಕಿದ್ದ ಈ ಯೋಜನೆ ಇನ್ನೂ ಸಂಪೂರ್ಣವಾಗಿಲ್ಲ ಎಂದರು. 111 ಕಿ.ಮೀ ರಸ್ತೆ ಯೋಜನೆ ಪೈಕಿ ಕೇವಲ 5 ಕಿ.ಮೀ ಮಾತ್ರ ಪೂರ್ಣಗೊಂಡಿದ್ದು, 23 ವರ್ಷ ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ, ಶೇ.65-70ರಷ್ಟು ರೈತರು ಬೀದಿಯಲ್ಲಿದ್ದಾರೆ ಎಂದು ಆರೋಪಿಸಿದರು. ಜಯಚಂದ್ರ ಜಂಟಿ ಸದನ ಸಮಿತಿ ವರದಿಯಲ್ಲಿ 22 ಷರತ್ತುಗಳ ಪೈಕಿ 16 ಷರತ್ತು ಉಲ್ಲಂಘನೆಯಾಗಿದೆ ಎಂಬ ವರದಿ ಇರುವುದಾಗಿಯೂ, ಜುಲೈನಲ್ಲಿ ಹೈಕೋರ್ಟ್ ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶಿಸಿರುವುದಾಗಿಯೂ ತಿಳಿಸಿ, ಸರ್ಕಾರ ಮೌನವಾಗಿರದೆ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಈ ಸರ್ಕಾರ ರಿಯಲ್ ಎಸ್ಟೇಟ್ ಪರ ಇದೆ ಎಂದೂ, ಹೊಸ ಸಿಎಂ ರಿಯಲ್ ಎಸ್ಟೇಟ್ ಫೋರಂನ ಸಿಇಒ ಆಗಿದ್ದರು ಎಂದೂ ಆರೋಪಿಸಿದ ನಿಖಿಲ್, ಸರ್ಕಾರ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು ಎಂದು ಒತ್ತಾಯಿಸಿದರು. ಇಂದಿನಿಂದ ಅಭಿಯಾನ ಆರಂಭಿಸುವುದಾಗಿಯೂ, ರೈತರ ಭೂಮಿ ವಾಪಸ್ ಕೊಡಿಸುವ ಕೆಲಸ ಮಾಡುವುದಾಗಿಯೂ ಹೇಳಿದ ಅವರು, ಪರಿಹಾರ ಹಣವನ್ನು ಬಡ್ಡಿ ಸಮೇತ ಕೊಡಬೇಕು ಹಾಗೂ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹುಟ್ಟುಹಬ್ಬ ಆಚರಿಸಲು ನೇಪಾಳಕ್ಕೆ ಹೋಗಿದ್ದರು: ನಾಪತ್ತೆಯಾದ ತಂದೆ–ತಾಯಿಯನ್ನು ನೆನೆದು ಕಣ್ಣೀರಿಟ್ಟ ಪುತ್ರಿ!

0

ನವದೆಹಲಿ: ನೇಪಾಳದ ಭೀಕರ ಜಲಪ್ರಳಯದ ಬಳಿಕ ನಾಪತ್ತೆಯಾಗಿರುವ ಅಪ್ಪ-ಅಮ್ಮನನ್ನು ನೆನೆದು ಮಗಳು ಕಣ್ಣೀರಿಟ್ಟಿದ್ದಾರೆ. ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ಕಾಣೆಯಾದ ಸುಮಾರು 1,400 ಜನರಲ್ಲಿ ದೀಪಕ್ ಮತ್ತು ಅವರ ಪತ್ನಿ ಮಧು ಅಹುಜಾ ಕೂಡ ಸೇರಿದ್ದಾರೆ.

ಅಮೆರಿಕದ ನಾಗರಿಕರೂ ಭಾರತದ ಸಾಗರೋತ್ತರ ನಾಗರಿಕರು (OCI) ಕಾರ್ಡ್ ಹೊಂದಿದ್ದ ಈ ದಂಪತಿ, ದೀಪಕ್ ಅವರ 60ನೇ ಹುಟ್ಟುಹಬ್ಬದಂದು ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಬಹುನಿರೀಕ್ಷಿತ ಆಸೆ ಪೂರೈಸಲು ಅಮೆರಿಕದಿಂದ ಪ್ರಯಾಣ ಬೆಳೆಸಿದ್ದರು.

ಇಶಾ ಸೇಕ್ರೆಡ್ ವಾಕ್ಸ್ ಮತ್ತು ಟ್ರೆಕ್ಕರ್ಸ್ ಸೊಸೈಟಿಯೊಂದಿಗೆ ಗ್ರೂಪ್ ಎಸ್3 ಅಡಿಯಲ್ಲಿ ಟಿಬೆಟ್‌ನ ಸಾಗಾ ತಲುಪಿದ್ದ ಅವರು, ಅಲ್ಲಿ ತಮ್ಮ ಗ್ರೂಪ್‌ನೊಂದಿಗೆ ಸದ್ಗುರುಗಳನ್ನು ಭೇಟಿಯಾಗಿದ್ದರು. ನಂತರ ಅಮೆರಿಕಗೆ ವಾಪಸ್ ಆಗಲು ಗಡಿಯ ಕಡೆಗೆ ದಕ್ಷಿಣಕ್ಕೆ ಹೋಗುತ್ತಿದ್ದಾಗ ಹವಾಮಾನ ಪರಿಸ್ಥಿತಿ ಅವರ ಪ್ರಯಾಣಕ್ಕೆ ಅಡ್ಡಿಪಡಿಸಿತು.

ಗೈರಾಂಗ್ ಬಂದರಿನ ವಲಸೆ ಪೋಸ್ಟ್‌ನಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆ ಸುಮಾರಿಗೆ ಅಹುಜಾ ಕುಟುಂಬವನ್ನು ಕೊನೆಯದಾಗಿ ಪತ್ತೆಹಚ್ಚಲಾಗಿತ್ತು. ಕೆಲವು ನಿಮಿಷಗಳ ನಂತರ ಧಾರಾಕಾರ ಮಳೆ ಮತ್ತು ಹಿಮನದಿ ಸರೋವರದ ಸ್ಫೋಟದಿಂದ ಉಂಟಾದ ಬೃಹತ್ ಪ್ರವಾಹ ಆ ಪ್ರದೇಶವನ್ನು ಆವರಿಸಿ, ರಸ್ತೆಗಳು, ವಿದ್ಯುತ್ ಮತ್ತು ದೂರಸಂಪರ್ಕ ಕಡಿತಗೊಂಡಿತು.

ತಮ್ಮ ಪೋಷಕರು ಗಡಿ ಠಾಣೆಯ ಚೀನಾದ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸಿರುವ ಪುತ್ರಿಯರಾದ ಶ್ರೇಯಾ ಮತ್ತು ಆಶ್ನಾ, ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಅಪ್ಪ-ಅಮ್ಮ ಕೈಲಾಸ ಯಾತ್ರೆಯ ಕೊನೆಯ ಹಂತದಲ್ಲಿ, ಮನೆಗೆ ಮರಳಲು ಸಾಗಾವನ್ನು ಬಿಡುತ್ತಿದ್ದರು ಎಂದೂ, ಇಶಾ ಫೌಂಡೇಶನ್ ಪ್ರಕಾರ ಅವರು ನೇಪಾಳ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆಗೆ ಟಿಬೆಟ್-ನೇಪಾಳ ಗಡಿ ತಲುಪಿದ್ದರೆಂದೂ, ಕೊನೆಯದಾಗಿ ಗೈರಾಂಗ್ ಬಂದರು ಗಡಿ ದಾಟುವ ಕಚೇರಿಯಲ್ಲಿದ್ದ ಕೆಲವೇ ನಿಮಿಷಗಳ ನಂತರ ಆ ಕಚೇರಿಗೆ ಪ್ರವಾಹ ಅಪ್ಪಳಿಸಿತು ಎಂದು ಶ್ರೇಯಾ ಕಣ್ಣೀರಿಟ್ಟಿದ್ದಾರೆ.

ಅಂದು ಪೋಷಕರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದ್ದೆವು, ಪ್ರವಾಹದ ಸುದ್ದಿ ಕೇಳಿ ಎಚ್ಚರವಾದೆವು ಎಂದ ಶ್ರೇಯಾ, ಪೋಷಕರು ಇಶಾ ಫೌಂಡೇಶನ್‌ನೊಂದಿಗೆ ಇರುವುದರಿಂದ ಅವರು ಪ್ರವಾಹಕ್ಕೆ ಸಿಲುಕಿದ ಗುಂಪಿನ ಭಾಗವಾಗಿದ್ದಾರೆ ಎಂದು ಫೌಂಡೇಶನ್ ಇಮೇಲ್ ಮೂಲಕ ತಿಳಿಸಿತು ಎಂದು ಹೇಳಿದ್ದಾರೆ.

2019ರಿಂದ 2023ರವರೆಗೆ ಹಂಚಿಕೆಯಾದ ಎಲ್ಲಾ ಸೈಟುಗಳು ರದ್ದು ಎಂದ ಯತೀಂದ್ರ ಸಿದ್ದರಾಮಯ್ಯ!

0

ಮೈಸೂರು: 2019ರಿಂದ 2023ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಡಾ ಸೈಟು ಹಂಚಿಕೆ ಹಗರಣ ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2019ರಿಂದ 2023ರವರೆಗಿನ ಎಲ್ಲಾ 50:50 ಸೈಟುಗಳನ್ನು ರದ್ದುಪಡಿಸಲಾಗಿದ್ದು, 1,000ಕ್ಕೂ ಹೆಚ್ಚು ಸೈಟುಗಳನ್ನು ರದ್ದುಮಾಡಲಾಗಿದೆ ಎಂದರು. 50:50 ಸೈಟುಗಳು ಮತ್ತು ಆ ಸೈಟುಗಳಲ್ಲಿ ಮನೆ ಕಟ್ಟಿದವರ ಪಟ್ಟಿಯನ್ನು ತರಿಸುತ್ತಿರುವುದಾಗಿಯೂ, ಕಾನೂನಾತ್ಮಕ ಹೋರಾಟ ಇರುವ ಸೈಟುಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದೂ ತಿಳಿಸಿದರು.

ಸಂಪೂರ್ಣ ಆದೇಶವನ್ನು ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ಆದೇಶ ಜಾರಿ ಮಾಡುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದ ಸಚಿವರು, 2018ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಅಲ್ಲಿ ಅಕ್ರಮಗಳಾಗಿದ್ದರೆ ಅವನ್ನೂ ರದ್ದು ಮಾಡುವುದಾಗಿ ಹೇಳಿದರು. ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರು ಕೂಡ ನಿವೇಶನ ಪಡೆದಿದ್ದಾರೆಂದೂ, ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದು ಮಾಡಲಾಗಿದೆಯೆಂದೂ ಸ್ಪಷ್ಟಪಡಿಸಿದರು.

ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ ಎಂದರು. ತಪ್ಪು ಮಾಡಿದ್ದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು, ಆದರೆ ಗದ್ದಲ ಮಾಡಿ ಅಧಿವೇಶನ ಕೆಡಿಸಿದರು ಎಂದು ಆರೋಪಿಸಿದರು. ನಾಗೇಂದ್ರ ವಿಚಾರದಲ್ಲಿ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಬಿಜೆಪಿ ಪ್ರತಿಭಟನೆ ಮಾಡುವ ಬದಲು ಸದನದಲ್ಲಿ ಚರ್ಚೆ ಮಾಡಬಹುದಿತ್ತು ಎಂದು ಹೇಳಿದರು.

ಕಾನ್ಪುರದಲ್ಲಿ ಭೀಕರ ತರಬೇತಿ ವಿಮಾನ ಅಪಘಾತ: ಕರ್ನಾಟಕದ ಅಭಿಷೇಕ್ ಪೂಜಾರಿ ಸೇರಿ ಇಬ್ಬರು ಪೈಲಟ್‌ಗಳು ಸಾವು

0

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ತರಬೇತಿ ವಿಮಾನ ಪತನಗೊಂಡು ಕರ್ನಾಟಕದ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಸುಮಾರು 11.30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿದ್ದ ಡಬಲ್ ಎಂಜಿನ್ ವಿಮಾನ, ತರಬೇತಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಸುಮಾರು 20 ನಿಮಿಷಗಳ ಬಳಿಕ ಪತನಗೊಂಡಿದೆ.

ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಅವರ ಪ್ರಕಾರ, ವಿಮಾನವು ಹೊಲವೊಂದಕ್ಕೆ ಅಪ್ಪಳಿಸಿದ್ದು, ಅಪಘಾತದ ತೀವ್ರತೆಗೆ ವಿಮಾನದ ಅವಶೇಷಗಳು ಸುತ್ತಮುತ್ತ ಚದುರಿಕೊಂಡಿವೆ. ವಿಮಾನ ಪತನದ ವೇಳೆ ಭಾರಿ ಶಬ್ದ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಪತನಗೊಂಡ ಟೆಕ್ನಮ್ ಅವಳಿ ಎಂಜಿನ್ ವಿಮಾನವನ್ನು 2023ರಲ್ಲಿ ತರಬೇತಿ ಉದ್ದೇಶಕ್ಕಾಗಿ ಫ್ಲೈಟ್ ಟ್ರೈನಿಂಗ್ ಶಾಲೆಗೆ ತರಲಾಗಿತ್ತು. ಬೋಧಕ ಪೈಲಟ್ ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ಅಪಘಾತದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದ್ದು, ತಾಂತ್ರಿಕ ತನಿಖೆ ಮೂಲಕ ಅಪಘಾತದ ಕಾರಣ ಪತ್ತೆಹಚ್ಚಲಾಗುವುದು ಎಂದು ಡಿಜಿಸಿಎ ತಿಳಿಸಿದೆ.

ಈ ವರ್ಷವೇ ಮೂರನೇ ತರಬೇತಿ ವಿಮಾನ ಅಪಘಾತ

ತರಬೇತಿ ವಿಮಾನಗಳಿಗೆ ಸಂಬಂಧಿಸಿದ ಅಪಘಾತಗಳು ಈ ವರ್ಷವೂ ಮುಂದುವರಿದಿವೆ. ಜೂನ್‌ನಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಎರಡು ಆಸನಗಳ ತರಬೇತಿ ವಿಮಾನವೊಂದು ಹೊಲಕ್ಕೆ ಪತನಗೊಂಡಿತ್ತು. ಅಲೀಗಢ ವಿಮಾನ ನಿಲ್ದಾಣದಿಂದ ತರಬೇತಿ ಹಾರಾಟಕ್ಕೆ ತೆರಳಿದ್ದ ವಿಮಾನ ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಬಳಿಕ ಪತನಗೊಂಡಿತ್ತು. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ತರಬೇತಿ ಪೈಲಟ್ ಕೈನಾತ್ ಖಾನ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.

ಇದಕ್ಕೂ ಮೊದಲು ಮೇ 13ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಲ್ಯಾಂಡಿಂಗ್ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ತುರ್ತು ಲ್ಯಾಂಡಿಂಗ್ ಮಾಡಿತ್ತು. ವಿಮಾನದಲ್ಲಿದ್ದ ತರಬೇತಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.

ಕಾನ್ಪುರದ ಇಂದಿನ ದುರಂತದಲ್ಲಿ ಇಬ್ಬರು ಪೈಲಟ್‌ಗಳ ಜೀವಹಾನಿಯಾಗಿರುವುದು ತರಬೇತಿ ವಿಮಾನಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾರತದ ಚೆಸ್ ಪ್ರತಿಭೆಗೆ ಮತ್ತೊಂದು ಗರಿ: ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದ ಆರ್. ಪ್ರಜ್ಞಾನಂದ

0

ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅಮೆರಿಕದ ಸೈಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೈನಲ್‌ನಲ್ಲಿ ಅಮೆರಿಕದ ಸ್ಟಾರ್ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಅದ್ಭುತ ಕಮ್‌ಬ್ಯಾಕ್ ಮಾಡಿದ ಪ್ರಜ್ಞಾನಂದ, ಒಟ್ಟಾರೆ 15-13 ಅಂಕಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದರು. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ 2 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 1.67 ಕೋಟಿ ರೂಪಾಯಿಗೂ ಅಧಿಕ ನಗದು ಬಹುಮಾನ ಲಭಿಸಿದೆ.

ಫೈನಲ್ ಪಂದ್ಯದ ಆರಂಭದಲ್ಲಿ ಕರುವಾನಾ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ಪ್ರಜ್ಞಾನಂದ 6-0 ಅಂತರದಿಂದ ಸೋಲನುಭವಿಸಿ ಭಾರೀ ಹಿನ್ನಡೆ ಅನುಭವಿಸಿದರು. ಬಳಿಕ ಎರಡನೇ ಕ್ಲಾಸಿಕಲ್ ಗೇಮ್‌ನಲ್ಲಿ 3-3ರ ಡ್ರಾ ಸಾಧಿಸುವ ಮೂಲಕ ತಿರುಗೇಟು ನೀಡಿದರು.

ಆದರೂ ಕ್ಲಾಸಿಕಲ್ ಸುತ್ತುಗಳ ಅಂತ್ಯದ ವೇಳೆಗೆ ಕರುವಾನಾ 6 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅಂತಿಮ ದಿನದಾಟಕ್ಕೆ ಪ್ರವೇಶಿಸಿದ್ದರು. ಈ ಹಂತದಲ್ಲಿ ಪ್ರಜ್ಞಾನಂದ ಅವರ ಮುಂದೆ ದೊಡ್ಡ ಸವಾಲು ಎದುರಾಗಿತ್ತು.

ಆದರೆ ರ್‍ಯಾಪಿಡ್ ವಿಭಾಗದಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಅದ್ಭುತ ಪ್ರದರ್ಶನ ನೀಡಿದರು. ಸತತ ಎರಡು ರ್‍ಯಾಪಿಡ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಜ್ಞಾನಂದ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕರುವಾನಾ ವಿರುದ್ಧದ ಭಾರೀ ಹಿನ್ನಡೆಯನ್ನು ಹಂತ ಹಂತವಾಗಿ ಸರಿದೂಗಿಸಿದ ಅವರು, ಚಾಂಪಿಯನ್ ಪಟ್ಟದ ರೇಸ್‌ನಲ್ಲಿ ಮತ್ತೆ ಪ್ರಬಲವಾಗಿ ಕಾಣಿಸಿಕೊಂಡರು.

ಮುನ್ನಡೆ ಕಾಯ್ದುಕೊಳ್ಳಲು ನಾಲ್ಕು ಪಂದ್ಯಗಳ ಬ್ಲಿಟ್ಜ್ ಹಂತ ನಿರ್ಣಾಯಕವಾಗಿತ್ತು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಅವರಿಗೆ ಗೆಲುವಿನ ಉತ್ತಮ ಅವಕಾಶವಿದ್ದರೂ, ಸಮಯದ ಒತ್ತಡದಲ್ಲಿ ಕೆಲ ತಪ್ಪುಗಳನ್ನು ಮಾಡಿದರು. ಆದರೆ ಕರುವಾನಾಗೆ ಗೆಲುವಿನ ನಿರ್ಣಾಯಕ ನಡೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ, ಅಂತಿಮವಾಗಿ ಒಟ್ಟಾರೆ 15-13 ಅಂಕಗಳ ಅಂತರದಿಂದ ಕರುವಾನಾ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ಆರ್. ಪ್ರಜ್ಞಾನಂದ ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. 6 ಪಾಯಿಂಟ್‌ಗಳ ಹಿನ್ನಡೆಯಿಂದ ಆರಂಭಿಸಿ, ರ್‍ಯಾಪಿಡ್ ಮತ್ತು ಬ್ಲಿಟ್ಜ್ ಹಂತಗಳಲ್ಲಿ ಸಂಘಟಿತ ಆಟದ ಮೂಲಕ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡಿರುವ ಪ್ರಜ್ಞಾನಂದ ಅವರ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತೀಯ ಚೆಸ್‌ನ ಯುವ ಪ್ರತಿಭೆಯಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಪ್ರಜ್ಞಾನಂದ ಅವರ ಈ ಐತಿಹಾಸಿಕ ಗೆಲುವು ದೇಶದ ಚೆಸ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ.