Home Blog Page 6

T20 World Cup: ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ!

0

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ 2026ರ ಪುರುಷರ ಟಿ20 ವಿಶ್ವಕಪ್ ಸೂಪರ್–8 ಹಂತ ತೀವ್ರ ಕುತೂಹಲದ ಘಟ್ಟ ತಲುಪಿರುವ ನಡುವೆಯೇ, ಮುಂಬರುವ ಮಹಿಳಾ ಟಿ20 ವಿಶ್ವಕಪ್ 2026ರ ಅಧಿಕೃತ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಪ್ರಕಟಿಸಿದೆ.

ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಮಹಿಳಾ ಟಿ20 ವಿಶ್ವಕಪ್ 2026 ಜೂನ್ 12ರಂದು ಆರಂಭವಾಗಿ ಜುಲೈ 5ರಂದು ಮುಕ್ತಾಯಗೊಳ್ಳಲಿದೆ. ಈ ಪಂದ್ಯಾವಳಿ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ಭಾಗವಹಿಸಲಿವೆ. ಸೆಮಿಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಗುಂಪುಗಳ ವಿವರ:

ಗುಂಪು–1
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್

ಗುಂಪು–2
ವೆಸ್ಟ್ ಇಂಡೀಸ್, ಇಂಗ್ಲೆಂಡ್ (ಆತಿಥೇಯರು), ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಜೂನ್ 30 ಮತ್ತು ಜುಲೈ 2ರಂದು ನಡೆಯಲಿದ್ದು, ಫೈನಲ್ ಪಂದ್ಯ ಜುಲೈ 5ರಂದು ಲಂಡನ್ ನಗರದಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ:

ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 14ರಂದು ಪಾಕಿಸ್ತಾನದ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಆಡಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತದ ಉಳಿದ ಗುಂಪು ಹಂತದ ಪಂದ್ಯಗಳು:

  • ಜೂನ್ 17 – ನೆದರ್ಲ್ಯಾಂಡ್ಸ್ ವಿರುದ್ಧ (ಹೆಡಿಂಗ್ಲೆ)
  • ಜೂನ್ 25 – ಬಾಂಗ್ಲಾದೇಶ ವಿರುದ್ಧ (ಓಲ್ಡ್ ಟ್ರಾಫರ್ಡ್)
  • ಜೂನ್ 28 – ಆಸ್ಟ್ರೇಲಿಯಾ ವಿರುದ್ಧ (ಲಾರ್ಡ್ಸ್)

ವಿಶೇಷವಾಗಿ ಲಾರ್ಡ್ಸ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ.

ಮಹಿಳಾ ಟಿ20 ವಿಶ್ವಕಪ್ 2026 – ಪ್ರಮುಖ ಪಂದ್ಯಗಳು:

  • ಜೂನ್ 12: ಇಂಗ್ಲೆಂಡ್ × ಶ್ರೀಲಂಕಾ – ಎಡ್ಜ್‌ಬಾಸ್ಟನ್
  • ಜೂನ್ 14: ಭಾರತ × ಪಾಕಿಸ್ತಾನ – ಎಡ್ಜ್‌ಬಾಸ್ಟನ್
  • ಜೂನ್ 21: ದಕ್ಷಿಣ ಆಫ್ರಿಕಾ × ಭಾರತ – ಓಲ್ಡ್ ಟ್ರಾಫರ್ಡ್
  • ಜೂನ್ 28: ಆಸ್ಟ್ರೇಲಿಯಾ × ಭಾರತ – ಲಾರ್ಡ್ಸ್
  • ಜೂನ್ 30: ಸೆಮಿಫೈನಲ್–1 – ದಿ ಓವಲ್
  • ಜುಲೈ 2: ಸೆಮಿಫೈನಲ್–2 – ದಿ ಓವಲ್
  • ಜುಲೈ 5: ಫೈನಲ್ – ಲಾರ್ಡ್ಸ್ ಕ್ರಿಕೆಟ್ ಮೈದಾನ.

 

ಐಪಿಎಲ್‌ಗೂ ಮುನ್ನ ಲೋಗೋ ಬದಲಿಸಿದ ಲಕ್ನೋ ಸೂಪರ್ ಜೈಂಟ್ಸ್

0

2026ರ ಟಿ–೨೦ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಐಪಿಎಲ್‌ ಹೊಸ ಸೀಸನ್ ಆರಂಭವಾಗಲಿದೆ. ಸದ್ಯದ ಮಾಹಿತಿಯ ಪ್ರಕಾರ ಮಾರ್ಚ್‌ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗುವ ಸಾಧ್ಯತೆ ಇದ್ದು, ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಅದಕ್ಕೂ ಮುನ್ನವೇ Lucknow Super Giants ತಂಡ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ತನ್ನ ಅಧಿಕೃತ ಲೋಗೋವನ್ನು ಬದಲಿಸಿದ್ದು, ಅದಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಹಿಂದಿನ ಲೋಗೋದಲ್ಲಿ ರೆಕ್ಕೆಗಳ ನಡುವೆ ಬ್ಯಾಟ್ ಹಾಗೂ ಚೆಂಡಿನ ಚಿತ್ರಣವಿತ್ತು. ಇದೀಗ ಪರಿಚಯಿಸಲಾದ ಹೊಸ ಲೋಗೋ ಲಕ್ನೋ ಹಾಗೂ ಉತ್ತರ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಮೂರು ಪ್ರಮುಖ ಚಿಹ್ನೆಗಳನ್ನು ಒಳಗೊಂಡಿದೆ.

ಹೊಸ ಲೋಗೋದಲ್ಲಿರುವ ಎಡ ಮತ್ತು ಬಲ ಭಾಗದ ರೆಕ್ಕೆಗಳು ಗರುಡನನ್ನು ಪ್ರತಿನಿಧಿಸುತ್ತವೆ. ಮಧ್ಯಭಾಗದಲ್ಲಿರುವ ಕಿರೀಟವು ರಾಜತ್ವ, ಹೆಮ್ಮೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅದರ ಕೆಳಭಾಗದಲ್ಲಿರುವ ಆನೆ ಲಕ್ನೋ ತಂಡದೊಂದಿಗೆ ಗಣೇಶನ ಉಪಸ್ಥಿತಿಯನ್ನು ಹಾಗೂ ಪ್ರದೇಶದ ಬಲವನ್ನು ಸೂಚಿಸುತ್ತದೆ.

ಈ ಕುರಿತು ಆರ್‌ಪಿಎಸ್‌ಜಿ ಸಮೂಹದ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ ಮಾತನಾಡಿ, “ಹೊಸ ಲೋಗೋ ಇಡೀ ಲಕ್ನೋ ತಂಡದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಹದ್ದು ಹೊಸ ಎತ್ತರಗಳನ್ನು ತಲುಪುವ ಪ್ರೇರಣೆಯನ್ನು ನೀಡುತ್ತದೆ, ಕಿರೀಟ ತಂಡದ ದೃಢನಿಶ್ಚಯ ಮತ್ತು ಹೆಮ್ಮೆಯನ್ನು ತೋರಿಸುತ್ತದೆ, ಆನೆ ಪ್ರದೇಶದ ಶಕ್ತಿ ಹಾಗೂ ಸ್ಥೈರ್ಯವನ್ನು ಪ್ರತಿನಿಧಿಸುತ್ತದೆ” ಎಂದು ಹೇಳಿದ್ದಾರೆ.

೨೦೨೨ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಇನ್ನೂ ಒಂದೂ ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ೨೦೨೨ ಮತ್ತು ೨೦೨೩ರಲ್ಲಿ ಪ್ಲೇಆಫ್ ಹಂತ ತಲುಪಿದರೂ ಕಪ್ ಗೆಲ್ಲುವಲ್ಲಿ ವಿಫಲವಾಯಿತು. ಬಳಿಕ ೨೦೨೪ ಮತ್ತು ೨೦೨೫ರ ಐಪಿಎಲ್‌ ಸೀಸನ್‌ಗಳಲ್ಲಿ ತಂಡ ಏಳನೇ ಸ್ಥಾನದಲ್ಲೇ ಸ್ಪರ್ಧೆಯನ್ನು ಮುಗಿಸಿತು.

ಪ್ರಸ್ತುತ ಐಪಿಎಲ್‌ನ ಹತ್ತು ತಂಡಗಳ ಪೈಕಿ ಫೈನಲ್‌ಗೆ ಪ್ರವೇಶಿಸದ ಏಕೈಕ ತಂಡ ಲಕ್ನೋ ಸೂಪರ್ ಜೈಂಟ್ಸ್ ಆಗಿದೆ. ಹೊಸ ಲೋಗೋ ತಂಡದ ಅದೃಷ್ಟವನ್ನು ಬದಲಾಯಿಸಬಹುದೇ ಎಂಬುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಅಪ್ಪನ ನಡವಳಿಕೆಯೇ ಮಗಳ ಬದುಕಿನ ಪಾಠ!

0

ಮಗಳಿಗೆ ತಂದೆಯೆಂದರೆ ವಿಶೇಷವಾದ ಪ್ರೀತಿ ಮತ್ತು ಅಪಾರ ಗೌರವ. ಮಗಳ ದೃಷ್ಟಿಯಲ್ಲಿ ತಂದೆಯೇ ಮೊದಲ ನಾಯಕ, ಮೊದಲ ಆದರ್ಶ. ತಂದೆಗೂ ಮುದ್ದಿನ ಮಗಳೆಂದರೆ ಅಚ್ಚಳಿಯದ ಪ್ರೀತಿ. ಮಗಳನ್ನು ಮುದ್ದಿಸುವುದರ ಜೊತೆಗೆ ತಂದೆ ಆಕೆಗೆ ಬದುಕಿನ ಹಲವು ಮೌಲ್ಯಗಳನ್ನು ಕಲಿಸುತ್ತಾನೆ. ಹೆಣ್ಣು ಮಕ್ಕಳು ತಂದೆ ಕಲಿಸುವ ಪಾಠಗಳನ್ನು ಮಾತ್ರವಲ್ಲ, ತಂದೆಯ ಗುಣಗಳನ್ನು ಸಹ ಅಜ್ಞಾತವಾಗಿ ಅಳವಡಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಮಗಳು ತನ್ನ ತಂದೆಯಿಂದ ಯಾವ ಯಾವ ಗುಣಗಳನ್ನು ಕಲಿಯುತ್ತಾಳೆ ಎಂಬುದನ್ನು ನೋಡೋಣ.

ಮಗಳು ತಂದೆಯಿಂದ ಕಲಿಯುವ ಮುಖ್ಯ ಗುಣಗಳು:-

ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿ:
ತಂದೆ ನೀಡುವ ಸ್ವಾತಂತ್ರ್ಯ ಮತ್ತು ನಂಬಿಕೆ ಮಗಳಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯವನ್ನು ನೀಡುತ್ತದೆ. ಸರಿಯಾದ ಸಂದರ್ಭಗಳಲ್ಲಿ ದಿಟ್ಟ ನಿರ್ಧಾರ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಆಕೆ ತಂದೆಯನ್ನು ನೋಡಿ ಕಲಿಯುತ್ತಾಳೆ.

ಕಠಿಣ ಪರಿಶ್ರಮ:
ತಂದೆಯ ಕಠಿಣ ಪರಿಶ್ರಮವನ್ನು ನೋಡಿ, ಶ್ರಮಿಸಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ಪಾಠವನ್ನು ಮಗಳು ಕಲಿಯುತ್ತಾಳೆ. ತಂದೆಯಂತೆ ದುಡಿಯುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾಳೆ.

ಒಳ್ಳೆಯ ನಡವಳಿಕೆ:
ಮಕ್ಕಳು ತಮ್ಮ ತಂದೆಯ ನಡವಳಿಕೆಯನ್ನು ಸಹಜವಾಗಿ ಅನುಸರಿಸುತ್ತಾರೆ. ತಂದೆಯ ಒಳ್ಳೆಯ ವರ್ತನೆ ಮಗಳ ವ್ಯಕ್ತಿತ್ವದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಆದ್ದರಿಂದ ತಂದೆಯ ಶಿಸ್ತಿನ ಜೀವನ ಮಗಳಿಗೆ ದಾರಿ ತೋರಿಸುತ್ತದೆ.

ಗೌರವ ನೀಡುವ ಮನೋಭಾವ:
ತಂದೆಗೆ ಸಮಾಜದಲ್ಲಿ ದೊರಕುವ ಗೌರವ ಹಾಗೂ ತಂದೆ ಇತರರನ್ನು ಗೌರವದಿಂದ ನಡೆಸಿಕೊಳ್ಳುವ ರೀತಿಯನ್ನು ನೋಡಿ, ಮಗಳು ಹಿರಿಯರನ್ನು ಗೌರವಿಸುವ ಗುಣವನ್ನು ಕಲಿಯುತ್ತಾಳೆ. ಸಮಾಜದಲ್ಲಿ ಗೌರವ ಸಂಪಾದಿಸಲು ಒಳ್ಳೆಯ ಕೆಲಸ ಮಾಡಬೇಕು ಎಂಬ ಅರಿವು ಅವಳಲ್ಲಿ ಮೂಡುತ್ತದೆ.

ಆತ್ಮವಿಶ್ವಾಸ:
ತಂದೆಯ ಆತ್ಮವಿಶ್ವಾಸ ಮಗಳ ಬದುಕಿಗೆ ದೊಡ್ಡ ಪ್ರೇರಣೆ. ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು, ಸಮಾಜದಲ್ಲಿ ಆತ್ಮವಿಶ್ವಾಸದಿಂದ ನಿಲ್ಲುವುದು ಹೇಗೆ ಎಂಬುದನ್ನು ಮಗಳು ತಂದೆಯಿಂದಲೇ ಕಲಿಯುತ್ತಾಳೆ.

ಕುಟುಂಬದ ಮೇಲಿನ ಪ್ರೀತಿ:
ತಂದೆ ತನ್ನ ತಂದೆತಾಯಿ ಮತ್ತು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ದೃಶ್ಯ ಮಗಳ ಮನಸ್ಸಿನಲ್ಲಿ ಆಳವಾಗಿ ನೆಲೆಸುತ್ತದೆ. ಇದರಿಂದ ಕುಟುಂಬದ ಮಹತ್ವ ಮತ್ತು ಕುಟುಂಬದ ಮೇಲಿನ ಪ್ರೀತಿ ಮಗಳಲ್ಲೂ ಬೆಳೆಸಿಕೊಳ್ಳುತ್ತದೆ.

ಭಾವನೆಗಳ ಮೇಲಿನ ನಿಯಂತ್ರಣ:
ತಂದೆ ಕಷ್ಟಕರ ಸಂದರ್ಭಗಳನ್ನೂ ಶಾಂತವಾಗಿ ನಿಭಾಯಿಸುವುದನ್ನು ನೋಡಿ, ಮಗಳು ಸಹ ತಾಳ್ಮೆಯಿಂದ ಯಾವುದೇ ಪರಿಸ್ಥಿತಿಯನ್ನು ಎದುರಿಸುವುದನ್ನು ಕಲಿಯುತ್ತಾಳೆ. ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಅವಳಲ್ಲಿ ಬೆಳೆಯುತ್ತದೆ.

ನಿಸ್ವಾರ್ಥ ಪ್ರೀತಿ:
ತಂದೆಯ ನಿಸ್ವಾರ್ಥ ಪ್ರೀತಿ ಮಗಳ ಭವಿಷ್ಯದ ಬದುಕಿಗೆ ದಾರಿ ತೋರಿಸುತ್ತದೆ. ಪ್ರೀತಿ ಎಂದರೆ ಕೇವಲ ಮಾತಲ್ಲ, ಕಾಳಜಿ ಮತ್ತು ಭದ್ರತೆ ಎಂಬುದನ್ನು ಆಕೆ ತಂದೆಯಿಂದಲೇ ಕಲಿಯುತ್ತಾಳೆ. ಮುಂದಿನ ಜೀವನದಲ್ಲೂ ಅಂಥದೇ ಪ್ರೀತಿಯನ್ನು ಹುಡುಕಲು ಪ್ರೇರಿತಳಾಗುತ್ತಾಳೆ.

 

ಬೆಂಗಳೂರಿನಲ್ಲಿ ಈ ಎರಡು ದಿನ ಕಾವೇರಿ ನೀರು ಬರೋದಿಲ್ಲ; ನಾಗರಿಕರೇ ಮುಂಜಾಗ್ರತೆ ವಹಿಸಿ!

0

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾವೇರಿ ಐದನೇ ಹಂತದ ಗೊಟ್ಟಿಗೆರೆ ಜಲಸಂಗ್ರಹಗಾರದ ಸಮೀಪ ವಿದ್ಯುತ್ ಹರಿವಿನ ಅಳತೆ ಯಂತ್ರಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಫೆಬ್ರವರಿ 26 ರಂದು (ಗುರುವಾರ) ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 27 ರಂದು (ಶುಕ್ರವಾರ) ಬೆಳಿಗ್ಗೆ ೬ ಗಂಟೆಯವರೆಗೆ ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳು:

ವೈಟ್‌ಫೀಲ್ಡ್, ನೆಲ್ಲೂರಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಚನ್ನಸಂದ್ರ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕುಂದಿ, ಮುನೆಕೊಳಲು, ಕುಮಾರಸ್ವಾಮಿ ಬಡಾವಣೆ, ಪೂರ್ಣಪ್ರಜ್ಞಾ ಬಡಾವಣೆ, ಬನಶಂಕರಿ, ಕೊಲ್ಲಹಳ್ಳಿ, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕೊಡಿಚಿಕ್ಕನಹಳ್ಳಿ, ಕೂಡ್ಲು, ಕಾಡುಗೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಫ್ರಿಡ್ಜ್‌ ಮೇಲಿಟ್ಟರೆ ಅಪಾಯ! ಈ ವಸ್ತುಗಳನ್ನು ಎಂದಿಗೂ ರೆಫ್ರಿಜರೇಟರ್‌ ಮೇಲೆ ಇಡಬೇಡಿ

0

ಬಹುತೇಕ ಮನೆಗಳಲ್ಲಿ ಜಾಗ ಎಷ್ಟೇ ಇದ್ದರೂ ಸಾಲದೆ, ಖಾಲಿ ಜಾಗ ಕಂಡರೆ ಅಲ್ಲಿ ವಸ್ತುಗಳನ್ನು ಇಡುವ ಅಭ್ಯಾಸವಿರುತ್ತದೆ. ಅದರಲ್ಲೂ ಫ್ರಿಡ್ಜ್‌ ಮೇಲ್ಭಾಗವನ್ನು ಹಲವರು ಹೆಚ್ಚುವರಿ ಸ್ಟೋರೇಜ್‌ ಆಗಿ ಬಳಸುತ್ತಾರೆ. ಬಾಕ್ಸ್‌ಗಳು, ಔಷಧಿಗಳು, ಡೆಕೊರೇಟಿವ್‌ ವಸ್ತುಗಳು, ನೀರಿನ ಬಾಟಲಿ ಹೀಗೆ ಅನೇಕ ವಸ್ತುಗಳು ಫ್ರಿಡ್ಜ್‌ ಮೇಲೆ ಕಾಣಿಸುತ್ತವೆ.

ಆದರೆ ಕೆಲವೊಂದು ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವುದು ತಪ್ಪು ಮಾತ್ರವಲ್ಲ, ಅಪಾಯಕ್ಕೂ ಕಾರಣವಾಗಬಹುದು. ಇದರಿಂದ ರೆಫ್ರಿಜರೇಟರ್‌ನ ಕಾರ್ಯಕ್ಷಮತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡಬಾರದು ಎಂಬುದನ್ನು ತಿಳಿಯೋಣ.

ಫ್ರಿಡ್ಜ್‌ ಮೇಲೆ ಇಡಬಾರದ ವಸ್ತುಗಳು:

ಔಷಧಿಗಳು:
ಕೆಲವರು ಔಷಧಿಗಳನ್ನು ಫ್ರಿಡ್ಜ್‌ ಮೇಲೆ ಇಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಫ್ರಿಡ್ಜ್‌ನ ಮೇಲ್ಭಾಗ ಹಾಗೂ ಹಿಂಭಾಗ ಹೆಚ್ಚು ಬಿಸಿಯಾಗಿರುವುದರಿಂದ, ಈ ಶಾಖ ಔಷಧಿಗಳ ಗುಣಮಟ್ಟಕ್ಕೆ ಹಾನಿ ಮಾಡಬಹುದು. ಆದ್ದರಿಂದ ಔಷಧಿಗಳನ್ನು ಸದಾ ಒಣ ಹಾಗೂ ತಂಪಾದ ಸ್ಥಳದಲ್ಲಿ ಇಡುವುದು ಉತ್ತಮ.

ನೀರಿನ ಕ್ಯಾನ್‌ಗಳು ಅಥವಾ ಬಾಟಲಿಗಳು:
ಜಾಗ ಉಳಿಸುವ ಉದ್ದೇಶದಿಂದ ಫ್ರಿಡ್ಜ್‌ ಮೇಲೆ ನೀರಿನ ಕ್ಯಾನ್‌ ಅಥವಾ ಬಾಟಲಿ ಇಡುವುದು ಸರಿಯಲ್ಲ. ಇದರಿಂದ ಫ್ರಿಡ್ಜ್‌ ಮೇಲೆ ಹೆಚ್ಚುವರಿ ಒತ್ತಡ ಬಿದ್ದು ಸಮತೋಲನ ಹಾಳಾಗಬಹುದು. ಅಲ್ಲದೆ ನೀರು ಚೆಲ್ಲಿದರೆ ಶಾರ್ಟ್ ಸರ್ಕ್ಯೂಟ್‌ ಆಗುವ ಅಪಾಯವೂ ಇದೆ.

ಎಲೆಕ್ಟ್ರಾನಿಕ್ ಉಪಕರಣಗಳು:
ಟೋಸ್ಟರ್‌, ಮೈಕ್ರೋವೇವ್‌, ಓವನ್‌ ಅಥವಾ ಇತರ ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವುದು ಅಪಾಯಕಾರಿ. ಫ್ರಿಡ್ಜ್‌ನಿಂದ ಹೊರಬರುವ ಶಾಖ ಮತ್ತು ಕಂಪನಗಳು ಈ ಉಪಕರಣಗಳಿಗೆ ಹಾನಿ ಉಂಟುಮಾಡಬಹುದು.

ಅಕ್ವೇರಿಯಂ:
ಫ್ರಿಡ್ಜ್‌ ಮೇಲೆ ಮೀನಿನ ಅಕ್ವೇರಿಯಂ ಇಡುವುದು ಸೂಕ್ತವಲ್ಲ. ಫ್ರಿಡ್ಜ್‌ನಿಂದ ಬರುವ ಶಾಖ ಮತ್ತು ಕಂಪನಗಳಿಂದ ನೀರಿನ ತಾಪಮಾನ ಬದಲಾಗಬಹುದು. ಇದು ಮೀನುಗಳಿಗೆ ಹಾನಿಕಾರಕವಾಗಬಹುದು.

ಕಾಗದ, ಪತ್ರಿಕೆಗಳು ಹಾಗೂ ಪ್ಲಾಸ್ಟಿಕ್ ಚೀಲಗಳು:
ಫ್ರಿಡ್ಜ್‌ನ ಹಿಂಭಾಗದಿಂದ ಬಿಸಿಯಾದ ಗಾಳಿ ಹೊರಬರುತ್ತದೆ. ಮೇಲ್ಭಾಗದಲ್ಲಿ ಕಾಗದ ಅಥವಾ ಪ್ಲಾಸ್ಟಿಕ್ ಇಟ್ಟರೆ ಶಾಖ ಸೆರೆಯಾಗುತ್ತದೆ. ಇದರಿಂದ ಫ್ರಿಡ್ಜ್‌ ಹೆಚ್ಚು ಬಿಸಿಯಾಗುವ ಹಾಗೂ ಬೆಂಕಿ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು:
ಬೆಂಕಿಕಡ್ಡಿ, ಲೈಟರ್‌, ಸ್ಪ್ರೇ ಕ್ಯಾನ್‌ಗಳಂತಹ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವುದು ಅತ್ಯಂತ ಅಪಾಯಕಾರಿ. ಬಿಸಿಯಿಂದ ಅವು ಬೆಂಕಿ ಹಿಡಿಯುವ ಸಾಧ್ಯತೆ ಇದೆ.

ಪ್ಲಾಸ್ಟಿಕ್ ಅಥವಾ ಬಟ್ಟೆಯ ಕವರ್‌ಗಳು:
ಧೂಳು ತಪ್ಪಿಸಲು ಕೆಲವರು ಫ್ರಿಡ್ಜ್‌ ಮೇಲೆ ಪ್ಲಾಸ್ಟಿಕ್ ಅಥವಾ ಬಟ್ಟೆಯ ಹೊದಿಕೆ ಹಾಕುತ್ತಾರೆ. ಆದರೆ ಇದರಿಂದ ಶಾಖ ಹೊರ ಹೋಗಲು ಅವಕಾಶ ಸಿಗದೆ ಫ್ರಿಡ್ಜ್‌ ಹೆಚ್ಚು ಬಿಸಿಯಾಗುತ್ತದೆ ಮತ್ತು ಹಾನಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಪ್ಲಾಂಟ್‌ಗಳು ಮತ್ತು ಅಲಂಕಾರಿಕ ವಸ್ತುಗಳು:
ಫ್ರಿಡ್ಜ್‌ ಮೇಲೆ ಭಾರವಾದ ಪ್ಲಾಂಟ್‌ಗಳು ಅಥವಾ ಡೆಕೊರೇಟಿವ್‌ ವಸ್ತುಗಳನ್ನು ಇಡುವುದರಿಂದ ಫ್ರಿಡ್ಜ್‌ಗೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಇದರಿಂದ ಸಾಧನ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಸೂಚನೆ: ಫ್ರಿಡ್ಜ್‌ ಸರಿಯಾಗಿ ಕಾರ್ಯನಿರ್ವಹಿಸಲು ಅದರ ಮೇಲ್ಭಾಗವನ್ನು ಸಾಧ್ಯವಾದಷ್ಟು ಖಾಲಿಯಾಗಿಡುವುದು ಸುರಕ್ಷಿತ ಮತ್ತು ಉತ್ತಮ ಅಭ್ಯಾಸ.

 

ಧಾರವಾಡ ಹೋರಾಟದ ಫಲಿತಾಂಶ! 32 ಇಲಾಖೆಯಲ್ಲಿ 24 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ ಘೋಷಣೆ

0

ಬೆಂಗಳೂರು: ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳ ಕಿಚ್ಚು ಉಗ್ರ ರೂಪ ತಾಳುತ್ತಿದ್ದಂತೆ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಸಾವಿರಾರು ಯುವಕರು ನಡೆಸಿದ ಬೃಹತ್ ಪ್ರತಿಭಟನೆ ರಾಜ್ಯ ರಾಜಕೀಯಕ್ಕೆ ಚಟುವಟಿಕೆ ತಂದಿದ್ದು, ಇದೀಗ ಕರ್ನಾಟಕ ಆರ್ಥಿಕ ಇಲಾಖೆ 24,300 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಿದೆ.

32 ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಎ ದರ್ಜೆ – 542, ಬಿ ದರ್ಜೆ – 619 ಮತ್ತು ಎಫ್‌ಡಿಸಿ – 23,119 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಈ ನಿರ್ಧಾರ ರಾಜ್ಯದ ನಿರುದ್ಯೋಗಿಗಳಿಗೆ ದೊಡ್ಡ ಉಸಿರು ನೀಡಿದೆ.

ರಾಜ್ಯದಲ್ಲಿ ಒಟ್ಟು 2.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. “ನಾವು ಅಧಿಕಾರಕ್ಕೆ ಬಂದಾಗಲೇ ಇಷ್ಟೊಂದು ಹುದ್ದೆಗಳು ಖಾಲಿ ಇದ್ದವು. ಇದು ಹಿಂದಿನ ಸರ್ಕಾರದ ನಿಷ್ಕ್ರಿಯತೆಯ ಫಲ” ಎಂದು ಅವರು ಟೀಕಿಸಿದ್ದಾರೆ.

2019ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದವು ಎಂದು ಸಿಎಂ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ ಎಂದು ಕೂಡ ಕಿಡಿಕಾರಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಸಿಹಿ ಸುದ್ದಿ ಎಂದರೆ – ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. 2027ರ ಡಿಸೆಂಬರ್ 31ರವರೆಗೆ ಹೊರಡುವ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದೆ.

ಧಾರವಾಡದ ಹೋರಾಟ ಸರ್ಕಾರದ ಗಮನ ಸೆಳೆದಿದ್ದು, ಇದೀಗ ಘೋಷಿಸಿದ ನೇಮಕಾತಿ ಪ್ರಕ್ರಿಯೆ ವೇಗವಾಗಿ ಜಾರಿಯಾಗುತ್ತದೆಯೇ ಎಂಬುದರ ಮೇಲೆ ಯುವಕರ ಕಣ್ಣು ನೆಟ್ಟಿದೆ.

ಬಸ್‌ ನಿಲ್ದಾಣದಲ್ಲೇ ನಡುಕ ಹುಟ್ಟಿಸಿದ ಅಪಘಾತ: ನಿಯಂತ್ರಣ ತಪ್ಪಿ ಮಹಿಳೆಯರ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್

0

ಗದಗ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತ ಜನರಲ್ಲಿ ಆತಂಕ ಮೂಡಿಸಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅತಿವೇಗವಾಗಿ ನಿಲ್ದಾಣದೊಳಗೆ ಪ್ರವೇಶಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮೂವರು ಮಹಿಳೆಯರ ಮೇಲೆ ಹರಿದಿದೆ.

ರಾಯಚೂರು ವಿಭಾಗದ ಮಾಸ್ಕಿ ಡಿಪೋ ಬಸ್ ಚಾಲಕನ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸುನಗ ಗ್ರಾಮದ ಶಾಂತವ್ವ ಸಿದ್ದಪ್ಪ ಕೊರ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲು ಬಸ್ ಚಕ್ರದಡಿ ತುಂಡಾಗಿದ್ದು ಬೆನ್ನಿಗೆ ಭಾರೀ ಪೆಟ್ಟಾಗಿದೆ.

ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಿಬ್ಬರು ಮಹಿಳೆಯರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗದಗ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಸಾರಿಗೆ ಇಲಾಖೆ ಕೂಡ ಆಂತರಿಕ ತನಿಖೆ ಆರಂಭಿಸಿದೆ. ಸಾರ್ವಜನಿಕ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಕಾಂಗ್ರೆಸ್ ಸರ್ಕಾರ ಗೊಂದಲ ಬಿಟ್ಟು ಸೂಕ್ತ ಆಡಳಿತ ನಡೆಸಬೇಕು: ಮಾಜಿ ಸಚಿವ ಮುರುಗೇಶ್ ನಿರಾಣಿ

0

ಕಲಬುರಗಿ: ಕಾಂಗ್ರೆಸ್ ಸರ್ಕಾರ ಗೊಂದಲಗಳನ್ನು ಬಿಟ್ಟು ಸೂಕ್ತ ಆಡಳಿತ ನಡೆಸಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಕಳೆದ ಒಂದು ವರ್ಷದಿಂದ ಗೊಂದಲದ ವಾತಾವರಣವಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಸ್ಥರು. ಆದಷ್ಟು ಬೇಗ ಆಂತರಿಕ ಗೊಂದಲಗಳನ್ನು ಬಗೆಹರಿಸಿ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದು ವಾಗ್ದಾಳಿ ನಡೆಸಿದರು.31 ಹೊಸ ಕಾಂಗ್ರೆಸ್ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದ ವಿಚಾರದಲ್ಲಿ ತಪ್ಪೇನಿಲ್ಲ. ಸರ್ಕಾರಕ್ಕೆ ಪೂರ್ಣ ಬಹುಮತವಿರುವ ಹಿನ್ನೆಲೆಯಲ್ಲಿ ಗೊಂದಲ ಬಿಟ್ಟು ಪರಿಣಾಮಕಾರಿ ಆಡಳಿತ ನಡೆಸಬೇಕು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿ ಬರುತ್ತಿರುವ ವಿಚಾರ ಪ್ರಸ್ತಾಪಿಸಿದ ಅವರು, “ಯಾರು ಮುಖ್ಯಮಂತ್ರಿ ಆಗಬೇಕು ಎಂಬುದಕ್ಕಿಂತ ಮೊದಲು ಗೊಂದಲ ಬಗೆಹರಿಯಬೇಕು,” ಎಂದು ಹೇಳಿದರು. ಇದೇ ವೇಳೆ, ಗುಲ್ಬರ್ಗಾ ವಿಶ್ವವಿದ್ಯಾಲಯವು ತಮಗೆ ಗೌರವ ಡಾಕ್ಟರೇಟ್ ನೀಡಿರುವುದಕ್ಕಾಗಿ ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಧನ್ಯವಾದ ತಿಳಿಸಿದರು.

“ಕಾಂತಾರ ಚಾಪ್ಟರ್–1” ವಿವಾದ: ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಕಾಂತಾರ ಚಾಪ್ಟರ್–1 ಚಿತ್ರದ ದೈವಪಾತ್ರದ ಕುರಿತು ಅಪಮಾನಕಾರಿ ಸನ್ನೆ ಮಾಡಿದ ಆರೋಪದ ಹಿನ್ನೆಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಚಾವುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಹಾಗೂ ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಸಂದರ್ಭದಲ್ಲಿ ಕಾಂತಾರ ಚಾಪ್ಟರ್–1 ಕುರಿತು ಮಾತನಾಡುವ ವೇಳೆ ನಡೆದ ಸನ್ನೆಗೆ ರಣವೀರ್ ತಕ್ಷಣ ಕ್ಷಮೆ ಕೋರಿದ್ದಾರೆ ಎಂದು ತಿಳಿಸಿದರು. ಅವರು ಉದ್ದೇಶಪೂರ್ವಕವಾಗಿ ಯಾರ ಭಾವನೆಗೂ ಧಕ್ಕೆ ಉಂಟುಮಾಡಿಲ್ಲ. ಅಗತ್ಯವಿದ್ದರೆ ತಿದ್ದುಪಡಿ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದರು.

ಪೀಠವು, “ಚಾವುಂಡಿ ದೈವದ ಪಾತ್ರವನ್ನು ರಿಶಬ್‌ ಶೆಟ್ಟಿ ನಿರ್ವಹಿಸಿದ್ದಾರೆ. ದೈವವನ್ನು ‘ದೆವ್ವ’ ಎಂದು ಹೇಳಿ ಮಿಮಿಕ್ರಿ ಮಾಡುವುದು ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ವಿಚಾರ. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ ಎಂದು ಅಭಿಪ್ರಾಯಪಟ್ಟಿತು.ಕ್ಷಮೆ ಕೇಳಿದರೂ ಹೇಳಿದ ಮಾತು ಅಳಿದು ಹೋಗುವುದಿಲ್ಲ. ಇಂಟರ್‌ನೆಟ್ ಯಾವುದನ್ನೂ ಮರೆತೇ ಬಿಡುವುದಿಲ್ಲ,” ಎಂದು ನ್ಯಾಯಪೀಠ ತೀಕ್ಷ್ಣವಾಗಿ ತಿಳಿಸಿತು.

ದೂರುದಾರರ ಪರ ವಕೀಲರು, ಘಟನೆ ವೇಳೆ ರಿಷಬ್ ಶೆಟ್ಟಿ ಬೇಡ ಎಂದು ಹೇಳಿದರೂ ರಣವೀರ್ ಮಾತು ಮುಂದುವರಿಸಿದ್ದರು ಎಂದು ಆರೋಪಿಸಿದರು.

ಜೊತೆಗೆ, ರಣವೀರ್ ಅವರ ಪತ್ನಿ ದೀಪಿಕಾ ಪಡಕೋಣೆ ಕರ್ನಾಟಕದವರಾಗಿರುವುದರಿಂದ ಸ್ಥಳೀಯ ಆಚರಣೆಗಳ ಅರಿವು ಇರಬೇಕಿತ್ತು ಎಂದು ವಾದಿಸಿದರು. ತನಿಖೆಗೆ ಸಹಕರಿಸುವಂತೆ ರಣವೀರ್‌ಗೆ ಸೂಚಿಸಿದ ಪೀಠ, ಸರ್ಕಾರ ಮತ್ತು ದೂರುದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಸೋಮವಾರ (ಮಾ.2) ಸಂಜೆ 4 ಗಂಟೆಗೆ ಮುಂದೂಡಿತು.

ಗಜೇಂದ್ರಗಡ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಮೂವರು ಬಂಧನ, ₹4.50 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ವಶ

0

ಗದಗ: ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 17ರ ರಾತ್ರಿ 11.45ರಿಂದ 18ರ ಬೆಳಗ್ಗೆ 6.30ರ ನಡುವೆ ಟಗರಗಲ್ಲಿಯಲ್ಲಿರುವ ದೂರುದಾರರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.30/2026, ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭುಗೌಡ ಪಾಟೀಲ ಹಾಗೂ ಸಿಪಿಐ ವಿಜಯಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್‌ಐ ಪ್ರಕಾಶ ಡಿ ಹಾಗೂ ತಾಂತ್ರಿಕ, ಫಿಂಗರ್‌ಪ್ರಿಂಟ್ ತಂಡದ ಸಹಕಾರದಿಂದ ತನಿಖೆ ಮುಂದುವರಿಸಲಾಯಿತು.

ಫೆಬ್ರವರಿ 23ರಂದು ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಬ್ರಿಜ್ ಹತ್ತಿರ ಪ್ರಮುಖ ಆರೋಪಿ ನಾಗರಾಜ ದೇವರಮನಿ (45) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯ ಮೇರೆಗೆ ಶಿವಮ್ಮ ದೇವರಮನಿ (38) ಮತ್ತು ಬಸಮ್ಮ ಎರಿಬಗೇರಿ (40) ಅವರನ್ನು ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ಬಂಧಿಸಲಾಗಿದೆ.

ಆರೋಪಿಗಳಿಂದ 78 ಗ್ರಾಂ 730 ಮಿಲಿ ಚಿನ್ನ (₹3,93,650) ಮತ್ತು 711.47 ಗ್ರಾಂ ಬೆಳ್ಳಿ (₹56,918) ಸೇರಿ ಒಟ್ಟು ₹4,50,568 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಪಿ ರೋಹನ್ ಜಗದೀಶ ಪ್ರಶಂಸಿಸಿದ್ದಾರೆ.

error: Content is protected !!