Home Blog Page 53

ಪ.ಜಾ.-ಪ.ಪ. ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘ (ರಿ.), ಬೆಂಗಳೂರು, ಇದರ ಗದಗ ಜಿಲ್ಲಾ ಘಟಕದ ಪುನರ್ ರಚನೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಸೆ.6ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗದ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಗೌರವಾಧ್ಯಕ್ಷರಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರೆಡ್ಡಿ ಹಾಗೂ ಬೆಳಗಾವಿ ವಿಭಾಗದ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯ ಪಾಲ್ಗೊಂಡು, ಸಂಘಟನೆಯ ಉದ್ದೇಶ, ಕಾರ್ಯವೈಖರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಂಘದ ಪಾತ್ರದ ಕುರಿತು ಮಾತನಾಡಿದರು.

ಪುನರ್ ರಚನೆಯಾದ ಗದಗ ಜಿಲ್ಲಾ ಘಟಕಕ್ಕೆ ಬಾಲಚಂದ್ರ ಸಂಗನಾಳ ಅಧ್ಯಕ್ಷರಾಗಿ, ಗೋಪಾಲ ಲಮಾಣಿ, ಚಂದ್ರಕಾಂತ ವಡ್ಡರಕಲ್ಲ ಹಾಗೂ ವಸಂತ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶಾಲ ಅಶೋಕ ಹಾದಿಮನಿ ಪ್ರಧಾನ ಕಾರ್ಯದರ್ಶಿಯಾಗಿ, ವೆಂಕಟೇಶ ದ್ವಾಸಲಕೇರಿ ಕಾರ್ಯಾಧ್ಯಕ್ಷರಾಗಿ, ರಾಘವೇಂದ್ರ ಗೋಕಾಕ ಖಜಾಂಚಿಯಾಗಿ ಹಾಗೂ ಸವಿತಾ ಮೇತ್ರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕುಬೇರ ಲಮಾಣಿ ಹಾಗೂ ಎಲ್.ಎಂ. ಗಚ್ಚಿಮನಿ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರ ಲೋಕಾಪುರ, ನವೀನಕುಮಾರ್ ಹರಿಜನ, ವೆಂಕಟೇಶ ಪೂಜಾರ, ವೈ.ಡಿ. ದೊಡ್ಡಮನಿ, ಮಂಜುಳಾ ಅರಳಿಗಿಡದ, ಹೇಮಾವತಿ ಗೂಗಲೋತ್ರ ಹಾಗೂ ರೇಣುಕರಾಜ ಹರಿಜನ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಬಾಲಚಂದ್ರ ಸಂಗನಾಳ ತಿಳಿಸಿದ್ದಾರೆ.

‘ನಮ್ಮದು ಏನೂ ಪಾತ್ರ ಇಲ್ಲ’: ಇ.ಡಿ ವಿಚಾರಣೆ ಬಳಿಕ ನಾಗೇಂದ್ರ ಸ್ಫೋಟಕ ಹೇಳಿಕೆ!

0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಹೆಚ್ಚಿನ ಮಾಹಿತಿ ಹಾಗೂ ಕೆಲವು ಸ್ಪಷ್ಟನೆಗಳನ್ನು ಪಡೆಯುವ ಉದ್ದೇಶದಿಂದ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾದ ಅವರು, ವಿಚಾರಣೆ ಮುಗಿದ ಬಳಿಕ ಅಧಿಕಾರಿಗಳಿಗೆ ಅಗತ್ಯ ಸ್ಪಷ್ಟನೆಗಳನ್ನು ನೀಡಿರುವುದಾಗಿ ತಿಳಿಸಿದರು.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, “ಕಳೆದ ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಬರಲು ಸಾಧ್ಯವಾಗಿರಲಿಲ್ಲ. ಕೆಲವು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಇದೀಗ ಬಂದು ಉತ್ತರಿಸಿದ್ದೇನೆ. ಮತ್ತೊಮ್ಮೆ ಕರೆದರೂ ಹಾಜರಾಗುತ್ತೇನೆ” ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಮ್ಮದು ಏನೂ ಪಾತ್ರ ಇಲ್ಲ. ಇದು ಬ್ಯಾಂಕ್ ಫ್ರಾಡ್. ಯೂನಿಯನ್ ಬ್ಯಾಂಕ್‌ನವರಿಂದ ಆಗಿರುವ ಕೆಲಸ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ” ಎಂದು ಆರೋಪಿಸಿದರು. ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿರುವುದಾಗಿ ತಿಳಿಸಿದರು.

ತಮ್ಮ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ತಾವೇ ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.

ಇದೇ ವೇಳೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತಷ್ಟು ಒಗ್ಗಟ್ಟಾಗಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಬಿಜೆಪಿಯ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಜನಾರ್ದನ ರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, “ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದನ್ನು ಅವರಿಗೆ ತಡೆಯಲಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಧಾ-ಕೃಷ್ಣ ವೇಷದಲ್ಲಿ ಮಕ್ಕಳ ಕಲರವ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಕಲ್ಪ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಸ್ಪರ್ಧೆ ಹಾಗೂ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳಿಗೆ ಬಾಲಕೃಷ್ಣ ಹಾಗೂ ರಾಧೆಯ ವೇಷ ಧರಿಸುವ ಮೂಲಕ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಭಕ್ತಿ ಮತ್ತು ಗೌರವದಿಂದ ಆಚರಿಸುವ ಇಂತಹ ಸಂಪ್ರದಾಯಗಳು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಗೌರವ ಬೆಳೆಸುತ್ತವೆ ಎಂದು ಸಂಸ್ಥೆ ತಿಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಎಸ್.ವಿ. ಹುಬ್ಬಳ್ಳಿ ವಹಿಸಿದ್ದರು. ಮಾರ್ಗದರ್ಶಕಿ ಎಸ್.ಎನ್. ಹುಬ್ಬಳ್ಳಿ, ಕಾರ್ಯದರ್ಶಿ ಪಿ.ಎಸ್. ಹುಬ್ಬಳ್ಳಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪುಷ್ಪ ಪಿ. ಮೇಗೇರಿ ನಿರೂಪಿಸಿದರು.

ಧರ್ಮದ ನಂಬಿಕೆಗೆ ಧಕ್ಕೆ ತರುವ ಹೇಳಿಕೆ ಖಂಡನೀಯ: ಮಾರುತಿ ಪವಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಕುರಿತು ಅವಹೇಳನಕಾರಿ ಅಥವಾ ಅಪಮಾನಕರ ಹೇಳಿಕೆ ನೀಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿಯವರಿಗೆ ಶೋಭೆ ತರುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಪವಾರ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಯಾವುದೇ ಧರ್ಮದ ನಂಬಿಕೆ, ಆಚರಣೆ ಹಾಗೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಅಸಮಾಧಾನ ಮತ್ತು ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಸಚಿವರು ಧಾರ್ಮಿಕ ವಿಚಾರಗಳಲ್ಲಿ ಮಾತನಾಡುವಾಗ ಸಂಯಮ, ಜವಾಬ್ದಾರಿ ಹಾಗೂ ಪರಸ್ಪರ ಗೌರವ ಕಾಪಾಡಬೇಕು ಎಂದರು.

ಹಿಂದೂ ಧರ್ಮವನ್ನು ಸಚಿವರ ಟೀಕಿಸುವ ಹೆಸರಿನಲ್ಲಿ ಕೋಟ್ಯಂತರ ಜನರ ನಂಬಿಕೆಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಸಚಿವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿ ವಿಷಾದ ವ್ಯಕ್ತಪಡಿಸುವುದು ಸೂಕ್ತ ಎಂದು ಒತ್ತಾಯಿಸಿದರು.

ಸಚಿವರು ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದರೊಂದಿಗೆ, ತಮಗೆ ವಹಿಸಿರುವ ಖಾತೆಯ ಜವಾಬ್ದಾರಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮೆಚ್ಚುಗೆ ಗಳಿಸಬೇಕೇ ಹೊರತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳಿಂದಲ್ಲ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮೂರು ಹೊತ್ತಿನ ಬುತ್ತಿ ಕಟ್ಟಿ ಅನಿಲ್ ಮೆಣಸಿನಕಾಯಿ ಗೆಲ್ಲಿಸೋಣ: ಶ್ರೀರಾಮುಲು

0

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ/ಗದಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಬೇಕು. ಅವರ ಗೆಲುವಿಗಾಗಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಕಾರ್ಯಕರ್ತರು ಶ್ರಮಿಸೋಣ ಎಂದು ಮಾಜಿ ಸಚಿವ ಶ್ರೀರಾಮುಲು ಕರೆ ನೀಡಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಾನುವಾರ ಶ್ರೀರಾಮುಲು ಹಾಗೂ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಬಿಜೆಪಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಅನಿಲ್ ಮೆಣಸಿನಕಾಯಿ ಜನನಾಯಕರಾಗಿದ್ದು, ಗದಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇತರೆ ಎಲ್ಲರಿಗಿಂತಲೂ ಅನಿಲ್ ಮೆಣಸಿನಕಾಯಿ ಅವರ ಮೇಲೆ ತಮ್ಮ ಪ್ರೀತಿ ಹೆಚ್ಚಿದೆ. ಈ ಬಾರಿ ಸರಿಯಾದ ಸಮಯದಲ್ಲಿ ಗದಗಕ್ಕೆ ಆಗಮಿಸಿ ಪ್ರಚಾರ ನಡೆಸುತ್ತೇನೆ. ಅವರನ್ನು ವಿಧಾನಸೌಧದಲ್ಲಿ ಶಾಸಕನಾಗಿ ನೋಡಬೇಕು ಎಂಬ ಆಸೆ ನನಗಿದೆ ಎಂದರು.

ಜೆನ್‌ಜಿ ಪೀಳಿಗೆ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಶಕ್ತಿಯಾಗಿದ್ದು, ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಗದಗ ನಗರದಲ್ಲಿ ನೀರು ಹಾಗೂ ಕೈಗಾರಿಕೆಗಾಗಿ ಜೆನ್‌ಜಿ ಯುವಕರು ನಡೆಸಿದ ಪ್ರತಿಭಟನೆ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.

ಸಕಾರಾತ್ಮಕ ಬೇಡಿಕೆಗಳಿಗಾಗಿ ಜೆನ್‌ಜಿ ಯುವಕರು ನಡೆಸುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಗದಗದ ಜೆನ್‌ಜಿ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೋಟಿಸ್ ನೀಡಿರುವ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಜಿಲ್ಲಾ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ವಸಂತ ಪಡಗದ, ಪರಮೇಶ ಲಮಾಣಿ, ಶರಣು ಚಿಂಚಲಿ, ವೀರೇಶ ಕಲ್ಮಠ, ಮಂಜುನಾಥ ಹಳ್ಳೂರುಮಠ, ಬಸಯ್ಯ ಸಾಸೊಳ್ಳಿಮಠ, ಸುಭಾಸ ಸುಂಕದ, ಕುಮಾರ ಮಾರನಬಸರಿ, ಚೆನ್ನಮ್ಮ ಹುಳಕನ್ನವರ, ಆಶಾ ಜೂಲಗುಡ್ಡ, ಟಿ.ಡಿ. ಪೂಜಾರ, ಕಾಳು ತೋಟದ, ಶಶಿಕುಮಾರ್ ಕಳಸಾಪೂರಶೆಟ್ರ, ಫಕೀರೇಶ ಮುಳಗುಂದ, ರಾಮು ವಾಲ್ಮೀಕಿ, ದೇವಾನಂದ ತೋಟದ, ಗೋಪಾಲ ನಾಯಕ, ಸಂತೋಷ ಪವಾರ, ಪ್ರಭುಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನನಗೆ ಅಧಿಕಾರ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ನನಗೆ ಜಾಗ ಕೊಟ್ಟಿದ್ದೀರಿ. ನಾವು ಈ ಹಿಂದೆ ಹೊಸ ಪಕ್ಷ ಕಟ್ಟಿದಾಗ ಅನಿಲ್ ಮೆಣಸಿನಕಾಯಿ ಅವರು ಜೋಡೆತ್ತಿನಂತೆ ನನಗೆ ಸಹಕಾರ ನೀಡಿದ್ದರು. ಈ ಬಾರಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಅವರ ಗೆಲುವಿಗಾಗಿ ಶ್ರಮಿಸೋಣ.

— ಶ್ರೀರಾಮುಲು, ಮಾಜಿ ಸಚಿವ

ಭಾಗಪತ್‌ನಲ್ಲಿ ಭೀಕರ ರಸ್ತೆ ಅಪಘಾತ: ಪಿಕ್‌ಅಪ್ ವಾಹನ ಪಲ್ಟಿಯಾಗಿ 12 ಮಂದಿ ಸಾವು!

0

ಭಾಗಪತ್: ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನದಿಂದ ಬುಡೌನ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನವೊಂದು ಖೇಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸುಮಾರು 32 ಪ್ರಯಾಣಿಕರಿದ್ದ ವಾಹನದಲ್ಲಿ ಬಹುತೇಕರು ನಿದ್ರೆಯಲ್ಲಿದ್ದ ವೇಳೆ ಅಪಘಾತ ಸಂಭವಿಸಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಖೇಕ್ರಾ ಹಾಗೂ ಭಾಗಪತ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಗಾಯಗೊಂಡ ಪ್ರಯಾಣಿಕ ಕುಂವರ್ ಪಾಲ್, “ದಿಢೀರನೆ ಭಾರಿ ಸದ್ದು ಕೇಳಿಸಿತು. ವಾಹನ ಪಲ್ಟಿಯಾದ ಬಳಿಕ ಎಲ್ಲೆಡೆ ಚೀರಾಟ ಕೇಳಿಸಿತು” ಎಂದು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.

ಅವಲಕ್ಕಿಯ ಆರೋಗ್ಯ ಪ್ರಯೋಜನಗಳೇನು? ತಿನ್ನುವ ಮುನ್ನ ಈ ವಿಚಾರ ತಿಳಿಯಿರಿ

0

ಮನೆಗಳಲ್ಲಿ ಸಾಮಾನ್ಯವಾಗಿ ಉಪಹಾರ ಅಥವಾ ತಿಂಡಿಯಾಗಿ ಬಳಸುವ ಅವಲಕ್ಕಿ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಆಹಾರವಾಗಿದೆ.

ಭತ್ತದಿಂದ ತಯಾರಿಸುವ ಅವಲಕ್ಕಿಯಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ ಇದ್ದು, ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತದೆ. ಸರಿಯಾದ ಪದಾರ್ಥಗಳೊಂದಿಗೆ ಸೇರಿಸಿ ಸೇವಿಸಿದರೆ ಇದನ್ನು ಸಮತೋಲಿತ ಉಪಹಾರದ ಭಾಗವನ್ನಾಗಿ ಮಾಡಬಹುದು.

ಆದರೆ ಪ್ರತಿದಿನ ಒಂದು ಕಪ್ ಅವಲಕ್ಕಿ ತಿನ್ನುವುದರಿಂದಲೇ ತೂಕ ಕಡಿಮೆಯಾಗುತ್ತದೆ ಅಥವಾ ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ಸರಿಯಲ್ಲ. ಅವಲಕ್ಕಿಯ ಆರೋಗ್ಯ ಪ್ರಯೋಜನ ಪಡೆಯಲು ಅದರ ಪ್ರಮಾಣ, ತಯಾರಿಸುವ ವಿಧಾನ ಹಾಗೂ ಸೇರಿಸುವ ಪದಾರ್ಥಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

ಅವಲಕ್ಕಿಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

ಅವಲಕ್ಕಿಯ ಪೌಷ್ಟಿಕ ಮೌಲ್ಯ ಅದರ ತಯಾರಿಕಾ ವಿಧಾನ ಹಾಗೂ ಬಳಸುವ ಅಕ್ಕಿಯ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದರಲ್ಲಿ ಕಾರ್ಬೋಹೈಡ್ರೇಟ್‌ ಮುಖ್ಯವಾಗಿದ್ದು, ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ನಾರಿನಂಶವೂ ಇರುತ್ತದೆ. ಕೆಲವು ವಿಧದ ಅವಲಕ್ಕಿಯಲ್ಲಿ ಕಬ್ಬಿಣ ಸೇರಿದಂತೆ ಖನಿಜಾಂಶಗಳು ದೊರೆಯುತ್ತವೆ.

ಹೆಚ್ಚು ಪೌಷ್ಟಿಕವಾಗಿಸಲು ಅವಲಕ್ಕಿಗೆ ತರಕಾರಿ, ಬೇಳೆ, ಶೇಂಗಾ ಅಥವಾ ಮೊಳಕೆ ಕಾಳುಗಳನ್ನು ಸೇರಿಸಬಹುದು.

ಬೇಗ ಶಕ್ತಿ ನೀಡಲು ಸಹಕಾರಿ:

ಅವಲಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್‌ ದೇಹಕ್ಕೆ ಶಕ್ತಿಯ ಮೂಲವಾಗಿದೆ. ಹೀಗಾಗಿ ಬೆಳಗಿನ ಉಪಹಾರಕ್ಕೆ ತರಕಾರಿ ಅವಲಕ್ಕಿ, ಅವಲಕ್ಕಿ ಉಪ್ಪಿಟ್ಟು ಅಥವಾ ಮೊಸರು-ಅವಲಕ್ಕಿಯಂತಹ ಆಯ್ಕೆಗಳನ್ನು ಮಾಡಬಹುದು.

ಆದರೆ ಕೇವಲ ಅವಲಕ್ಕಿಯನ್ನು ಮಾತ್ರ ಸೇವಿಸುವ ಬದಲು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಮೂಲಗಳನ್ನು ಸೇರಿಸಿದರೆ ಉಪಹಾರ ಹೆಚ್ಚು ಸಮತೋಲಿತವಾಗುತ್ತದೆ.

ತೂಕ ಇಳಿಸಿಕೊಳ್ಳಲು ಅವಲಕ್ಕಿ ಒಳ್ಳೆಯದೇ?

ತೂಕ ನಿರ್ವಹಣೆಯ ಆಹಾರದಲ್ಲಿ ಅವಲಕ್ಕಿಯನ್ನು ಸೇರಿಸಬಹುದು. ಆದರೆ ಅವಲಕ್ಕಿ ತಿಂದ ಮಾತ್ರಕ್ಕೆ ತೂಕ ಕಡಿಮೆಯಾಗುವುದಿಲ್ಲ. ಸೇವಿಸುವ ಪ್ರಮಾಣ, ತಯಾರಿಸುವ ವಿಧಾನ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳು ಮುಖ್ಯವಾಗುತ್ತವೆ.

ತರಕಾರಿ ಮತ್ತು ಬೇಳೆ ಸೇರಿಸಿ ತಯಾರಿಸಿದ ಅವಲಕ್ಕಿ ಹೆಚ್ಚು ಪೌಷ್ಟಿಕವಾಗಬಹುದು. ಆದರೆ ಅತಿಯಾಗಿ ಎಣ್ಣೆ, ಆಲೂಗಡ್ಡೆ ಅಥವಾ ಸಿಹಿ ಪದಾರ್ಥಗಳನ್ನು ಸೇರಿಸಿದರೆ ಕ್ಯಾಲೊರಿ ಪ್ರಮಾಣ ಹೆಚ್ಚಾಗಬಹುದು.

ಜೀರ್ಣಕ್ರಿಯೆಗೆ ಹೇಗೆ ಸಹಕಾರಿ?

ಅವಲಕ್ಕಿಯಲ್ಲಿರುವ ನಾರಿನಂಶ ಅದರ ವಿಧವನ್ನು ಅವಲಂಬಿಸಿ ಬದಲಾಗುತ್ತದೆ. ತರಕಾರಿ, ಬೇಳೆ ಮತ್ತು ಮೊಳಕೆ ಕಾಳುಗಳೊಂದಿಗೆ ಸೇವಿಸಿದಾಗ ಒಟ್ಟಾರೆ ಆಹಾರದ ನಾರಿನಂಶ ಹೆಚ್ಚಬಹುದು. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಲಬದ್ಧತೆ ಇರುವವರು ಅವಲಕ್ಕಿಯೊಂದನ್ನೇ ಅವಲಂಬಿಸುವ ಬದಲು ದಿನನಿತ್ಯದ ಆಹಾರದಲ್ಲಿ ವಿವಿಧ ನಾರಿನಂಶಯುಕ್ತ ಆಹಾರಗಳನ್ನು ಸೇರಿಸುವುದು ಮುಖ್ಯ.

ಮಧುಮೇಹ ಇರುವವರು ಎಚ್ಚರಿಕೆ ವಹಿಸಿ:

ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಇರುವುದರಿಂದ ಮಧುಮೇಹ ಇರುವವರು ಸೇವಿಸುವ ಪ್ರಮಾಣದ ಬಗ್ಗೆ ಗಮನ ಹರಿಸಬೇಕು. ಅವಲಕ್ಕಿ ತಿಂದರೆ ರಕ್ತದಲ್ಲಿನ ಸಕ್ಕರೆ ಖಂಡಿತ ನಿಯಂತ್ರಣದಲ್ಲಿರುತ್ತದೆ ಎನ್ನುವುದು ಸರಿಯಲ್ಲ.

ತರಕಾರಿ ಮತ್ತು ಪ್ರೋಟೀನ್‌ಯುಕ್ತ ಪದಾರ್ಥಗಳೊಂದಿಗೆ ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಆಹಾರಕ್ಕೆ ದೇಹದ ಪ್ರತಿಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ಮಕ್ಕಳಿಗೆ, ಗರ್ಭಿಣಿಯರಿಗೆ ಅವಲಕ್ಕಿ ತಿನ್ನಬಹುದಾ?

ಮಕ್ಕಳ ಆಹಾರದಲ್ಲೂ ಅವಲಕ್ಕಿಯನ್ನು ಸೂಕ್ತವಾಗಿ ಸೇರಿಸಬಹುದು. ತರಕಾರಿ, ಬೇಳೆ ಅಥವಾ ಮೊಟ್ಟೆಯಂತಹ ಪ್ರೋಟೀನ್‌ ಮೂಲಗಳೊಂದಿಗೆ ನೀಡಿದರೆ ಹೆಚ್ಚು ಸಮತೋಲಿತ ಆಹಾರವಾಗುತ್ತದೆ.

ಗರ್ಭಿಣಿಯರೂ ಸಾಮಾನ್ಯವಾಗಿ ಅವಲಕ್ಕಿಯನ್ನು ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ಕಬ್ಬಿಣದ ಕೊರತೆಯನ್ನು ನಿವಾರಿಸಲು ಅವಲಕ್ಕಿಯೊಂದನ್ನೇ ಅವಲಂಬಿಸಬಾರದು. ವೈದ್ಯರು ಸೂಚಿಸುವ ಕಬ್ಬಿಣಯುಕ್ತ ಆಹಾರ ಅಥವಾ ಪೂರಕಗಳನ್ನು ಮುಂದುವರಿಸುವುದು ಮುಖ್ಯ.

ಅವಲಕ್ಕಿ ‘ಸೂಪರ್‌ಫುಡ್’ ಅಲ್ಲ:

ಅವಲಕ್ಕಿ ಸರಳ, ಸುಲಭವಾಗಿ ತಯಾರಿಸಬಹುದಾದ ಆಹಾರ. ಆದರೆ ಇದನ್ನು ‘ಸೂಪರ್‌ಫುಡ್’ ಅಥವಾ ಯಾವುದೇ ಕಾಯಿಲೆಗೆ ಔಷಧಿ ಎಂದು ಪರಿಗಣಿಸುವುದು ಸರಿಯಲ್ಲ.

ತರಕಾರಿ, ಬೇಳೆ, ಮೊಳಕೆ ಕಾಳು, ಮೊಸರು ಅಥವಾ ಇತರ ಪ್ರೋಟೀನ್‌ ಮೂಲಗಳೊಂದಿಗೆ ಸಮತೋಲಿತವಾಗಿ ಸೇವಿಸಿದರೆ ಅವಲಕ್ಕಿ ಆರೋಗ್ಯಕರ ಆಹಾರದ ಒಂದು ಭಾಗವಾಗಬಹುದು.

ದೆಹಲಿ ಕಟ್ಟಡ ಕುಸಿತ ಪ್ರಕರಣ: ಉನ್ನತ ತನಿಖೆಗೆ ಹೈಕೋರ್ಟ್ ಆದೇಶ!

0

ನವದೆಹಲಿ: ದೆಹಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಪ್ರಕರಣವನ್ನು ದೆಹಲಿ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ತನಿಖೆಗೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠ, ದೆಹಲಿ ಸರ್ಕಾರ ಹಾಗೂ ನಾಗರಿಕ ಸಂಸ್ಥೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

ಕಟ್ಟಡ ಕುಸಿತಕ್ಕೆ ಕೇವಲ ಪಿಜಿ ಮಾಲೀಕರನ್ನಷ್ಟೇ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಕಟ್ಟಡ ನಿರ್ಮಾಣದ ಸುರಕ್ಷತೆಯನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳೂ ಹೊಣೆಗಾರರು. ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂತಹ ದುರಂತವನ್ನು ತಪ್ಪಿಸಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೆಹಲಿಗೆ ಆಗಮಿಸುತ್ತಾರೆ. ಅವರೇ ದೇಶದ ಭವಿಷ್ಯವಾಗಿದ್ದು, ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಇದೇ ವೇಳೆ, ದುರಂತದ ಬಳಿಕ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕಿತ್ತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕುಸಿದ ಪಿಜಿ ಕಟ್ಟಡದಲ್ಲಿ ಎಷ್ಟು ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎಂಬ ಮಾಹಿತಿಯನ್ನು ನಾಗರಿಕ ಸಂಸ್ಥೆ ಬಹಿರಂಗಪಡಿಸಬೇಕು ಎಂದು ಸೂಚಿಸಿದೆ.

ಕುಸಿದ ಕಟ್ಟಡವನ್ನು ಅಗತ್ಯ ಅನುಮತಿಗಳೊಂದಿಗೆ ನಿರ್ಮಿಸಲಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ದೆಹಲಿ ಮಹಾನಗರ ಪಾಲಿಕೆ (MCD)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ದೆಹಲಿಯ ವಿಶ್ವವಿದ್ಯಾಲಯಗಳು ಸೇರಿದಂತೆ ಖಾಸಗಿ ಪಿಜಿ ಮತ್ತು ಹಾಸ್ಟೆಲ್‌ಗಳಿಗೆ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳ ಅಗತ್ಯವಿದೆ ಎಂದು ಒತ್ತಿ ಹೇಳಿದ ನ್ಯಾಯಾಲಯ, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ದುರಂತದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವನ್ನೂ ನ್ಯಾಯಾಲಯ ಒತ್ತಿಹೇಳಿದೆ.

ಯುಜಿಸಿಇಟಿ ಮೂರನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ!

0

ಬೆಂಗಳೂರು: ಎಂಜಿನಿಯರಿಂಗ್‌, ಪಶುವೈದ್ಯಕೀಯ ಸೇರಿದಂತೆ ವಿವಿಧ ಯುಜಿಸಿಇಟಿ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.

ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.10ರೊಳಗೆ ನಿಗದಿತ ಶುಲ್ಕ ಪಾವತಿಸಬೇಕು. ಬಳಿಕ ಸೀಟು ಖಾತರಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡು ಸೆ.11ರೊಳಗೆ ಸಂಬಂಧಪಟ್ಟ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಮೂರನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಕಾಲೇಜು ಪ್ರವೇಶ ಕಡ್ಡಾಯವಾಗಿದೆ. ಸೀಟು ರದ್ದತಿ ಕೋರಿ ಸಲ್ಲಿಸುವ ಯಾವುದೇ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ನಿಗದಿತ ಅವಧಿಯಲ್ಲಿ ಕಾಲೇಜಿಗೆ ಪ್ರವೇಶ ಪಡೆಯದ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೆಇಎ ಎಚ್ಚರಿಕೆ ನೀಡಿದೆ.

ಮಾನಸಿಕ ಒತ್ತಡ ಕಾಡ್ತಿದೆಯಾ? ನೆಮ್ಮದಿಗಾಗಿ ಚಾಣಕ್ಯರ ಈ ಸೂತ್ರ ಪಾಲಿಸಿ!

0

ಇಂದಿನ ಬ್ಯುಸಿ ಜೀವನದಲ್ಲಿ ಬಹುತೇಕ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕಾರಣಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲವರಿಗೆ ಕೆಲಸದ ಒತ್ತಡವಾದರೆ, ಇನ್ನೂ ಕೆಲವರಿಗೆ ಆರ್ಥಿಕ ಸಮಸ್ಯೆ, ಕೌಟುಂಬಿಕ ಕಲಹ ಸೇರಿದಂತೆ ಹಲವು ವಿಚಾರಗಳು ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ.

ನೀವು ಕೂಡ ಇದೇ ರೀತಿಯ ಒತ್ತಡವನ್ನು ಎದುರಿಸುತ್ತಿದ್ದರೆ, ಚಾಣಕ್ಯರ ಕೆಲವು ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇವು ಭಾವನಾತ್ಮಕವಾಗಿ ಬಲಶಾಲಿಯಾಗಲು ಹಾಗೂ ಕೋಪ, ಭಯ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎನ್ನಲಾಗಿದೆ.

ಭಾವನೆಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಡಿ:

ಕೋಪ, ಭಯ ಮತ್ತು ದುಃಖದಂತಹ ಭಾವನೆಗಳು ಸಹಜ. ಆದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಮನೆ ಅಥವಾ ಕಚೇರಿಯಲ್ಲಿ ಮನಸ್ತಾಪ ಉಂಟಾದಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಸಮಯ ಶಾಂತವಾಗಿದ್ದು, ಯೋಚಿಸಿ ಮಾತನಾಡುವುದು ಉತ್ತಮ. ಈ ಅಭ್ಯಾಸ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇತರರನ್ನು ಮೆಚ್ಚಿಸುವುದನ್ನು ಬಿಡಿ:

ಎಲ್ಲರನ್ನೂ ಮೆಚ್ಚಿಸಬೇಕು ಎಂಬ ಮನಸ್ಥಿತಿ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಇತರರ ಅಭಿಪ್ರಾಯಗಳಿಗೆ ಅತಿಯಾದ ಮಹತ್ವ ನೀಡುವ ಬದಲು, ನಿಮ್ಮ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಿ. ಪ್ರತಿಯೊಂದು ವಿಚಾರಕ್ಕೂ ಇತರರ ಅನುಮತಿ ಪಡೆಯುವ ಅಗತ್ಯವಿಲ್ಲ.

ಸ್ವಾವಲಂಬಿಗಳಾಗಿ:

ಮಾನಸಿಕ, ಆರ್ಥಿಕ ಅಥವಾ ಭಾವನಾತ್ಮಕವಾಗಿ ಸದಾ ಇತರರನ್ನು ಅವಲಂಬಿಸುವುದರಿಂದ ಆತ್ಮವಿಶ್ವಾಸ ಕುಗ್ಗಬಹುದು. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ವಾವಲಂಬನೆಯು ಕಷ್ಟದ ಸಂದರ್ಭಗಳನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತದೆ.

ವೈಫಲ್ಯವನ್ನು ಅನುಭವವಾಗಿ ನೋಡಿ:

ಜೀವನದಲ್ಲಿ ಸೋಲು-ಗೆಲುವು ಸಹಜ. ವೈಫಲ್ಯ ಎದುರಾದಾಗ ಅದನ್ನು ಅಂತ್ಯ ಎಂದು ಭಾವಿಸುವ ಬದಲು, ಅದರಿಂದ ಪಾಠ ಕಲಿಯಬೇಕು. ಮಾಡಿದ ತಪ್ಪುಗಳನ್ನು ಗುರುತಿಸಿಕೊಂಡು ಮುಂದಿನ ಬಾರಿ ಉತ್ತಮವಾಗಿ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಇದರಿಂದ ಅನಗತ್ಯ ಚಿಂತೆ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ:

ಯಶಸ್ಸಿನ ಜೊತೆಗೆ ಮಾನಸಿಕ ನೆಮ್ಮದಿಗೂ ಶಿಸ್ತು ಮುಖ್ಯ. ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು, ಆಲಸ್ಯವನ್ನು ದೂರ ಮಾಡುವುದು, ದಿನಚರಿಯನ್ನು ರೂಪಿಸಿಕೊಳ್ಳುವುದು ಮತ್ತು ಗುರಿಗಳನ್ನು ನಿಗದಿಪಡಿಸುವಂತಹ ಸಣ್ಣ ಅಭ್ಯಾಸಗಳು ವ್ಯಕ್ತಿತ್ವವನ್ನು ಬಲಪಡಿಸುತ್ತವೆ. ಶಿಸ್ತಿನ ಜೀವನಶೈಲಿ ಕಷ್ಟದ ಸಂದರ್ಭಗಳಲ್ಲೂ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಒಟ್ಟಾರೆ, ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ತಕ್ಷಣ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು, ಶಾಂತವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಸ್ವಾವಲಂಬನೆ, ಶಿಸ್ತು ಮತ್ತು ವೈಫಲ್ಯದಿಂದ ಕಲಿಯುವ ಮನೋಭಾವ ಬೆಳೆಸಿಕೊಂಡರೆ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಸಾಧ್ಯ.