Home Blog Page 52

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ಮಲೆ ಮಹದೇಶ್ವರ ಬೆಟ್ಟದಲ್ಲಿ ಅನ್ನದಾಸೋಹ ಸ್ಥಗಿತ?

ಚಾಮರಾಜನಗರ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ದೇಶದ ಹಲವೆಡೆ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗುತ್ತಿರುವ ಹಿನ್ನೆಲೆ, ಇದರ ಪ್ರಭಾವ ಈಗ ಮಲೆ ಮಹದೇಶ್ವರ ಬೆಟ್ಟಕ್ಕೂ ತಲುಪಿದೆ.

ಯುಗಾದಿ ಜಾತ್ರೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನ್ನದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರತಿ ದಿನ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅನ್ನದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಇದೇ ವೇಳೆ ಲಾಡು ಪ್ರಸಾದ ತಯಾರಿಕೆಗೆ ಸಹ ಸಾಕಷ್ಟು ಗ್ಯಾಸ್ ಸಿಲಿಂಡರ್ ಅಗತ್ಯವಿರುತ್ತದೆ. ದಿನಕ್ಕೆ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಅನ್ನದಾಸೋಹ ಮತ್ತು ಲಾಡು ತಯಾರಿಕೆಗೆ ಬಳಸಲಾಗುತ್ತಿದೆ. ಸದ್ಯಕ್ಕೆ ಒಂದು ವಾರದವರೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಗ್ಯಾಸ್ ಕೊರತೆ ಇದೇ ರೀತಿಯಲ್ಲಿ ಮುಂದುವರಿದರೆ ದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಪ್ರತಿ ವರ್ಷ ಮೂರು ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಜಾತ್ರೆಯ ವೇಳೆ ಕೇವಲ ಅನ್ನದಾಸೋಹಕ್ಕೆ ದಿನಕ್ಕೆ 12ರಿಂದ 15 ಸಿಲಿಂಡರ್ ಅಗತ್ಯವಿರುತ್ತದೆ. ಅದೇ ರೀತಿ ಸುಮಾರು 2.5 ಲಕ್ಷ ಲಾಡು ತಯಾರಿಕೆಗೆ ದಿನಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಬಳಸಲಾಗುತ್ತದೆ.

ಗ್ಯಾಸ್ ಸಿಲಿಂಡರ್ ಕೊರತೆ ಮುಂದುವರಿದರೆ ಯುಗಾದಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಸೇವನೆ ಅಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಯುದ್ಧದಲ್ಲಿ ಭಾಗಿಯಾಗದ ದೇಶಗಳ ಮೇಲೂ ಪರಿಣಾಮ ಬೀರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಲವರ್ ಜೊತೆ ಠಾಣೆ ಮೆಟ್ಟಿಲೇರಿದ ಕುಂಭಮೇಳದ ಮೊನಾಲಿಸಾ: ಪೋಷಕರ ವಿರುದ್ದವೇ ದೂರು!

0

ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ವೇಳೆ ತೆಗೆದ ಒಂದು ಫೋಟೋ ವೈರಲ್ ಆಗಿ ದೇಶಾದ್ಯಂತ ಪರಿಚಿತರಾದ ಯುವತಿ ಮೊನಾಲಿಸಾ ಭೋಸ್ಲೆ ಇದೀಗ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಮ್ಮ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಪ್ರಸ್ತುತ ಸಿನಿಮಾ ಚಿತ್ರೀಕರಣದ ನಿಮಿತ್ತ ಕೇರಳಕ್ಕೆ ಬಂದಿದ್ದರು. ಈ ವೇಳೆ ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ತಮ್ಮ ಬಾಯ್‌ಫ್ರೆಂಡ್ ಜೊತೆ ಭೇಟಿ ನೀಡಿದ ಅವರು, ಪೋಷಕರು ತಮ್ಮ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದು ಬಲವಂತದ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೊನಾಲಿಸಾ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಅವರನ್ನು ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರೊಡನೆ ವಿವಾಹವಾಗಲು ನಿರ್ಧರಿಸಿದ್ದಾರೆ. ಆದರೆ ಈ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ರಕ್ಷಣೆ ನೀಡುವಂತೆ ಅವರು ಪೊಲೀಸರನ್ನು ಕೋರಿದ್ದಾರೆ.

ಮೊನಾಲಿಸಾ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು, ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಆಕೆಯ ತಂದೆಯನ್ನು ಕರೆಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರೇಮಿಗಳಿಗೆ ಕೇರಳದ ಕೆಲವು ಸ್ಥಳೀಯ ರಾಜಕೀಯ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ.

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾ ಭೋಸ್ಲೆಗೆ ಹಲವು ಸಿನಿಮಾಗಳ ಅವಕಾಶಗಳು ದೊರೆತಿವೆ. ಸದ್ಯ ಅವರು ‘ನಾಗಮ್ಮ’ ಎಂಬ ಮಲಯಾಳಂ ಚಿತ್ರ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪರ್‌ಫ್ಯೂಮ್ ಹಾಕಿದ್ರೂ ಪ್ರಯೋಜನ ಇಲ್ಲವಾ? ಬೆವರಿನ ವಾಸನೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ!

0

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದೇಹದಲ್ಲಿ ಬೆವರು ಹೆಚ್ಚಾಗಿ ಬರುತ್ತದೆ. ಇದರ ಪರಿಣಾಮವಾಗಿ ಕೆಲವರಿಗೆ ಮೈತುರಿಕೆ, ಬೆವರು ಸಾಲೆ ಮತ್ತು ದುರ್ವಾಸನೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಬೆವರಿನ ವಾಸನೆಯಿಂದ ಅನೇಕರು ಮುಜುಗರಕ್ಕೊಳಗಾಗುವ ಸಂದರ್ಭವೂ ಉಂಟಾಗುತ್ತದೆ. ಪರ್‌ಫ್ಯೂಮ್‌ ಬಳಸಿದರೂ ಸಹ ಕೆಲವೊಮ್ಮೆ ಈ ಸಮಸ್ಯೆ ನಿವಾರಣೆಯಾಗದೇ ಇರುವುದು ಸಾಮಾನ್ಯವಾಗಿದೆ. ಆದರೆ ಕೆಲವು ಸರಳ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೆಂತ್ಯ ಬೀಜಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹ ನಿರ್ವಿಷೀಕರಣಗೊಳ್ಳುತ್ತದೆ ಹಾಗೂ ಬೆವರಿನ ವಾಸನೆ ಕಡಿಮೆಯಾಗಲು ಸಹಾಯವಾಗುತ್ತದೆ. ಅಲ್ಲದೆ ನೀರಿನಾಂಶ ಹೆಚ್ಚಿರುವ ಕಲ್ಲಂಗಡಿ ಮತ್ತು ಸೌತೆಕಾಯಿ ಸೇವನೆಯು ದೇಹದಲ್ಲಿನ ಅನಗತ್ಯ ತ್ಯಾಜ್ಯಗಳನ್ನು ಹೊರಹಾಕಿ ಬೆವರು ವಾಸನೆ ಕಡಿಮೆ ಮಾಡಲು ನೆರವಾಗುತ್ತದೆ. ಕಿತ್ತಳೆ, ನಿಂಬೆಹಣ್ಣುಗಳಂತಹ ಸಿಟ್ರಿಕ್‌ ಆಮ್ಲವುಳ್ಳ ಹಣ್ಣುಗಳು ಹಾಗೂ ಕ್ಲೋರೊಫಿಲ್‌ ಸಮೃದ್ಧ ಹಸಿರು ತರಕಾರಿಗಳನ್ನು ಸೇವಿಸುವುದೂ ದೇಹವನ್ನು ದಿನವಿಡೀ ಫ್ರೆಶ್‌ ಆಗಿಡಲು ಸಹಕಾರಿಯಾಗಿದೆ.

ಇದೇ ವೇಳೆ ಬೇಸಿಗೆಯಲ್ಲಿ ಕೆಂಪು ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲ್ಕೋಹಾಲ್‌ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಇವುಗಳಲ್ಲಿ ಇರುವ ಸಲ್ಫರ್ ಅಂಶವು ಬೆವರಿನ ದುರ್ವಾಸನೆಯನ್ನು ಹೆಚ್ಚಿಸಬಹುದು. ಧೂಮಪಾನವೂ ದೇಹದ ದುರ್ವಾಸನೆಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಬಿಗಿಯಾದ ಸಿಂಥೆಟಿಕ್‌ ಬಟ್ಟೆಗಳ ಬದಲು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದರಿಂದ ಬೆವರು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಗಾಳಿಯ ಹರಿವು ಸುಲಭವಾಗುತ್ತದೆ.

ಕಂಕುಳ, ಪಾದಗಳು ಹಾಗೂ ಕುತ್ತಿಗೆಯ ಭಾಗದಲ್ಲಿ ಹೆಚ್ಚು ಬೆವರುವುದರಿಂದ ಈ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಕಡಿಮೆ ಸೇವಿಸುವುದು ಕೂಡ ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ತಡೆಯಲು ಸಹಾಯಕವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಟಿಕೆಟ್ ವಿಚಾರದಲ್ಲಿ ಅಸಮಾಧಾನ: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ರಾಜೀನಾಮೆ!

ಹುಬ್ಬಳ್ಳಿ: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಎಸ್.ವಿ. ಸಂಕನೂರು ಅವರಿಗೆ ನೀಡಲಾಗಿರುವುದು ಲಿಂಗರಾಜ ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರ ಬರೆದು ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಿಂಗರಾಜ ಪಾಟೀಲ್, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ. ಸಂಕನೂರು ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ನೋವಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ. 37 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದರೂ ಅದನ್ನು ಪರಿಗಣಿಸದೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಇದು ನನಗೆ ಸಾಕಷ್ಟು ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನೂ ಕಾಲ ಮಿಂಚಿಲ್ಲ. ನನಗೆ ಟಿಕೆಟ್ ಸಿಗುವ ಭರವಸೆ ಇದ್ದು, ಮುಂದಿನ ಎಂಟು ದಿನಗಳವರೆಗೆ ಕಾಯುತ್ತೇನೆ. ಅವಕಾಶ ಸಿಗದಿದ್ದರೆ ಬೇರೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಸದ್ಯಕ್ಕೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು. ಈ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಕೋಲಿ ಸೇರಿದಂತೆ 5 ಜಾತಿಗಳನ್ನು STಗೆ ಸೇರಿಸಲು ಶೀಘ್ರ ಶಿಫಾರಸು: ಬೋಸರಾಜು

ಬೆಂಗಳೂರು: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಹಾಗೂ ಬಾರ್ಕಿ ಜಾತಿಗಳನ್ನು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿಸುವ ಕುರಿತು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗುವುದು ಎಂದು ಸಚಿವ ಬೋಸರಾಜು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಪ್ರಸ್ತಾಪದ ವೇಳೆ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹಾಗೂ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಈ ವಿಷಯವನ್ನು ಪ್ರಸ್ತಾಪಿಸಿದರು.

ಈ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಅವರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ST ಪಟ್ಟಿಗೆ ಸೇರಿಸಬೇಕು. ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಭಾ ನಾಯಕ ಬೋಸರಾಜು, ರಾಜ್ಯದಲ್ಲಿನ ಗಂಗಾಮತ ಹಾಗೂ ಅದರ ಉಪಜಾತಿಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದರು.

ಈ ಕುರಿತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಮೂಲಕ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ಅಧ್ಯಯನ ನಡೆಸಿ ಅಂತಿಮ ವರದಿಯನ್ನು 2014ರ ಫೆಬ್ರವರಿ 17ರಂದು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

ನಂತರ ರಾಜ್ಯ ಸರ್ಕಾರದ ಶಿಫಾರಸಿನೊಂದಿಗೆ ಈ ಪ್ರಸ್ತಾವನೆಯನ್ನು 2014ರ ಮಾರ್ಚ್ 3ರಂದು ದೆಹಲಿಯ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯಕ್ಕೆ ಕಳುಹಿಸಲಾಗಿದೆ. ಈ ಕುರಿತು ಕೇಂದ್ರ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಪ್ರಸ್ತಾಪಿಸಿದ ಅಂಶಗಳ ಪರಿಶೀಲನೆ ನಡೆಸಿ ಅಗತ್ಯ ಸಮರ್ಥನೆ ಹಾಗೂ ದಾಖಲೆಗಳೊಂದಿಗೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದಿಢೀರ್ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೆಲ್ಲ ಗೊತ್ತಿದ್ದೂ ಕಾಂಗ್ರೆಸ್‍ನವರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡ್ತಾ ಇದ್ದಾರೆ. ಇದು ಕಾಂಗ್ರೆಸ್‍ನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ವಿಧಾನಸೌದ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದಾಖಲೆಯ ಬಜೆಟ್ ಮಂಡಿಸಿದರು.

ಆದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ ಪೆÇಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ವೇತನ ಕೊಡಲೂ ಸಾಧ್ಯವಾಗಿಲ್ಲ. ಕಳೆದ ಫೆಬ್ರುವರಿ ತಿಂಗಳ ವೇತನವನ್ನೇ ನೀಡಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.

ದಾಖಲೆಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಸುವರ್ಣ ಅವಕಾಶ ಇತ್ತು. ಆದರೆ ಅವರು ಅದನ್ನು ಬಳಸಿಕೊಳ್ಳಲಿಲ್ಲ. ಎಲ್ಲವನ್ನೂ ಕೈಚೆಲ್ಲಿ ಕೂತಿದ್ದಾರೆ ಎಂದು ನುಡಿದರು. ಯುದ್ಧ ಆರಂಭವಾಗುತ್ತೆ ಎಂದು ಯಾರಿಗೂ ಮೊದಲೇ ಗೊತ್ತಿರಲಿಲ್ಲ. ದಿಢೀರ್ ಆರಂಭವಾಗಿದ್ದರಿಂದ ಇಂತಹ ಸಮಸ್ಯೆಗಳು ಶುರುವಾಗಿವೆ. ಇಂತಹ ಕನಿಷ್ಠ ತಿಳಿವಳಿಕೆ ಸಹ ಕಾಂಗ್ರೆಸ್‍ನವರಿಗೆ ಇಲ್ಲವಾಗಿದೆ.

ಅಡುಗೆ ಅನಿಲ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ಸಿಗಲಿದೆ. ಯುದ್ಧದ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಇದೆ ಎಂದರು.

ವಿದ್ಯಾವಂತರಿಗೆ ದೋಖಾ ಮಾಡ್ತಿದೆ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯಾವಂತರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಈ ವಿಚಾರವಾಗಿ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದೆ. ಕಳೆದ ತಿಂಗಳು 26ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.

ಆ ಸಂದರ್ಭದಲ್ಲಿ ಮುಖ್ಯಮಂತ್ರಿ ತರಾತುರಿಯಲ್ಲಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದರು. ಆದರೆ ಬೆಳಗಾವಿ ಅಧಿವೇಶನದಲ್ಲಿ ಇದೇ ವಿಚಾರ ಕೇಳಿದಾಗ 30ರಿಂದ 36 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ನಿಲುವಳಿ ಸೂಚನೆಯನ್ನು ಮಂಡಿಸಿದ್ದೇನೆ ಎಂದು ಹೇಳಿದರು.

2021 ಮತ್ತು 2022ರಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೆಪಿಎಸ್ಸಿ ಮೂಲಕ 7 ಮತ್ತು ಕೆಇಇ ಮೂಲಕ 11 ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಅಲ್ಲದೆ, ಈಗಾಗಲೇ ಸಂದರ್ಶನ ಮುಗಿದಿದ್ದ 8,157 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಆದರೆ ಆ ಸಾಧನೆಯನ್ನು ಈಗಿನ ಸರ್ಕಾರ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಎಂದು ಟೀಕಿಸಿದರು.

2023ರಲ್ಲಿ 824, 2024ರಲ್ಲಿ 1,251 ಮತ್ತು 2025ರಲ್ಲಿ 1,006 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಒಟ್ಟಾರೆ 3,081 ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆದಿರುವುದಾಗಿ ಸರ್ಕಾರವೇ ಉತ್ತರ ನೀಡಿದೆ ಎಂದು ಅವರು ಹೇಳಿದರು.

ಹಿಂದಿನ ಸರ್ಕಾರದ ಸಾಧನೆಯನ್ನು ತಮ್ಮದಾಗಿ ತೋರಿಸಿ ರಾಜ್ಯದ ಜನರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಇದರಿಂದ ದಲಿತರು, ಯುವಕರು ಮತ್ತು ವಿದ್ಯಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಕಿಡಿಕಾರಿದರು.

ರಾಜ್ಯದ ಯುವಕರ ಪರವಾಗಿ ಬಿಜೆಪಿ ಸದಾ ನಿಂತುಕೊಳ್ಳಲಿದೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.

ವಿಧಾನಸಭೆಯಲ್ಲಿ ವಾಣಿಜ್ಯ LPG ಕೊರತೆ ಗದ್ದಲ: ಆಡಳಿತ-ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ವ್ಯತ್ಯಯ ಉಂಟಾಗಿ ರಾಜ್ಯದಲ್ಲಿ ಹೋಟೆಲ್ ಉದ್ಯಮ ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ.

ಶೂನ್ಯವೇಳೆಯಲ್ಲಿ ಸಿಲಿಂಡರ್ ಕೊರತೆ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದ್ದು, ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದ ಪರಿಣಾಮ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದರು.

ಕುಣಿಗಲ್ ಶಾಸಕ ಡಾ. ರಂಗನಾಥ್ ಸಿಲಿಂಡರ್ ಕೊರತೆ ವಿಚಾರವನ್ನು ಪ್ರಸ್ತಾಪಿಸಿ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪೀಕರ್ ಆಹಾರ ಸಚಿವರಿಂದ ಉತ್ತರ ನೀಡುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ. 25 ದಿನಕ್ಕೊಮ್ಮೆ ಗೃಹ ಬಳಕೆಯ ಸಿಲಿಂಡರ್ ನೀಡಲಾಗುತ್ತಿದೆ. ಅನಾವಶ್ಯಕವಾಗಿ ಹೆಚ್ಚಿನ ಖರ್ಚು ಮಾಡಿ ಸಿಲಿಂಡರ್ ಸಂಗ್ರಹಿಸಬಾರದು ಎಂದು ಹೇಳಿದರು.

ಈ ವೇಳೆ ರಂಗನಾಥ್ ಮರುಪ್ರಶ್ನೆ ಮಾಡಿದ್ದು, ವಾಣಿಜ್ಯ ಸಿಲಿಂಡರ್ ಪಡೆಯಲು ₹2000ಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ. ಕೇಂದ್ರ ಸರ್ಕಾರ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಆಧಾರವಿಲ್ಲದೆ ಆರೋಪ ಮಾಡಬಾರದು ಎಂದು ತಿರುಗೇಟು ನೀಡಿದರು.

ಈ ವೇಳೆ ಕಾಂಗ್ರೆಸ್ ಶಾಸಕರಿಂದಲೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಎಲ್‌ಪಿಜಿ ಸಿಲಿಂಡರ್ ಸಮಸ್ಯೆಯನ್ನು ಪರಿಹರಿಸುವುದು ಯಾರು? ಬಿಜೆಪಿ ನಾಯಕರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.

ಮೋದಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಸದನದಲ್ಲಿ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆರೋಗ್ಯ ಸಮಸ್ಯೆಯಿಂದ ಮನನೊಂದು ತಾಯಿ ದುಡುಕಿನ ನಿರ್ಧಾರ: 2 ವರ್ಷದ ಮಗಳೊಂದಿಗೆ ನೇಣಿಗೆ ಶರಣು

0

ತುಮಕೂರು: ಜಿಲ್ಲೆಯ ಹಾಗಲವಾಡಿ ಗ್ರಾಮದಲ್ಲಿ ತಾಯಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಗಂಗಾಮಣಿ (30) ಮತ್ತು ಪ್ರೇಕ್ಷಾ (2) ಮೃತಪಟ್ಟವರು.

ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಗಂಗಾಮಣಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಗಂಗಾಮಣಿಗೆ ಎಂಟು ವರ್ಷಗಳ ಹಿಂದೆ ಯತೀಶ್ ಎಂಬವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದರು.

ಘಟನೆಯ ಸಮಯದಲ್ಲಿ ಯತೀಶ್ ಕೆಲಸಕ್ಕೆ ತೆರಳಿದ್ದು, ಇನ್ನಿಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಗಂಗಾಮಣಿ ತನ್ನ ಎರಡು ವರ್ಷದ ಮಗಳೊಂದಿಗೆ ನೇಣಿಗೆ ಶರಣಾಗಿದ್ದಾಳೆ.

ಶಾಲೆಯಿಂದ ಮನೆಗೆ ಬಂದ ಮಕ್ಕಳು ಮನೆ ಒಳಗಿನಿಂದ ಬೀಗ ಹಾಕಿರುವುದನ್ನು ಗಮನಿಸಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಚೇಳೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಸಾರಿಗೆ ಇಲಾಖೆ ನಕಲಿ ಸರ್ಟಿಫಿಕೇಟ್ ಅಕ್ರಮ: ನಿವೃತ್ತ ನ್ಯಾಯಾಧೀಶರಿಂದ ತನಿಖೆ – ರಾಮಲಿಂಗಾರೆಡ್ಡಿ

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದವರು ಬಡ್ತಿ ಪಡೆಯಲು ನಕಲಿ ಡಿಪ್ಲೊಮಾ ಪ್ರಮಾಣಪತ್ರ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷಷತ್’ನಲ್ಲಿ ಶಾಸಕ ಟಿ.ಎ.ಶರವಣ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ‌.

ಇಲ್ಲಿ ಸಾರಿಗೆ ಇಲಾಖೆ ಮಾತ್ರವಲ್ಲ. ತಾಂತ್ರಿಕ ಶಿಕ್ಷಣ ಇಲಾಖೆಯೂ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಇದರಿಂದ ನಿವೃತ್ತ ನ್ಯಾಯಾಧೀಶರಾದ ನಾರಾಯಣ ಅವರನ್ನು ಈಗಾಗಲೇ ನೇಮಿಸಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕ್ರಮಕ್ಕೆ ಒತ್ತಾಯ

ನಂತರ ಮಾತನಾಡಿದ ಶಾಸಕ ಶರವಣ ಅವರು, ಕೆಸಿಎಸ್ ಆರ್ ಕಾಯ್ದೆಯಂತೆ ನಕಲಿ ಪ್ರಮಾಣಪತ್ರ ನೀಡಿದವರ ಮೇಲೂ ಕ್ರಮವಾಗಬೇಕು. ಮೈಸೂರು, ಬೆಳಗಾವಿಗಳಲ್ಲಿ ಪರೀಕ್ಷೆ ಬರೆದವರು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಹೇಗೆ ಪರೀಕ್ಷೆ ಬರೆಯಲು ಸಾಧ್ಯ? ಇವರಿಗೆ ಹೇಗೆ ಪ್ರಮಾಣ ಪತ್ರವನ್ನು ಕೊಡಲಾಯಿತು? ಇದರ ಬಗ್ಗೆಯೂ ತನಿಖೆಯಾಗಿ ಕ್ರಮ ಆಗಬೇಕು.

ಯಾಕೆಂದರೆ ಇಂದು ಉದ್ಯೋಗದ ಸಮಸ್ಯೆಯಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಸಾಕಷ್ಟು ಜನ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಖಂಡಿತ‌ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಅಧಿಕಾರಿಗಳ ನಡೆಗೆ ಆಕ್ಷೇಪ

ಶಾಸಕ ಟಿ.ಎ.ಶರವಣ ಮಾತನಾಡಿ,‌ ಸಾರಿಗೆ ಇಲಾಖೆಯಲ್ಲಿ ಲಿಪಿಕ ನೌಕರರುಗಳು ಡಿಪ್ಲೋಮಾ ನಕಲಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದೆ. ಆಗ ಸಂಪೂರ್ಣ ವರದಿ ಕೊಡಿ ಲೋಕಾಯುಕ್ತ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರು. ಅದರಂತೆ 2025 ರ ಡಿಸೆಂಬರ್ 15 ರಂದೇ ಸಚಿವರಿಗೆ ಟಿಪ್ಪಣಿಯೊಂದಿಗೆ ಸಂಪೂರ್ಣ ದಾಖಲಾತಿ ನೀಡಿದ್ದೆ.

ಆದರೆ, ಮೂರು ತಿಂಗಳು ಕಳೆದರೂ ನೌಕರರ ಮೇಲೆ ಯಾವುದೇ ತನಿಖೆಯಾಗಲಿ , ಕ್ರಮವಾಗಲಿ ಆಗಿಲ್ಲ. ಈಗ ಸದನದಲ್ಲಿ ಮಾತನಾಡಬೇಕು ಎಂದು ಫೆ.23ಕ್ಕೆ ಪ್ರಶ್ನೆ ಕೊಟ್ಟ ಒಂದು ವಾರಗಳ ನಂತರ ಅಕ್ರಮ ಎಸಗಿದವರಿಗೆ ನೋಟಿಸ್ ಕೊಟ್ಟಿದ್ದಾರೆ. 15 ದಿನದಲ್ಲಿ ಉತ್ತರ ಕೊಡಿ ಎಂದು ನೆಪಕ್ಕೆ ಹೇಳಿದ್ದಾರೆ.

ಸಚಿವರ ಬಗ್ಗೆ ಗೌರವ ಇದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಲಾಖೆಯ ಅಧಿಕಾರಿಗಳು ಸಚಿವರನ್ನೂ ಯಾವ ರೀತಿ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಕ್ಕೆ ತರ ಬಯಸುತ್ತೇನೆ ಎಂದರು.

ಎಷ್ಟು ಜನರಿಂದ ಪ್ರಮಾಣಪತ್ರ.?

ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಮಾಹಿತಿ ನೀಡಿ, ಸಾರಿಗೆ ಇಲಾಖೆಯ ಲಿಪಿಕ ವರ್ಗದವರಿಗೆ ಸಿ ಗ್ರೂಪ್ ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಬಡ್ತಿ ಪಡೆಯಲು ಡಿಪ್ಲೊಮಾ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಓದಿಗಾಗಿ ಇಲಾಖೆಯಲ್ಲಿ ಶೇ. 10ರಷ್ಟು ನೌಕರರಿಗೆ ಅವಕಾಶ ಮಾಡಿಕೊಟ್ಟು 12-10-22 ರಂದು ಆದೇಶ ಮಾಡಲಾಯಿತು. ಅದರಂತೆ 22-23 ನೇ ಸಾಲಿನಲ್ಲಿ 17 ಜನರಿಗೆ 23-24 ರಲ್ಲಿ 24 ನೌಕರರಿಗೆ, 24-25 ರಲ್ಲಿ 15 ನೌಕರರಿಗೆ ಉನ್ನತ ಶಿಕ್ಷಣ ಓದಲು ಅನುಮತಿ ನೀಡಲಾಗಿದೆ.

ಅದರಲ್ಲಿ ಇಬ್ಬರು ಸಾರಿಗೆ ಇಲಾಖೆಯವರಲ್ಲ. ಇನ್ನಿಬ್ಬರು ನಿಯಮಿತ ರಜೆ ಪಡೆದು ತೆರಳಿದ್ದಾರೆ. ಆದರೆ ಉಳಿದವರು ಪ್ರಮಾಣಪತ್ರಗಳ ಬಗ್ಗೆ ಅನುಮಾನವಿದೆ. ಇದರಿಂದ 9-5-25 ಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ದೇಶಕರಿಗೆ ಸಾರಿಗೆ ಇಲಾಖೆ ಆಯುಕ್ತರು ಪತ್ರ ಬರೆದರು. ನಕಲಿ ಪ್ರಮಾಣಪತ್ರ ಪಡೆಯುತ್ತಿರುವ ಬಗ್ಗೆ ಕಾರಣ ಕೇಳಿದರು. 29-11- 25 ಕ್ಕೆ ಆಯುಕ್ತರು ಮತ್ತೆ ಪತ್ರ ಬರೆಯುತ್ತಾರೆ. ಅವರಿಂದ ಸರಿಯಾದ ಮಾಹಿತಿ ಸಿಗುವುದಿಲ್ಲ. ಆಯುಕ್ತರು 3-3-26 ರಂದು ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎಂದರು.

error: Content is protected !!