ದಾವಣಗೆರೆ: ಖಾಸಗಿ ಬ್ಯಾಂಕ್‌ನ ಮೇಲಾಧಿಕಾರಿಗಳ ಕಿರುಕುಳ, ಬಡ್ತಿ ಸಿಗದಿರುವುದು ಹಾಗೂ ಸಾಲದ ಸಮಸ್ಯೆಯಿಂದ ಮನನೊಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ನಾಪತ್ತೆಯಾಗಿರುವ ಘಟನೆ ಹೊನ್ನಾಳಿ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾಗಿರುವವರನ್ನು ಆರ್.ಡಿ. ಮೋಹನ್ ಕುಮಾರ್ (37) ಎಂದು ಗುರುತಿಸಲಾಗಿದೆ. ಅವರು ತುಂಗಾ ಮೇಲ್ದಂಡೆ ಕಾಲುವೆಗೆ ಬೈಕ್ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಾಲೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ನಾಪತ್ತೆಯಾಗುವ ಮುನ್ನ ವಿಡಿಯೋ:-
ಮೋಹನ್ ಕುಮಾರ್ ನಾಪತ್ತೆಯಾಗುವ ಮುನ್ನ ವಿಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ತಮ್ಮ ಸಮಸ್ಯೆ ಹಾಗೂ ಅಳಲನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆ ಪಡೆಯುವ ಉದ್ದೇಶದಿಂದ ₹50 ಸಾವಿರ ಸಾಲ ಮಾಡಿ ನಕಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಂಡಿದ್ದೆ. ಆದರೆ ಬಡ್ತಿ ಸಿಗಲಿಲ್ಲ. ಇದರಿಂದ ಸಾಲದ ಹೊರೆ ಮತ್ತಷ್ಟು ಹೆಚ್ಚಾಯಿತು ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ತಮ್ಮ ಪರಿಸ್ಥಿತಿಗೆ ಬ್ಯಾಂಕ್ ಹಾಗೂ ಸಹ ಸಿಬ್ಬಂದಿಗಳಾದ ತಿಪ್ಪೇಶ್ ಮತ್ತು ಕೊಟ್ರೇಶ್ ಕಾರಣ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ. ಬ್ಯಾಂಕ್‌ನವರು ಲಂಚ ಪಡೆದು ಮೋಸ ಮಾಡಿದ್ದಾರೆ ಎಂಬ ಆರೋಪವನ್ನೂ ಅವರು ವಿಡಿಯೋದಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವರಿಗೆ ಮನವಿ:-
ತಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಲ್ಲಿ ವಿಡಿಯೋ ಮೂಲಕ ಮೋಹನ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೋಹನ್ ಕುಮಾರ್ ನಾಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆತಂಕಗೊಂಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೋಹನ್ ಕುಮಾರ್ ನಾಪತ್ತೆಯ ಹಿಂದಿನ ಕಾರಣಗಳು ಹಾಗೂ ವಿಡಿಯೋದಲ್ಲಿನ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

