Home Blog Page 50

ಬಜೆಟ್ ಅಧಿವೇಶನ ಮಾ.26ಕ್ಕೆ ಮೊಟಕುಗೊಳಿಸಲು ತೀರ್ಮಾನ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಮಾರ್ಚ್ 26ರಂದು ಮುಕ್ತಾಯಗೊಳಿಸಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.

ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳ ಕುರಿತು ಸದನದಲ್ಲಿ ಮಾಹಿತಿ ನೀಡಿದ ಅವರು, ಬಜೆಟ್ ಮೇಲಿನ ಚರ್ಚೆ ಇಂದು ಕೊನೆಗೊಳ್ಳಲಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮಾರ್ಚ್ 27ರವರೆಗೆ ಅಧಿವೇಶನ ಮುಂದುವರಿಸುವ ಯೋಜನೆ ಇದ್ದರೂ, ಇದೀಗ ಒಂದು ದಿನ ಮೊಟಕುಗೊಳಿಸಿ ಮಾರ್ಚ್ 26ಕ್ಕೆ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.

ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಹಿನ್ನೆಲೆ, ಪ್ರಚಾರ ಕಾರ್ಯಕ್ಕೆ ಸದಸ್ಯರು ತೆರಳಬೇಕಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಈ ಮೂಲಕ 13 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನವನ್ನು 12 ದಿನಗಳಿಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಲಾಗುತ್ತಿದೆ.

ಮತಾಂತರಗೊಂಡರೆ SC ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ʼನಿಂದ ಐತಿಹಾಸಿಕ ತೀರ್ಪು!

0

ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದವರಿಗಷ್ಟೇ ಪರಿಶಿಷ್ಟ ಜಾತಿ ಸ್ಥಾನಮಾನ ಲಭ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಂಗಳವಾರ ನೀಡಿದ ಈ ತೀರ್ಪಿನಲ್ಲಿ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದರಿಂದ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನಮೋಹನ್ ಅವರ ಪೀಠ ಈ ತೀರ್ಪು ನೀಡಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಅನುಸರಿಸುವವರು ಪರಿಶಿಷ್ಟ ಜಾತಿಯ ಸದಸ್ಯರಾಗಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಪು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ ಮೇ 2025ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ವೇಳೆ ಹೊರಬಂದಿದೆ.

ಆನಂದ್ ಅವರು ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ಜಾತಿ ತಾರತಮ್ಯ ಹಾಗೂ ನಿಂದನೆ ಎದುರಿಸಿದ್ದಾಗಿ ಆರೋಪಿಸಿ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ನಂತರ ರಾಮಿರೆಡ್ಡಿ ಹೈಕೋರ್ಟ್‌ಗೆ ಮೊರೆ ಹೋಗಿ ಪ್ರಕರಣ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದರು. ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ, ಅವರಿಗೆ ಎಸ್‌ಸಿ ಸ್ಥಾನಮಾನ ಇಲ್ಲ ಎಂದು ನ್ಯಾಯಾಲಯ ಹೇಳಿ ಎಫ್‌ಐಆರ್ ರದ್ದುಗೊಳಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆನಂದ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿದೆ.

ಗ್ರಾಮಸ್ಥರ ಆತಂಕಕ್ಕೆ ತೆರೆ: ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು!

ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ತಡಸನಹಳ್ಳಿ ಗ್ರಾಮದ ಬಳಿ ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮೃತ ರೈತ ಮೃತ್ಯುಂಜಯ ಅವರ ತೋಟದ ಸಮೀಪವೇ ಚಿರತೆಯ ಕಳೇಬರ ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಪಶುವೈದ್ಯರ ಮೂಲಕ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಚಿರತೆ ಹಸಿವಿನಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅದರ ದೇಹದ ಮೇಲೆ ಯಾವುದೇ ಗಾಯಗಳ ಗುರುತುಗಳು ಕಂಡುಬಂದಿಲ್ಲ. ಕಲ್ಲುಗಳಿಂದ ದಾಳಿ ನಡೆದಿರುವ ಲಕ್ಷಣಗಳೂ ಕಾಣಿಸಿಲ್ಲ.

ಈ ಕುರಿತು ಮಾಹಿತಿ ನೀಡಿದ ಶಿರಾಳಕೊಪ್ಪ ಆರ್‌ಎಫ್‌ಒ ಜಾವೇದ್ ಬಾಷಾ ಅಂಗಡಿ, “ಇದೇ ಮೊನ್ನೆ ರೈತನ ಮೇಲೆ ದಾಳಿ ಮಾಡಿದ ಚಿರತೆ. ದಾಳಿ ನಡೆದ ಸ್ಥಳದ ಬಳಿ ನಾವು ಬೋನ್ ಇಟ್ಟಿದ್ದೆವು. ಬೋನ್‌ನಿಂದ ಸ್ವಲ್ಪ ದೂರದಲ್ಲೇ ಚಿರತೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಚಿರತೆಯ ಹೊಟ್ಟೆಯಲ್ಲಿ ಯಾವುದೇ ಆಹಾರ ಅವಶೇಷಗಳು ಪತ್ತೆಯಾಗಿಲ್ಲ. ಇದರಿಂದ ಹಸಿವು ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಫೋಟಕ ಬ್ಯಾಟಿಂಗ್ʼಗೆ ರೆಡಿ: IPLನಲ್ಲಿ ದಾಖಲೆ ಬರೆಯಲು ಅಭಿಷೇಕ್ ಶರ್ಮಾ ಸಜ್ಜು

0

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ ಅಥವಾ ಐಪಿಎಲ್ ಆಗಲಿ, ಅವರ ಆಕ್ರಮಣಕಾರಿ ಆಟ ಶೈಲಿ ಎಲ್ಲೆಡೆ ಒಂದೇ ರೀತಿ ಕಾಣಿಸಿಕೊಳ್ಳುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 21 ಎಸೆತಗಳಲ್ಲಿ 52 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ಇದೀಗ ಐಪಿಎಲ್ 2026ರ ಮೇಲೆ ಕಣ್ಣಿಟ್ಟಿದ್ದಾರೆ.

ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಎರಡು ಮಹತ್ವದ ಮೈಲಿಗಲ್ಲು ಸಾಧಿಸುವ ಸಾಧ್ಯತೆಯಿದೆ. ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ಪರ 74 ಪಂದ್ಯಗಳಲ್ಲಿ 96 ಸಿಕ್ಸರ್‌ಗಳನ್ನು ಬಾರಿಸಿರುವ ಅವರು, ಇನ್ನೂ 4 ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟಲಿದ್ದಾರೆ.

ಈ ಸಾಧನೆ ಮಾಡಿದರೆ ಸನ್‌ರೈಸರ್ಸ್ ಪರ 100 ಸಿಕ್ಸರ್‌ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2014ರಿಂದ 2021ರವರೆಗೆ ಸನ್‌ರೈಸರ್ಸ್ ಪರ 95 ಪಂದ್ಯಗಳಲ್ಲಿ ಅವರು 143 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ.

US-Iran war: ಅಮೆರಿಕ ಜೊತೆ ಮಾತುಕತೆಗೆ ಮೊಜ್ತಬಾ ಖಮೇನಿ ಗ್ರೀನ್ ಸಿಗ್ನಲ್!

0

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಮ್ಮತಿಸಿದ್ದಾರೆ ಎಂಬ ವರದಿ ಹೊರಬಂದಿದೆ.

ಸೌದಿ ಅರೇಬಿಯಾದ ‘ಅಲ್ ಅರೇಬಿಯಾ’ ಮಾಧ್ಯಮದ ವರದಿ ಪ್ರಕಾರ, ಖಮೇನಿ ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

ಇದೇ ವೇಳೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಳೆದ ಎರಡು ದಿನಗಳಲ್ಲಿ ಇರಾನ್ ಜೊತೆ ಉತ್ತಮ ಮತ್ತು ಫಲಪ್ರದ ಮಾತುಕತೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಗಳನ್ನು ಐದು ದಿನಗಳವರೆಗೆ ಮುಂದೂಡಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು, 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಗಡುವಿನೊಳಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಯುದ್ಧ ಸಂಭವಿಸುವ ಭೀತಿ ವ್ಯಕ್ತವಾಗಿತ್ತು.

ಆದರೆ ಅಮೆರಿಕದ ಈ ಬೆದರಿಕೆಗೆ ಜಗ್ಗದ ಇರಾನ್, ತಮ್ಮ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಮಧ್ಯಪ್ರಾಚ್ಯದ ಇತರ ದೇಶಗಳ ಇಂಧನ ವ್ಯವಸ್ಥೆಗಳನ್ನೂ ಗುರಿಯಾಗಿಸುತ್ತೇವೆ ಎಂದು ತಿರುಗೇಟು ನೀಡಿತ್ತು.

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: 19 ವಿಶೇಷ ರೈಲುಗಳು ಖಾಯಂ ಸೇವೆಗೆ!

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗಳಾಗಿ ಪರಿವರ್ತಿಸಿದೆ.

ಈ ಪಟ್ಟಿಯಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ಕ್ರಮದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.

ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದಾಗ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಸುಮಾರು 30% ಹಾಗೂ ಸಾಮಾನ್ಯ ಟಿಕೆಟ್‌ಗಳಲ್ಲಿ 10–15%ರವರೆಗೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಖಾಯಂಗೊಂಡ ಎಕ್ಸ್‌ಪ್ರೆಸ್ ರೈಲುಗಳು:

  • ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ (16281/16282) – ವಾರಕ್ಕೊಮ್ಮೆ
  • ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (16563/16564) – ವಾರಕ್ಕೊಮ್ಮೆ
  • SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (16559/16560) – ವಾರಕ್ಕೊಮ್ಮೆ
  • ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (16555/16556) – ವಾರಕ್ಕೊಮ್ಮೆ
  • ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (17363/17364) – ವಾರಕ್ಕೊಮ್ಮೆ
  • ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (10109/10110)

ಮೆಮು / ಡೆಮು ರೈಲುಗಳು:

  • ಬೆಂಗಳೂರು – ಹೊಸೂರು ಮೆಮು (66595/96) – ಪ್ರತಿದಿನ
  • ಹುಬ್ಬಳ್ಳಿ – ವಿಜಯಪುರ ಮೆಮು (66501/02) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (66597/98) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (06213/14) – ವಾರಕ್ಕೆ 3 ಬಾರಿ
  • ಬಂಗಾರಪೇಟೆ – SMVT ಬೆಂಗಳೂರು ಮೆಮು (66537/38) – ಪ್ರತಿದಿನ
  • ಹೊಸಪೇಟೆ – ಹುಬ್ಬಳ್ಳಿ ಡೆಮು (76507/08) – ವಾರಕ್ಕೊಮ್ಮೆ
  • ಬಳ್ಳಾರಿ – ದಾವಣಗೆರೆ ಡೆಮು (76509/10) – ವಾರಕ್ಕೆ 6 ದಿನ
  • ಬೆಂಗಳೂರು – ಹಾಸನ ಡೆಮು (66525/26) – ವಾರಕ್ಕೆ 6 ದಿನ
  • ಬಳ್ಳಾರಿ – ಹೊಸಪೇಟೆ ಡೆಮು (07397/98) – ವಾರಕ್ಕೆ 6 ದಿನ

ಇತರೆ ಪ್ಯಾಸೆಂಜರ್ ರೈಲುಗಳು:

ಬೆಂಗಳೂರು–ಚನ್ನಪಟ್ಟಣ, ಮೈಸೂರು–SMVT ಬೆಂಗಳೂರು, ಯಶವಂತಪುರ–ಹಿಂದೂಪುರ ಹಾಗೂ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲುಗಳನ್ನೂ ಖಾಯಂ ಮಾಡಲಾಗಿದೆ. ಈ ನಿರ್ಧಾರದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಲಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ಕ್ರಮ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ: ನೋಂದಣಾಧಿಕಾರಿ ವಿರುದ್ಧ ಹೈಕೋರ್ಟ್ ಗರಂ

ಬೆಂಗಳೂರು: ಜೀವಂತವಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮುಂದಿನ ವಿಚಾರಣೆಯ ವೇಳೆಗೆ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಿರುವ ಬಗ್ಗೆ ಹಿಂಬರಹ ಸಲ್ಲಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ)ಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ಹೈಕೋರ್ಟ್  ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರಿನ ಚಿಕ್ಕಪೇಟೆ ವಲಯ ಕಚೇರಿಯಿಂದ ನೀಡಲಾದ ತಾತ್ಕಾಲಿಕ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ನಿರ್ದೇಶಿಸಬೇಕೆಂದು ಡಿ. ಮೆಹಬೂಬ್ ಬಾಷಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣಪತ್ರವನ್ನು ಹಿಂಪಡೆಯದಿರುವುದರಿಂದ ಅರ್ಜಿದಾರರು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವಂತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಜನನ ಮತ್ತು ಮರಣಗಳ ನೋಂದಣಾಧಿಕಾರಿ ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ವರದಿ ಸಲ್ಲಿಸಬೇಕು. ವಿಫಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

ಇದಕ್ಕೂ ಮೊದಲು ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ಆದೇಶ ನೀಡಿದ್ದರೂ ಅದನ್ನು ಪಾಲಿಸದಿರುವ ಬಗ್ಗೆ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ, ಏಕೆ ದಂಡ ವಿಧಿಸಬಾರದು ಎಂದು ವಿಚಾರಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಬಿಎ ಜನನ-ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆ ವೈದ್ಯಾಧಿಕಾರಿ ಹಾಗೂ ಜಿಬಿಎ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಜೀವಂತವಾಗಿದ್ದರೂ ಮರಣ ಪ್ರಮಾಣಪತ್ರ ನೀಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅವರ ಪ್ಯಾನ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳಿದ್ದರೂ, ಆಧಾರ್ ಕಾರ್ಡ್ ಪಡಿತರ ಚೀಟಿಗೆ ಸಂಪರ್ಕಗೊಂಡಿರುವ ಕಾರಣದಿಂದ ಪಡಿತರ ಪಡೆಯಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.

ಗದಗ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿವೃತ್ತ ಅಂಗನವಾಡಿ ಶಿಕ್ಷಕಿ ಸಾವು

ಗದಗ: ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸಮೀಪ ಭಾನುವಾರ ನಡೆದಿದೆ.

ಮೃತರನ್ನು ಚುರ್ಚಿಹಾಳ ಗ್ರಾಮದ ಗಂಗವ್ವ ಕೋಂ ಕುಮಾರಸ್ವಾಮಿ ಹೊಂಬಾಳಿಮಠ (62) ಎಂದು ಗುರುತಿಸಲಾಗಿದೆ. ಅವರು ಅಂಗನವಾಡಿ ನಿವೃತ್ತ ಶಿಕ್ಷಕಿಯಾಗಿದ್ದು, ಗದಗದಲ್ಲಿರುವ ಎಲ್‌.ಐ‌.ಸಿ ಕಚೇರಿಗೆ ತೆರಳುವ ಉದ್ದೇಶದಿಂದ ಹೊರಟಿದ್ದರು.

ಹುಲಕೋಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ರಸ್ತೆ ದಾಟುತ್ತಿದ್ದ ವೇಳೆ, ಗದಗದಿಂದ ಹುಬ್ಬಳ್ಳಿ ಕಡೆಗೆ ಅತಿವೇಗವಾಗಿ ಸಾಗುತ್ತಿದ್ದ ಕಾರು (ಕೆ.ಎ.26/ಎನ್.9326) ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡ ಗಂಗವ್ವ ಅವರನ್ನು ತಕ್ಷಣ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌.ಡಿ‌.ಎಂ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆ ಪ್ರವೇಶ ದ್ವಾರದ ಬಳಿಯೇ ಕೊನೆಯುಸಿರೆಳೆದಿದ್ದಾರೆ.

ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಆರೋಪದ ಮೇಲೆ ಕಾರು ಚಾಲಕ ಅಬ್ದುಲ್ ಗಫೂರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸ್ಥಳೀಯರು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ವೇಗ ನಿಯಂತ್ರಣ ಕ್ರಮಗಳನ್ನು ಕಠಿಣಗೊಳಿಸುವಂತೆ ಆಗ್ರಹಿಸಿದ್ದಾರೆ.

ಮುಂಡರಗಿ ಪೊಲೀಸರ ಕಾರ್ಯಾಚರಣೆ: ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ – 7 ಬೈಕ್ ಜಪ್ತಿ

ಗದಗ: ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 18/03/2026 ರಂದು ದಾಖಲಾಗಿದ್ದ ಗುನ್ನಾ ಸಂಖ್ಯೆ 50/2026, ಕಲಂ 303(2) ಬಿ.ಎನ್.ಎಸ್-2023 ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ನಿರ್ದೇಶನದಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಠಾಣೆಯ ಸಬ್ ಇನ್ಸಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಕಾರ್ಯಾಚರಣೆ ನಡೆಸಿದರು.

ದಿನಾಂಕ 20/03/2026 ರಂದು ಮುಂಡರಗಿ ಪಟ್ಟಣದ ಗೋಂದಳಿ ಓಣಿಯ ಕಾರ್ ಡ್ರೈವರ್ ರವಿ ತಂದೆ ಪರಶುರಾಮ ಕುಕನೂರು (34) ಎಂಬಾತನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತ ಮುಂಡರಗಿ, ಕೊಪ್ಪಳ ಹಾಗೂ ಗದಗ ನಗರ ಪ್ರದೇಶಗಳಲ್ಲಿ ಒಟ್ಟು 7 ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ ಸುಮಾರು ₹2.05 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 7 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಾದ ಜೆ.ಐ ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಮಹೇಶ ಗೊಳಗೊಳಕಿ, ವಿನಾಯಕ ಬಾಲರಡ್ಡಿ, ನಾಗರಾಜ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ, ನಿಂಗಪ್ಪ ಪೂಜಾರ ಹಾಗೂ ಪರಶುರಾಮ ಧಾರವಾಡ ಅವರ ಶ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪ್ರಶಂಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಬೆಂಗಳೂರು: ತ್ಯಾಜ್ಯ ಸಂಗ್ರಹಣೆ ಸ್ಥಗಿತ – 50 ವಾರ್ಡ್‌ಗಳಲ್ಲಿ ಕಸದ ಅಡಚಣೆ!

ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ ಗಂಭೀರ ಅಡಚಣೆ ಉಂಟಾಗಿದೆ.

ಕನಿಷ್ಠ 50 ವಾರ್ಡ್‌ಗಳಲ್ಲಿ ಸೋಮವಾರ ಕಸದ ಸಂಗ್ರಹಣೆ ಸ್ಥಗಿತಗೊಂಡಿತ್ತು. ಮೂಲಗಳ ಪ್ರಕಾರ, ವೇತನ ಬಾಕಿ ಮತ್ತು ಕಸ ವಿಂಗಡಣೆ ಕುರಿತ ಹೊಸ ನಿಯಮದ ವಿರುದ್ಧ ಆಟೋ ಟಿಪ್ಪರ್ ಚಾಲಕರು ಮತ್ತು ಲೋಡರ್‌ಗಳು ಸಾಮೂಹಿಕ ರಜೆ ತೆಗೆದುಕೊಂಡಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲದಲ್ಲೇ ಕಸದ ವಿಂಗಡಣೆ ಕಡ್ಡಾಯವಾಗಬೇಕು ಎಂದು ಒತ್ತಾಯಿಸುತ್ತಿದ್ದು, ಕಸ ವಿಂಗಡಿಸುವ ಜವಾಬ್ದಾರಿ ಕಸ ಉತ್ಪಾದಕರದ್ದು, ಸಂಗ್ರಹಿಸುವವರದ್ದಲ್ಲ ಎಂದು ವಾದಿಸಿದ್ದಾರೆ.

BSWML ಸಿಇಒ ಕರೀಗೌಡ ಮಾಹಿತಿ ನೀಡಿದ್ದು, “ಸುಮಾರು 40–50 ವಾರ್ಡ್‌ಗಳಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ, ನಗರದ ಉಳಿದ ಭಾಗಗಳಲ್ಲಿ ಸಂಗ್ರಹಣೆ ಸಾಮಾನ್ಯವಾಗಿದೆ. ಕಳೆದ ನಾಲ್ಕು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಕಸ ಸಂಗ್ರಹಿಸದ ಗುತ್ತಿಗೆದಾರರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ ಅಡಿಯಲ್ಲಿ 35 ಎಫ್‌ಐಆರ್‌ಗಳು ದಾಖಲಾಗಿವೆ. ಗುತ್ತಿಗೆದಾರರ ಸಂಘವು ಹೊಸ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್‌ಎನ್ ಬಾಲಸುಬ್ರಮಣಿಯನ್, ತ್ಯಾಜ್ಯವನ್ನು ಬೇರ್ಪಡಿಸುವ ಜವಾಬ್ದಾರಿ ತ್ಯಾಜ್ಯ ಉತ್ಪಾದಕರ ಮೇಲಿದೆ ಎಂದು ಹೇಳಿದ್ದಾರೆ.

error: Content is protected !!