ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ ರಜತ ಮಹೋತ್ಸವ ಹಾಗೂ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಅಪರೂಪದ ಮಂಚರಿಗಾಥಾ ಭಜನೆ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಕಳೆದ ಮಂಗಳವಾರದಿಂದ ಆರಂಭವಾಗಿರುವ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಸಮಾರೋಪಗೊಳ್ಳಲಿದ್ದು, ಪ್ರತಿಷ್ಠಾಪನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಮಂಚರಿಗಾಥಾ ಭಜನೆ ಗಮನ ಸೆಳೆಯುತ್ತಿದೆ.
ಮಂಗಳವಾರದಿಂದ ನೂರಾರು ಸಮಾಜ ಬಾಂಧವರು ಮುಂಜಾನೆ ಹಾಗೂ ಸಂಜೆ ಮಂಚರಿಗಾಥಾ ಭಜನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿನೂತನ ಹಾಗೂ ವೈಶಿಷ್ಟ್ಯಪೂರ್ಣ ಭಜನೆಯ ಧ್ವನಿ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರತಿಧ್ವನಿಸುತ್ತಿದ್ದು, ಭಜನೆ ಆಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಮಂಚರಿಗಾಥಾ ಭಜನೆ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದ್ದು, ಸಮಾಜ ಬಾಂಧವರು ಅತ್ಯಂತ ಉತ್ಸಾಹ ಮತ್ತು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿದ್ದಾರೆ.
ಸುಮಾರು 537 ಅಭಂಗಗಳನ್ನು ಒಳಗೊಂಡಿರುವ ಮಂಚರಿಗಾಥಾ, ಸದ್ಗುರು ತುಕಾರಾಮ ಮಹಾರಾಜರು ಕೈಬರಹದಲ್ಲಿ ರಚಿಸಿರುವ ಅಮೂಲ್ಯ ಗ್ರಂಥವೆಂದು ತಿಳಿದುಬಂದಿದೆ. ಈ ಗ್ರಂಥಕ್ಕೆ ವಿಶೇಷ ಧಾರ್ಮಿಕ ಹಿನ್ನೆಲೆಯಿದ್ದು, ಭಕ್ತಿಭಾವದಿಂದ ಇದರ ಪಾರಾಯಣ ಹಾಗೂ ಭಜನೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಂಚರಿಗಾಥಾವನ್ನು ಭಕ್ತಿಯಿಂದ ಅನುಷ್ಠಾನ ಮಾಡಿ ಭಜಿಸಿದರೆ ವಿಶೇಷ ಫಲ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಇದೆ. ವಾಶಿ ಕ್ಷೇತ್ರದಲ್ಲಿ ವಾಸಕರ ಮಹಾರಾಜರ ಮನೆಯಲ್ಲಿ ಈ ಅಪರೂಪದ ಗ್ರಂಥ ಇಂದಿಗೂ ಸಂರಕ್ಷಿಸಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಲಕ್ಷ್ಮೇಶ್ವರದಲ್ಲಿ ಮಂಚರಿಗಾಥಾ ಭಜನೆ ಆಚರಿಸಲಾಗುತ್ತಿರುವುದು ಕರ್ನಾಟಕದಲ್ಲಿಯೇ ಪ್ರಥಮ ಎಂಬುದು ವಿಶೇಷವಾಗಿದೆ.
ಕಳೆದ ನಾಲ್ಕು ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು, ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆಯುತ್ತಿವೆ.
ಐದು ದಿನಗಳ ಕಾರ್ಯಕ್ರಮ ಶನಿವಾರ ಮುಕ್ತಾಯಗೊಳ್ಳಲಿದ್ದು, ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಕೊಲ್ಲಾಪುರದ ವಾರಕರಿ ರತ್ನ ಹ.ಭ.ಪ. ತುಕಾರಾಮ ಪವಾರ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

